Homeಕರ್ನಾಟಕಉಡುಪಿ: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ದೌರ್ಜನ್ಯ ಎಸಗಿದ ಪೊಲೀಸರು

ಉಡುಪಿ: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ದೌರ್ಜನ್ಯ ಎಸಗಿದ ಪೊಲೀಸರು

- Advertisement -
- Advertisement -

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಬಾರಿಕೆರೆಯ ಕೊರಗ ಕಾಲನಿಯಲ್ಲಿ ಮಹಂದಿ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ನುಗ್ಗಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಶಾಂತಿ ಭಂಗ ಉಂಟಾದ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೊರಗ ಕಾಲನಿಯಲ್ಲಿ ರಾಜೇಶ್‌ ಎಂಬವರ ಮದುವೆಯ ಪ್ರಯುಕ್ತ ಸೋಮವಾರ ರಾತ್ರಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೀಗಾಗಿ ಅಲ್ಲಿ ಡಿಜೆ ಅಳವಡಿಸಲಾಗಿದ್ದು, ರಾತ್ರಿಯವರೆಗೂ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಆಗಮಿಸಿದ ಪೊಲೀಸರು ಮಹಿಳೆ, ಮಕ್ಕಳು ಎಂದು ನೋಡದೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ದೂರಲಾಗಿದೆ. ಜೊತೆಗೆ ಮದುಮಗನ ಮೇಲೆ ಕೂಡಾ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಿಕರು ದೂರಿದ್ದು, ಅವರ ಕೈಗೆ ಗಾಯವಾಗಿದೆ.

ಇದನ್ನೂ ಓದಿ:ಆತ್ಮವನ್ನೇ ಕಳೆದುಕೊಂಡ ವರ್ತಮಾನ ಮತ್ತು ಆದಿವಾಸಿಗಳು

“ಮೆಹಂದಿ ಕಾರ್ಯಕ್ರಮ ಸ್ಥಳೀಯರಿಗೆ ಕಿರಿಕಿರಿ ಉಂಟಾದ್ದರಿಂದ ಕೋಟ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕೋಟ ಠಾಣಾಧಿಕಾರಿ ಸಂತೋಷ್ ಬಿಪಿ ನೇತೃತ್ವ ತಂಡವು ಸ್ಥಳಕ್ಕೆ ತೆರಳಿ ಡಿಜೆ ಬಂದ್ ಮಾಡುವಂತೆ ತಿಳಿಸಿದ್ದರು ಎಂದು ಹೇಳಲಾಗುತ್ತಿದ್ದು, ಇದರಿಂದ ಕೋಪಗೊಂಡ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ‘ಎಲ್ಲಾ ಕಡೆ ಮೆಹಂದಿ ಕಾರ್ಯಕ್ರಮ ನಡೆಯುತ್ತದೆ, ಅವರಿಗೆ ಏನು ಹೇಳಲ್ಲ ಆದ್ರೆ ನಮ್ಮ ಸಮುದಾಕ್ಕೆ ಏಕೆ ಅಡ್ಡಿ ಪಡಿಸುತ್ತೀರಿ? ನಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯವೆ’ ಎಂದು ಪೊಲೀಸರೊಂದಿಗೆ ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ” ಎಂದು ವಾರ್ತಾಭಾರತಿ ಪತ್ರಿಕೆ ವರದಿ ಮಾಡಿದೆ.

“ಇದರ ನಂತರ ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಚಾರ್ಜ್ ಮಾಡಿದ್ದು, ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿರುವುದಾಗಿ ದೂರಲಾಗಿದೆ. ಘಟನೆಯನ್ನು ಖಂಡಿಸಿದ ಕೊರಗ ಸಮುದಾಯದವರು ರಾತ್ರಿ ಕೋಟ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ” ಎಂದು ಪತ್ರಿಕೆ ಉಲ್ಲೇಖಿಸಿದೆ.

ಇದನ್ನೂ ಓದಿ:ಕೊರಗರ ಹಕ್ಕೊತ್ತಾಯಗಳಿಗಾಗಿ ರಾಜಿರಹಿತವಾಗಿ ದುಡಿಯುತ್ತಿರುವ ಹೋರಾಟಗಾರ್ತಿ ಸುಶೀಲ ನಾಡ

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರು ಬೊಬ್ಬೆ ಹೊಡೆಯುತ್ತಾ ಓಡಾಡುತ್ತಿರುವುದು ಅದರಲ್ಲಿ ಕಂಡು ಬಂದಿದೆ. ಜೊತೆಗೆ ಘಟನೆಯನ್ನು ವಿಡಿಯೊ ಮಾಡುತ್ತಿದ್ದ ವ್ಯಕ್ತಿಯನ್ನೂ ಪೊಲೀಸರು ಬೆನ್ನಟ್ಟಿದ್ದಾರೆ. ಮಹಿಳೆಯರು ಪೊಲೀಸರೊಂದಿಗೆ ಗೊಗೆರೆಯುತ್ತಿರುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ.

ಮತ್ತೊಂದು ವಿಡಿಯೊದಲ್ಲಿ ಮಹಿಳೆಯೊಬ್ಬರ ತಲೆ ಏಟಾಗಿರುವುದು ತೋರಿಸಿದ್ದಾರೆ. ಜೊತೆಗೆ ಮಹಿಳೆಯು, ನಾವು ಪೊಲೀಸರ ಕಾಲಿಗೆ ಬಿದ್ದರೂ ಅವರು ನಮ್ಮ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಲಿಲ್ಲ ಎಂದು ಆರೋಪಿಸಿದ್ದಾರೆ. ಪೊಲೀಸರು ಬರುವ ಹೊತ್ತಿಗೆ ಹತ್ತುವರೆ ಗಂಟೆ ಕೂಡಾ ಆಗಿರಲಿಲ್ಲ ಎಂದು ಮಹಿಳೆ ವಿಡಿಯೊದಲ್ಲಿ ಪ್ರತಿಪಾದಿಸಿದ್ದಾರೆ.

“ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕೊರಗ ಸಮುದಾಯದವರಿಗೆ ನ್ಯಾಯ ಒದಗಿಸುತ್ತೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈ ಗೊಳ್ಳುತ್ತೇನೆ” ಎಂದು ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹೇಳಿದ್ದಾರೆ ಎಂದು ವಾರ್ತಾಭಾರತಿ ಬರೆದಿದೆ.

ಇದನ್ನೂ ಓದಿ:ಕೊರೋನವನ್ನಾದರೂ ಓಡಿಸಬಹುದು, ಈ ಅಸ್ಪೃಶ್ಯತೆಯನ್ನು ಓಡಿಸೋಕಾಗಲ್ಲ: ಶಕುಂತಲಾ ಕೊರಗ ನೇಜಾರ್

“ಕೋಟ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಹೆಂಗಸು, ಮಕ್ಕಳು ನೋಡದೆ ಏಕಾಏಕಿ ಲಾಠಿ ಚಾರ್ಜ್ ಮಾಡಿ ಹಲ್ಲೆ ಮಾಡಿದ್ದಾರೆ. ಇದರಿಂದ ಹಲವರಿಗೆ ಗಾಯಗಳಾಗಿದೆ. ಈ ಹಲ್ಲೆಯನ್ನು ದಲಿತ ಸಂಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ. ಅಲ್ಲದೆ ಠಾಣಾಧಿಕಾರಿಯನ್ನು ಅಮಾನತುಗೊಳಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದಲಿತ ಸಂಘರ್ಷದ ಮುಖಂಡ ಶಾಮ್ ಸುಂದರ್ ತೆಕ್ಕಟ್ಟೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, “ಕರಾವಳಿ ಜಿಲ್ಲೆಗಳಲ್ಲಿ ಮದುವೆ, ಮೆಹಂದಿಗಳಲ್ಲಿ ಡಿ ಜೆ ಕುಣಿತ ಅಬ್ಬರದಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ, ಕೊರಗ ಕುಟುಂಬವೊಂದು ಮೆಹಂದಿಗೆ ಡಿ ಜೆ ಹಾಕಿಸಿದಾಗ ದೂರೂ ಹೋಗುತ್ತದೆ, ಪೊಲೀಸರು ಮದುವೆ ಮನೆಗೆ ನುಗ್ಗಿ ಲಾಠಿ ಚಾರ್ಜೂ ಮಾಡುತ್ತಾರೆ. ಬಡವರು, ದಲಿತರು ಅಂದರೆ ಎಷ್ಟೊಂದು ತಾತ್ಸಾರ !. ಈ ಪೊಲೀಸರನ್ನು ತಕ್ಷಣ ಅಟ್ರಾಸಿಟಿ ಅಡಿ ಮೊಕದ್ದಮೆ ಹೂಡಿ ಬಂಧಿಸಬೇಕು” ಎಂದು ಹೇಳಿದ್ದಾರೆ.

“ಮೆಹಂದಿ ಕಾರ್ಯಕ್ರಮಕ್ಕೆ ನಾವು ಅಡ್ಡಿ ಪಡಿಸಿಲ್ಲ. ಡಿಜೆ ಶಬ್ದದಿಂದ ತೊಂದರೆ ಆಗುತ್ತಿದೆ ಎಂದು ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಡಿಜೆಯ ಸೌಂಡ್ ಕಡಿಮೆ ಮಾಡಲು ಸೂಚಿಸಿದ್ದೇವೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಮಾಡದಿದ್ದಾಗ ನಾನು ಸಿಬ್ಬಂದಿಗಳೊಂದಿಗೆ ತೆರಳಿ ಡಿಜೆ ಬಂದ್ ಮಾಡಲು ವಿನಂತಿಸಿದ್ದೆ. ಅದಕ್ಕೆ ಕೆಲವರು ಉಡಾಫೆ ಉತ್ತರ ನೀಡಿ, ‘ಬಂದ್ ಮಾಡಲ್ಲ ಏನು ಬೇಕಾದ್ರು ಮಾಡಿಕೊಳ್ಳಿ’ ಎಂದು ಹೇಳಿದರು. ಅದಕ್ಕೆ ಅವರನ್ನು ವಶಕ್ಕೆ ಪಡೆಯುವಾಗ ಜನರು ತಲ್ಲಾಟ ಮಾಡಿದ್ದಾರೆ. ಅದು ಬಿಟ್ಟು ಯಾವುದೇ ಪೊಲೀಸ್ ದೌರ್ಜನ್ಯ ನಡೆದಿಲ್ಲ” ಎಂದು ಕೊರಗ ಕಾಲನಿ ನಿವಾಸಿಗಳ ಅರೊಪವನ್ನು ಅಲ್ಲಗೆಳೆದಿದ್ದಾರೆ.

ಇದನ್ನೂ ಓದಿ:ಅಂಚಿಗೆ ತಳ್ಳಲ್ಪಟ್ಟ ತುಳುನಾಡಿನ ನಿಜ ವಾರಸುದಾರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...