ರಾಜ್ಯದಲ್ಲಿ ಇತ್ತಿಚೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯನ್ನು ಹಂಚಿಕೊಂಡಿರುವ ಅವರು, ಇದು ತೀವ್ರ ಆಘಾತ ನೀಡಿದೆ ಎಂದಿದ್ದಾರೆ.
“ಪತ್ರಿಕೆಯಲ್ಲಿ ಇಂದು ಪ್ರಕಟವಾಗಿರುವ ಈ ವರದಿ ಅತ್ಯಂತ ಕಳವಳಕಾರಿ. ಕರ್ನಾಟಕವೂ ಸೇರಿ ದೇಶಾದ್ಯಂತ 12,500 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಓದಿ ನನಗೆ ತೀವ್ರ ಆಘಾತ ಉಂಟಾಗಿದೆ” ಎಂದಿದ್ದಾರೆ.
“ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಕೆಲ ಶಿಕ್ಷಣಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶಕ್ಕೆ ಶೋಭೆ ತರುವ ವಿಚಾರವಲ್ಲ. ಕೋವಿಡ್ ಮತ್ತಿತರೆ ಸಮಸ್ಯೆಗಳಿಂದ ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಮೃತ್ಯುಪಾಶಕ್ಕೆ ತುತ್ತಾಗಿರುವುದು ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಹದಿಹರೆಯದವರು ವಿದ್ಯಾರ್ಥಿ ID ಬಳಸಿಕೊಂಡು ಕೊರೊನಾ ಲಸಿಕೆಗೆ ನೋಂದಾಯಿಸಬಹುದು: ಸರ್ಕಾರ
“ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟ ವಿದ್ಯಾರ್ಥಿಗಳು ಸಕಾಲಕ್ಕೆ ನೆರವು ಸಿಗದೇ ನೊಂದು-ಬೆಂದು ಜೀವವನ್ನು ಕೊನೆ ಮಾಡಿಕೊಳ್ಳುವ ಅಪಾಯಕಾರಿ ನಿರ್ಧಾರಕ್ಕೆ ಬರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ವಿದ್ಯಾರ್ಥಿಗಳ ನೆರವಿಗೆ ತಕ್ಷಣ ಧಾವಿಸಬೇಕು” ಎಂದು ಒತ್ತಾಯಿಸಿದ್ದಾರೆ.
’ಒಂದೆಡೆ ಭಾರತವು ವಿಶ್ವಗುರುವಾಗಬೇಕು ಎನ್ನುವವರು, ಇನ್ನೊಂದೆಡೆ ಉನ್ನತ ಶಿಕ್ಷಣವನ್ನು ಉಳ್ಳವರ ಪಾಲು ಮಾಡುತ್ತಿದ್ದಾರೆ. ಇವತ್ತಿನ ವ್ಯವಸ್ಥೆ ಮತ್ತು ಸರಕಾರಗಳ ನೀತಿಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿವೆ. ಉನ್ನತ ಶಿಕ್ಷಣ ಹಣವಂತರ ಕಪಿಮುಷ್ಟಿಯಲ್ಲಿ ಸಿಲುಕಿದ್ದರೆ, ಪೋಷಕರು ಮತ್ತು ವಿದ್ಯಾರ್ಥಿಗಳು ಅಂತಹ ಶಿಕ್ಷಣ ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ’ ಎಂದು ಶಿಕ್ಷಣ ಕ್ಷೇತ್ರದ ಧನದಾಹದ ಬಗ್ಗೆ ಮಾತನಾಡಿದ್ದಾರೆ.
’ಸಮಸ್ಯೆಗಳಿವೆ ಎಂದು ಜೀವ ತೆಗೆದುಕೊಳ್ಳುವುದು ಬೇಡ. ಅಂತ ತಪ್ಪು ನಿರ್ಧಾರಕ್ಕೆ ಮುನ್ನ ನಿಮಗೆ ಜನ್ಮ ಕೊಟ್ಟವರನ್ನು ಮರೆಯಬಾರದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಇಂಥ ದುಡುಕಿನ ನಿರ್ಧಾರಕ್ಕೆ ಬರಬಾರದ” ಎಂದು ಎಚ್.ಡಿ.ಕುಮಾರಸ್ವಾಮಿ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.


