ಮನುಷ್ಯನ ಹುಟ್ಟಿನೊಂದಿಗೇ ಹಸಿವು ಬಂದಿದೆ; ಹಸಿವು ಆಹಾರ ಅನ್ವೇಷಣೆಯ ಪ್ರಾಥಮಿಕ ಅಗತ್ಯ. ನಿಜವಾದ ಅರ್ಥದಲ್ಲಿ ಹಸಿವು ಮಾನವನ ವಿಕಾಸದ ಅನ್ವೇಷಣೆಯ ಮೂಲಮಾನವೂ ಆಗಿದೆ. ಆದಿಮ ಮನುಷ್ಯರ ಆಹಾರಪದ್ಧತಿಯ ಬಗ್ಗೆ ವರ್ತಮಾನದಲ್ಲಿ ಬರೆಯುವುದು ವಿಚಿತ್ರ ಸಂಗತಿಯಾಗಿಬಿಡುತ್ತದೆ. ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಎಂಬುದನ್ನು ಪ್ರಭುತ್ವ ನಿರ್ಧರಿಸುವಾಗ ಹಸಿವನ್ನು ಹತೋಟಿಯಲ್ಲಿಡಲು ಸಾಧ್ಯವೆ ಎಂಬುದರ ಬಗ್ಗೆಯೂ ಮೊದಲು ಯೋಚಿಸಬೇಕು.
ಆದಿಮಕಾಲದಿಂದಲೂ ಮನುಷ್ಯ ಸಿಕ್ಕಿದ್ದನ್ನು ತಿಂದಿದ್ದಾನೆ. ತಿನ್ನುವುದನ್ನು ಮರು ಉತ್ಪಾದಿಸಿದ್ದಾನೆ. ವಿಶೇಷವೆಂದರೆ ಅದನ್ನು ಪೂಜಿಸಿದ್ದಾನೆ. ತಾನು ಪೂಜಿಸುವ ದೇವರಿಗೂ ನೈವೇದ್ಯ ಮಾಡಿದ್ದಾನೆ. ಇದರ ಸಾಂಕೇತಿಕ ರೂಪ ಹಲವು ಬುಡಕಟ್ಟು ಸಮುದಾಯಗಳಲ್ಲಿ ಇಂದಿಗೂ ಆಚರಣೆಯಲ್ಲಿದೆ. ಆಹಾರವ್ಯವಸ್ಥೆಗೆ ಯೋಗ್ಯವಾದುದನ್ನೆಲ್ಲವನ್ನೂ ತಿಂದಿದ್ದಾನೆ. ಕಪ್ಪೆಗಳನ್ನು ತಿನ್ನುವ ನಾಗಾಲ್ಯಾಂಡಿನ ನಾಗರು, ಗೊಂಡರು ಇರುವಂತೆಯೇ ಹಾವುಗಳನ್ನು ಮೀನುಸಾರಿನಂತೆ ಅಸ್ವಾದಿಸುವ ಗರುಡರೂ ಇದ್ದರೆಂದು ಆರ್ಷೇಯ ಸಾಹಿತ್ಯದಲ್ಲಿ ದಾಖಲಾಗಿದೆ. ಅದಲ್ಲದೆ, ಗೋವನ್ನು, ನಾಯಿಯನ್ನು, ಗೂಳಿಯನ್ನು ಪ್ರಧಾನ ಆಹಾರವಾಗಿ ಹೇಗೆ ತಿನ್ನಲಾಗುತ್ತಿತ್ತೆಂದು, ಯಾರು ಯಾರಿಗೆ ಪ್ರಾಣಿಗಳ ಯಾವ ಭಾಗಗಳನ್ನು ವಿಶೇಷವಾಗಿ ಬಡಿಸಲಾಗುತ್ತದೆಂಬುದನ್ನೂ ದಾಖಲಿಸಲಾಗಿದೆ.
ಜಾತಿವ್ಯವಸ್ಥೆಗೆ ಭದ್ರಬುನಾದಿ ಹಾಕಿದ್ದ ಮನುವೂ ಕೂಡ ಆಹಾರದ ವಿಷಯದಲ್ಲಿ ಸೆಕ್ಯುಲರ್ ಆಗಿ ಮಾತಾಡಿದ್ದಾನೆ ಎಂದರೆ ಅಹಾರವು ಜಾತಿಯ ನೆಲೆ, ಧರ್ಮದ ನೆಲೆಯನ್ನು ಮೀರಿದ್ದು ಎಂಬುದು ತಿಳಿಯುತ್ತದೆ. ’ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮವು ಜೀವಜಂತುಗಳನ್ನು ಮತ್ತು ಚರಾಚರ ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮನು ಸೃಷ್ಟಿಸಿದ್ದಾನೆ. ಚಲಿಸುವ ಪಶುಪ್ರಾಣಿಗಳಿಗೆ ಚಲಿಸದಿರುವ ಹುಲ್ಲು ಸಸ್ಯಗಳು ಆಹಾರಗಳು. ಕೋರೆದಾಡೆಗಳಿರುವ ಸಿಂಹ ಹುಲಿಗಳಿಗೆ ಕೋರೆದಾಡೆಗಳಿರದ ಜಿಂಕೆ ಇತ್ಯಾದಿಗಳು ಆಹಾರಗಳು. ಕೈಗಳಿರುವ ಮನುಷ್ಯರಿಗೆ ಕೈಗಳಿಲ್ಲದ ಪಶುಪ್ರಾಣಿಗಳು ಆಹಾರಗಳು ಹಾಗೂ ಶೂರವಾದ ಮತ್ತು ಕ್ರೂರವಾದ ಪ್ರಾಣಿಗಳಿಗೆ ಸಾಧುವಾದ ಪ್ರಾಣಿಗಳು ಆಹಾರಗಳು. ಪ್ರತಿದಿನವೂ ತಿನ್ನಲಿಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಕೊಂದು ತಿಂದರೆ ಅದು ಅಪರಾಧವಲ್ಲ. ಏಕೆಂದರೆ ತಿನ್ನುವವರನ್ನೂ ಪ್ರಾಣಿಗಳನ್ನೂ ಭಗವಂತನೆ ಸೃಷ್ಟಿಸಿದ್ದಾನೆ’ ಎಂದು ಮನುಸ್ಮೃತಿಕಾರ ಹೇಳುತ್ತಾನೆ.

ಆದಿಮ ಮಾನವನ ಆಹಾರಕ್ರಮಕ್ಕೆ ಅನುಗುಣವಾಗಿ ಜೀವನ ವಿಧಾನಗಳು ಯಾವ ರೀತಿ ಬದಲಾಗುತ್ತಾ ಬಂದಿವೆ ಎಂದು ಹೇಳುವುದೂ ಕ್ಲೀಷೆಯಾಗಿದೆ. ಸಿಕ್ಕಿರುವುದನ್ನೆಲ್ಲಾ ತಿಂದು ಮನುಷ್ಯನ ಚರಿತ್ರೆ ಬೆಳೆದು ಬಂದಿದೆ. ತಿನ್ನಲು ಎಲ್ಲವೂ ಯೋಗ್ಯವೆಂದು ವಿಜ್ಞಾನಿಗಳಾದರೂ ಒಪ್ಪಿಕೊಂಡಾರು. ಮಾಂಸಾಹಾರ ದೇವರಿಗೆ ಒಪ್ಪುವುದಿಲ್ಲ ಎನ್ನುವ ಜನರು ’ವೇದಕಾಲದ ದೇವತೆಗಳಲ್ಲೇ ಅತ್ಯಂತ ಬಲಿಷ್ಠನೂ, ಪ್ರಭಾವಶಾಲಿಯೂ, ದೈತ್ಯನೂ, ವೈರಿಗಳನ್ನು ಸಂಹರಿಸುವ ಅಪ್ರತಿಮ ವೀರನೂ ಆಗಿದ್ದ ಇಂದ್ರನ ಮನ ತಣಿಸಲು ಎತ್ತುಗಳ ಮಾಂಸವನ್ನು ಬೇಯಿಸಿ ಉಣಬಡಿಸಲಾಗುತ್ತಿತ್ತು’ ಎಂದು ಋಗ್ವೇದದಲ್ಲಿ ಮತ್ತು ಹಲವಾರು ಗ್ರಂಥಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಪ್ರಸ್ತಾಪವಾಗಿದೆ ಎಂಬುದನ್ನು ಗಮನಿಸಬೇಕು. ಪ್ರಸ್ತುತ ಆಧುನಿಕ ಕಾಲದಲ್ಲಿ ದನದ ಮಾಂಸ ತಿನ್ನುವಿಕೆ ರಾಜಕಾರಣದ ಸಲುವಾಗಿ ಸಂಕೀರ್ಣವಾದ ಸ್ವರೂಪ ಪಡೆದಿದೆ ಎಂಬುದನ್ನು ಬಿಟ್ಟರೆ ಅದಕ್ಕೆ ಮತ್ಯಾವ ಬಲವಾದ ನಿಷೇಧಗಳಿಲ್ಲ.
ಮನು ಪುರಾತನ ಕಾಲದ ಬ್ರಾಹ್ಮಣರು ಹಸಿವಿನಿಂದ ಪಾರಾಗಲು ಎತ್ತು, ನಾಯಿಯ ಮಾಂಸವನ್ನು ಸೇವಿಸಿದ ಸಂದರ್ಭವನ್ನು ನೆನೆಯುತ್ತಾನೆ. ಹಸಿವು ಮಾನವ ಸಂಕುಲವನ್ನಷ್ಟೆ ಅಲ್ಲ ಜೀವ ಇರುವ ಪ್ರತಿಯೊಂದನ್ನು ನಿಯಂತ್ರಿಸುತ್ತದೆ. ವೇದಪುರಾಣಗಳಲ್ಲಿಯೂ ಹಸಿವಿನ ಭಯಂಕರ ಸಂದರ್ಭ ಚಿತ್ರಣಗಳು ನಿರೂಪಿಸಲ್ಪಟ್ಟಿವೆ. ವೇದ ಪಾರಂಗತ ಋಷಿಮುನಿಗಳು ಆಧ್ವರ್ಯುಗಳೂ ಸಹ ಬರಗಾಲದಲ್ಲಿ ಏನೂ ಸಿಗದೆ ಕೊಳೆತು ನಾರುವ ನಾಯಿಯ ಮಾಂಸವನ್ನು ತಿಂದ ಪ್ರಸಂಗಗಳಿವೆ. ಪ್ರಾಚೀನಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದನ್ನು ಆಧಾರ ಸಮೇತ ಅಂಬೇಡ್ಕರರು ಸುದೀರ್ಘವಾಗಿ ಬರೆದಿದ್ದಾರೆ. ಅದನ್ನೆಲ್ಲಾ ಉದ್ಧರಿಸಿದರೆ ಲೇಖನ ದೊಡ್ಡದಾಗುತ್ತದೆಯಾದ ಕಾರಣ ಅದನ್ನಿಲ್ಲಿ ಬಳಸಿಕೊಳ್ಳುವುದಿಲ್ಲ. ಜಗತ್ತಿಗೆ ಮಾನವತಾವಾದಿ ಅಹಿಂಸಾತತ್ವವನ್ನು ಸಾರಿದ ಬುದ್ಧನು ಮತ್ತು ಆತನ ಅನುಯಾಯಿಗಳೆಲ್ಲರೂ ತಿನ್ನಲು ಯೋಗ್ಯವಾದ ಎಲ್ಲಾ ಪ್ರಾಣಿಪಕ್ಷಿಗಳ ಮಾಂಸ ಸೇವನೆ ಮಾಡುತ್ತಿದ್ದರು. ಪಾಲಿ ಭಾಷೆಯಲ್ಲಿದ್ದ ಬೌದ್ಧ ನಿಯಮಾವಳಿಗಳು, ಪಾಲಿ ಮತ್ತು ಸಂಸ್ಕೃತದಲ್ಲಿರುವ ಭಾಷ್ಯ ಹಾಗೂ ವಿಶ್ಲೇಷಣಾತ್ಮಕ ಸಾಹಿತ್ಯ ಗ್ರಂಥಗಳು ಬೌದ್ಧಧರ್ಮದ ಅನುಯಾಯಿಗಳ ಆಹಾರ ಪದ್ಧತಿಗಳ ಬಗ್ಗೆ ಮತ್ತು ಬೌದ್ಧರ ಮಾಂಸಾಹಾರ ಪದ್ಧತಿಯ ಬಗ್ಗೆ ಬೆಳಕು ಚೆಲ್ಲುತ್ತವೆ.
ಆದಿಮಾನವನ ಹೆಚ್ಚಿನ ಶ್ರಮ ಮತ್ತು ಸಮಯ ಆಹಾರದ ಹುಡುಕಾಟಕ್ಕೆ ವ್ಯಯವಾಗುತ್ತಿತ್ತೆಂಬುದು ಸಾಂಸ್ಕೃತಿಕ ವಿಕಾಸದ ಚಾರಿತ್ರಿಕ ಸತ್ಯ. ಅಪರೂಪವೆನ್ನುವ ಮತ್ತು ಬದುಕಿನ ಏಕಮಾತ್ರ ಅವಲಂಬಿತವಾಗಿರುವ ಆಹಾರವು ಪವಿತ್ರವಾಗಿರುವುದರಲ್ಲಿ ಯಾವುದೇ ಅನುಮಾನವಿರಲಾರದು. ಹಾಗಾಗಿ ಸಮುದಾಯಗಳು ತಮ್ಮ ಗುಂಪಿನವರನ್ನು ಬಂಧುಗಳು ಮತ್ತು ರಕ್ತ ಸಂಬಂಧಿಗಳು ಎಂದು ಪರಿಗಣಿಸುವುದರ ಜೊತೆಗೆ ತಮಗಿಷ್ಟವಾದ ತಮ್ಮ ಪ್ರಮುಖ ಆಹಾರವನ್ನೂ ಕೂಡ ತಮ್ಮ ಸಂಬಂಧಿಗಳಂತೆಯೆ ಭಾವಿಸಿಕೊಳ್ಳುತ್ತಿದ್ದರು. ತಮಗೆ ವಿಶೇಷವೆನಿಸುವ ಆಹಾರವನ್ನು ಕುಲಲಾಂಛನವಾಗಿಯೂ ಪರಿಭಾವಿಸಿರುವ ಬುಡಕಟ್ಟುಗಳು ಇವೆ. ಪೂಜನೀಯ, ದೈವಸ್ವರೂಪಿಯಾಗಿ, ಆರಾಧನಾ ರೂಪವಾಗಿ ಆಹಾರ ಕಂಡುಬರುತ್ತದೆ. ಪಂಚಮಗಳಲ್ಲಿ ಮಾಂಸವೂ ಒಂದಾಗಿದೆ. ಮಾಂಸವು ಫಲವಂತಿಕೆಯ ಮಾಟದ ಶಕ್ತಿಯ ಅಭಿವೃದ್ಧಿಯಂತೆಯೂ ಪರಿಗಣಿಸಲ್ಪಟ್ಟಿದೆ. ಡಿ.ಡಿ. ಕೊಸಾಂಬಿಯವರು ಬರೆಯುವಂತೆ, ಸಮುದಾಯಗಳು ಕುಲಲಾಂಛನವಾಗಿದ್ದ ವಿಶೇಷ ಆಹಾರದ ಸೇವನೆಯನ್ನು ನಿಷೇಧಿಸಿದವು. ಋತುಗಳಿಗೆ ಅನುಗುಣವಾಗಿ ನಡೆಯುವ ವಿಶೇಷ ಸಮಾರಂಭಗಳಲ್ಲಿ ಮತ್ತು ಸಾವಿಗೆ ಸಂಬಂಧಿಸಿದ ಆಚರಣೆಗಳಲ್ಲಿ ಮಾತ್ರ ಇದಕ್ಕೆ ವಿನಾಯಿತಿ ಇತ್ತು. ಸಾಧಾರಣವಾಗಿ ಒಂದು ಸಮುದಾಯದ ಸದಸ್ಯರು ತಮ್ಮ ಕುಲಕ್ಕೆ ಲಾಂಛನವಾಗಿದ್ದ ಆಹಾರವನ್ನು ಇತರರೊಡನೆ ಹಂಚಿಕೊಳ್ಳುವಂತೆಯೂ ಇರಲಿಲ್ಲ. ’ಆಹಾರ ಸಂಗ್ರಹಣೆ ಮಾಡುತ್ತಿದ್ದ ಪ್ರಾಚೀನ ಕಾಲದ ಗುಂಪುಗಳು ತುಂಬಾ ಸಣ್ಣವಿದ್ದವು. ಮತ್ತು ಭೌಗೋಳಿಕವಾಗಿ ಅವರು ವಾಸಿಸುತ್ತಿದ್ದ ಪ್ರದೇಶದ ವ್ಯಾಪ್ತಿಯೂ ಸಣ್ಣದಾಗಿತ್ತು. ಇಂಥ ಪ್ರತಿಯೊಂದು ಗುಂಪಿನ ವಿಶೇಷ ಲಕ್ಷಣವನ್ನು ಅವರು ವಾಸಿಸುತ್ತಿದ್ದ ಸ್ಥಳ ಮತ್ತು ಅಲ್ಲಿ ಅನಿರ್ದಿಷ್ಟವಾಗಿ ಸರಬರಾಜು ಆಗುತ್ತಿದ್ದ ಮತ್ತು ಕೊರತೆಯಿದ್ದ ಆಹಾರ, ಇವುಗಳನ್ನು ಆಧರಿಸಿ ನಿರ್ಧರಿಸುತ್ತಿದ್ದರು.
ಆಹಾರಕ್ರಮವು ಸಮುದಾಯದ ಅನನ್ಯತೆಯಂತೆ ಸಂಬಂಧಗಳ ಗಟ್ಟಿತನಕ್ಕೆ ಕಾರಣವೂ ಹೌದು. ಹಸಿವಿನ ವಿರಾಟ್ ಸ್ವರೂಪದ ಬಗ್ಗೆ ಜಗತ್ತಿನ ಎಲ್ಲಾ ಸಮುದಾಯಗಳಲ್ಲೂ ಬಹುಮುಖಿ ಅರಿವಿದೆ. ಹಸಿವೆಂಬುದು ವ್ಯಕ್ತಿಯನ್ನು ಯಾವತ್ತೂ ಎಲ್ಲಿಯೂ ಬಿಡದ ಲೋಕದೃಷ್ಟಿಯಾಗಿದೆ ಎಂಬುದನ್ನು ಜನಸಮುದಾಯಗಳು ನಂಬಿವೆ. ಸತ್ತವ್ಯಕ್ತಿಗೆ ಮತ್ತು ದೇವರಿಗೆ ಎಡೆಯಿಡುವ ಪದ್ಧತಿಯು ಭಕ್ತಿಯ ಪರಾಕಾಷ್ಠತೆಯ ಮನಃಸ್ಥಿತಿಯದಾಗಿರದೆ ಹಸಿವನ್ನು ತಣಿಸುವ ಕ್ರಮವೆಂದು ಅರ್ಥೈಸಿಕೊಳ್ಳಬಹುದು. ನಿಶ್ಚಲ ನಿರ್ಜೀವ ವಸ್ತುಗಳನ್ನೂ ಹಸಿವು ಬಿಡಲಾರದೆಂಬ ಪ್ರಜ್ಞೆ ಜಗತ್ತಿನ ಎಲ್ಲಾ ಭಾಗಗಳಲ್ಲೂ ಬುಡಕಟ್ಟು ಜನರಿಗಿದೆ. ಲೋಕವಾದಿ ದೃಷ್ಟಿಯಲ್ಲಿ ಯೋಚಿಸುವುದಾದರೂ ಮಾಂಸವನ್ನು ತಿನ್ನದ ಜನಾಂಗ, ಜಾತಿ, ಸಮುದಾಯ ಭೂಮಿಯ ಮೇಲಿರಲು ಸಾಧ್ಯವೇ ಇಲ್ಲ.
ಆಹಾರ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸುವುದು ಕೂಡ ನೆಲದ ಆಹಾರ ವ್ಯವಸ್ಥೆಯ ಬಗೆಗಿನ ಪೂರ್ವಾಗ್ರಹಗಳ ನೆಲೆಯಲ್ಲಿಯೇ. ಆಹಾರದ ಬಗೆಗಿನ ನಂಬಿಕೆಗಳನ್ನು ಭ್ರಷ್ಟಗೊಳಿಸುವುದು, ಮೇಲಿನವರ ಆಹಾರಕ್ರಮಗಳನ್ನು ಕೆಳಗಿನವರು ಒಪ್ಪಿ ಅನುಸರಿಸಬೇಕೆಂಬುದು ಕೇವಲ ಆಹಾರ ರಾಜಕಾರಣ ಮಾತ್ರವಲ್ಲದೆ ’ಎತ್ನೋ ಸೆಂಟ್ರಿಕ್ ಆಲೋಚನೆಯಾಗುತ್ತದೆ. ಒಂದೇ ಬಗೆಯ ಆಹಾರವನ್ನು ರಾಷ್ಟ್ರೀಕರಣ ಮಾಡುವುದು ನಿರಂಕುಶ ಪ್ರಭುತ್ವದ ಹಾದಿಯ ನಡೆಯಾಗುತ್ತದೆ. ಆಹಾರ ವ್ಯವಸ್ಥೆಯು ವಿವಾದಿತ ಕೇಂದ್ರವಾಗುವುದು ಕೂಡ ಅದರ ಮತ್ತೊಂದು ಕವಲು. ಭಿನ್ನ ಆಹಾರವ್ಯವಸ್ಥೆಯನ್ನು ನಾಶಮಾಡುವ ಮನಸ್ಸಿಗೆ, ಅದರೊಂದಿಗಿನ ಜನಸಮುದಾಯದ ಸಾಂಸ್ಕೃತಿಕ, ಜನಾಂಗಿಕ ಚರಿತ್ರೆಯನ್ನು ನಾಶಮಾಡುವ ಸಂಭವವೂ ಜಾಸ್ತಿಯಿರುತ್ತದೆ.
ಯಾವುದೇ ದೇಶದ ಇಲ್ಲವೇ ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯು ಪ್ರಭುತ್ವದ ಹಿಂದೆ ನಿಂತು ರೂಪಿಸುವ ಅಧ್ಯಯನ ವಿಧಾನಗಳು ಇಡೀ ಸಬಾಲ್ಟರ್ನ್ ಸಮುದಾಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಮೇಯಗಳನ್ನು ರೂಪಿಸುವುದಲ್ಲದೆ, ಜನಾಂಗಿಕವಾದ ಅಹಂಮಿಕೆಯನ್ನೂ ತಣ್ಣಗೆ ಪೋಷಿಸುತ್ತವೆ. ಶ್ರೇಷ್ಠ-ಕನಿಷ್ಟ, ಒಪ್ಪಿತ-ಒಪ್ಪಿತವಲ್ಲದ, ಆರ್ಯ-ಆರ್ಯೇತರ, ಕಪ್ಪು-ಬಿಳುಪು ಎಂಬ ವರ್ಗವಿಂಗಡನೆಯ ಅಧ್ಯಯನಕ್ರಮಗಳೂ ಜನಾಂಗಿಕ ಶ್ರೇಷ್ಠತೆಯ ಒಪ್ಪಿತ ಫಲಗಳಾಗಿರುತ್ತವೆ. ಸೃಷ್ಟಿಪುರಾಣಗಳು, ಸಮುದಾಯಗಳ ಕುಲಕಥನಗಳೂ ಜನರ ಮನಸಿನಲ್ಲಿ ಇಂಥ ಭಾವನೆಗಳನ್ನು ಬಲವಾಗಿ ಬೇರೂರಿಸುತ್ತವೆ; ನಂಬಿಸುತ್ತವೆ. ಈ ನಂಬಿಕೆಯನ್ನು ಮಾನವಶಾಸ್ತ್ರದಲ್ಲಿ ’ಎತ್ನೋ ಸೆಂಟ್ರಿಸಂ’ ಎಂದು ಕರೆಯಲಾಗುತ್ತದೆ. ಕೊನೆಗೆ ಇದರ ಹೊರತಾಗಿ ಯಾರೂ ಇಲ್ಲ ಎನ್ನುವಷ್ಟರಮಟ್ಟಿಗೆ ನಮ್ಮನ್ನು ನಂಬಿಸಲಾಗುತ್ತದೆ. ಅಂತಿಮವಾಗಿ ಇದರ ಪರಿಣಾಮವೆಂದರೆ, ’ನಮ್ಮನ್ನು ನಮ್ಮದನ್ನು ಬಿಟ್ಟು ಉಳಿದವರ ಜೀವನ ಸಾಧಾರಣವೂ, ಅತಾರ್ಕಿಕವೂ, ಅಸಹಜವೂ, ಅತ್ಯಲ್ಪವೂ, ಆಗಿರುತ್ತದೆ. ನಮ್ಮ ಸಂಸ್ಕೃತಿ ನಮಗೆ ಆಪ್ಯಾಯಮಾನವಾಗಿ ತೋರುತ್ತಿರುತ್ತದೆ. ಈ ಧೋರಣೆ ಎಷ್ಟು ತೀವ್ರತರವಾಗಿರುತ್ತದೆಯೆಂದರೆ ತಾವು ಎಷ್ಟೇ ವಿಶಾಲ ಹೃದಯದ ವಸ್ತುನಿಷ್ಠ ದೃಷ್ಟಿಧೋರಣೆಯುಳ್ಳ ಸುಧಾರಿತರು ಎಂದುಕೊಂಡರೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಅಹಂಶ್ರೇಷ್ಠತೆಯ ಧ್ಯೇಯ ಧೋರಣೆ ಇದ್ದೇ ಇರುತ್ತದೆ. ಹಾಗಿರದ ಜನ ಯಾವ ಸಮಾಜದಲ್ಲಿಯೂ ಕಾಣಸಿಗದು’.

ಮ್ಯಾಥ್ಯೂ ಅರ್ನಾಲ್ಡ್, ವೆರ್‍ನರ್ ಜೇಗರ್, ಪೊಯ್ಸ್ ಮತ್ತು ಟಿ.ಎಸ್. ಎಲಿಯಟ್ ಮುಂತಾದವರ ಸಂಸ್ಕೃತಿ ವ್ಯಾಖ್ಯಾನಗಳನ್ನು ಗಮನಿಸಿದರೆ ಆಹಂ ಶ್ರೇಷ್ಠತೆಯ ವ್ಯಸನ ಪ್ರಧಾನಗುಣವಾಗಿ ಕಾಣುತ್ತದೆ. ಕನ್ನಡದಲ್ಲಿ ಈ ನೆಲೆಯ ಗ್ರಹಿಕೆಗಳು ಸಾಕಷ್ಟಿದ್ದರೂ ಡಿ.ವಿ.ಜಿ.ಯವರ ಸಂಸ್ಕೃತಿ ನಿರ್ವಚನಗಳು ಇದೇ ನೆಲೆಯವು. ಸಾಂಸ್ಕೃತಿಕವಾಗಿ ಮೇಲಿನ ಜಾತಿಗಳ ಸಂಸ್ಕೃತಿಯನ್ನು ಕೆಳಜಾತಿಗಳು ಸಹಜವಾಗಿ ಅನುಸರಿಸುತ್ತವೆ ಎಂಬ ’ಸಂಸ್ಕೃತಾನುಕರಣ’ ಪ್ರಮೇಯ ರೂಪಿಸಿದ ಭಾರತದ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಅವರ ಸಿದ್ಧಾಂತವು ’ಎತ್ನೊ ಸೆಂಟ್ರಿಕ್’ ನೆಲೆಯಿಂದ ಬಂದದ್ದು. ತಳಸಮುದಾಯಗಳ ಸಾಂಸ್ಕೃತಿಕ ಆಚರಣಾಲೋಕವನ್ನು ತುಚ್ಛೀಕರಿಸುವ ಈ ಚಿಂತನೆ 19ನೇ ಶತಮಾನದಲ್ಲಿ ಮೂಡಿಬಂದ ವಸಾಹತು ಧೋರಣೆಯನ್ನು ತನ್ನೊಡಲಲ್ಲಿಟ್ಟುಕೊಂಡ ’ಸಾಮಾಜಿಕ ವಿಕಾಸವಾದ’ ಅಧ್ಯಯನದ ವಿಧಾನ. ಇದರ ಬೋಧನೆ ಮತ್ತು ತಿಳುವಳಿಕೆಯೇನೆಂದರೆ, ’ಪಾಶ್ಚಾತ್ಯ ಪ್ರಗತಿಶೀಲ ಸಮಾಜಗಳು ಸಾಮಾಜಿಕ ವಿಕಾಸತತ್ವದ ಶ್ರೇಣಿಯಲ್ಲಿ ಸದಾ ಮೇಲಿನ ಸ್ತರದಲ್ಲಿಯೇ ಇರುತ್ತವೆ.
ಆದಿವಾಸಿ ಬುಡಕಟ್ಟು ಮುಂತಾದ ಸಮಾಜಗಳು ಸಾಂಸ್ಕೃತಿಕವಾಗಿ ದೈಹಿಕವಾಗಿ ಕೂಡ ಸದಾ ಅತ್ಯಂತ ಕೆಳಸ್ತರದಲ್ಲಿಯೇ ಇರುತ್ತವೆ. ಈ ತತ್ವವನ್ನು ಲೋಕದ ಎಲ್ಲ ಸಮಾಜಗಳಿಗೂ ಅನ್ವಯಿಸಿ ಒಂದು ಶ್ರೇಷ್ಠ ಮೇಲ್ವರ್ಗದವರ ಲೋಕ ಮತ್ತೊಂದು ಕೆಳವರ್ಗದವರ ಪ್ರಪಂಚ ಎಂಬುದಾಗಿ ವರ್ಗೀಕರಿಸಬಹುದು ಎಂಬುದೇ ಆ ವಾದದ ಸಾರ’. ದೊಡ್ಡ ಪೆಲೋಶಿಪ್‌ವೊಂದರಲ್ಲಿ ಅಧ್ಯಯನ ಮಾಡಿದ ಎಂ.ಎಸ್. ಶ್ರೀನಿವಾಸ್ ಅವರು ಇದೇ ವಾದವನ್ನು ಭಾರತಕ್ಕೆ ಅನ್ವಯಿಸಿ ಗಿಳಿಪಾಠ ಒಪ್ಪಿಸಿದರು.
ಜನ್ಮತಃ ಬ್ರಾಹ್ಮಣರಾಗಿದ್ದ ಶ್ರೀನಿವಾಸ್ ಅವರಿಗೆ ಈ ಅಧ್ಯಯನ ವಿಧಾನ ಆಪ್ಯಾಯಮಾನವಾಗಿ ಕಾಣಿಸಿರುವಲ್ಲಿ ಯಾವುದೇ ಅಚ್ಚರಿಯಿಲ್ಲ. Riligion and Society among the Coorge of South India, The Remembered village, Social change in Modern India ಈ ಮೂರೂ ಕೃತಿಗಳು ಸಂಸ್ಕೃತಾನುಕರಣ ವೈಧಾನಿಕತೆಯವು. ಇದೇ ಅಂಶವನ್ನಿಟ್ಟುಕೊಂಡು ಎಡ್ಮಂಡ್ ಲಿಚ್ ಕೂಡ ’ಶ್ರೀನಿವಾಸರು ಸ್ವತಃ ದಕ್ಷಿಣ ಭಾರತದ ಒಬ್ಬ ಬ್ರಾಹ್ಮಣ. ಆದ್ದರಿಂದ ತಮ್ಮದೇ ಸಮುದಾಯದ ಬಗ್ಗೆ ಅವರು ಬರೆದಿರುವುದು ಅನಿವಾರ್ಯವಾಗಿ ಪಕ್ಷಪಾತದಿಂದ, ಪೂರ್ವಾಗ್ರಹದಿಂದ ಕೂಡಿದೆ. ಆದ್ದರಿಂದ ಸಂಸ್ಕೃತಾನುಕರಣೆಯ ಬಗೆಗಿನ ಅವರ ವಾದ ದುರ್ಬಲವಾಗಿದೆ’ ಎಂದು ಟೀಕಿಸಿದ್ದರು. ಈ ಮಾತನ್ನು ಇಷ್ಟು ಬಲವಾಗಿ ಹೇಳಲು ಮುಖ್ಯ ಕಾರಣವೆಂದರೆ, ಶ್ರೀನಿವಾಸ್ ಅವರಿಗೆ ಮಾರ್ಗದರ್ಶಕರಾಗಿದ್ದ ರ್‍ಯಾಡ್ ಕ್ಲಿಪ್‌ಬ್ರೌನ್ ಇದನ್ನು ’ಸತ್ತು ಹೋದ ತಪ್ಪು ಅಧ್ಯಯನದ ಅಪಾಯಕಾರಿ ನಡೆ’ಯೆಂದು ಸಾಮಾಜಿಕ ವಿಕಾಸವಾದವನ್ನು ನಿರಾಕರಿಸಿದ್ದರು. ಸಾಮಾಜಿಕ ವಿಕಾಸವಾದವನ್ನು ಬಲವಾಗಿ ಖಂಡಿಸಿ ಬೋ ಅಸ್ ’ಸಾಂಸ್ಕೃತಿಕ ಸಾಪೇಕ್ಷತೆ’ಯ ಸಿದ್ಧಾಂತವನ್ನೇ ರೂಪಿಸಿದ್ದರು. ಅಹಂ ಶ್ರೇಷ್ಟತಾ ಸಿದ್ಧಾಂತದ ಪ್ರತಿಪಾದಕರೆಲ್ಲಾ ವಿಕೃತವಾದಿಗಳೆಂದೂ ಖಂಡಿಸಿದ್ದರು.
ಬೋ ಅಸ್ ಅವರ ಪ್ರಮೇಯದ ಪ್ರಕಾರ ’ಪ್ರತಿಯೊಂದು ಸಮುದಾಯದ ಇತಿಹಾಸವು ಅಪೂರ್ವವೂ, ವಿನೂತನವೂ ಆಗಿರುವಂಥದ್ದು. ಒಂದು ಸಂಸ್ಕೃತಿಯ ಇವತ್ತಿನ ಸ್ಥಿತಿಗತಿಗೆ ಅದು ಬೆಳೆದುಬಂದ ಬಗೆ ಮುಖ್ಯ ಕಾರಣವಾಗಿರುತ್ತದೆ. ಆದ್ದರಿಂದ ಅದನ್ನು ವಿಭಿನ್ನ ಇತಿಹಾಸದ ಹಿನ್ನೆಲೆಯುಳ್ಳ ಮತ್ತೊಂದು ಸಂಸ್ಕೃತಿಯೊಂದಿಗೆ ಹೋಲಿಸಿ ಅವನ್ನು ತರತಮವೆಂದು ನಿರ್ಣಯಿಸವಂತಹ ಕ್ರಮ ತಪ್ಪು. ಕೆಲವು ವಿಷಯಗಳಲ್ಲಿ ಹೆಚ್ಚಿನ ಒತ್ತಡಕ್ಕೆ ಸಿಕ್ಕಿ ಹೆಚ್ಚಿನ ಮಾರ್ಪಾಡು ಹೊಂದಿದ್ದಿರಬಹುದು. ಪ್ರತಿಯೊಂದು ಸಂಸ್ಕೃತಿಗೂ ಸ್ವತಂತ್ರ ಇತಿಹಾಸವಿರುವುದರಿಂದ ಶ್ರೇಷ್ಠತೆಯ ದೃಷ್ಟಿಯಿಂದ ಪರಸ್ಪರ ಹೋಲಿಸಿ ನೋಡುವಂತಿಲ್ಲ. ಹಾಗಾಗಿ ಸಂಸ್ಕೃತಿಗಳನ್ನು ಅಳೆಯುವ ತಕ್ಕ ನಿರ್ಣಾಯಕ ಮಾಪನ ಇದ್ದಿರಲು ಸಾಧ್ಯವಿಲ್ಲ. ಡಾರ್ವಿನ್ ಈ ಕ್ರಮವನ್ನು ವೈಜ್ಞಾನಿಕವಾಗಿ ದಾಖಲಿಸಿದ್ದಾನೆ. ಈ ಕ್ರಮದಲ್ಲಿ ಹೇಳಲೇಬೇಕಾದ ಇಬ್ಬರು ವಿದ್ವಾಂಸರೆಂದರೆ, ಎಲ್.ಎಚ್. ಮಾರ್ಗನ್ ಮತ್ತು ರಾಲ್ಫ್‌ಲಿಂಟನ್. ಬಾಬಾಸಾಹೇಬರು ತಮ್ಮ ಸಂಶೋಧನೆಯಿಂದ ಜಗತ್ತು ನಂಬಿಕೊಂಡಿದ್ದ ಆಲೋಚನಾಕ್ರಮಗಳನ್ನು ಮುರಿದು ಕಟ್ಟುವಾಗ ರೂಪಿಸಿದ ಪ್ರಮೇಯಗಳನ್ನೂ ಇಲ್ಲಿ ನೆನೆಸಿಕೊಳ್ಳಬಹುದು.
ಆಹಾರ ಮತ್ತು ಹಸಿವು ಮೂಲಭೂತವಾದಿ ಮತ್ತು ವಸಾಹತುಶಾಹಿ ಪ್ರಭುತ್ವಕ್ಕೆ ಬಂಡವಾಳವಾಗಿ ಪರಿಗಣಿತವಾಗಿರುವುದನ್ನು ಚರಿತ್ರೆಯ ಮೂಲಕ ಗಮನಿಸಬಹುದು. ವರ್ಗರಹಿತ ಸಮಾಜವೊಂದು ಪ್ರಭುತ್ವದ ದಾಳಿಗೆ ಸಿಕ್ಕು ಛಿದ್ರಗೊಂಡು ವರ್ಗಗಳಾಗಿ ಮಾರ್ಪಾಡಾದಾಗ ಹಸಿವಿನ ತೀವ್ರತೆ ಮತ್ತಷ್ಟೂ ಉಲ್ಬಣಗೊಳ್ಳುತ್ತದೆ; ಉಲ್ಬಣಗೊಳಿಸಲಾಗುತ್ತದೆ. ತಳಸಮುದಾಯಗಳ ಗೋಮಾಂಸ ಸೇವನೆಗೆ ಚಾರಿತ್ರಿಕವಾದ ಕಾರಣವೇನೆಂದು ಅಂಬೇಡ್ಕರರ ಬರಹಗಳು ಸಾಕ್ಷ್ಯ ಒದಗಿಸುತ್ತವೆ. ಬುಡಕಟ್ಟುಗಳನ್ನು ಕ್ರಿಮಿನಲ್ ಟ್ರೈಬ್ಸ್ ಎಂದು ಹಣೆಪಟ್ಟಿ ನೀಡಿ ವಸಾಹತುಗಳನ್ನು ಸ್ಥಾಪಿಸಿದ ಬ್ರಿಟಿಷರು ಜನರ ಶ್ರಮವನ್ನು ಮತ್ತು ಹಸಿವನ್ನು ಬಂಡವಾಳ ಮಾಡಿಕೊಂಡು ಶಿಕ್ಷಣ ನೀಡುವವರ ಜೊತೆಜೊತೆಗೆ ರೈಲು ಹಳಿಗಳು ಮತ್ತು ಕಟ್ಟಡಗಳನ್ನು ಕಟ್ಟಿಸಿದ್ದನ್ನು ಮರೆಯಲಾಗದು. ಚರಿತ್ರೆಯುದ್ದಕ್ಕೂ ಹಸಿವು ಮತ್ತು ಆಹಾರ ಪ್ರಭುತ್ವಕ್ಕೆ ದಾಳವಾಗಿದೆ. ವಾಸ್ತವ ರಾಜಕೀಯ ನಿಂತಿರುವುದೂ ಇಂತಹ ಅಜೆಂಡಾದ ಮೇಲೆಯೆ ಎಂಬುದನ್ನು ಸೂಕ್ಷ್ಮತೆಯಿರುವ ಯಾರೂ ಕಡೆಗಣಿಸಲಾರರು.
(ಈ ಲೇಖನ ರೂಪಿಸಲು ಅನೇಕ ಗ್ರಂಥಗಳಿಗೆ ಋಣಿಯಾಗಿದ್ದೇನೆ. ಅವುಗಳನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ.)

ಪಿ. ಆರಡಿಮಲ್ಲಯ್ಯ ಕಟ್ಟೇರ
ಕನ್ನಡ. ಸಹಾಯಕ ಪ್ರಾಧ್ಯಾಪಕರು ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು. ಶಿವಮೊಗ್ಗ
ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾ, ನೇಪಾಳಕ್ಕಿಂತ ಹಿಂದೆಯಿರುವ ಭಾರತ


