ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ, ಈ ಒಂದು ಅಡಿ ಬರಹದಲ್ಲಿ ಇವತ್ತಿನ ಎಲ್ಲ ಪತ್ರಿಕೆಯಲ್ಲಿ ಮೂಡಿ ಬಂದ ಬಸವ ಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಬಸವಣ್ಣನವರ ಅನುಭವ ಮಂಟಪಕ್ಕೆ ಭೂಮಿ ಪೂಜೆ ಕಾರ್ಯಕ್ರಮದ ಜಾಹಿರಾತಿಗೆ ನಾವು ಏಕೆ ವಿರೋಧ ಮಾಡಬೇಕು?
ಇವತ್ತು ಸನಾತನ ಪ್ರಗತಿಪರ ಚಿಂತಕ ಎಂದಿದ್ದಾರೆ, ಇದನ್ನ ವಿರೋಧ ಮಾಡದೇ ಇದ್ದರೆ ನಾಳೆ ಇನ್ನೊಂದು ಅಡಿಬರಹದಲ್ಲಿ ಸನಾತನ ಧರ್ಮದ ಚಿಂತಕ ಎನ್ನುತ್ತಾರೆ, ಆಗಲು ಸುಮ್ಮನಿದ್ದರೆ, ಇನ್ನೊಬ್ಬ ವಿವೇಕಾನಂದ, ಶಿವಾಜಿಯ ಸ್ಥಾನದಲ್ಲಿ ಬಸವಣ್ಣನವರನ್ನು ಕೂರಿಸುವ ಕುತಂತ್ರದ ಒಂದು ಭಾಗವಿದು. ಬಸವಣ್ಣನವರು ಸನಾತನ ಪ್ರಗತಿಪರರಲ್ಲ, ಜಾತಿ, ಮೌಡ್ಯ, ಜೋತಿಷ್ಯ, ಪೂರೋಹಿತಶಾಹಿ, ಮೂಡನಂಬಿಕೆ, ಗೊಡ್ಡುದೇವರಗಳ ಎದೆಗೊದ್ದು ನವಸಮಾಜಕ್ಕೆ ಭುನಾದಿ ಹಾಕಿ ಸಮಸಮಾಜವನ್ನ ಕಟ್ಟಿದ ವಿಶ್ವಗುರು.
ಇದನ್ನೂ ಓದಿ: ಸುಳ್ಳು, ದ್ವೇಷ ಹರಡುವ ಹಿಂದುತ್ವದ ವೆಬ್‌ಸೈಟ್ ‘ಒಪಿ ಇಂಡಿಯಾ’ಗೆ ಜಾಹಿರಾತು ನಿಲ್ಲಿಸಿದ MUBI

ಜಾತಿ ವರ್ಗ ವರ್ಣ ರಹಿತ ಕಲ್ಯಾಣ ರಾಜ್ಯವನ್ನು ಕಟ್ಟಲು ಒಂದು ಸಾಧನವನ್ನಾಗಿ ಬಸವಾದಿ ಪ್ರಮಥರು ಅನುಭವ ಮಂಟಪವನ್ನು ಕಟ್ಟಿದರು. ಅನುಭವ ಮಂಟಪ ದೇವರಲ್ಲ, ದೇವಾಲಯವಲ್ಲ. ದೇವಾಲಯಗಳನ್ನು ದೇವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿದರೆ, ಅನುಭವ ಮಂಟಪ ನಾಲ್ಕು ಗೋಡೆಗಳ ಮಧ್ಯೆ ಇದ್ದ ದೇವರನ್ನು ಬಂಧಮುಕ್ತಗೊಳಿಸಿತು. ಸರ್ವ ಜಾತಿ ಧರ್ಮದವರನ್ನ ಬಾಚಿತಬ್ಬಿ ಸಮಸಮಾಜದ ಕನಸನ್ನ ಸಾಕಾರಗೊಳಿಸಿದ ಕಲ್ಯಾಣದ ಕ್ರಾಂತಿದ್ಯೋತಕ ನಮ್ಮ ಅನುಭವ ಮಂಟಪ ಸರ್ವ ಜನಾಂಗದ ಹೆಮ್ಮೆ.
ಸನಾತನ ಎಂಬ ಪದವೇ ತುಂಬಾ ಶೋಷಣೆಯಿಂದ ಕೂಡಿದ್ದು, ಹೀಗಾಗಿಯೇ ಅದರಿಂದ ಸಿಡಿದೆದ್ದು ಬೌದ್ಧ, ಜೈನ ಮತ್ತು ಇನ್ನಿತರ ಧರ್ಮಗಳು 2000 ವರ್ಷಗಳ ಹಿಂದೆಯೇ ಸ್ಥಾಪನೆಯಾದವು. ವೇದ, ಆಗಮ, ಪುರಾಣಗಳ ವಿರೋಧವಾಗಿಯೇ ಈ ಹೊಸ ಧರ್ಮಗಳನ್ನು ಸ್ಥಾಪಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಧರ್ಮಗಳ ಹೊಸ ಆಲೋಚನೆಗಳು ಪುರೋಹಿತಶಾಹಿಗಳಲಿಗೆ ಮಗ್ಗುಲು ಮುಳ್ಳಾದಾಗ, ಹೊಸ ಧರ್ಮಗಳನ್ನ ಹತ್ತಿಕ್ಕಿದರು. ಇದರ ಒಂದು ಭಾಗವೇ ಭಾರತದಿಂದ ಬೌದ್ಧ ಧರ್ಮವನ್ನು ಹೊರಹಾಕಲಾಯಿತು. ಸಿಕ್ಕ ಸಿಕ್ಕ ಕಡೆ ಭೌದ್ದ ಬಿಕ್ಕುಗಳನ್ನು ಕೊಲ್ಲಲಾಯಿತು. ನಳಂದ ವಿಶ್ವವಿದ್ಯಾಲಯದ ಕಳೇಬರಹದ ಬೂದಿ ಇದರ ಕಥೆ ಈಗಲೂ ಹೇಳುತ್ತವೆ.
ತದನಂತರ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಎಂಬ ಚಾತುರ್ವಣ ವ್ಯವಸ್ಥೆಯನ್ನು ಜಾರಿಗೆ ತಂದರು. ಜಾತಿವ್ಯವಸ್ಥೆಯನ್ನ ಕಟ್ಟಿದರು, ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡುವ ಒಂದು ಬಲಿಷ್ಠ ವರ್ಗಗಳ ಹುಟ್ಟಿಗೆ ಕಾರಣರಾದರು. ಮೂಢನಂಬಿಕೆ ಮತ್ತು ಮೌಡ್ಯಗಳನ್ನ ಬಿತ್ತಿ ಸಮಾಜದಲ್ಲಿ ತಮಗೆ ಬೇಕಾದ ಬೆಳೆ ತೆಗೆದರು. ಈ ಸನಾತನಿ ಸಮುದಾಯದ ಕಟ್ಟಳೆಗಳು ಶತ ಶತಮಾನಗಳ ಕಾಲ ಆಚರಣೆಯಲ್ಲಿರುವಾಗಲೇ 12 ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನ ಪ್ರವೇಶವಾಯಿತು.
ಇದನ್ನೂ ಓದಿ: ಸರ್ಕಾರದ ಜಾಹಿರಾತುಗಳ ವೆಚ್ಚದ ಲೆಕ್ಕ ಕೇಳಿದ ವಾಕ್ಪಟು ಸಂಸದೆ ಮಹುವಾ ಮೊಹಿತ್ರಾ

ಕಾರ್ತೀಕದ ಕತ್ತಲಲಿ ಆಕಾಶದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ,
ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ,
ದೇವದಯೆಯೊಂದು ಹೇ ಧೀರಾವತಾರ,
ಶ್ರೀ ಬಸವೇಶ್ವರಾ!
– ಕುವೆಂಪು
’ಚಾತುರ್ವಣಗಳೇ ಸರ್ವೋತ್ತಮ’ ಅನ್ನುತ್ತಿದ್ದ ಸನಾತನ ಪರಂಪರೆಗೆ ವಿರುದ್ಧವಾಗಿ ಮನುಷ್ಯ ಕುಲವೇ ಶ್ರೇಷ್ಠ ಎಂಬ ಮತವನ್ನ ಸ್ಥಾಪಿಸಿದರು. ಅಲ್ಲಿಯವರೆಗೂ ಜ್ಞಾನವನ್ನು ಒಂದು ವರ್ಗದ ಸ್ವತ್ತನ್ನಾಗಿ ಮಾಡಲಾಗಿತ್ತು. ವೇದಗಳನ್ನು ಕೇಳಿಸಿಕೊಂಡರೆ ಕಿವಿಗೆ ಸೀಸ ಹೊಯ್ಯುವ, ನಾಲಿಗೆ ಕತ್ತರಿಸುವ ಪುರೋಹಿತಶಾಹಿಗಳ ಅನಿಷ್ಠಗಳನ್ನು ಅವರು ವಿರೋಧಿಸಿದರು. ಜ್ಞಾನ ಒಂದು ವರ್ಗದ ಅಡಿಯಲ್ಲಿ ಬಿದ್ದು ನರಳುತ್ತಿದ್ದಾಗ, ಜ್ಞಾನಕ್ಕೆ ದಾಸ್ಯದ ಸಂಕೋಲೆಯನ್ನ ಬಿಡಿಸಿದವರು ಬಸವಣ್ಣ. ಅನುಭವ ಮಂಟಪವನ್ನು ಸ್ಥಾಪಿಸಿ ಪುರಾಣಗಳನ್ನು, ದೇವರನ್ನು, ವೇದ ಶಾಸ್ತ್ರಗಳನ್ನು ಅನುಭವ ಮಂಟಪದ ವೈಚಾರಿಕ ವಿಚಾರವಾದದ ಕಟಕಟೆಯಲ್ಲಿಟ್ಟು ಸುಳ್ಳು/ಸತ್ಯದ ನಿಜ ದರ್ಶನವನ್ನ ಸಮಾಜಕ್ಕೆ ತೋರಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಫ್ಘಾನಿಸ್ತಾನದ ಕಡೆಯಿಂದ ಸೂಫಿ ಸಂತರೂ ಕೂಡ ಬಸವಣ್ಣನ ಈ ಹೊಸ ವಿಚಾರ ಹೋರಾಟದ ಭಾಗವಾದರು. ಅನುಭವ ಮಂಟಪದಲ್ಲಿ 770 ಜನರ ವಿಚಾರವಾದಿಗಳ ತಂಡ ಕಟ್ಟಿ ಸಮಾಜದ ಓರೇ-ಕೋರೆಗಳನ್ನ ತಿದ್ದುತ್ತಾ ಹೋದರು. ಸನಾತನಿ ಪರಂಪರೆಯ ಶೋಷಣೆಯನ್ನು ಜನರ ಮುಂದಿಟ್ಟು ಯಾವುದು ಸರಿ ಯಾವುದು ತಪ್ಪು ಅದನ್ನ ಜನರೇ ನಿರ್ಧಾರ ಮಾಡಬೇಕೆಂಬ ವಿಚಾರವನ್ನು ಸಮಾಜದ ಮುಂದಿಟ್ಟರು. ಬಲಿಷ್ಠ ಪೌರೋಹಿತ್ಯ ವರ್ಗಕ್ಕೆ ಸೆಡ್ಡು ಹೊಡೆದು, ಸಮಾನತೆಯ ಗಂಟೆಯನ್ನು ಸಮಾಜದಲ್ಲಿ ಬಾರಿಸಿ ಸರ್ವರಲ್ಲೂ ಜಾಗೃತಿ ಮೂಡಿಸಿ ಐತಿಹಾಸಿಕ ಕಲ್ಯಾಣ ಕ್ರಾಂತಿಗೆ ಕಾರಣರಾದವರು ನಮ್ಮ ಬಸವಾದಿ ಪ್ರಮಥರು.
ಇದನ್ನೂ ಓದಿ: ’ಏಕತ್ವಂ’; ಇದು ತನಿಷ್ಕ್‌ನ ಜಾಹಿರಾತಲ್ಲ, ನಿಜ ಜೀವನದ ’ವಿಶ್ವಕುಟುಂಬ’!
ನೆಲವೊಂದೆ,ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಮನಕ್ಕೆ
ಕುಲವೊಂದೆ ತನ್ನ ತಾನರಿದಂಗೆ
ಫಲವೊಂದೆ ಷಡುದರುಶನ
ಮುಕ್ತಿಗೆ ನಿಲುವೊಂದೆ
ಕೂಡಲಸಂಗಮದೇವಾ ನಿಮ್ಮನರಿದವಂಗೆ.

ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಹೊರತು ಕುಲದಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯ ಕಟ್ಟಿದರೆ ಪುಣ್ಯಕ್ಷೇತ್ರ, ಕೆಟ್ಟವರ ತಾಣವಾದರೆ ಅದು ಪುಣ್ಯಸ್ಥಳವಲ್ಲ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಹೊಲಸು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾ ಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಸನಾತನಿ ಆಚರಣೆಗಳನ್ನ ಖಂಡಿಸಿದ್ದಾರೆ.
ವೇದವೆಂಬುದು ಓದಿನ ಮಾತು: ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಟಿ; ತರ್ಕವೆಂಬುದು ತಗರ ಹೋರಟೆ
ಭಕ್ತಿ ಎಂಬುದು ತೋರಿ ಉಂಬುವ ಲಾಭ
ಗುಹೆಶ್ವರನೆಂಬುದು ಮೀರಿದ ಘನವು.
-ಅಲ್ಲಮ ಪ್ರಭು
ಹೀಗೆ ಬಸವಾದಿ ಪ್ರಮಥರೆಲ್ಲರೂ ಸನಾತನ ಪರಂಪರೆಯ ವಿರೋಧವಾಗಿಯೇ ಹೊಸ ಮತದ ಅನ್ವೇಷಣೆ ಮಾಡಿ ಸಮ ಸಮಾಜದ ಕನಸನ್ನ ಕಂಡು ಅನುಭವ ಮಂಟಪಮವನ್ನ ನಿರ್ಮಿಸಿದ ಜಗತ್ತಿನ ಶ್ರೇಷ್ಠ ಪರಂಪರೆ ನಮ್ಮದು.
ಇದನ್ನೂ ಓದಿ: ವಿಷಕಾರುವ, ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್ ಬಜಾಜ್
11 -12ನೇ ಶತಮಾನದಲ್ಲಿ ಆರಂಭವಾದ ಈ ಮತದ ಪ್ರಖರತೆಯನ್ನು ಮತ್ತು ಪ್ರಶ್ನೆ ಮಾಡುವ ಸಮಾಜದ ನಡೆಯನ್ನ ಕಂಡ ಸನಾತನವಾದಿಗಳು ಇದರ ವಿರುದ್ಧ ಸಿಡಿದೆದ್ದರು. ಹುನ್ನಾರ ಮಾಡಿದರು. ಕಲ್ಯಾಣದಿಂದ ಬಸವಣ್ಣವರನ್ನು ಹೊರಹಾಕಿದರು, ಶರಣರನ್ನು ಬೆನ್ನಟ್ಟಿ ಕೊಲ್ಲಲಾಯಿತು. ಕೋಟಿ ಕೋಟಿ ವಚನ ಕಟ್ಟುಗಳನ್ನ ಸುಟ್ಟರು. ಬಸವಣ್ಣನವರು ಕಟ್ಟಿದ ಅನುಭವ ಮಂಟಪವನ್ನ ಹಾಳುಗೆಡವಿದವರು ಇದೆ ಸನಾತನಿಗಳು.
ಅಂದು ಆದ ಆ ಮಹೋನ್ನತ ಶ್ರೇಷ್ಠ ಕ್ರಾಂತಿಯ ಅನುಭವ ಇಂದಿನ ಸುಶಿಕ್ಷಿತರಲ್ಲಿ ಜಾಗೃತವಾಗುವದನ್ನು ಕಂಡು ಹೆದರಿ, ಮತ್ತದೇ ಒಂದು ವರ್ಗ ಅಳುವ ವರ್ಗದ ತಲೆ ಹಿಡಿದು ಬಸವಾದಿ ಪ್ರಮಥರು ಕಟ್ಟಿದ ಅನುಭವ ಮಂಟಪದ ತತ್ವಗಳನ್ನು ತುಳಿದು ತಮ್ಮ ಮೌಢ್ಯವನ್ನು ಬಸವಣ್ಣವರ ಹೆಸರು ಹೇಳಿ ಬಿತ್ತುವ ಕಾರ್ಯಕ್ಕೆ ನಾವು ತಡೆಗೋಡೆಯಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ ಮುಂದಿನ ಜನಾಂಗ ನೈತಿಕ ಗುಲಾಮಗಿರಿಗೆ ಬಿದ್ದು ಆಂತರಿಕ ಸಂಕೋಲೆಯಲ್ಲಿ ಬಂಧಿತರಾಗುತ್ತಾರೆ. ಬಸವಣ್ಣನವರ ಅಸ್ತಿತ್ವಕ್ಕೆ ಕೊಡಲಿ ಏಟು ಹಾಕುತ್ತಿರುವ ಈ ಸನಾತನಿಗಳನ್ನು ತಡೆಯಬೇಕಿದೆ. ಬೇಕಾದರೆ ಪ್ರಾಣ ಹೋಗಲಿ ಬಸವಣ್ಣನವರ ಆಶಯಗಳು ಬದಲಾಗದಂತೆ ಉಳಿಸಿಕೊಂಡು ಬದುಕಬೇಕಾದ ಸ್ಥಿತಿ ಇಂದು ನಮ್ಮಲ್ಲರ ಮುಂದಿದೆ.

ಇದನ್ನೂ ಓದಿ: ‘ಸನಾತನ ಚಿಂತನೆಯ ಮರುಸೃಷ್ಟಿ’ ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ
ಒಂದು ಶರಣಾಗು ಇಲ್ಲವೇ ಶರಣನಾಗು ಬಸವಣ್ಣನವರ ಅನುಭವಕ್ಕೆ ತೊಂದರೆ ಆದಾಗ ಸಿಡಿದೇಳು. ಬಸವ ತತ್ವಗಳಲ್ಲಿ ನಾವೆಲ್ಲ ಲೀನರಾಗಬೇಕಿದೆ. ಆದರೆ ಇಲ್ಲಿ ಸನಾತನಿಗಳು ಈ ತತ್ವಗಳನ್ನೆ ಲೀನಮಾಡಲು ಹೊರಟಿದ್ದಾರೆ. ಇದರ ವಿರುದ್ಧ ನಾವುಗಳು ಸಿಡಿದು ನಿಲ್ಲಬೇಕಿದೆ. ಬಸವಣ್ಣನವರ ಆಶಯಗಳನ್ನು ಮುಳುಗಲು ಬಿಡಲೇಬಾರದು ಎಂಬ ನಿರ್ಣಯಕ್ಕೆ ಬದ್ಧರಾಗಬೇಕಿದೆ. ಲಿಂಗಾಯತವನ್ನು ಮತ್ತೆ ಸನಾತನ ಧರ್ಮದೊಳಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸುವ ಜನರಿಂದ ಅದನ್ನು ರಕ್ಷಿಸಬೇಕಾಗಿದೆ.
ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ!
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು
ಅಮರಗಣಂಗಳೆಂದು ಹೆಸರಿಟ್ಟು ಕರೆದು
ಅಗಣಿತಗಣಂಗಳೆಲ್ಲರ ಹಿಡಿತಂದು
ಅಸಂಖ್ಯಾತರೆಂಬ ಹೆಸರಿಟ್ಟು ಕರೆದು
ಭಕ್ತಿಯ ಕುಳಸ್ಥಲವ
ಶ್ರುತದೃಷ್ಟಪವಾಡದಿಂದ ಮರೆದು ತೋರಿ
ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ
ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು
ಆ ಶಿವಶರಣನ ಮನೆಯೊಳಗಿಪ್ಪ
ಶಿವಗಣಂಗಳ ತಿಂಥಿಣಿಯ ಕಂಡು
ಎನ್ನಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ!
ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ
ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ
ಇದನ್ನೂ ಓದಿ: ‘ಶೂದ್ರ’ ಪದಬಳಕೆ: ಪ್ರಗ್ಯಾ ಠಾಕೂರ್‌ಗೆ ತಿರುಗೇಟು ಕೊಟ್ಟ ಮೀನಾ ಕಂದಸಾಮಿ


