Homeಅಂಕಣಗಳುಎಲೆಮರೆಯಿಂದಅಂಚಿಗೆ ತಳ್ಳಲ್ಪಟ್ಟ ತುಳುನಾಡಿನ ನಿಜ ವಾರಸುದಾರರು

ಅಂಚಿಗೆ ತಳ್ಳಲ್ಪಟ್ಟ ತುಳುನಾಡಿನ ನಿಜ ವಾರಸುದಾರರು

ಈಗಷ್ಟೇ ಅತ್ಯಂತ ತೆಳುವಾದ ಪ್ರಮಾಣದಲ್ಲಿ ಕೊರಗ ಸಮುದಾಯವು ಶಿಕ್ಷಣದತ್ತ ಒಲವು ತೋರುತ್ತಿದೆ. ನಗರ ಪ್ರದೇಶದಲ್ಲಿರುವ ಕೊರಗರು ಪೌರ ಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ.

- Advertisement -
- Advertisement -

ಮೊನ್ನೆ ಬುಟ್ಟಿ ಮಾರುವವನಿಂದ ಬುಟ್ಟಿ ಖರೀದಿಸಿದ್ದ ಅಮ್ಮ ನಾನು ತವರಿಗೆ ಹೋಗಿದ್ದಾಗ ಅದನ್ನು ನನಗೆ ತಂದು ತೋರಿಸಿದಳು. ಕೊರಗರು ಹೆಣೆದು ಕೊಡುತ್ತಿದ್ದ ಬುಟ್ಟಿಗೇನೂ ಇದು ಬರಲ್ಲ ನೋಡು, ಅವರ ಬುಟ್ಟಿಯಂತೆ ಗಟ್ಟಿ ಆಯಸ್ಸೂ ಇದಕ್ಕಿಲ್ಲ ಎಂದು ಅದರ ಹಿಂಭಾಗವನ್ನೊಮ್ಮೆ, ಮುಂಭಾಗವನ್ನೊಮ್ಮೆ ನೆಲಕ್ಕೆ ಮೆಲ್ಲನೆ ಬಡಿಯುತ್ತಾ ಹೇಳಿದಳು. ಇಷ್ಟು ಕೊಟ್ಟೆ ಹಾಗೆ ಹೀಗೆ ಎಂದೆಲ್ಲಾ ಅಮ್ಮನ ಮಾತು ಎಲ್ಲೋ ತಲುಪಿತ್ತು. ಆದರೆ ನನ್ನ ತಲೆಯೊಳಗೆ ಹತ್ತಿ ಕೂತದ್ದು ಅವಳಂದ ‘ಕೊರಗರ ಬುಟ್ಟಿ’ ಮಾತ್ರ. ನಾನು ತುಂಬಾ ಚಿಕ್ಕವಳಿದ್ದಾಗ ನೋಡಿದ, ನೆನಪಿನಂಚಿನಲ್ಲಿ ನಿಂತಿರುವ ಮಸುಕು ಮಸುಕಾದ ಕೊರಗರನ್ನು ಬಲವಂತದಿಂದ ಮುನ್ನೆಲೆಗೆ ತಂದು ನಿಲ್ಲಿಸಿತು. ನಮ್ಮೂರನ್ನು ಸುತ್ತುವರಿದಿರುವ ಕಲೆಂಜಿಮಲೆ ಕಾಡಿನ ಅಂಚಿನಲ್ಲಿ ವಾಸಿಸುತ್ತಿದ್ದ ಕೊರಗ ಕುಟುಂಬವೊಂದಿತ್ತು. ಯಾರೊಂದಿಗೂ ಹೆಚ್ಚಿನ ಒಡನಾಟವಿಟ್ಟುಕೊಳ್ಳದೆ ತಾವಾಯಿತು ತಮ್ಮ ಪಾಡಾಯಿತು ಎಂದು ಬುಟ್ಟಿ ಹೆಣೆಯುವ ಕಾಯಕದಲ್ಲಿ ಅವರು ತೊಡಗಿಸಿಕೊಂಡಿದ್ದರು. ಹೊತ್ತು ಮೂಡುತ್ತಲೇ ಅದೇ ಕಾಡೊಳಗಿಂದ ಬುಟ್ಟಿ ಹೆಣೆಯಲು ಬೇಕಾದ ಕಾಡ ಬಳ್ಳಿಯನ್ನು ಕಡಿದು ತಂದು, ಆ ಕಾಡಿಗೇ ತಾಗಿಕೊಂಡಿರುವ ಹಾಗೂ ಜನಸಂಚಾರವಿರುವ ವಿಶಾಲ ಮೈದಾನದಂತಿರುವ ಜಾಗದಲ್ಲಿ ಕುಂಟು ನೇರಳೆಯ ಮರದಡಿಯಲ್ಲಿ ಹರಡಿ ಅಲ್ಲೇ ಕುಳಿತು ಬುಟ್ಟಿ ಹೆಣೆಯುತ್ತಿದ್ದರು.

ಅರಣ್ಯವನ್ನೇ ಆಶ್ರಯಿಸಿರುತ್ತಿದ್ದ ಅವರು ಜೀವನೋಪಾಯಕ್ಕಾಗಿ ಕಾಡ ಬಳ್ಳಿಯೊಂದನ್ನು ಕಡಿಯುವುದು ಬಿಟ್ಟರೆ ಯಾವ ಮರಕ್ಕೂ ಹಾನಿಯುಂಟು ಮಾಡುತ್ತಿರಲಿಲ್ಲ. ಒಂದರ್ಥದಲ್ಲಿ ಇವರೇ ನಿಜವಾದ ಅರಣ್ಯ ರಕ್ಷಕರು. ಹಕ್ಕಿಗಳು ಗೂಡು ಸೇರಲು ಹಾತೊರೆಯುವ ಹೊತ್ತಿಗಾಗಲೇ ತಮ್ಮ ಸಿದ್ಧ ಬುಟ್ಟಿಗಳನ್ನು ಹೊತ್ತು ಗುಡಿಸಲ ಕಡೆ ಹೆಜ್ಜೆ ಹಾಕುತ್ತಿದ್ದರು. ಕೆಲವೊಮ್ಮೆ ಬುಟ್ಟಿಗಳು ದಾರಿಹೋಕರಿಂದ ಖರೀದಿಸಲ್ಪಡುತ್ತಿದ್ದವು. ಇಲ್ಲವಾದರೆ ಮನೆಮನೆಗೆ ತೆರಳಿ ಮಾರಾಟ ಮಾಡುತ್ತಿದ್ದರು. ಕೊಯ್ಲಿಗೆ ಬಂದಾಗ ತೋಟದಿಂದ ಅಡಿಕೆ, ತೆಂಗಿನಕಾಯಿ ಹೊತ್ತು ತರುವ ಬುಟ್ಟಿ, ಹಟ್ಟಿಯಿಂದ ಗೊಬ್ಬರವನ್ನು ತೋಟಕ್ಕೆ ಸಾಗಿಸಲು ಬಳಸುವ ಬುಟ್ಟಿ, ಕುಡ್ಪು (ಅನ್ನ ಬಸಿಯಲು ಬಳಸುವ ಸಾಧನ) ಇತ್ಯಾದಿಗಳೆಲ್ಲವೂ ನಮ್ಮ ಮನೆ ಸೇರುತ್ತಿದ್ದುದು ಕೊರಗರಿಂದಲೇ. ಬುಟ್ಟಿ ಹೊತ್ತು ತರುವ ಕೊರಗ ಹೆಂಗಸು ನನ್ನಮ್ಮನನ್ನು ಕರೆದು “ಬ್ಯಾರ್ದಿ… ಕುರುವೆ ಬೋಡಾ” ಎನ್ನುತ್ತಾ ತಂದಿರುವ ಬುಟ್ಟಿಗಳನ್ನೆಲ್ಲಾ ಅಂಗಳದಲ್ಲಿರಿಸುತ್ತಿದ್ದಳು.

ವಿಪರೀತ ಕುಡಿತ ಕೊರಗ ಸಮುದಾಯದ ದೌರ್ಬಲ್ಯವೆನ್ನಬಹುದು. ಇದರ ಲಾಭ ಪಡೆದುಕೊಳ್ಳುತ್ತಿದ್ದವರು ಹಲವರು. ಊರ ದಲ್ಲಾಳಿಗಳು ಮಾರಾಟವಾಗದೇ ಉಳಿದ ಬುಟ್ಟಿಗಳನ್ನು ಅತೀ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಿಟ್ಟಿಸುತ್ತಿದ್ದರು. ಇತ್ತ ಕೊರಗರು ತಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಂಡು ಮಾರಿ ಮತ್ತೇರಿಸಿಕೊಳ್ಳುತ್ತಿದ್ದರು. ಜೇನು ತೆಗೆಯುವುದರಲ್ಲಿ ಇವರದು ಎತ್ತಿದ ಕೈ.
ಶುದ್ಧ ಜೇನು ತುಪ್ಪ ಸೇರಿದಂತೆ ಇತರ ಕಾಡ ಉತ್ಪನ್ನಗಳನ್ನು ಇದೇ ರೀತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಒಟ್ಟಿನಲ್ಲಿ ಅವರ ಮುಗ್ಧತೆ, ವ್ಯಾವಹಾರಿಕ ಜ್ಞಾನದ ಕೊರತೆ, ಕುಡಿತ ಇವೆಲ್ಲವನ್ನೂ ದುರ್ಬಳಕೆ ಮಾಡಿದವರೇ ಹೆಚ್ಚು.

ಕೊರಗರು ಸ್ವಾಭಿಮಾನಿಗಳು. ಯಾವತ್ತೂ ಭಿಕ್ಷಾಟನೆಗೆ ಇಳಿದವರೇ ಅಲ್ಲ. ಆದರೆ ದಸರಾ ಸಂದರ್ಭದಲ್ಲಿ ಮೈ ತುಂಬಾ ಕಪ್ಪು ಮಸಿ ಬಳಿದು ಕೊರಗರ ವೇಷವೆಂದು ಹೇಳುತ್ತಾ ಭಿಕ್ಷಾಟನೆ ನಡೆಸಿ ಕೊರಗ ಸಮುದಾಯವನ್ನು ಅವಮಾನಿಸಿದವರಿಗೇನೂ ಕಡಿಮೆಯಿಲ್ಲ. (ಸರಕಾರವು ಕೊರಗ ವೇಷ ಹಾಕುವುದನ್ನು ನಿಷೇಧಿಸಿದೆ).
ಕೊರಗರದು ತಲೆತಲಾಂತರಗಳಿಂದ ಅರಣ್ಯವಾಸಿ ಸಮುದಾಯ. ಅವರಿಗೆ ಹುಭಾಷಿಕ ಎಂಬ ಹೆಸರಿನ ಒಬ್ಬ ರಾಜನೂ ಇದ್ದ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಗಳ ಅರ್ಥಾತ್ ತುಳುನಾಡಿನ ಪುರಾತನ ಮೂಲನಿವಾಸಿ ಬುಡಕಟ್ಟು ಜನಾಂಗವೇ ಕೊರಗ ಜನಾಂಗ. ಇವರದು ಕರ್ನಾಟಕದ ಅತ್ಯಂತ ಹಿಂದುಳಿದ ಬುಡಕಟ್ಟಾಗಿದೆ.

ನಿರಂತರ ಶೋಷಣೆ, ದೌರ್ಜನ್ಯಕ್ಕೊಳಗಾಗಿ ಅಂಚಿಗೆ ತಳ್ಳಲ್ಪಟ್ಟ ಈ ಸಮುದಾಯದೊಳಗೆ ಕೆಲವು ಉಪಜಾತಿಗಳಿವೆ.

ಸಮಾಜಶಾಸ್ತ್ರೀಯ ಹುಡುಕಾಟದ ಪ್ರಕಾರ ಆರು ಉಪಜಾತಿಗಳಿವೆ. ನಾನು ಕಂಡು-ಕೇಳಿ ಅರಿತಂತೆ ಅವರಲ್ಲಿ ಮುಖ್ಯವಾಗಿ ಮೂರು ಉಪಜಾತಿಗಳಿವೆ. ಕುಂಟು ಕೊರಗ (ಬಟ್ಟೆ) ಕೊರಗರಲ್ಲೇ ಮೇಲ್ಮಟ್ಟದವರಂತೆ. ಒಂಟಿ ಕೊರಗ ಎರಡನೇ ಸ್ತರದವರಾದರೆ, ಸೊಪ್ಪು ಕೊರಗರದು ಕೊನೆಯ ಸ್ತರವಂತೆ.

ಮಾನ ಮುಚ್ಚಲು ಸೊಪ್ಪುಗಳನ್ನು ಗುಪ್ತಾಂಗದ ಸುತ್ತ ಕಟ್ಟುತ್ತಿದ್ದವರು ಸೊಪ್ಪು ಕೊರಗರು. ಕಿವಿಗೆ ಒಂಟಿ (ರಿಂಗ್) ಧರಿಸುವವರು ಒಂಟಿ ಕೊರಗರು. ಸೊಪ್ಪು ಧರಿಸುತ್ತಿದ್ದವರಲ್ಲಿ ಮೊದಲ ಬಾರಿಗೆ ಬಟ್ಟೆ ಉಡತೊಡಗಿದವರು ಕುಂಟು (ಬಟ್ಟೆ) ಕೊರಗರು ಎಂಬುದು ವಾಡಿಕೆ.

ಸಾಮಾನ್ಯವಾಗಿ ಕಾಡು ಪ್ರಾಣಿಗಳು ಕಿವಿಗಡಚಿಕ್ಕುವ ಶಬ್ದಕ್ಕೆ ಓಡಿ ಹೋಗುತ್ತವೆ. ಕಾಡನ್ನೇ ಆವಾಸಸ್ಥಾನವಾಗಿಸಿಕೊಂಡ ಇವರು ಕಾಡುಪ್ರಾಣಿಗಳ ಉಪಟಳದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಡೋಲನ್ನು ಆವಿಷ್ಕರಿಸಿದರು. ಇದೇ ಡೋಲು ಕಲಾ ಜಗತ್ತನ್ನು ಪ್ರವೇಶಿಸಿತು. ಆದರೆ ಕೊರಗರ ಈ ಕೊಡುಗೆಯನ್ನು ಎಲ್ಲೂ ಸ್ಮರಿಸಿಕೊಳ್ಳಲಾಗುವುದಿಲ್ಲ.

ಅವರೊಳಗಿನ ಕೀಳರಿಮೆ, ಭಯ, ಸಂಕೋಚ ಇವೆಲ್ಲವೂ ನಾಗರಿಕ ಸಮಾಜದಿಂದ ತುಂಬಾನೇ ದೂರ ಉಳಿಯುವಂತೆ ಮಾಡಿತ್ತು. ಊರ ಇತರ ಸಮುದಾಯಗಳ ಮದುವೆ ಸಮಾರಂಭಗಳಿಗೆ ಬಂದರೆ ಮಾರು ದೂರ ನಿಂತು ತಾವೇ ತಂದಿದ್ದ ಪ್ಲಾಸ್ಟಿಕ್ ಚೀಲದೊಳಗೆ ಮದುವೆ ಊಟ ಹಾಕಿಸಿಕೊಂಡು ಬಿರಬಿರನೆ ಮರಳುತ್ತಿದ್ದರೇ ವಿನಾ ಕುಳಿತುಕೊಳ್ಳುವುದಾಗಲೀ, ಮಾತಿಗಿಳಿಯುವುದಾಗಲೀ ಮಾಡುತ್ತಲೇ ಇರಲಿಲ್ಲ. ಕೆಲವೊಮ್ಮೆ ನಮ್ಮ ಮನೆಯ ಅಂಗಳದಲ್ಲೇ ಕುಳಿತು ಅಮ್ಮನಿಗೆ ಬೇಕಾದ ರೀತಿಯಲ್ಲಿ ಬುಟ್ಟಿ ಹೆಣೆದು ಕೊಡುತ್ತಿದ್ದ ಕೊರಗ ಹೆಂಗಸು ಮನೆಯ ಹೊರ ಚಾವಡಿಗೋ, ಜಗಲಿಗೋ ಕರೆದರೂ ಬಾರದೆ ಮರದಡಿಯಲ್ಲೇ ಕುಳಿತು ಊಟ, ತಿಂಡಿ ಮುಗಿಸುತ್ತಿದ್ದಳು. ಕೀಳೆಂಬ ತಮ್ಮೊಳಗಿನ ಕೀಳರಿಮೆ ಅವರನ್ನು ಸಮಾಜದಿಂದ ಮತ್ತಷ್ಟು ದೂರವಿಟ್ಟಿತು. ಈ ಕಾರಣದಿಂದಲೇ ಇರಬೇಕು ‘ಕೊರಗ ಭಾಷೆ’ಯೆಂಬ ಅವರ ಮಾತೃ ಭಾಷೆ ಈಗ ಭಾಷಾ ದಾಖಲೆಗಳಲ್ಲಿ ಮಾತ್ರ ಉಳಿದಿದ್ದು ತನ್ನ ಅಸ್ತಿತ್ವವವನ್ನೇ ಕಳೆದುಕೊಳ್ಳುವ ಹಂತದಲ್ಲಿದೆ.

ಬಹಳ ಇತ್ತೀಚಿನವರೆಗೂ ಅವರು ಸಮಾಜದ ಮುಖ್ಯವಾಹಿನಿಗೆ ಬರದಿದ್ದುದರ ಪರಿಣಾಮ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಆರೋಗ್ಯ, ಹೀಗೆ ಎಲ್ಲದರಿಂದಲೂ ವಂಚಿತರಾಗುತ್ತಾ ಬಂದಿದ್ದಾರೆ. ಕೊರಗರ ಡಿ.ಎನ್.ಎ ಅಧ್ಯಯನದ ಪ್ರಕಾರ ಬಹುಸಂಖ್ಯೆಯ ಜನ ಐವತ್ತು ವರ್ಷಗಳಿಗಿಂತ ಹೆಚ್ಚು ಬದುಕುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಆರೋಗ್ಯದ ಕುರಿತಂತೆ ಅವರಿಗಿರುವ ತೀರಾ ನಿಷ್ಕಾಳಜಿ, ಜಾಗೃತಿಯ ಕೊರತೆ ಮತ್ತು ವೈದ್ಯಕೀಯ ಸೇವೆಗಳು ಅವರ ಬಳಿ ತಲುಪದಿರುವುದು. ಅರಣ್ಯವಾಸಿ ಕೊರಗರಲ್ಲಿ ಮಲೇರಿಯಾ, ಟೈಫಾಯ್ಡ್, ಕ್ಷಯರೋಗ ಬಾಧಿತರಾಗುವವರ ಪ್ರಮಾಣವು ಇತರರಿಗಿಂತ ಬಹಳ ಹೆಚ್ಚು. ಅತಿಯಾದ ಕುಡಿತದಿಂದ ಯಕೃತ್ತಿನ ಕಾಯಿಲೆಯೂ ಅವರಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲೇ ಇದೆ.

ಈಗಷ್ಟೇ ಅತ್ಯಂತ ತೆಳುವಾದ ಪ್ರಮಾಣದಲ್ಲಿ ಕೊರಗ ಸಮುದಾಯವು ಶಿಕ್ಷಣದತ್ತ ಒಲವು ತೋರುತ್ತಿದೆ. ನಗರ ಪ್ರದೇಶದಲ್ಲಿರುವ ಕೊರಗರು ಪೌರ ಕಾರ್ಮಿಕರಾಗಿಯೂ ದುಡಿಯುತ್ತಿದ್ದಾರೆ. ಅವರ ಹೊಸ ತಲೆಮಾರಿನವರ ತಲೆಯಲ್ಲೂ ನಾವು ಇದೇ ಕೆಲಸ ಮಾಡಲಿರುವವರು ಎಂದು ಕೂತಿರುವುದರಿಂದ ಸ್ವಯಂ ಅವರೂ ಶಿಕ್ಷಣದತ್ತ ದೊಡ್ಡ ಮಟ್ಟಿನ ಒಲವು ತೋರುತ್ತಿಲ್ಲ.

ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇದ್ದರೂ ಅವರಲ್ಲಿನ ಜಾಗೃತಿಯ ಕೊರತೆಯಿಂದಾಗಿ ಅದು ದಕ್ಕದೆ ಇತರ ಮುಂದುವರಿದ ಪರಿಶಿಷ್ಟ ಪಂಗಡಗಳ ಪಾಲಾಗುವುದೇ ಹೆಚ್ಚು. ಒಳ ಮೀಸಲಾತಿಯನ್ನು ಸಮರ್ಪಕ ಮಟ್ಟದಲ್ಲಿ ಜಾರಿಗೆ ತಂದರೆ ಮಾತ್ರ ತಮಗಾಗಿಯೇ ಇರುವ ಅವಕಾಶವನ್ನು ಅವರು ಬಳಸಿಕೊಳ್ಳಲು ಸಾಧ್ಯ.
2011ರ ಜನಗಣತಿ ಪ್ರಕಾರ ಕೊರಗರ ಸಂಖ್ಯೆ ಕೇವಲ 16,500 ಮಾತ್ರ. ಅಲ್ಲಲ್ಲಿ ಚದುರಿಕೊಂಡಿರುವ ಈ ಸಮುದಾಯವು ಯಾವುದೇ ಚುನಾವಣೆಯಲ್ಲೂ ನಿರ್ಣಾಯಕವಲ್ಲದ ಕಾರಣ ಮತಗಳಿಗಾಗಿ ಯಾವ ರಾಜಕೀಯ ಪಕ್ಷಗಳೂ ಅವರ ಓಲೈಕೆ ಮಾಡುವುದಿಲ್ಲ. ಸಂಪೂರ್ಣವಾಗಿ ಅಂಚಿಗೆ ತಳ್ಳಲ್ಪಟ್ಟ ಈ ನೆಲದ ನಿಜವಾದ ವಾರಸುದಾರರು ನಿಜ ದೃಷ್ಟಿಯಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಒಳಮೀಸಲಾತಿ ನೀಡಲೇಬೇಕಿರುವುದು ಕಾಲದ ತುರ್ತಾಗಿದೆ.


ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

0
ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ...