ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾತಿ ಮತ್ತು ಸಮುದಾಯ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರ ತಪ್ಪಿಸಲು ಮಾರ್ಗಸೂಚಿಗಳನ್ನು ರೂಪಿಸುವ ಸಲುವಾಗಿ ರಚಿಸಿದ್ದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಕೆ ಚಂದ್ರು ನೇತೃತ್ವದ ಏಕ ಸದಸ್ಯ ಸಮಿತಿ ತನ್ನ ವರದಿಯನ್ನು ಮಂಗಳವಾರ (ಜೂನ್ 18) ತಮಿಳುನಾಡು ಸರ್ಕಾರಕ್ಕೆ ಸಲ್ಲಿಸಿದೆ.
ವರದಿಯಲ್ಲಿ ಸಮಿತಿಯು ಸರ್ಕಾರಕ್ಕೆ ಅನೇಕ ಶಿಫಾರಸ್ಸುಗಳನ್ನು ಮಾಡಿದ್ದು, ವಿದ್ಯಾರ್ಥಿಗಳು ಬಳಸುವ ಬಣ್ಣದ ರಿಸ್ಟ್‌ಬ್ಯಾಂಡ್‌ಗಳು ಸೇರಿದಂತೆ ಇತರ ಜಾತಿ ಗುರುತುಗಳನ್ನು ನಿಷೇಧಿಸುವುದು ಮತ್ತು ಸಾಮಾಜಿಕ ನ್ಯಾಯ ವಿದ್ಯಾರ್ಥಿಗಳ ಪಡೆ (ಎಸ್‌ಜೆಎಸ್‌ಎಫ್) ರಚಿಸುವುದು ಅವುಗಳಲ್ಲಿ ಸೇರಿವೆ.
பள்ளி, கல்லூரி மாணவர்களிடையே சாதி, இன உணர்வுகளால் உருவாகும் வன்முறைகளைத் தவிர்க்கவும், நல்லிணக்கம் ஏற்படுத்திடவும், வழிமுறைகளை வகுத்திடவும் தமிழ்நாடு அரசால் அமைக்கப்பட்ட ஓய்வு பெற்ற நீதியரசர் திரு. கே.சந்துரு அவர்கள் தலைமையிலான ஒரு நபர் குழு தனது அறிக்கையை மாண்புமிகு முதலமைச்சர்… pic.twitter.com/HxhnHQ6Dbw
— CMOTamilNadu (@CMOTamilnadu) June 18, 2024
ಸಮಿತಿಯು ಮಾಡಿದ ಪ್ರಮುಖ ಶಿಫಾರಸುಗಳಲ್ಲಿ ಒಂದೆಂದರೆ, ಶಾಲೆಗಳ ಹೆಸರಿನಿಂದ ಜಾತಿ ಸೂಚಕಗಳನ್ನು ತೆಗೆದು ಹಾಕುವುದು ಮತ್ತು ಶಾಲೆಗಳನ್ನು ಅವುಗಳ ಸ್ಥಳದೊಂದಿಗೆ ‘ಸರ್ಕಾರಿ ಶಾಲೆಗಳು’ ಎಂದು ಮಾತ್ರ ಕರೆಯುವುದಾಗಿದೆ.
ಸರ್ಕಾರಿ ಶಾಲೆಗಳ ಹೆಸರಿನೊಂದಿಗೆ ದಾನಿಗಳು ಅಥವಾ ಕುಟುಂಬಗಳ ಹೆಸರಿದ್ದರೆ, ಅವುಗಳಲ್ಲಿನ ಜಾತಿ ಸೂಚಕಗಳನ್ನು ತೆಗದು ಹಾಕುವಂತೆಯೂ ಸಮಿತಿ ಶಿಫಾರಸು ಮಾಡಿದೆ.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಹೈಯರ್ ಸೆಕೆಂಡರಿ ತರಗತಿಗಳ ವಿಜ್ಞಾನ ಕೋರ್ಸ್‌ಗಳಲ್ಲಿ ಮೀಸಲಾತಿ ನೀಡುವುದು ಇನ್ನೊಂದು ಮುಖ್ಯ ಶಿಫಾರಸು ಆಗಿದೆ. ಇದಲ್ಲದೆ, ಸಾಮಾಜಿಕ ಅನಿಷ್ಟಗಳನ್ನು ಎದುರಿಸಲು ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳೊಂದಿಗೆ ಸಾಮಾಜಿಕ ನ್ಯಾಯ ವಿದ್ಯಾರ್ಥಿ ಪಡೆ (ಎಸ್‌ಜೆಎಸ್‌ಎಫ್) ರಚನೆಗೆ ಸಮಿತಿಯು ಶಿಫಾರಸು ಮಾಡಿದೆ. ಶಿಕ್ಷಣದ ಕೇಸರಿಕರಣ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನುಸುಳುವ, ಜಾತಿ ಮತ್ತು ಕೋಮು ಸೌಹಾರ್ದತೆಗೆ ಅಡ್ಡಿಪಡಿಸುವ ಚಟುವಟಿಕೆಗಳ ಆರೋಪಗಳ ಬಗ್ಗೆ ತನಿಖೆ ನಡೆಸಲು ಪರಿಣಿತ ಸಂಸ್ಥೆ ಅಥವಾ ಏಜೆನ್ಸಿಯನ್ನು ರಚಿಸುವಂತೆಯೂ ಸೂಚಿಸಲಾಗಿದೆ.
ಇದಲ್ಲದೆ, ರಾಜ್ಯ ಸರ್ಕಾರ ನಡೆಸುತ್ತಿರುವ ಎಲ್ಲಾ ಶಾಲಾ, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಸಾಮಾನ್ಯ ನೀತಿ ಸಂಹಿತೆ ಜಾರಿಗೊಳಿಸಬೇಕು. ನೇಮಕಾತಿಗೂ ಮುನ್ನ ಸಾಮಾಜಿಕ ನ್ಯಾಯದ ಸಮಸ್ಯೆಗಳ ಬಗೆಗಿನ ಅವರ ಮನೋಭಾವವನ್ನು ಶಿಕ್ಷಕರ ನೇಮಕಾತಿ ಮಂಡಳಿ (ಟಿಆರ್‌ಬಿ) ಖಚಿತಪಡಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಪ್ರತಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಸಾಮಾಜಿಕ ಸಮಸ್ಯೆಗಳು, ಜಾತಿ ತಾರತಮ್ಯ, ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಮಾದಕ ದ್ರವ್ಯಗಳು, ರ‍್ಯಾಗಿಂಗ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳು ಮತ್ತು ಅವುಗಳ ಉಲ್ಲಂಘಣೆಯ ಪರಿಣಾಮಗಳ ಬಗ್ಗೆ ತಿಳಿಸಬೇಕು ಎಂದು ಹೇಳಿವೆ.
ಪ್ರತಿ ವಿಭಾಗಕ್ಕೆ ಒಬ್ಬ ಸಮಾಲೋಚಕರನ್ನು ನೇಮಿಸಬೇಕು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಪ್ರತಿ ಪ್ರೌಢ ಶಾಲೆಗೆ ಶಾಲಾ ಕಲ್ಯಾಣಾಧಿಕಾರಿ (ಎಸ್‌ಡಬ್ಲ್ಯುಒ) ಹುದ್ದೆಯನ್ನು ರಚಿಸಬೇಕು. ಕಲ್ಯಾಣಾಧಿಕಾರಿ ರ‍್ಯಾಗಿಂಗ್, ಡ್ರಗ್ಸ್ ಬೆದರಿಕೆ, ಲೈಂಗಿಕ ದೌರ್ಜನ್ಯ ಮತ್ತು ಜಾತಿ ತಾರತಮ್ಯಕ್ಕೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಬಗ್ಗೆ ಶಾಲೆಯ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಬೇಕು. ಕಾನೂನು ಪ್ರಕಾರ ಈ ಸಮಸ್ಯೆಗಳನ್ನು ಪರಿಹರಿಸಬೇಕು. ಶಾಲಾ ಆಡಳಿತದ ವಿರುದ್ಧ ದೂರುಗಳಿದ್ದಲ್ಲಿ ಕಲ್ಯಾಣಾಧಿಕಾರಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (ಎಸ್‌ಸಿಪಿಸಿಆರ್) ದೂರು ಸಲ್ಲಿಸಬೇಕು. ಜಾತಿ ತಾರತಮ್ಯ ಮತ್ತು ಇತರ ಅನ್ಯಾಯದ ಆಚರಣೆಗಳ ಬಗ್ಗೆ ಶಿಕ್ಷಕರು ಮತ್ತು ಇತರ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.
2023ರ ಆಗಸ್ಟ್‌ನಲ್ಲಿ ನಂಗುನೇರಿಯಲ್ಲಿಆರು ಮಂದಿ ಅಪ್ರಾಪ್ತರ ಗುಂಪೊಂದು ಮಾರಕಾಸ್ತ್ರಗಳೊಂದಿಗೆ ಇಬ್ಬರು ದಲಿತ ಮಕ್ಕಳ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ ನಂತರ ಸಮಿತಿ ರಚಿಸಲಾಗಿತ್ತು.
ಚಿನ್ನದೊರೈ ಎಂಬ ದಲಿತ ಬಾಲಕ ಕಲಿಕೆಯಲ್ಲಿ ಮುಂದಿದ್ದಾನೆ ಎಂದು ಆತನ ಮೇಲೆ ಹಲ್ಲೆ ನಡೆಸಲಾಗಿತ್ತು. ದಾಳಿಯ ವೇಳೆ ಚಿನ್ನದೊರೈ ಸಹಾಯಕ್ಕೆ ಹೋದ ಸಹೋದರನಿಗೆ ಗಾಯಗಳಾಗಿತ್ತು.
ಈ ಹಿಂದೆ, ತಮಿಳುನಾಡಿನ ಜೆಜೆ ಕಾಯಿದೆಯಡಿಯ ಕೇಂದ್ರಗಳ ಕಾರ್ಯಗಳನ್ನು ಪರಿಶೀಲಿಸಲು ಮತ್ತು ಅವುಗಳ ದಕ್ಷತೆಯನ್ನು ಸುಧಾರಿಸುವ ಮಾರ್ಗಗಳನ್ನು ಸೂಚಿಸಲು ಸರ್ಕಾರವು ನಿವೃತ್ತ ನ್ಯಾಯಮೂರ್ತಿಗೆ ಜವಬ್ದಾರಿ ನೀಡಿತ್ತು. ಅದರ ವರದಿಯನ್ನು ನವೆಂಬರ್ 15, 2023 ರಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಇದನ್ನೂ ಓದಿ : ಯುಜಿಸಿ ನೆಟ್ ಪರೀಕ್ಷೆ ರದ್ದು : ಸಿಬಿಐ ತನಿಖೆಗೆ ಹಸ್ತಾಂತರ


