ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 90,928 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದು ಬುಧವಾರ ದಾಖಲಾಗಿದ್ದ 58,097 ಪ್ರಕರಣಗಳಿಗಿಂತ ಶೇಕಡಾ 55 ರಷ್ಟು ಹೆಚ್ಚಾಗಿದೆ.
ದೇಶದಲ್ಲಿ 2,630 ಓಮಿಕ್ರಾನ್ ರೂಪಾಂತರ ಸೋಂಕಿನ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 653 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, ದೆಹಲಿಯಲ್ಲಿ 464 ಓಮಿಕ್ರಾನ್ ಪ್ರಕರಣಗಳಿವೆ.
ಚೇತರಿಕೆಯ ಪ್ರಮಾಣವು ಪ್ರಸ್ತುತ ಶೇಕಡಾ 97.81 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 19,206 ಜನರು ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ 3,43,41,009.
ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೂಪಾಂತರವು ದೇಶದ 26 ರಾಜ್ಯಗಳಿಗೆ ಹರಡಿದೆ. ಓಮಿಕ್ರಾನ್‌ನಿಂದಾಗಿ ರಾಜಸ್ಥಾನದಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ವರದಿಯಾಗಿದೆ. ಇದು ದೇಶದಲ್ಲಿ ಮೊದಲ ಓಮಿಕ್ರಾನ್ ಸಾವಾಗಿದೆ. ಮೃತ ವ್ಯಕ್ತಿ ಸಂಪೂರ್ಣವಾಗಿ ಲಸಿಕೆ ಪಡೆದಿದ್ದರು. ಯಾವುದೇ ಪ್ರಯಾಣದ ಇತಿಹಾಸ ಹೊಂದಿಲ್ಲ ಎಂದು ಸರ್ಕಾರದ ಅಧಿಕೃತ ಮಾಹಿತಿ ತಿಳಿಸಿದೆ.
ಇದನ್ನೂ ಓದಿ: ಪಂಜಾಬ್: ಪ್ರಧಾನಿ ಕಾರ್ಯಕ್ರಮ ರದ್ದು; ಏನಂತಾರೆ ನೆಟ್ಟಿಗರು?
ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಹಲವಾರು ರಾಜ್ಯಗಳು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂನಂತಹ ನಿರ್ಬಂಧಗಳನ್ನು ಘೋಷಿಸಿವೆ.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 26,538 ಹೊಸ ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 14,022 ಸೋಂಕುಗಳನ್ನು ವರದಿ ಮಾಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಒಂದೇ ದಿನ 10,665 ಕೇಸ್‌ಗಳು ವರದಿಯಾಗಿವೆ. ಮೇ 12 ರಿಂದ ದೈನಂದಿನ ಪ್ರಕರಣಗಳಲ್ಲಿ ದಾಖಲಾದ ಅತಿದೊಡ್ಡ ಏರಿಕೆಯಾಗಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4,246 ಪ್ರಕರಣ ದಾಖಲಾಗಿದ್ದು, ಬೆಂಗಳೂರಿನಲ್ಲಿ 3,605 ಪ್ರಕರಣಗಳು ವರದಿಯಾಗಿವೆ.


