Homeಕರ್ನಾಟಕಚನ್ನರಾಯಪಟ್ಟಣ ರೈತ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ಬೆಂಬಲ

ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ಬೆಂಬಲ

ಸಾವಿರ ದಿನ ಪೂರೈಸಿದ ಭೂಸ್ವಾಧೀನ ವಿರೋಧಿ ಸಮರ, ರೈತರಿಂದ ಬೃಹತ್ ಸಮಾವೇಶ

- Advertisement -
- Advertisement -

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಡೆಸುತ್ತಿರುವ ‘ಭೂಸ್ವಾಧಿನ ವಿರೋಧಿ ಹೋರಾಟ’ ಒಂದು ಸಾವಿರ ದಿನ ಪೂರೈಸಿದ್ದು, ಈ ಹಿನ್ನೆಲೆ ಇಂದು (ಡಿ.30) ಧರಣಿ ಸ್ಥಳದಲ್ಲಿ ರೈತರ ಬೃಹತ್ ಸಮಾವೇಶ ನಡೆಯಿತು.

ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್, ಸಾಹಿತಿ ಪ್ರೊ.ಎಸ್‌.ಜಿ ಸಿದ್ದರಾಮಯ್ಯ, ರೈತ ನಾಯಕ ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಜಸ್ಟೀಸ್ ಗೋಪಾಲಗೌಡ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ನಟ ಪ್ರಕಾಶ್ ರಾಜ್ ಮಾತನಾಡಿ, “ನಾನು ರೈತ ಅಲ್ಲ. ಆದರೆ, ಸ್ವಲ್ಪ ಗಿಡಮರ ಬೆಳೆಸಿದ್ದೇನೆ. ರೈತರು ನನಗಿಂತ ದೊಡ್ಡವರು. ಅವರ ಋಣ ನನ್ನ ಮೇಲೆ ಇರುವುದರಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸಾವಿರ ದಿನಗಳ ಹೋರಾಟ ಸಣ್ಣದಲ್ಲ. ಈ ದೇಶದ ದೊಡ್ಡ ಕರ್ಮ ಮತ್ತು ಶಾಪವೆಂದರೆ ಹಲವಾರು ವರ್ಷಗಳಿಂದ ರೈತರು ಹೋರಾಡುತ್ತಿರುವುದು. ರೈತರು ಈ ದೇಶದ ಬೆನ್ನಲುಬು ಎಂದು ಮಾತಿಗಷ್ಟೇ ಹೇಳುತ್ತಾರೆ. ಒಂದು ಸಾವಿರ ದಿನಗಳಿಂದ ಇಷ್ಟೆಲ್ಲಾ ಹೇಳಿದರೂ..ಯಾವ ಅಹಂಕಾರ ಈವರೆಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬಿಟ್ಟಿಲ್ಲ? ಎಂದು ಪ್ರಶ್ನಿಸಿದರು.

ಎಲ್ಲಾ ಸರ್ಕಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿ ಆಗಿವೆ. ಒಂದು ದೇಶದಲ್ಲಿ ನಮಗೆ ಏನು ಬೇಕು ಎಂದು ನಾವೇ ಆರಿಸಿದವರನ್ನು ಕೇಳಬೇಕು. ಆದರೆ, ನಾವು ಆರಿಸಿ ಕಳಿಸಿದವರು ನಮಗೆ ಏನು ಬೇಡವೋ ಅದನ್ನು ಮಾಡುತ್ತಿದ್ದಾರೆ. ಈಗಿರುವ ಒಕ್ಕೂಟ ಸರ್ಕಾರ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ವಿರೋಧಿಯಾಗಿದೆ. ಈ ಹೋರಾಟ ಶುರುವಾದಾಗ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರ, ‘ಇವರು ರೈತರೇ ಅಲ್ಲ’ ಎಂದು ಹೇಳಿತ್ತು. ಆಗ ವಿಪಕ್ಷದಲ್ಲಿದ್ದವರು ‘ನಾವು ಅಧಿಕಾರಕ್ಕೆ ಬಂದರೆ ರೈತರ ಪರವಾಗಿರುತ್ತೇವೆ’ ಎಂದಿದ್ದರು.  ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ರೈತರು ಓಟು ಹಾಕುವುದಕ್ಕಷ್ಟೇ ಸೀಮಿತವಾಗಿದ್ದಾರೆಯೇ? ಎಂದು ಆಕ್ರೋಶ ಹೊರಹಾಕಿದರು.

ಇದು ಕೇವಲ 13 ಹಳ್ಳಿಗಳ ಭೂ ಸ್ವಾಧೀನ ಸಮಸ್ಯೆ ಅಲ್ಲ. ಈ ಹೋರಾಟದ ಗೆಲುವು ಇಡೀ ಸ್ವಾಧೀನ ಪ್ರತಿಕ್ರಿಯೆಯನ್ನೇ ಬದಲಿಸಬೇಕು. ಸ್ವಾಧೀನ ಮಾಡಿ ನೀವು ಭೂಮಿ ಕೊಡುತ್ತಿರುವುದು ಭವಿಷ್ಯದ ಬಂಡವಾಳಶಾಹಿಗಳಿಗೆ. ಅವರು ಮರ ನೋಡದೆ ತೆಂಗಿನ ಕಾಯಿ ಕೀಳುತ್ತಾರೆ, ಗಿಡ ನೋಡದೆ ದೇವರಿಗೆ ಹೂ ಮುಡಿಸುತ್ತಾರೆ. ಭತ್ತ ನೋಡದೆ ಅನ್ನ ಉಂಡು, ರಾಗಿ ನೋಡದೆ ಮುದ್ದೆ ಹಿಚುಕುತ್ತಾರೆ. ಆದ್ದರಿಂದ, ಅವರಿಗೆ ಭೂಮಿ ಮತ್ತು ರೈತರ ನಡುವಿನ ಸಂಬಂಧ ಅರ್ಥವಾಗುವುದಿಲ್ಲ. ಭೂಮಿ ಎಂಬುವುದು ರೈತರ ಸ್ವಾಭಿಮಾನದ ಗುರುತು ಎಂದರು.

ಇಲ್ಲಿನ ರೈತರಿಗೆ ಸರ್ಕಾರ ಕೆಲಸ ಕೊಟ್ಟಿಲ್ಲ. ತಲೆ ತಲಾಂತರಗಳಿಂದ ಅವರೇ ತುಂಡು ಭೂಮಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪಟ್ಟಣದವರೆಲ್ಲಾ ರೈತರಾಗಬೇಕಿಲ್ಲ. ಆದರೆ ಸಹ ಮನುಷ್ಯರು ಹಾಗೂ ರೈತರ ಆತಂಕ, ಕಣ್ಣೀರಿನ ಜೊತೆಗೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ. ಮಾಧ್ಯಮಗಳ ಮೂಲಕ ಈ ದೇಶದ ರಾಜಕಾರಣಿಗಳಿಗೆ ಹಾಗೂ ಪಟ್ಟಣ ನಿವಾಸಿಗಳಿಗೆ ಸಂದೇಶ ನೀಡುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಜೊತೆಗೆ ನಿಲ್ಲುವುದರಿಂದ ನನಗೆ ಗೌರವ ಸಿಗುತ್ತದೆ. ರೈತರ ಋಣ ನನ್ನ ಮೇಲಿದೆ. ಫಲವತ್ತಾದ ಭೂಮಿ ಮೇಲೆ ಕೈಗಾರಿಕೆ ಕಟ್ಟುತ್ತಾ ಹೋದರೆ, ನೀವು ಮುಂದೆ ಹೊಟ್ಟೆಗೆ ತಿನ್ನುವುದಾದರೂ ಏನು? ರೈತ ನಶಿಸಿದರೆ ನಾವ್ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರೊ. ಎಸ್‌.ಜಿ ಸಿದ್ದರಾಮಯ್ಯ ಮಾತನಾಡಿ, “ನಾನು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ; ನಾನೂ ಕೃಷಿ ಮಾಡುತ್ತಿದ್ದೇನೆ. ರೈತರ ಭಂಗ-ಭವಣೆ ಏನು ಎಂಬುವುದರ ಅರಿವು ನನಗಿದೆ. ನಮ್ಮ ಶಾಸಕಾಂಗ ಹಾಗೂ ಅಧಿಕಾರಿ ವರ್ಗದಲ್ಲಿ ಇರುವರೆಲ್ಲರೂ ರೈತನ ಮಕ್ಕಳೆ. ಆದರೆ, ಅವರು ತಮ್ಮ ಹಿಂದಿನ ಕಣ್ಣು-ಕಿವಿ ಹಾಗೂ ನೆನಪು ಕಳೆದುಕೊಂಡಿದ್ದಾರೆ. ರೈತರ ಬವಣೆಗಳನ್ನು ಬಾಲ್ಯದಲ್ಲಿ ಕಂಡವರು, ಅಕ್ಷರ ಕಲಿತ ನಂತರ ಅದಕ್ಕೆ ಪರಿಹಾರ ಹುಡುಕಬೇಕಿತ್ತು. ಆದರೆ, ಅವರು ಆ ಕಣ್ಣು ಕಳೆದುಕೊಂಡು ಕನ್ನಡಕ ಹಾಕಿಕೊಂಡಿದ್ದಾರೆ. ನೆನಪು ಹಾಗೂ ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಇರುವ ಬಹುತೇಕರು ರೈತರ ಮಕ್ಕಳೆ. ಅವರು ತಮ್ಮ ಅಂತಃಸಾಕ್ಷಿಯನ್ನು ಎಚ್ಚರಿಸಿಕೊಳ್ಳುವ ರೀತಿಯಲ್ಲಿ, ಹಳೆಯ ನೆನಪನ್ನು ಜಾಗೃತಿಯಲ್ಲಿ ಇಟ್ಟುಕೊಂಡು ರೈತರ ಬವಣೆ ನೋಡಬೇಕು. ತಮ್ಮ ಆತ್ಮಸಾಕ್ಷಿ ಎಚ್ಚರದಲ್ಲಿಟ್ಟುಕೊಂಡು ಮಾತನಾಡಬೇಕು. ದೇಶಕ್ಕೆ ಪ್ರಗತಿ ಬೇಕು ಹೌದು. ಆದರೆ, ಸಂಸ್ಕೃತಿ, ಇತಿಹಾಸ ಹಾಗೂ ಬದುಕಿನ ನಾಶದ ಮೂಲಕ ಅಲ್ಲ. ನಮ್ಮ ಬದುಕಿಗೆ ಪೂರಕವಾದ ಪ್ರಗತಿ ಬೇಕು. ಸ್ಥಳೀಯವಾಗಿ ಇಲ್ಲಿ ಪ್ರತಿಯೊಂದು ತರಕಾರಿಯನ್ನೂ ಬೆಳೆಯುತ್ತಾರೆ. ಅದೆಲ್ಲಾ ಬೆಂಗಳೂರಿಗೆ ಹೋಗುತ್ತಿದೆ; ಇಂತಹ ಹಳ್ಳಿಗಳನ್ನು ನಾಶ ಮಾಡಿ, ಪ್ರಗತಿ ಸಾಧಿಸುತ್ತೇವೆ ಎನ್ನುವುದು ಮನುಷ್ಯತ್ವ ಹಾಗೂ ಪ್ರಗತಿಯ ವಿರೋಧಿಯಾಗಿದೆ ಎಂದರು.

ಈ ಭೂ ಸ್ವಾಧಿನ ಬಂಡವಾಳಶಾಹಿಗಳನ್ನು ಬೆಳೆಸುವುದೇ ಹೊರತು, ರೈತರನ್ನು ಉದ್ಧಾರ ಮಾಡುವುದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ನಂಜುಂಡಸ್ವಾಮಿ ಶಿಷ್ಯ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಸಾವಿರ ದಿನಗಳಿಂದ ರೈತರು ನಡೆಸುತ್ತಿರುವ ಧರಣಿ ಇಡೀ ದೇಶದ ರಾಜಕೀಯ ಪ್ರಜ್ಞೆಯೇ ತಲೆತಗ್ಗಿಸುವ ವಿಚಾರವಾಗಿದೆ. ನಮ್ಮಲ್ಲಿ ಹಲವಾರು ಬಂಜರು ಭೂಮಿ ಇವೆ, ಅಲ್ಲಿಗೆ ಹೋಗಿ ಅಭಿವೃದ್ಧಿ ಮಾಡಿ. ಈಗಾಗಲೇ ಬೆಂಗಳೂರನ್ನು ಹಾಳು ಮಾಡಿರುವ ನೀವು, ಹಳ್ಳಿಗಳನ್ನು ನರಕ ಮಾಡುವುದು ಬೇಡ. ಫಲವತ್ತಾದ ಭೂಮಿಯನ್ನು ನಾಶ ಮಾಡಿದರೆ, ಮುಂದೆ ಅನ್ನ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಅನ್ನದ ಋಣವನ್ನು ಪ್ರತಿಯೊಬ್ಬರೂ ಕೂಡ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

13 ಹಳ್ಳಿಗಳನ್ನು ಒಕ್ಕಲೆಬ್ಬಿಸುವುದೆಂದರೆ ಶತಮಾನಗಳಿಂದ ಕಟ್ಟಿ ಬೆಳೆಸಿದ ಸಂಸ್ಕೃತಿ ಏನಾಗುತ್ತದೆ ಎಂಬ ಅರಿವಿರಬೇಕು. ಪ್ರತಿಯೊಂದು ಹೆಜ್ಜೆಯನ್ನೂ ಕೂಡ ನಾಶ ಮಾಡಿ, ಪ್ರಗತಿಯ ಹೆಸರಿನಲ್ಲಿ ವ್ಯವಹಾರ ಮಾಡುವುದು ಅಮಾನವೀಯ ಹಾಗೂ ಸಂವಿಧಾನ ವಿರೋಧಿಯಾಗಿದೆ. ನಾವು ಎಲ್ಲರ ನೋವಿಗೂ ಸ್ಪಂದಿಸುವ ಮನುಷ್ಯರಾಗೋಣ; ರೈತರ ಮಕ್ಕಳಾಗಿ ನಾವೆಲ್ಲರೂ ಇದಕ್ಕೆ ಸ್ಪಂದಿಸಬೇಕು ಎಂದು ಎಂದು ಕರೆ ನೀಡಿದರು.

ವೀರಸಂಗಯ್ಯ ಅವರು ಮಾತನಾಡಿ, “ನೋಟಿಫೀಕೇಶನ್ ಆಗಿದೆ ಏನು ಮಾಡುವುದಕ್ಕೂ ಸಾಧ್ಯವಿಲ್ಲ’ ಎಂದು ಸರ್ಕಾರ ಹೇಳಿದೆ. ಆದರೆ, ಇದು ನಾವೇ ಮಾಡಿಕೊಂಡ ವ್ಯವಸ್ಥೆ ಎಂಬವುದನ್ನು ಮರೆಯಬಾರದು. ಯಾವುದೇ ಸರ್ಕಾರ ಬದಲಾದರೂ ನಮ್ಮ ಬದುಕು ಮಾತ್ರ ಬದಲಾಗಿಲ್ಲ. ಸಾವಿರ ದಿನಗಳ ಈ ಹೋರಾಟ ಇಡೀ ರಾಜ್ಯಕ್ಕೆ ಮಾದರಿ. ನಮ್ಮ ಬದುಕಿನ ವಿಚಾರವನ್ನು ಇಷ್ಟು ಗಂಭೀರವಾಗಿ ತೆಗೆದುಕೊಂಡಿರುವುದನ್ನು ನಾವು ಪರಿಗಣಿಸಿದ್ದೇವೆ. ಕರ್ನಾಟಕದ ಮೂಲೆ ಮೂಲೆಗಳಿಂದ ರೈತರನ್ನು ಸಂಘಟಿಸುವ ಕೆಲಸ ನಾವು ಮಾಡುತ್ತೇವೆ. ಈ ಹೋರಾಟ ಗೆಲ್ಲಲೇಬೇಕು, ಈ ಹೋರಾಟ ಇಡೀ ದೇಶದ ರೈತರ ಪ್ರಶ್ನೆ. ಸೋತರೆ ಇಡೀ ದೇಶದ ರೈತರು ಸೋತಂತೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣವೇ ಭೂ ಸ್ವಾಧೀನ ಕೈಬಿಡಬೇಕು. ಸರಣಿ ಸಭೆಗಳನ್ನು ನಡೆಸುತ್ತಿರುವುದು ಯಾಕೆ? ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಇದು ಕೇವಲ ಚನ್ನರಾಯಪಟ್ಟಣದ 13 ಗ್ರಾಮಗಳ ಹೋರಾಟವಲ್ಲ. ಈ ನಾಡಿನ ರೈತರ ಸಂಸ್ಕೃತಿಯನ್ನು ಉಳಿಸುವುದಕ್ಕೆ ನಡೆಸುತ್ತಿರುವ ಸಂಘರ್ಷ. ನಮಗೆ ಯಾವ ಅಭಿವೃದ್ಧಿ ಮಾದರಿ ಬೇಕು ಎಂಬುವುದು ನಮ್ಮನ್ನು ಆಳುತ್ತಿರುವ ಸರ್ಕಾರಕ್ಕೆ ಬೇಕಿಲ್ಲ. ನಾವು (ರೈತರು) ಮಾಡುತ್ತಿರುದು ನಿಜವಾದ ಅಭಿವೃದ್ಧಿ ಎಂದು ತೋರಿಸುವುದಕ್ಕೆ ಈ ಹೋರಾಟ. ಅಧಿಕಾರಿಗಳು ಹಾಗೂ ಸರ್ಕಾರದ ಜೊತೆಯಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಯಾಕೆ ಇಷ್ಟೆಲ್ಲಾ ಸಭೆಗಳು ಎಂದು ನಮಗೆ ಅನಿಸುತ್ತಿದೆ. ಶೇ.77.7 ಜನ ನಾವು ಭೂಮಿ ಕೊಡಲ್ಲ ಎಂದು ಬರೆದುಕೊಟ್ಟಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದ ಕಾನೂನು ಬಹುಸಂಖ್ಯಾತರ ವಿರೋಧ ಇದ್ದಲ್ಲಿ ಭೂಸ್ವಾಧೀನ ಮಾಡುವಂತಿಲ್ಲ ಎಂದು ಹೇಳುತ್ತದೆ. ಇಷ್ಟು ಸರಳವಾಗಿರುವ ವಿಚಾರ ನಮಗೆ ಗೊತ್ತಿರುವಾಗ ಸರ್ಕಾರದ ಶಾಸಕಾಂಗ ಹಾಗೂ ಕಾರ್ಯಾಂಗಕ್ಕೆ ಅರ್ಥವಾಗಿಲ್ಲ ಎಂದು ಅಂದುಕೊಳ್ಳಬೇಕಾ? ಸಾವಿರ ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ವಾಧೀನ ಕೈಬಿಡುವುದಕ್ಕೆ ತಯಾರಿಲ್ಲ. ಯಾಕೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹಾವೇರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ನೋಟಿಸ್ ನೀಡಿದ್ದಾರೆ. ಇಲ್ಲಿ ಭೂಸ್ವಾಧೀನ ಕೈಬಿಟ್ಟರೆ, ಅವರು ಬೇರೆ ಬೇರೆ ದೇಶದಲ್ಲಿ ಮಾಡಿಕೊಂಡು ಬಂದಿರುವ ಒಪ್ಪಂದಕ್ಕೆ ತೊಂದರೆ ಆಗುತ್ತದೆ. ಇಲ್ಲಿ ಸ್ವಾಧೀನ ಕೈಬಿಟ್ಟರೆ ಕರ್ನಾಟಕದಾದ್ಯಂತ ಚಳವಳಿ ನಡೆಯುತ್ತದೆ ಎಂಬ ಭಯ ಅವರಿಗಿದೆ. ಇದು ನಮ್ಮ ಭೂಮಿ ಮಾತ್ರ ಉಳಿಸಿಕೊಳ್ಳಲು ಮಾಡುತ್ತಿರುವ ಹೋರಾಟ ಅಲ್ಲ. ಅಭಿವೃದ್ಧಿ ಹೆಸರಿನಲ್ಲಿ ವಶಪಡಿಸಿಕೊಳ್ಳುತ್ತಿರುವುದು ‘ನೈಜ ಅಭಿವೃದ್ಧಿ ’ಭೂಮಿಗಳೇ ಆಗಿವೆ. ಬೀಳು ಬಿಟ್ಟಿರುವ ಭೂಮಿಯನ್ನು ಅವರು ಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಒಂದು ಎಕರೆಗೆ ಪರಿಹಾರವಾಗಿ ಹತ್ತು ಸಾವಿರ ಚದರ ಅಡಿ ಅಭಿವೃದ್ಧಿ ಮಾಡಿರುವ ಭೂಮಿಯನ್ನು ಕೊಡುತ್ತೇವೆ ಎಂದು ಎಂ.ಬಿ. ಪಾಟೀಲ್ ಹೇಳುತ್ತಿದ್ದಾರೆ. ನಾವು ಬೋರ್ವೆಲ್ ಹಾಕಿ, ಗಿಡಮರ, ಬೆಳೆಗಳನ್ನು ಬೆಳೆಸಿದ್ದೇವೆ. ಇವೆಲ್ಲಾ ಅಭಿವೃದ್ದಿ ಅಲ್ಲವಾ? ಅದಕ್ಕೂ ಮೀರಿ ಅವರ ಮಾತುಗಳಲ್ಲಿ, ನಾವು 15-16 ದೇಶಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅವರಿಗೆ ಭೂಮಿ-ನೀರು ಕೊಡಬೇಕು, ಜಾಗತಿಕ ಹೂಡಿಕೆದಾರರ ಸಭೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿ ಸಣ್ಣ ರೈತರ ಭೂಮಿ ಹರಾಜು ನಡೆಯುತ್ತದೆ. ಬಿತ್ತನೆ ಬೀಜಕ್ಕೆ ಸಾಲಿನಲ್ಲಿ ನಿಲ್ಲುವ ರೈತರು, ಕಳಪೆ ಬೀಜ ಕೊಟ್ಟಿದ್ದಕ್ಕೆ ಹೋರಾಟ ಮಾಡಬೇಕು. ಖರೀದಿ ಕೇಂದ್ರಕ್ಕೆ, ಬೆಂಬಲ ಬೆಲೆಗೆ ಹೋರಾಟ ಮಾಡಬೇಕು. ಇದರ ಜೊತೆಗೆ ಭೂ ಸ್ವಾಧೀನ ಮಾಡುತ್ತಿದ್ದಾರೆ. ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ಇದ್ದಾರೆ. ತಾವು ಎಷ್ಟೇ ಜನಪರ ಎಂದು ಹೇಳಿಕೊಂಡರೂ ಸಾಕಷ್ಟು ಜನವಿರೋಧಿಯಾಗಿದ್ದಾರೆ. ಆರ್ಥಿಕ ನೀತಿ ಎಲ್ಲ ಪಕ್ಷಗಳಲ್ಲೂ ಒಂದೇ, ಎಲ್ಲಾ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿವೆ. ದುಡಿಯುವ ಜನಕ್ಕೆ ನ್ಯಾಯ ಕೊಡುವ ಕೆಲಸವನ್ನು ಯಾವ ಸರ್ಕಾರವೂ ಮಾಡುತ್ತಿಲ್ಲ. ಏಕೆಂದರೆ, ಚುನಾವಣೆ ವ್ಯಾಪಾರ ಆಗಿದ್ದು, ಹೂಡಿದ ಬಂಡವಾಳವನ್ನು ವಾಪಸ್ ತೆಗೆಯುತ್ತಾರೆ. ಆಗ ಅವರು ಸಂಘಟಿತರಲ್ಲದ ಜನರ ಭೂಮಿಯನ್ನು ಹರಾಜು ಹಾಕುತ್ತಾರೆ. ಇದು ಕೇವಲ 13 ಹಳ್ಳಿಗಳ ಹೋರಾಟ ಅಲ್ಲ. ಇಡೀ ಅಭಿವೃದ್ಧಿ ಮಾದರಿಯನ್ನು ಪ್ರಶ್ನೆ ಮಾಡುವ ಹೋರಾಟ. ಈ ಹೋರಾಟದಲ್ಲಿ ಜಯ ಕಾಣಲೇಬೇಕು ಎಂದು ಹೇಳಿದರು.

ಜಸ್ಟೀಸ್ ಗೋಪಾಲಗೌಡ ಅವರು ಮಾತನಾಡಿ, 140 ಕೋಟಿ ಜನ ಸಂಖ್ಯೆಯಲ್ಲಿ ಶೇ.50ರಷ್ಟ ಮಹಿಳೆಯರಿದ್ದಾರೆ. ಈ ಹೋರಾಟ ಗೆಲ್ಲಲೇಬೇಕಾದರೆ, ಸರ್ಕಾರದ ಗಮನ ಸೆಳೆಯಬೇಕಾದರೆ ಮಹಿಳೆಯರು ಮುಂದಾಳತ್ವ ವಹಿಸಬೇಕು ಎಂದು ಐವತ್ತನೇ ದಿನ ಹೇಳಿದ್ದೆ. ಅದು ಇಂದು ಋಜುವಾತಾಗಿದೆ. ಸರ್ಕಾರ ಪತನವಾಗಬೇಕಾದರೆ ಮಹಿಳೆಯರ ನಾಯಕತ್ವ ಬಹಳ ಮುಖ್ಯ. ನಾನೂ ಕೃಷಿ ಮಾಡುತ್ತಿದ್ದೇನೆ. ನಾನೂ ರೈತನ ಮಗ. ಭೂಮಿ ನಮ್ಮ ತಾಯಿ; ತಾಯಿಯನ್ನೇ ಕಬಳಿಸಲು ಹೊರಟಿರುವ ಸರ್ಕಾರಗಳು ಉಳಿಯುವುದಿಲ್ಲ. ಒಂದು ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಪಶ್ಚಿಮ ಬಂಗಾಳದ ಎಡಪಕ್ಷ ಸರ್ಕಾರ ಸ್ವಾಧೀನ ಮಾಡಿ ಟಾಟಾ ಕಂಪನಿಗೆ ಸಣ್ಣ ಕಾರು ತಯಾರಿ ಮಾಡುವುದಕ್ಕೆ ಕೊಡುತ್ತದೆ. ಎಡಪಕ್ಷ ರೈತಪರ, ಕಾರ್ಮಿಕರ ಪರ ಎಂದು ಹೇಳುತ್ತದೆ. ಮಮತಾ ಬ್ಯಾನರ್ಜಿ ಆ ಹೋರಾಟದಲ್ಲಿ ಭಾಗಿಯಾಗಿ 32 ವರ್ಷಗಳ ಎಡಪಕ್ಷ ಸರ್ಕಾರವನ್ನು ದಮನ ಮಾಡಿದರು. ಇದನ್ನು ಈ ಸರ್ಕಾರ ಜ್ಞಾಪಕ ಮಾಡಿಕೊಳ್ಳಬೇಕು ಎಂದು ನೆನಪಿಸಿದರು.

ಸರ್ಕಾರ ಹಾಗೂ ಸಚಿವರು ರೈತರ ಪರವಾಗಿದ್ದೇವೆ ಎಂದು ಹೇಳುತ್ತಾರೆ. ಹಾಗಾಗಿದ್ದರೆ, ಇಷ್ಟೊತ್ತಿಗೆ ಹೋರಾಟ ಮುಗಿಯಬೇಕಿತ್ತಲ್ಲವಾ? ನೋಟಿಫಿಕೇಷನ್ ವಾಪಸ್ ಪಡೆಯಬೇಕಿತ್ತಲ್ಲವಾ? ಇಂಥ ಮಾತುಗಳನ್ನು ನಂಬುವುದು ಕಷ್ಟ. ಸರ್ಕಾರಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸರ್ಕಾರ ಜನರಿಂದ, ಜನರಿಗಾಗಿ ಜನರಿಗಾಗಿಯೇ ಇರಬೇಕು. ಇದು ಪ್ರಜಾಪ್ರಭುತ್ಬ; ಇದು ಸಂಸದೀಯ ಪ್ರಜಾಪ್ರಭುತ್ವ. ಜನಪರ ನೀತಿಗಳು ಇಲ್ಲದಿದ್ದರೆ ಸರ್ಕಾರ ಅಧಃಪತನವಾಗುತ್ತದೆ. ಜನ ಎಂದರೆ ರೈತರು, ಕೃಷಿ ಕಾರ್ಮಿಕರು, ಕಾರ್ಮಿಕರು; ಜನರೆಂದರೆ ಇವರೆ. ಜನರು ಮತ ಕೊಟ್ಟಿದ್ದರಿಂದ ಕಾಂಗ್ರೆಸ್ ಸರ್ಕಾರ ಬಂದಿದೆ. ಜನರ ಸಮಸ್ಯೆಗಳುಗೆ ಸ್ಪಂದಿಸದಿದ್ದರೆ ಅದು ಜವಾಬ್ದಾರಿಯುತ ಸರ್ಕಾರ ಆಗಿರುವುದಿಲ್ಲ. ಅಂಥ ಸರ್ಕಾರ ನಮಗೆ ಬೇಕಿಲ್ಲ. ಬಂಡವಾಳಶಾಹಿಗಳನ್ನು ಕರೆತಂದು ಕೈಗಾರಿಕೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಕೃಷಿ ಕೂಡ ಕೈಗಾರಿಕೆ ಎಂಬುವುದನ್ನು ಮರೆಯಬಾರದು ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಕೃಷಿಕರಿಗೂ ಕೂಡ ಮೂಲಭೂತ ಹಕ್ಕಿದೆ. ಸಂವಿಧಾನದ 19 (ಜಿ) ನಲ್ಲಿ ಕೃಷಿ ಕೂಡ ಮೂಲಭೂತ ಹಕ್ಕು ಎಂದು ಹೇಳುತ್ತದೆ. ಕೃಷಿಯೇ ಕೈಗಾರಿಕೆ ಆಗಿರುವಾಗ, ನಮಗೆ ಬೇರೆ ಕೈಗಾರಿಕೆ ಯಾಕೆ ಬೇಕು? ಎಲ್ಲ ಭೂಮಿ ಕೈಗಾರಿಕೆಗೆ ಕೊಟ್ಟರೆ ದ್ರಾಕ್ಷಿ, ರೇಷ್ಮೆ ಹಾಗೂ ಹಾಲು ಉತ್ಪಾದೆ ಎಲ್ಲಿ ಮಾಡುತ್ತೀರಿ? ಇದಕ್ಕೆ ಸರ್ಕಾರದ ಬಳಿ ಉತ್ತರ ಇದೆಯಾ? ಜನರನ್ನು ಮೋಸ ಮಾಡುವ ಹುನ್ನಾರ ಮಾಡಬಾರದು. ಸರ್ಕಾರ ನಡೆಸುವುದು ಕಾರ್ಯದರ್ಶಿಯಾ ಅಥವಾ ಮುಖ್ಯಮಂತ್ರಿಗಳಾ? ಜನರಿಗೆ ಉತ್ತರ ಕೊಡುವುದು ಯಾರು? ಅಡ್ವೋಕೇಟ್ ಜನರಲ್ ಕೆಲಸವೆಂದರೆ ನಿಮ್ಮ ಕಾನೂನು ಕಟ್ಟಳೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸುವುದಷ್ಟೇ, ಕಾನೂನಿನ ಸಲಹೆ ನೀಡುವುದು ಅವರ ಕೆಲಸ ಅಲ್ಲವೇ ಅಲ್ಲ. ದಾರಿ ತಪ್ಪಿಸುವ ಕೆಲಸವನ್ನು ನಿಲ್ಲಿಸಲೇಬೇಕು. ನಿಮ್ಮ ಮಾತುಗಳನ್ನೆಲ್ಲಾ ನಾವು ಒಪ್ಪುತ್ತೇವೆ ಎಂದುಕೊಳ್ಳುವು ನಿಮ್ಮ ಮೂರ್ಖತನ ಎಂದು ಹೇಳಿದರು.

ಪೊಲೀಸರ ದಬ್ಬಾಳಿಕೆಗಳಿಂದ ಹೋರಾಟ ದಮನ ಮಾಡುತ್ತೇವೆ ಎಂದುಕೊಂಡರೆ ಯಾವುದೇ ಸರ್ಕಾರವನ್ನು ಮುಂದುವರಿಸುವುದಕ್ಕೆ ಜನರು ಬಿಡುವುದಿಲ್ಲ. ನಮಗೆ ನಾವೇ ರಕ್ಷಣೆ, ನಮಗೆ ಪೊಲೀಸರ ರಕ್ಷಣೆ ಬೇಕಾಗಿಲ್ಲ ಧರಣಿ ಕೂತಾಗ, ಹೋರಾಟ ಮಾಡುವಾಗ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ನಮ್ಮ ರೈತರ ಮೇಲೆ ನಡೆಸಿದ ದಬ್ಬಾಳಿಕೆ ನಮಗೆ ಗೊತ್ತಿದೆ. ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಲಾಠಿ ಚಾರ್ಜ್ ಮಾಡಿದರೆ ನಿಮ್ಮ ಮೇಲೆ ಕೇಸ್ ದಾಖಲಿಸಬೇಕಾಗುತ್ತದೆ. ನಾವು ಹಾಗೂ ನ್ಯಾಯಾಲಯಗಳು ಇನ್ನೂ ಸತ್ತಿಲ್ಲ. ನೂರಾರು ವಕೀಲರು ಉಚಿತವಾಗಿ ಕೆಲಸ ಮಾಡಲು ತಯಾರಿದ್ದಾರೆ. ಪ್ರಧಾನಿ ಹಾಗೂ ಮುಖ್ಯಮಂತ್ರಿ ಅಧಿಕಾರ ವ್ಯಾಪ್ತಿ ಮೀರಿದರೆ ನ್ಯಾಯಾಲಯದ ಕಟಕೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೃಷಿ ರೈತರ ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳುತ್ತದೆ. ಮನುಷ್ಯರು ಸಾಯುವುದಕ್ಕೆ ಅವಕಾಶ ಇಲ್ಲ ಎಂದು ಎನ್ನುತ್ತದೆ. ಜನರು ಬದುಕುವುದು ಹೇಗೆ? ನೀರು ಗಾಳಿ ಕುಡಿದು ಬದುಕಲು ಸಾಧ್ಯವಾ? ಅವರಿಗೆ ಉದ್ಯೋಗ ಬೇಕಾಗುತ್ತದೆ. ಅದನ್ನು ಸರ್ಕಾರ ಕೊಟ್ಟಿದೆಯಾ? ಬೆಳೆಗೆ ಸೂಕ್ತ ಬೆಂಬಲ ಬೆಲೆ ಕೇಳಿದರೆ ಕೊಡಲು ಸಾಧ್ಯವಿಲ್ಲ; ಹಾಲಿನ ಬೆಲೆ ಹೆಚ್ಚಳ ಮಾಡಿದರೆ ಕೇಳುವ ಜನರು ಟೂತ್‌ಪೇಸ್ಟ್‌, ಲಿಪ್‌ಸ್ಟಿಕ್‌ ಬೆಲೆ ಹೆಚ್ಚಳ ಮಾಡಿದಾಗ ಕೇಳುವುದಿಲ್ಲ. ಭೂಮಿ ಕೊಡುವುದಾಗಿ ಬೇರೆ ದೇಶದಲ್ಲಿ ಒಪ್ಪಂದ ಮಾಡಿಕೊಳ್ಳಿ ಎಂದು ನಿಮಗೆ (ಎಂ.ಬಿ ಪಾಟೀಲ್) ಹೇಳಿದವರು ಯಾರು? ನಿಮ್ಮ ಕೈಗಾರಿಕಾ ನೀತಿಗಳು ಏನು? ಅದನ್ನು ಜನರಿಗೆ ತೋರಿಸಿ ಎಂದರು.

ಕೃಷಿಯನ್ನು ನಾಶ ಮಾಡಿ ಕೈಗಾರಿಕೆ ಮಾಡುವುದೆಂದರೆ ಏನು? ಹೊಟ್ಟೆಗೆ ಹಿಟ್ಟು ಇಲ್ಲದಾಗ, ನಿಮ್ಮ ಮಲ್ಲಿಗೆ ಯಾರಿಗೆ ಬೇಕು? ಹೊಟ್ಟೆಗೆ ಹಿಟ್ಟು ಕೊಡುವವರು ನಾವು. ಹಿಂದೆ ಸ್ವಾಧೀನ ತೆಗೆದುಕೊಂಡ ಭೂಮಿಯಲ್ಲಿ, ಎಕ್ಸೈಡ್ ಬ್ಯಾಟರಿ ಕಂಪನಿಗೆ 88 ಎಕರೆ ಕೊಟ್ಟಿದ್ದಾರೆ. ಅಷ್ಟೊಂದು ಜಮೀನು ಯಾಕೆ ಅವರಿಗೆ? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿಮ್ಮ ಸ್ಥಿತಿ ಏನು ಎಂಬುವುದನ್ನು ಅವರನ್ನು ಕೇಳಬೇಕು. ಪ್ರಾಜೆಕ್ಟ್ ರಿಪೋರ್ಟ್ ಪಡೆದು ಪರಿಶೀಲಿಸಬೇಕು. ಅದಕ್ಕಾಗಿ ಒಂದು ಸಂಸ್ಥೆಯೇ ಇದೆ; ಮಂತ್ರಿಯೇ ಬೇಕಾದ ಹಾಗೆ ಭೂಮಿ ಕೊಡುವ ಹಾಗಿಲ್ಲ. ಈ ಹಿಂದೆ ವಶಪಡಿಸಿಕೊಂಡಿರುವ ಎರಡು ಸಾವಿರ ಎಕರೆಯನ್ನು ಯಾರಿಗೆ ಕೊಟ್ಟಿದ್ದೇವೆ ಎಂದು ಪಾರದರ್ಶಕವಾಗಿ ಜನರಿಗೆ ತಿಳಿಸಬೇಕಾಗಿತ್ತು. ಈ ಹಿಂದೆ ಯಾರೂ ಕೇಳಿರಲಿಲ್ಲ; ಆದರೆ, ಈಗ ನಾವು ಕೇಳುತ್ತಿದ್ದೇವೆ, ನೀವು ಕೊಡಬೇಕು. ನೋಟಿಫಿಕೇಷನ್ ಒಂದು ಕಾಗದವಷ್ಟೇ. ನಮ್ಮನ್ನು ಕೇಳಿ ನೀವು ಅದನ್ನು ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಿಎಂ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ : ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...