Homeಮುಖಪುಟಸಂಭಾಷಣೆಯ ಚಾಟಿ, ವಾಸ್ತವ ಮೆಲೋಡ್ರಾಮದ ಧಾಟಿ; ಕೆ.ವಿ.ರಾಜು ಗರಿಮೆ

ಸಂಭಾಷಣೆಯ ಚಾಟಿ, ವಾಸ್ತವ ಮೆಲೋಡ್ರಾಮದ ಧಾಟಿ; ಕೆ.ವಿ.ರಾಜು ಗರಿಮೆ

- Advertisement -
- Advertisement -

‘ನಾನು ಹುಟ್ಟಿದ್ದು ಸತ್ಯ ಸತ್ತು ಕೊಳೆತು ನಾರುತ್ತಿರೋ ಈ ಇಪ್ಪತ್ತನೇ ಶತಮಾನದಲ್ಲಿ… ಗಲ್ಲಿಗಲ್ಲಿಗಳಲ್ಲಿ ಸೂರ್ಯನ ಬೆಳಕಿಗೆ ಫಳಫಳನೇ ಹೊಳಿತಿರೋ ಚಾಕು, ಚೂರಿ, ಮಚ್ಚು, ಪಿಸ್ತೂಲುಗಳ ಮಧ್ಯೆ…’

‘ಧರ್ಮದ ಹೆಸರಲ್ಲಿ ನೀವಿಟ್ಟಿರೋ ಕುಂಕುಮ ನಿಮ್ಮದಲ್ವೋ! ನೀವಿಟ್ಟ ದಿನದಿಂದ ನಮಗೆ ಈ ಸೌಭಾಗ್ಯ ಸಿಗಲಿಲ್ಲ..’

‘ಉಚ್ಚಿ ಹುಯ್ಯೋ ಹುಡುಗರಾಂಗ ಮಾತಾಡಿದ್ರ ಕಚ್ಚಿ ಹರ್ದು ಚಲ್ಲಾಡ್ತಾನಾಂವ… ಅವುನ್ ತಲಿ ಜ್ವತ ಅವುನ್ ತಲಿಮಾರ ನಾಶ ಆಗ್ಬೇಕಾ…ಆಗ ಈ ಅರಮನಿ ಉಳಿತಾದ..!

‘ಸಮಾಜದ ಹಿತಕ್ಕೋಸ್ಕರನೇ ಕಾನೂನು ಸೃಷ್ಟಿ ಆಗಿರೋದು ಅಂದ್ಮೇಲೆ ಸಮಾಜಕ್ಕೆ ಸರಿ ಅನ್ಸಿದ್ದು ಕಾನೂನಿನ ದೃಷ್ಟೀಲಿ ಹ್ಯಾಗೆ ಸಾರ್ ತಪ್ಪಾಗುತ್ತೆ?’

90ರ ದಶಕದ ಆರಂಭದಲ್ಲಿ ಇಂತಹ ಸಿನಿಮಾ ಸಂಭಾಷಣೆಗಳ ಮೂಲಕ ಚಾಲ್ತಿಗೆ ಬಂದವರು ಕೆ.ವಿ.ರಾಜು. ತಮ್ಮ ಸಿನಿಮಾಗಳ ಮೂಲಶಕ್ತಿ ಪ್ರೇಕ್ಷಕರನ್ನು ಬಡಿದೆಬ್ಬಿಸುವ ಚಾಟಿ ಏಟಿನಂತಹ ಸಂಭಾಷಣೆಗಳಲ್ಲಿದೆ ಎಂಬುದನ್ನು ರಾಜು ನಂಬಿದಂತಿತ್ತು.

ಕೆ.ವಿ.ರಾಜು ಅವರಿಗೆ 2017ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ಘೋಷಿಸಿದಾಗ ಅದನ್ನು ನಿರಾಕರಿಸಿ ರಾಜು ಅವರು ಅಕಾಡೆಮಿಗೆ ಬರೆದ ಪತ್ರದಲ್ಲಿ ಒಂದು ಮಾತು ಹೀಗಿತ್ತು: ‘ನನ್ನ ಸಿನಿಮಾ ಪ್ರಯಾಣದ ಗುರಿ ಜನಮನರಂಜನೆಯೇ ಹೊರತು ಪ್ರಶಸ್ತಿಗಳಲ್ಲ. ಮನರಂಜಿಸಲು ಸಂಬಳ ಪಡೆದಿರುವುದರಿಂದ ಪ್ರಶಸ್ತಿಗೆ ಅರ್ಹನಲ್ಲ..’ (ಒಂದೆರಡು ತಿಂಗಳ ನಂತರ ಸರ್ಕಾರ ನೀಡಿದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಅವರು ಮರುಮಾತಿಲ್ಲದೆ ಸ್ವೀಕರಿಸಿದ್ದು ಅನೇಕರ ಅಚ್ಚರಿಗೆ ಕಾರಣವಾಗಿತ್ತು; ಅದು ಬೇರೆ ಮಾತು). ರಾಜು ತಮ್ಮ ಸಿನಿಮಾಗಳಿಗೆ ಆಯ್ದುಕೊಂಡ ಕತೆಗಳಿಗೂ ಈ ಮಾತುಗಳಿಗೂ ಸಂಬಂಧವಿದ್ದಂತಿದೆ.

ತಮ್ಮ ಸಹೋದರ ಕೆ.ವಿ.ಜಯರಾಂ ಗರಡಿಯಲ್ಲಿ ಸಿನಿಮಾ ಕಸುಬು ಕಲಿತ ರಾಜು, ಜಯರಾಂ ಅವರ ಸಿನಿಮಾಗಳ ದಾಂಪತ್ಯ, ಪ್ರೇಮಕಲಹ, ಸ್ತ್ರೀವಾದಿ ನೆಲೆಗಳ ಕಥನಗಳಿಗಿಂತ ಭಿನ್ನ ಹಾದಿಯನ್ನು ಆಯ್ದುಕೊಂಡರು. ಸಮಾಜದ ಅಸಮಾನತೆ, ಭ್ರಷ್ಟ ರಾಜಕಾರಣ, ಜನಸಾಮಾನ್ಯರ ಅಸಹಾಯಕತೆ-ಇಂತಹ ಸಾಮಾನ್ಯ ವಸ್ತುಗಳಿಗೆ ತಮ್ಮದೇ ವಿಭಿನ್ನ ಶೈಲಿಯ treatment ನೀಡಿ ಪ್ರೇಕ್ಷಕರ ಮನ ಗೆದ್ದವರು ರಾಜು.

‘ಸಂಗ್ರಾಮ’ದಂತಹ ಸಾಮಾನ್ಯ ರೀಮೇಕ್ ಮೂಲಕ ನಿರ್ದೇಶನಕ್ಕಿಳಿದ ರಾಜು, ಗುರುತಿಸಿಕೊಂಡಿದ್ದು ‘ಇಂದ್ರಜಿತ್’ ಚಿತ್ರದ ಮೂಲಕ. ಏಕತಾನತೆಯ ರೆಬೆಲ್ ಪಾತ್ರವಾಗಿದ್ದರೂ ಅಂಬರೀಶ್‌ ಅವರಿಗೆ ಬೇರೆ ಇಮೇಜ್ ಕೊಟ್ಟ, ಖಳನಾಯಕರಾಗಿ ಗುರುತಿಸಿಕೊಂಡಿದ್ದ ದೇವರಾಜ್ ಅವರಿಗೆ ವಿಶೇಷ ಪಾತ್ರ ನೀಡಿದ ‘ಇಂದ್ರಜಿತ್’ ಗೆದ್ದಿದ್ದೇ ಅದರ ಖಡಕ್ ಸಂಭಾಷಣೆಗಳ ಮೂಲಕ. ‘ನವಭಾರತ’, ‘ಕದನ’, ‘ಯುದ್ಧ’, ‘ಪೊಲೀಸ್ ಲಾಕಪ್’, ‘ಸುಂದರ ಕಾಂಡ’, ‘ಯುದ್ಧಕಾಂಡ’, ‘ಹುಲಿಯಾ’ ಚಿತ್ರಗಳ ಸಂಭಾಷಣೆಗಳನ್ನೂ ಇಲ್ಲಿ ಗಮನಿಸಬಹುದು.

ಅಂದಿನ ದಿನಗಳ ಕಮರ್ಷಿಯಲ್ ಸಿನಿಮಾ ಸಂಭಾಷಣೆಗಳ ಏಕತಾನತೆಯನ್ನು ಮುರಿದು, ಅವುಗಳಿಗೆ ಹೊಸ ಹೊಳಪು ಕೊಟ್ಟವರಲ್ಲಿ ರಾಜು ಪ್ರಮುಖರು. ಜನಪ್ರಿಯ ಸಿನಿಮಾಗಳಿಗೆ ಬೇಕಾದ ಬಿಗಿ ಚಿತ್ರಕಥೆ, ಕ್ಷಿಪ್ರ ನಿರೂಪಣೆ, ಚುರುಕು ಸಂಕಲನವನ್ನು ಸಮರ್ಥವಾಗಿ ದುಡಿಸಿಕೊಂಡ ರಾಜು, extreme closeup shotಗಳನ್ನು , moving shotಗಳನ್ನು ಪಾತ್ರಗಳ ಸಂಭಾಷಣೆಯ ಸಂದರ್ಭಗಳಲ್ಲಿ ಆಕರ್ಷಕವಾಗಿ ಅಳವಡಿಸಿದರು. ಅವರೊಂದು ರೀತಿಯಲ್ಲಿ extreme closeup shotಗಳ ಕಡುಮೋಹಿ. ರಾಜು ಅವರ ಈ ಜನಪ್ರಿಯತೆ ಅವರಿಗೆ ಹಿಂದಿ ಚಿತ್ರರಂಗದಲ್ಲಿಯೂ ಅವಕಾಶ ಕಲ್ಪಿಸಿತು. ಮೇರುನಟ ಅಮಿತಾಭ್ ನಾಯಕನಟರಾಗಿದ್ದ ‘ಇಂದ್ರಜಿತ್’ ಚಿತ್ರವನ್ನು ರಾಜು ನಿರ್ದೇಶಿಸಿದರು(ಇದು ಅವರದೇ ನಿರ್ದೇಶನದ ‘ಬಂಧಮುಕ್ತ’ ಸಿನಿಮಾದ ರೀಮೇಕ್).

‘ಸಂಗ್ರಾಮ’, ‘ಕದನ’, ‘ಯುದ್ಧ’, ‘ಯುದ್ಧಕಾಂಡ’, ‘ನವಭಾರತ’, ‘ರಾಷ್ಟ್ರಗೀತೆ’-ಈ ಶೀರ್ಷಿಕೆಗಳನ್ನು ಗಮನಿಸಿದರೆ ರಾಜು ಅವರ ಕಥಾವಸ್ತುಗಳ ಒಲವು ಅರ್ಥವಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ಭ್ರಷ್ಟ ವ್ಯವಸ್ಥೆಯನ್ನು ಕಟು ವಾಸ್ತವ, ಸಂಘರ್ಷಗಳ ಮೆಲೋಡ್ರಾಮದ ಮೂಲಕ ತೋರಿಸಿದ ರಾಜು, ಅದಕ್ಕಾಗಿ ಜಡಸಮಾಜವನ್ನು ಎಚ್ಚರಿಸುವಂತಹ ಚುಚ್ಚುಮಾತುಗಳನ್ನು ಬಳಸಿದರು. ಕೆಲವೊಮ್ಮೆ ಇದು ‘ದೇಶಕ್ಕೆ ಮಕ್ಕಳು ಬೇಕು; ಆದರೆ ನಿಮ್ಮಂಥ ಸೂಳೆಮಕ್ಕಳಲ್ಲ!’ ಎಂಬಂತಹ ಅಗ್ಗದ ಮಟ್ಟಕ್ಕೂ ಇಳಿದದ್ದಿದೆ. ಆದರೆ ‘ಚಕ್ರವ್ಯೂಹ’, ‘ಗಜೇಂದ್ರ’ ಮಾದರಿಯ activism ಅನ್ನು ರಾಜು ಅವರ ಸಿನಿಮಾಗಳು ಬೇರೊಂದು ರೀತಿಯಲ್ಲಿ ವಿಸ್ತರಿಸಿದವು. ಉದಾಹರಣೆಗೆ ‘ರಾಷ್ಟ್ರಗೀತೆ’ ಚಿತ್ರದ ಆರಂಭದಲ್ಲಿ ರಾಜಕಾರಣಿಯೊಬ್ಬ ಹಾರಿಸಬೇಕಿದ್ದ ರಾಷ್ಟ್ರಧ್ವಜವನ್ನು ‘ಭಾರತಿ’ ಎಂಬ ಹೆಸರಿನ ಶಿಕ್ಷಕಿಯೊಬ್ಬಳು ಅಪಹರಿಸಿ ಸುಟ್ಟುಹಾಕಲು ಹೊರಡುವ ದೃಶ್ಯವೊಂದಿದೆ. ಸ್ವಾತಂತ್ರ್ಯ, ದೇಶಪ್ರೇಮಗಳನ್ನು ರಾಜು ಸಿನಿಮಾಗಳು ಕಟುವಾಸ್ತವ, ವ್ಯಂಗ್ಯದೊಂದಿಗೆ ಮುಖಾಮುಖಿಯಾಗುತ್ತವೆ; ಅವರ ಯಾವೊಂದು ಸಿನಿಮಾದಲ್ಲೂ ಅನವಶ್ಯಕವಾದ ಹಾಸ್ಯಪಾತ್ರಗಳು ಒಂದೂ ಇಲ್ಲ ಎಂಬುದನ್ನು ಗಮನಿಸಬಹುದು.

ತಮ್ಮ ಈ ಶೈಲಿಗೆ ಒಗ್ಗದ ‘ಬೊಂಬಾಟ್ ಹುಡ್ಗ’ ಎಂಬ ಕೆಟ್ಟ ಚಿತ್ರಕ್ಕೆ ಕೈ ಹಾಕಿ ರಾಜು ಸೋತಿದ್ದಾರೆ. ಆದರೆ ರೀಮೇಕ್ ಸಿನಿಮಾಗಳನ್ನೂ ಮೆಚ್ಚುವಂತೆ ರಾಜು ಮರುನಿರೂಪಿಸಿ ‘ಯುದ್ಧಕಾಂಡ’ (ಹಿಂದಿಯ ‘ಮೇರಿ ಜಂಗ್’), ‘ಬೆಳ್ಳಿ ಮೋಡಗಳು’ (ತೆಲುಗಿನ ‘ಸೀತರಾಮಯ್ಯಗಾರಿ ಮನವರಾಲು’) ಗೆದ್ದಿದ್ದಾರೆ.

1996ರಲ್ಲಿ ತೆರೆಕಂಡ ‘ಹುಲಿಯಾ’ ಕೆ.ವಿ.ರಾಜು ಅವರ ಶೈಲಿಯನ್ನು ಹೆಚ್ಚು ತಿದ್ದಿದ ಚಿತ್ರ. ಶೋಷಣೆ, ಕ್ರೌರ್ಯ, ಭ್ರಷ್ಟತೆಯ ತಮ್ಮ ಎಂದಿನ ವಸ್ತುವಿಗೆ ಹೊಸ ಸ್ಪರ್ಶ ಕೊಟ್ಟ ರಾಜು ತಮ್ಮೆಲ್ಲ ಸೃಜನಶೀಲತೆಯನ್ನು ‘ಹುಲಿಯಾ’ಗಾಗಿ ಧಾರೆ ಎರೆದರು. ಬರಗಾಲದಲ್ಲಿ ನಲುಗುವ ಹಳ್ಳಿಯೊಂದರ ಹಾಹಾಕಾರ, ಪಾಳೇಗಾರಿ ಶಕ್ತಿಗಳ ಧೂರ್ತತನ, ಕ್ರೂರ ವ್ಯವಸ್ಥೆಯ ಪಿತೂರಿಯಿಂದಾಗಿ ‘ಬಲವಂತದ ಗುಳೆ’ ಹೊರಟುಬಂದು ನಾಶವಾಗುವ ಅಮಾಯಕರ ದುರಂತವನ್ನು ‘ಹುಲಿಯಾ’ ಸಶಕ್ತವಾಗಿ ಚಿತ್ರಿಸುತ್ತದೆ. ದೇವರಾಜ್ ಅವರ ನಟನಾಪ್ರತಿಭೆಯನ್ನು ತೆರೆದಿಟ್ಟ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿತು.

ತಮ್ಮ ಜಾಯಮಾನದ್ದೇ ಅಲ್ಲದ ವಸ್ತುವಿನ ‘ಓ ಗಂಡಸರೇ ನೀವೆಷ್ಟು ಒಳ್ಳೆಯವರು?’ ಸಿನಿಮಾವನ್ನೂ ಕೂಡ ರಾಜು ಪರಿಣಾಮಕಾರಿಯಾಗಿ ನಿಭಾಯಿಸಿದರೂ ಸಿನಿಮಾ ಯಶಸ್ಸು ಕಾಣಲಿಲ್ಲ. ಸಂಗೀತ-ಹಾಡುಗಳಿಂದಾಗಿ ಜನಪ್ರಿಯವಾದರೂ ‘ಬೆಳ್ಳಿ ಕಾಲುಂಗುರ’ ಪೇಲವ ಕತೆಯ ಮೂಲಕ ಸೋತಿತು. ಕುತೂಹಲಕಾರಿ ಹಂದರವಿದ್ದರೂ ‘ನಂ.1’, ‘ನಿಜ’ ಚಿತ್ರಗಳು ಹೆಚ್ಚೇನೂ ಗೆಲುವು ಕಾಣಲಿಲ್ಲ. ಮಲಯಾಳಂ, ತೆಲುಗು, ಹಿಂದಿ ಭಾಷೆಗಳನ್ನು ಬಳಸಿ ಕನ್ನಡಕ್ಕೆ ಬಂದ ‘ಪಾಂಡವರು'(2006) ಎಂಬ ಸಿನಿಮಾ ರಾಜು ಅವರ ದಣಿವನ್ನು ತೋರಿಸುತ್ತದೆ. ಕೆಲವಾದರೂ ಒಳ್ಳೆಯ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ಕೆ.ವಿ.ರಾಜು ಅವರ ಕ್ರಿಯಾಶೀಲತೆ ಇತ್ತೀಚಿನ ದಿನಗಳಲ್ಲಿ ಅವರ ಬಳಿಯೇ ಸಹಾಯಕರಾಗಿದ್ದವರ ಕಳಪೆ ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದಕ್ಕೆ ವ್ಯಯವಾಗಿದ್ದುಂಟು.

(‘ತೆರೆಯ ಹಿಂದೆ ಸರಿದರೆ ಸೃಜನಶೀಲರು?’ ಅಂಕಣ ಸರಣಿಯಲ್ಲಿ ಕಥೆಗಾರ ಮಂಜುನಾಥ್ ಲತಾ ಅವರು ಹಿಂದೊಮ್ಮೆ ಬರೆದಿದ್ದ ಲೇಖನದ ಪರಿಷ್ಕೃತ ರೂಪ)

  • ಮಂಜುನಾಥ್ ಲತಾ
’ಮಂಜುನಾಥ್ ಲತಾ’ ಅವರು ಹಿರಿಯ ಪತ್ರಕರ್ತರು. ತೆಂಕಲಕೇರಿ, ಕತೆ ಎಂಬ ಇರಿವ ಅಲಗು (ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ (ಕವನ ಸಂಕಲನಗಳು), ಪಲ್ಲಂಗ (ಕಾದಂಬರಿ), ಮಾತಿನ ಓದು (ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕುಬಾರಿ ಬಹುಮಾನ ಗಳಿಸಿವೆ.

ಇದನ್ನೂ ಓದಿರಿ: ಚಲನಚಿತ್ರ ನಿರ್ದೇಶಕ ಕೆ.ವಿ.ರಾಜು ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...