ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಾಡಿರುವ ಆರೋಪದ ಕುರಿತು ತನಿಖೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಆದೇಶಿಸಿದ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಕೇಜ್ರಿವಾಲ್ ಅವರ ಮನೆಗೆ ತಲುಪಿದ್ದಾರೆ ಎಂದು ವರದಿಯಾಗಿದೆ.
ಕೇಜ್ರಿವಾಲ್ ಅವರ ಆಮಿಷ ಆರೋಪದ ಕುರಿತು ಎಸಿಬಿ ತನಿಖೆ ನಡೆಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ರಾಜ್ಯ ಸರ್ಕಾದ ಪ್ರಧಾನ ಕಾರ್ಯದರ್ಶಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅದರ ಅನ್ವಯ ತನಿಖೆಗೆ ಆದೇಶಿಸಲಾಗಿತ್ತು. ಈ ಬೆನ್ನಲ್ಲೇ ಎಸಿಬಿ ತಂಡ ಕ್ರೇಜಿವಾಲ್ ಮನೆಗೆ ಬಂದಿದೆ. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಫೆಬ್ರವರಿ 8ರಂದು ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುವ ಮುನ್ನ ಎಎಪಿಯ 16 ಅಭ್ಯರ್ಥಿಗಳನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಗುರುವಾರ (ಫೆ.6) ಆರೋಪಿಸಿದ್ದರು.
ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಸಚಿವ ಸ್ಥಾನ ಮತ್ತು ಪಕ್ಷ ಬದಲಾಯಿಸಿದರೆ ತಲಾ 15 ಕೋಟಿ ರೂಪಾಯಿಗಳ ಭರವಸೆ ಸಿಕ್ಕಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಇತರ ನಾಯಕರು ಕೂಡ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು.
ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ಎಸಿಬಿ ತಂಡದ ಆಗಮಿಸಿದ್ದನ್ನು ಎಎಪಿ ಕಾನೂನು ಘಟಕದ ಅಧ್ಯಕ್ಷ ಸಂಜೀವ್ ನಾಸಿಯರ್ ಪ್ರಶ್ನಿಸಿದ್ದಾರೆ. “ಇದು ತುಂಬಾ ಆಶ್ಚರ್ಯಕರ ಬೆಳವಣಿಗೆ ಎಂದಿದ್ದಾರೆ.
“ಎಸಿಬಿ ಅಧಿಕಾರಿಗಳ ಬಳಿ ಯಾವುದೇ ದಾಖಲೆಗಳು ಅಥವಾ ಸೂಚನೆಗಳಿಲ್ಲ. ಅವರು ಯಾರಿಗೋ ನಿರಂತರವಾಗಿ ಕರೆಗಳನ್ನು ಮಾಡುತ್ತಿದ್ದಾರೆ. ನೋಟಿಸ್ ಅಥವಾ ಆದೇಶವನ್ನು ಕೇಳಿದಾಗ, ಅವರು ಯಾವುದೂ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ. ಸಂಜಯ್ ಸಿಂಗ್ ಈಗಾಗಲೇ ದೂರು ದಾಖಲಿಸಲು ಎಸಿಬಿ ಕಚೇರಿಯಲ್ಲಿದ್ದಾರೆ. ಅಧಿಕಾರಿಗಳು ಯಾರ ಆದೇಶದ ಮೇರೆಗೆ ಆಗಮಿಸಿದ್ದಾರೆ. ಇದು ರಾಜಕೀಯ ನಾಟಕ ಸೃಷ್ಟಿಸಲು ಬಿಜೆಪಿ ಮಾಡಿದ ಪಿತೂರಿ. ಶೀಘ್ರದಲ್ಲೇ ಎಲ್ಲಾ ಬಹಿರಂಗಗೊಳ್ಳಲಿದೆ. ಕಾನೂನು ಸೂಚನೆ ಇಲ್ಲದೆ ಯಾರನ್ನೂ ಒಳಗೆ ಬಿಡಲಾಗುವುದಿಲ್ಲ” ಎಂದು ಸಂಜೀವ್ ನಾಸಿಯರ್ ಹೇಳಿದ್ದಾರೆ.
#WATCH | Delhi: AAP legal cell president Sanjeev Nasiar says, "It is very surprising. The ACB team sitting here for the last half an hour has no papers or instructions. They are continuously talking to someone on call. When we asked for a notice or authorisation for… https://t.co/izZFWsKC5x pic.twitter.com/0EwqZASuzs
— ANI (@ANI) February 7, 2025
ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್‌ಗೆ ದೂರು ಸಲ್ಲಿಸಿದ ನಂತರ ಗವರ್ನರ್ ಸಕ್ಸೇನಾ ಅವರು ತನಿಖೆಗೆ ಆದೇಶಿಸಿದ್ದಾರೆ. ಕೇಜ್ರಿವಾಲ್ ಆರೋಪಗಳು ಸುಳ್ಳು ಮತ್ತು ಆಧಾರರಹಿತ. ಮತದಾನದ ನಂತರ ದೆಹಲಿಯಲ್ಲಿ ಭಯ ಮತ್ತು ಅಶಾಂತಿಯನ್ನು ಸೃಷ್ಟಿಸುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಕಳಂಕ ತರುವ ಉದ್ದೇಶವನ್ನು ಹೊಂದಿವೆ ಎಂದು ವಿಷ್ಣು ಮಿತ್ತಲ್ ಆರೋಪಿಸಿದ್ದಾರೆ.
ಎಎಪಿ ನಾಯಕರು ಸಾಕ್ಷ್ಯಾಧಾರಗಳಿಲ್ಲದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ಮಿತ್ತಲ್ ಹೇಳಿದ್ದು, ಎಎಪಿ ಪಕ್ಷವು ಅಶಾಂತಿಯನ್ನು ಪ್ರಚೋದಿಸಲು ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿ | ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿ ಆಮಿಷ ಆರೋಪ : ತನಿಖೆಗೆ ಆದೇಶಿಸಿದ ಲೆ.ಗವರ್ನರ್


