ಪ್ರಮುಖ ಸಾಮಾಜಿಕ ಮಾಧ್ಯಮಗಳನ್ನು ಹೈಜಾಕ್ ಮಾಡಲು ಮತ್ತು ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬೈಪಾಸ್ ಮಾಡಲು ಬಿಜೆಪಿಯು “ಟೆಕ್ ಫಾಗ್” ಎಂಬ ರಹಸ್ಯವಾದ ಅಪ್ಲಿಕೇಶನ್ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬರಬೇಕು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.
ಬಿಜೆಪಿಯು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಸಂದೇಶಗಳನ್ನು ಮತ್ತು ಕಾರ್ಯಸೂಚಿಯನ್ನು ಹೆಚ್ಚಿಸಿಕೊಳ್ಳಲು, ಮಹಿಳಾ ಪತ್ರಕರ್ತರು ಸೇರಿದಂತೆ ಬಲಪಂಥೀಯ ರಾಜಕಾರಣದ ವಿರುದ್ಧ ಇರುವವರನ್ನು ಟಾರ್ಗೆಟ್ ಮಾಡಲು ಈ ಅಪ್ಲಿಕೇಶನ್ ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನಾಥೆ ಆರೋಪಿಸಿದ್ದಾರೆ.
ದಿ ವೈರ್‌ನ ಎರಡು ವರ್ಷಗಳ ತನಿಖೆಯು ರಹಸ್ಯ ಅಪ್ಲಿಕೇಶನ್‌ನ ಕಾರ್ಯನಿರ್ವಹಣೆಯನ್ನು ಬಹಿರಂಗಪಡಿಸಿದೆ. ಟ್ವಿಟರ್‌ನ ‘ಟ್ರೆಂಡಿಂಗ್’ ವಿಭಾಗವನ್ನು ಮತ್ತು ಫೇಸ್‌ಬುಕ್‌ನಲ್ಲಿನ ‘ಟ್ರೆಂಡ್’ ಅನ್ನು ಹೈಜಾಕ್ ಮಾಡಬಹುದು, ‘ನಿಷ್ಕ್ರಿಯ’ ವಾಟ್ಸ್‌ಅಪ್ ಖಾತೆಗಳನ್ನು ಉದ್ದೇಶಿತ ಕಿರುಕುಳಕ್ಕಾಗಿ ಬಳಸಬಹುದು ಎಂಬುದನ್ನು ತನಿಖಾ ವರದಿ ಹೊರಹಾಕಿದೆ.
“ಸರ್ಕಾರವು ನಿಸ್ಸಂಶಯವಾಗಿ ಟೆಕ್ ಫಾಗ್‌ನೊಂದಿಗೆ ಕೈಜೋಡಿಸಿದೆ. ಬಿಜೆಪಿ ವಿಶೇಷವಾಗಿ ಟೆಕ್ ಫಾಗ್‌ನೊಂದಿಗಿದೆ. ಆದರೆ ಭಾರತದ ಐಟಿ ಮತ್ತು ದೂರಸಂಪರ್ಕ ಸಚಿವರು ಏನು ಮಾಡುತ್ತಿದ್ದಾರೆ? ಸಮಸ್ಯೆ ಎಷ್ಟು ಗಂಭೀರವಾಗಿದ್ದರೂ ಸಚಿವಾಲಯ ಏಕೆ ಎಚ್ಚೆತ್ತುಕೊಂಡಿಲ್ಲ?” ಸುಪ್ರಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಪತ್ರಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ ಜನರ ಮೇಲೆ ಕಣ್ಣಿಡಲು ಪೆಗಾಸಸ್ ಅನ್ನು ಬಳಸುವ ಬಗ್ಗೆ ಸರ್ಕಾರವು ಮೌನವಾಗಿದೆ. ಸುಪ್ರೀಂ ಕೋರ್ಟ್ ಪೆಗಾಸಸ್ ವಿವಾದವನ್ನು ವಿಚಾರಣೆ ಮಾಡುತ್ತಿದೆ ಎಂದಿರುವ ಅವರು, ಟೆಕ್ ಫಾಗ್ ಪ್ರಕರಣವನ್ನೂ ಹೀಗೆಯೇ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
“ನಾನು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸುತ್ತೇನೆ. ಸುಪ್ರಿಂ ಕೋರ್ಟ್ ಈಗಾಗಲೇ ಪೆಗಾಸಸ್ ವಿಷಯವನ್ನು ಪರಿಶೀಲಿಸುತ್ತಿದೆ. ಈ ವರದಿಯು ಭಾರತೀಯ ನಾಗರಿಕರನ್ನು ಟಾರ್ಗೆಟ್ ಮಾಡಿದೆ. ನಮ್ಮ ಪ್ರಜಾಪ್ರಭುತ್ವದ ತಳಹದಿಯನ್ನೇ ಘಾಸಿಗೊಳಿಸುವುದರಿಂದ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ನೋಡಬೇಕು” ಅವರು ಹೇಳಿದ್ದಾರೆ.
“ಭಾರತದ ಪ್ರಜಾಪ್ರಭುತ್ವವನ್ನು ಕಸಿದುಕೊಳ್ಳುವ ಹಕ್ಕು ಅಥವಾ ಸ್ವಾತಂತ್ರ್ಯ ಯಾರಿಗೂ ಇರಬಾರದು ಎಂಬ ಕಾರಣಕ್ಕಾಗಿ ನಾನು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು. ಇದರ ಹಿಂದೆ ಇರುವವರನ್ನು ಶಿಕ್ಷಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಕೆಲವು ಪದಾಧಿಕಾರಿಗಳು ಈ ಅಪ್ಲಿಕೇಷನ್‌ನ ಭಾಗವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿಯು ಈ ವಿಷಯದ ಬಗ್ಗೆ ಸ್ಪಷ್ಟವಾಗಿರಬೇಕು ಎಂದು ತಿಳಿಸಿದ್ದಾರೆ.
ದಿ ವೈರ್ ಜೊತೆ ಮಾತನಾಡಿರುವ ಯುವ ಮೊರ್ಚಾದ ನಾಯಕರೊಬ್ಬರು, ಬಿಜೆಪಿ ಆ್ಯಪ್ ಬಳಸಿರುವುದನ್ನು ನಿರಾಕರಿಸಿದ್ದಾರೆ.
ಕರೋನವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ವಿಧಿಸಿದ ನಂತರ ಕಾಂಗ್ರೆಸ್ ಪಕ್ಷವು ಕಾರ್ಮಿಕರೊಂದಿಗೆ ನಿಂತಿತು. ಆಗ ಹ್ಯಾಶ್‌ಟ್ಯಾಗ್ ಬಳಸಿ ಕಾಂಗ್ರೆಸ್ ಅನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲು ಟೆಕ್ ಫಾಗ್ ಅಪ್ಲಿಕೇಷನ್ ಬಳಸಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಆರೋಪಿಸಿದ್ದಾರೆ.
ತಬ್ಲೀಘಿ ಜಮಾತ್‌ನ ಮೇಲೆಯೂ ವ್ಯವಸ್ಥಿತ ದಾಳಿಯನ್ನು ಟೆಕ್ ಫಾಗ್ ಮಾಡಿದೆ. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಯಾಕೆಂದರೆ ಇದು ಭಾರತದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ನೋವುಂಟು ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ಅವರು ರಹಸ್ಯ ಅಪ್ಲಿಕೇಶನ್ ಕುರಿತ ಚರ್ಚೆಗಾಗಿ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯನ್ನು ಕೇಳಿದ್ದಾರೆ. ಟೆಕ್ ಫಾಗ್ ವಿಷಯವು ಗಂಭೀರವಾಗಿದ್ದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್ ಹೆಸರು ‘Tek Fog’: ‘ದಿ ವೈರ್’ ಸ್ಪೋಟಕ ವರದಿ


