ಎಲ್ಗಾರ್ ಪರಿಷತ್ ಪ್ರಕರಣದಲ್ಲಿ 2018 ರಿಂದ ಜೈಲಿನಲ್ಲಿರುವ ಇರುವ 80 ವರ್ಷದ ತೆಲುಗು ಕವಿ-ಸಾಹಿತಿ ಮತ್ತು ಹೋರಾಟಗಾರ ವರವರರಾವ್ ಅವರನ್ನು, ಅನಾರೋಗ್ಯದ ಕಾರಣದಿಂದ ಪರೀಕ್ಷೆಗಾಗಿ ಸೋಮವಾರ ಸರ್ಕಾರಿ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಜುಲೈ 11 ರಂದು ಫೋನ್ ಮೂಲಕ ವರವರ ರಾವ್‌ರೊಂದಿಗೆ ಮಾತನಾಡಿದ ಸಮಯದಲ್ಲಿ, ಅವರು ಸ್ಪಷ್ಟವಾಗಿ ಮಾತನಾಡಿಲ್ಲ. ಅವರ ಆರೋಗ್ಯದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. 70 ವರ್ಷಗಳ ಹಿಂದೆ ಮತ್ತು 40 ವರ್ಷಗಳ ಹಿಂದೆಯೇ ನಿಧನ ಹೊಂದಿರುವ ತಮ್ಮ ತಂದೆ ಮತ್ತು ತಾಯಿಯ ಅಂತ್ಯಕ್ರಿಯೆಯ ಬಗ್ಗೆ ಒಂದು ರೀತಿಯ ಭ್ರಮನಿರಸನ ಮತ್ತು ಭ್ರಮೆಯ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಮಾತನಾಡಲು ಪದಗಳಿಗಾಗಿ ಅವರು ಹುಡುಕಾಡುತ್ತಿದ್ದರು. ಇದೆಲ್ಲವೂ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿರುವುದನ್ನು ತೋರಿಸುತ್ತದೆ ಎಂದು ಅವರ ಪತ್ನಿ ಭಾನುವಾರವಷ್ಟೇ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಇದನ್ನೂ ಓದಿ: ಜೈಲಿನಲ್ಲಿ ಕವಿ ವರವರ ರಾವ್‌ರನ್ನು ಕೊಲ್ಲಬೇಡಿ! ಕುಟುಂಬ ಸದಸ್ಯರ ಮನವಿ
ಜೈಲಿನಲ್ಲಿ ಕೋವಿಡ್ -19 ಗೆ ಒಳಗಾಗುವ ಸಾಧ್ಯತೆಯನ್ನು ಉಲ್ಲೇಖಿಸಿ ರಾವ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಜೂನ್ 27 ರಂದು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಈ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಅವರು ಮನವಿ ಸಲ್ಲಿಸಿದ್ದರು. ಕಳೆದ ಶುಕ್ರವಾರ, ನ್ಯಾಯಾಲಯವು ಎನ್ಐಎ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಮುಂದಿನ ವಿಚಾರಣೆಯ ದಿನಾಂಕ ಜುಲೈ 17 ರೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ನೋಟಿಸ್ ನೀಡಿದೆ.
ಜೆಜೆ ಆಸ್ಪತ್ರೆಯ ಡೀನ್ ಡಾ.ರಂಜಿತ್ ಮಾಂಕೇಶ್ವರ ಮಾತನಾಡಿ “ನಾವು ಕೆಲವು ಪರೀಕ್ಷೆಗಳನ್ನು ನಡೆಸಿದ ನಂತರ ಅವರನ್ನು ಆಸ್ಪತ್ರೆಗೆ ಸೇರಿಸಬೇಕೆ ಎಂದು ನಿರ್ಧರಿಸುತ್ತೇವೆ” ಎಂದು ಹೇಳಿದ್ದಾರೆ.
ಮುಂಬಯಿಯ ತಾಜೋಲಾ ಕೇಂದ್ರ ಕಾರಾಗೃಹದಿಂದ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ರಾವ್ ಅವರ ಕುಟುಂಬವು ಒತ್ತಾಯಿಸಿತ್ತು.
ಸೋಮವಾರ ರಾವ್ ಪರ ವಕೀಲ ಆರ್ ಸತ್ಯನಾರಾಯಣನ್, ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ಎನ್‌ಐಎ ನ್ಯಾಯಾಲಯದ ವಿರುದ್ಧದ ಮೇಲ್ಮನವಿಯನ್ನು ಜುಲೈ 17ರ ಬದಲು ಮಂಗಳವಾರ ವಿಚಾರಣೆಗೆ ಒಳಪಡಿಸಬೇಕು ಎಂದು ಹೈಕೋರ್ಟ್‌ನ ಮುಂದೆ ತುರ್ತು ಪ್ರೆಸಿಪಿಯನ್ನು ಸಲ್ಲಿಸಿದ್ದಾರೆ. ಜೆಜೆ ಆಸ್ಪತ್ರೆಯ ಸೂಚನೆಯಂತೆ ವೈದ್ಯಕೀಯ ತಪಾಸಣೆ ನಡೆಸದಿರುವುದಕ್ಕೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್: ತಕ್ಷಣದ ವೈದ್ಯಕೀಯ ತಪಾಸಣೆ ಕೋರಿ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋದ ವರವರ ರಾವ್


