Homeಚಳವಳಿರೆಡ್ಡಿ ಸಹೋದರರ ವಿರುದ್ಧ ಪಟ್ಟುಬಿಡದೇ ಹೋರಾಡಿ ಗೆದ್ದ ದಿಟ್ಟ ಯುವತಿಯ ಕಥೆ

ರೆಡ್ಡಿ ಸಹೋದರರ ವಿರುದ್ಧ ಪಟ್ಟುಬಿಡದೇ ಹೋರಾಡಿ ಗೆದ್ದ ದಿಟ್ಟ ಯುವತಿಯ ಕಥೆ

ರೈತರ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತಿರುವಾಗ ಗೌಸಿಯಾ ಖಾನರ ಈ ಹೋರಾಟ ನಿಜಕ್ಕೂ ಒಂದು ಸ್ಫೂರ್ತಿಯಂತೆಯೂ, ಈ ಕಾಲದ ದಿಟ್ಟತನದ ಮಾದರಿಯಂತೆಯೂ ಕಾಣುತ್ತದೆ.

- Advertisement -
- Advertisement -

| ಡಾ.ಅರುಣ್ ಜೋಳದಕೂಡ್ಲಿಗಿ |

ಹೊಸಪೇಟೆಯ ಕೆ.ಎಸ್.ಆರ್.ಟಿ.ಸಿ. ಬಸ್‍ಸ್ಟಾಂಡಿನಿಂದ ರೈಲ್ವೇ ಸ್ಟೇಷನ್‍ಗೆ ಹೋಗುದ ದಾರಿಯಲ್ಲಿ ನಡೆಯುತ್ತಿದ್ದರೆ ಸ್ವಲ್ಪ ದೂರದಲ್ಲಿ ಕಾಲುವೆಯೊಂದು ಬರುತ್ತದೆ. ಕಾಲುವೆ ದಾಟುತ್ತಲೂ ಬೃಹತ್ ಹೋಟೆಲೊಂದು ನಿಮ್ಮನ್ನು ದಂಗುಬಡಿಸುತ್ತದೆ. ಇದಕ್ಕೆ ಎದುರಾಗಿ ನಿಂತರೆ ಅದರ ಎಡಭಾಗಕ್ಕೆ ಹೋಟೆಲಿನ ಮೈಗೆ ಅಂಟಿಕೊಂಡಂತೆ ಪುಟ್ಟದೊಂದು ಮನೆ ಕಾಣುತ್ತದೆ. ಮೇಲುನೋಟಕ್ಕೆ ಈ ಮನೆಗಾಗಿ ಹೋಟೆಲ್ ಕಾಂಪೋಂಡಿನ ವಿನ್ಯಾಸವೇ ಬದಲಾದಂತಿದೆ. ಅಂತೆಯೇ ಈ ಮನೆಗೆ ಭಯಗೊಂಡು ಕಾಂಪೋಂಡು ತಾನೇ ಹಿಂದಕ್ಕೆ ಸರಿದು ಮುದುರಿಕೊಂಡಂತೆ ಕಾಣುತ್ತದೆ.

ಈ ಬೃಹತ್ ಕಟ್ಟಡದೆದುರು ಗುಬ್ಬಚ್ಚಿ ಗೂಡಿನಂತಹ ಈ ಪುಟ್ಟಮನೆಯ ಬಗ್ಗೆ ಏನಿದು ಕಥೆ ಎಂದು ನಿಮಗೆ ಕುತೂಹಲವಾಗಬಹುದು. ಈ ಪುಟ್ಟಮನೆಯ ಮೈದಡವಿದರೆ ’ದಿಟ್ಟ ಹೋರಾಟದ’ ಕಥನವೊಂದು ಬೆಚ್ಚಗೆ ಅವಿತು ಕುಳಿತಂತಹ ಅನುಭವವಾಗುತ್ತದೆ. 8 ಜನ ಸದಸ್ಯರಿರುವ ಈ ಮನೆಯ ಹೊರಗಡೆ ಸದಾ ಕುರುಚಲು ಗಡ್ಡದ ಅಜ್ಜನೊಬ್ಬ ಕುಳಿತಿರುತ್ತಾನೆ. ಆತನನ್ನು ಮಾತನಾಡಿಸಿದರೆ, ಸ್ವಲ್ಪ ತಡೀರಿ ಮಗಳು ಮಾತಾಡ್ತಾಳೆ ಎಂದು ಹೊಳಗಡೆ ಹೋದವರು ಮಗಳಿಗೆ ಸೂಚನೆ ನೀಡುತ್ತಾರೆ. ಆಗ ಅವರ ಮಗಳು `ಯಾರು? ಎಂಬ ಪ್ರಶ್ನಾರ್ಥಕವಾಗಿ ಚೂರು ಅನುಮಾನದಲ್ಲಿಯೇ ಪ್ರಶ್ನಿಸುತ್ತಾಳೆ. ನಾವು ಈ ಮನೆ ಉಳಿವಿನ ಕಥೆ ಕೇಳಲು ಬಂದಿದ್ದೇವೆಂದರೆ ’ಓ ಅದಾ’.. ಬನ್ನಿ ಹೇಳ್ತೀನಿ, ಎಂದು ಒಳಗೆ ಕರೆದು ಮೊದಲು ಕೂಲಂಕುಶವಾಗಿ ನಮ್ಮ ಬಗ್ಗೆ ತಿಳಿಯುತ್ತಾಳೆ. ನನ್ನ ಕಥೆಯನ್ನು ಇವರಿಗೆ ಹೇಳಬಹುದೆನ್ನುವ ವಿಶ್ವಾಸ ಬಂದ ನಂತರ ಮಾತನ್ನು ಆರಂಭಿಸುತ್ತಾಳೆ.

2008-09ರ ಕರ್ನಾಟಕದ ರಾಜಕೀಯ ವಿಧ್ಯಮಾನಗಳನ್ನೊಮ್ಮೆ ನೆನಪಿಸಿಕೊಳ್ಳಿ. ಎಲ್ಲವನ್ನು ಬೆರಳ ತುದಿಯಲ್ಲೇ ಆಡಿಸುತ್ತಾ ಆಕಾಶದಲ್ಲಿ ಹಾರುತ್ತಿದ್ದ ’ರಿಪಬ್ಲಿಕ್ ಬಳ್ಳಾರಿ’ ಯನ್ನು ಆಳುತ್ತಿದ್ದ `ರೆಡ್ಡಿ ಬ್ರದರ್ಸ್’ ಯುಗ. ಆಗ ಬಳ್ಳಾರಿಯ ಈ ಶಕ್ತಿಯೇ ಪರೋಕ್ಷವಾಗಿ ರಾಜ್ಯ ಸರಕಾರವನ್ನು ನಿಂಯಂತ್ರಿಸುತ್ತಿತ್ತು. ಗಾಲಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರೂ ಸಚಿವರಾಗಿದ್ದರು. ಸ್ಥಳೀಯವಾಗಿ ಹೊಸಪೇಟೆಯಲ್ಲಿ ಗಣಿಉದ್ಯಮಿ ಆನಂದ್‌ ಸಿಂಗ್ ಶಾಸಕರಾಗಿದ್ದರು.

ಹೀಗಿರುವಾಗ ಹೊಸಪೇಟೆಯ ಎಂ.ಗೌಸಿಯಾ ಖಾನ್ ಪರಿಚಯಕ್ಕೂ ಈ ವಿದ್ಯಮಾನಕ್ಕೂ ಎತ್ತಣಿಂದೆತ್ತ ಸಂಬಂಧ ಎಂದು ನೀವು ಯೋಚಿಸುತ್ತಿರಬಹುದು. ಆಗ ಬಳ್ಳಾರಿಯಲ್ಲಿದ್ದ ಇಂತಹ ಭಯದ ವಾತಾವರಣದಲ್ಲಿಯೇ ರಿಪಬ್ಲಿಕ್ ಬಳ್ಳಾರಿಯನ್ನು ಆಳುತ್ತಿದ್ದವರ ಒಡೆತನದ ’ಎನ್ನೋಬಲ್ ಇಂಡಿಯಾ ಫೈವ್ ಸ್ಟಾರ್ ಹೋಟೆಲ್’ನ ಡೈನೋಸಾರ್ ನಂತಹ ಬೃಹತ್ ಕಟ್ಟಡವೊಂದು ತನ್ನ ಪುಟ್ಟ ಮನೆಯನ್ನು ಬಲಿತೆಗೆದುಕೊಳ್ಳುವುದನ್ನು ತಪ್ಪಿಸಲು ದಿಟ್ಟ ಹೋರಾಟ ಮಾಡಿದ ಗಟ್ಟಿಗಿತ್ತಿಯೇ ಈ ಗೌಸಿಯಾ ಖಾನ್.

ಗೌಸಿಯಾ ಖಾನ್

ಒಂದು ದಿನ ಬೃಹತ್ ಕಟ್ಟಡದ ಕೆಲಸ ನಡೆಯುವ ಮಧ್ಯೆ ಈ ಜವಾಬ್ದಾರಿ ಹೊತ್ತ ಮ್ಯಾನೇಜರೊಬ್ಬ ಗೌಸಿಯಾ ತಂದೆಯಾದ ಎಂ.ಚಾಂದ್‍ಭಾಷಾ ಅವರನ್ನು ಸಾಹೇಬರು ಕರೆಯುವುದಾಗಿ ಹೇಳುತ್ತಾರೆ. ತಂದೆ ಮೈಯಲ್ಲಿ ಹುಶಾರಿಲ್ಲದ ಕಾರಣ ಗೌಸಿಯಾ ಮತ್ತವರ ತಮ್ಮ ಸಾಹೇಬರ ಬಳಿಗೆ ಹೊರಡುತ್ತಾರೆ. `ನಾನು ಹೋಟೆಲಿನ ಒಳಗಡೆ ಬರುವುದಿಲ್ಲ ಬೇಕಿದ್ದರೆ ಅವರೇ ಹೊರಗಡೆ ಬಂದು ಮಾತನಾಡಲಿ ಎಂದು ಗೌಸಿಯಾ ಹೇಳುತ್ತಾಳೆ. ಅನಿವಾರ್ಯ ಮಂತ್ರಿಗಳೇ ಬಂದು ಕುಶಲೋಪರಿ ಮಾತಾಡಿ `ನಮಗೆ ನಿಮ್ಮ ಮನೆಯ ಜಾಗ ಬೇಕು ಕೊಡಿ’ ಎನ್ನುತ್ತಾರೆ. ಕೊಡುವುದೆಂದರೆ ಹೇಗೆ ಅಂಕಲ್? ಗೌಸಿಯಾ ಪ್ರಶ್ನಿಸುತ್ತಾಳೆ. `ಏನಿಲ್ಲ ಕೊಡಬೇಕೆಂದರೆ ಕೊಡಬೇಕಷ್ಟೆ’ ಎನ್ನುವ ಮಾತು ಸಿಡಿಲಿನಂತೆ ಎರಗುತ್ತದೆ. ಗೌಸಿಯಾ ಬೆದರದೆ ನಿಧಾನಕ್ಕೆ `ಅದೇನು ಕೊಡಲು ತರಕಾರಿಯಂಥಹ ಚಿಕ್ಕಪುಟ್ಟ ವಸ್ತುವಲ್ಲ, ಹೀಗೆ ದಿಡೀರನೆ ಕೇಳಿದರೆ ಕೊಡಲು ಸಾಧ್ಯವೂ ಇಲ್ಲ’ ನನಗೆ ಯೋಚಿಸಲು ಸಮಯ ಬೇಕು ಎನ್ನುತ್ತಾಳೆ. ತಕ್ಷಣ ಸ್ಥಳೀಯ ಶಾಸಕರು `ನಮ್ಮ ಬಳಿ ನಾಲ್ಕುಸಾವಿರ ಜನ ಆಳುಗಳಿದಾರೆ, ನಿಮ್ಮ ಪ್ಲೇಸನ್ನು ಅಕ್ಕುಪೇಷನ್ ಮಾಡಕೊಂಡು ಬಿಡ್ತೀವಿ’ ಎಂದು ಗದರುತ್ತಾರೆ. ಇದಕ್ಕೆ ಗೌಸಿಯಾ ಪ್ರತಿಕ್ರಿಯಿಸದೆ, ಅದೇನು ಮಾಡ್ತೀರೋ ಮಾಡಿ ಎನ್ನುವಂತೆ ಎದುರಾಡದೆ ಮನೆಗೆ ಮರಳುತ್ತಾಳೆ.

ಮನೆಗೆ ಬಂದಾಗ ಅಚ್ಚರಿ ಕಾದಿತ್ತು, ಜೆಸಿಬಿಯೊಂದು ಕೌನ್ಸಲರುಗಳ ಸಮ್ಮುಖದಲ್ಲಿಯೇ ಮನೆಕೆಡಹಲು ಸಿದ್ದಗೊಂಡಿತ್ತು. ತಕ್ಷಣ ಗೌಸಿಯಾ ಕೌನ್ಸಲರುಗಳ ಜತೆ ವಾಗ್ವಾದಕ್ಕಿಳಿದು, ದೌರ್ಜನ್ಯದ ವಿರುದ್ಧ ಸಿಡಿದು ಮನೆ ಕೆಡವದಂತೆ ದಿಟ್ಟವಾಗಿ ತಡೆಯುತ್ತಾಳೆ. ಮರುದಿನವೇ ಪತ್ರಿಕಾಗೋಷ್ಠಿಯಲ್ಲಿ ತನ್ನ ಕುಟುಂಬದ ಮೇಲೆ ಸ್ಥಳೀಯ ಶಾಸಕರನ್ನೊಳಗೊಂಡಂತೆ ಬಿಜೆಪಿ ಸದಸ್ಯರುಗಳಿಂದ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಮಾತನಾಡುತ್ತಾಳೆ. ಮಾಧ್ಯಮದವರಿಗೆ ಈ ದರ್ಪದ ಬಗ್ಗೆ ವಿಶೇಷವೆನ್ನಿಸದೆ, ನೀವು ಈಗ ಪ್ರಚಾರ ತೊಗೊಂಡು ಮುಂದೆ ರಾಜಿಯಾಗಿ ಮನೆಯನ್ನು ಹೆಚ್ಚಿನ ಬೆಲೆಗೆ ಮಾರುವುದಿಲ್ಲ ಎನ್ನುವ ಗ್ಯಾರಂಟಿಯ ಬಗ್ಗೆ ಪ್ರಶ್ನಿಸುತ್ತಾರೆ. ಆಗಲೂ ಗೌಸಿಯಾ `ಏನೇ ಆದರೂ ನನ್ನ ಮನೆಯನ್ನು ಮಾತ್ರ ಬಿಟ್ಟುಕೊಡಲ್ಲ ಇದು ನನ್ನ ದಿಟ್ಟ ನಿರ್ಧಾರ. ಇದಕ್ಕಾಗಿ ಎಷ್ಟೇ ಕಷ್ಟವಾದರೂ ನಾನು ಒಂಟಿಯಾಗಿ ಹೋರಾಡುತ್ತೇನೆ’ ಎಂದು ಧೈರ್ಯವಾಗಿ ಉತ್ತರಿಸುತ್ತಾಳೆ. ಮರುದಿನ ಇದು ಸುದ್ದಿಯೂ ಆಗುತ್ತದೆ.

ಆಗ ಹೊಸಪೇಟೆಯ ಮನೆಮನೆಗಳಲ್ಲಿ ಈ ಹುಡುಗಿಯ ಬಗೆಗೆ ತರಾವರಿ ಮೌಖಿಕ ಕಥನಗಳು ಸೃಷ್ಠಿಯಾಗತೊಡಗುತ್ತವೆ. ಅದರ ಬಹುಪಠ್ಯಗಳು ಈಗಲೂ ಲಭ್ಯವಿವೆ. ಕೆಲವರು ಈ ಹುಡುಗಿ `ಗುಡ್ಡಕ್ಕೆ ತಲೆ ಹೊಡಕೊಂಡಂಗೆ’ ಮಾಡ್ತಿದೆ ಎಂದರು. ಇನ್ನು ಕೆಲವರು ಹುಡುಗಿಯ ದುಸ್ಸಾಹಸದ ಬಗ್ಗೆ ಅಚ್ಚರಿಯನ್ನೂ ಕೌತುಕವನ್ನೂ ಭಯವನ್ನೂ ವ್ಯಕ್ತಪಡಿಸಿ ಇನ್ನು ಈ ಹುಡುಗಿಕಥೆ ಮುಗಿದಂಗೇ.. ಎಂದು ನಿಟ್ಟುಸಿರು ಬಿಟ್ಟರು. ಅಂತೆಯೇ ಗೌಸಿಯಾಗೆ, `ಮನೆ ಮಾರಿ ಕೋಟಿಗಟ್ಟಲೆ ಹಣ ಪಡೆದು ಯಾವ ತಂಟೆತಕರಾರಿಲ್ಲದೆ ಸುಖವಾಗಿ ಜೀವಿಸುವ’ ಬಗ್ಗೆ ಅನೇಕರು ಬುದ್ದಿ ಮಾತುಗಳನ್ನೂ ಹೇಳಿದರು. ಇದೆಲ್ಲದರ ಮಧ್ಯೆ ಗೌಸಿಯಾ ತನ್ನ ಮನೆಯನ್ನು ಯಾರೇ ಕೇಳಿದರೂ ಬಿಟ್ಟುಕೊಡುವ ಮಾತೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಳು.

ಈ ಎಲ್ಲಾ ಬೆಳವಣಿಗೆಗಳು ಗೌಸಿಯಾ ಮನೆಯಂಗಳವನ್ನು ಅಕ್ಷರಶಃ ರಣರಂಗವನ್ನಾಗಿಸಿದ್ದವು. ನಿತ್ಯವೂ ಬೆದರಿಕೆಯ ಮಾತುಗಳು, ಮನೆಯ ಮುಂದೆ ಶಾಸಕರ ಬೆಂಬಲಿಗರ ಕೂಗಾಟ, ಅವಾಚ್ಯ ಶಬ್ದಗಳ ಬೈಗುಳ, ಸಂಜೆಯಾದಂತೆ ಕುಡಿದು ಬಂದು ವಿನಾಕಾರಣ ಜಗಳ ತೆಗೆಯುವುದು ಹೀಗೆ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಯಿತು. ಪ್ರತಿ ರಾತ್ರಿ 12 ಗಂಟೆಯವರೆಗೆ ಇದು ನಿತ್ಯದ ಗೋಳಾಯಿತು. ಒಂದೊಂದು ಕ್ಷಣವನ್ನೂ ಆತಂಕದಲ್ಲಿ ಕಳೆಯುವಂತಾಯಿತು. ಆಡಳಿತ ಸರಕಾರವೇ ಬಿಜೆಪಿಯಾದ ಕಾರಣ ರಕ್ಷಣಾ ವ್ಯವಸ್ಥೆಯೂ ಗೌಸಿಯಾ ಪರವಾಗಿ ನಿಲ್ಲಲಿಲ್ಲ. ಬದಲಾಗಿ ಗೌಸಿಯಾಳ ಮನೆಯವರನ್ನು ಬೆದರಿಸುವ ತಂತ್ರವನ್ನೂ ಮಾಡಲಾಯಿತು. ಇದ್ದಕ್ಕಿದ್ದಂತೆ ಒಂದು ದಿನ ಗೌಸಿಯಾ ತಂದೆ ಮನೆಯನ್ನು ಮಾರಾಟ ಮಾಡಿದ್ದಾರೆನ್ನುವ ಪೋರ್ಜರಿ ಡಾಕುಮೆಂಟ್ ತಂದವರೊಬ್ಬರು ಮನೆ ಖಾಲಿ ಮಾಡುವಂತೆ ದಬ್ಬಾಳಿಕೆ ಮಾಡುತ್ತಾರೆ. ಈ ಪೇಪರ್ ಪಡೆದ ಗೌಸಿಯಾ ಇದು ಫೋರ್ಜರಿ ಪೇಪರ್, ನಿಮ್ಮಮೇಲೆ ಕಂಪ್ಲೇಂಟ್ ಮಾಡುತ್ತೇನೆಂದು ಗದರುತ್ತಲೂ ಡಾಕುಮೆಂಟ್ ತಂದವರು ಓಟಕಿತ್ತಿದ್ದರು. ಈ ಬಗ್ಗೆ ಫೋರ್ಜರಿ ಕೇಸನ್ನು ದಾಖಲಿಸಿದಾಗಲೂ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದೆ ಮೌನವಾಯಿತು.

ಒಂದು ದಿನ ಇದ್ದಕ್ಕಿದ್ದಂತೆ ಗೌಸಿಯಾ ಮನೆಯ ಮುಂದೆ ನಾಲ್ಕು ರಿಜರ್ವ್‌ ವ್ಯಾನಗಳು, ನಾಲ್ಕು ಪೋಲೀಸ್ ಜೀಪ್‍ಗಳು ಅದರ ತುಂಬಾ ಪೋಲಿಸರು, ತಾಲೂಕಿನ ಎಲ್ಲಾ ಪೋಲಿಸ್ ಅಧಿಕಾರಿಗಳು ದೌಡಾಯಿಸಿದರು. ಇಡೀ ಓಣಿಯೇ ಪೋಲಿಸರಿಂದ ತುಂಬಿ ಹೋಯಿತು. ಗೌಸಿಯಾ ಮನೆಯವರು ಹೆದರಿಕೆಯಿಂದ ತತ್ತರಿಸಿ ಹೋದರು. ಈ ಮಧ್ಯೆಯೂ ಗೌಸಿಯಾ ದೈರ್ಯವಾಗಿ ಏನೆಂದು ವಿಚಾರಿಸಿದಾಗ `ಆರೆಸ್ಟ್ ವಾರೆಂಟ್’ ಇದೆ ನಿಮ್ಮನ್ನು ಬಂಧಿಸುವುದಾಗಿ ಹೇಳುತ್ತಾರೆ. ಕಾನೂನಿನ ಸರಿಯಾದ ಅರಿವಿದ್ದ ಕಾರಣ ಗೌಸಿಯಾ `ವಾರೆಂಟ’ನ್ನು ಕೇಳುತ್ತಾಳೆ. ನನಗೆ ರಕ್ಷಣೆ ಕೊಡಿ ಎಂದು ನಾನು ಕೇಸು ದಾಖಸಿದರೆ ನನ್ನನ್ನು ಅರೆಸ್ಟ್ ಮಾಡಲು ವಾರೆಂಟ್ ತರುತ್ತೀರಾ? ಕೊಡಿ ಎಲ್ಲಿದೆ ವಾರೆಂಟ್ ಎಂದಾಗ, ವಾರೆಂಟೇ ಇಲ್ಲದೆ ಬೆದರಿಕೆಯ ಮೇಲೆ ಬಂಧಿಸಲು ಬಂದಿದ್ದು ತಿಳಿಯುತ್ತದೆ.

ಸ್ಥಳದಲ್ಲಿಯೇ ಗೌಸಿಯಾ ಎಸ್.ಪಿಗೆ ಫೋನಾಯಿಸಿದಾಗ ವಾರೆಂಟ್ ಇಲ್ಲದೆ ಶಾಸಕರ ಒತ್ತಡದ ಮೇಲೆ ಆರೆಸ್ಟ್ ಮಾಡಲು ಬಂದದ್ದಾಗಿ ತಿಳಿಯುತ್ತದೆ. ಹೀಗೆ ವಾರೆಂಟ್ ಕೊಟ್ಟದ್ದು ನಿಜವೇ ಎಂದು ತಹಶೀಲ್ದಾರರಲ್ಲಿ ಗೌಸಿಯಾ ಕೇಳಿದಾಗಲೂ, ಕೊಟ್ಟಿಲ್ಲದಿರುವುದು ತಿಳಿಯುತ್ತದೆ. ನಂತರ ನೋಟಿಸಿಲ್ಲದೆ, ವಾರೆಂಟಿಲ್ಲದೆ ನನ್ನನ್ನು ಅರೆಸ್ಟ್ ಮಾಡಲು ಬಂದದ್ದಾಗಿ ಕೋರ್ಟ್‌ ಮೂಲಕ ಸ್ಟೇ ತರುತ್ತಾಳೆ. ಆಗ ಕೋರ್ಟಿಗೆ ಉತ್ತರ ಕೊಡಲಾಗದೆ ಪೋಲಿಸ್ ಇಲಾಖೆ ಕ್ಷಮಾಪಣೆ ಕೇಳುತ್ತದೆ. ನಂತರ ಇದೆಲ್ಲಾ ಪೂರ್ವಯೋಜಿತ ದಬ್ಬಾಳಿಕೆ ಎನ್ನುವುದು ಅರಿವಿಗೆ ಬರುತ್ತದೆ. ಮತ್ತು ಇದನ್ನೆಲ್ಲಾ ಗೌಸಿಯಾ ದಿಟ್ಟವಾಗಿಯೇ ಎದುರಿಸುತ್ತಾಳೆ.

ಆದರೆ ಈ ಘಟನೆಯ ಪರಿಣಾಮವಾಗಿ ಗೌಸಿಯಾ ತನ್ನ ಸಹೋದರಿ ಆಶಿಯಾ ಖಾನಳನ್ನು ಕಳೆದುಕೊಳ್ಳಬೇಕಾಯಿತು. ಹೀಗೆ ಪೋಲಿಸರು ದಿಡೀರನೆ ಮನೆಯ ಮುಂದೆ ದೌಡಾಯಿಸಿ ಗೌಸಿಯಾಳನ್ನು ಮನೆಯವರನ್ನು ಬಂಧಿಸುವ ಮಾತನಾಡಿದಾಗ ಗೌಸಿಯಾ ಸಹೋದರಿ ವಿಪರೀತ ಭಯಗೊಂಡಿದ್ದಳು. ಒಂದು ಬಗೆಯ ಶಾಕ್‍ಗೆ ಒಳಗಾಗಿದ್ದಳು. ಈ ಭಯಕ್ಕೆ ನಲುಗಿದ ಆಕೆ ಇದ್ದಕ್ಕಿದ್ದಂತೆ ರಕ್ತವನ್ನು ವಾಂತಿ ಮಾಡಿಕೊಂಡು ತೀರಾ ಅಸ್ವಸ್ಥಳಾದಳು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹೀಗೆ ಅಸ್ವಸ್ಥತೆ ತುಂಬಾ ಉಲ್ಭಣಗೊಂಡು ಸಾವನ್ನಪ್ಪಿದಳು. ಈ ಸಾವು ಗೌಸಿಯಾಳನ್ನು ಇನ್ನಿಲ್ಲದಂತೆ ಕಂಗೆಡಿಸಿತು.

ಹೀಗೆ ದಬ್ಬಾಳಿಕೆಗಳು ಆಕ್ರಮಣಗಳು ನಿರಂತರವಾಗಿ ನಡೆಯುತ್ತಿದ್ದಂತೆ ಗೌಸಿಯಾ ಕಾನೂನು ಸಮರಕ್ಕೆ ಸಿದ್ಧಳಾಗುತ್ತಾಳೆ. ಅಂದಿನ ಭಾರತದ ರಾಷ್ಟ್ರಪತಿಗಳಾಗಿದ್ದ ಪ್ರತಿಭಾ ಪಾಟೇಲ್ ಅವರಿಗೆ ಎಲ್ಲಾ ದಾಖಲೆಗಳ ಸಮೇತ ದೌರ್ಜನ್ಯದ ಕುರಿತಾದ ಸವಿವರವಾಗಿ ಬರೆದು ರಕ್ಷಣೆ ಕೊಡುವಂತೆ ಕೋರುತ್ತಾಳೆ. ಇದೇ ಪ್ರತಿಯನ್ನು ಸುಪ್ರೀಂ ಕೋರ್ಟಿಗೂ ಕಳಿಸಿಕೊಡುತ್ತಾಳೆ. ಇದರಿಂದಾಗಿ ಸುಪ್ರೀಂ ಕೋರ್ಟಿನಿಂದ ರಾಜ್ಯದ ಹೈಕೋರ್ಟಿಗೆ ಈ ವಿಷಯವಾಗಿ ಕ್ರಮವಹಿಸುವಂತೆ ಪತ್ರ ಬರೆಯುತ್ತಾರೆ. ಈ ಕುರಿತ ಪತ್ರವೊಂದು ಗೌಸಿಯಾಗೂ ತಲುಪಿತು. ಪತ್ರದಲ್ಲಿ ಚೀಫ್ ಸೆಕ್ರೆಟ್ರಿಯೇಟ್ ಅವರನ್ನು ಭೇಟಿಯಾಗುವಂತೆ ತಿಳಿಸಲಾಗಿತ್ತು. ನಂತರ ವಿಧಾನಸೌಧಕ್ಕೆ ಹೋಗಿ ಚೀಫ್ ಸೆಕ್ರೆಟ್ರಿಯೇಟ್ ಆಗಿದ್ದ ಸುಧಾಕರನ್ ಅವರನ್ನು ಭೇಟಿಯಾಗಿ ಸವಿವರವಾಗಿ ವಿವರಿಸಿದಾಗಲೂ ಯಾವ ಕ್ರಮವೂ ಜಾರಿಯಾಗಲಿಲ್ಲ.

ರಾಷ್ಟ್ರಪತಿ ಪ್ರತಿಭಾ ಪಾಟೇಲ್ ಅವರಿಗೆ ನ್ಯಾಯ ಕೇಳಿ ಕಳಿಸಿದ ಪತ್ರದ ಪರಿಣಾಮವಾಗಿ ಸಿಬಿಐ ಯಲ್ಲಿಯೂ ಗೌಸಿಯಾರ ಕೇಸು ದಾಖಲಾಗಿತ್ತು. ಬಕ್ರೀದ್ ಸಂದರ್ಭದಲ್ಲಿ ಸಿಬಿಐ ಪೋಲೀಸರು ಬಂದಿದ್ದರು. ಆಗ ಗೌಸಿಯಾ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಬಿಐನವರು ಮನೆಯನ್ನೆಲ್ಲಾ ಪರಿಶೀಲಿಸುತ್ತಾರೆ. ಹಬ್ಬದ ದಿನದಂದೇ ಮನೆಯಲ್ಲಿನ ದುಃಖದ ವಾತಾವರಣ ನೋಡಿ ಸಿಬಿಐ ಪೋಲೀಸರು ಕನಿಕರ ವ್ಯಕ್ತಪಡಿಸಿದರು. ಅಂತೆಯೇ ನೀವು ಇನ್ನು ಮುಂದೆ ಧೈರ್ಯವಾಗಿರಿ ಇಂದಿನಿಂದ ಸಿಬಿಐ ಪೋಲಿಸ್ ಪ್ರೊಟೆಕ್ಷನ್ ಕೊಡುತ್ತೇವೆಂದು ಹೇಳಿದರು. ಇದರ ಪರಿಣಾಮವಾಗಿ ಐದು ತಿಂಗಳ ಕಾಲ ಸೆಕ್ಯುರಿಟಿಯನ್ನು ಕೊಡಲಾಯಿತು. ಇದು ಗೌಸಿಯಾಗೆ ಕತ್ತಲಿನಲ್ಲಿ ಸಿಕ್ಕ ಮಿಂಚಿನ ಹುಳುವಿನಂತೆ ಒಂದು ಭರವಸೆ ಮೂಡಲು ಕಾರಣವಾಯಿತು.

ಪೋಲಿಸ್ ಇಲಾಖೆಯನ್ನು ಒಳಗೊಂಡಂತೆ ಇನ್ವೆಸ್ಟಿಗೇಷನ್ ಸಂಸ್ಥೆಗಳು ಮೊದಮೊದಲು ಅಸಹಕಾರ ತೋರಿದರೂ ಎಲ್ಲೋ ಒಂದು ಕಡೆ ಗೌಸಿಯಾಳ ಹೋರಾಟ ಪ್ರಬಲವಾಗುತ್ತಾ ಎಲ್ಲಾ ಸಂಸ್ಥೆಗಳ ಹಿರಿಯ ಅಧಿಕಾರಿಗಳ ಗಮನಸೆಳೆಯುತ್ತಾ ಹೋಯಿತು. ಇನ್ನೂ ದಬ್ಬಾಳಿಕೆ ಆಕ್ರಮಣವನ್ನು ಮುಂದುವರೆಸಿದರೆ ರಾಷ್ಟ್ರೀಯ ಸುದ್ದಿಯಾಗುವ, ಮುಂದೆ ದೊಡ್ಡದೊಂದು ತೊಡಕಾಗುವ ಲಕ್ಷಣಗಳು ಕಾಣುತ್ತಲೂ ಎದುರಾಳಿಗಳು ತಮ್ಮ ಪಟ್ಟನ್ನು ಸಡಿಲಿಸುತ್ತಾ ಹೋದರು. ಬದಲಿಗೆ ಬ್ರೋಕರುಗಳನ್ನು ಕಳಿಸಿ ಎಷ್ಟು ಕೋಟಿಗಾದರೂ ಸರಿ ಮನೆಯನ್ನು ಕೊಳ್ಳುತ್ತೇವೆಂಬ ಬೇಡಿಕೆ ಇಟ್ಟರು. ಗೌಸಿಯಾ ’ಮನೆ ಮಾರಾಟಕ್ಕಿಲ್ಲವೆಂದ ಮೇಲೆ, ಬೆಲೆಕಟ್ಟುವ ಪ್ರಶ್ನೆಯೇ ಇಲ್ಲವೆಂದು ದೃಢವಾಗಿ ಹೇಳಿದಳು. ಹೀಗೆ ಎದುರಾಳಿಗಳ ಕೊನೆಯ ಅಸ್ತ್ರವೂ ಫಲಿಸದೆ ಹೋಯಿತು.

ಸುಲಭವಾಗಿ ಹೊಸಕಿ ಹಾಕಬಹುದಾದ ಕ್ಷುದ್ರ ಹುಳುವೆಂದು ಭಾವಿಸಿದ ಗೌಸಿಯಾ ದಿನದಿಂದ ದಿನಕ್ಕೆ ಬೃಹತ್ ಗಾತ್ರದಲ್ಲಿ ಎದುರು ನಿಂತಂತಾಗಿ ಉಸಿರು ಕಟ್ಟಿಸಿದಳು. ಇದರ ಪರಿಣಾಮದಿಂದಾಗಿ ನಿಧಾನಕ್ಕೆ ಗೌಸಿಯಾ ಮನೆಯನ್ನು ಆಕ್ರಮಿಸುವ ಆಸೆಯನ್ನು ಬಿಡತೊಡಗಿದರು. ಈ ಮಧ್ಯೆ ಹೋಟೆಲ್ ಕಾಂಪೊಂಡು ಸದ್ದಿಲ್ಲದೆ ಗೌಸಿಯಾ ಮನೆಯನ್ನು ಬಿಟ್ಟು ಹಿಂದಕ್ಕೆ ಸರಿದುಕೊಂಡು ನಿರ್ಮಾಣವಾಯಿತು. ಗೌಸಿಯಾ ಅನುಭವಿಸಿದ ದೌರ್ಜನ್ಯಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲವಾದರೂ, ಸದ್ಯಕ್ಕೆ ತನ್ನ ಮನೆ ಉಳಿಸಿಕೊಂಡಿರುವುದೇ ದೊಡ್ಡದಾಗಿದೆ. ದೊಡ್ಡ ಧ್ವನಿಯಲ್ಲಿ ಗಟ್ಟಿಯಾಗಿ ಮತ್ತೆ ಮತ್ತೆ ನ್ಯಾಯ ಕೇಳಿದರೆ ಈ ವ್ಯವಸ್ಥೆಯ ಇರುವ ಚೌಕಟ್ಟಿನಲ್ಲಿಯೇ ನ್ಯಾಯ ಸಿಗುತ್ತದೆ ಎನ್ನುವುದನ್ನು ಗೌಸಿಯಾ ತನ್ನ ಹೋರಾಟದ ಮೂಲಕ ಸಾಬೀತು ಮಾಡಿದಳು. ತನ್ನದೇ ಅಸ್ಥಿತ್ವಕ್ಕಾಗಿ ಅದೈರ್ಯಗೊಳ್ಳದೆ, ಪೊಳ್ಳು ಬೆದರಿಕೆಗಳಿಗೆ ಹೆದರದೆ ದಿಟ್ಟವಾಗಿ ವ್ಯಕ್ತಿಗತ ನೆಲೆಯಲ್ಲಿ ಜೀವದ ಹಂಗು ತೊರೆದು ಹೋರಾಟವೊಂದನ್ನು ಕಟ್ಟಿದಳು.

ತನ್ನ ಹೋರಾಟದ ಸಂದರ್ಭದಲ್ಲಿ ಹೊಸಪೇಟೆಯ ಭಾಗದಲ್ಲಿದ್ದ ಯಾವೊಂದು ಸಂಘಟನೆಯೂ ಗೌಸಿಯಾಗೆ ಬೆಂಬಲಿಸಲಿಲ್ಲ. ಅಂತೆಯೇ ಸುತ್ತಮುತ್ತಣ ಜನರು ಕೂಡ ಈ ಎಲ್ಲಾ ಘಟನೆಗಳನ್ನು ನಿಂತು ನೋಡಿದರೇ ವಿನಃ ದೌರ್ಜನ್ಯದ ವಿರುದ್ಧ ಧ್ವನಿಗೂಡಿಸಲಿಲ್ಲ. ದುರ್ಜನರ ದರ್ಪಕ್ಕಿಂತ, ಸಜ್ಜನರ ಮೌನ ಹೆಚ್ಚು ಅಪಾಯಕಾರಿ ಎನ್ನುವುದು ಗೌಸಿಯಾ ಅವರ ಅನುಭವ. ಇಷ್ಟಾಗಿಯೂ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದಾಗಿ ಸುಳ್ಳು ಹೇಳಿಕೊಂಡದ್ದರ ಬಗ್ಗೆ ಗೌಸಿಯಾ ಬೇಸರವನ್ನು ವ್ಯಕ್ತಪಡಿಸುತ್ತಾರೆ. ಅಂತೆಯೇ ಕಾಂಗ್ರೇಸ್ ಪಕ್ಷ ತಮ್ಮನ್ನು ಬೆಂಬಲಿಸಿತಂತೆ ಎಂದು ಕೇಳಿದರೆ, `ಯಾರು ಬೆಂಬಲ ನೀಡಿದವರು ನನ್ನೆದುರು ಕರ್ಕೊಂಡು ಬನ್ನಿ ಕೇಳತೀನಿ’ ಎಂದು ಖಡಕ್ಕಾಗಿ ನುಡಿಯುತ್ತಾರೆ. ಸಂಘಟನೆಗಳ ಈ ಬಗೆಯ ನಿಷ್ಕ್ರಿಯ ಧೋರಣೆಯನ್ನು ಗಮನಿಸಿಯೇ ಸ್ವತಃ ಗೌಸಿಯಾ ಸಂಘಟನೆಯೊಂದನ್ನು ಹುಟ್ಟುಹಾಕಿದ್ದಾರೆ. `ರಜ್ಹಾ ಜಸ್ಟಿಸ್ ಅಂಡ್ ಡೆಮಾಕ್ರಸಿ ವಿಮೆನ್ ಅಂಡ್ ಯೂತ್ ಪ್ರೊಟೆಕ್ಷನ್ ಆಂದೋಲನ್’ ಕಟ್ಟಿದ್ದಾರೆ. ಈ ಸಂಘಟನೆಯ ಮೂಲಕ ನೊಂದವರ ಪರವಾದ ಹೋರಾಟಕ್ಕೆ ನೆರವಾಗುತ್ತಿದ್ದಾರೆ. ತನ್ನಂತೆಯೇ ಕಷ್ಟಕ್ಕೆ ಸಿಲುಕಿದವರಿಗೆ ಜೊತೆಯಾಗುತ್ತಿದ್ದಾರೆ. ಇದೀಗ ಬಳ್ಳಾರಿ ಜಿಲ್ಲೆಯ ರೈತಸಂಘದ ಮಹಿಳಾ ಅಧ್ಯಕ್ಷೆಯಾಗಿಯೂ ಮತ್ತು ಇಂತಹದ್ದೇ ಹತ್ತಾರು ಜೀವಪರ ಸಂಘಟನೆಗಳನ್ನು ಸೇರಿ ಕೆಲಸ ಮಾಡುತ್ತಿದ್ದಾರೆ.

ಗೌಸಿಯಾಳ ಹೋರಾಟದ ಹಿಂದೆ ಇದ್ದ ದೊಡ್ಡ ಶಕ್ತಿಯೆಂದರೆ ಶಿಕ್ಷಣ. ಅದರಲ್ಲೂ ಕಾನೂನಿನ ಅರಿವು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಕಾನೂನು ಸಂಬಂಧಿ ಚಿಂತನೆಗಳು ಮತ್ತು ಭಾರತದ ಸಂವಿಧಾನದ ಸರಿಯಾದ ತಿಳುವಳಿಕೆ ಗೌಸಿಯಾಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗೌಸಿಯಾಳ ಇಂಗ್ಲೀಷ್ ಭಾಷೆಯೂ ಪರಿಣಾಮಕಾರಿ ಸಂವಹನಕ್ಕೆ ನೆರವಾಗಿದೆ. ಇಂದು ಸ್ಪೆಷಲ್ ಎಕನಾಮಿಕ್ ಜೋನ್ ಒಳಗೊಂಡಂತೆ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳು ರೈತರ ಉಳುಮೆ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿರುವ ಈ ಹೊತ್ತು, ಭೂಸ್ವಾಧೀನ ಕಾಯ್ದೆಯ ಮೂಲಕ ಅಸ್ಥಿತ್ವಕ್ಕೇ ಕೊಡಲಿ ಪೆಟ್ಟುಕೊಟ್ಟು ಭೂಮಿಯನ್ನು ಕಸಿದುಕೊಳ್ಳುತ್ತಿರುವಾಗ, ರೈತರ ಸಾವುಗಳು ಸಹಜವೆಂಬ ಸ್ಥಿತಿ ನಿರ್ಮಾಣವಾಗಿರುವಾಗ, ಉಳ್ಳವರ ಆಸೆ ಆಕಾಂಕ್ಷೆಗಳಿಗೆ ತುಳಿತಕ್ಕೊಳಪಟ್ಟವರು ಬಲಿಯಾಗುತ್ತಿರುವಾಗ, ಗೌಸಿಯಾ ಖಾನರ ಈ ಹೋರಾಟ ನಿಜಕ್ಕೂ ಒಂದು ಸ್ಫೂರ್ತಿಯಂತೆಯೂ, ಈ ಕಾಲದ ದಿಟ್ಟತನದ ಮಾದರಿಯಂತೆಯೂ ಕಾಣುತ್ತದೆ.


ಇದನ್ನೂ ಓದಿ: ಮೋದಿ ಸರಕಾರದ ಅದಕ್ಷತೆ, ಅಮಾನವೀಯತೆಗಳನ್ನು ತೆರೆದಿಟ್ಟ ಕೊರೋನಾ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...