Homeಚಳವಳಿನಮ್ಮ ದೇಶದಲ್ಲಿ ಸಹಕಾರಿ ಕೃಷಿ ಸಾಧ್ಯವೇ? ಇದರಿಂದ ಖಂಡಿತ ಕೃಷಿ ನಷ್ಟ ತಪ್ಪಿಸಬಹುದು

ನಮ್ಮ ದೇಶದಲ್ಲಿ ಸಹಕಾರಿ ಕೃಷಿ ಸಾಧ್ಯವೇ? ಇದರಿಂದ ಖಂಡಿತ ಕೃಷಿ ನಷ್ಟ ತಪ್ಪಿಸಬಹುದು

ಈ ಸಹಕಾರಿ ಕೃಷಿ ಸಂಸ್ಥೆಗಳು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದರ ಅಥವಾ ಆನ್-ಲೈನ್ ಮಾರುಕಟ್ಟೆಗಳ ಮೂಲಕ ವ್ಯವಹರಿಸಿ ತಮ್ಮ ಲಾಭಾಂಶ ಹೆಚ್ಚಿಸಿಕೊಳ್ಳಬಹುದು

- Advertisement -
- Advertisement -

ಭಾರತದಲ್ಲಿ ರೈತರ ಸಂಕಷ್ಟ ಮತ್ತು ಅದಕ್ಕೆ ಪರಿಹಾರವಿಲ್ಲದೆ ರೈತರು ಗ್ರಾಮೀಣ ಪ್ರದೇಶ ಬಿಟ್ಟು ನಗರಕ್ಕೆ ವಲಸೆ ಹೋಗುವುದು, ಕೂಲಿ ಕೆಲಸಕ್ಕೆ ಪ್ರಯತ್ನಿಸುವುದು, ಅದೂ ಸಿಗದಿದಲ್ಲಿ ಕೊನೆಗೆ ಹತಾಶರಾಗಿ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಎಲ್ಲಾ ರಾಜಕೀಯ ಪಕ್ಷಗಳು ರೈತರ ಸಮಸ್ಯೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು, ಅವರ ಸಂಕಷ್ಟಕ್ಕೆ ಮೊಸಳೆ ಕಣ್ಣೀರು ಸುರಿಸಿವೆಯೇ ಹೊರತು, ತಾವೇ ರಚಿಸಿದ ಸ್ವಾಮಿನಾಥನ್ ಸಮಿತಿಯ ಮುಖ್ಯ ಸಲಹೆಗಳನ್ನೂ ಸಹ ಅನುಷ್ಠಾನಗೊಳಿಸಿಲ್ಲ. ನಮ್ಮ ದೇಶದಲ್ಲಿ, 95%ಕ್ಕೂ ಹೆಚ್ಚು, ರೈತರು ಸರಾಸರಿ ಹೊಂದಿರುವುದು ಎರಡು ಹೆಕ್ಟೇರ್ (ಐದು ಎಕರೆ)ಗಿಂತಲೂ ಕಡಿಮೆ ಭೂಮಿ. ಮೇಲಾಗಿ ನೀರು ಮತ್ತು ವಿದ್ಯುತ್ತಿನ ಸತತ ಅಭಾವ. ಇಂತಹ ಸಣ್ಣ ವಿಸ್ತೀರ್ಣದ ಭೂಮಿಯಲ್ಲಿ ರೈತ ಬೋರ್ವೆಲ್, ಪಂಪ್ ಸೆಟ್, ಟ್ರ್ಯಾಕ್ಟರ್, ಸೋಲಾರ್ ಪ್ಯಾನೆಲ್, ಮುಂತಾದ ಯಂತ್ರೋಪಕರಣ ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಇಳುವರಿ ತೆಗೆಯುವುದು ಕನಸಿನ ಮಾತು. ಹಾಗಾಗಿ ಹೆಚ್ಚಿನ ರೈತರಿಗೆ ಕೃಷಿ ಲಾಭದಾಯಕ ಉದ್ಯೋಗವೇ ಅಲ್ಲ.

ಆದರೆ ಅವರಿಗೆ ಬೇರೇನೂ ದಾರಿಯಿಲ್ಲದೆ, ಪೀಳಿಗೆಯಿಂದ ಪೀಳಿಗೆಗೆ ಚಿಕ್ಕದಾಗುತ್ತಿರುವ ತನ್ನ ಜಮೀನಿಗೆ ನೆಪಮಾತ್ರಕ್ಕೆ ಅಂಟಿಕೊಂಡಿದ್ದಾನೆ. ಈ ಸಣ್ಣ ರೈತನಿಗೆ ಬ್ಯಾಂಕು, ಸರಕಾರಿ ಹಣಕಾಸು ಸಂಸ್ಥೆಗಳಿಂದ ಕೃಷಿಗಾಗಿ ಸಾಲ ಸಿಗುವುದು ಕಷ್ಟ. ತನ್ನ ಕುಟುಂಬ ಮತ್ತು ಕೃಷಿಯ ಅವಶ್ಯಕತೆಗಳಿಗೆ ಆತ ಖಾಸಗಿ ಮೂಲಗಳಿಂದ ಸಾಲ ಪಡೆದು, ಮೀಟರ್ ಬಡ್ಡಿ ಕಟ್ಟಲಾಗದೆ, ಸಾಲದ ಸುಳಿಯಲ್ಲಿ ಸಿಲುಕುವುದು ಸರ್ವೇ ಸಾಮಾನ್ಯ. ಸರಕಾರಗಳಿಂದ ಆಗಾಗ್ಗೆ ಘೋಷಣೆಯಾಗುವ ರಾಜಕೀಯ ಪ್ರೇರಿತ ಸಾಲಮನ್ನಾ ಇಂತಹ ರೈತರನ್ನು ತಲುಪುವುದೇ ಇಲ್ಲ. ಅಕಸ್ಮಾತ್ ಏನಾದರೂ ಉತ್ತಮ ಮಳೆಯಾಗಿ, ಒಳ್ಳೆಯ ಫಸಲು ಕೈ ಹತ್ತಿದರೂ ಸಹ, ಮಾರುಕಟ್ಟೆಯಲ್ಲಿ ಅದರ ಬೆಲೆ ಕುಸಿದು, ಕೊನೆಗೆ ರೋಷದಿಂದ ತನ್ನ ಬೆಳೆಯನ್ನು ರಸ್ತೆಯಲ್ಲಿ ಸುರಿದು ಅನ್ನದಾತ ಬರಿ ಕೈಯಲ್ಲಿ ಮನೆಗೆ ಬಂದಿರುವ ಉದಾಹರಣೆಗಳಿಗೇನೂ ಕೊರತೆಯಿಲ್ಲ. ಐದು ಸದಸ್ಯರ ಒಂದು ಸಣ್ಣ ರೈತ ಕುಟುಂಬ ಕೃಷಿಯನ್ನು ನಂಬಿಕೊಂಡು ಸುಖ ಸಂತೋಷದಿಂದ ಜೀವನ ಮಾಡಲು ಇಂದಿನ ದಿನಗಳಲ್ಲಿ ಸಾಧ್ಯವೇ ಇಲ್ಲವಾಗಿದೆ.

ಹಾಗಾದರೆ ಕೃಷಿಯನ್ನು ಲಾಭದಾಯಕ ಮಾಡುವುದು ಹೇಗೆ? ಇಲ್ಲಿದೆ ಒಂದು ಉಪಾಯ

ಈ ಹಿಂದೆ ಒಂದೆರಡು ಹಸು-ಎಮ್ಮೆ ಇಟ್ಟುಕೊಂಡಿದ್ದ ಗೊಲ್ಲರು ಮನೆಮನೆಗೆ ಹಾಲು ಹಾಕಿ ಹೆಚ್ಚಿನ ಸಂಪಾದನೆ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ, ಅದನ್ನು ಬದಿಯ ವ್ಯಾಪಾರವನ್ನಾಗಿ ಮಾಡಿಕೊಂಡು ಒಂದು ಸಹಕಾರಿ ಹಾಲು ಉತ್ಪಾದನಾ ಘಟಕಕ್ಕೆ ಮಾರಿದ್ದೇ ಆದಲ್ಲಿ ಅವರಿಗೆ ನಿಯಮಿತ ಮತ್ತು ಒಳ್ಳೆಯ ಆದಾಯ ಸಿಗುತ್ತಿದೆ. ಅದೇ ರೀತಿಯಲ್ಲಿ ಕೃಷಿಯನ್ನೂ ಸಹ, ಸಣ್ಣ ರೈತರು ಒಟ್ಟುಗೂಡಿ, ಸಹಕಾರಿ ವ್ಯವಸ್ಥೆಯಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲವೇ?

ಎರಡು ಹೆಕ್ಟೇರಿಗಿಂತ ಕಡಿಮೆ ಇರುವ ಎಲ್ಲಾ ಜಮೀನನ್ನು, ಹಳ್ಳಿಯ (ಪಂಚಾಯಿತಿ) ಅಥವಾ ಬ್ಲಾಕ್ ಮಟ್ಟದಲ್ಲಿ, ಕಡ್ಡಾಯವಾಗಿ ಒಂದುಗೂಡಿಸಿ, ಅದರ ರೈತರನ್ನೆಲ್ಲಾ ಒಂದು ಸಹಕಾರಿ ಸಂಸ್ಥೆಯ ಸದಸ್ಯರನ್ನಾಗಿ ಮಾಡಿ, ಅವರ ಜಮೀನಿನ ವಿಸ್ತೀರ್ಣ ಹಾಗೂ ಅವರ ಇತರ ಸಲಕರಣೆ (ರಾಸು, ನೇಗಿಲು, ಟ್ರ್ಯಾಕ್ಟರ್, ಬೋರ್ವೆಲ್, ಇತ್ಯಾದಿ ಬಳಕೆಗೆ ತರಬಹುದಾದಂತಹ ಉಪಕರಣಗಳು ಇದ್ದಲ್ಲಿ) ಅವುಗಳ ಮೌಲ್ಯಕ್ಕನುಗುಣವಾಗಿ ಅವರಿಗೆ ಸಂಘದ ಹೂಡಿಕೆ ಶೇರುಗಳನ್ನು ನೀಡಬಹುದು. ಇಲ್ಲಿ ಜಮೀನುಗಳು ಈಗಿರುವ ಜಮೀನಿನ ಮಾಲೀಕರ ಹೆಸರಿನಲ್ಲೇ ಇರುತ್ತವೆ, ಒಡೆತನ/ಹಕ್ಕುಗಳು ಬದಲಾಗುವುದಿಲ್ಲ. ಈ ಸಣ್ಣ ಜಮೀನಿನ ಮಧ್ಯೆ ಏನಾದರೂ ಒಂದೋ ಎರಡೋ ದೊಡ್ಡ ಜಮೀನುಗಳು ಇದ್ದಲ್ಲಿ ಅವನ್ನೂ ಸಹ, ಅದರ ಮಾಲೀಕರು ಒಪ್ಪಿದಲ್ಲಿ, ಒಳಸೇರಿಸಬಹುದು.

ಹೀಗೆ ಒಟ್ಟುಗೂಡಿಸಿದ ಜಮೀನು ವಿಸ್ತೀರ್ಣದಲ್ಲಿ ದೊಡ್ಡ ಅಥವಾ ಬಹುದೊಡ್ಡದಾಗುವುದರಿಂದ ಅದರ ಮರು ನಕ್ಷೆ ತಯಾರಿಸಿ, ಜಮೀನಿನ ಮಣ್ಣಿನ ಪರೀಕ್ಷೆ ನಡೆಸಿ, ಲಭ್ಯವಿರುವ ನೀರಿನ ಹಾಗೂ ಇತರ ಸೌಲಭ್ಯಗಳಿಗೆ ಅನುಗುಣವಾಗಿ ಎಷ್ಟು ವಿಸ್ತೀರ್ಣದಲ್ಲಿ,ಯಾವ ಬೆಳೆ, ಯಾವಾಗ ಬೆಳೆಯಬೇಕು ಎಂಬುದನ್ನು ಸಹಕಾರಿ ಸಂಘವೇ ನಿರ್ಧರಿಸಬಹುದು. ಈ ಸಹಕಾರಿ ಕೃಷಿ ಸಂಸ್ಥೆಗೆ ಬ್ಯಾಂಕು/ಸರಕಾರಿ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುವುದು ಸುಲಭವಾಗುತ್ತದೆ. ಅದರಿಂದ ಅವರು ಕೃಷಿಗೆ ಬೇಕಾದಂತಹ ಉಪಕರಣಗಳನ್ನು ಖರೀದಿಸಿ/ಬಾಡಿಗೆ ಪಡೆದು, ಕೃಷಿತಜ್ಞರ ಸಲಹೆ ಪಡೆದು, ಜಮೀನಿನ ಇಳುವರಿ ಹೆಚ್ಚಿಸಿಕೊಳ್ಳಬಹುದು. ಕುಟುಂಬದಲ್ಲಿ ಕೆಲಸ ಮಾಡಲು ಯೋಗ್ಯರಾದ ಸದಸ್ಯರೆಲ್ಲರೂ ಕೃಷಿಯಲ್ಲಿ ಪಾಲುಗೊಂಡು ಅವರವರ ಶ್ರಮಕ್ಕನುಗುಣವಾಗಿ ಕನಿಷ್ಠ ವೇತನದ ಶ್ರೀರಕ್ಷೆ ಪಡೆಯಬಹುದು.

ಸಂಸ್ಥೆಯ ಸದಸ್ಯರ ಕುಟುಂಬದಲ್ಲಿ ಕೆಲಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅಥವಾ ಪರಿಣಿತಿ ಪಡೆದ ಕೆಲಸಗಾರರು ಸಿಗದೇ ಇದ್ದಲ್ಲಿ, ಅದೇ ಹಳ್ಳಿಯ, ಇತರ ಜಮೀನಿಲ್ಲದ, ಜನರನ್ನು ದೈಹಿಕ ಶ್ರಮ ಅಥವಾ ಸಲಹೆ ಕೆಲಸಕ್ಕೆ ನೇಮಿಸಿಕೊಳ್ಳಬಹುದು. ಕೃಷಿ ತಜ್ಞರ ಸೂಕ್ತ ಸಲಹೆಯೊಂದಿಗೆ, ಉತ್ತಮ ದರ್ಜೆಯ ಬೀಜಗಳನ್ನು ಬಳಸಿ, ಕೀಟನಾಶಕ/ರಾಸಾಯನಿಕ ಗೊಬ್ಬರ ಕಡಿಮೆಗೊಳಿಸಿ, ಬೆಳೆಗಳನ್ನು ಸಾಲಿನಿಂದ ಸಾಲಿಗೆ ಬದಲಾಯಿಸಿ, ನೀರಿನ ಸಮರ್ಪಕ ಬಳಕೆ ಮಾಡಿಕೊಂಡು ಉತ್ತಮ ದರ್ಜೆಯ ಇಳುವರಿ ಪಡೆಯಬಹುದು ಹಾಗೂ ದೇಶದ ಜನತೆಗೆ/ಗ್ರಾಹಕರಿಗೆ ಆರೋಗ್ಯಕರ ಆಹಾರ ನೀಡಬಹುದು. ಬೆಳೆಯ ಗುಣಮಟ್ಟ ಹೆಚ್ಚಾದಷ್ಟು ಅದಕ್ಕೆ ಮಾರುಕಟ್ತೆ ಬೆಲೆ ಹೆಚ್ಚುತ್ತದೆ. ಜನರು ಕಳಪೆ ಮಟ್ಟದ ಆಹಾರ ತಿನ್ನುವುದು ತಪ್ಪುತ್ತದೆ.

ಸಂಘವು ಬೆಳೆಯುವ ಬೆಳೆಗೆ ಸೂಕ್ತ ವಿಮೆ ಮಾಡಿಸಿ, ನೈಸರ್ಗಿಕ ಆಪತ್ತಿನಿಂದ ಬೆಳೆ ಕೈಕೊಟ್ಟಲ್ಲಿ ವಿಮಾ ಕಂಪನಿಯವರಿಂದ ಪರಿಹಾರ ಪಡೆಯಬಹುದು. ಈ ಸಹಕಾರಿ ಸಂಘಗಳು ಕೃಷಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಪಿಮುಷ್ಟಿಗೆ ಸಿಗದಂತೆ, ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ, ಒತ್ತಡ ತರಬಹುದು. ಈ ಸಹಕಾರಿ ಕೃಷಿ ಸಂಸ್ಥೆಗಳು ಅವಶ್ಯಕತೆ ಬಿದ್ದಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದರ ಅಥವಾ ಆನ್-ಲೈನ್ ಮಾರುಕಟ್ಟೆಗಳ ಮೂಲಕ ವ್ಯವಹರಿಸಿ ತಮ್ಮ ಲಾಭಾಂಶ ಹೆಚ್ಚಿಸಿಕೊಳ್ಳಬಹುದು. ಹೀಗೆ ಬಂದ ಲಾಭಾಂಶವನ್ನು ರೈತರು ತಮ್ಮ ಹೂಡಿಕೆ ಶೇರು ಪ್ರಮಾಣಕ್ಕನುಗುಣವಾಗಿ ಹಂಚಿಕೊಳ್ಳಬಹುದು. ಲಾಭದ ಒಂದು ಅಂಶವನ್ನು ಸಂಘ ಹಿಡಿದಿಟ್ಟುಕೊಂಡು, ಅದನ್ನು ತನ್ನ ಮೂಲ ಧನಕ್ಕೆ ಸೇರಿಸಿಕೊಂಡು, ಅದರಿಂದ ರೈತ ಸದಸ್ಯರಿಗೆ ಕೈಸಾಲ ನೀಡಬಹುದು.

ಯಾವುದೇ ಸಹಕಾರಿ ಸಂಘದ ಸದಸ್ಯರಾದೊಡನೆ ಅದರ ಎಲ್ಲಾ ಸದಸ್ಯರಿಗೆ ಕಡಿಮೆ ದರದಲ್ಲಿ ಗುಂಪು ಜೀವ ವಿಮೆ, ಆರೋಗ್ಯ ವಿಮೆಯ ಸೌಲಭ್ಯ ಸಿಗುತ್ತದೆ. ಇದರಿಂದ ಅವರ ಜೀವನದ ಒಂದು ಬಹು ದೊಡ್ಡ ಆತಂಕ ಕಡಿಮೆಯಾಗುತ್ತದೆ. ಮುಂದಿನ ಬದುಕಿಗೆ ಒಂದು ರೀತಿಯ ಧೈರ್ಯ ಸಿಗುತ್ತದೆ. ಸದಸ್ಯರ ಮಕ್ಕಳು ಪ್ರಶಿಕ್ಷಿತರಾಗಿದ್ದಲ್ಲಿ ಕೃಷಿಗೆ/ಗ್ರಾಮೀಣ ಜೀವನಕ್ಕೆ ಪೂರಕವಾದ ವ್ಯವಸಾಯ(ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ವಾಹನ ಚಾಲಕ, ಕಂಪ್ಯೂಟರ್ ನಿಪುಣತೆ, ಮೊಬೈಲ್ ದುರಸ್ತಿ) ಮುಂತಾದವುಗಳಲ್ಲಿ ತರಬೇತಿ ಪಡೆಯಲು ವ್ಯವಸ್ಥೆ ಮಾಡಬಹುದು. ಸಂಸ್ಥೆಯು ತನ್ನದೇ ಆದ ಕಾರ್ಯಾಗಾರ (ವರ್ಕ್-ಶಾಪ್) ಪ್ರಾರಂಭಿಸಬಹುದು. ಸಹಕಾರಿ ಸಂಸ್ಥೆಗಳು ತಾವೇ ಸೇರಿಕೊಂಡು ವಿವಿಧ ಕೃಷಿ ಮೌಲ್ಯಾಭಿವೃದ್ಧಿ ಘಟಕಗಳನ್ನು  ತೆರೆಯಬಹುದು. ತನ್ನ ಗ್ರಾಮವಷ್ಟೇ ಅಲ್ಲ ಸುತಮುತ್ತಲಿನ ಗ್ರಾಮದ ಯುವಕರಿಗೂ ಸೂಕ್ತ ಉದ್ಯೋಗವಕಾಶ ಕಲ್ಪಿಸಬಹುದು. ಗ್ರಾಮವಾಸಿಗರು ಅನಾವಶ್ಯಕವಾಗಿ ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಬಹುದು. ಗ್ರಾಮದ ಭವಿಷ್ಯವನ್ನೇ ಬದಲಾಯಿಸಬಹುದು.

ಒಗ್ಗಟ್ಟಿನಲ್ಲಿದೆ ಸಂಘಶಕ್ತಿ.

ಸದಸ್ಯರು ಗ್ರಾಮ/ತಾಲ್ಲೂಕು ಪಂಚಾಯಿತಿಯಲ್ಲಿ ತಮ್ಮ ಸ್ವಂತ/ಗ್ರಾಮದ ಕೆಲಸಗಳನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು, ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು, ಒಳಚರಂಡಿ, ಶೌಚಾಲಯ, ಪಡಿತರ ಅಂಗಡಿ, ಬೀದಿ ದೀಪ, ಇಂಟರ್ನೆಟ್ ವ್ಯವಸ್ಥೆ,  ಶಾಲೆ/ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ/ಆಸ್ಪತ್ರೆ, ಆಂಗನವಾಡಿ, ಮಾರುಕಟ್ಟೆ, ನೀರಾವರಿ ಯೋಜನೆ, ಮುಂತಾದ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದಲ್ಲಿ ಅವನ್ನು ಶೀಘ್ರದಲ್ಲಿ ಪೂರೈಸುವಂತೆ ಸರಕಾರದ ಮೇಲೆ ಒತ್ತಡ ತರಬಹುದು.

ಸಹಕಾರಿ ಕೃಷಿ ಸಂಸ್ಥೆಗಳು/ಗ್ರಾಮಗಳು ಸ್ವಾವಲಂಬಿಯಾಗುತ್ತಿದ್ದಂತೆ ಸರಕಾರದ ಮೇಲಿರುವ ಅನಾವಶ್ಯಕ ಅನುದಾನದ ಭಾರವೂ ಕಡಿಮೆಯಾಗುತ್ತಾ ಬರುತ್ತದೆ. ಈ ಹಣವನ್ನು ಗ್ರಾಮಗಳ ಮೂಲಭೂತ ಸೌಕರ್ಯ ಹೆಚ್ಚಿಸಲು ಬಳಸುವಂತೆ ಮಾಡಬಹುದು. ಮಳೆ/ಕೃಷಿ ಕೆಲಸ ಇಲ್ಲದಿದ್ದ ಸಮಯದಲ್ಲಿ ಗ್ರಾಮಸ್ಥರು ಸೇರಿಕೊಂಡು, ಶ್ರಮದಾನ ಮಾಡಿ, ಮಹಾರಾಷ್ಟ್ರದ ವಿಧರ್ಭಾದಲ್ಲಿ ಪಾನಿ ಫೌಂಡೇಷನ್ ನಡೆಸುತ್ತಿರುವಂತಹ ಜಲ ಸಂವರ್ಧಿನಿ ಕೆಲಸಮಾಡಿ, ಹಳ್ಳಿಯ ಸುತ್ತಮುತ್ತಲಿನ ಕೆರೆಕಟ್ಟೆಗಳ ಹೂಳೆತ್ತುವುದು, ಮಳೆ ನೀರು ಕೊಯಿಲು/ಅಂತರ್ಜಲ ವೃದ್ಧಿ, ಸೋಲಾರ್/ವಿಂಡ್ ಫಾರ್ಮ್ ಸ್ಥಾಪನೆಯಂತಹ ಕೆಲಸಗಳನ್ನು ಮಾಡಬಹುದು.

 

ಇದರಿಂದ ಮುಂಬರುವ ದಿನಗಳಲ್ಲಿ ವಿದ್ಯುತ್ಛಕ್ತಿ ಹಾಗೂ ಮಳೆಗಾಲದ ನಂತರದಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಲಭ್ಯತೆ ಹೆಚ್ಚುತ್ತದೆ. ಇಂತಹ ಕೆಲಸ ಮಾಡಿದ ಸಂದರ್ಭದಲ್ಲಿ ಮನ್ರೆಗಾ ಫಂಡಿನಿಂದ ಕನಿಷ್ಠ ಕೂಲಿ ಸರಕಾರದಿಂದ ಪಡೆಯುವ ಸಾಧ್ಯತೆಯೂ ಇರುತ್ತದೆ.ಇಂತಹ ಸಾಧನೆ ಮಾಡಿರುವ ಒಂದು ಗ್ರಾಮ, ಮಹಾರಾಷ್ಟ್ರದ ಹಿವರೆ ಬಾಜಾರ್, ಕಥೆಯನ್ನು ಅಂತರ್ಜಾಲದಲ್ಲಿ ಗೂಗಲ್ ಮಾಡಿ ಯಾರು ಬೇಕಾದರೂ ನೋಡಿ ಪಾಠ ಕಲಿಯಬಹುದು. ಭಾರತದ ಒಂದು ಮಾದರಿ ಗ್ರಾಮವಾಗುವುದರ ಜೊತೆಗೆ ಹಿವರೆ ಬಾಜಾರ್ ಇಂದು ದೇಶದಲ್ಲೇ ಅತ್ಯಂತ ಹೆಚ್ಚಿನ ಕೋಟ್ಯಾಧಿಪತಿಗಳನ್ನು ಹೊಂದಿರುವ ಗ್ರಾಮವಾಗಿದೆ.

ಇದರಲ್ಲಿ ಗಮನವಿಡಬೇಕಾದ ಅಂಶವೆಂದರೆ ಸಹಕಾರಿ ಸಂಘಗಳು ಜಾತಿಯ ಆಧಾರದ ಮೇಲೆ ಪ್ರಾರಂಭವಾಗದೆ ಗ್ರಾಮದ ಐಕ್ಯತೆ/ವಿವಿಧತೆ/ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು. ರಾಜಕಾರಣಿಗಳಿಗೆ, ಪಕ್ಷದ ರಾಜಕೀಯಕ್ಕೆ ಒಳಪ್ರವೇಶ ನೀಡದಿರುವುದು, ಶುದ್ಧಹಸ್ತರನ್ನು ಸಂಸ್ಥೆಯ ಆರ್ಥಿಕ ವ್ಯವಹಾರದ ಉಸ್ತುವಾರಿಯನ್ನಾಗಿ ಮಾಡುವುದು ಮತ್ತು ಏನೇ ಅವ್ಯವಹಾರ ಕಂಡು ಬಂದಲ್ಲಿ ಕೂಡಲೇ ಅದನ್ನು ನಿಗ್ರಹಿಸುವುದು ಬಹಳ ಮುಖ್ಯ. ಇಂತಹ ಹೊಸ ಹಾದಿಯಲ್ಲಿ ಅನೇಕ ಹೊಸ ಕಷ್ಟಗಳು ಬರುವುದು ಸಹಜ, ಆದರೆ ಪರಸ್ಪರ ಸಹಕಾರ, ಸೌಹಾರ್ದತೆಯಿಂದ ಮತ್ತು ಆಧುನಿಕ ತಂತ್ರಜ್ಞಾನದಿಂದ ಸಮಸ್ಯೆಗೆ ಪರಿಹಾರ ಶೀಘ್ರದಲ್ಲಿ ಕಂಡುಕೊಳ್ಳಬಹುದು. ಸರಕಾರದ ರೀತಿ-ನೀತಿಗಳು ಈ ರೀತಿಯ ಕೃಷಿ ಸಹಕಾರ ಸಂಸ್ಥೆಗಳ ನೆರವಿಗೆ ನಿಂತರೆ ದೇಶದ ರೈತರ ಸಂಕಷ್ಟ ಎನ್ನುವುದು ಇತಿಹಾಸದ ಮಾತಾಗಬಹುದು.

ನಾನು ಇದರಲ್ಲಿ ಒಂದು ಸ್ಥೂಲ ಚೌಕಟ್ಟು ಮಾತ್ರ ನಿರ್ಮಿಸಿದ್ದೇನೆ, ಇದರಲ್ಲಿ ಏನಾದರೂ ನ್ಯೂನತೆಗಳಿರಬಹುದು ಅಥವಾ ನನಗೆ ತಿಳಿಯದಂತಹ ಒಳಗುಟ್ಟು-ಮುಗ್ಗಟ್ಟುಗಳು ಸಹ ಇರಬಹುದು. ಆದರೆ ಈ ವಿಷಯ ದೊಡ್ಡ ಪ್ರಮಾಣದಲ್ಲಿ, ದೊಡ್ಡ ವೇದಿಕೆಗಳಲ್ಲಿ, ವಿಷಯ ತಜ್ಞರೊಂದಿಗೆ ಚರ್ಚೆಯಾದಲ್ಲಿ ಈ ಯೋಚನೆಯನ್ನು ಯೋಜನೆಯನ್ನಾಗಿ, ಇನ್ನಷ್ಟು ಪರಿಣಾಮಕಾರಿಯಾಗಿ, ರೂಪಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: ಈ ರೈತ ಹೋರಾಟ ಭಾರತಕ್ಕೆ ಸ್ಪಷ್ಟ ದಿಕ್ಕು ತೋರಿದೆ: ದೆಹಲಿಯ ರೈತ ಹೋರಾಟ ಬೆಂಬಲಿಸಿ ಬಂದವರ ಮಾತುಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...