ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ದೆಹಲಿಯಲ್ಲಿ ಯಾವುದೇ ಲಾಕ್‌ಡೌನ್ ಇಲ್ಲ’ ಎಂದು ಮಂಗಳವಾರ ಹೇಳಿದ್ದಾರೆ. ದೆಹಲಿಯಲ್ಲಿ ಕೊರೊನಾ ಪಾಸಿಟಿವಿಟಿ ದರವು ಏಳು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, 25% ದಷ್ಟಿದೆ.
ಕೊರೊನಾ ಪ್ರಕರಣಗಳ ಏರಿಕೆಯ ಕುರಿತು ಮಾತನಾಡಿದ ಕೇಜ್ರಿವಾಲ್, “ಭಯಪಡಬೇಡಿ, ನಾವು ಲಾಕ್‌ಡೌನ್ ಅನ್ನು ವಿಧಿಸುವುದಿಲ್ಲ” ಎಂದು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ದೆಹಲಿಯಲ್ಲಿ ಇಂದು ಸುಮಾರು 22,000 ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ಕೊರೊನಾ ಉಲ್ಭಣ: ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ?
ದೆಹಲಿಯಲ್ಲಿ ಈಗಾಗಲೆ ಎಲ್ಲಾ ಖಾಸಗಿ ಕಚೇರಿಗಳನ್ನು ಮುಚ್ಚಲು ಮತ್ತು ಅಲ್ಲಿನ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುವಂತೆ ಆದೇಶಿಸಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವವರಿಗೆ ಮಾತ್ರ ಹೊಸ ನಿಯಮದಿಂದ ವಿನಾಯಿತಿ ಪಡೆಯಲಿದ್ದಾರೆ ಎಂದು ದೆಹಲಿ ವಿಪತ್ತು ನಿರ್ವಹಣಾ ಸಂಸ್ಥೆ (ಡಿಡಿಎಂಎ) ಸಭೆ ನಿರ್ಧರಿಸಿದೆ. ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ಸಹ ಮುಚ್ಚಲಾಗಿದ್ದು, ಪಾರ್ಸೆಲ್ ಮತ್ತು ಹೋಮ್ ಡೆಲಿವರಿಗಳನ್ನು ಮಾತ್ರ ಅನುಮತಿಸಲಾಗಿದೆ.
“ನಗರದಲ್ಲಿ ಮುಂದಿನ 48 ಗಂಟೆಗಳಲ್ಲಿ ಅಥವಾ ಈ ವಾರದಲ್ಲಿ ಪ್ರಕರಣಗಳು ಖಂಡಿತಾ ಗರಿಷ್ಠಗೊಳ್ಳಬಹುದು” ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಸೋಮವಾರ ಹೇಳಿದ್ದರು. ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದ್ದರೂ ಮತ್ತೊಂದು ಕರ್ಫ್ಯೂ ಸಾಧ್ಯ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ:ಕೊರೊನಾ: ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 12 ಸಾವಿರ ಕೇಸ್, ಬೆಂಗಳೂರಿನಲ್ಲಿ 9 ಸಾವಿರ ಪ್ರಕರಣ
“ಪ್ರಕರಣದ ಉತ್ತುಂಗ(ಪೀಕ್) ಈಗಾಗಲೇ ತಲುಪಿದೆ ಅಥವಾ ಒಂದೆರೆಡು ದಿನಗಳಲ್ಲಿ ತಲುಪಲಿದೆ. ಈ ವಾರ ಖಂಡಿತವಾಗಿ ಪೀಕ್ ಆಗುತ್ತದೆ. ಅದರ ನಂತರ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಆದರೆ ಜನರು ಎಚ್ಚರ ತಪ್ಪದಂತೆ ನೆನಪಿಸಲು ನಾವು ಮತ್ತೊಂದು ಕರ್ಫ್ಯೂ ಅನ್ನು ಜಾರಿಗೊಳಿಸುವ ಸಾಧ್ಯತೆಯಿದೆ” ಎಂದು ಸತ್ಯೇಂದ್ರ ಸೋಮವಾರ ತಿಳಿಸಿದ್ದರು.
ಖಾಸಗಿ ಬ್ಯಾಂಕ್‌ಗಳು, ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳು, ವಿಮಾ ಕಂಪನಿಗಳು, ಫಾರ್ಮಾ ಕಂಪನಿಗಳು, ಮೈಕ್ರೋಫೈನಾನ್ಸ್ ಕಂಪನಿಗಳು, ವಕೀಲರ ಕಚೇರಿಗಳು ಮತ್ತು ಕೊರಿಯರ್ ಸೇವೆಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ: ಹೊಸ ಕೊರೊನಾ ಮಾರ್ಗಸೂಚಿಯಲ್ಲಿ ಏನೇನಿದೆ?


