Homeಮುಖಪುಟಅವಸರಗಳ ಕಾಲದಲ್ಲಿ ಗ್ರಹಿಸಲಾರದೆ ಹೋಗಿರುವ ಕುವೆಂಪು..

ಅವಸರಗಳ ಕಾಲದಲ್ಲಿ ಗ್ರಹಿಸಲಾರದೆ ಹೋಗಿರುವ ಕುವೆಂಪು..

- Advertisement -
- Advertisement -

(ಇದು ಹೊಸ ಬರಹದಲ್ಲಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ.)

ಈಮೇಲಿನ ತಲೆಬರೆಹ ಯು.ಆರ್.ಅನಂತಮೂರ್‍ತಿಯವರ ಪ್ರಾಯಶ್ಚಿತ್ತದ ಮಾತುಗಳಿಂದ ತೆಗೆದುಕೊಂಡದ್ದು. ‘ಕುವೆಂಪು ತಾನು ಭಾರತೀಯ ಎನ್ನುವ ಕಾರಣಕ್ಕಾಗಿ ನಮ್ಮ ಪರಂಪರೆಯಲ್ಲಿ ಎಲ್ಲವನ್ನೂ ಸ್ವೀಕರಿಸುವುದೂ ಇಲ್ಲ. ನಿರಾಕರಿಸುವುದೂ ಇಲ್ಲ. ವರ್‍ತಮಾನದ ತುರ್‍ತಿಗೂ, ತ್ರಿಕಾಲಕ್ಕೂ, ಭೂಮವೆನ್ನಿಸುವ ಪಾರಮಾರ್‍ಥಿಕಕ್ಕೂ ಸ್ಪಂದಿಸುವ ಕುವೆಂಪುರವರ ಆಧುನಿಕತೆಯ ಜಾಗೃತ ವಿಮರ್‍ಶಾಪ್ರಜ್ಞೆ ವಿವೇಕಯುತವಾಗಿ ಮಾನವ ಕಲ್ಯಾಣಕ್ಕೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುತ್ತದೆ’ ಎನ್ನುವಂತಹ ಮಾತುಗಳನ್ನು ಅವರ ಕೊನೆಯ ಕಾಲಕ್ಕೂ ಸ್ವಲ್ಪ ಮೊದಲು ಆಡಿದವರು ಅನಂತಮೂರ್‍ತಿಯವರು. ಸಂಸ್ಕ್ರುತ ಪರಂಪರೆ, ಪಶ್ಚಿಮದ ಚಿಂತನೆಗಳು, ವಿಜ್ಞಾನ, ಆಧುನಿಕತೆಗಳ ಮೂಲಕ ಇಂಡಿಯಾದ ಬದುಕನ್ನು ‘ಘನತೆಯಲ್ಲಿ ನಂಬಿಕೆ ಇಟ್ಟು’ ಕುವೆಂಪು ಗ್ರಹಿಸಿರುವ ಬಗೆಗೆ ಆ ಹೊತ್ತಿಗೆ ಮೆಚ್ಚಿಕೆ ಮೂಡಿತ್ತು ಅವರಿಗೆ. ‘ಏಕೀಕ್ರುತ ಸಂಸ್ಕ್ರುತಿ ಕೇಂದ್ರ’ಗಳನ್ನು ಬೆಂಬಲಿಸುವ, ಬೆಳೆಸುವ ‘ಸಾಂಸ್ಕ್ರುತಿಕ ರಾಜಕಾರಣ’ಕ್ಕೆ ಇಂತಹ ಪ್ರಾಯಶ್ಚಿತ್ತದ ಅಗತ್ಯವಿದೆ ಎನ್ನುವ ಕಾರಣಕ್ಕಾಗಿ ಈ ಮಾತುಗಳನ್ನು ಇಲ್ಲಿಗೆ ತಂದು ಹೇಳುತ್ತಿದ್ದೇನೆ.

ನವೋದಯದ ಬರೆಹಗಾರರಿಂದಲೇ ಶುರುವಾದ ಕುವೆಂಪು ಬರೆಹ ಮತ್ತು ಚಿಂತನೆಯ ಬಗೆಗಿನ ‘ಕೇಂದ್ರೀಕ್ರುತ ಎದುರಾಳಿ’ತನ ನವ್ಯ, ನವ್ಯೋತ್ತರದಲ್ಲಿಯೂ ಹೇಗೆ ಮುಂದುವರೆಯಿತು ಎನ್ನುವುದರ ಚರಿತ್ರೆಯ ಅರಿವುಳ್ಳವರಿಗೆ ಇದು ಸರಳವಾಗಿ ತಿಳಿಯುತ್ತದೆ. ರಾಜಕೀಯ ಪಾರ್‍ಟಿಗಳ ಜಾತಿ-ಮತದ ರಾಜಕಾರಣಕ್ಕಿಂತಲೂ ಬಲುದೊಡ್ಡದು-ಬಲುಕೆಟ್ಟದ್ದು ಈ ಸಾಂಸ್ಕ್ರುತಿಕ ರಾಜಕಾರಣ. ಇದರಿಂದಾಗಿ ಹೆಚ್.ಎಸ್.ಆರ್ ಗುರುತಿಸುವಂತೆ ‘ಕುವೆಂಪು ಅವರು ತಮ್ಮ ನಿಜವಾದ ಓದುಗರಿಗಾಗಿ ಎರಡು ಪೀಳಿಗೆಗಳ ಕಾಲ ಕಾಯಬೇಕಾಯಿತು. ಆ ದಿನಗಳಲ್ಲಿ, ಅವರು ಬಹುಸಂಖ್ಯಾತರ ಅನುಭವ ಲೋಕಗಳನ್ನು ಪ್ರತಿನಿಧಿಸುವ ಅಲ್ಪಸಂಖ್ಯಾತ ಧ್ವನಿಯಾಗಿದ್ದರು. ಪರಿಣಾಮವಾಗಿ ಅವರ ಸಾಹಿತ್ಯವು ಅನೇಕ ಅಪವ್ಯಾಖ್ಯಾನ ಹಾಗೂ ಅಮುಖ್ಯ ವ್ಯಾಖ್ಯಾನಗಳನ್ನು ಪಡೆಯಿತು… ಅವರ ಸಾಮಾಜಿಕವಾದ ಚಿಂತನೆಯನ್ನು ಬದಿಗೆ ಸರಿಸಲಾಯಿತು’. ಈ ನಿಟ್ಟಿನಲ್ಲಿ 20ನೇ ಶತಮಾನವು, ಜನಬದುಕುಗಳ ಚಿಂತಕರಾಗಿ ಬೆಳೆದ ಕುವೆಂಪುವನ್ನು ಕರ್‍ನಾಟಕದ ‘ಸಾಂಸ್ಕ್ರುತಿಕ ನಾಯಕ’ನನ್ನಾಗಿ ಉಳಿಸಿಕೊಂಡದ್ದು ನಮ್ಮ ಸಂವಿಧಾನವು ಆಗುಮಾಡಿದ ‘ಪ್ರಜಾಪ್ರಭುತ್ವ’ ಅಂತಲೇ ಹೇಳಬೇಕು. ಆದ್ದರಿಂದಲೇ ಅನಂತಮೂರ್‍ತಿಯಂತವರಲ್ಲಿ ಕಾಣಿಸುವಂತಹ ಪ್ರಾಯಶ್ಚಿತ್ತಗಳ ಅಗತ್ಯವೂ ಇದೆ. ಪ್ರಜಾಪ್ರಭುತ್ವದ ನಾಡಿನಲ್ಲಿ ಇದಕ್ಕೊಂದು ಬೆಲೆಯೂ ಇರುತ್ತದೆ. ಕುವೆಂಪು ಚಿಂತನೆ ಮತ್ತು ಸಾಹಿತ್ಯದ ಮೂಲಕ
ತೋರಿಸಿದ ಪ್ರಜಾಪ್ರಭುತ್ವದ ಸಾಮಾಜೀಕರಣದ ದಾರಿಯಲ್ಲಿ ಕನ್ನಡ ಸಂಸ್ಕ್ರುತಿಯ ಬಗೆಗೆ ಚಿಂತನೆಗಳನ್ನು ಮುಂದುವರೆಸಿರುವವರು ಇಂದು ನಮ್ಮ ನಡುವೆ ಅನೇಕರಿದ್ದಾರೆ.

ಕುವೆಂಪು ಬರೆಹ ಮತ್ತು ಚಿಂತನೆಗಳ ಬಗೆಗೆ ಮಾತನಾಡುವಾಗಲೆಲ್ಲಾ 20ನೇ ಶತಮಾನದ ‘ಸಾಂಸ್ಕ್ರುತಿಕ ನಾಯಕತ್ವ’ದ ಕೇಳ್ವಿಗಳನ್ನು ಅನೇಕರು ತೆಗೆದುಕೊಂಡದ್ದಿದೆ. ನೇರವಾಗಿ, ಕುವೆಂಪು ಅವರನ್ನು 20ನೇ ಶತಮಾನದ ಕನ್ನಡ ಜಗತ್ತಿನ ‘ಸಾಂಸ್ಕ್ರುತಿಕ ನಾಯಕ’ ಎಂದು ಗುರುತಿಸಲು ತಳಮಳಗೊಳ್ಳುವ ಅನೇಕರು ಕುವೆಂಪು ಅವರನ್ನು ‘ಸಾಂಸ್ಕ್ರುತಿಕ ನಾಯಕತ್ವ’ದ ನಡೆಯ ಅನುಮಾನಗಳಲ್ಲಿಟ್ಟುಕೊಂಡಾದರೂ ಚರ್‍ಚಿಸುತ್ತಿರುವುದು ಇವತ್ತಿಗೂ ಕನ್ನಡ ಸಾಹಿತ್ಯ ಸಂಸ್ಕ್ರುತಿಯ ಸನ್ನಿವೇಶದಲ್ಲಿ ಕಂಡುಬರುತ್ತದೆ. ಹಾಗೆ ನೋಡಿದರೆ ‘ಸಾಂಸ್ಕ್ರುತಿಕ ನಾಯಕತ್ವ’ ಎನ್ನುವುದು ಹಣೆಪಟ್ಟಿ ಹಚ್ಚಿಕೊಂಡು ಮಾಡುವ ಕೆಲಸವಲ್ಲ. ಕನ್ನಡ ಸಾಹಿತ್ಯದ ಸಾಂಸ್ಕ್ರುತಿಕ ಇತಿಹಾಸವನ್ನು ಗ್ರಹಿಸಿದರೆ ಬಸವ, ಕನಕರಾದಿಯಾಗಿ ಕುವೆಂಪುವರೆಗೆ ‘ಸಾಂಪ್ರದಾಯಿಕ ಸಾಂಸ್ಕ್ರುತಿಕ ಕೇಂದ್ರೀಕರಣ’ವನ್ನು ಎದುರು ಹಾಕಿಕೊಂಡ ಯಾರೂ ತಮ್ಮನ್ನು ‘ಸಾಂಸ್ಕ್ರುತಿಕ ನಾಯಕ’ರೆಂದು ಹೇಳಿಕೊಂಡವರಲ್ಲ. ಹಾಗೆ ನೋಡಿದರೆ ಜನಬದುಕುಗಳು ಒಂದರೊಡನೊಂದು ಒಡನಾಡುವ ಸಮಾಜಕ್ಕೆ ‘ಏಕೀಕ್ರುತ ಸಾಂಸ್ಕ್ರುತಿಕ ಕೇಂದ್ರ’ ಎನ್ನುವುದು ಇರುವುದೂ ಇಲ್ಲ. ಆದರೆ, ಕೆಲವು ಜಾತಿ, ಮತದ ಗುಂಪುಗಳು ಇಡೀ ಸಮಾಜವನ್ನು ತಮ್ಮ ಅಡಿಯಾಳಾಗಿಸಿಕೊಳ್ಳಲು ‘ಏಕೀಕ್ರುತ ಸಾಂಸ್ಕ್ರುತಿಕ ಕೇಂದ್ರ’ವನ್ನು ಕಟ್ಟಿ ಬೆಳೆಸಲು ಪ್ರಯತ್ನಿಸುತ್ತಿರುತ್ತವೆ.

ಅಂಬೇಡ್ಕರ್ ಅವರು, ದೇಶದ ಮಟ್ಟದಲ್ಲಿ ತಾವು ಬದುಕುತ್ತಿರುವ ಸಮಾಜದ ಒಡನಾಡಿ ಜನಬದುಕುಗಳೇ ‘ಸಂಸ್ಕ್ರುತಿ’ ಎನ್ನುವುದನ್ನು ತಮ್ಮ ಚಿಂತನೆಗಳ ಮೂಲಕ ಸಾರುತ್ತಾ ಜಾತಿ, ಮತಗಳ ನೆಪದ ಸಂಸ್ಕ್ರುತಿಯ ‘ಏಕೀಕ್ರುತ ಕೇಂದ್ರ’ಗಳ ಎದುರು ಹೋರಾಟಗಳನ್ನು ಕಟ್ಟಿದ್ದಾರೆ. ಕುವೆಂಪು ಕನ್ನಡದ ಮಟ್ಟಿಗಾದರೂ ಹಾಗೆ ಅಂತಹ ‘ಏಕೀಕ್ರುತ ಕೇಂದ್ರ’ಗಳನ್ನು ಮೆಟ್ಟಿದವರಾಗಿ ನಮ್ಮ ನಡುವೆ ದೊಡ್ಡವರಾಗಿ ಕಾಣುತ್ತಿದ್ದಾರೆ. ಆಧುನಿಕದಲ್ಲಿ, ಅಂಬೇಡ್ಕರರ ಹೋರಾಟಗಳ ಕಾಲದಿಂದ ಹಿಡಿದು ಇವತ್ತಿನವರೆಗೆ ಜಾತಿ, ಮತದ ಹೆಸರಿನಲ್ಲಿ ಮೇಲುಮೇಲಿನವೆಂದು ಬಾಯಿಬಾಯಿ ಬಡಕೊಂಡು, ಪ್ರಚಾರ ಮಾಡಿಕೊಂಡು ಬದುಕುತ್ತಿರುವ, ದೇವರು-ದಿಂಡರುಗಳ ಗುತ್ತಿಗೆ ಹಿಡಿದಿರುವ, ಮೇಲುಕೀಳಿನ ಉಪಾಯ ಮಾಡಿ ಜನಬದುಕುಗಳನ್ನು ದಾರಿ ತಪ್ಪಿಸುತ್ತಿರುವ ‘ಕೇಂದ್ರೀಕ್ರುತ ಸಂಸ್ಕ್ರುತಿ’ಯ ಹುಟ್ಟು ನಡೆಗಳೇ ಕುವೆಂಪು ಚಿಂತನೆಗೂ ಎದುರಾಳಿಗಳು. 20ನೇ ಶತಮಾನದಲ್ಲಿ ಕುವೆಂಪು ಎದುರಿಸಿ ನಿಂತದ್ದು ಶತಮಾನಗಳಿಂದ ಬೆಳೆದು ಬಂದಿರುವ ಇಂತಹ ಬೋಳೆ ಸಂಸ್ಕ್ರುತಿಯ ಕೇಂದ್ರಗಳನ್ನು. ಈ ಸಂಸ್ಕ್ರುತಿ ಕೇಂದ್ರಗಳನ್ನು ಹೊಕ್ಕು, ಒಡನಾಡುತ್ತಾ ಆ ಕೇಂದ್ರಗಳಲ್ಲಿದ್ದವರಿಗೇ ತಮ್ಮ ಬಗ್ಗೆ ಅನುಮಾನಗಳನ್ನು ಹುಟ್ಟುವಂತೆ ಮಾಡಿ ಪ್ರಜಾಪ್ರಭುತ್ವದ ಕಿಂಡಿಗಳನ್ನು ಕಾಣಿಸಿದ ಕನ್ನಡ-ಕರ್‍ನಾಟಕದ ಮಟ್ಟಿನ ಅಂಬೇಡ್ಕರ್ ಎಂದರೆ ಕುವೆಂಪು ಎಂದೇ ಹೇಳಬೇಕಾಗುತ್ತದೆ. ಈ ಕೇಂದ್ರಗಳು ಕಳೆದ ಶತಮಾನದ ಉದ್ದಕ್ಕೂ, ಇವತ್ತಿಗೂ ಕುವೆಂಪು ಮತ್ತು ಕುವೆಂಪು ಹುಟ್ಟುಹಾಕಿದ ಚಿಂತನೆಯ ಪರಂಪರೆಯಿಂದ ಆಗುತ್ತಿರುವ ‘ಮಯ್ಲಿಗೆ’ಯನ್ನು ತೊಳೆದುಕೊಳ್ಳಲೂ ಆಗದೆ, ತಮ್ಮ ‘ಆಧುನಿಕ’ ಜೀವನಕ್ಕೆ ಕಾರಣವಾಗಿರುವ ಪ್ರಜಾಪ್ರಭುತ್ವಕ್ಕೆ ಶರಣು ಎನ್ನಲೂ ಆಗದ ಅಹಂಕಾರದ ಇರಿಸುಮುರುಸಿನಲ್ಲಿ ಒದ್ದಾಡುತ್ತಿದೆ. ಇದರಿಂದ ಬಿಡುಗಡೆ ಪಡೆಯಬೇಕಾದ ಅಗತ್ಯವಂತೂ ಇದ್ದೇ ಇದೆ.

ಕುವೆಂಪು ಚಿಂತನೆಗಳಲ್ಲಿನ ‘ವಯಿಜ್ಞಾನಿಕ ದ್ರುಷ್ಟಿ, ವಯ್ಚಾರಿಕ ಪ್ರಜ್ಞೆ ಮತ್ತು ಜನತಾ ಪ್ರಜ್ಞೆ’ಯನ್ನು ಗ್ರಹಿಸುವವರು ಬುದ್ಧ, ವಿವೇಕಾನಂದ, ಪರಮಹಂಸ, ಗಾಂಧಿ, ಅರವಿಂದ, ಟ್ಯಾಗೂರ್, ಟಾಲ್‌ಸ್ಟಾಯ್, ಬಾರೂಚ್ ಸ್ಪಿನೋಜ, ಶೋಪೆನ್ ಹೌರ್ ಮೊದಲಾಗಿ ಭಾರತೀಯ ಪುರಾಣ, ಉಪನಿಶತ್ತುಗಳಿಂದ ಹಿಡಿದು ಪಶ್ಚಿಮದ ತತ್ವಶಾಸ್ತ್ರದವರೆಗೆ ಗುರುತುಗಳನ್ನು ಹುಡುಕಿ ತೋರಿಸುವುದನ್ನು ಕಾಣುತ್ತೇವೆ. ಆದರೆ, ಈ ಮೂಲಕ ಕುವೆಂಪು ಇಂತವರನ್ನೆ ಅನುಕರಿಸಿದ್ದಾರೆ, ಅನುಸರಿಸಿದ್ದಾರೆ, ಅನುವಾದಿಸಿಕೊಂಡಿದ್ದಾರೆ ಎಂಬಂತೆ ನಡೆದುಕೊಂಡವರಲ್ಲ. ಯಾಕೆಂದರೆ ಕುವೆಂಪು ತಾವು ತಮ್ಮ ಸಮಾಜದ ಜನಬದುಕುಗಳಿಗಾಗಿ ಚಿಂತಿಸುತ್ತಿದ್ದ ಸಾಮಾಜೀಕರಣದ ದಾರಿ ಅನನ್ಯ ಪರತಂತ್ರದ್ದೇ ಆಗಿತ್ತು ಎನ್ನುವುದು. ಅವರು ರೂಪಿಸಿದ ಅನಿಕೇತನ ತತ್ವ, ಬೋಧಿಸಿದ ನಿರಂಕುಶಮತಿತ್ವ, ನಿಯತಿಕೃತ ನಿಯಮರಾಹಿತ್ಯ ಯಾವೊಂದೂ ಕೂಡ ಯಾರಿಂದಲೂ, ಎಲ್ಲಿಂದಲೂ ಅನುವಾದಿಸಿಕೊಂಡವಲ್ಲ. ಇಂಡಿಯಾದ ಸ್ತಳೀಯ ಬೇರುಗಳ ಮೂಲಕ ಆಗುಮಾಡಿಕೊಂಡ ಜಾಗತಿಕ ಅರಿವನ್ನು ಇಂಡಿಯಾಕ್ಕೆ-ಕರ್‍ನಾಟಕಕ್ಕೆ-ಕನ್ನಡ ಸನ್ನಿವೇಶದ ಹೊಸಕಾಲಕ್ಕೆ ಹೇಗಿರಬೇಕೆಂದು ಅರಗಿಸಿ ಕಂಡುಕೊಂಡಿರುವಂತವು. ವಚನ ಚಳುವಳಿಯ ಕುರಿತಾಗಲೀ, ಅಂಬೇಡ್ಕರರ ಬಗೆಗಾಗಲಿ ಕುವೆಂಪು ಬರೆಯಲಿಲ್ಲ ಯಾಕೆ ಎಂದು ಕೇಳುವರಿಗೆ ಉತ್ತರ ಕುವೆಂಪು ಅವರ ಈ ಸ್ವಂತಿಕೆಯ ನಡೆಯಲ್ಲಿದೆ.

ಕುವೆಂಪು ಅವರ ಚಿಂತನೆಗಳಲ್ಲಿ ಹೀಗೆ ಒಂದು ಸಾಂಸ್ಕ್ರುತಿಕ ಮುಂದಾಳುತನವೇ ನಡೆದುಕೊಳ್ಳುವ ಬಗೆ ಕಾಣುತ್ತದೆ. ಈ ಸಾಂಸ್ಕ್ರುತಿಕ ಮುಂದಾಳುತನದಲ್ಲಿ ಜನಬದುಕಿನ ಹಲವುತನವನ್ನು ಒಳಗೊಳ್ಳುವ ದಾರಿ ಇದೆ. ಬಹಳ ಸಾರಿ ವಚನಗಳಲ್ಲಿಯೂ ಕಾಣಿಸಿಕೊಳ್ಳುವ ಜಾತಿ-ಸಮುದಾಯದ ಗುಂಪುಗಾರಿಕೆಯ ನಡೆ ಕುವೆಂಪು ಚಿಂತನೆಯಲ್ಲಿ ಇಲ್ಲ. ‘ಕರ್‍ನಾಟಕದ ಸಾಂಸ್ಕ್ರುತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನಿರ್‍ಣಯವಾಗುತ್ತಿರುತ್ತದೆ’ ಎಂದು ನಂಬಿಕೆಯಿಟ್ಟು ನಡೆವ ಮುಂದಾಳುತನ ಅದು. ಈ ಮುಂದಾಳುತನ ರಾಜಕೀಯ, ವಿಜ್ಞಾನಗಳನ್ನು ಒಂದು ಸಮಾಜದ ಬೆಳವಣಿಗೆಯಲ್ಲಿ ಸಾಹಿತ್ಯ ಕಲೆಗಳಿಗಿಂತಲೂ ಹೆಚ್ಚು ಹೊಣೆಗಾರಿಕೆಯದು ಎಂಬ ತಿಳಿವಳಿಕೆಯಿಂದ ಕೂಡಿರುವಂತದ್ದು. ಸಾಹಿತ್ಯ ಮತ್ತು ಸಾಹಿತ್ಯ ಚಿಂತನೆಗಳು ಇವನ್ನು ಒಳಗೊಂಡ ಸಾಮಾಜಿಕ ಹೊಣೆಗಾರಿಕೆಯದ್ದಾಗಬೇಕೆಂಬ ‘ಹೊಸದೃಶ್ಟಿ’ಗಳನ್ನು ಕೊಟ್ಟಿರುವ ಬಗೆ ಕುವೆಂಪು ಅವರದು.

ಈ ನಿಟ್ಟಿನಲ್ಲಿಯೇ ಶೂದ್ರ, ದಲಿತ, ಬಂಡಾಯ, ಮಹಿಳೆಯ ಹೋರಾಟ ಮತ್ತು ಚಿಂತನೆಗಳು ಕುವೆಂಪು ಚಿಂತನೆಯಲ್ಲಿ ಬೆಂಬಲವನ್ನು ಪಡೆದಿವೆ. ಶೂದ್ರ, ದಲಿತ, ಬಂಡಾಯ, ಮಹಿಳೆ ಈ ಗುರುತುಗಳಲ್ಲಿ ನಿಂತು ನೋಡುವಾಗ ಸಂಸ್ಕ್ರುತ ಪರಂಪರೆಯನ್ನು ನಂಬಿ ನಡೆದಿರುವ ಕನ್ನಡ ಸಾಹಿತ್ಯಮೀಮಾಂಸೆಯ ಪೆಡಸುತನ ಎಂತಹುದೆಂಬುದು ಕನ್ನಡ ಚಿಂತಕರಿಗೆ ತಿಳಿದಿದೆ. ಇದಕ್ಕೆ ನವೋದಯ, ನವ್ಯ, ನವ್ಯೋತ್ತರ ಎಂಬ ಯಾವ ಭೇದವನ್ನೂ ನೋಡಿ ಹೇಳಬೇಕಾಗಿಲ್ಲ. ಸಂಸ್ಕ್ರುತ ಪರಂಪರೆಯನ್ನು ಅರಗಿಸಿಕೊಂಡು ಬರೆಯಲು ಪ್ರಯತ್ನಿಸಿದ ಕುವೆಂಪು ಅಂತಹವರ ಪಡಿಪಾಟಲುಗಳೂ ಗೊತ್ತಿದೆ. ಸಂಸ್ಕ್ರುತ ಪರಂಪರೆಯು ಕನ್ನಡದಲ್ಲಿ ಹುಟ್ಟುಹಾಕಿರುವ ಪೆಡಸುತನ, ಕೀಳರಿಮೆ ಅಂತಿಂತದ್ದಲ್ಲ. ಆದರೆ, ಆ ಮೂಲಕವೂ ಕುವೆಂಪು ಸಾಹಿತ್ಯಚಿಂತನೆ ಜನಬದುಕುಗಳ ಸಾಮಾಜೀಕರಣದತ್ತ ನಡೆದಿದೆ. ಕುವೆಂಪು ಚಿಂತನೆಯ ಈ ದೊಡ್ಡತನವು ಅವರ ಸಮಕಾಲೀನರ ‘ಮನುಶ್ಯಪರ’ ಬರೆಹ ಚಿಂತನೆಗಳೊಂದಿಗೆ ಹೋಲಿಸಿದರೆ ಹೇಗೆ ‘ಜೀವಪರ’ವಾಗಿದೆ ಎನ್ನುವುದು ತಿಳಿಯುತ್ತದೆ. ಈ ನಿಟ್ಟಿನಲ್ಲಿ ದಲಿತ, ಬಂಡಾಯ ಮತ್ತು ಮಹಿಳಾ ಸಾಹಿತ್ಯದ ಬೆಳವಣಿಗೆಯಲ್ಲಿ ಕುವೆಂಪು ಸಾಹಿತ್ಯಚಿಂತನೆಯ ಸಾಮಾಜೀಕರಣವನ್ನು ಗುರುತಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ.

ಕುವೆಂಪು ಚಿಂತನೆಗಳನ್ನು ಗ್ರಹಿಸುವವರಲ್ಲಿ ಅನೇಕ ದ್ವಂದ್ವಗಳೂ ಇವೆ. ‘ಕುವೆಂಪು ಅವರು ವರ್‍ಣವ್ಯವಸ್ಥೆಯ ವರ್‍ಗೀಕರಣವನ್ನು ತಮ್ಮ ಹೋರಾಟದ ತಾತ್ವಿಕ ನೆಲೆಯನ್ನಾಗಿಸಿಕೊಂಡರೂ, ಹಿಂದೂ ಧರ್‍ಮದ ಬಗ್ಗೆ ಸಮಗ್ರ ತಿರಸ್ಕಾರ, ದ್ವೇಶದಿಂದ ಹೊರಡಲಿಲ್ಲ. ಅವರ ಪ್ರಜಾಸತ್ತಾತ್ಮಕ-ಸಮಾಜವಾದಿ ಬೌದ್ಧಿಕತೆ ಆಧ್ಯಾತ್ಮಿಕ-ಸೌಂದರ್‍ಯಾತ್ಮಕ ಕಾಳಜಿಗಳಲ್ಲಿ ಮಸುಕಾಗಿದೆ. ಜಾತಿಪದ್ದತಿಯ ವಿರುದ್ಧದ ಬಂಡಾಯದಲ್ಲಿ ಆಳವಾದ ಹಿಂದೂ ಮನಸ್ಸಿದೆ. ಆದ್ದರಿಂದಾಗಿಯೇ ಸಂಘಟಿತ ಬಂಡಾಯದ ಸೂಚನೆ ಕಾಣುವುದಿಲ್ಲ’ ಎಂಬ ಡಿ.ಆರ್.ನಾಗರಾಜರ ಮಾತಿಗೆ, ಅವರಲ್ಲಿ ‘ವಯ್ಚಾಚಾರಿಕ ದ್ವಂದ್ವವಿದೆ’ ಎನ್ನುವ ಮಾಲಗತ್ತಿಯವರ ನಿಲುವಿಗೆ, ‘ರಾಜಪ್ರಭುತ್ವಕ್ಕೆ ಆಕ್ರೋಶ ತೋರಿದ ಕುವೆಂಪು ಯಾಕೆ ಯಮರ್‍ಜೆನ್ಸಿಯನ್ನು ವಿರೋದಿಸಲಿಲ್ಲ. ಯಾಕೆ ಅವರು ಒಂದು ಪೊಲಿಟಿಕಲ್ ಸರ್‍ವಾಧಿಕಾರದ ಹೊತ್ತಲ್ಲಿ ರಿಯಾಕ್ಟ್ ಮಾಡ್ಲಿಲ್ಲ’ ಎಂಬ ರಹಮತ್ ತರೀಕರೆಯಂತವರ ಕೇಳ್ವಿಗಳಿಗೆ ಕುವೆಂಪು ಬರಹಗಳಲ್ಲಿಯೇ ಉತ್ತರವಿದೆ ಅನಿಸುತ್ತದೆ. ಈ ಪ್ರತಿಕ್ರಿಯೆಗಳನ್ನು ನೋಡುವಾಗ ನಾವಿನ್ನೂ ಕುವೆಂಪುವನ್ನು ಓದುವ ಬಗೆಗೆ ನಿಕರವಾದ ತಯಾರಿಯಲ್ಲಿಲ್ಲವೇನೋ ಅನಿಸುತ್ತದೆ. ನಮ್ಮೊಳಗೇ ಬೇರು ಬಿಟ್ಟು ಹರಡಿಕೊಂಡಿರುವ ಬ್ರಾಹ್ಮಣ್ಯ, ನಮ್ಮೊಳಗೇ ಎಡಬಿಡಂಗಿಯಂತಿರುವ ದಲಿತ-ಶೂದ್ರತ್ವಗಳನ್ನು, ಹೊರಗಿನ ತಿಳಿವಳಿಕೆಗಳಲ್ಲಿ ಆವಾಹಿಸಿಕೊಂಡಿರುವ ಬೌದ್ದಿಕ ಅಹಮಿಕೆಯನ್ನು ತೊಳೆದುಕೊಂಡಲ್ಲದೆ ಇವತ್ತಿನ ಸಮಾಜಕ್ಕೆ ಅಗತ್ಯವಾದ ಸಾಮಾನ್ಯತೆ ಮತ್ತು ಸಹನೆ ಕುವೆಂಪು ಬರಹಗಳಲ್ಲಿ ಉಸಿರಾಡುತ್ತಿದೆ ಎನ್ನುವುದನ್ನು ಕಾಣಲಾಗದೇನೋ. ಬದುಕಿನ ಈ ಸಾಮಾನ್ಯತೆಯನ್ನು ಕಾಪಾಡಿಕೊಳ್ಳುವುದೇ ನಾವು ಬದುಕುತ್ತಿರುವ ಸಮಾಜದ ಹೊಣೆಗಾರಿಕೆಯನ್ನು ಹೊರುವುದು, ಅದರ ಮೊರಾಲಿಟಿಯನ್ನು ಉಳಿಸುವುದು. ಇದು ಈ ಸಮಾಜದ ಎಲ್ಲರೂ ಜಾತಿ ಮತ್ತು ಮತದ ಅಹಂಕಾರಗಳನ್ನು ತೊಳೆದುಕೊಳ್ಳುವುದರಲ್ಲಿದೆ, ಹೆಣ್ಣು-ಗಂಡುಗಳಿಬ್ಬರ ಪಾಲ್ಗೊಳ್ಳುವಿಕೆಯಲ್ಲಿಯೂ ಇದೆ ಎನ್ನುವುದನ್ನು ಅವರ ಬರೆಹ ಚಿಂತನೆ ಹೇಳುತ್ತಿದೆ.

ಇದು ಇಲ್ಲಿಗೇ ನಿಲ್ಲಲಿಲ್ಲ. ‘ಮನುಜಮತಕ್ಕೆ ಕರೆ ನೀಡುವ ಕುವೆಂಪು ಹಿಂದೂ ಧರ್‍ಮವನ್ನು ಒಪ್ಪಿಕೊಳ್ಳುತ್ತಾರೆ. ಸಮಾಜವಾದಿ ತತ್ವವನ್ನು ಒಪ್ಪಿಕೊಂಡೂ ಜಮೀನುದಾರಿ ಊಳಿಗಮಾನ್ಯ ವ್ಯವಸ್ಥೆಯನ್ನು ಬೆಂಬಲಿಸುತ್ತಾರೆ. ಬ್ರಾಹ್ಮಣಶಾಹಿಯನ್ನು ವಿರೋಧಿಸುತ್ತಲೇ ಶೂದ್ರ-ದಲಿತ ಶೋಶಣೆಯ ಬಗ್ಗೆ ಮೌನವಾಗಿರುತ್ತಾರೆ’ ಎಂದು ಬಿ.ಕೃಷ್ಣಪ್ಪನವರು ಆಡಿದ ಮಾತುಗಳನ್ನು ಅನೇಕರು ಬೆಂಬಲಿಸಿದ್ದೂ ಇದೆ. ‘ಬೇಂದ್ರೆಯವರೂ ಸೇರಿದಂತೆ ಎಲ್ಲ ವಯ್ದಿಕರಿಗೂ ಆಪ್ಯಾಯಮಾನವಾದ ‘ಭಾರತೀಯತೆ, ‘ಹಿಂದೂ ಸಮುದಾಯ’ ಮುಂತಾದ ಪರಿಕಲ್ಪನೆಗಳು ಕುವೆಂಪುರವರಿಗೆ ಕಡಿವಾಣವಾಗಲಿಲ್ಲ ಎಂದವರೂ ಕೂಡ ‘ಅವರ ತೀವ್ರ ಪ್ರತಿರೋಧವಿರುವುದು ಪುರೋಹಿತಶಾಹಿ, ಜಾತಿಪದ್ಧತಿ, ವರ್‍ಣವ್ಯವಸ್ಥೆ, ಮೂಢನಂಬಿಕೆ ಮುಂತಾದ ಸಾಮಾಜಿಕ ಅನಿಶ್ಟಗಳ ಬಗ್ಗೆ ಮಾತ್ರ. ಸಮಾಜದ ಪರಿವರ್‍ತನೆಯಾಗುವುದೆಂದು ಅವರು ನಂಬಿದ್ದರು’ ಎಂದದ್ದಿದೆ. ’ಅವರೊಂದು ಜೀವಕೇಂದ್ರಿತ ಸಮಾಜವನ್ನು ಕಟ್ಟಲಿಕ್ಕೆ ಬಯಸಿದ್ರು.

ಒಂದು ಪ್ರಜ್ಞಾಕೇಂದ್ರಿತ ಸಮಾಜವನ್ನು ಕಟ್ಟಬೇಕು ಅಂತ ಅವರ ಇಡೀ ಚಿಂತನೆಯಲ್ಲಿ ಇದ್ದಂತೆ ಕಾಣುತ್ತೆ. ಪರಿವರ್‍ತನೆಯನ್ನು ಬಯಸುವಂತಹ ಒಂದು ಸಮಾಜವನ್ನು ಕಟ್ಟಲಿಕ್ಕೆ ಕುವೆಂಪು ಬಯಸಿದ್ರು… ಕುವೆಂಪು ನಡೆದುಬಿಟ್ಟ ಅರ್‍ಧ ಹಾದಿಯನ್ನು ಮುಂದಿನ ತಲೆಮಾರು ನಡೀತಾ ಇದೆ… 20ನೆ ಶತಮಾನವನ್ನು ನಮ್ಮ ಬೇರೆಬೇರೆ ಲೇಖಕರನ್ನು, ಬೇರೆಬೇರೆ ಪರ್‍ಸನಾಲಿಟಿಗಳನ್ನು ಆಚೆಗೆ ಇಟ್ಟು ಕಲ್ಪಿಸಿಕೊಳ್ಳಬಹುದು. ಆದರೆ ಕುವೆಂಪು ಬಿಟ್ಟು ಕಲ್ಪಿಸಿಕೊಳ್ಳಲಿಕ್ಕಾಗೋದಿಲ್ಲ. 20ನೇ ಶತಮಾನದ ಮುಖ್ಯ ಚಳವಳಿಗಳನ್ನು ಗಮನಿಸಿದರೆ ಅದರ ಬೆನ್ನ ಹಿಂದೆ ಕುವೆಂಪು ಇದ್ದಾರೆ. ಕೇವಲ ಸಾಹಿತ್ಯಕ ಪರಿಭಾಶೆಯಲ್ಲಿ ಕುವೆಂಪುನ ಅಳೆಯುವ ವಿಶ್ಲೇಶಿಸುವ ಹಾದಿಯಿಂದ ಬಿಡಿಸಿಕೊಳ್ಳಬೇಕಾಗಿದೆ… ಕುವೆಂಪು ಕಟ್ಟಬಯಸಿದ ಸಮಾಜ ಆಧುನಿಕ ಸಮಾಜ. ಅದೊಂದು ಅತ್ಯಂತ ಮಾನವೀಯವಾದ, ಜಾಗೃತವಾದ, ಎಲ್ಲಾ ನಿರ್‍ಲಕ್ಷಿತ ಸಮುದಾಯದ ವ್ಯಕ್ತಿಗಳಿಗೂ ಕೂಡ ಗೌರವದ ಸ್ಥಾನ ಕೊಡುವ ಒಂದು ಸಮಾಜ ಆಗಿತ್ತು’ ಎನ್ನುವ ಮಾತುಗಳನ್ನು ಆಡಿರುವವರೂ, ಬಿ.ಕೃಷ್ಣಪ್ಪನವರು ಎತ್ತಿದ ಪ್ರಶ್ನೆಗಳನ್ನು ಅಲ್ಲಗಳೆಯಲಿಕ್ಕಾಗಲ್ಲ ಎಂದು ಕುವೆಂಪುವನ್ನು ಒಂದು ಹಂತದಲ್ಲಿ ಅಸಾಮಾಜಿಕವಾಗಿ ಗ್ರಹಿಸಿದವರೇ ಆಗಿದ್ದಾರೆ. ಈ ತರಹದ ಬಿಕ್ಕಟ್ಟನ್ನು ಕುವೆಂಪು ಓದಿಗೆ ‘ಸೃಷ್ಟಿಸಿ’ ಮೊದಲಿಗೆ ಚಾಲನೆಗೆ ತಂದವರು ನವ್ಯರು. ನವ್ಯದ ಮರುಳುತನದಿಂದ ಹೊರಬಿದ್ದ ಅನಂತಮೂರ್‍ತಿಯವರಿಗೆ ಕುವೆಂಪು ಕಂಡದ್ದು ಬೇರೆಯೇ ಆಗಿ. ಇನ್ನಾದರೂ ಕುವೆಂಪು ಚಿಂತನೆಯ ಓದಿನಲ್ಲಿರುವ ಈ ದ್ವಂದ್ವಗಳ ನಾಡಿಮಿಡಿತವನ್ನು ಸರಿಯಾಗಿ ಅರಿತು ಕುವೆಂಪುವನ್ನು ಓದಬೇಕಾಗಿದೆ ನಾವು. ಕುವೆಂಪುವನ್ನು ಪೂರ್‍ಣವಾಗಿ ಅರಿಯಲು ಕೇವಲ ಯೂರೋಪಿನ ಮೀಮಾಂಸೆಯಾಗಲೀ, ಸಂಸ್ಕ್ರುತ ಸಾಹಿತ್ಯಮೀಮಾಂಸೆಯಾಗಲೀ ಉಪಯೋಗಕ್ಕೆ ಬರುವುದಿಲ್ಲ. ಕನ್ನಡದ ಮೂಲಕ ನೋಡಬಹುದಾದ ನಮ್ಮ ಸಮಾಜದ ಎಲ್ಲವನ್ನೂ ಒಳಗೊಳ್ಳುವ ‘ಸಾಮಾಜಿಕ ಮೀಮಾಂಸೆ’ಯ ಬೆನ್ನು ಹತ್ತಬೇಕಾಗುತ್ತದೆ. ಅಂತಹ ಮೀಮಾಂಸೆ ಅವರ ಬರೆಹಗಳ ಉದ್ದಕ್ಕೂ ಕಾಣಿಸುತ್ತದೆ.

ಇಂತಹ ಅಗತ್ಯವನ್ನು ಕುವೆಂಪು ಬರೆವಣಿಗೆಗೆ ತೊಡಗಿದ ಹೊಸತರಲ್ಲೇ ಅರಿತಿದ್ದರು ಅನಿಸುತ್ತದೆ. ಅವರ ‘ಕೊಳಲು’ ಸಂಕಲನಕ್ಕೆ ಪ್ರತಿಕ್ರಿಯಿಸಿದ ಗೋಕಾಕರ ಮಾತಿನಲ್ಲಿ, ‘ಶೂದ್ರ ತಪಸ್ವಿ’ಗೆ ಅಪಸ್ವರ ಎತ್ತಿದ ಮಾಸ್ತಿಯವರಲ್ಲಿನ ಅಸಹನೆಯೇ ನವ್ಯರ ಬ್ರಾಹ್ಮಣ್ಯದಲ್ಲೂ ಮುಂದುವರೆದಿತ್ತು. ತಮ್ಮ ಸುತ್ತಲಿನ ಇಂತಹ ಬೆಳವಣಿಗೆಗಳಿಂದಲೇ ಕುವೆಂಪು, ’ಹೊಸತು ಎನ್ನುವ ಮಾತು ಕಾಲಕ್ಕೆ ಮಾತ್ರವಲ್ಲ ಆತ್ಮಕ್ಕೂ ಅನ್ವಯಿಸುತ್ತದೆ, ವ್ಯಕ್ತಿಗೆ ಮಾತ್ರವಲ್ಲ ತತ್ವಗಳಿಗೂ ಅನ್ವಯಿಸುತ್ತದೆ’ ಎಂದಿರುವುದು. ‘ಕವಿ ಹೊಸತಿನ ಶಿಖರದಲ್ಲಿ ನಿಂತು ತನ್ನೊಂದು ಕೈಯನ್ನು ಪ್ರಾಚೀನದ ಗೋರಿಯೊಳಕ್ಕೂ, ಮತ್ತೊಂದು ಕೈಯನ್ನು ಭವಿಶ್ಯತ್ತಿನ ಅವ್ಯಕ್ತಗರ್‍ಭದ ಕಡೆಗೂ ಚಾಚಿಚಾಚಿ ತಡವುತ್ತಿರುತ್ತಾನೆ. ಇಂತವನಿಂದ ಕಾವ್ಯರಚನೆ, ರಾಶ್ಟ್ರನಿರ್‍ಮಾಣ, ಮತಸ್ಥಾಪನೆ, ವಿಜ್ಞಾನ, ಸಂಶೋಧನೆ ಏನುಬೇಕಾದರೂ ಆಗಬಹುದು. ಬುದ್ಧ, ಅಶೋಕ, ಪಂಪ, ಐನ್‌ಸ್ಟೀನ್, ಏಸುಕ್ರಿಸ್ತರೂ ಆಗಬಹುದು. ರಾಜಕೀಯ ಆಸಕ್ತಿಯಿಂದ ನಾವೆಲರೂ ಬೇಧಭಾವವನ್ನು ಅಳಿದು ಒಗ್ಗಟ್ಟಾಗಬೇಕು. ಎಲ್ಲರು ಸಮಾನ ಕಾರಣರು, ಸಮಾನ ಪಾಲುದಾರರು ಆಗಬೇಕು’ ಎನ್ನುವುದು ದಿಟದ ಸಾಮಾಜಿಕ ಚಿಂತಕ-ಬರೆಹಗಾರ ಕುವೆಂಪು ಅವರ ನಿಕರವಾದ ನಿಲುವು. ಹೀಗಾಗಿ ಕನ್ನಡ ಜಗತ್ತಿನಲ್ಲಿ ಕುವೆಂಪು ತಮ್ಮನ್ನು ಕಂಡುಕೊಂಡಿರುವುದು ಸಾಮಾಜಿಕ ಹೋರಾಟಗಾರನ ಹೊಣೆಗಾರಿಕೆಯ ನಡೆಯುಳ್ಳ ಒಬ್ಬ ಚಿಂತಕನನ್ನಾಗಿ.

ಡಾ. ಆರ್.ಚಲಪತಿ

ಡಾ. ಆರ್.ಚಲಪತಿ
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ’, ’ಕುವೆಂಪು ಬರಹಗಳ ಓದಿನ ರಾಜಕಾರಣ’, ’ರೈತ-ಕಾರ್ಮಿಕ ಓದು’, ’ಕನ್ನಡ ಸಂಸ್ಕೃತಿಯ ಓದಿನ ಬಗೆಗಳು’ ಅವರ ಕೆಲವು ಪ್ರಕಟಿತ ಪುಸ್ತಕಗಳು.


ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...