ವಾಮಾಚಾರ ನಡೆಸಿ ಇನ್ನೊಬ್ಬ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಹಿರಿಯ ಮಹಿಳೆಯನ್ನು ಅಮಾನುಷವಾಗಿ ಥಳಿಸಿ, ಸಜೀವವಾಗಿ ಸುಟ್ಟು ಹಾಕಲು ಬೆಂಕಿ ಹಚ್ಚಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
ಸಿಮ್ಡೆಗಾ ಸಮೀಪದ ಕುಡ್ಪಾನಿ ಹಳ್ಳಿಯಲ್ಲಿ ಕೆಲವು ಜನರು ಬುಧವಾರ ಸಂಜೆ ಹಿರಿಯ ಮಹಿಳೆಯನ್ನು ಅಮಾನುಷವಾಗಿ ಥಳಿಸಿ, ಒಣಹುಲ್ಲಿನ ಬಣವೆಯ ಮೇಲೆ ತಳ್ಳಿದ್ದಾರೆ. ಬಳಿಕ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಮಹಿಳೆಯ ಆಕ್ರಂದನ ಕೇಳಿ ಸ್ಥಳಕ್ಕಾಗಮಿಸಿದ ಇತರ ಗ್ರಾಮಸ್ಥರು ಮಹಿಳೆಯನ್ನು ರಕ್ಷಿಸಿದ್ದಾರೆ.
ಥೇತೈತಂಗಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಡ್ಪಾನಿ ಗ್ರಾಮದಲ್ಲಿ, ಫ್ಲಾರೆನ್ಸ್ ಡೆಂಗ್‌ಡುಂಗ್ ಎಂಬುವರ ಪತ್ನಿಯ ಮರಣದ ನಂತರ ಆಯೋಜಿಸಲಾದ ಔತಣಕೂಟಕ್ಕೆ ಮಹಿಳೆ ಜಾರಿಯೋ ದೇವಿ ಎಂಬುವರನ್ನು ಆಹ್ವಾನಿಸಲಾಗಿತ್ತು. ಆದರೆ, ಔತಣಕೂಟದಲ್ಲಿ ಫ್ಲಾರೆನ್ಸ್ ಡೆಂಗ್‌ಡುಂಗ್ ಪತ್ನಿಯ ಸಾವಿಗೆ ಆಕೆಯ ಕಾರಣರು ಎಂದು ಹೇಳಿ ಹಲ್ಲೆ ಮಾಡಲಾಗಿದೆ.
ಇದನ್ನೂ ಓದಿ: ವಾಮಾಚಾರ ಶಂಕೆ: ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಜೀವಂತ ಸುಟ್ಟ ಸಂಬಂಧಿಕರು!
“ಫ್ಲಾರೆನ್ಸ್ ಡೆಂಗ್‌ಡುಂಗ್ ಅವರ ಹೆಂಡತಿಯ ಮರಣದ ನಂತರ ಆಯೋಜಿಸಲಾದ ಔತಣಕೂಟಕ್ಕೆ ಹಾಜರಾಗಲು ನನ್ನ ಅತ್ತೆ ಮತ್ತು ಮಾವ ಅವರನ್ನು ಆಹ್ವಾನಿಸಲಾಗಿತ್ತು. ಔತಣಕ್ಕೆಂದು ಸ್ಥಳಕ್ಕೆ ಬಂದ ಆಕೆಯನ್ನು ಮಾಟಮಂತ್ರ ಮಾಡುತ್ತಿದ್ದಾರೆ ಎಂದೂ, ತನ್ನ ಪತ್ನಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತ ವೃದ್ಧೆಯ ಸೊಸೆ ತಿಳಿಸಿದ್ದಾರೆ.
“ನನ್ನ ಅತ್ತೆ ಅವರನ್ನು ವಿರೋಧಿಸಿದಾಗ, ಸುಮಾರು 8 ರಿಂದ 10 ಜನರು ಅವರನ್ನು ಒಣಹುಲ್ಲಿನ ಮೇಲೆ ಎಸೆದು ಬೆಂಕಿ ಹಚ್ಚಿದರು. ಗದ್ದಲವನ್ನು ಕೇಳಿದ ನಂತರ ಆಕೆಯ ಪತಿ ಮತ್ತು ಇತರ ಗ್ರಾಮಸ್ಥರು ಅಲ್ಲಿಗೆ ಆಗಮಿಸಿ ಬೆಂಕಿಯನ್ನು ನಂದಿಸಿ ವೃದ್ಧೆಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ನನ್ನ ಅತ್ತೆ ತೀವ್ರವಾಗಿ ಗಾಯಾಳುವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಜೀವಕ್ಕಾಗಿ ಹೋರಾಡುತ್ತಿದ್ದಾರೆ.” ಎಂದು ಜಾರಿಯೋ ದೇವಿಯ ಸೊಸೆ ಹೇಳಿದ್ದಾರೆ.
ಇದೇ ವೇಳೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. “ನಾವು ಫ್ಲಾರೆನ್ಸ್ ಡೆಂಗ್‌ಡುಂಗ್, ಸಿಲ್ಬಿಯಸ್ ಡೆಂಗ್‌ಡುಂಗ್, ರವಿ ಸೊರೆಂಗ್, ಹೇಮಂತ್ ತೆತೆ ಮತ್ತು ಜ್ಯೋತಿ ತೆತೆ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಥೇತೈತಂಗರ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಇಂದ್ರೇಶ್ ಕುಮಾರ್ ಹೇಳಿದ್ದಾರೆ.


