ಎರಡು ತಿಂಗಳ ಹಿಂದೆ ಒಬ್ಬ ಸ್ನೇಹಿತ ತನ್ನ ಎರಡು ವರ್ಷದ ಮಗನ ಒಂದು ವಿಡಿಯೋ ಹಂಚಿಕೊಂಡಿದ್ದ. ಆ ವಿಡಿಯೋನಲ್ಲಿ ಆ ಉತ್ಸಾಹಿ ಮಗು ತನ್ನೆದುರಿಗಿರುವ ಆ ಮನೋರಂಜನಾ ಯುನಿಟ್‌ನ್ನು ಉದ್ದೇಶಿಸಿ, ’ಆಯಿಚಾ ಪಿಟ್ಟಾ’ ಎಂದು ಕೂಗುತ್ತಿದ್ದಾಳೆ. ಹಲವಾರು ಸಲ ಕೇಳಿ, ಆ ಮಗು ಏನು ಹೇಳುತ್ತಿದೆ ಎಂದು ಅರ್ಥವಾಗದೇ, ನಾನು ನನ್ನ ಸ್ನೇಹಿತನಿಗೆ ಕೇಳಿದೆ- ’ಅವಳ ಮಾತುಗಳಿಗೆ ಏನಾದರೂ ಅರ್ಥವಿದೆಯಾ?’ ಎಂದು. ಆಶ್ಚರ್ಯಕರವಾಗಿ, ಅದಕ್ಕೊಂದು ಅರ್ಥವೂ ಇತ್ತು ಹಾಗೂ ಅದರ ಸಂವಹನದ ಸ್ವರೂಪ ಮತ್ತು ವಿಷಯ, ಇವೆರಡರಲ್ಲೂ ತುಂಬಾ ಮುಂದುವರೆದದ್ದಾಗಿತ್ತು.
ಆ ಮಗು ಆದೇಶಿಸುತ್ತಿದ್ದು, “ಅಲೆಕ್ಸಾ, ಪಿಟ್‌ಬುಲ್”!
ಅಲೆಕ್ಸಾ ಎಂಬುದು ನಮಗೆಲ್ಲ ಗೊತ್ತಿರುವಂತೆ, ಅಮೆಜಾನ್ ಕಂಪನಿ ಅಭಿವೃದ್ಧಿಪಡಿಸಿರುವ ಒಂದು ಸಹಾಯಕ ವರ್ಚುವಲ್ ತಂತ್ರಜ್ಞಾನ. ಈ ತಂತ್ರಜ್ಞಾನದಿಂದ ಧ್ವನಿ ಸಂವಹನವೂ ಸಾಧ್ಯ. ಈ ಸಾಧ್ಯತೆಯನ್ನು ಬಳಸಿಕೊಂಡು, ಕರೆ ಮಾಡುವುದಕ್ಕೆ, ಸಂಗೀತ ಕೇಳಲು, ತಾಪಮಾನವನ್ನು ನಿಯಂತ್ರಿಸುವುದು, ಅಲಾರ್‍ಮ್ ಇಟ್ಟುಕೊಳ್ಳುವುದು, ಲೈಟ್ ಬೆಳಗಿಸುವುದು ಮುಂತಾದ ಕೆಲಸಗಳನ್ನು ಇಂಟರ್‌ನೆಟ್‌ನೊಂದಿಗೆ ಹಾಗೂ ಮನೆಯ ಇತರ ವಸ್ತುಗಳೊಂದಿಗೆ ಕನೆಕ್ಟ್ ಮಾಡಿಕೊಂಡು ಸಾಧಿಸಬಹುದು. ಇಂಟರ್‌ನೆಟ್ ಮೂಲಕ ಜನರು ಪರಸ್ಪರ ಮಾತನಾಡುವದು ಈಗಾಗಲೇ ಇತ್ತು, ಈಗ ಸಾಧನಗಳಿಂದ ಅದನ್ನೇ ಜನರ ಅಗತ್ಯವಿಲ್ಲದೇ ಮಾಡಬಹುದಾಗಿವೆ. ಇಂಟರ್‌ನೆಟ್ ಮೂಲಕ ಈ ಸಾಧನಗಳ ಮತ್ತು ಅವುಗಳ ಅನ್ವಯಿಕೆ ಅಥವಾ ಅಪ್ಲಿಕೇಷನ್‌ಗಳ ಈ ಸಂಪರ್ಕವು ಈಗ ’ಇಂಟರ್‌ನೆಟ್ ಆಫ್ ಥಿಂಗ್ಸ್’ ಎಂದು ಜನಪ್ರಿಯವಾಗಿದೆ ಅಥವಾ ನಾವೆಲ್ಲ ಅದನ್ನು ಐಒಟಿ ಎಂತಲೇ ಕರೆಯುತ್ತಿದ್ದೇವೆ.
90ರ ದಶಕದ ಭಾರತದಲ್ಲಿ ವ್ಯಾಪಾರವು ನಿಧಾನವಾಗಿ ಸಾಫ್ಟ್‌ವೇರ್ ಆಧಾರಿತ ವ್ಯವಸ್ಥೆಯನ್ನು ಬಳಸಲು ಶುರುವಾಯಿತು, ಬ್ಯಾಂಕುಗಳು, ದೊಡ್ಡ ದೊಡ್ಡ ಅಂಗಡಿಗಳು, ಟಿಕೆಟ್ ಬುಕ್ ಮಾಡುವುದು, ವಿಶ್ವವಿದ್ಯಾಲಯಗಳು ಮತ್ತು ಇತರ ಹಲವಾರು ವಲಯಗಳಲ್ಲಿ ಕಂಪ್ಯೂಟರ್‌ಗಳು ಕಾಣಿಸಿಕೊಳ್ಳತೊಡಗಿದವು. ಅದಾದ ನಂತರ ಈ ಪ್ರಕ್ರಿಯೆ ವೇಗ ಪಡೆದುಕೊಂಡು, ಈಗ ಸಣ್ಣಪುಟ್ಟ ವ್ಯಾಪಾರಗಳಲ್ಲೂ ಈ ತಂತ್ರಜ್ಞಾನವನ್ನು ಬಳಸುವ ಸಾಮರ್ಥ್ಯ ಪಡೆದುಕೊಂಡಿವೆ. ಆಹಾರ ವಿತರಣೆಯ ವ್ಯವಸ್ಥೆಯೊಂದಿಗೆ ಕೊಆರ್ಡಿನೇಟ್ ಮಾಡುವ ತಟ್ಟೆ ಇಡ್ಲಿ ಅಂಗಡಿಯಿಂದ ಅರ್ಧ ಕೆಜಿ ಟೊಮ್ಯಾಟೊಕ್ಕೂ ಗೂಗಲ್ ಪೇನಿಂದ ಹಣ ಪಡೆದುಕೊಳ್ಳುವ ತರಕಾರಿ ಮಾರುವ ವ್ಯಕ್ತಿಯ ತನಕ ಎಲ್ಲರೂ ತಮ್ಮ ವ್ಯಾಪಾರಗಳನ್ನು ತಂತ್ರಜ್ಞಾನದ ಶಕ್ತಿಯೊಂದಿಗೆ ಗಟ್ಟಿಗೊಳಿಸುತ್ತಿದ್ದಾರೆ. ಆದರೆ, ಇವುಗಳನ್ನು ಆರ್ಡರ್ ಮಾಡಲು, ಬಳಕೆದಾರರಾದ ನೀವೇ ಬೇಕು. ಈಗ ಐಒಟಿ ಎಂಬುದಕ್ಕೆ ಅದನ್ನೂ ಬದಲಾವಣೆ ಮಾಡುವ ಸಾಮರ್ಥ್ಯ ಇದೆ. ಒಂದು ಪಕ್ಷ ಹಾಗೆಯೇ ಆದರೆ, ಕಂಪ್ಯೂಟರ್ ಮತ್ತು ಇಂಟರ್‌ನೆಟ್ ನಂತರ ನಮ್ಮ ದೈನಂದಿನ ಜೀವನಕ್ಕೆ ಅತ್ಯಂತ ಮಹತ್ವದ ತಿರುವನ್ನು ತರುವ ಅಲೆ ಇದಾಗಬಹುದಾಗಿದೆ.

ಐಒಟಿಯ ಭಾಗವಾಗಬಹುದಾದ ಈ ’ಥಿಂಗ್ಸ್’ ಯಾವ್ಯಾವು? ಬಹುತೇಕ ಎಲ್ಲವೂ.
ನಿಮ್ಮ ಮನೆಯಲ್ಲಿ ಐಒಟಿಯಿಂದ ಸಂಪರ್ಕಿಸಲಾದ ಅಟೋಮೇಷನ್ ವ್ಯವಸ್ಥೆ ಇದೆ ಎಂದಿಟ್ಟುಕೊಳ್ಳಿ. ಮಾರನೆಯ ದಿನ ಬೆಳಗ್ಗೆಯ ಅಲಾರ್ಮ್‌ಗೆ ನಿಮ್ಮ ನೆಚ್ಚಿನ ವರ್ಚುವಲ್ ಸಹಾಯಕನಿಂದ ಸೆಟ್ ಮಾಡಿರುತ್ತೀರಿ. ನೀವು ಎದ್ದೇಳುವ ಸಮಯದ ಆಧಾರದ ಮೇಲೆ, ನಿಮ್ಮ ಕೋಣೆಯಲ್ಲಿ ಒಂದು ಬೆಚ್ಚನೆ ಲಘುವಾದ ಬೆಳಕು ಹರಿಯುತ್ತದೆ. ನೀವು ಏಳುತ್ತಿದ್ದಂತೆ, ಮನೆಯಲ್ಲಿಯ ಹೀಟರ್ ತನ್ನಿಂತಾನೆ ಆನ್ ಆಗಿ, ನಿಮ್ಮ ಬೆಳಗ್ಗೆಯ ಸ್ನಾನಕ್ಕೆ ಬಿಸಿನೀರನ್ನು ರೆಡಿಯಾಗಿರಿಸುತ್ತದೆ, ಅದೂ ನಿಮಗೆ ಬೇಕಾಗುವಷ್ಟು ಬೆಚ್ಚಗೆ. ಅದರೊಂದಿಗೆ ಮನೆಯ ಇತರ ಭಾಗಗಳೂ ಎಚ್ಚೆತ್ತುಕೊಂಡಿವೆ, ಬೆಳಗ್ಗೆಯ ಕಾಫಿಗಾಗಿ ಕಾಫಿ ತಯಾರಿಸುವ ಸಾಧನವು ಕಾಫಿ ಕುದಿಸುತ್ತದೆ, ಮನೆಯ ಸ್ಮಾರ್ಟ್ ಕುಕ್ಕರ್ ಕೂಡ, ಇಡ್ಲಿ ಬೇಯಿಸಲು ಶುರು ಮಾಡುತ್ತದೆ ಹಾಗೂ ವ್ಯಾಕ್ಯೂಮ್ ಕ್ಲೀನರ್ ನಿಮ್ಮ ಪಡಸಾಲೆಯನ್ನು ನೀವು ಕಾಲಿಡುವ ಮುನ್ನವೇ ಸ್ವಚ್ಛಗೊಳಿಸುತ್ತದೆ. ಇದು ಯಾವುದೇ ಸೈನ್ಸ್ ಫಿಕ್ಷನ್ ಸಿನೆಮಾ ಅಥವಾ ಒಬ್ಬ ಕೋಟ್ಯಾಧಿಪತಿಯ ಮನೆಯಲ್ಲ. ಇದು ಈಗಾಗಲೇ ವಾಸ್ತವವಾಗುತ್ತಿರುವ ಸಂಗತಿ.
ಯಾವುದೇ ಸಾಧನವೂ ಐಒಟಿಯ ಭಾಗವಾಗಬಹುದಾಗಿದೆ. ಆ ಸಾಧನವನ್ನು ಸ್ಮಾರ್ಟ್ ಆಗಿಸಲು ಒಂದೆರಡು ಎಲಿಮಂಟ್ ಬೇಕಷ್ಟೆ. ಒಂದು ಸೆಟ್‌ಅಪ್‌ಗೆ ಪ್ರಚೋದನೆ ನೀಡುವ ತರಹದ ಪ್ರತಿಕ್ರಿಯೆ. ಆ ವಾತಾವರಣದಲ್ಲಿ ಒಂದು ಸ್ಟಿಮ್ಯುಲಸ್ ಅಥವಾ ಉತ್ತೇಜಕ ಇದ್ದು, ಅದುವೇ ಆಗ ಬಳಸಬೇಕಾದ ಸಾಧನಕ್ಕೆ ಪ್ರಚೋದನೆ ನೀಡುತ್ತದೆ.
ಈಗ ನಿಮ್ಮ ಮನೆಯ ಸಾಮಾನ್ಯ ಸೋಫಾ ಅನ್ನು ಸ್ಮಾರ್ಟ್ ಸೋಫಾವನ್ನಾಗಿ ಬದಲಿಸುವುದನ್ನು ಪರಿಗಣಿಸುವ. ಆಯಾ ವ್ಯಕ್ತಿಯು ಕುಳಿತುಕೊಳ್ಳುವ ಆಧಾರದ ಮೇಲೆ ಅದರ ಓರೆಯನ್ನು ಹೊಂದಿಸುವುದು ಎಂಬುದು ಅದರ ಸ್ಮಾರ್ಟ್‌ನೆಸ್ ಅಥವಾ ಜಾಣತನ ಎಂದು ನಾವು ಅಪೇಕ್ಷಿಸಬಹುದು. ಈಗ ನಮಗಿಲ್ಲಿ ಆ ಸೋಫಾದ ಮೇಲೆ ಕುಳಿತುಕೊಳ್ಳುವ ವ್ಯಕ್ತಿ ಯಾರು ಎಂದು ಗುರುತಿಸುವ ದಾರಿ ಬೇಕಾಗುತ್ತದೆ. ಇದನ್ನು ಸಾಧಿಸುವುದು ’ಸೆನ್ಸರ್’ ಎಂದು ಕರೆಯಲಾಗುವ ಸಾಧನ. ಒಂದು ವೇಳೆ ನಮ್ಮ ಸೋಫಾ ಬೆರಳಚ್ಚಿನ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತದೆ ಅಂದುಕೊಳ್ಳುವ. ಆಗ, ಆ ಸೋಫಾದಲ್ಲಿಯೇ ಒಂದು ಬೆರಳಚ್ಚಿನ ಸೆನ್ಸರ್ ಇರಬೇಕಾಗುತ್ತದೆ. ನಂತರ, ಆ ಬೆರಳಚ್ಚನ್ನು ಸ್ಕ್ಯಾನ್ ಮಾಡಿದ ಆಧಾರದ ಮೇಲೆ ಸೋಫಾದ ಬಾಗುವಿಕೆಯನ್ನು ಹೊಂದಿಸಬೇಕಾಗುತ್ತದೆ. ಹಾಗೂ ಇದಕ್ಕೆ ತೀರ್ಮಾನ ತೆಗೆದುಕೊಳ್ಳುವ ಹಾಗೂ ಕಂಪ್ಯುಟೇಷನ್ ಮಾಡುವ ಒಂದು ರೀತಿಯ ಕಾರ್ಯದ ಅವಶ್ಯಕತೆ ಇರುತ್ತದೆ. ಇಲ್ಲಿಯೇ ಆ ಒಂದು ಮಾಂತ್ರಿಕ ’ಚಿಪ್’ ತನ್ನ ಕೆಲಸ ಮಾಡುತ್ತದೆ. ಇದುವೇ ಈ ಒಂದು ವಸ್ತುವನ್ನು, ತನ್ನದೇ ವಿವೇಚನೆಯುಳ್ಳ ಒಂದು ಸಾಧನವನ್ನಾಗಿ ಬದಲಿಸುತ್ತದೆ. ಈ ಚಿಪ್ ಅಲ್ಲಿರುವ ಮಾಹಿತಿಯನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಆಯಾ ವಸ್ತು ಅಥವಾ ಸಾಧನಕ್ಕೆ ನೀಡುತ್ತದೆ. ಇದಕ್ಕಾಗಿ, ಆ ವಸ್ತುವನ್ನು ಮತ್ತು ಬೆರಳಚ್ಚನ್ನು ಸೋಫಾದ ಓರೆಗೆ ತಳಕುಹಾಕುವ ಒಂದು ಬಾಹ್ಯ ವ್ಯವಸ್ಥೆಗೆ ಕನೆಕ್ಟ್ ಮಾಡಬೇಕಾಗಬಹುದು. ಈ ಬಾಹ್ಯ ವ್ಯವಸ್ಥೆಯು ಸರ್ವರ್ ಆಗಿರಬಹುದು ಅಥವಾ ಕ್ಲೌಡ್‌ನಲ್ಲಿರುವ ಡೇಟಾಬೇಸ್ ಆಗಿರಬಹುದು. ಇದಕ್ಕೆ ಇಂಟರ್‌ನೆಟ್ ಮೂಲಕ ಆಗುವ ಸಂವಹನದ ಒಂದು ರೀತಿಯ ಸ್ವರೂಪ ಬೇಕಾಗುವುದು. ಒಮ್ಮೆ ಈ ಡೇಟಾ ವಿನಿಮಯವನ್ನು ಸಾಧಿಸಿದ ನಂತರ, ಆ ನಿರ್ದಿಷ್ಟ ಕ್ರಮವನ್ನು ಕೈಗೊಳ್ಳುವ ಕೊನೆಯ ಹಂತಕ್ಕೆ ಬರುತ್ತೇವೆ, ಅದುವೇ ಈ ಪ್ರಕರಣದಲ್ಲಿ ಸೋಫಾದ ಓರೆಯನ್ನು ಹೊಂದಿಸುವುದು. ಇದನ್ನು ’ಆಕ್ಚುವೇಟರ್’ ಎಂದು ಕರೆಯಲಾಗುವ ಒಂದರಿಂದ ಸಾಧ್ಯವಾಗುತ್ತದೆ, ಈ ಆಕ್ಚುವೇಟರ್ ತನಗೆ ತಲುಪಿದ ಡೇಟಾ ಆಧಾರಿಸಿ, ಸೋಫಾದ ಓರೆಯನ್ನು ಹೊಂದಿಸುವ ಯಾಂತ್ರಿಕ ಕ್ರಿಯೆಯನ್ನು ಸಾಧ್ಯಗೊಳಿಸುತ್ತದೆ.
ಅಂದರೆ ಇದು ಮನುಷ್ಯರನ್ನು ಸೋಮಾರಿಗಳನ್ನಾಗಿಸುವುದಿಲ್ಲವಾ ಹಾಗೂ ನಮ್ಮ ಯಾಂತ್ರಿಕ ಶಕ್ತಿಗಳನ್ನು ಕಡಿಮೆ ಬಳಸುವಂತೆ ಮಾಡುವುದಿಲ್ಲವಾ?
ಹೌದು, ಭಾಗಶಃ ಇದು ಸತ್ಯ. ಆದರೆ ಐಒಟಿ ಎಂಬುದಕ್ಕೆ ಅತ್ಯಂತ ವಿಶಾಲವಾದ ಅನ್ವಯಿಕೆಗಳಿವೆ, ಗೃಹೋಪಕರಣದ್ದು ಅದರಲ್ಲಿ ಕೇವಲ ಒಂದು ಮಾತ್ರ ಹಾಗೂ ಬಹುಶಃ ಅತ್ಯಂತ ಸುಲಭವಾಗಿದ್ದೂ ಆಗಿರಬಹುದು. ಆರೋಗ್ಯಸೇವೆ, ಸಾರಿಗೆ, ಉತ್ಪಾದನಾ ವಲಯ, ರೀಟೇಲ್, ಶಿಪಿಂಗ್, ಆಟೊಮೊಬೈಲ್ ವಲಯ, ಭದ್ರತಾ ವ್ಯವಸ್ಥೆ, ಸಪ್ಲೈ ಚೇನ್ ನಿರ್ವಹಣೆ ಹಾಗೂ ಇನ್ನೂ ಇತರ ವಲಯಗಳಲ್ಲಿ ಇದನ್ನು ಬಳಸಬಹುದು.
ಆರೋಗ್ಯ ಸೇವಯೆಲ್ಲಿ ಇದು ತರಬಹುದಾದ ಬದಲಾವಣೆ ಅತ್ಯಂತ ಮಹತ್ವದ್ದಾಗಿದೆ. ಅದು ಅತ್ಯಂತ ಸರಳ ಎನಿಸಬಹುದಾದ ಸ್ಮಾರ್ಟ್ ಕೈಗಡಿಯಾರ, ತೂಕ ಮಾಡುವ ಸಾಧನ, ರಕ್ತದೊತ್ತಡ ಅಳೆಯುವ ಸಾಧನ, ಇವೆಲ್ಲವುಗಳಿಂದ ಡಾಕ್ಟರ್‌ಗಳಿಗೆ ತಮ್ಮ ರೋಗಿಗಳ ಆರೋಗ್ಯದ ದಾಖಲೆಗಳನ್ನು ಯಾರೋ ಒಬ್ಬರು ಅಳೆದು, ಸಂಗ್ರಹ ಮಾಡಿ ಕೊಡುವ ಅಗತ್ಯವಿಲ್ಲದೇ ತಲುಪಬಹುದು. ಇನ್ನು ವಿಶೇಷ ಆರೈಕೆಗೆ ರೋಗಿಯು ಎಲ್ಲೇ ಇದ್ದರೂ, ಅವರ ಪ್ರಮುಖ ದೈಹಿಕ ಮಾಪನಗಳು ಮತ್ತು ಅಗತ್ಯ ಬಿದ್ದರೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನೂ ಸೃಷ್ಟಿಸಬಹುದಾಗಿದೆ. ಇತ್ತೀಚೆಗೆ ಕೋವಿಡ್ ಸಮಯದಲ್ಲಿ ನಾವು ಇದನ್ನು ನೋಡಿದ್ದೇವೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿದ್ದಾಗ, ವೈರಸ್‌ನಿಂದ ಚೇತರಿಸಿಕೊಳ್ಳುತ್ತಿದ್ದ ರೋಗಿಗಳು ಹಲವಾರು ಕಡೆಗಳಲ್ಲಿ ಎಲ್ಲೋ ದೂರ ಇದ್ದುಕೊಂಡಿದ್ದೇ, ಅವರ ಆರೈಕೆ ಸಾಧ್ಯವಾಯಿತು. ಒಂದು ಹೃದಯದ ಮಾನಿಟರ್‌ನಿಂದ – ಅದು ರೋಗಿಯ ಎದೆಯ ಮೇಲೆ ತಗಲಿಸಲಾಗಿರುವ ಒಂದು ಸ್ಟಿಕರ್‌ಅಷ್ಟೇ ಆಗಿದ್ದರೂ – ಅದರಿಂದ ವೈದ್ಯರು ಆ ರೋಗಿಯ ಹೃದಯ ಪರಿಸ್ಥಿತಿಯನ್ನು ಹಲವಾರು ದಿನಗಳವರೆಗೆ – ಆಸ್ಪತ್ರೆಯ ಹಾಸಿಗೆಯ ಮೇಲೆ ಇಲ್ಲದಿದ್ದರೂ ಮಾನಿಟರ್ ಮಾಡುವಂತಾಯಿತು, ಅದರಿಂದ ಆಸ್ಪತ್ರೆಗಳ ಮೇಲೆ ಹಾಗೂ ವೈದ್ಯರ ಮೇಲೆ ಇದ್ದ ಭಾರ ಗಣನೀಯವಾಗಿ ತಗ್ಗಿತ್ತು. ಮುಂದಿನ ದಿನಗಳಲ್ಲಿ ವಯಸ್ಸಾದವರ ಸಂಖ್ಯೆ ಗಣನೀಯವಾಗಿ ಹೆಚ್ಚಿಲಿರುವ ಸನ್ನಿವೇಶದಲ್ಲಿ, ಈ ರಿಮೋಟ್ ಮಾನಿಟರಿಂಗ್ ಎಂಬುದು ಅತ್ಯಗತ್ಯ ಸೇವೆಯಾಗುವ ನಿರೀಕ್ಷೆ ಸಹಜವಾಗಿದೆ.
ಆದರೆ ನಾಣ್ಯಕ್ಕೆ ಎರಡು ಬದಿಗಳಿರುತ್ತವೆ ಎಂಬುದು ನಮಗೆ ಗೊತ್ತೇ ಇದೆ.
ಇಂಟರ್‌ನೆಟ್ ಎಂಬ ಸೌಂದರ್ಯದ ಹಿಂದೆ ಒಂದು ಭಯಾನಕ ದೈತ್ಯವೂ ಅಡಗಿದೆ ಎಂಬುದನ್ನು, ಅದರ ಕರಾಳ ಮುಖ ಈಗಾಗಲೇ ತೋರಿಸಿದೆ. ಈಗ ಈ ಐಒಟಿ ಕೂಡ ಆ ದೈತ್ಯದ ಆಕಾರವನ್ನು ಹೆಚ್ಚಿಸುವುದು ಸ್ವಾಭಾವಿಕವಾಗಿದೆ.
ನಾವು ನಮ್ಮ ದಿನವನ್ನು ಇನ್ನೊಂದು ಸಲ ಶುರು ಮಾಡುವ, ಆದರೆ ಈ ಸಲ ನಮ್ಮ ಅಲಾರ್ಮ್ ಹೊಡೆದುಕೊಳ್ಳುವುದಿಲ್ಲ. ನೀವು ಒಂದು ಗಂಟೆ ತಡವಾಗಿ ಎಚ್ಚೆತ್ತುಕೊಳ್ಳುತ್ತೀರಿ, ಗಡಿಬಿಡಿಯಲ್ಲಿ ಫೋನನ್ನು ನೋಡುತ್ತೀರಿ, ಆಗ ಇಂಟರ್‌ನೆಟ್ ಸ್ಲೋ ಆಗಿರುವುದು ತಿಳಿಯುತ್ತದೆ. ನೀರು ಬಿಸಿ ಮಾಡುವ ಹೀಟರ್‌ಗೆ ಮ್ಯಾನವಲ್ ಸ್ವಿಚ್ ಇಲ್ಲ, ಇದ್ದರೂ ಅದನ್ನು ಬಳಸುವುದು ಹೇಗೆ ಎಂದು ನಿಮಗೆ ತಿಳಿದಿಲ್ಲ. ನೀವು ಹೇಗೋ ಮಾಡಿ, ತಣ್ಣೀರಿನ ಸ್ನಾನ ಮಾಡಿ ಹೊರಬಂದಾಗ, ಕಾಲಿಂಗ್ ಬೆಲ್ ಹೊಡೆದುಕೊಳ್ಳುತ್ತಿದೆ. ನೀವು ಓಡೋಡಿ ನೋಡಿದಾಗ, ಒಬ್ಬ ಒಳ್ಳೆಯ ಬಟ್ಟೆ ಧರಿಸಿದ ವ್ಯಕ್ತಿ ನಿಮ್ಮನ್ನು ನೋಡಿ ಮುಗುಳ್ನಗುತ್ತಾನೆ. ಅವನು ಡಿಶ್‌ವಾಷರ್ ಹೇಗೆ ಕೆಲಸ ಮಾಡುತ್ತೆ ಎಂಬುದರ ಡೆಮೊ ಕೊಡಲು ಬಂದಿದ್ದಾನೆ ಆದರೆ ನೀವು ಅದನ್ನು ಕೇಳಿದ್ದಿಲ್ಲ. ಆದರೆ ನಿಮ್ಮ ಹೆಂಡತಿ ಅಥವಾ ಗಂಡನೊಂದಿಗೆ ಖಾಸಗಿಯಾಗಿ, ನಿಮ್ಮ ಮನೆಯ ಒಳಗೆ ಸುರಕ್ಷಿತವಾಗಿಯೇ ಅದರ ಬಗ್ಗೆ ಮಾತನಾಡಿಕೊಳ್ಳುವ ತಪ್ಪನ್ನು ಮಾಡಿದ್ದೀರ ಹಾಗೂ ಅದನ್ನು ನಿಮ್ಮ ಸ್ಮಾರ್ಟ್ ವರ್ಚುವಲ್ ಸಹಾಯಕ ಆಲಿಸಿದೆ.

ಈ ’ವಸ್ತು’ (ಥಿಂಗ್ಸ್)ಗಳ ಕಳಪೆ ಅನುಷ್ಠಾನಗೊಳಿಸುವ ಕಾರಣದಿಂದ ಆಗಬಹುದಾದ ಅನಪೇಕ್ಷಿತ ಮತ್ತು ಉದ್ದೇಶಿತ ಸಮಸ್ಯೆಗಳು ಇವು. ಕಳಪೆಯಾಗಿ ಅಭಿವೃದ್ಧಿಪಡಿಸಿದ ಒಂದು ವ್ಯವಸ್ಥೆಯು ಭದ್ರತೆಯ ಮತ್ತು ಖಾಸಗಿತನದ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ಐಒಟಿ ಸಾಧನಕ್ಕೆ ಯಾರೊಬ್ಬರು ಹ್ಯಾಕ್ ಮಾಡಿ ಅವಕಾಶ ಗಿಟ್ಟಿಸಿಕೊಂಡಾಗ ಇದೆಲ್ಲಾ ಆಗಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್ ಬೀಗವನ್ನು ಯಾರೋ ಹ್ಯಾಕ್ ಮಾಡಿದರೆ, ಅದರ ಬಳಕೆಯ ಅವಕಾಶ ಪಡೆದರೆ, ಹಾಗೂ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿ ನೀವು ಮನೆಯೊಳಗೇ ಬಂಧಿಯಾಗಿಬಿಡುವುದನ್ನು ಊಹಿಸಿಕೊಳ್ಳಿ. ಕೃಷಿಭೂಮಿಯಲ್ಲಿ ಅಸಮರ್ಪಕವಾಗಿ ಕೆಲಸ ಮಾಡುವ ಒಂದು ಸಾಧನವು ಬೆಳೆಗಳಿಗೆ ಹೆಚ್ಚು ಅಥವಾ ಕಡಿಮೆ ನೀರುಣಿಸುವಂತೆ ಮಾಡಿ, ಭಾರಿ ನಷ್ಟಕ್ಕೆ ಕಾರಣವಾಗಬಹುದು.
ದತ್ತಾಂಶ ಅಥವಾ ಡೇಟಾ ಸಂರಕ್ಷಣೆ ಎಂಬುದು ಐಒಟಿಯನ್ನು ಚರ್ಚಿಸುವಾಗ ಗಮನದಲ್ಲಿರಬೇಕಾದ ಪ್ರಮುಖ ಅಂಶವಾಗಿದೆ. ದಿನನಿತ್ಯ ಒಬ್ಬ ವ್ಯಕ್ತಿಯು ಬಳಸುವ ಎಲ್ಲಾ ಸಾಧನಗಳಿಂದ ಸಿಗುವ ದತ್ತಾಂಶದ ಪ್ರಮಾಣ ಅಪಾರವಾಗಿದೆ.
ಇಲ್ಲಿಯವರೆಗೆ ನಾವುಗಳು, ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಇರುವ ನಮ್ಮ ದತ್ತಾಂಶವನ್ನು ಬಳಸಿಕೊಂಡಿದ್ದು, ಅದನ್ನು ದುರುಪಯೋಗ ಮಾಡಿಕೊಂಡಿದ್ದರ ಪರಿಣಾಮಗಳನ್ನು ನೋಡಿದ್ದೇವೆ. ಆದರೂ, ಈ ದತ್ತಾಂಶ ನಾವು ಇಂಟರ್‌ನೆಟ್‌ನಲ್ಲಿ ಹಂಚಿಕೊಳ್ಳುವ ಆಯ್ಕೆ ಮಾಡಿದ ದತ್ತಾಂಶವಾಗಿದೆ. ಈಗ ಊಹಿಸಿ, ಒಂದು ವೇಳೆ, ನಿಮ್ಮ ಮನೆಯಲ್ಲಿ ಆಗುತ್ತಿರುವುದೆಲ್ಲವೂ ವಿಡಿಯೋ ಆಗುತ್ತ, ನೀವು ಪ್ರತಿದಿನ ಸೇವಿಸುವ ಕ್ಯಾಲರಿಗಳು, ನೀವು ಬಳಸುವ ಸಾಬೂನಿನ ಕಂಪನಿ, ಇವೆಲ್ಲವೂ ಇಂಟರ್‌ನೆಟ್‌ನಲ್ಲಿ ಬಂದರೆ. ಅದಕ್ಕಿಂತ ಕೆಟ್ಟ ಅಂಶವೇನೆಂದರೆ, ಈ ಎಲ್ಲ ಸ್ಮಾರ್ಟ್ ಸಾಧನಗಳಿಂದ ದತ್ತಾಂಶ ಎಲ್ಲೋ ಹೋಗುತ್ತಿದೆ ಎಂಬುದರ ಕಲ್ಪನೆಯೂ ನಿಮಗಿರುವುದಿಲ್ಲ. ಇದು ದತ್ತಾಂಶ ಸುರಕ್ಷತೆ ಮತ್ತು ಖಾಸಗಿತನದ ನಿಟ್ಟಿನಲ್ಲಿ ಗಂಭೀರವಾದ ಹೊಸ ಸಮಸ್ಯೆಗಳಿಗೆ ಎಡೆಮಾಡುತ್ತದೆ ಹಾಗೂ ಅದನ್ನು ಅಂದರೆ ನಿಮ್ಮ ಖಾಸಗಿ ದತ್ತಾಂಶದ ಜೊತೆಗೆ ಇತರ ದತ್ತಾಂಶವನ್ನು ರಕ್ಷಿಸಲು, ಅದನ್ನು ಹ್ಯಾಂಡಲ್ ಮಾಡಲು ಕಟ್ಟುನಿಟ್ಟಾದ ಕಾಯಿದೆಗಳನ್ನು ರಚಿಸಬೇಕಾಗುತ್ತದೆ. ಗ್ರಾಹಕ ಕೇಂದ್ರಿತ ಪ್ರಚಾರತಂತ್ರ ಈಗಾಗಲೆ ವಾಸ್ತವವಾಗಿದ್ದರೂ, ಐಒಟಿ ಹೆಚ್ಚಾದ ನಂತರ ಅದೊಂದು ಅತ್ಯಂತ ಬೃಹತ್ ಅವತಾರ ತಾಳಬಹುದಾಗಿದೆ.
ಮೇ 2018ರಿಂದ ಯುರೋಪಿಯನ್ ಒಕ್ಕೂಟ ಜಾರಿಗೆ ತಂದ ಜಿಡಿಪಿಆರ್ ಶಾಸನ ಜಾರಿ ಇದೆ ಆದರೆ ಅದು ಮೂಲತಃವಾಗಿ ಖಾಸಗೀ ಮಾಹಿತಿಯ ದತ್ತಾಂಶದ ಬಗ್ಗೆ ಕೇಂದ್ರೀಕೃತವಾಗಿದೆ. ಭಾರತದಲ್ಲಿ ಈಗ ಅಸ್ತಿತ್ವದಲ್ಲಿರುವ ಕಾಯಿದೆ ಎರಡು ದಶಕದಷ್ಟು ಹಳೆಯದು. 2019ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಖಾಸಗಿ ದತ್ತಾಂಶ ರಕ್ಷಣೆ ಕಾಯಿದೆ 2019 (The Personal Data Protection Bill, 2019)ಯು ಕಳೆದ ಎರಡು ವರ್ಷಗಳಲ್ಲಿ ಹಲವಾರು ಮಾರ್ಪಾಡುಗಳನ್ನು ಕಂಡಿದೆ. ಅಂತಿಮವಾಗಿ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬಹುದು ಎಂಬ ನಿರೀಕ್ಷೆ ಇದೆ. ಅದು ಹೇಗಿರುತ್ತೋ ಇನ್ನೂ ಗೊತ್ತಿಲ್ಲ, ಖಾಸಗಿ ಅಲ್ಲದ ದತ್ತಾಂಶವನ್ನು ಅದರ ಪರಿಧಿಯೊಳಗೆ ಒಳಗೊಳ್ಳುವ ಸಾಧ್ಯತೆಯೂ ಇದೆ. ಅದರೊಂದಿಗೆ, ಈ ಕಾಯಿದೆಯ ಭಾಗವಾಗಿ, ದತ್ತಾಂಶದ ಲೋಕಲೈಸೇಷನ್ ಮಾಡುವ ಮಾತುಗಳೂ ಕೇಳಿಬರುತ್ತಿವೆ. ಅಂದರೆ, ಇದು ಮೂಲತಃವಾಗಿ ಭಾರತೀಯರ ದತ್ತಾಂಶವನ್ನು ದೇಶದ ಗಡಿಗಳ ಒಳಗೆಯೇ ಶೇಖರಿಸುವಂತೆ ಮಾಡುವ ಆಯಾಮ. ದೇಶದ ಪ್ರಜೆಗಳ ದತ್ತಾಂಶದ ದುರ್ಬಳಕೆ ಆಗಬಾರದು ಎಂಬ ಆಶಯ ಅರ್ಥವಾದರೂ, ಇದಕ್ಕೆ ಇನ್ನಿತರ ಆಯಾಮಗಳಿವೆ. ಇದರಿಂದ ಒಳಗೊಳ್ಳಬಹುದಾದ ಭದ್ರತಾ ಅಪಾಯಗಳನ್ನು ನಿವಾರಿಸಲು ಈ ದತ್ತಾಂಶವನ್ನು ಹೋಸ್ಟ್ ಮಾಡಲು ಮೂಲಸೌಕರ್ಯಗಳನ್ನು ಸೃಷ್ಟಿಸುವುದು, ಮುಂತಾದ ಅಗತ್ಯಗಳು ತಲೆದೋರುತ್ತವೆ.

ಆದರೆ, ಈ ತಂತ್ರಜ್ಞಾನದೊಂದಿಗೆ ಕೆಲಸ ಮಾಡುತ್ತಿರುವ ಎಲ್ಲಾ ಕಂಪನಿಗಳು ನಮ್ಮ ದತ್ತಾಂಶವನ್ನು ದುರ್ಬಳಕೆ ಮಾಡದೇ ಇರುತ್ತವೆಯಾ? ಮುಂಚೆ ನಿಮ್ಮ ವಾಶಿಂಗ್ ಮಷೀನ್ ಕೆಟ್ಟರೆ, ಆಯಾ ಸರ್ವಿಸ್ ಸೆಂಟರ್‌ಗೆ ಕರೆ ಮಾಡುವುದನ್ನು ಬಿಟ್ಟರೆ ಬೇರಾವುದೇ ಆಯ್ಕೆಗಳಿರಲಿಲ್ಲ. ಆದರೆ ಒಂದು ಐಒಟಿ ಸೆಟ್‌ಅಪ್ ಇದ್ದಲ್ಲಿ, ವಿಶ್ವದ ಯಾವುದೋ ಒಂದು ಭಾಗದಿಂದ ಆ ಸಮಸ್ಯೆಯನ್ನು ಬಗೆಹರಿಸುವ ಸಾಧ್ಯತೆ ಇರುಬಹುದಾ? ಈ ಆಯ್ಕೆ ಇದ್ದರೆ ನಮಗೆ ಒಳಿತಲ್ಲವೇ? ಆಯಾ ಸಾಧನ ಅಥವಾ ಅಪ್ಲಿಕೇಷನ್ ಜೊತಗೆ ಬಳಕೆದಾರರ ಅನುಭವ ಉತ್ತಮವಾಗಲಿ ಎಂಬ ಉದ್ದೇಶದಿಂದ ಶುರುವಾದ ಈ ದತ್ತಾಂಶ ಸಂಗ್ರಹದ ಪ್ರಕ್ರಿಯೆಯು ಈ ದತ್ತಾಂಶ ಮತ್ತೇನೆಲ್ಲ ಮಾಡಬಹುದು ಎಂದು ತಿಳಿದಂತೆಲ್ಲ ಬೇರೆಯ ದಾರಿಗಳನ್ನು ಹಿಡಿಯಿತು.
ತಮ್ಮ ತಮ್ಮ ದೃಷ್ಟಿಕೋನಗಳ ಅನುಗುಣವಾಗಿಯೂ ಇದರ ಒಳಿತುಕೆಡಕುಗಳು ಬದಲಾಗುತ್ತವೆ. ಒಂದು ವೇಳೆ ತನ್ನ ತಂದೆಯ ಆಮ್ಲಜನಕದ ಪ್ರಮಾಣ ಎಷ್ಟಿದೆ ಎಂಬುದನ್ನು ಸತತವಾಗಿ ಮಾನಿಟರ್ ಮಾಡಬೇಕಾದ, ಅದು ಹೆಚ್ಚಾದರೆ ಎಚ್ಚರಿಕೆ ಗಂಟೆ ಬಾರಿಸುವ ಇಂತಹ ಪರಿಸ್ಥಿತಿಯಲ್ಲಿದ್ದಾಗ ಆ ಮಗಳು, ತನ್ನ ದತ್ತಾಂಶ ಬೇರೆಲ್ಲೋ ಕಡೆ ಸಂಗ್ರಹವಾಗುತ್ತಿದೆ ಎಂದು ದೂರಿಯಾಳೆ? ಹಾಗೂ ತನ್ನ ಹದಿಹರೆಯದ ಮಗಳ ಎಲ್ಲಾ ಚಲನವಲನಗಳನ್ನು ಟ್ರ್ಯಾಕ್ ಮಾಡುವ, ಅವಳ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವ ಹಾಗೂ ಬಹುಶಃ ವಿಡಿಯೋ ಚಿತ್ರೀಕರಣ ಕೂಡ ಮಾಡುವ ಮತ್ತು ಈ ಎಲ್ಲಾ ದತ್ತಾಂಶವು ಒಂದು ಸರ್ವರ್‌ನಲ್ಲಿ ಸಂಗ್ರಹವಾಗಿ, ಅದು ದುರ್ಬಳಕೆಯಾಗುವ ಸಾಧ್ಯತೆಯಿದ್ದಲ್ಲಿ ಆಗ ಆ ಪೋಷಕರು ಏನು ಮಾಡಿಯಾರು? ಅವರಿಗೆ ಈ ಸಾಧನ ಬೇಕೆಂದು ಅನಿಸುವುದೇ?
ಅದಕ್ಕಿಂತ ಮುಖ್ಯವಾಗಿ, ಜನರು ತಾವು ಯಾವ ದತ್ತಾಂಶ ಅಥವಾ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಹಾಗೂ ಅದನ್ನು ಹಂಚಿಕೊಳ್ಳುವುದರಿಂದ ಆಗುವ ಪರಿಣಾಮಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಸರಕಾರದ ನಿಯಂತ್ರಣದ ಕ್ರಮಗಳು ಮತ್ತು ಈ ದತ್ತಾಂಶ ಸಂಗ್ರಹಿಸುವವರೂ, ಜನರಲ್ಲಿ ಅರಿವು ಮೂಡಿಸುವುದು ಮತ್ತು ಅವರ ಸಮ್ಮತಿಯ ಬಗ್ಗೆ ಗಮನ ಕೇಂದ್ರೀಕರಿಸಬೇಕಿದೆ. ಖಾಸಗಿತನದ ಹಕ್ಕು ಎಂಬುದು, ಒಬ್ಬ ಭಾರತೀಯ ನಾಗರಿಕಳಿ/ನಿಗೆ ಮೂಲಭೂತ ಹಕ್ಕಾಗಿದೆ, ಅದನ್ನು ನಾವು ಆಯ್ಕೆ ಮಾಡಲಿ ಬಿಡಲಿ, ಅದು ನಮ್ಮ ಮೂಲಭೂತ ಹಕ್ಕು ಎಂಬುದನ್ನು ಮರೆಯಬಾರದು.
ತಂತ್ರಜ್ಞಾನದ ಆಯಾಮದಲ್ಲಿ, ಇದು ಹಲವಾರು ಅವಕಾಶಗಳನ್ನು ತೆರೆದಿಡುತ್ತದೆ. ತಂತ್ರಜ್ಞಾನದ ಬೇರೆ ಬೇರೆ ಕ್ಷೇತ್ರಗಳಲ್ಲಿ ನಮಗಿರುವ ನೈಪುಣ್ಯತೆಯನ್ನು ಪರಿಗಣಿಸಿದಾಗ, ಭಾರತದ ಐಒಟಿ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆಯನ್ನು ನೀಡುವ ಸಾಮರ್ಥ್ಯ ನಮಗಿದೆ ಹಾಗೂ ವಿಶ್ವಾದ್ಯಂತವೂ ನಾವು ಇದರಲ್ಲಿ ಕೊಡುಗೆ ನೀಡಬಹುದಾಗಿದೆ.
ಎಲ್ಲಾ ತಂತ್ರಜ್ಞಾನಗಳಿಗೆ ಅನ್ವಯವಾಗುವಂತೆ, ಐಒಟಿಗೆ ಕೂಡ ಸಾಕಷ್ಟು ಪ್ರಯೋಜನಗಳಿವೆ ಹಾಗೂ ಅದೇ ಸಮಯದಲ್ಲಿ ಸವಾಲುಗಳೂ ಸಾಕಷ್ಟಿವೆ. ಎಐ ಅಂದರೆ ಕೃತಕ ಬುದ್ದಿಮತ್ತೆ ಮತ್ತು ಡೇಟಾ ಅನಾಲಿಟಿಕ್ಸ್ ತಂತ್ರಜ್ಞಾನಗಳ ಜೊತೆಗೂಡಿ, ಇದಕ್ಕೆ ಕೇವಲ ದತ್ತಾಂಶದ ಆಧಾರದ ಮೇಲೆಯೇ ಅಪಾರವಾದ ಜ್ಞಾನ ಪಡೆಯುವ ಹಾಗೂ ಅದೇ ಸಮಯದಲ್ಲಿ ಅತಿ ದೊಡ್ಡ ಮಟ್ಟದ ಹಾನಿಗಳನ್ನು ಆಹ್ವಾನಿಸಿಕೊಳ್ಳುವ ಸಾಮರ್ಥ್ಯವಿದೆ. ಮುಂದಿನ ಕೆಲವು ವರ್ಷಗಳಲ್ಲಿ ಇದು ಯಾವ ದಾರಿಗೆ ಹೊರಳಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು, ಇದನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಿಂತಿದೆ.
(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ವಿಜೇತಾ ರಾವ್
ಬೆಂಗಳೂರಿನ ನಿವಾಸಿ. ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿರುವ ವಿಜೇತಾ, ಸದ್ಯಕ್ಕೆ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?


