| ಮುತ್ತುರಾಜು |
ನಾನು ಹಣ ವಸೂಲಿ ಮಾಡುತ್ತಿರುವುದು ರಾಮಚಂದ್ರ ಮಠಕ್ಕೆ ಹೊರತು ನನಗಲ್ಲ. ಹಾಗಾಗಿ ನೇಮಕಾತಿಯಾಗುವಾಗ ಪ್ರತಿಯೊಬ್ಬರೂ ಹಣ ಕೊಡಲೇಬೇಕು. ಹೀಗೆಂದವರು ಬಳ್ಳಾರಿ ವಿ.ವಿಯ ಮಾಜಿ ಉಪಕುಲಪತಿ ಮಂಜಪ್ಪ ಹೊಸಮನಿ. ಆಗ ಈತನಿಗೆ ಜೈಕಾರ ಹಾಕಿ ವಸೂಲಿಗೆ ಸಹಕರಿಸಿದವರು ಇದೇ ಬಿಜೆಪಿಯ ಮರಿಸಂಘಟನೆಯಾದ ಎಬಿವಿಪಿಯವರು. ಅಲ್ಲೊಂದಿಷ್ಟು ಪಾಲು ಪಡೆದು ತಮ್ಮವರನ್ನು ವಿ.ವಿಯ ಆಯಾಕಟ್ಟಿನ ಜಾಗದಲ್ಲಿ ಕೂಡಿಸಿ ಮೇಯಲು ಜಾಗಮಾಡಿಕೊಂಡಿದ್ದ ಎಬಿವಿಪಿ ನಾಯಕರಿಗೆ ಈಗ ಮೇವು ಸಾಲುತ್ತಿಲ್ಲ. ಹಾಗಾಗಿ ಹಾಲಿ ಉಪಕುಲಪತಿ ಡಾ.ಸುಭಾಷ್ ವಿರುದ್ಧ ಜೋರಾಗಿಯೇ ಗುಟುರು ಹಾಕುತ್ತಿದ್ದಾರೆ. ಆದರೆ ಇವರ ಗುಟುರಿಗೆ ಜಗ್ಗದ ಉಪಕುಲಪತಿಗಳು ಸೆಡ್ಡು ಹೊಡೆದಿದ್ದಾರೆ. ಮೇಲ್ನೋಟಕ್ಕೆ ಇದು ನೇಮಕಾತಿ ವಿಚಾರದಲ್ಲಿನ ಭ್ರಷ್ಟಾಚಾರ ಎಂದು ಕಾಣಿಸಿದರೂ ಆಳ ಅಗಲ ಎಲ್ಲೆಲ್ಲಿಗೋ ಹೋಗಿ ನಿಲ್ಲುತ್ತಿದೆ. ಬನ್ನಿ ನೋಡೋಣ
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ ಕಳೆದೆರಡು ತಿಂಗಳಿಂದ ಜೋರಾಗಿಯೇ ಸದ್ದು ಮಾಡುತ್ತಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದ ಕುಲಸಚಿವರಾದ ಬಿ.ಕೆ ತುಳಸಿಮಾಲರವರನ್ನು ಪತ್ರಿಕಾಗೋಷ್ಟಿಯಿಂದ ಹೊರಕಳಿಸಿದ್ದು ಎಲ್ಲಾ ಕಡೆ ಸುದ್ದಿಯಾಗಿತ್ತು. ತದನಂತರ ಅಲ್ಲಿಗೆ ಎಂಟ್ರಿಯಾದವರು ಎಬಿವಿಪಿ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿರುವ ಕೆಲ ಯುವಕರು. ಓದಿ ಮುಗಿಸಿ ಎಷ್ಟೊ ವರ್ಷಗಳಾದರೂ ನಾವಿನ್ನು ವಿದ್ಯಾರ್ಥಿ ನಾಯಕರು ಎಂದು ಪೋಸು ಕೊಡುತ್ತಿರುವ ಇವರ ಹಾವಳಿ ಜಿಲ್ಲೆಯಲ್ಲಿ ಜೋರಾಗಿದೆ.
ಅವರ ಮೊದಲ ಉದ್ದೇಶ ತಮ್ಮವರನ್ನು ವಿ.ವಿಯಲ್ಲಿ ಪ್ರತಿಷ್ಠಾಪಿಸುವುದು. ಆ ಮೂಲಕ ವಿ.ವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ರಾಜಕಾರಣ ಮಾಡುವುದು. ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಹೇಗಾದರೂ ಮಾಡಿ ವಿ.ವಿಯ ಒಳಕ್ಕೆ ತೂರಿಸಿಬಿಟ್ಟರೆ ತಮ್ಮ ಆಟ ಸಲೀಸು ಎಂದು ಇನ್ನಿಲ್ಲದ ಪ್ರಯತ್ನವನ್ನು ಎಬಿವಿಪಿ ಮಾಡಿತು. ಆದರೆ ಯಾರಾದರೇನು, ತನಗೆ ಬರಬೇಕಿದ್ದ ದುಡ್ಡು ಬಂದರೆ ಸಾಕು ಎಂದು ಉಪಕುಲಪತಿಗಳು ದುಡ್ಡು ಕೊಟ್ಟವರಿಗೆ ಮಾತ್ರ ಮಣೆ ಹಾಕಿದರು. ಇದರಿಂದ ಕುಪಿತರಾದ ಎಬಿವಿಪಿಯ ಕೆಲ ಮುಖಂಡರು ಕುಲಪತಿಗಳ ವಿರುದ್ಧ ಯುದ್ಧ ಸಾರಿದರು.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೊಡ್ಡ ಬಸನಗೌಡ ಆರ್.ಎಸ್.ಎಸ್ ಹಿನ್ನೆಲೆಯ ವ್ಯಕ್ತಿ, ಜಾತಿ ಮತ್ತು ರಾಜಕೀಯ ಬಲದೊಂದಿಗೆ ಸಿಂಡಿಕೇಟ್ ಮೆಂಬರ್ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಇನ್ನು ಅಡವಿಸ್ವಾಮಿ ಎಬಿವಿಪಿಯಲ್ಲಿದ್ದುಕೊಂಡು ಸಂಘಟನೆ ಕಾರ್ಯಕ್ರಮಗಳ ಆಯೋಜನೆಯ ಹೆಸರಿನಲ್ಲಿ ಯುವಕರನ್ನು ದಾರಿತಪ್ಪಿಸುತ್ತಲೇ ಹಣ ಬಾಚುತ್ತಿರುವ ವ್ಯಕ್ತಿ. ಇನ್ನು ವರುಣ್ ಕುಮಾರ್ ರೆಡ್ಡಿ, ಎಂ.ಎಲ್.ಎ ಸೋಮಶೇಖರ ರೆಡ್ಡಿ ಕೃಪಾಕಟಾಕ್ಷದಿಂದ ಸಿಂಡಿಕೇಟ್ ಮೆಂಬರ್ ಆಗಿದ್ದಾನೆ. ಇವರಿಷ್ಟು ಜನ ಸೇರಿಕೊಂಡು ಒಂದಿಷ್ಟು ಜನರನ್ನು ವಿ.ವಿ ಸೇರಿಸಲು ದಳ್ಳಾಳಿಗಳಾಗಿ ಕೆಲಸ ಮಾಡಿದರು. ಆದರೆ ಉಪಕುಲಪತಿ ಸುಭಾಷ್ ಕೇರ್ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಇವರು ಅವರ ವಿರುದ್ಧ ತಿರುಗಿ ಬಿದ್ದರು.

ಉಪಕುಲಪತಿ ದಲಿತರಾಗಿದ್ದು ಅವರನ್ನು ಮತ್ತಷ್ಟು ಕೆರಳಿಸಿತು. ಲಿಂಗಾಯತ ಸಮುದಾಯದ ಅಡವಿಸ್ವಾಮಿ ಇದನ್ನೇ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ. ಮೊದಲನೇಯದಾಗಿ ಅಲ್ಲಿನ ಬಿಜೆಪಿ ಎಂ.ಎಲ್.ಎಗಳಿಗೆ ವಿ.ವಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ದೂರು ನೀಡಿದ. ನಂತರ ರಾಜ್ಯಪಾಲರಿಗೆ ದೂರು ನೀಡಿ ರಾಜ್ಯಮಟ್ಟದ ಸುದ್ದಿ ಮಾಡಲು ನೋಡಿದರು. ಆಗ ಅವರ ಕೈಗೆ ಸಿಕ್ಕಿದ್ದು ವಿ.ವಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಚಿದಾನಂದ್ ಎಂಬುವವರು. ಅವನನ್ನು ಪುಸಲಾಯಿಸಿ ಅಡವಿಸ್ವಾಮಿ ಪತ್ರಿಕಾಗೋಷ್ಠಿಯೊಂದನ್ನು ಮಾಡಿ ಆರೋಪಗಳ ಮಳೆ ಸುರಿಸಿದ. ಇದನ್ನೇ ಕಾದು ಕುಳಿತಿದ್ದ ಮಾಧ್ಯಮಗಳು ಭಾರೀ ಸುದ್ದಿ ಮಾಡಿದವು.

ಇದು ಅಡವಿಸ್ವಾಮಿಗೆ ಬೂಸ್ಟ್ ನೀಡಿದಂತಾಯ್ತು. ಅಲ್ಲಿಂದ ಮುಂದುವರಿದು ನೇಮಕಾತಿ ಮಾಡಿಕೊಳ್ಳುವಂತೆ ಚಿದಾನಂದ್‍ರವರಿಂದ ಗ್ರಂಥ ಪಾಲಕ ಕಟ್ಟಿಮನಿಯವರಿಗೆ ಫೋನ್ ಮಾಡಿಸಿ ಪದೇ ಪದೇ ಒಂದು ಹುದ್ದೆಗೆ ದುಡ್ಡು ಎಷ್ಟು? ಯಾರಿಗೆ ಕೊಡಬೇಕು ಎಂದೆಲ್ಲಾ ಮಾತಾಡಿಸಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದೇ ರೀತಿ ಮಹಿಳೆಯೊಬ್ಬಳು ಇನ್ನೊಬ್ಬ ಪುರುಷನಿಗೆ ಕರೆ ಮಾಡಿ ಈ ರೀತಿ ದುಡ್ಡು ಕೊಟ್ಟರೆ ಉದ್ಯೋಗ ಸಿಗುತ್ತದೆ ಎಂದು ಮಾತಾಡಿರುವ ಆಡಿಯೊ ರೆಕಾರ್ಡ್ ಮಾಡಿದ್ದಾರೆ. ಇವೆರಡನ್ನು ಪ್ರೆಸ್ ಮೀಟ್ ನಲ್ಲಿ ರಿಲೀಸ್ ಮಾಡಿ ತಾನೇನೊ ದೊಡ್ಡ ಸಾಧನೆ ಮಾಡಿದಂತೆ ಪೋಸು ಕೊಟ್ಟಿದ್ದಾರೆ. ಆದರೆ ನಂತರ ಅದೆಲ್ಲವೂ ಆತನಿಗೆ ಉಲ್ಟಾ ಹೊಡಿದಿದೆ.

ಆಡಿಯೊ ಉಪಕುಲಪತಿ ಕೈ ಸೇರಿದ್ದೆ ತಡ ಕ್ಲರ್ಕ್ ಚಿದಾನಂದ್ ಮತ್ತು ಗ್ರಂಥಪಾಲಕ ಕಟ್ಟಿಮನಿ ಅಮಾನತ್ತಾಗಿದ್ದಾರೆ. ಯಾರ ಯಾರ ವಿರುದ್ಧ ಆರೋಪ ಬಂತೊ ಅವರೆಲ್ಲರನ್ನು ಮನೆಗೆ ಕಳಿಸಲಾಗಿದೆ. ಇನ್ನು ಉಪಕುಲಪತಿ ಸುಭಾಷ್‍ರವರು ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಬಿಟ್ಟಿದ್ದಾರೆ. ದುಡ್ಡು ತಿಂದಿರುವ ಒಂದು ದಾಖಲೆಯೂ ಹೊರಗೆ ಬಾರದಂತೆ ಅವರು ಎಚ್ಚರಿಕೆ ವಹಿಸಿದ್ದಾರೆ. ಅಷ್ಟು ಮಾತ್ರವಲ್ಲ ಇನ್ನ 15 ದಿನದಲ್ಲಿ ಅವರ ಅಧಿಕಾರವದಿ ಮುಗಿಯಲಿದೆ. ಈಗ ಅವರು ತನಗೆ ಯಾರೆಲ್ಲ ತೊಂದರೆ ಕೊಟ್ಟಿದ್ದರೊ ಅವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ಮೊದಲಿಗೆ ಅಡವಿ ಸ್ವಾಮಿ ವಿರುದ್ಧ ಸುಭಾಷ್‍ರವರು ಜೂನ್ 03ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈತ ರೌಡಿ ಆಗಿದ್ದು ಹಲವು ಕೇಸ್‍ಗಳು ಈತನ ಮೇಲಿವೆ. ತನ್ನ ಸಹಚರನಿಂದ ಯಾವುದೋ ಕಾರ್ಯಕ್ರಮಕ್ಕೆ 1 ಲಕ್ಷ ದುಡ್ಡು ಕೇಳಿದ್ದನಂತೆ. ಆದರೆ ಸಿಂಡಿಕೇಟ್‍ನಲ್ಲಿ ಚರ್ಚಿಸಿ 10 ಸಾವಿರ ನೀಡಿದ್ದನ್ನು ಉಲ್ಲೇಖಿಸಿರುವ ಅವರು ದುಡ್ಡು ಕೊಡದಿದ್ದರಿಂದ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಆರ್‍ಎಸ್‍ಎಸ್ ಹಿನ್ನೆಲೆಯ ಸಿಂಡಿಕೇಟ್ ಸದಸ್ಯರಾದ ದೊಡ್ಡ ಬಸನಗೌಡ, ವರುಣ್ ಕುಮಾರ್ ರೆಡ್ಡಿ ಮಾಜಿ ಸಿಂಡಿಕೇಟ್ ಸದಸ್ಯ ಅಲ್ಲಾವಲಿ ಬಾಷಾ ಕೊಲ್ಮಿ ಸೇರಿಕೊಂಡು ತಾವು ಹೇಳಿದವರನ್ನು ವಿ.ವಿ ಗೆ ನೇಮಿಸಬೇಕೆಂದು ಒತ್ತಾಯಿಸಿದ್ದರು ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಜೊತೆಗೆ ಮಲ್ಲೇಶಿ ಎಂಬಾತ ವಿ.ವಿಗೆ ಟ್ಯಾಂಕರ್ ನೀರು ಸರಬರಾಜು ಟೆಂಡರ್‍ಗೆ ಆಕಾಂಕ್ಷಿಯಾಗಿದ್ದ, ಅದು ಅವನಿಗೆ ಸಿಗದಿದ್ದರಿಂದ ಇವರೆಲ್ಲ ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಮತ್ತು ವಿ.ವಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಾನೊಬ್ಬ ದಲಿತನಾದ ಕಾರಣಕ್ಕೆ ಇವರೆಲ್ಲರ ಉಪಟಳ ಹೆಚ್ಚಾಗಿದೆ ಎಂದು ದೂರಿರುವ ಅವರು ಆ ಪತ್ರವನ್ನು ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಗೂ ರವಾನಿಸಿದ್ದಾರೆ.

ಮಾಜಿ ಕುಲಪತಿ ಮಂಜಪ್ಪ ಹೊಸಮನಿಯವರು 2012ರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ, 371ಜೆ ಉಲ್ಲಂಘಿಸಿ ಸ್ಥಳೀಯೇತರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾಗ ಈ ಎಬಿವಿಪಿ ನಾಯಕರು ಬಾಯಿ ಬಿಡಲಿಲ್ಲ ಮಾತ್ರವಲ್ಲ ಉಪಕುಲಪತಿಗಳ ಪರ ನಿಂತರು. ಇದರಿಂದ ನ್ಯಾಯಯುತವಾಗಿ ಹೈದರಾಬಾದ್ ಕರ್ನಾಟದಕ ನಿರುದ್ಯೋಗಿಗಳಿಗೆ ಸಿಗಬೇಕಿದ್ದ ಉದ್ಯೋಗಗಳು ಸಿಗಲಿಲ್ಲ. ಆದರೆ ಈಗ 7 ವರ್ಷಗಳ ನಂತರವಾದರೂ 371ಜೆ ಅನ್ವಯ ನೇಮಕಾತಿ ನಡೆಯುತ್ತಿದ್ದು ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿವೆ. ಆದರೆ ಈಗ ನೇಮಕಾತಿಗೆ ಎಬಿವಿಪಿನವರು ಕಲ್ಲು ಹಾಕಲು ಹೊರಟಿರುವುದ ಅಕ್ಷಮ್ಯ. ಉಪ ಕುಲಪತಿಗಳು ಭ್ರಷ್ಟಾಚಾರ ಮಾಡಿದರೆ ದಾಖಲೆ ಸಮೇತ ಕಾನೂನು ಹೋರಾಟ ಮಾಡಬೇಕೆ ಹೊರತು ಈ ರೀತಿಯ ರೌಡಿ ವರ್ತನೆ ಸರಿಯಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ವಿದ್ಯಾರ್ಥಿಗಳ ಹಿತಾಸಕ್ತಿ ಪರವಾಗಿ ಹೋರಾಡಬೇಕಾದ ಎಬಿವಿಪಿಯಂತಹ ಸಂಘಟನೆ ಅಡವಿ ಸ್ವಾಮಿಯಂತಹ ರೌಡಿಗಳ ಕೈಯಲ್ಲಿ ಹಣ ಮಾಡುವ ದಂಧೆಯಾಗಿರುವುದ ದುರಂತ. ಈ ಕುರಿತು ಎಬಿವಿಪಿಯ ರಾಜ್ಯ ಪಧಾದಿಕಾರಿಗಳು ಗಮನಹರಿಸಬೇಕಿದೆ. ಇನ್ನು ವಿ.ವಿಯಲ್ಲಿನ ಭ್ರಷ್ಟಾಚಾರ ಸಾಮಾನ್ಯ ಸಂಗತಿಯಾಗಿರುವುದು ನಾಗರೀಕ ಸಮಾಜಕ್ಕೆ ಕಳಂಕ. ಈ ಕುರಿತು ದಿಟ್ಟ ಕ್ರಮಗಳಿಗೆ ಸರ್ಕಾರ ಮುಂದಾಗುವಂತೆ ಸಾರ್ವಜನಿಕರು ಒತ್ತಾಯ ಮಾಡಬೇಕಿದೆ. ವಿ.ವಿಯಲ್ಲಿನ ಮೂಲಸೌಕರ್ಯ ಕೊರತೆಯ ನೂರಾರು ಸಮಸ್ಯೆಗಳಿವೆ. ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಸಿಗದೇ ನರಳುತ್ತಿದ್ದಾರೆ. ಇದರ ವಿರುದ್ಧ ಮಾತ್ರ ಯಾರು ದನಿಯೆತ್ತದಿರುವುದು ದುರಂತವಾಗಿದೆ.
ಪಬ್ಲಿಕ್ ಟಿವಿ ವರದಿಗಾರನ ಬಂಧನ
ಒಂದು ಕಡೆ ಇಷ್ಟೆಲ್ಲಾ ರಗಳೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಉಪಕುಲಪತಿ ಸುಭಾಷ್ ವಿರುದ್ಧ ಹಠ ಸಾಧಿಸಲು ಹೋದ ನಾಲ್ವರು ಜೈಲು ಪಾಲಾಗಿದ್ದಾರೆ. ಪಬ್ಲಿಕ್ ಟಿವಿಯ ವೀರೇಶ್ ದಾನಿ, ಇಂಚರ ಟಿವಿಯ ಮಾಜಿ ರಿಪೋರ್ಟರ್ ನಾಗಭೂಷಣ, ಸಿ.ಎಂ ಮಂಜುನಾಥಯ್ಯ ಮತ್ತು ಅವರ ಸ್ನೇಹಿತ ವಿರೇಶ ಬಂಧನವಾಗಿರುವ ಆ ಮಹಾನುಭಾವರು. ನೇಮಕಾತಿ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯದೆ ಪ್ರವೇಶ್ ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯಪಾಲ ವಜುಬಾಯಿವಾಲರವರ ಪೋಟೊ ಅಂಟಿಸಿ ಅದನ್ನು ಟಿವಿಯಲ್ಲಿ ಬೇಕಾಬಿಟ್ಟಿ ಪ್ರಸಾರ ಮಾಡಿದ್ದಾರೆ.
ಉಪಕುಲಪತಿಗಳು ಇದನ್ನು ನೋಡಿದ್ದೆ ತಡ ಪೊಲೀಸರಿಗೆ ದೂರು ನೀಡಿದ್ದಾರೆ. ನವರಂಗಿ ಆಟ ಆಡಲು ಹೋದ ಆ ನಾಲ್ವರು ಅಂದರ್ ಆಗಿದ್ದಾರೆ. ಹುಚ್ಚುಚ್ಚು ಸುದ್ದಿ ಪ್ರಸಾರ ಮಾಡುವ ಪಬ್ಲಿಕ್ ಟಿವಿಗೆ ಸರಿಯಾಗಿ ಮಂಗಳಾರತಿ ಆಗಿದೆ.


