| ಯಡೂರ ಮಹಾಬಲ |
ಈ ಹಿಂದಿನ ಕೆಲವು ವರ್ಷಗಳಲ್ಲಿ ನಡೆದ ಫ್ಯಾಸಿಸಂ ವಿರೋಧಿ ಸೆಮಿನಾರ್, ಸಭೆಗಳಲ್ಲಿ ನಾನು ಈಗ ಭಾರತದಲ್ಲಿ ಎದ್ದುಬರುತ್ತಿರುವುದು ಹಿಂದೆ ಇಟಲಿ, ಜರ್ಮನಿಯಲ್ಲಿ ಎದ್ದುಬಂದ ಫ್ಯಾಸಿಸಂ ರೀತಿಯದಲ್ಲ, ಇದರ ಹಿಂದೆ ಅಮೇರಿಕಾ ಮತ್ತು ಸಿಐಎ ಸಂಪೂರ್ಣ ಕೈವಾಡವಿದೆ ಎಂದು ವಾದಿಸಿದ್ದೆ. ಆದರೆ ಅದನ್ನು ಯಾರೂ ನಂಬಿರಲಿಲ್ಲ. ಈಗಲೂ ನಂಬಲಿಕ್ಕಿಲ್ಲ. ಆದರೂ ನನ್ನದೊಂದು ಅಭಿಪ್ರಾಯ ವ್ಯಕ್ತವಾಗಿಬಿಡಲಿ ಎನ್ನುವ ಕಾರಣಕ್ಕಾಗಿ ಈ ಲೇಖನ ಬರೆದಿರುವೆ.
2014ರಲ್ಲಿ ಲೋಕಸಭೆ ಚುನಾವಣೆ ನಡೆದಾಗ ನಾನು ಉತ್ತರ ಭಾರತದಲ್ಲಿದ್ದೆ. ಚುನಾವಣೆ ಘೋಷಣೆಯಾದ ನಂತರದ ಕೆಲವು ದಿನಗಳಲ್ಲೇ ನನಗೆ ಅನ್ನಿಸಿದ್ದು ಇದು ಅಮೇರಿಕದ ಸಿಐಎ ನಡೆಸುತ್ತಿರುವ ಮಾನಸಿಕ ಯುದ್ಧ (Psy war) ಎಂದು. ಆ ರೀತಿಯ ಪ್ರಚಾರದ ಆರ್ಭಟಗಳು ನನಗೆ ತಿಳಿದಮಟ್ಟಿಗೆ ನಡೆದದ್ದು 1959ರ ಕೇರಳದಲ್ಲಿನ ವಿಮೋಚನಾ ಸಮರ ಸಮಯದಲ್ಲಿ, 1962ರ ಯುದ್ಧ ಪೂರ್ವ ಮತ್ತು ಯುದ್ಧ ಸಮಯದಲ್ಲಿ, ಜೆ.ಪಿ. ಚಳುವಳಿ ಮತ್ತು 1977ರ ಚುನಾವಣಾ ಸಮಯದಲ್ಲಿ. ಈ ಎಲ್ಲಾ ಸಮಯದಲ್ಲಿಯೂ ಸಿಐಎ ಭಾರೀ ಪ್ರಮಾಣದಲ್ಲಿ ಒಳಗೊಂಡು ಮಾನಸಿಕ ಯುದ್ಧವನ್ನು ನಡೆಸಿತ್ತು.
2002ರಲ್ಲಿ ಗುಜರಾತಿನಲ್ಲಿ ಗಲಭೆಗಳಾಗಿ ಸಾವಿರಾರು ಜನರು ಮರಣ ಹೊಂದಿದ ನಂತರ ಅಮೇರಿಕ ಮೋದಿಯವರಿಗೆ ವೀಸಾ ಬಹಿಷ್ಕರಿಸಿತ್ತು, ಬ್ರಿಟನ್ 10 ವರ್ಷಗಳವರೆಗೆ ಬಹಿಷ್ಕಾರವನ್ನು ಹಾಕಿತ್ತು. ಅನೇಕ ಕಾನೂನುಬಾಹಿರ ಎನ್‍ಕೌಂಟರ್ ಸಾವುಗಳು ಮೋದಿ ಆಡಳಿತ ಕಾಲದಲ್ಲಿ ನಡೆದಿದ್ದವು. ಕಾಂಗ್ರೆಸ್ ಪಕ್ಷವು ಅನೇಕ ಭ್ರಷ್ಟಾಚಾರದ ಆಪಾದನೆಗಳಿಂದಾಗಿ ಜನರ ನಂಬಿಕೆ ಬಹಳ ಕಳೆದುಹೋಗಿತ್ತು. ಅಲ್ಲದೇ ಮನಮೋಹನ ಸಿಂಗ್ ಎರಡು ಸಲ ಪ್ರಧಾನಿಯಾಗಿದ್ದರಿಂದ ಮೂರನೇ ಸಲ ಒಪ್ಪುವ ಸಾಧ್ಯತೆಗಳಿರಲಿಲ್ಲ. ಕಾಂಗ್ರೆಸ್‍ನಲ್ಲಿ ಪರ್ಯಾಯ ನಾಯಕತ್ವವೂ ಇರಲಿಲ್ಲ. 2014ರ ಚುನಾವಣೆಗೆ ಕೆಲವೇ ತಿಂಗಳುಗಳ ಹಿಂದೆ ಅಮೇರಿಕದ ಒಂದು ವ್ಯಾಪಾರ ನಿಯೋಗದ ಹೆಸರಿನಲ್ಲಿ ಒಂದು ಗುಂಪು ಜನ ಬಂದು ಅಹ್ಮದಾಬಾದಿನಲ್ಲಿ ಮೋದಿಯವರನ್ನು ಭೇಟಿಯಾಗಿತ್ತು. ಉದ್ದೇಶ ವ್ಯಾಪಾರವಲ್ಲ, ಮುಂದಿನ ಚುನಾವಣೆಗೆ ಮೋದಿಯವರನ್ನು ತಯಾರು ಮಾಡುವುದಾಗಿತ್ತು. ನನ್ನ ಪ್ರಕಾರ ಪ್ರಧಾನ ಮಂತ್ರಿ ಸ್ಥಾನಕ್ಕೆ ಮೋದಿಯವರನ್ನು ಆಯ್ಕೆಮಾಡಿದ್ದು ಸಿಐಎ. ನಂತರ ಅಮೇರಿಕದ ಅಧ್ಯಕ್ಷರಿಂದ ಅದರ ಅನುಮೋದನೆ. ನಂತರ ಹಣಕಾಸು, ತಾಂತ್ರಿಕತೆ, ಅದಕ್ಕೆ ತಕ್ಕದಾದ ಜನಗಳ ವ್ಯವಸ್ಥೆ ಮಾಡಲಾಯಿತು. ಇದಾದ ಕೆಲವೇ ದಿನಗಳಲ್ಲಿ ಅಮೇರಿಕ ವೀಸಾ ಬಹಿಷ್ಕಾರವನ್ನು ತೆಗೆಯಿತು. ಇದಾದ ಕೆಲವೇ ದಿನಗಳಲ್ಲಿ ಭಾರತಕ್ಕೆ ಅಮೇರಿಕದ ರಾಯಭಾರಿ ಮೋದಿಯವರನ್ನು ಭೇಟಿಯಾಗಿ ಪುಷ್ಪಗುಚ್ಚವನ್ನು ನೀಡಿದರು. ಅಮೆರಿಕದ ರಾಯಭಾರಿಯ ಬದಲಾವಣೆಯೂ ಆಯಿತು. ಕೆಲವೇ ದಿನಗಳಲ್ಲಿ ಭಾರತದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮೋದಿಯವರ ಹೆಸರನ್ನು ಹೆಚ್ಚು ಹೆಚ್ಚಾಗಿ ಪ್ರಚಾರಕೊಡಲಾಯಿತು. ಅತಿ ಕಡಿಮೆ ಕಾಲಾವಧಿಯಲ್ಲಿಯೇ ಅದ್ವಾನಿಯವರ ಹೆಸರು ಮೂಲೆಗೆ ಬಿದ್ದುಹೋಯಿತು. ಇವೆಲ್ಲಾ ಒಂದು ರೀತಿಯ ಚಮತ್ಕಾರದಂತೆ ನಡೆದು ಹೋದವು. ಇವೆಲ್ಲದರ ಹಿಂದೆ ದೊಡ್ಡ ಶಕ್ತಿ ಇದ್ದಿರಲೇ ಬೇಕು. ಭಾರತದ ರಾಜಕಾರಣವನ್ನು ಅಮೇರಿಕದ ಸಿಐಎ ಹೇಗೆ ನಿಯಂತ್ರಿಸುತ್ತಿದೆ ಎನ್ನುವುದು ಹೆಚ್ಚಾನು ಹೆಚ್ಚು ಜನಸಾಮಾನ್ಯರಿಗೆ ತಿಳಿದಿಲ್ಲ, ತಿಳಿಯುವುದೂ ಬಹಳ ಕಷ್ಟಕರ. ಸುಶಿಕ್ಷಿತರೇ ಅಂತಹ ಪ್ರಚಾರಗಳಿಗೆಲ್ಲಾ ಬಲಿಯಾಗುವ ಸನ್ನಿವೇಶ ಇರುವುದರಿಂದ, ಇನ್ನು ಸಾಮಾನ್ಯ ಜನರು ಇವರು ನಡೆಸುವ ಪ್ರಚಾರಕ್ಕೆ ಬಲಿಯಾಗುವುದು ಸಾಮಾನ್ಯ.
ಮೋದಿಪರವಾದ ಚುನಾವಣಾ ಪ್ರಚಾರ ಕಾರ್ಯ ಹೇಗೆ, ಯಾರು ನಡೆಸಿದರು ಎನ್ನುವುದು ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಬರಲಿಲ್ಲ. ಅಂತರಜಾಲದಲ್ಲಿ ಸ್ವಲ್ಪ ಮಟ್ಟಿಗೆ ಈಗ ಬಂದಿದೆ. ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನೆನ್ಸ್ (Citizens for accountable governance) ಎನ್ನುವ ಹೆಸರಿನಲ್ಲಿ ಪ್ರಶಾಂತ್ ಕಿಶೋರ್ ಎನ್ನುವ ಮನುಷ್ಯನ ನಾಯಕತ್ವದಲ್ಲಿ ಸಂಪೂರ್ಣ ಎಲೆಕ್ಷನ್ ಕ್ಯಾಂಪೈನ್ ನಿರ್ವಹಿಸಲಾಗುತ್ತಿತ್ತು.
ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನೆನ್ಸ್ ಎನ್ನುವುದು 2012 ರಲ್ಲಿ ಪ್ರಾರಂಭವಾಯಿತು. ಅದರಲ್ಲಿ ಬೇರೆ ಬೇರೆ ಕಾಲಾವಧಿಗಳಲ್ಲಿ ಭಾರತ ಮತ್ತು ಹೊರದೇಶಗಳಲ್ಲಿ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಹೊಂದಿದ, 200 ರಿಂದ 400 ಪೂರ್ಣಾವಧಿ ಸದಸ್ಯರಿದ್ದರು. ಇವರೆಲ್ಲಾ ಐಐಟಿ, ಐಐಎಂ, ಬ್ರೌನ್ ವಿಶ್ವವಿದ್ಯಾಲಯ, ಕೊಲಂಬಿಯಾ ವಿಶ್ವವಿದ್ಯಾಲಯ, ಕಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮುಂತಾದ ಕಡೆ ಪದವಿಗಳನ್ನು ಪಡೆದು, ಬೇರೆ ಬೇರೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ, ಉದಾಹರಣೆಗೆ ಮಾರ್ಕ್ವೀ ಫೈನಾನ್ಸಿಯಲ್ ಸರ್ವೀಸಸ್, ಜೆ.ಪಿ.ಮೋರ್ಗನ್, ಗೋಲ್ಡ್‍ಮ್ಯಾನ್ ಸಾಚೆಸ್ ಮುಂತಾದ ಸಂಸ್ಥೆಗಳಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುತ್ತಿದ್ದವರು. ಇವರಲ್ಲದೆ ಇನ್ನೊಂದು 800 ಜನ ಅದೇ ಹೈ ಗ್ರೇಡಿನ ಕೆಲಸ ನಿರ್ವಹಿಸುವವರನ್ನೂ ವೇತನದಾರರನ್ನಾಗಿ ನೇಮಿಸಿಕೊಂಡಿದ್ದರು. ಈ ಎರಡು ಜನರಲ್ಲದೇ ಕ್ಷೇತ್ರಮಟ್ಟದಲ್ಲಿ ಸುಮಾರು 1,00,000 ವಾಲಂಟೀರ್ಸ್‍ಗಳು ಇದ್ದರು.
ಅವರ ಕೆಲಸ ಅನೇಕ ರೀತಿಯ ದತ್ತಾಂಶಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುವಹಾಗೆ ಘೋಷಣೆಗಳನ್ನು ತಯಾರಿಸಿ, ಸರಿಯಾದ ತಂತ್ರಜ್ಞಾನವನ್ನು ಉಪಯೋಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಪಡಿಸುವುದು. ಅದೇ ರೀತಿಯಲ್ಲಿ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡುವುದೂ ಮಾಧ್ಯಮಗಳನ್ನು ಕೊಂಡುಕೊಳ್ಳುವುದೂ (Buying medias) ಅವರ ಕೆಲಸವೆ. ಕಾಲಕಾಲಕ್ಕೆ ಕ್ಯಾಂಪೈನ್ ಯೋಜಿಸುವುದೂ ನಡೆಸುವುದೂ ಅವರದೇ. ಈ ಸಂಘಟನೆಯಲ್ಲಿರುವಾಗ ಯಾವುದೇ ರಾಜಕೀಯ ಪಕ್ಷದ ಸದಸ್ಯರಿರಕೂಡದು. ಅವರಲ್ಲಿ ಒಂದು ಸಂಶೋಧನಾ ಘಟಕವೂ ಇದ್ದು, ಮೋದಿ ದೇಶದಾದ್ಯಂತ ಬೇರೆ ಬೇರೆ ಕಡೆ ಹೋದಾಗಲೆಲ್ಲಾ ಮಾತಾಡಬೇಕಾದ ವಿಷಯವನ್ನು ಕೊಡುವುದು. ಚುನಾವಣೆಗೆ ಕೆಲವು ತಿಂಗಳ ಮುಂಚೆಯೇ ಬಿಜೆಪಿ ಸ್ಪರ್ಧಿಸಿದ 450 ಚುನಾವಣಾ ಕ್ಷೇತ್ರದ ಚುನಾವಣಾ ದತ್ತಾಂಶವನ್ನು ವಿಶ್ಲೇಷಿಸಿ, ಸುಮಾರು 200 ಪುಟಗಳ ವರದಿಯನ್ನು ತಯಾರಿಸಿತ್ತು. ಅದನ್ನು ಪುಸ್ತಕದ ಅಂಗಡಿಗಳ ಮೂಲಕ, ಫ್ಲಿಪ್‍ಕಾರ್ಟ್ ಮೂಲಕವೂ ಮಾರಲಾಗಿತ್ತು. ಇದರ ಜೊತೆಗೆ ಜನಮತ ಅಭಿಪ್ರಾಯಗಳನ್ನು ಸೇರಿಸುವುದು. ಈ ಪುಸ್ತಕಗಳನ್ನು ಕ್ಷೇತ್ರ ಮಟ್ಟದಲ್ಲಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರಿಗೆಲ್ಲಾ ಹಂಚಲಾಗಿತ್ತು. ಇದರಲ್ಲೆಲ್ಲಾ ದೊಡ್ಡ ದೊಡ್ಡ ಕಂಪ್ಯೂಟರ್ ತಜ್ಞರೂ ಇದ್ದು ಇವಿಎಂ ಯಂತ್ರಗಳಲ್ಲಿ ಬಿಜೆಪಿ ಪರ ಮತಬದಲಾವಣೆ ಮಾಡುವ ಕಾರ್ಯವೂ ಇತ್ತೇ ಎನ್ನುವುದು ತಿಳಿದಿಲ್ಲ.
ಈ ಸಂಘಟನೆ ಕೆಲವು ಸರಣಿ ಆಂದೋಲನ ನಡೆಸಿ ಅಭ್ಯರ್ಥಿಯ ಭಾಷಣಗಳನ್ನು ಹೋಲೋಗ್ರಾಮ್ ಮೂಲಕ ಪ್ರೊಜೆಕ್ಟ್ ಮಾಡಿ ಮಾಧ್ಯಮಗಳಲ್ಲಿ ಬೊಂಬ್ಡ ಬಾರಿಸುವುದು, ಭಾವೋದ್ವೇಗವನ್ನು ಉಂಟುಮಾಡುವುದು, ಹುಚ್ಚು ಸಮೂಹಸನ್ನಿ (Mass hysteria)ಯನ್ನು ಉಂಟುಮಾಡುವುದು. ಚುನಾವಣೆ ಘೋಷಿಸುವುದಕ್ಕೂ ಮುಂಚೆ ರನ್ ಫಾರ್ ಯೂನಿಟಿ ಎನ್ನುವ ಭರಾಟೆಯನ್ನು ನಡೆಸಿತ್ತು. ಇದು ಗುಜರಾತಿನಲ್ಲಿ ಮಾತ್ರ ಹೆಚ್ಚಾಗಿ ಯಶಸ್ವಿಯಾದುದು. ಕಾಂಗ್ರೆಸಿನ ಮಣಿಶಂಕರ್ ಐಯ್ಯರ್ ರೈಲ್ವೆ ಸ್ಟೇಶನ್ ನಲ್ಲಿ ಚಹ ಮಾರುತ್ತಿದ್ದ ಮೋದಿಯ ಹಿನ್ನೆಲೆಯ ಬಗ್ಗೆ ಹೀಯಾಳಿಸಿದಾಗ ಈ ಸಿಎಜಿ ಗುಂಪು ಅದನ್ನು ಬಂಡವಾಳವಾಗಿ ಮಾಡಿಕೊಂಡು ‘ಚಾಯ್ ಪೆ ಚರ್ಚಾ’ ಎನ್ನುವ ಘೋಷಣೆಯೊಂದಿಗೆ 1000 ಟೀ ಸ್ಟಾಲ್ ಗಳಲ್ಲಿ ಆ ಕಾರ್ಯಕ್ರಮ ನಡೆಸಿತು. ಉತ್ತರಪ್ರದೇಶದಲ್ಲಿ ‘ಮೋದಿ ಆನೆವಾಲಾ ಹೈ’ ಎನ್ನುವ ವೀಡಿಯೋ ತಯಾರಿಸಿ 400 ವ್ಯಾನುಗಳ ಮೂಲಕ ಮೂಲೆಯ ಹಳ್ಳಿಗಳಿಗೆ ಹೋಗಿ ತೋರಿಸಿದರು. ಚುನಾವಣೆ ಪ್ರಚಾರದ ಕಡೆಯ ದಿನಗಳಲ್ಲಿ ‘ಭಾರತ್ ವಿಜಯ’ ಎನ್ನುವ ರ್ಯಾಲಿಗಳನ್ನು ಸಂಘಟಿಸಿ 3ಡಿ ಹೋಲೋಗ್ರಾಫಿಕ್ ಪ್ರತಿಮೆಗಳಲ್ಲಿ ಏಕಕಾಲದಲ್ಲಿ ನೂರು ಸ್ಥಳಗಳಲ್ಲಿ ಮೋದಿ ಭಾಷಣಮಾಡುವುದನ್ನು ತೋರಿಸಲಾಯಿತು. ಇವೆಲ್ಲಾ ದೂರದ ಹಳ್ಳಿಗಳಲ್ಲಿ ಮಾಂತ್ರಿಕನಂತೆ ಕೆಲಸಮಾಡುತ್ತವೆ. ಜನ ಅದನ್ನು ನೋಡಲು ದೂರದ ಹಳ್ಳಿಗಳಿಂದ ಬಂದಿದ್ದರು.
ಇಂಟರ್‍ನೆಟ್, ಟ್ವಿಟ್ಟರ್, ಫೇಸ್‍ಬುಕ್, ಯೂಟ್ಯೂಬ್, ವಾಟ್ಸ್‍ಆಪ್, ಟೆಲಿಸ್ಕ್ರೀನ್, ಪ್ರಿಂಟ್ ಮಾಧ್ಯಮ, ಮುಂತಾದ ಮಾಧ್ಯಮಗಳ ಮೂಲಕ ಪ್ರಚಾರದ ಭರಾಟೆ ನಡೆಸಿದರು. ಇವರ ಕೇಂದ್ರ ಕಛೇರಿ ಮೋದಿ ಇದ್ದ ಗುಜರಾತಿನ ಗಾಂಧೀನಗರದಲ್ಲಿದ್ದು, ದೇಶದ ಇತರ ಕಡೆಗಳಲ್ಲಿ ಎಂಟು ಕಛೇರಿಗಳಿದ್ದವು.
ಇಷ್ಟೆಲ್ಲಾ ದೊಡ್ಡಮಟ್ಟದ ಕಾರ್ಯ ಮಾಡಲು ಅದೆಷ್ಟೋ ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತವೆ. ಅದೆಲ್ಲಾ ಎಲ್ಲಿಂದ ಬಂತು. ಅವರ ಪ್ರಕಾರ ಅವರು ಯಾವ ರಾಜಕೀಯ ಪಕ್ಷಕ್ಕೂ ಅಂಟಿಕೊಂಡಿಲ್ಲ. ಯಾವ ರಾಜಕೀಯ ಪಕ್ಷದಿಂದಲೂ ಹಣವನ್ನು ತೆಗೆದುಕೊಂಡಿಲ್ಲ. ಅವರು ಲಾಭದಾಸೆಯಿಲ್ಲದ ಸಂಘಟನೆ ಎಂದು ಹೇಳಿಕೊಂಡಿದ್ದಾರೆ. ಲಕ್ಷ ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುತ್ತಿದ್ದ ಉದ್ಯೋಗದಲ್ಲಿದ್ದ ದೊಡ್ಡ ಆದರ್ಶಕ್ಕಾಗಿ ಹೀಗೆ ಬಂದು ಈ ಜನ ಒಂದು ಸಣ್ಣ ಮೊತ್ತದ ಸಂಬಳ ತೆಗೆದುಕೊಂಡು ಕೆಲಸಮಾಡಿದರು ಎಂದು ನಂಬುವುದು ಸಾಧ್ಯವೇ ಇಲ್ಲ. ಹಣದ ಮೂಲದ ಬಗ್ಗೆ ಕೆಲವರನ್ನು ಕೇಳಿದಾಗ ಪ್ರಶಾಂತ್ ಕಿಶೋರ್ ಕಾರ್ಪೊರೇಟ್ ಕಡೆಯಿಂದ ಸಂಗ್ರಹಿಸುತ್ತಾರೆ ಎಂದರು. ಇನ್ನೊಬ್ಬರು ಸದ್ಯದಲ್ಲೇ ತಮ್ಮ ಲೆಕ್ಕಪತ್ರವನ್ನು, ದೇಣಿಗೆ ನೀಡಿದವರ ಹೆಸರು ಸಹಿತವಾಗಿ ವೆಬ್‍ಸೈಟ್‍ನಲ್ಲಿ ಪ್ರಕಟಪಡಿಸುವುದಾಗಿ ಹೇಳಿದರಂತೆ. ಇನ್ನೊಬ್ಬರು ಅದು ಆಂತರಿಕ ವಿಷಯ ಎಂದು ಹೇಳಿದರಂತೆ. ಪ್ರಶಾಂತ ಕಿಶೋರರನ್ನೇ ಕೇಳಿದಾಗ ‘ನೀವು ಏನು ಬೇಕಾದರೂ ಬರೆದುಕೊಳ್ಳಿ, ನನಗೆ ಆ ವಿಷಯದಲ್ಲಿ ಮಾತಾಡಲು ಇಷ್ಟವಿಲ್ಲ ಎಂದರಂತೆ. ಬಿಜೆಪಿಯ ಖಜಾಂಚಿ ಪಿಯೂಶ್ ಗೋಯಲ್ ರನ್ನು ಕೇಳಿದಾಗ ಪ್ರಚಾರದ ಬಗ್ಗೆ ಸಿಎಜಿ ಯ ಪಾತ್ರದ ಬಗ್ಗೆ ಏನೂ ಹೇಳಲು ತಿರಸ್ಕರಿಸಿದರು, ಆ ಬಗ್ಗೆ ಆ ಸಂಘಟನೆಯನ್ನೇ ಕೇಳಿ ಎಂದರಂತೆ. ಗುಜರಾತಿನ ಬಿಜೆಪಿಯ ವಕ್ತಾರರಾದ ಭರತ್ ಪಾಂಡ್ಯ ಕಿಶೋರ್ ಹಣಕಾಸನ್ನು ಹೇಗೆ ನಿರ್ವಹಿಸಿದರು ಎನ್ನುವುದು ತಮಗೆ ಗೊತ್ತಿಲ್ಲ ಎಂದರಂತೆ.
ಸಿಎಜಿ ಎನ್ನುವ ಸಂಘಟನೆ 2014 ರ ಲೋಕಸಭಾ ಚುನಾವಣೆ ಮುಗಿದ ನಂತರ ಇಂಡಿಯನ್ ಪೀಪಲ್ ಆ್ಯಕ್ಷನ್ ಕಮಿಟಿ (Indian People’s Action Committee -IPAC). ಎನ್ನುವ ಹೊಸ ಹೆಸರಿನಲ್ಲಿ ಕಾರ್ಯ ಶುರುಮಾಡಿತು. ಈ ಐಪಿಎಸಿ 2015 ರಲ್ಲಾದ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ರವರ ಜೆಡಿಯು ಪಕ್ಷವನ್ನು ಬೆಂಬಲಿಸಿ ಅದೇ ರೀತಿಯ ಪ್ರಚಾರ ಕೈಗೊಂಡು ಗೆಲ್ಲಿಸಿತು. ಇಲ್ಲಿಯೂ ಸಹ ಅವರಿಗೆ ಹಣವನ್ನು ಒದಗಿಸಿದವರು ಯಾರು ಎನ್ನುವುದು ತಿಳಿದಿಲ್ಲ. ಭಾರತದ ಈ ಐಎಪಿಸಿ ಎನ್ನುವುದು ಒಂದು ರೀತಿಯಲ್ಲಿ ಅದೇ ರೀತಿಯ ಚುನಾಣಾ ಪ್ರಚಾರಕ್ಕೆ ಅಮೇರಿಕದಲ್ಲಿರುವ ಪಿಎಸಿ (PAC) ಎನ್ನುವುದರ ಪ್ರತಿರೂಪ. ಈಗ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ ರವರ ಪಕ್ಷವನ್ನೂ ಸೇರಿ, ಬಿಹಾರದ ಮಂತ್ರಿ ಮಂಡಳದಲ್ಲಿಯೂ, ಜೆ.ಡಿ.ಯು ಪಕ್ಷದಲ್ಲಿಯೂ ಎರಡನೇ ಮುಖ್ಯ ವ್ಯಕ್ತಿಯಾಗಿದ್ದಾರೆ. ಈಗ ನಿತಿಶ್ ಕುಮಾರ್ ಬಿಜೆಪಿಯೊಂದಿಗೆ ಸಹಯೋಗ ಮಾಡಿಕೊಂಡಿದ್ದಾರೆ. ಈ ಮಂಕು ರಾಜಕಾರಣವೆಲ್ಲಾ ಅಷ್ಟು ಸುಲಭವಾಗಿ ಅರ್ಥವಾಗುವಂತಹದಲ್ಲ. ಅದರ ನಿಯಂತ್ರಣವೆಲ್ಲಾ ಕಣ್ಣಿಗೆ ಕಾಣದ ಶಕ್ತಿಗಳ, ವ್ಯಕ್ತಿಗಳ ಕೈಯಲ್ಲಿರುತ್ತವೆ.
ಸಿಐಎ ಮೊದಲಿನಿಂದಲೂ ಕಾಂಗ್ರೇಸನ್ನೂ ಹಿಡಿದುಕೊಂಡು ಭಾರತದ ಬೇರೆ ಬೇರೆ ಬಲಪಂಥೀಯ ಪಕ್ಷಗಳಿಗೆ ಚುನಾವಣಾ ಸಮಯದಲ್ಲಿ ಹಣ ಒದಗಿಸಿದೆ. ಇದಕ್ಕೆ ಜೆ.ಕೆ. ಗಾಲ್‍ಬ್ರೈತ್ ರವರ ದಿನಚರಿಯಲ್ಲಿರುವ ಮಾತುಗಳಷ್ಟೇ ಸಾಕ್ಷಿಯಲ್ಲ, ಜಾಲತಾಣಗಳಲ್ಲಿ ಬೇರೆ ಬೇರೆ ವೆಬ್‍ಸೈಟ್ ಗಳಲ್ಲಿ ಬೇಕಾದಷ್ಟು ವಿಷಯಗಳಿವೆ. ಕಾಂಗ್ರೆಸ್ ಅಲ್ಲದೇ ಬೇರೆ ಪಕ್ಷಗಳಿಗೆ ಈ ಪಾಟಿ ಹಣ ಒದಗಿಸುವುದು 1967ರ ಚುನಾವಣೆಯಿಂದ ಜಾಸ್ತಿಯಾಯಿತು. ಆದ ಕಾರಣವೇ 1967 ರ ಚುನಾವಣೆಯಲ್ಲಿ ಎಂಟು ರಾಜ್ಯಗಳಲ್ಲಿ ವಿವಿಧ ವಿರೋಧ ಪಕ್ಷಗಳ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದವು. ಅಷ್ಟೇ ಅಲ್ಲದೇ ಲೋಕಸಭೆಯಲ್ಲಿ ಕಾಂಗ್ರೆಸಿನ ಸ್ಥಾನ 283ಕ್ಕೆ ಇಳಿಯಿತು. ಇದು ಇಂದಿರಾ ಗಾಂಧಿ ಅಮೇರಿಕದ ಮತ್ತು ಅದರ ಸಿಐಎ ವಿರುದ್ಧವಾಗಿ ಮಾತಾಡುತ್ತಿದ್ದ ಕಾಲವಾಗಿತ್ತು. ಈ ಸಿಐಎ ಚಟುವಟಿಕೆಗಳ ವಿರುದ್ಧವಾಗಿ ರಷ್ಯಾದ ಕೆಜಿಬಿ ಇದೇ ಸಮಯದಲ್ಲಿಯೇ ಬಹಳ ಚುರುಕಾಯಿತು. ಅವರೂ ಸಹ ತಮಗೆ ಬೇಕಾದ ಬಲಪಂಥೀಯ ಪಕ್ಷಗಳಿಗೆ ಹಣದ ಸರಬರಾಜು ಮಾಡಲು ಪ್ರಾರಂಭಿಸಿದರು.
2014 ರಲ್ಲಿ ಸಿಐಎ ಬಿಜೆಪಿಯ ಅದ್ವಾನಿಯವರನ್ನು ಬಿಟ್ಟು ಮೋದಿಯನ್ನೇ ಏಕೆ ಆಯ್ಕೆ ಮಾಡಿತು ಎನ್ನುವ ಪ್ರಶ್ನೆ ಏಳುತ್ತದೆ. ಹಣದ ಹೊಳೆ ಹರಿದು ತಮಗೆ ಬೇಕಾದ ಸ್ಥಾನಗಳೆಲ್ಲಾ ಸಿಗುವಾಗ ಬಿಜೆಪಿಯ ರಾಜಕಾರಣಿಗಳೂ ಅತಿ ಕಡಿಮೆ ಕಾಲಾವಧಿಯಲ್ಲಿ ಅದ್ವಾನಿಯವರನ್ನು ಮೂಲೆಗುಂಪು ಮಾಡಿದರು. ಮೊದಲನೆಯದಾಗಿ ಸಿಐಎ ಮಾಡುವುದು ಹನಿ ಟ್ಟಾಪ್. ಆ ರಾಜಕಾರಣಿಯ ದೌರ್ಬಲ್ಯಗಳನ್ನೆಲ್ಲಾ ದಾಖಲಿಸಿ ಹಿಡಿದಿಟ್ಟುಕೊಳ್ಳುವುದು. ಆ ರಾಜಕಾರಣಿ ತಮ್ಮ ಮಾತು ಕೇಳದಿದ್ದರೆ ಅವನ ದೌರ್ಬಲ್ಯಗಳನ್ನೆಲ್ಲಾ ಹೊರಹಾಕುವ ಬೆದರಿಕೆ ಹಾಕುವುದು. ನೆಹರೂರವರನ್ನೂ ಹೀಗೆಯೇ ಟ್ರಾಪ್ ಮಾಡಿರಬೇಕು. ಹಾಗಾಗಿಯೇ ತಾವು ಬದುಕುಳಿಯಲು ನೆಹರು 1960 ರಿಂದ ಹೆಚ್ಚು ಹೆಚ್ಚು ಅಮೇರಿಕದ ಪರವಾಗಿ ವಾಲಿದರು. ಮೋದಿ ಕಾಲಾವಧಿಯಲ್ಲಂತೂ ಭಾರತವನ್ನು ಅಮೇರಿಕದ ಸ್ಟ್ರಾಟಜಿಕಲ್ ಪಾರ್ಟನರ್ ಆಗಿ ಮಾಡಲಾಯಿತು. ಆದರೂ ಅಮೇರಿಕ ಸರ್ಕಾರಕ್ಕೆ ಇನ್ನೂ ಸಾಕಷ್ಟು ತೃಪ್ತಿಯಾಗಿಲ್ಲ. ಆದ ಕಾರಣವೇ ಆಗಾಗ ಬೆದರಿಕೆ ಒಡ್ಡುತ್ತಿದೆ.
2019ರ ಚುನಾವಣೆಯಲ್ಲಿ ಇನ್ಯಾರನ್ನೆಲ್ಲಾ ಸಿಐಎ ಬಳಸಿಕೊಂಡಿತ್ತು ಎನ್ನುವುದು ಇನ್ನೂ ಹೊರಬರಬೇಕಾಗಿದೆ ಅಷ್ಟೆ.


