ನಮ್ಮ ನಡುವಣ ಸಕ್ರಿಯ ಬುದ್ದಿಜೀವಿ ದಿನೇಶ್ ಅಮೀನ್ ಮಟ್ಟು

| ಪುರುಷೋತ್ತಮ ಬಿಳಿಮಲೆ |

 

ಕರ್ನಾಟಕದ ಪ್ರಮುಖ ಪತ್ರಕರ್ತರಲ್ಲೊಬ್ಬರಾದ ದಿನೇಶ್ ಅಮೀನ್ ಮಟ್ಟು ಅವರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ 2013ರಲ್ಲಿ ನೇಮಕಗೊಂಡಾಗ, ಇನ್ನವರನ್ನು ವಿಧಾನಸೌಧ ಕಟ್ಟಿಹಾಕುತ್ತದೆ ಎಂದು ಹಲವರು ಭಾವಿಸಿದರು. ಆದರೆ, ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದಾಗ ಇದ್ದುದಕ್ಕಿಂತ ಸ್ವತಂತ್ರವಾಗಿ ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸಿದರು. ಈ ದಾರಿಯಲ್ಲಿ ಕೆಲವು ವಿವಾದಗಳಿಗೆ, ಟೀಕೆಗಳಿಗೆ ಗುರಿಯಾದದ್ದೂ ಉಂಟು. ಆದರೆ, ಸದಾಕಾಲ ಸಕ್ರಿಯರಾಗಿದ್ದು ತಮ್ಮದೇ ರೀತಿಯಲ್ಲಿ ಜನಪರವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ದಿನೇಶ್ ಅವರಿಗೀಗ 60 ವರ್ಷ. ಆ ಹಿನ್ನೆಲೆಯಲ್ಲಿ ಅವರ ಗೆಳೆಯರಾದ ಪುರುಷೋತ್ತಮ ಬಿಳಿಮಲೆರವರು, ಮಟ್ಟು ಅವರ ಕುರಿತು ಈ ಲೇಖನ ಬರೆದಿದ್ದಾರೆ.

ಕರ್ನಾಟಕದ ಒಟ್ಟು ಸಂದರ್ಭದಲ್ಲಿ ಬಗೆ ಬಗೆಯ ಜನರು ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ ಹಲವರು ಭಾಷಣ ಬಿಗಿಯುವುದರಲ್ಲಿಯೇ ತೃಪ್ತರು, ಇನ್ನು ಕೆಲವರು ಬರವಣಿಗೆಯನ್ನೇ ಅಂತಿಮವೆಂದು ಭಾವಿಸಿಕೊಂಡಿರುವವರು. ಮತ್ತೆ ಕೆಲವರು ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿ, ತನ್ನ ಕೆಲಸವಾಯಿತೆಂದು ಸುಮ್ಮನಿರುವವರು. ಇದರ ಜೊತೆಗೆ ಪ್ರಗತಿಪರ ಚಳುವಳಿಗಳ ಒಳಗೇ ಆಳುವ ವರ್ಗವೊಂದು, ದುಡಿವ ವರ್ಗವೊಂದು ನಿರ್ಮಾಣಗೊಳ್ಳುತ್ತಿರುವುದನ್ನು ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಕೆಲವರು ಕುರ್ಚಿ ಬೆಂಚು ಹೊರಲು, ಮತ್ತೆ ಕೆಲವರು ವೇದಿಕೆಯ ಮೇಲಿಂದ ಕರೆಕೊಡಲು. ಇಂಥ ಸಂದರ್ಭದಲ್ಲಿ ಲೇಖಕನೂ, ಸಕ್ರಿಯ ಕಾರ್ಯಕರ್ತನೂ ಆಗಿ ದುಡಿಯುವ ಬಹಳ ಅಪೂರ್ವ ವ್ಯಕ್ತಿಗಳಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಬಹಳ ವಿಶೇಷ ಮತ್ತು ವಿಭಿನ್ನ. ಕರ್ನಾಟಕದಲ್ಲಿ ಅವರೇ ಮುಂದೆ ನಿಂತು ಸಂಘಟಿಸಿದ ಕಾರ್ಯಕ್ರಮಗಳು ಇದಕ್ಕೆ ಒಳ್ಳೆಯ ಉದಾಹರಣೆ. ಉಡುಪಿ, ಮಂಗಳೂರು ಮಾತ್ರವಲ್ಲ ರಾಜ್ಯದ ಅನೇಕ ಕಡೆಗಳಲ್ಲಿ ಯುವಕರನ್ನು ಮುಂದಿಟ್ಟುಕೊಂಡು ಅವರು ಮಾಡಿದ ಕೆಲಸಗಳು ಅನೇಕ. ಕಾರ್ಯಕ್ರಮಕ್ಕೆ ಹಣ ಸಂಗ್ರಹದಿಂದ ತೊಡಗಿ, ಊಟ, ವೇದಿಕೆ ಕಾರ್ಯಕ್ರಮಗಳನ್ನು ಚೊಕ್ಕವಾಗಿ ಆಯೋಜಿಸುವ ದಿನೇಶರ ಪರಿ ವಿನೂತನವಾದುದು. ನಮಗೆ ಈಗ ಬೇಕಾಗಿರುವುದು ದಿನೇಶರ ಮಾದರಿ.

ವೈಯಕ್ತಿಕವಾಗಿ ದಿನೇಶರನ್ನು ನಾನು ಅವರ ಮುಂಗಾರು ದಿನಗಳಿಂದ ಬಲ್ಲೆ. ಪತ್ರಕರ್ತರ ನಡವಳಿಕೆಗಳೆಲ್ಲ ಸಂಶಯಾಸ್ಪದವಾಗುತ್ತಿರುವುದು ಮಾತ್ರವಲ್ಲ ಪತ್ರಕರ್ತರು ಜೈಲು ಸೇರುತ್ತಿರುವ ಇಂದಿನ ಈ ಕಾಲದಲ್ಲಿ ಆ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುತ್ತಿರುವ ಬೆರಳೆಣಿಕೆಯ ಕೆಲವೇ ಕೆಲವು ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಒಬ್ಬರು. ತಮ್ಮ ಬರಹಗಳ ಮೊದಲ ಹಂತದಲ್ಲಿ ಜನರ ಸಂವೇದನೆಗಳಿಗೆ ಸೂಕ್ಷ್ಮವಾಗಿ ಧ್ವನಿಯಾದ ಅವರು, ಎರಡನೇ ಹಂತದಲ್ಲಿ ನಿಧಾನವಾಗಿ ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯಾಗಿ ಪ್ರತೀತಗೊಳ್ಳುತ್ತಾರೆ. ವಿಸ್ತಾರವಾದ ಓದು, ಜನಗಳ ನಡುವಣ ನಿರಂತರ ಒಡನಾಟ, ಕನ್ನಡ ಭಾಷೆಯ ಮೇಲಿನ ಅಪೂರ್ವ ಹಿಡಿತಗಳ ಜೊತೆಗೆ ಅತ್ಯಂತ ಜನಪರವಾದ ಚಿಂತನಾಕ್ರಮಗಳ ಮೂಲಕ ದಿನೇಶ್ ಅವರು ಕರ್ನಾಟಕದ ಜನರ ಸಂವೇದನೆಗಳನ್ನು ಮತ್ತೆ ಮತ್ತೆ ಸೂಕ್ಷ್ಮಗೊಳಿಸುತ್ತಾ ಬಂದಿದ್ದಾರೆ. ‘ಸಹೃದಯ ಸಾಮಾನ್ಯ ಜನತೆಯ ಕಣ್ಣುಗಳ ಮೂಲಕ’ ಅವರು ನಾಡನ್ನು ನೋಡುವ ಮತ್ತು ವಿವರಿಸುವ ರೀತಿ ಅಸಾಮಾನ್ಯವಾದುದು.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟು ಎಂಬ ಪುಟ್ಟ ಊರಿನಿಂದ ಹೊಟ್ಟೆಪಾಡಿಗಾಗಿ, ಮುಂಬೈಗೆ ವಲಸೆ ಹೋದ ತುಳು ಮಾತಾಡುವ ಕುಟುಂಬವೊಂದರಲ್ಲಿ ಮುಂಬೈಯಲ್ಲಿ ಜನಿಸಿದ ದಿನೇಶ್ (ಜನನ: 1959) ಅವರು ಮುಂಬೈಯ ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿವರೆಗೆ ಓದಿ ಆನಂತರದ ವಿದ್ಯಾಭ್ಯಾಸವನ್ನು ಕರಾವಳಿಯ ಕಿನ್ನಿಗೋಳಿ, ಹೆಜಮಾಡಿ ಮತ್ತು ಸುರತ್ಕಲ್‍ಗಳಲ್ಲಿ ಮುಗಿಸಿದರು. ಇಲ್ಲಿ ಓದಿದ ವಿದ್ಯೆಗೂ ದಿನೇಶ್ ಮುಂದೆ ಹಿಡಿದ ಹಾದಿಗೂ ಅಂತಹ ಸಂಬಂಧ ಏನೂ ಇಲ್ಲ. ಆದರೆ, ಹಸಿರುಡುಗೆ ಹೊದ್ದ ಕರಾವಳಿಯ ತುಳು ಮಣ್ಣಿನ ಗುಣಗಳಾದ, ಸರಳತೆ, ನೇರವಂತಿಕೆ ಮತ್ತು ಸ್ಪಷ್ಟತೆಗಳು ದಿನೇಶ್ ಅವರ ದೊಡ್ಡ ಶಕ್ತಿಗಳಾಗಿ ಭವಿಷ್ಯದಲ್ಲಿ ನಿರಂತರವಾಗಿ ಅವರ ಬೆಂಬಲಕ್ಕೆ ನಿಂತವು.

ದಿನೇಶ್ ಅವರ ಚಿಂತನಾ ಕ್ರಮ ಮತ್ತು ಬರೆಹಗಳಿಗೆ ಉತ್ತಮ ಆರಂಭ ಸಿಕ್ಕಿದ್ದು ಮಂಗಳೂರಿನಲ್ಲಿ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರು ಆರಂಭಿಸಿದ್ದ ಮುಂಗಾರು ಪತ್ರಿಕೆಯಲ್ಲಿ. ‘ಜನ ಶಕ್ತಿ ಬೆಳೆತೆಗೆವ’ ಕನಸಿನೊಂದಿಗೆ ಆರಂಭವಾದ ಆ ಪತ್ರಿಕೆಯಲ್ಲಿ ಪಳಗಿದ ಅವರು 1989ರಲ್ಲಿ ಪ್ರಜಾವಾಣಿ ಪತ್ರಿಕೆ ಸೇರಿದರು. ಮುಂದೆ ಆ ಪತ್ರಿಕೆಯ ಪ್ರಮುಖ ವರದಿಗಾರರಾಗಿ ಬೆಂಗಳೂರು, ಧಾರವಾಡ, ತುಮಕೂರು, ದೆಹಲಿಗಳಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದರು. ತಾವು ಕೆಲಸ ಮಾಡಿದಲ್ಲೆಲ್ಲಾ ತಮ್ಮದೇ ಛಾಪು ಮೂಡಿಸಿ, ಗೆಳೆಯರ ಬಳಗವೊಂದನ್ನು ಕಟ್ಟಿಕೊಂಡು ಬದುಕುತ್ತಿರುವ ಊರನ್ನು ಸಕ್ರಿಯಗೊಳಿದವರು ಅವರು. ಧಾರವಾಡ, ಹುಬ್ಬಳ್ಳಿ ಮತ್ತು ತುಮಕೂರುಗಳಲ್ಲಿ ಅವರು ಅಲ್ಲಿನ ಸ್ಥಳೀಯ ಸಮಸ್ಯೆ, ಜಿಲ್ಲಾ ಪಂಚಾಯತ್ ಆಡಳಿತ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಸವಿವರ ವರದಿ ಮಾಡಿದರೆ, ದೆಹಲಿಯಿಂದ ಲೋಕಸಭೆ, ರಾಜ್ಯಸಭೆಗಳ ಕಲಾಪ ವರದಿ, ಕಾವೇರಿ-ಕೃಷ್ಣಾ ಜಲಮಂಡಳಿ ಸಭೆಗಳ ವರದಿ, ಸುಪ್ರಿಂ ಕೋರ್ಟಿನಲ್ಲಿ ಕರ್ನಾಟಕದ ಕುರಿತಾದ ಚರ್ಚೆಗಳ ವಿಸ್ತೃತ ವರದಿ ಮಾಡಿದರು.

ಚುನಾವಣೆಗಳು ನಡೆದಾಗ, ಜನರ ಬಳಿಗೆ ತೆರಳಿ ನೇರ ವರದಿ ಮಾಡಿದರು. ಉತ್ತರ ಭಾರತಾದ್ಯಂತ ಅವರು ಪ್ರವಾಸ ಮಾಡಿದ್ದಾರೆ. 2002ರಲ್ಲಿ ನಡೆದ ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷ ವರದಿ ಮಾಡಿದಾಗ ಕನ್ನಡದ ಓದುಗರು ಬೆಚ್ಚಿ ಬಿದ್ದರು. ಅಧಿಕಾರ ಹಿಡಿದವರ ಅಪಕ್ವ ಗ್ರಹಿಕೆಗಳು, ಆತುರದ ತೀರ್ಮಾನಗಳು ಹಾಗೂ ಮುನ್ನೋಟವಿಲ್ಲದ ತೀರ್ಮಾನಗಳಿಂದಾಗಿ ದೇಶದಲ್ಲಾಗುವ ಅನಾಹುತಗಳನ್ನು ದಿನೇಶ್ ಅವರು ಪಕ್ಷಾತೀತವಾಗಿ, ಪೂರ್ವಾಗ್ರಹವಿಲ್ಲದೆ ಮಂಡಿಸುತ್ತಾರೆ. ಅವರು ಭಾಷಾಂಧರೂ ಅಲ್ಲ, ದೇಶಾಂಧರೂ ಅಲ್ಲ, ಬದಲು ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ತರ್ಕ ಮತ್ತು ಸಂಬಂಧಗಳನ್ನು ಪತ್ರಕರ್ತನೊಬ್ಬನ ದಿಟ್ಟತನದಲ್ಲಿ ಗ್ರಹಿಸಿ, ವಿಶ್ಲೇಶಿಸಿ ಮಂಡಿಸುವ ಅಸಾಧಾರಣ ಚೈತನ್ಯದ ಲೇಖಕ. ಕನ್ನಡ ಭಾಷೆ ದಿನೇಶ್ ಅವರಲ್ಲಿ ಹೊಸ ಕಸುವು ಕಂಡುಕೊಂಡಿತು. ಇದು ಸರಿಯಾಗಿ ಅರ್ಥವಾಗಲು ನಾವು ದಿನೇಶ್ ಬರೆದ ‘ಕಣ್ಣೆದುರಿನ ತಳಮಳ (1999), ದೆಹಲಿ ನೋಟ ( 2008) ಮತ್ತು ನಾರಾಯಣ ಗುರು (2009) ಕೃತಿಗಳನ್ನು ಓದಬೇಕು.

ಇಂದು ದೇಶದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂಬ ಖ್ಯಾತಿಗೆ ಒಳಪಟ್ಟಿರುವ ದಿನೇಶ್ ಅಮೀನ್ ಅವರು, ತಮ್ಮ ವೃತ್ತಿಯ ಭಾಗವಾಗಿ ದೇಶ ವಿದೇಶಗಳನ್ನು ಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುವುಗಳೆಂದರೆ, 2005ರಲ್ಲಿ ಮಾಡಿದ ಬ್ರೂನೈ ದ್ವೀಪ, ಫಿಲಿಪ್ಪೀನ್ಸ್ ಮತ್ತು ಮಲೇಷಿಯಾಗಳ ಪ್ರವಾಸ, 2006ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆ ಮಾಡಿದ ಕತಾರ್ ಮತ್ತು ಮಸ್ಕತ್ ದೇಶಗಳ ಪ್ರವಾಸ. 2008ರಲ್ಲಿ ಆಗಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ತಾವು ಕೆಲಸ ಮಾಡಿದ ಸ್ಥಳಗಳಲ್ಲಿ ಆಳವಾದ ನೆನಪುಗಳನ್ನು ದಿನೇಶ್ ಬಿಟ್ಟು ಹೋಗಿರುವುದಕ್ಕೆ ಕಾರಣ, ಅವರು ತಾವು ನೆಲೆಊರಿದ ಊರಿನ ಪ್ರಾದೇಶಿಕ ಗುಣಗಳನ್ನು ಮತ್ತು ಜನಗಳನ್ನು ಅರ್ಥಮಾಡಿಕೊಂಡ ಬಗೆ. ವರದಿ ಮಾಡುವುದಷ್ಟೇ ಅವರ ಕೆಲಸವಲ್ಲ, ಬದಲು ತಾವು ಕೆಲಸ ಮಾಡುತ್ತಿರುವ ಊರಿನ ಸಂವೇದನೆಗಳನ್ನು ಮತ್ತು ಅವುಗಳ ಸ್ವಭಾವಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರಾದೇಶಿಕ ಅನನ್ಯತೆಯನ್ನು ಮರೆಯದೆ ಬರೆಯುತ್ತಾರೆ. ಹೀಗಾಗಿ ಅವರು ಮಂಗಳೂರಿನ ಬಗ್ಗೆಯೂ, ಹುಬ್ಬಳ್ಳಿಯ ಬಗೆಯೂ ಒಂದೇ ರೀತಿಯಲ್ಲಿ ಬರೆಯುತ್ತಾರೆಂದು ನಮಗೆ ಅನಿಸುವುದಿಲ್ಲ. ಮಂಗಳೂರಿನ ಬಗ್ಗೆ ಬರೆಯವಾಗ ದಿನೇಶ್‍ಗೆ ಶಿವರಾಮ ಕಾರಂತರು ಆದರ್ಶವಾದರೆ, ಹುಬ್ಬಳ್ಳಿ ಬಗ್ಗೆ ಬರೆಯುವಾಗ ಬೇಂದ್ರೆ ಆದರ್ಶ. ಇದೇ ಅವರ ಲೇಖನಗಳ ಸೃಜನಶೀಲತೆಯ ಗುಟ್ಟು.

ಇದು ಇನ್ನೂ ಖಚಿತವಾಗಬೇಕಾದರೆ ನಾವು ಅವರ ‘ದೆಹಲಿ ನೋಟ’ (2008) ಕೃತಿಯನ್ನು ಓದಬೇಕು. ದೆಹಲಿ ರಾಷ್ಟ್ರದ ರಾಜಧಾನಿ, ಅಲ್ಲಿಂದ ಕರ್ನಾಟಕದ ಬಗ್ಗೆ ಬರೆಯುವಾಗ ಆ ಬರೆಹಕ್ಕೆ ರಾಷ್ಟ್ರೀಯ ಚೌಕಟ್ಟು ಇರಲೇಬೇಕು. ದೆಹಲಿ ನೋಟದ ಯಾವ ಲೇಖನವೂ ಈ ಚೌಕಟ್ಟನ್ನು ಮೀರಲೇ ಇಲ್ಲವಾದ್ದರಿಂದ ಅವುಗಳಿಗೆ ವಿಶೇಷವಾದ ಶಕ್ತಿ ಪ್ರಾಪ್ತಿಸಿದೆ. ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಹೇಗೆ ಪ್ರತಿನಿಧೀಕರಿಸಲ್ಪಡುತ್ತವೆ ಎಂದು ಕರ್ನಾಟಕದ ಜನರಿಗೆ ಮೊದಲ ಬಾರಿಗೆ ಸವಿಸ್ತಾರವಾಗಿ ತಿಳಿದದ್ದು ದಿನೇಶ್ ಅಂಕಣಗಳನ್ನು ಓದಲಾರಂಭಿಸಿದ ಮೇಲೆಯೇ. ಕೇಂದ್ರದಲ್ಲಿ ರಾಜ್ಯದ ದುರ್ಬಲ ಪ್ರತಿನಿಧೀಕರಣವನ್ನು ಅವರು ಪ್ರಖರ ಭಾಷೆಯಲ್ಲಿ ಅಷ್ಟೇ ಸೃಜನಶೀಲವಾಗಿ ಪ್ರತೀತಗೊಳಿಸಿದರು. ಎಷ್ಟೋ ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ದಿನೇಶ ಲೇಖನದಿಂದ ಪ್ರೇರಣೆ ಪಡೆದು ತಮ್ಮ ಹೋರಾಟದ ಹಾದಿಗಳನ್ನು ಹರಿತಗೊಳಿಸಿಕೊಂಡಿದ್ದಾರೆ. ಅವರ ಅಂಕಣ ‘ಅನಾವರಣ’ವು ಪ್ರಜಾಸತ್ತಾತ್ಮಕ ವ್ಯವಸ್ಥೆಯ ದೌರ್ಬಲ್ಯ ಮತ್ತು ತಾಕತ್ತುಗಳನ್ನು ನಿಷ್ಪಕ್ಷಪಾತವಾಗಿ ಜನರ ಮುಂದಿಟ್ಟಿದೆ.

ಇದನ್ನು ಓದಿ: ಅಮೀನ್ ಮಟ್ಟುರವರ ಲೇಖನ ಪ್ರತಿವಾದ : ಯುದ್ಧದಲ್ಲಿ ಶತ್ರುವನ್ನು ಗುರುತಿಸುವಾಗ ಎಡವಬಾರದು ….. 

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರನಾಗಿ ದಿನೇಶ್ ಮಾಡಿದ ಕೆಲಸಗಳು ಐತಿಹಾಸಿಕವಾದುದು. ಅಗತ್ಯವಿದ್ದ ಎಷ್ಟೋ ಜನರಿಗೆ ಅವರು ನೆರವು ನೀಡಿದರು. ಜನಪರ ಸಂಘಟನೆಗಳನ್ನು ನಿಸ್ಸಂಕೋಚವಾಗಿ ಬೆಂಬಲಿಸಿದರು. ಕೋಮುವಾದೀ ಶಕ್ತಿಗಳ ವಿರುದ್ಧ ಗುಡುಗಿದರು. ಬಂಡಾಯ ಚಳುವಳಿಯಲ್ಲಿ ನಾವೆಲ್ಲ ‘ಖಡ್ಗವಾಗಲಿ ಕಾವ್ಯ’ ಎಂಬ ಘೋಷಣೆಯನ್ನು ಚಾಲ್ತಿಗೆ ತಂದೆವು. ಆದರೆ ಅದು ಸಾಕಾರಗೊಂಡದ್ದು ದಿನೇಶ್ ಲೇಖನಗಳಲ್ಲಿ. ದಿಟ್ಟವಾಗಿ ಬರೆಯುವ ದಿನೇಶ್ ಅವರ ಮೇಲೆ ಎಂತಹ ಒತ್ತಡಗಳಿದ್ದಿರಬಹುದೆಂದು ನಾನು ಈಗ ಊಹಿಸಬಲ್ಲೆ. ಈ ಒತ್ತಡಗಳಿಗೆ ಬರಹಗಾರನೊಬ್ಬ ಬಲಿಯಾಗುವುದೆಂದರೆ, ಸುಲಭವಾಗಿ ಆರ್ಥಿಕವಾಗಿ ಭ್ರಷ್ಠನಾಗಿಬಿಡುವುದು, ಇಲ್ಲವೇ ನೈತಿಕ ದಿವಾಳಿತನದಿಂದ ಬರೆಹದ ಮೊನಚನ್ನು ಕಳೆದುಕೊಳ್ಳುವುದು. ದಿನೇಶ್ ಇಂಥ ಅಪಾಯಗಳಿಂದ ಪಾರಗಿ, ಸುರಕ್ಷಿತವಾಗಿ ಇದುವರೆಗೆ ಉಳಿದಿದ್ದಾರೆ. ಈ ಕಾಲದಲ್ಲಿ ಇದೊಂದು ಪವಾಡ ಸದೃಶ ಘಟನೆ.

2011ರ ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆದ ದಿನೇಶ್ ಅವರಿಗೆ ಈಗ 60 ತುಂಬಿದೆ. ಈ ಸಂದರ್ಭದಲ್ಲಿ ಅವರು ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಳ್ಳುತ್ತಾ ಅವರನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸುತ್ತೇನೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here