HomeUncategorizedಮೋದಿ ಅಮಿತ್ ಷಾ ಗೆ ಕ್ಲಿನ್ ಚಿಟ್ ಪ್ರಕರಣ: ಚುನಾವಣಾ ಆಯೋಗದಲ್ಲಿ ಭುಗಿಲೆದ್ದ ಭಿನ್ನಮತ

ಮೋದಿ ಅಮಿತ್ ಷಾ ಗೆ ಕ್ಲಿನ್ ಚಿಟ್ ಪ್ರಕರಣ: ಚುನಾವಣಾ ಆಯೋಗದಲ್ಲಿ ಭುಗಿಲೆದ್ದ ಭಿನ್ನಮತ

ಈ ಎಲ್ಲಾ ವಿಚಾರಣೆಗಳ ಸಂದರ್ಭದಲ್ಲಿ ಅಶೋಕ್ ಲಾವಸಾ ಅವರು ಕ್ಲೀನ್ ಚಿಟ್ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ವಾದ ಮಂಡಿಸಿದ್ದರು ಎನ್ನಲಾಗಿದೆ. ಆ ವಾದವನ್ನು ಅಂತಿಮ ಆದೇಶದಲ್ಲಿ ಉಲ್ಲೇಖಿಸಿರಲಿಲ್ಲ. ಅದೇ ಅವರ ಆಕ್ಷೇಪಣೆ.

- Advertisement -
- Advertisement -

| ಗಿರೀಶ್ ತಾಳಿಕಟ್ಟೆ |

ಚುನಾವಣಾ ಆಯೋಗದ ಆಂತರಿಕ ಕದನ ಬೀದಿಗೆ ಬಿದ್ದಿದೆ. ಚುನಾವಣಾ ಆಯುಕ್ತ ಅಶೋಕ್ ಲಾವಸಾ ಅವರು ಮೇ 4ರಿಂದೀಚೆಗೆ ಆಯೋಗ ನಡೆಸುವ ‘ಮಾದರಿ ನೀತಿ ಸಂಹಿತೆ’ ಸಭೆಗಳಿಂದ ದೂರ ಉಳಿಯುತ್ತಾ ಬರುವ ಮೂಲಕ ತಮ್ಮ ಪ್ರತಿರೋಧ ಹೊರಹಾಕಿದ ಘಟನೆ ಬೆಳಕಿಗೆ ಬಂದಿದೆ. ಚುನಾವಣಾ ಆಯೋಗ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಕೇಳಿಬಂದ ಸಂಹಿತೆ ಉಲ್ಲಂಘನೆಯ ಹಲವು ಆರೋಪಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಕ್ಕೆ ಅವರ ವಿರೋಧ ಇತ್ತು ಎನ್ನಲಾಗಿದೆ.

ಅಶೋಕ್ ಲಾವಸಾ

ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರಿಗೆ ಪತ್ರ ಬರೆದಿರುವ ಲಾವಾಸಾ “ತನ್ನ `ಅಲ್ಪಮತ’ ಅಭಿಪ್ರಾಯವನ್ನು ಆಯೋಗದ ಅಂತಿಮ ತೀರ್ಪಿನಲ್ಲಿ ಉಲ್ಲೇಖಿಸಲಾಗುತ್ತಿಲ್ಲವಾದ್ದರಿಂದ, ನಾನು ಅನಿವಾರ್ಯವಾಗಿ ಪೂರ್ಣ ಆಯೋಗದ ಸಭೆಗಳಿಂದ ದೂರ ಉಳಿಯಬೇಕಾಗಿದೆ” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನೀತಿ ಸಂಹಿತೆ ದೂರುಗಳ ವಿಚಾರಣೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಯೂ ಸೇರಿದಂತೆ ಇನ್ನಿಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡ ಮೂವರು ಅಧಿಕಾರಿಗಳ ಒಂದು ಸಮಿತಿಯಿರುತ್ತದೆ. ಯಾವುದೇ ದೂರಿನ ಬಗ್ಗೆ ಇಲ್ಲಿ ಚರ್ಚೆ ನಡೆದು ಒಮ್ಮತದ ಆದೇಶವನ್ನು ಸಾರ್ವಜನಿಕವಾಗಿ ಹೊರಹಾಕಲಾಗುವುದು. ಹಾಗೊಮ್ಮೆ ಒಮ್ಮತದ ತೀರ್ಮಾನಕ್ಕೆ ಬರಲಾಗದಿದ್ದರೆ, 2:1 ಅನುಪಾತದಲ್ಲಿ ಬಹುಮತದ ತೀರ್ಪನ್ನು ಅಂತಿಮ ಆದೇಶವಾಗಿ ಪರಿಗಣಿಸಲಾಗುತ್ತದೆ.

ಹೀಗೆ ಬಹುಮತದ ಆದೇಶಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ಹೊರಹಾಕಿದ ಇನ್ನೊಬ್ಬ ಸದಸ್ಯರ ವಾದವನ್ನು `ಅಲ್ಪಮತ’ ಅಭಿಪ್ರಾಯ ಎಂದು ಪರಿಗಣಿಸಲಾಗುವುದು. ಇದು ಚುನಾವಣಾ ಆಯೋಗದ ನೀತಿ ಸಂಹಿತೆ ದೂರುಗಳನ್ನು ವಿಚಾರಣೆ ನಡೆಸುವ ವೈಖರಿ. ಅಶೋಕ್ ಲಾವಾಸಾ ಅವರಿಗೆ ಈ ವೈಖರಿಗೆ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ, ಬದಲಿಗೆ ಅಯೋಗದ ಬಹುಮತ ತೀರ್ಪಿನ ಆದೇಶವನ್ನು ನೀಡುವಾಗ ಅದರಲ್ಲಿ ತನ್ನ `ಅಲ್ಪಮತ’ ವಾದವನ್ನೂ ಉಲ್ಲೇಖಿಸಬೇಕಿತ್ತು ಎಂಬುದು ಅವರ ಬೇಡಿಕೆ. ಸಾಮಾನ್ಯವಾಗಿ ಬಹುಸದಸ್ಯ ನ್ಯಾಯಪೀಠಗಳು ತಮ್ಮ ತೀರ್ಪು ಹೇಳುವಾಗ ಹೀಗೆ ಬಹುಮತದ ತೀರ್ಪನ್ನೇ ಅಂತಿಮ ತೀರ್ಪಾಗಿ ಪ್ರಕಟಿಸುವಾಗಲೂ ಅದಕ್ಕೆ ವ್ಯತಿರಿಕ್ತ ವಾದ ಮುಂದಿಟ್ಟ ಪೀಠದ ಅಲ್ಪಮತ ವಾದವನ್ನೂ ಉಲ್ಲೇಖಿಸುತ್ತೇವೆ.

ಮೋದಿ ಮತ್ತು ಅಮಿತ್ ಶಾ ವಿರುದ್ಧ ಕೇಳಿ ಬಂದ ನೀತಿ ಸಂಹಿತೆ ಉಲ್ಲಂಘನೆಯ ಎಲ್ಲಾ ದೂರುಗಳ ವಿಚಾರದಲ್ಲಿ ಮೂವರು ಆಯಕ್ತರು ತ್ರಿಸದಸ್ಯ ನ್ಯಾಯಮಂಡಳಿ ಕ್ಲೀನ್ ಚಿಟ್ ನೀಡಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿತ್ತು.

ಏಪ್ರಿಲ್ 21ರಂದು ಗುಜರಾತ್‍ನ ಪಟಣ್‍ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ ಮೋದಿಯವರು “ನಮ್ಮ ಸರ್ಕಾರ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರಿಂದಲೇ ಅದು ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಟ್ಟುಕಳಿಸಿತ್ತು” ಎಂದು ಹೇಳುವ ಮೂಲಕ ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಚುನಾವಣಾ ಆಯೋಗ ಮೇ 4ರಂದು ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಕ್ಲೀನ್ ಚಿಟ್ ನೀಡಿತ್ತು.

ಅದು, ಹೀಗೆ ಮೋದಿಯವರಿಗೆ ಕೊಟ್ಟ ಆರನೇ ಕ್ಲಿನ್‍ಚಿಟ್ ಆಗಿತ್ತು. ಇದಕ್ಕೂ ಮೊದಲು ಅವರು ನಾಂದೇಡ್‍ನಲ್ಲಿ ಮಾಡಿದ್ದ ಭಾಷಣದಲ್ಲಿ “ಕಾಂಗ್ರೆಸ್ ಒಂದು ಮುಳುಗುತ್ತಿರುವ ಟೈಟಾನಿಕ್” ಎಂದು ಉಲ್ಲೇಖಿಸಿದ್ದು ಸಹಾ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿತ್ತು. ಏಪ್ರಿಲ್ 1ನೇ ತಾರೀಕು ವಾದ್ರಾದಲ್ಲಿ ಭಾಷಣ ಮಾಡುತ್ತಾ ರಾಹುಲ್ ಗಾಂಧಿ ಅಲ್ಪಸಂಖ್ಯಾತರು (ಮುಸ್ಲಿಂ) ಹೆಚ್ಚಾಗಿರುವ ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿದ್ದನ್ನು ಮೋದಿ ಧಾರ್ಮಿಕ ತುಲನೆಯಲ್ಲಿ ಮತಾಡಿದ್ದಕ್ಕೂ ಆಯೋಗ ಕ್ಲೀನ್ ಚಿಟ್ ನೀಡಿತ್ತು. ಜೊತೆಗೆ, `ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ತಮ್ಮ ಮೊದಲ ಮತವನ್ನು ಪುಲ್ವಾಮಾದಲ್ಲಿ ಹುತಾತ್ಮರಾದವರಿಗೆ ಸಲ್ಲಿಸಲಾರರೆ?’ ಎಂದು ಮಾಡಿದ್ದ ಮೋದಿ ಭಾಷಣಕ್ಕೂ ಕ್ಲೀನ್‍ಚಿಟ್ ಪ್ರಾಪ್ತವಾಗಿತ್ತು.

ಈ ಎಲ್ಲಾ ವಿಚಾರಣೆಗಳ ಸಂದರ್ಭದಲ್ಲಿ ಅಶೋಕ್ ಲಾವಸಾ ಅವರು ಕ್ಲೀನ್ ಚಿಟ್ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ವಾದ ಮಂಡಿಸಿದ್ದರು ಎನ್ನಲಾಗಿದೆ. ಆ ವಾದವನ್ನು ಅಂತಿಮ ಆದೇಶದಲ್ಲಿ ಉಲ್ಲೇಖಿಸಿರಲಿಲ್ಲ. ಅದೇ ಅವರ ಆಕ್ಷೇಪಣೆ.

ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ಸನೀಲ್ ಅರೋರಾ ಅವರನ್ನು ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ “ಇದು ಚುನಾವಣೆ ನಡೆಯುತ್ತಿರುವ ಸಂದರ್ಭವಾಗಿರುವುದರಿಂದ ಇಂಥಾ ಚರ್ಚೆಯನ್ನು ಮುಂದುವರೆಸುವುದು ನನಗೆ ಇಷ್ಟವಿಲ್ಲ. ಈ ಹಂತದಲ್ಲಿ, ಮೌನವಾಗಿರುವುದು ನಿಜಕ್ಕೂ ತ್ರಾಸದಾಯಕ. ಆದರೂ ಚುನಾವಣೆಗಳು ಸುಸೂತ್ರವಾಗಿ ನಡೆಯಬೇಕೆಂಬ ಕಾರಣಕ್ಕೆ ನಾನು ಮೌನವಾಗಿರುತ್ತೇನೆ” ಎಂದಿದ್ದಾರೆ.

ಸುನೀಲ್ ಅರೋರ

ಜೊತೆಗೆ, “ಲಾವಸಾ ಅವರ ವಾದ ನನ್ನ ಗಮನಕ್ಕೆ ಬಂದಿದೆ. ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ದೂರುಗಳ ತೀರ್ಪು `ಎಕ್ಸಿಕ್ಯೂಟಿವ್ ತೀರ್ಮಾನ’ಗಳಾಗಿರುತ್ತವೆಯೇ `ಕ್ವಾಸಿಜ್ಯುಡಿಸಿಯಲ್’ ತೀರ್ಮಾನಗಳಲ್ಲ. ಅವರು ಹೇಳುವಂತೆ ಅಲ್ಪಮತ ವಾದವನ್ನು ಉಲ್ಲೇಖಿಸುವ ಅವಕಾಶ ಕ್ವಾಸಿ ಜ್ಯುಡಿಸಿಯಲ್ ತೀರ್ಮಾನಗಳಲ್ಲಿ ಸಾಧ್ಯವಿದೆ, ಆದರೆ ಎಕ್ಸಿಕ್ಯೂಟಿವ್ ತೀರ್ಮಾನಗಳಲ್ಲಿ ಅಲ್ಲ” ಎಂದು ಸ್ಪಷ್ಟಣೆ ನೀಡಿದ್ದಾರೆ.

ಚುನಾವಣಾ ಆಯೋಗದ ಆಂತರಿಕ ಕಾನೂನುಗಳ ದೃಷ್ಟಿಯಲ್ಲಿ, ಯಾವುದೇ ಪ್ರಕರಣದ ವಿಚಾರಣೆಯ ನಂತರ ಬಾಧಿತ ಪಕ್ಷಗಳಿಗೆ ತಮ್ಮ ದೂರುಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟು ಒಂದು ಸಂಪೂರ್ಣ ತನಿಖೆಗೆ ಆದೇಶಿಸುವ ಸಾಧ್ಯತೆಯಿರುವ ಪ್ರಕರಣಗಳನ್ನು ಕ್ವಾಸಿಜ್ಯುಡಿಸಿಯಲ್ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ. ಆದರೆ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಂತಹ ತನಿಖೆಯ ಅವಶ್ಯಕತೆ ಇರುವುದಿಲ್ಲ, ಬದಲಿಗೆ ಪ್ರಾಥಮಿಕ ಸಾಕ್ಷ್ಯಗಳನ್ನು ಆಧರಿಸಿ, ಚುನಾವಣೆ ಮುಗಿಯುವುದರೊಳಗೇ ಬಾಧಿತವಾಗುವಂತೆ ಸಂಬಂಧಪಟ್ಟ ವ್ಯಕ್ತಿ ಅಥವಾ ಪ್ರಕರಣಕ್ಕೆ ಸೂಕ್ತ ಶಿಕ್ಷೆ, ನಿರ್ಬಂಧ ಹೇರಲಾಗುವುದು. ಹಾಗಾಗಿ ಅವು `ಎಕ್ಸಿಕ್ಯೂಟಿವ್ ತೀರ್ಪು’ಗಳು ಎನಿಸಿಕೊಳ್ಳುತ್ತವೆ. ಹಾಗಾಗಿ ಇಂಥಾ ಎಕ್ಸಿಕ್ಯೂಟಿವ್ ತೀರ್ಪುಗಳಲ್ಲಿ `ಅಲ್ಪಮತ’ದ ವಾದವನ್ನೂ ಉಲ್ಲೇಖಿಸಬೇಕೆಂಬ ನಿಯಮವಿಲ್ಲ ಎಂಬುದು ಚುನಾವಣಾ ಆಯೋಗದ ವಾದ.

ಇದನ್ನು ಓದಿ: ಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

ಅದೇನೆ ಇರಲಿ, ಚುನಾವಣಾ ಆಯೋಗ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂಬ ಸಾರ್ವಜನಿಕ ಅಭಿಪ್ರಾಯ ದಟ್ಟವಾಗುತ್ತಿರುವ ಸಮಯದಲ್ಲೇ ಈ ಪ್ರಕರಣ ಹೊರಬಂದಿರುವುದು ಇಡೀ ಆಯೋಗದ ಪಾರದರ್ಶಕ, ಪ್ರಾಮಾಣಿಕತೆಗಳನ್ನೆ ಪ್ರಶ್ನಿಸುವಂತೆ ಮಾಡಿದೆ. ಕಳೆದ ವರ್ಷದ ಡಿಸೆಂಬರ್ 2ರಂದು ಮೋದಿಯವರ ಸರ್ಕಾರ ಸುನೀಲ್ ಅರೋರಾ ಅವರನ್ನು ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕ ಮಾಡಿದಾಗಲೇ ಹಲವು ಚರ್ಚೆಗಳು ಹುಟ್ಟಿಕೊಂಡಿದ್ದವು. 1980ರ ರಾಜಸ್ಥಾನ್ ಕ್ಯಾಡರ್‍ನ ಐಎಎಸ್ ಅಧಿಕಾರಿಯಾದ ಸನೀಲ್ ಅರೋರಾ ಆಡಳಿತಾತ್ಮಕ ಮೇಲ್ದರ್ಜೆಯ ಹುದ್ದೆಗೇರಿಸಲ್ಪಟ್ಟದ್ದು ಎನ್‍ಡಿಎ ಅಧಿಕಾರದ ಅವಧಿಗಳಲ್ಲೇ. ರಾಜಸ್ಥಾನದ ರಾಜ್ಯ ಸರ್ಕಾರದ ಹುದ್ದೆಗಳಲ್ಲಿದ್ದ ಅರೋರಾ ಅವರನ್ನು 1999ರಲ್ಲಿ ವಾಜಪೇಯಿಯವರ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ನಾಗರಿಕ ವಿಮಾನಯಾನ ಖಾತೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಕೇಂದ್ರ ಸೇವೆಯ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೇ ಇಂಡಿಯನ್ ಏರ್‍ಲೈನ್ಸ್‍ನ ಛೀಫ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ನೇಮಕಗೊಂಡಿದ್ದರು. ಎನ್‍ಡಿಎ ಸರ್ಕಾರ ಅಧಿಕಾರ ಕಳೆದುಕೊಂಡು ಯುಪಿಎ ಅಧಿಕಾರಕ್ಕೆ ಬಂದ ನಂತರ, ಅರೋರ ಅವರ ಬಿಜೆಪಿ ಸಖ್ಯವನ್ನು ಸೂಕ್ಷ್ಮವಾಗಿ ಗಮನದಲ್ಲಿರಿಸಿಕೊಂಡೇ ಅವರನ್ನು ಕೇಂದ್ರ ಸೇವೆಯಿಂದ ಬಿಡುಗಡೆಗೊಳಿಸಿ ಮರಳಿ ರಾಜಸ್ಥಾನ ರಾಜ್ಯ ಸೇವೆಗೆ ನಿಯೋಜಿಸಲಾಗಿತ್ತು. ಅದಾದ ಒಂದು ದಶಕದ ನಂತರವಷ್ಟೇ ಮೋದಿಯವರು ಅಧಿಕಾರಕ್ಕೇರಿದ ತರುವಾಯ 2017ರಲ್ಲಿ ಅವರನ್ನು ರಾಜ್ಯ ಸೇವೆಯಿಂದ ಮತ್ತೆ ಕೇಂದ್ರ ಸೇವೆಗೆ ನಿಯೋಜಿಸಿಕೊಂಡು ಚುನಾವಣಾ ಆಯೋಗದ ಆಯುಕ್ತ ಹುದ್ದೆ ನೀಡಲಾಗಿತ್ತು.

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್, ಸಿಬಿಐ, ಆರ್‍ಬಿಐನಂತಹ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಆಂತರಿಕ ಕಚ್ಚಾಟದಿಂದ ಬೀದಿಗೆ ಬೀಳುತ್ತಿರುವ ಸಾಲಿಗೆ ಚುನಾವಣಾ ಆಯೋಗವೂ ಸೇರ್ಪಡೆಗೊಂಡಂತಾಗಿದೆ.

ಇದನ್ನು ಓದಿ: ಪ್ರಗ್ಯಾಸಿಂಗ್ ಸರಿ, ತೇಜ್‍ಬಹಾದ್ದೂರ್ ತಪ್ಪು: ಹುಟ್ಟು ಹಾಕಿರುವ ಪ್ರಶ್ನೆಗಳು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...