Homeಮುಖಪುಟಹಾಡಿನ ಗಾರುಡಿಗ ಬಸವಲಿಂಗಯ್ಯ ಹಿರೇಮಠ (1969-2022)

ಹಾಡಿನ ಗಾರುಡಿಗ ಬಸವಲಿಂಗಯ್ಯ ಹಿರೇಮಠ (1969-2022)

- Advertisement -
- Advertisement -

ಕನ್ನಡ ಜಾನಪದದ ಸಾಹಿತ್ಯಿಕ ಪ್ರಕಾರದ ಹಲವು ಮಗ್ಗಲುಗಳನ್ನು ವಿಶ್ವಕ್ಕೆ ಪರಿಚಯಿಸಿದ ಬಸವಲಿಂಗಯ್ಯನವರದು ಅಪೂರ್ವ ಪ್ರತಿಭೆ. ಅವರಿಗೆ ಜಾನಪದ ಗೊತ್ತಿತ್ತು ಅನ್ನುವುದಷ್ಟೇ ಅಲ್ಲ, ಅವರು ಜಾನಪದವನ್ನು ಬದುಕಿಸಿದರು ಮತ್ತು ಅದನ್ನು ಮುಂದಿನ ತಲೆಮಾರಿಗೆ ದಾಟಿಸಲು ಕೆಲಸ ಮಾಡಿದರು. ಇಂತಹವರು ನಮ್ಮಲ್ಲಿ ಬಹಳ ವಿರಳ.

ಹಾಗೆ ನೋಡಿದರೆ, ಕನ್ನಡ ಜಾನಪದ ಅಧ್ಯಯನಕ್ಕೆ ಸುದೀರ್ಘವಾದ ಮತ್ತು ವರ್ಣರಂಜಿತವಾದ ಇತಿಹಾಸವಿದೆ. ಅದು 1790ರ ದಶಕದಲ್ಲಿ ಲೆ ಕ ಮೆಕೆಂಜಿಯಿಂದ ಆರಂಭವಾಗಿ ಮುಂದೆ ಬಹಳ ವಿಸ್ತಾರವಾಗಿ ಬೆಳೆಯಿತು. ಈ ಕೆಲಸಗಳಲ್ಲಿ ಜನಪದ ಗೀತೆಗಳಿಗೆ ಹೆಚ್ಚಿನ ಪ್ರಾಧಾನ್ಯ ದೊರೆತಿದೆ. ಎರಡನೆಯ ಸ್ಥಾನ ಪ್ರದರ್ಶನ ಕಲೆಗಳಿಗೆ. 1920 ಮತ್ತು 30ರ ದಶಕದಲ್ಲಿ ಕನ್ನಡ ಜಾನಪದ ಕ್ಷೇತ್ರದಲ್ಲಿ ದುಡಿದ ಹೆಚ್ಚಿನವರು ಕನ್ನಡ ಸಾಹಿತಿಗಳೇ ಆದುದರಿಂದ ಸಹಜವಾಗಿ ಗೀತೆಗಳ ಕಡೆಗೆ ಹೆಚ್ಚು ಗಮನ ಹರಿದಿದೆ. ಉತ್ತರ ಕರ್ನಾಟಕದ ಪ್ರಸಿದ್ಧ ಗಾಯಕರು ಜನಪದ ಹಾಡುಗಳನ್ನು ಮೂಲೆಗೊತ್ತಲಿಲ್ಲ. ಹೊಸಗನ್ನಡ ಸಾಹಿತ್ಯದ ಉಗಮಕ್ಕೆ ಕಾರಣರಾದ ಬಿ ಎಂ ಶ್ರೀಕಂಠಯ್ಯನವರು ಜನಪದ ಗೀತೆಗಳ ಬಗ್ಗೆ ಮೆಚ್ಚುಗೆಯಿಂದ ಬರೆದಿದ್ದರು. ಗರತಿಯ ಹಾಡಿಗೆ ಮುನ್ನುಡಿ ಬರೆಯುತ್ತಾ ಅವರು ’ಜನವಾಣಿ ಬೇರು ಕವಿವಾಣಿ ಹೂವು- ಎಂಬ ಪ್ರಸಿದ್ಧ ಮಾತನ್ನು ಬರೆದರು. ಕನ್ನಡದ ಮೊಟ್ಟಮೊದಲ ಜನಪದ ಗೀತೆಗಳ ಸಂಕಲನ ಗರತಿಯ ಹಾಡನ್ನು 1931ರಲ್ಲಿ ಹೊರತಂದವರು ಹಲಸಂಗಿ ಸೋದರರಾದ ಕಾಪಸೆ ರೇವಪ್ಪ, ಮಧುರಚೆನ್ನ, ಮತ್ತು ಸಿಂಪಿ ಲಿಂಗಣ್ಣನವರು. ಉತ್ತರ ಕರ್ನಾಟಕದ ಜನಪದ ಗೀತೆಗಳ ಬಹುಸತ್ತ್ವಯುತವಾದ ಭಾಗ ಈ ಸಂಕಲನದ ಮೂಲಕ ಓದುಗರಿಗೆ ದೊರೆಯಿತು. ಗರತಿಯ ಹಾಡಿನ ರೀತಿಯಲ್ಲಿಯೇ ಜನಪ್ರಿಯವಾದ ಇನ್ನೊಂದು ಜನಪದ ಗೀತೆಗಳ ಸಂಕಲನವೆಂದರೆ, ಗೆಳೆಯರ ಗುಂಪಿನ ರೇವಪ್ಪನವರು ಸಂಗ್ರಹಿಸಿದ ’ಮಲ್ಲಿಗೆ ದಂಡೆ’ (1935). ಇದು ಜನಪದ ಗೀತೆಗಳ ಸಂಕಲನಗಳಲ್ಲಿ ಉತ್ತಮ ಕೃತಿ. ವಿವಿಧ ಧಾಟಿಗಳ, ವಿವಿಧ ಛಂದಸ್ಸುಗಳ ವೈವಿಧ್ಯಮಯ ಗೀತೆಗಳನ್ನು ಈ ಸಂಕಲನದಲ್ಲಿ ರೇವಪ್ಪನವರು ಸೇರಿಸಿದರು.

ಹಲಸಂಗಿ ಸೋದರರಲ್ಲೊಬ್ಬರಾದ ಸಿಂಪಿ ಲಿಂಗಣ್ಣನವರು ಧೂಲಾಸಾಹೇಬರೊಡನೆ ಕಲೆತು ಹೊರತಂದ ’ಜೀವನಸಂಗೀತ’ ಕನ್ನಡ ಜನಪದ ಗೀತೆಗಳ ಒಂದು ಉತ್ಕೃಷ್ಟ ಪರಂಪರೆಯನ್ನು ಪರಿಚಯ ಮಾಡಿಕೊಡುತ್ತದೆ. ಅಲ್ಲದೆ ಅತ್ಯುತ್ತಮ ಲಾವಣಿಗಳನ್ನು ಪ್ರಥಮ ಬಾರಿಗೆ ಇಲ್ಲಿ ಕಾಣಬಹುದಾಗಿದೆ. ಕಲ್ಕಿ-ತುರಾಯಿ ಅಥವಾ ಹರದೇಶಿ-ನಾಗೇಶಿ ಸಂಪ್ರದಾಯದ ಈ ಹಾಡುಗಳು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಲಾವಣಿಗಳ ಶಕ್ತಿವತ್ತಾದ ಶೈಲಿ, ನಿರೂಪಣಾ ಕೌಶಲ ಮತ್ತು ಅದ್ಭುತ ಕಲ್ಪನೆಗಳಿಂದ ಕೂಡಿವೆ. ಉತ್ತರ ಕರ್ನಾಟಕದ ಪ್ರಾತಿನಿಧಿಕ ಸಂಕಲನಗಳಾಗಿ ಹೊರಬಂದ ಮೇಲಿನ ಮೂರು ಗ್ರಂಥಗಳು ನಾಡಿನಾದ್ಯಂತ ಜನಪದ ಸಾಹಿತ್ಯದ ಬಗ್ಗೆ ವಿಶೇಷವಾದ ಗೌರವ, ಆದರಗಳು ಮೂಡಲು ಪ್ರೇರಕವಾದುವು. ಮುಂದೆ ವಿಠೋಬ ವೆಂಕಟನಾಯಕ ತೊರ್ಕೆಯವರ ’ಹಳ್ಳಿಯ ಹಾಡುಗಳು’, ಅರ್ಚಕ ಬಿ. ರಂಗಸ್ವಾಮಿಯವರ ’ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು’, ಗೋರೂರರ ’ಹಳ್ಳಿ ಹಾಡುಗಳು’ (1938), ಎನ್. ಅನಂತರಂಗಾಚಾರ್ಯರ ’ಮಾನವಮಿಯ ಚೌಪದ’ (1940), ಮತಿಘಟ್ಟ ಸೋದರರ ’ನಾಡಪದಗಳು’ – ಮೊದಲಾದ ಮಹತ್ವದ ಕೃತಿಗಳು ಪ್ರಕಟವಾದುವು. ಈ ಕೃತಿಗಳು ಬಸವಲಿಂಗಯ್ಯನವರ ಶಕ್ತಿಮೂಲಗಳಾಗಿದ್ದುವು. ಅವುಗಳಲ್ಲಿನ ಬಹುತೇಕ ಎಲ್ಲ ಹಾಡುಗಳೂ
ಅವರಿಗೆ ಬಾಯಿಪಾಠ ಬರುತ್ತಿದ್ದುವು.

ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರಿನಲ್ಲಿ ಹುಟ್ಟಿ ಬೆಳೆದು ಜಾನಪದದಲ್ಲಿ ಎಂಎ ಪದವಿ ಪಡೆದ ಬಸವಲಿಂಗಯ್ಯನವರು ಮೇಲಿನ ಎಲ್ಲಾ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳ ಸತ್ತ್ವವನ್ನು ಹೀರಿ ಬೆಳೆದರು. ಅವರ ಕಿವಿಗೆ ದಿನಾಲು ಬೀಳುತ್ತಿದ್ದ ಹಾಡುಗಳ ಲಯವನ್ನು ಅವರು ಬಹಳ ಬೇಗ ಹಿಡಕೊಂಡರು. ಜಾನಪದದ ಅನೇಕ ಮುಖಗಳಲ್ಲಿ ಜನಪದ ಸಾಹಿತ್ಯಕ್ಕೆ ವಿಶೇಷ ಮನ್ನಣೆ ಇರುವುದನ್ನು ನಾವು ಬಲ್ಲೆವು. ವಿಸ್ತಾರವಾದ ಜನಪದ ಸಾಹಿತ್ಯದಲ್ಲಿ ಮತ್ತೆ ಗೀತೆಗಳಿಗೆ ಅಗ್ರಸ್ಥಾನ ಸಲ್ಲುತ್ತದೆ. ಭಾಷೆ ಮತ್ತು ಸಂಗೀತದ ಸಹಚರ್ಯದಲ್ಲಿ ಸೊಗಸಾಗಿ ಒಡಮೂಡುವ ಜನಪದ ಗೀತೆಗಳು ಮಾನವನ ಭಾವಾಭಿವ್ಯಕ್ತಿಯಲ್ಲಿ ಪ್ರಧಾನ ಸ್ಥಾನ ವಹಿಸಿವೆ. ಈ ಕುರಿತು ಡಾ. ಜವರೇಗೌಡರು ಹೀಗೆ ಹೇಳಿದ್ದಾರೆ: “ಮಾನವನ ಭಾವೋತ್ಕರ್ಷದ ಮತ್ತು ಸಹಜ ಚಟುವಟಿಕೆಗಳ ಪರಿಣಾಮವಾಗಿ ಗೀತೆಗಳು ಉದಯವಾದುವೆನ್ನಬಹುದು. ಅವನ ಅನುಭವಕೋಶ ಹಿಗ್ಗಿ ಜ್ಞಾನ ಪ್ರಪಂಚ ವಿಶಾಲವಾದಂತೆಲ್ಲಾ ಅವುಗಳ ಗುಣಗಾತ್ರ ವೈವಿಧ್ಯಗಳು ಅಸೀಮವಾಗಿ ವೃದ್ಧಿಹೊಂದಿದವು. ಅವನ ಕ್ರಿಯೆಗೂ ಗೀತೆಗೂ ಸಾವಯವ ಸಂಬಂಧವೊದಗಿತು. ಗೀತೆಗಳೆಲ್ಲ ಕ್ರಿಯಾರ್ಥಕವಾದುವು. ಕ್ರಿಯೆಗೆ ಗೀತೆ ಚೋದಕವಾದರೆ, ಗೀತಾಸೃಷ್ಟಿಗೆ ಕ್ರಿಯೆಯಿಂದ ಸ್ಫೂರ್ತಿ ದೊರೆಯುವಂತಾಯಿತು. ಆದ್ದರಿಂದ
ಮಾನವನ ಮೂಲ ಪ್ರವೃತ್ತಿ ಹಾಗೂ ಸಂಸ್ಕೃತಿಯನ್ನು ಗುರುತಿಸಬೇಕಾದರೆ ಜಾನಪದ ಗೀತೆಗಳಿಗೆ ಶರಣಹೋಗಬೇಕಾಗುತ್ತದೆ”. ಹೀಗೆ ಜನಪದ ಗೀತೆಗಳು ಮಾನವನ ಭಾವನೆ ಮತ್ತು ಕ್ರಿಯೆಗಳೊಂದಿಗೆ ಸಂಬಂಧ ಹೊಂದಿವೆ. ಬಸವಲಿಂಗಯ್ಯ ಹಿರೇಮಠರು ಮುಂದೆ ಈ ಗೀತೆಗಳ ದೊಡ್ಡ ಪ್ರಸಾರಕರಾಗಿ ಕನ್ನಡ ಜಾನಪದ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿಬಿಟ್ಟರು.

ಅವರು ಮಾಡಿದ ಕೆಲಸಗಳು ಇತರ ಜಾನಪದ ವಿದ್ವಾಂಸರು ಮಾಡಿದ ಕೆಲಸಗಳಿಗಿಂತ ಭಿನ್ನ ಎಂಬುದನ್ನು ಎಚ್ಚರದಿಂದ ಗಮನಿಸಬೇಕು. ಜಾನಪದ ವಿದ್ವಾಂಸರು, ತಮ್ಮ ಅಧ್ಯಯನಗಳಲ್ಲಿ ಜಾನಪದದ ವಿವಿಧ ಅಂಗಗಳನ್ನು ಪರಿಶೀಲಿಸಿ, ಯಾವಯಾವ ವಿಷಯಗಳನ್ನು ಸಂಗ್ರಹಿಸಬೇಕು, ಅವನ್ನು ಹೇಗೆ ವೈಜ್ಞಾನಿಕವಾಗಿ ವಿಂಗಡಿಸಿಕೊಳ್ಳಬೇಕು, ಪ್ರತಿ ಜಾನಪದ ವಸ್ತು ವಿಷಯಗಳ ಮೂಲವನ್ನು, ಅರ್ಥವನ್ನು, ಪ್ರಯೋಜನ ಹಾಗೂ ಇತಿಹಾಸವನ್ನು ಗುರುತಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಇತ್ಯಾದಿ ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಬಸವಲಿಂಗಯ್ಯನವರು ಜಾನಪದ ಮುಂದುವರೆಯುವುದು ಹೇಗೆ ಎಂದು ಯೋಚಿಸಿದರು. ಅದಕ್ಕಾಗಿ ಉಸಿರಿನ ಕೊನೆಯವರೆಗೆ ಕೆಲಸ ಮಾಡಿದರು.

ಅವರ ಜಾನಪದ ಗ್ರಹಿಕೆಯ ಹೊಸ ಮಾದರಿಗಳಿಗೆ ಹೆಗ್ಗೋಡಿನ ನೀನಾಸಂ ಇನ್ನಷ್ಟು ಪ್ರೇರಣೆ ನೀಡಿತು. ಕೆ ವಿ ಸುಬ್ಬಣ್ಣನವರ ಹೊಸ ಬಗೆಯ ಯೋಚನೆಗಳಿಗೆ ಹಿರೇಮಠರು ಮಾರುಹೋದರು. ಜನಸ್ಪಂದನ ಶಿಬಿರಗಳಲ್ಲಿ ಅವರು ತಮ್ಮ ಪ್ರತಿಭೆಗೊಂದು ಸೂಕ್ತವಾದ ಮಾರ್ಗವನ್ನು ಕಂಡುಕೊಂಡರು. ನಿಧಾನವಾಗಿ ರಂಗಭೂಮಿಗೆ ಪ್ರವೇಶ ಪಡೆದರು. ಈ ಹಂತದಲ್ಲಿ ಭಾರತೀಯ ರಂಗಭೂಮಿಯ ಅತ್ಯಂತ ವಿಶಿಷ್ಟ ಪ್ರತಿಭೆಯಾದ ಬಿ.ವಿ.ಕಾರಂತರೊಂದಿಗೆ ಅವರು ರಂಗಸಂಗೀತ ಕುರಿತು ಅಭ್ಯಾಸ ಮಾಡಿದರು. ಬಿ ವಿ ಕಾರಂತರಾದರೋ ಕಲ್ಲು, ಮರ ಕಡ್ಡಿಗಳಿಂದ ಸಂಗೀತ ಹೊರಡಿಸುತ್ತಿದ್ದ ಪ್ರತಿಭಾಶಾಲಿ. ಅವರು ಹಿರೇಮಠರ ಜಾನಪದ ಸಂಗೀತಕ್ಕೊಂದು ದಿಕ್ಕುದಿಶೆ ತೋರಿಸಿದರು. ಮುಂದೆ ಬಸವಲಿಂಗಯ್ಯನವರು ಲಾವಣಿ, ತ್ರಿಪದಿ, ಕೋಲಾಟದ ಹಾಡು, ಬಯಲಾಟದ ಹಾಡು, ಸಂಗ್ಯಾಬಾಳ್ಯಾ, ಭಜನೆ ಹಾಡು, ದಾಸರ ಪದಗಳು, ತತ್ವಪದಗಳು ಹೀಗೆ ಹತ್ತುಹಲವು ಬಗೆಯ ಹಾಡುಗಳನ್ನು ಹಾಡುತ್ತಾ, ಜಾನಪದ ಜಂಗಮನಾಗಿ ಊರೆಲ್ಲ ಸುತ್ತಿದರು. ಇಂಥದ್ದೇ ಆಸಕ್ತಿಗಳುಳ್ಳ ವಿಶ್ವೇಶ್ವರಿ ಹಿರೇಮಠರು ಅವರ ಸಂಗಾತಿಯಾದರು. ಅದೊಂದು ಅಪೂರ್ವ ಜೋಡಿ.

1990ರ ದಶಕದಲ್ಲಿ ಹಿರೇಮಠ ದಂಪತಿಗಳು ನಾವೆಲ್ಲ ನೋಡುನೋಡುತ್ತಿರುವಂತೆಯೇ ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಆ ಕೇಂದ್ರವೇ ಒಂದು ಅದ್ಭುತ ಕಲ್ಪನೆ. ಇದರೊಂದಿಗೆ ಹಿರೇಮಠ ದಂಪತಿಗಳು ಬಯಲಾಟದ ಪುರುಜ್ಜೀವನದ ಕಡೆಗೆ ಮುಖಮಾಡಿದರು. 1993-94ರಲ್ಲಿ ನಾವು ಹಲವರು ಅವರ ಜೊತೆಗೂಡಿ ಕಿತ್ತೂರಿನಲ್ಲಿ ಕೃಷ್ಣ ಪಾರಿಜಾತ ಉತ್ಸವ ನಡೆಸಿದೆವು. ಹಿರೇಮಠರಿಗೆ ಪರಿಚಯವಿಲ್ಲದ ಪಾರಿಜಾತದ ಕಲಾವಿದರೇ ಇರಲಿಲ್ಲ. ಅವರೊಡನೆ ಮಾತಾಡುತ್ತಾ, ಹಾಡುತ್ತಾ ಸ್ವತಹ ಕಲಾವಿದನೇ ಆಗಿಬಿಡುವ ಹಿರೇಮಠರು ಮುಂದೆ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗಬಹುದಾದ ಶ್ರೀ ಪಾರಿಜಾತವನ್ನು ರೂಪಿಸಿದರು. ಸುಮಾರು ಒಂಬತ್ತು ಗಂಟೆಗಳ ಪಾರಿಜಾತ ಪ್ರಸಂಗವನ್ನು ಮೂರು ಗಂಟೆಗೆ ಇಳಿಸಿದರು. ಹಿಮ್ಮೇಳಕ್ಕೆ ಒಂದು ಶಿಸ್ತು ತಂದುಕೊಟ್ಟರು. ಹಾಡು ಮತ್ತು ಕುಣಿತಗಳಿಗೆ ಹೊಂದಾಣಿಕೆ ಮಾಡಿದರು. ಇದು ದೇಶದೆಲ್ಲೆಡೆ ಸಾವಿರಾರು ಪ್ರಯೋಗಗಳನ್ನು ಕಂಡಿತು.

ಜಾನಪದ ಪ್ರಕಾರಗಳನ್ನು ಆಧುನಿಕತೆಗೆ ಒಗ್ಗಿಸುವ ಹಿರೇಮಠರ ಪರಿಕಲ್ಪನೆಗಳು ಐತಿಹಾಸಿಕವಾದುದು. ಈ ನಿಟ್ಟಿನಲ್ಲಿ ಅವರು ಬಿವಿ ಕಾರಂತ, ಶಿವರಾಮ ಕಾರಂತರಿಂದ ಪ್ರೇರಣೆ ಪಡೆದರು. ಜನಪದ ರಂಗಭೂಮಿಯ ಪಾರಂಪರಿಕ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತಾ, ಅದರ ಕಸುವನ್ನು ಎಚ್ಚರದಿಂದ ಆಧುನಿಕ ಸನ್ನಿವೇಶಗಳಿಗೆ ಹೊಂದುವಂತೆ ಬೆಸೆಯಬಲ್ಲ ಅಪೂರ್ವ ಪ್ರತಿಭೆ ಬಸವಲಿಂಗಯ್ಯನವರದು. ಅವರ ಹಠಾತ್ ನಿಧನ ನಿರ್ವಾತವನ್ನು ಸೃಷ್ಟಿಸಿದೆ. ಜಾನಪದ ಮತ್ತು ಆಧುನಿಕತೆಯ ನಡುವಣ ಅರ್ಥಪೂರ್ಣ ಸೇತುವೊಂದನ್ನು ಕಟ್ಟಬಲ್ಲ ಪ್ರತಿಭಾವಂತರು ನಮ್ಮನಡುವೆ ಹಲವರಿಲ್ಲ. ಅವರ ಕೆಲಸಗಳು ಜನಪದ ಕಲಾವಿದರನ್ನು ಸಮಕಾಲೀನಗೊಳಿಸುವ ಕೆಲಸಗಳೂ ಆಗಿತ್ತು.

ಇವತ್ತು, ನಾವು ಅವರನ್ನು ಕಳೆದುಕೊಂಡಿರುವ ಹೊತ್ತು, ಅವರ ಬಹುಮುಖೀ ಪ್ರತಿಭೆಯನ್ನು ಭಾಷೆಯಲ್ಲಿ ವಿವರಿಸಲು ಹೆಣಗಾಡುತ್ತಿದ್ದೇವೆ. ನಟ, ಗಾಯಕ, ಸಂಗೀತ ನಿರ್ದೇಶಕ, ಗೆಳೆಯ, ಹೀಗೆ ಹತ್ತುಹಲವು ವಲಯದಲ್ಲಿ ಅವರು ಪ್ರಸಿದ್ಧರು. ದಾಸರ ಪದಗಳು, ತತ್ವಪದಗಳು, ಬಯಲಾಟದ ಪದಗಳನ್ನು ಅತ್ಯದ್ಭುತವಾಗಿ ಅವರು ಹಾಡುತ್ತಿದ್ದಾಗ ನಾವೆಲ್ಲ ಮೂಕರಾಗುತ್ತಿದ್ದೆವು. ‘ಸಂಗ್ಯಾ ಬಾಳ್ಯಾ’ದ ಹಾಡುಗಳನ್ನು ಅವರ ಬಾಯಲ್ಲಿಯೇ ಕೇಳಬೇಕು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್ ಪ್ರಶಸ್ತಿಗಳೆಲ್ಲ ಅವರಿಗೆ ಲಭಿಸಿವೆ.

ನನ್ನ ಕಾಲದ ಬಹುದೊಡ್ಡ ಪ್ರತಿಭೆಯೊಂದು ಹೀಗೆ ಇದ್ದಕ್ಕಿದ್ದಂತೆ ಮರೆಯಾದುದಕ್ಕೆ ತುಂಬ ಬೇಸರವಾಗುತ್ತಿದೆ. ಕುಳಿತಾಗ, ನಡೆವಾಗ ಹಿರೇಮಠರ ಹಾಗೆ ಹಾಡಬಲ್ಲ ಇನ್ನೊಬ್ಬ ಕಲಾವಿದ ನಮಗೆ ಸದ್ಯಕ್ಕೆ ಸಿಗಲಾರ.

ಡಾ. ಪುರುಷೋತ್ತಮ ಬಿಳಿಮಲೆ

ಡಾ. ಪುರುಷೋತ್ತಮ ಬಿಳಿಮಲೆ
ಜನಪದ, ಯಕ್ಷಗಾನ ಮತ್ತು ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರದ್ದು ಚಿರಪರಿಚಿತ ಹೆಸರು. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಜೆಎನ್‌ಯುವಿನಲ್ಲಿ ಕನ್ನಡ ಪೀಠದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಮತ್ತು ಸಂಪಾದಿಸಿರುವ ಬಿಳಿಮಲೆ ಅವರ ’ಕಾಗೆ ಮುಟ್ಟಿದ ನೀರು’ ಆತ್ಮಕಥೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.


ಇದನ್ನೂ ಓದಿ: ಮನಸ್ಸುಗಳ ಬೆಸೆಯುವ ಸೌಹಾರ್ದದ ಕನಸುಗಾರ ಇಬ್ರಾಹಿಂ ಸುತಾರ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...