ಗೌರಿ ಲಂಕೇಶ್ ಮತ್ತು ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣಗಳ ಆರೋಪಿಗಳಾಗಿರುವ ಅಮಿತ್ ಬದ್ಧಿ ಮತ್ತು ಗಣೇಶ್ ಮಿಸ್ಕಿನ್ ಎಂಬ ಇಬ್ಬರು ವ್ಯಕ್ತಿಗಳನ್ನು ಫೆಬ್ರವರಿ 2ರ ಭಾನುವಾರ ಅವರ ಹುಟ್ಟೂರು ಹುಬ್ಬಳ್ಳಿಯಲ್ಲಿ ಸನ್ಮಾನಿಸಲಾಗಿದೆ ಎಂದು ವರದಿಯಾಗಿದೆ.
ನಗರದ ಕೆಲವೆಡೆ ಸ್ವಾಗತ ಕೋರಿ ಆರೋಪಿಗಳ ಬೆಂಬಲಿಗರು ಬ್ಯಾನರ್ ಹಾಕಿದ್ದು, “7 ವರ್ಷಗಳ ನಂತರ ಬಿಡುಗಡೆಗೊಂಡ ಹಿಂದೂ ಹುಲಿಗಳು” ಎಂಬುವುದಾಗಿ ಬ್ಯಾನರ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ವಾರ್ತಾ ಭಾರತಿ ವರದಿ ಮಾಡಿದೆ.
ಹುಬ್ಬಳ್ಳಿಯ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ತವರಿಗೆ ಆಗಮಿಸಿದ್ದಾರೆ. ಈ ವೇಳೆ ಅವರ ಬೆಂಬಲಿಗರು ಇಬ್ಬರನ್ನೂ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಕುಂಬಳಕಾಯಿ ಒಡೆದು, ಮೆರವಣಿಗೆ ಮೂಲಕ ಸ್ವಾಗತ ಕೋರಿದ್ದಾರೆ.
ನಗರದ ತುಳುಜಾ ಭವಾನಿ ಮಂದಿರದ ಬಳಿಯೂ ಹತ್ಯೆ ಆರೋಪಿಗಳನ್ನು ಸ್ವಾಗತಿಸಿ ಬ್ಯಾನರ್ ಹಾಕಲಾಗಿತ್ತು. ಆದರೆ, ಅದನ್ನು ದೇವಸ್ಥಾನದ ಆಡಳಿತ ಮಂಡಳಿಯವರು ತೆಗೆದು ಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಹತ್ಯೆ ಆರೋಪಿಗಳಿಗೆ ವಿಜಯಪುರದಲ್ಲೂ ನಡೆದಿತ್ತು ಸನ್ಮಾನ :
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಜಯಪುರದ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ತವರಿಗೆ ಆಗಮಿಸಿದ್ದಾಗ, ಅಕ್ಟೋಬರ್ 2024ರಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಅವರಿಬ್ಬರನ್ನೂ ಸನ್ಮಾನಿಸಿ ಅದ್ದೂರಿ ಸ್ವಾಗತ ಕೋರಿದ್ದರು.
ಹತ್ಯೆ ಆರೋಪಿಗಳಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆಗೆ ವಿಜಯಪುರ ಜಿಲ್ಲೆಯ ಸಂಘಪರಿವಾರ ಹಾಗೂ ಶ್ರೀರಾಮ ಸೇನೆಯ ಮುಖಂಡರು, ಕಾರ್ಯಕರ್ತರು ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿತ್ತು.
2017ರ ಸೆಪ್ಟೆಂಬರ್ 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಳಿಕ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ಒಟ್ಟು 25 ಜನ ಆರೋಪಿಗಳನ್ನು ಬಂಧಿಸಿತ್ತು.
ಗಣೇಶ್ ಮಿಸ್ಕಿನ್ ಪರಶುರಾಮ್ ವಾಘ್ಮೋರೆಯನ್ನು ಗೌರಿಯ ಮನೆಗೆ ಕರೆದುಕೊಂಡು ಹೋಗಿ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದಾರೆ.
ಲೇಖಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಎಂ.ಎಂ. ಕಲಬುರ್ಗಿ ಅವರನ್ನು ಆಗಸ್ಟ್ 30, 2015 ರಂದು ಧಾರವಾಡದಲ್ಲಿರುವ ಅವರ ಮನೆಯಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಗೌರಿ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ನಾಲ್ವರು ವ್ಯಕ್ತಿಗಳ ಮೇಲೆ ಕಲ್ಬುರ್ಗಿ ಹತ್ಯೆಗೆ ಸಂಬಂಧಿಸಿದಂತೆಯೂ ವಿಚಾರಣೆ ನಡೆಯುತ್ತಿದೆ. ಇದರಲ್ಲಿ ಗೌರಿ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಅಮೋಲ್ ಕಾಳೆ, ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್ ಮತ್ತು ವಾಸುದೇವ ಸೂರ್ಯವಂಶಿ ಸೇರಿದ್ದಾರೆ.
ಅಮಿತ್ ಬದ್ದಿ ಗೌರಿಯವರ ಮೇಲೆ ನಿಗಾ ಇರಿಸಿ ಕೊಲೆ ಮಾಡಲು ಬಳಸಿದ್ದ ಆಯುಧಕ್ಕೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ. ಗಣೇಶ್ ಮಿಸ್ಕಿನ್ ಪರಶುರಾಮ್ ವಾಘ್ಮೋರೆಯನ್ನು ಗೌರಿಯ ಮನೆಗೆ ಕರೆದೊಯ್ದು ಅಲ್ಲಿ ಗುಂಡು ಹಾರಿಸಿದ ವ್ಯಕ್ತಿ. ವಾಸುದೇವ್ ಸೂರ್ಯವಂಶಿ ವಿರುದ್ದ ಮಿಸ್ಕಿನ್ ಮತ್ತು ವಾಘ್ಮೋರೆ ಬಳಸಿದ್ದ ಬೈಕ್ ಕಳವು ಮಾಡಿದ ಆರೋಪವಿದೆ.


