ಇದು ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದ ಅಮಾನವೀಯ ಘಟನೆ. ಈಗಲೂ ಕರ್ನಾಟಕದ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದಕ್ಕೆ ಒಂದು ಸಾಂಕೇತಿಕ ಘಟನೆಯಂತಿದೆ ಇದು.

ಹೈದರಾಬಾದ್‍ ಕರ್ನಾಟಕದಲ್ಲಿ ಕಟಿಂಗ್‍ ಮಾಡಿಸಿಕೊಳ್ಳಲೂ ದಲಿತ ಯುವಕರು ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಲಾಕ್‍ಡೌನ್‍ ಕಾರಣಕ್ಕೆ ಪಟ್ಟಣಗಳಲ್ಲಿ ಸಲೂನ್‍ ಶಾಪ್‍ ಬಂದ್‍ ಇರುವ ಕಾರಣಕ್ಕೆ ತಮ್ಮೂರಲ್ಲೇ ಶೇವಿಂಗ್‍ ಮಾಡಿಸಿಕೊಳ್ಳಲು ಹೋದ ಇಬ್ಬರು ದಲಿತ ಸಹೋದರರ ಮೇಲೆ ಸವರ್ಣೀಯರು ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ. ನೊಂದ ಸಹೋದರರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕ್ಷೌರದ ಕ್ರೌರ್ಯ ಎನ್ನುವುದೋ ಅಥವಾ ಮೇಲ್ಜಾತಿಗಳಲ್ಲಿ ಇನ್ನೂ ಅಂತರ್ಗತವಾಗಿರುವ ಜಾತಿಭೇದ ಎನ್ನುವುದೋ?

ಜೂನ್‍ 6ರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಈಗ ತಡವಾಗಿ ದೂರು ದಾಖಲಾಗಿದೆ. ಯಲಬುರ್ಗಾ ತಾಲೂಕಿನ ಹೊಸಹಳ್ಳಿ ಗ್ರಾಮದ ಸಣ್ಣ ಹನುಮಂತು ಹಾಗೂ ಬಸವರಾಜ ಎಂಬ ದಲಿತ ಸಹೋದರರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ದಲಿತ ಸಮುದಾಯದ ಈ ಇಬ್ಬರಿಗೆ ಕ್ಷೌರ ಮಾಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಇದು ವಿಪರೀತಕ್ಕೆ ಹೋಗಿ ಸವರ್ಣೀಯರು ಕ್ಷೌರಕ್ಕೆ ಬಂದ ದಲಿತ ಸಹೋದರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಊರಲ್ಲೇ ಅವಮಾನಿತರಾದ ಇಬ್ಬರೂ ಸಹೋದರರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸಂಗತಿಯೇ ಒಟ್ಟೂ ದೌರ್ಜ್ಯನಕ್ಕೆ ಸಾಕ್ಷಿಯಂತಿದೆ. ಯುವಕರು ಈಗ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ದಲಿತ ಸಮುದಾಯದ ದೇವಪ್ಪ ಎಂಬುವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಘಟನೆ ಸಂಬಂಧ ಹೊಸಳ್ಳಿ ಗ್ರಾಮದ ಖಾಲಿ ಜಾಗವೊಂದರಲ್ಲಿ ಕ್ಷೌರ ಮಾಡುತ್ತಿದ್ದ ಕ್ಷೌರಿಕರಾದ ಮಲ್ಲಪ್ಪ, ಕಳಕಪ್ಪ ಸೇರಿದಂತೆ ಒಟ್ಟು 16 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಲಾಕ್‍ಡೌನ್‍ ಕಾರಣಕ್ಕೆ ಪಟ್ಟಣಗಳಲ್ಲಿ ಸಲೂನ್‍ ಶಾಪ್‍ಗಳು ಬಂದ್‍ ಆಗಿವೆ. ಹೀಗಾಗಿ ಅನಿವಾರ್ಯವಾಗಿ ದಲಿತ ಯುವಕರು ತಮ್ಮೂರ ಕ್ಷೌರಿಕರ ಬಳಿ ಹೋಗಿದ್ದಾರೆ. ದಲಿತರಿಗೆ ಕ್ಷೌರ ಮಾಡದಂತೆ ಮೇಲ್ಜಾತಿಯವರು ಕ್ಷೌರಿಕರ ಹೊಟ್ಟೆಗೂ ಕಲ್ಲು ಹಾಕುತ್ತಿರುವ ವಿದ್ಯಮಾನಗಳನ್ನು ನಮ್ಮ ಗ್ರಾಮಗಳಲ್ಲಿ ಕಾಣಬಹುದಾಗಿದೆ.

  • ಮಲ್ಲನಗೌಡರ್ ಪಿ.ಕೆ

ಇದನ್ನೂ ಓದಿ: ರಾಜಸ್ಥಾನ: ಅಂಬೇಡ್ಕರ್‌ ಪೋಸ್ಟರ್‌ ತೆರವಿಗೆ ಆಕ್ಷೇಪಿಸಿದ ದಲಿತ ಯುವಕನ ಹತ್ಯೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here