ಮಂಗಳೂರಿನ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಆರನೇ ದಿನವೂ ಮುಂದುವರೆಸಿದ್ದು, ಇದನ್ನು ಪ್ರತಿಭಟಿಸಿ ಮಂಗಳವಾರದಂದು ವ್ಯಾಪಾರಿಗಳು ನಗರದ ಲಾಲ್‌ಬಾಗ್‌ನಲ್ಲಿರುವ ಪಾಲಿಕೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಜೊತೆಗೆ ಕಾನೂನು ಮೀರಿ ತೆರವು ಮಾಡಿತ್ತಿರುವ ಪಾಲಿಕೆಯ ವಿರುದ್ದ ಬುಧವಾರದಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಅನಧಿಕೃತ ಗೂಡಂಗಡಿ ಮತ್ತು ಪುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲು ಕಳೆದ ಬುಧವಾರದಂದು ಪಾಲಿಕೆಯ ಮೇಯರ್ ಮತ್ತು ಕಮೀಷನರ್ ಆದೇಶ ಹೊರಡಿಸಿದ್ದರು. ಅದರಂತೆ ಗುರುವಾರದಿಂದ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಆದರೆ ಬೀದಿಬದಿ ವ್ಯಾಪಾರಿಗಳಿಗೆ ಸರಕಾರವೇ ನೀಡಿದ್ದ ಗುರುತಿನ ಚೀಟಿಯಿದ್ದರೂ ಅಂತಹ ವ್ಯಾಪಾರಿಗಳನ್ನು ಕೂಡಾ ಅಧಿಕಾರಿಗಳು ತೆರವುಗೊಳಿಸಿದ್ದು, ಹಲವು ವ್ಯಾಪಾರಿಗಳ ಗಾಡಿ ಮತ್ತಿತರ ವಸ್ತುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಬಾಹಿರವಾಗಿ ಜಜ್ಜಿ ನಾಶಪಡಿಸಲಾಗಿದೆ.
ಇದನ್ನೂ ಓದಿ:ಮಂಗಳೂರು: ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ಬೀದಿಬದಿ ವ್ಯಾಪಾರಿಗಳು!
ಇಂದು ಕೂಡಾ ನಗರದ ಮೈದಾನ ರಸ್ತೆಯಲ್ಲಿ ಅಧಿಕಾರಿಗಳು ವ್ಯಾಪಾರಿಗಳ ವಸ್ತುಗಳನ್ನು ನಾಶಪಡಿಸಿದ್ದರು. ಆದರೆ ಇದನ್ನು ವಿರೋಧಿಸಿ ವ್ಯಾಪಾರಿಗಳು ಲಾರಿಯ ಅಡಿಯಲ್ಲಿ ಮಲಗಿ ಪ್ರತಿಭಟಿಸಿದ್ದಾರೆ. ಜೊತೆಗೆ ಪಾಲಿಕೆಗೆ ಮುತ್ತಿಗೆ ಹಾಕಿದ್ದು, ತಮ್ಮ ವಸ್ತುಗಳನ್ನು ನಾಶ ಪಡಿಸಿದ ಅಧಿಕಾರಿಗಳ ವಿರುದ್ದ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಬೀದಿಬದಿ ವ್ಯಾಪಾರಿ ಶ್ರೇಯೋಭಿವೃದ್ದಿ ಸಂಘದ ಗೌರವಾಧ್ಯಕ್ಷಾದ ಬಿ.ಕೆ. ಇಂತಿಯಾಝ್ ಮಾತನಾಡಿ, “ಬಡ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯಬೇಡಿ, 2012 ರಲ್ಲೂ ಮಹಾನಗರ ಪಾಲಿಕೆ ಇದೇ ರೀತಿ ಮಾಡಿತ್ತು. ಈಗ ಮತ್ತೇ ಅದೇ ರೀತಿ ಮಾಡುತ್ತಿದೆ. ಅಧಿಕಾರಿಗಳಿಗೆ ಹೃದಯವಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. 2012 ರಲ್ಲಿ ನಾವು ನಿರಂತರವಾಗಿ ಮೂರು ತಿಂಗಳು ಹೋರಾಟ ಮಾಡಿ ಗೆದ್ದಿದ್ದೇವೆ. ಈಗ ಕೂಡಾ ಅನ್ಯಾಯದ ವಿರುದ್ದ ಹೋರಾಡುತ್ತೇವೆ” ಎಂದು ಹೇಳಿದರು.
ಸಂಘದ ಮಾಜಿ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಪಾಲಿಕೆ ಅಧಿಕಾರಿಗಳು ಮುಟ್ಟುಗೋಳು ಹಾಕಿರುವ ವಸ್ತುಗಳನ್ನು ಮರ್ಯಾದೆಯಿಂದ ವಾಪಾಸು ತಂದು ಕೊಡಬೇಕು ಮತ್ತು ನಾಶ ಮಾಡಿರುವ ವಸ್ತುಗಳಿಗೆ ಪರಿಹಾರ ಕೊಡಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಮಂಗಳೂರು ಮನಪಾ ವಿರುದ್ಧ ಪ್ರತಿಭಟನೆ
ಈ ಮಧ್ಯೆ ಮಹಾನಗರ ಪಾಲಿಕೆಯು ಬೈಕಂಪಾಡಿಯ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ತೆರಳಿದ್ದು, ಅಲ್ಲಿ ವ್ಯಾಪಾರಿ ಸಂಘದ ಪದಾಧಿಕಾರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವರಿಗೆ ಕಾನೂನಿನ ಪಾಠ ಮಾಡಿದ್ದಾರೆ.
ಕಳೆದ ಶನಿವಾರದಂದು ವ್ಯಾಪಾರಿಗಳನ್ನು ತೆರವುಗೊಳಿಸಲು ಬಂದಿದ್ದ ಪಾಲಿಕೆ ಅಧಿಕಾರಿಗಳನ್ನು ಬೀದಿಬದಿ ವ್ಯಾಪಾರಿಗಳು ತಡೆದಿದ್ದು, ತೆರವು ಕಾರ್ಯಾಚರಣೆ ಮಾಡುವ ಆದೇಶ ಪತ್ರವನ್ನು ಕೇಳಿದ್ದಾರೆ. ಜೊತಗೆ ಸರ್ಕಾರ ನೀಡಿದ ಗುರುತಿನ ಚೀಟಿ ಇರುವ ವ್ಯಾಪಾರಿಗಳ ತೆರವು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬೀದಿಯಲ್ಲೇ ತರಾಟೆಗೆ ತೆಗೆದುಕೊಂಡಿದ್ದರು.
‘ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಾದರೆ, ಪಟ್ಟಣ ವ್ಯಾಪಾರಿ ಸಮಿತಿಯ ಸಭೆ ನಡೆದು ಅಲ್ಲಿ ನಿರ್ಧಾರವಾಬೇಕಾಗುತ್ತದೆ, ಇದು ಕಾನೂನು’ ಎಂದು ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ ಹೇಳಿದ್ದಾರೆ. ಆದರೆ ಪಾಲಿಕೆಯು ಇದು ಯಾವುದನ್ನೂ ಪಾಲಿಸದೆ, ಸರ್ಕಾರವೇ ಗುರುತಿನ ಚೀಟಿ ನೀಡಿದ ಮತ್ತು ಗುರುತಿನ ಚೀಟಿ ನೀಡಲು ಸರ್ವೆ ಆಗಿರುವ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿದೆ. ಅಲ್ಲದೆ ಮುಟ್ಟುಗೋಳು ಹಾಕಿಗೊಂಡಿರುವ ವಸ್ತುಗಳನ್ನು ನಾಶಪಡಿಸುತ್ತಿದೆ.
“ಮುಟ್ಟುಗೋಳು ಹಾಕಿರುವ ವಸ್ತುಗಳನ್ನು ಯಾವುದೆ ಕಾರಣಕ್ಕೂ ನಾಶ ಪಡಿಸಬಾರದು. ದಂಡ ಪಡೆದು ವ್ಯಾಪಾರಿಗಳಿಗೆ ಅವುಗಳನ್ನು ವಾಪಾಸು ಕೊಡಬೇಕು. ಆದರೆ ಪಾಲಿಕೆ ಇದನ್ನು ಮಾಡುತ್ತಿಲ್ಲ” ಎಂದು ಮುಸ್ತಫಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಸತತವಾಗಿ ಆರನೇ ದಿನವೂ ಪಾಲಿಕೆಯಿಂದ ದಾಳಿ ಮುಂದುವರೆದಿರುವುದರಿಂದ ನಾಳೆಯಿಂದ ಪಾಲಿಕೆ ಮುಂದೆ ಅನಿರ್ಧಿಷ್ಠಾವಧಿ ಧರಣಿ ಕೂರುವುದಾಗಿ ಸಂಘದ ತೀರ್ಮಾನಿಸಿದೆ ಎಂದು ಮುಸ್ತಫಾ ಹೇಳಿದ್ದಾರೆ.
ಇದನ್ನೂ ಓದಿ:ಬೀದಿಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಪಾಲಿಕೆ ದಾಳಿ: ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆ ಎಂದು ವ್ಯಾಪಾರಿಗಳ ಅಳಲು


