ಒಂದು ಸಂಗತಿ ಈಗ ಕನ್ನಡದಲ್ಲೂ ವೈರಲ್ ಆಗಿದೆ. ಅದರ ಪ್ರಕಾರ, ಹಿಂದೂ ಯುವತಿಯರು ಎಚ್ಚೆತ್ತುಕೊಂಡಿದ್ದಾರಂತೆ. ಏಕೆ ಅಂದರೆ, ತಾನು ಹಿಂದೂ ಎಂದು ನಂಬಿಸಿದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಒಬ್ಬಳನ್ನು ಉಗ್ರರಿಗೆ ಮಾರಲು ಹೊರಟಿದ್ದ, ಸತ್ಯ ತಿಳಿದ ಯುವತಿ ಆತನನ್ನು ಕೊಂದೇ ಬಿಟ್ಟಳು. ಹಿಂದೂ ಯುವತಿಯರು ಎಚ್ಚೆತ್ತುಕೊಳ್ಳುತ್ತಿದ್ದಾರೆ ಎಂಬುದು ಈ ಸಂದೇಶದ ಸಾರಾಂಶ..

ಇದನ್ನು ಕೆಲವರು ಸುಳ್ಳು ಅಂತ ಗೊತ್ತಿದ್ದರೂ ವೈರಲ್ ಮಾಡುತ್ತಿದ್ದರೆ, ಅವರನ್ನು ಫಾಲೋ ಮಾಡುವವರು ಕಣ್ಣುಮುಚ್ಚಿ ಷೇರ್ ಮಾಡುತ್ತಿದ್ದಾರೆ.
ವಾಸ್ತವ ಏನು?
ಈ ಸಂದೇಶದಲ್ಲಿ ಹಾಕಿರುವ ಫೋಟೋ ಒಂದು ವೆಬ್ ಸೀರೀಸ್ ಪಾತ್ರದ್ದು! ಫ್ಯಾಮಿಲಿ ಮ್ಯಾನ್ ಸಿರೀಸ್-2ನಲ್ಲಿ ಈ ಪಾತ್ರವಿದೆ. ಈ ಪಾತ್ರಕ್ಕೆ ಎರಡು ಹೆಸರುಗಳಿವೆ. ಕಲ್ಯಾಣ್ ಮತ್ತು ಸಲ್ಮಾನ್. ಇದು ಬ್ರೇನ್‍ವಾಶ್‍ಗೆ ಒಳಗಾದ ಮುಸ್ಲಿಂ ಯುವಕನ ಪಾತ್ರ. ಈ ಪಾತ್ರದ ಫೋಟೊವನ್ನೇ ಪೋಸ್ಟರ್ ಮಾಡಿ ಈ ಸಂದೇಶ ಹರಡಲಾಗಿದೆ. ಅಂದರೆ ರೀಲ್ ಲೈಫ್ ಪಾತ್ರವನ್ನು ರಿಯಲ್ ಲೈಫ್‍ಗೆ ತರಲು ತಿಣುಕಾಡಿದ್ದಾರೆ.
ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುವ ಈ ಸಿರೀಸ್ ತಕ್ಕಮಟ್ಟಿಗೆ ಜನಪ್ರಿಯವೂ ಆಗಿದೆ. ಇದು ಥ್ರಿಲ್ಲರ್ ಸ್ಟೋರಿಯಾಗಿದ್ದು, ಬಾಲಿವುಡ್‍ನ ಪ್ರತಿಭಾವಂತ ನಟ ಮನೋಜ್ ಬಾಜಪೈ ಇದರ ಹೀರೊ. ಶ್ರೀಕಾಂತ್ ತಿವಾರಿ (ಮನೋಜ್ ಬಾಜಪೈ) ಎನ್‍ಐಎನಲ್ಲಿ ಸ್ಪೇಷಲ್ ತನಿಖಾ ಆಫೀಸರ್. ಈ ಸಿರಿಯಲ್‍ನಲ್ಲಿ ಮೇಲೆ ತಿಳಿಸಿದ ಪೋಸ್ಟರ್‌ನಲ್ಲಿರುವ ಕಲ್ಯಾಣ್ ಅಲಿಯಾಸ್ ಸಲ್ಮಾನ್ (ಬ್ರೇನ್‍ವಾಶ್‍ಗೆ ಒಳಗಾದ ಮುಸ್ಲಿಂ ಯುವಕನ ಪಾತ್ರ) ಹೀರೊ ಶ್ರೀಕಾಂತ್‍ನ ಪುತ್ರಿಯನ್ನು ಅಪಹರಿಸುತ್ತಾನೆ. ಇದಿಷ್ಟು ಕತೆ.
ಅಭಯ ವರ್ಮಾ ಎನ್ನುವ ನಟ ಕಲ್ಯಾಣ್/ಸಲ್ಮಾನ್ ಪಾತ್ರ ಮಾಡಿದ್ದಾರೆ. ಅವರ ಫೋಟೊ ಹಾಕಿ, ರೀಲ್ ಘಟನೆ ರಿಯಲ್ ಎಂಬಂತೆ ಬಿಂಬಿಸಿ ಪೋಸ್ಟರ್ ಮಾಡಲಾಗಿದೆ.
ನೂರಾರು ಭಕ್ತರು ಇದು ನೈಜ ಘಟನೆ ಎಂದು ಭಾವಿಸಿ ಈ ಫೇಕ್ ಸಂದೇಶವನ್ನು ವೈರಲ್ ಮಾಡುತ್ತಿದ್ದಾರೆ!
ಇದನ್ನೂ ಓದಿ: ಲಸಿಕೆ ಪಡೆದ ಎಲ್ಲರೂ 2 ವರ್ಷಗಳಲ್ಲಿ ಸಾಯುತ್ತಾರೆ: ಈ ವ್ಯಾಟ್ಸಾಪ್ ವದಂತಿ ನಂಬಬೇಡಿ – ಲಸಿಕೆ ಹಾಕಿಸಿಕೊಳ್ಳಿ


