ಲಾಕ್‌ಡೌನ್ ಕಾರಣದಿಂದ ಬೆಂಗಳೂರಿನಲ್ಲಿ ಪಕ್ಷಿ ಮತ್ತು ಪ್ರಾಣಿಗಳಿಗೆ ಸರಿಯಾಗಿ ಕಾಳು ಮತ್ತಿತರ ಆಹಾರ ಸಿಗುತ್ತಿಲ್ಲ. ಲಾಕ್‌ಡೌನ್‌ನ ನಡುವೆಯೂ ಇಲ್ಲೊಂದು ಪರಿಸರ ಪ್ರೇಮಿಗಳ ತಂಡ ಹಕ್ಕಿಗಳಿಗೆ ಕಾಳೂಣಿಸುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಾ, ಪ್ರಾಣಿ- ಪಕ್ಷಿಗಳಿಗೆ ಆಹಾರ ಒದಗಿಸಲು ಶ್ರಮಪಡುತ್ತಿದೆ.
ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯ ನೆರವಿನೊಂದಿಗೆ ಬೆಂಗಳೂರಿನ ಗ್ರೀನ್ ಇಂಡಸ್ ವಾಲಂಟೀಯರ್ಸ್ ಫಾರ್ ಎನ್ವಿರಾನ್ಮೆಂಟ್ (GIVE) ತಂಡದ ಸದಸ್ಯರು ಬೆಂಗಳೂರು ನಗರದ ಖಾಲಿ ಇರುವ ಪ್ರದೇಶಗಳಲ್ಲಿ ಹಣ್ಣು ಬಿಡುವ ಗಿಡಗಳನ್ನು ಹಾಗೂ ಕಾಳಿನ ಗಿಡಗಳನ್ನು ನೆಡುತ್ತಿದ್ದಾರೆ. ಆ ಮೂಲಕ ಹಕ್ಕಿ ಪಕ್ಷಿಗಳಿಗೆ ಹಸಿರೊದಗಿಸುವ ಮತ್ತು ಹಸಿವು ನೀಗಿಸುವ ಅಪರೂಪದ ಕೆಲಸವನ್ನು ಈ ಸ್ವಯಂ ಸೇವಕರ ತಂಡ ಮಾಡುತ್ತಿದೆ. ಗ್ರೀನ್ ಇಂಡಸ್ ತಂಡದ ಪರಿಸರ ಕಾಳಜಿಗೆ ಮತ್ತು ಪಕ್ಷಿಪ್ರಾಣಿಗಳ ಮೇಲಿನ ಪ್ರೇಮ ಕಂಡು ಬೆಂಗಳೂರಿನ ಅನೇಕ ನಾಗರೀಕರು ಈ ತಂಡಕ್ಕೆ ಸಹಾಯ ನೀಡುತ್ತಿದ್ದಾರೆ.
ಹಕ್ಕಿಗಳಿಗಾಗಿ ನೈಸರ್ಗಿಕ ಆಹಾರೋದ್ಯಾನಗಳನ್ನು ನಿರ್ಮಿಸುವ ಗ್ರೀನ್ ಇಂಡಸ್ ತಂಡದ ಯೋಜನೆಯ ಮೊದಲ ಹಂತ ಈಗಾಗಲೇ ಆರಂಭವಾಗಿದೆ. ಯೋಜನೆಯ ಮೊದಲ ಭಾಗವಾಗಿ ಬೆಂಗಳೂರಿನ ಮುತನಲ್ಲೂರು ಕೆರೆ ಸುತ್ತ ಮುತ್ತ ನೂರಾರು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆಯ ಸದಸ್ಯರೂ ಕೂಡ GIVE ತಂಡದ ಈ ಪ್ರಯತ್ನಕ್ಕೆ ಜೊತೆ ನೀಡಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಹತ್ತಾರು ಕೆರೆಗಳನ್ನು ಅತಿಕ್ರಮವಾಗಿ ಕಬಳಿಸಿರುವ ಘಟನೆಗಳು ನಡೆದಿವೆ. ಕೆರೆ ಸುತ್ತಮುತ್ತದ ಅಕ್ರಮ ಒತ್ತುವರಿ ಪ್ರದೇಶವನ್ನು ಗುರುತಿಸಿ ಅಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕೆಲಸ ನಮ್ಮ ತಂಡ ಮಾಡುತ್ತಿದೆ. 30% ಅಕ್ರಮ ಒತ್ತುವರಿಯಾಗಿರುವ ಸರ್ಕಾರಿ ಭೂಮಿ ಮತ್ತು ಕೆರೆಗಳನ್ನು ರಕ್ಷಿಸಲು ಸರ್ಕಾರದ ಜೊತೆ ಕೈಜೋಡಿಸಿದ್ದೇವೆ ಎಂದು ಗೀವ್ ಇಂಡಿಯಾದ ಸ್ವಯಂ ಸೇವಕರು ಹೇಳುತ್ತಾರೆ.
GIVE ತಂಡದ ಸದಸ್ಯರು ಹೆಚ್ಚಾಗಿ ಚಿಕ್ಕು, ಜಾಂಬಳೆ, ನೇರಳೆ, ಮಾವು, ಹಲಸು ಮುಂತಾದ ಗಿಡಗಳನ್ನು ರೈತರಿಂದ ಪಡೆದು ಅದನ್ನು ನೆಟ್ಟು ಪೋಷಿಸುವ ಆಸಕ್ತ ನಾಗರಿಕರಿಗೆ ನೀಡುತ್ತಿದ್ದೇವೆ. ಹೆಚ್ಚಿನ ಕಡೆ ತಂಡದ ಸದಸ್ಯರು ಸಸಿಗಳನ್ನು ನೆಟ್ಟು ಸಂರಕ್ಷಿಸುತ್ತಿದ್ದಾರೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.
ಗೀವ್ ತಂಡಕ್ಕೆ ಯಾರು ಬೇಕಾದರೂ ಹಣ್ಣಿನ ಸಸಿಗಳನ್ನು ದೇಣಿಗೆ ನೀಡಬಹುದು. ಆ ಸಸಿಗಳನ್ನು ಜೋಪಾನವಾಗಿ ಬೆಳೆಸುವ ಜವಬ್ದಾರಿ ತಂಡದ್ದು. ಇದರ ಹೊರತಾಗಿ GIVE ತಂಡ ಯಾವುದೇ ಆರ್ಥಿಕ ಸಹಾಯವನ್ನು ಸ್ವೀಕರಿಸುವುದಿಲ್ಲ ಎಂದು ತಂಡದ ಸ್ವಯಂಸೇವಕರಾದ ಸಂತೋಷ್ ಹೇಳುತ್ತಾರೆ.
ಸದ್ಯ GIVE ತಂಡದ ಸದಸ್ಯರು ಬೆಂಗಳೂರು ನಗರದ ಆನೇಕಲ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗದ ಅಪಾರ್ಟ್ ಮೆಂಟ್ ಗಳಲ್ಲಿ ಮತ್ತು ಅಪಾರ್ಟ್ ಮೆಂಟ್ ಸುತ್ತಮುತ್ತ ಹಣ್ಣಿನ ಗಿಡಗಳು ಮತ್ತು ಕಾಳಿನ ಗಿಡಗಳನ್ನು ಬೆಳೆಸುವಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಯಾರೇ ನಾಗರಿಕರು ಗಿಡ ಮರಗಳನ್ನು ಬೆಳೆಸಿ ಪಕ್ಷಿಗಳಿಗೆ ನೈಸರ್ಗಿಕ ಆಹಾರ ಒದಗಿಸಲು ಮುಂದಾದರೆ ಅವರಿಗೆ ಸಹಾಯ ಮಾಡಲು GIVE ತಂಡ ಸಿದ್ಧವಿದೆ ಎಂದು ಸದಸ್ಯರು ಹೇಳುತ್ತಾರೆ.
ಇದನ್ನೂ ಓದಿ: ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್ ತಂಡ


