Homeಚಳವಳಿಭೀಮಾ ಕೋರೆಗಾಂವ್: ಗೌತಮ್ ನವಲಖಾ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌ಐಎ ವಿಶೇಷ ನ್ಯಾಯಾಲಯ

ಭೀಮಾ ಕೋರೆಗಾಂವ್: ಗೌತಮ್ ನವಲಖಾ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌ಐಎ ವಿಶೇಷ ನ್ಯಾಯಾಲಯ

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಆರೋಪ ಹೊರಿಸಲಾಗಿರುವ ಈ ಪ್ರಕರಣದ ಎಲ್ಲ ಆರೋಪಿಗಳಿಗೆ ಮುಂಬೈನ ವಿಶೇಷ ನ್ಯಾಯಾಲಯ ಪದೇ ಪದೇ ಜಾಮೀನು ನಿರಾಕರಿಸಿದೆ ಎಂಬುವುದು ಗಮನಾರ್ಹವಾಗಿದೆ.

- Advertisement -
- Advertisement -

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಗೌತಮ್ ನವಲಖಾ ಅವರು 90 ದಿನಗಳ ಕಾಲ ಬಂಧನದಲ್ಲಿದ್ದು, ಕ್ರಿಮಿನಲ್ ಪ್ರೊಸೀಜರ್ (ಸಿಆರ್‌ಪಿಸಿ) ಯ ಸೆಕ್ಷನ್ 167 ರ ಅಡಿಯಲ್ಲಿ ಡೀಫಾಲ್ಟ್ ಜಾಮೀನು ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.

ಪ್ರಸ್ತುತ ನವೀ ಮುಂಬಯಿಯ ತಾಲೋಜ ಜೈಲಿನಲ್ಲಿರುವ ನಾಗರಿಕ ಹಕ್ಕುಗಳ ಹೋರಾಟಗಾರ ಏಪ್ರಿಲ್ 14 ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾಗಿದ್ದರು. ಅವರನ್ನು ಈ ಹಿಂದೆ 2018ರ ಆಗಸ್ಟ್ 29 ಮತ್ತು ಅಕ್ಟೋಬರ್ 1ರ ನಡುವೆ ಗೃಹಬಂಧನದಲ್ಲಿರಿಸಲಾಗಿತ್ತು.

ನವಲಖಾ ಅವರ ಜಾಮೀನು ಅರ್ಜಿ ಪರ ವಾದಿಸಿದ ವಕೀಲರು, “ನ್ಯಾಯಾಲಯವು ಗೃಹಬಂಧನವನ್ನು ತನಿಖಾ ಸಂಸ್ಥೆಗಳ ವಶದಲ್ಲಿರುವ ಅವಧಿಯೆಂದು ಪರಿಗಣಿಸಬೇಕು. ತನಿಖಾ ಸಂಸ್ಥೆ 90 ದಿನಗಳ ನಿಗದಿತ ಅವಧಿಯೊಳಗೆ ತನ್ನ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಹಾಗಾಗಿ ಅವರಿಗೆ ಜಾಮೀನು ನೀಡಬೇಕೆಂದು” ಒತ್ತಾಯಿಸಿದ್ದಾರೆ.

ಎನ್‌ಐಎ ಪರವಾಗಿ ಹಾಜರಾಗಿದ್ದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಡೀಫಾಲ್ಟ್ ಜಾಮೀನು ಕೋರಿಕೆಯು ಸಮರ್ಥನೀಯವಲ್ಲ. ಸಿಆರ್‌ಪಿಸಿಯ ಸೆಕ್ಷನ್ 167ರ ಅರ್ಥದಲ್ಲಿ ಗೃಹಬಂಧನವು ತನಿಖಾ ಕಸ್ಟಡಿಯಾಗುವುದಿಲ್ಲ ಎಂದು ವಾದಿಸಿದ್ದಾರೆ.

ಬಂಧನ ಸಮಯದಲ್ಲಿ ಗೃಹಬಂಧನ ಅವಧಿಯನ್ನು ಸೇರಿಸಬಹುದು ಎಂಬ ವಾದವನ್ನು ವಿಶೇಷ ನ್ಯಾಯಾಧೀಶ ದಿನೇಶ್ ಕೊಥಾಲಿಕರ್ ತಿರಸ್ಕರಿಸಿದರು. ಗೃಹಬಂಧನದ ವೇಳೆ ತನಿಖೆಗಾಗಿ ನವಲಖಾ ಎಂದಿಗೂ ಪೊಲೀಸರ ವಶದಲ್ಲಿರಲಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಗೌತಮ್ ನವಲಖಾ ಹಾಗೂ ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತರಾದ ಡಾ. ಆನಂದ್ ತೇಲ್ತುಂಬ್ಡೆ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ 90 ರಿಂದ 180 ದಿನಗಳವರೆಗೆ ವಿಸ್ತರಿಸುವ ಕೋರಿ ಎನ್‌ಐಎ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಅಂಗೀಕರಿಸಿದೆ.

ಈ ವರ್ಷದ ಜನವರಿಯಲ್ಲಿ ಪುಣೆ ಪೊಲೀಸರಿಂದ ಎನ್‌ಐಎಗೆ ವರ್ಗಾಯಿಸಲ್ಪಟ್ಟ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಅವರೊಂದಿಗೆ ಇತರ 10 ಮಂದಿಯನ್ನು ಬಂಧಿಸಲಾಗಿದೆ.

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಆರೋಪ ಹೊರಿಸಲಾಗಿರುವ ಈ ಪ್ರಕರಣದ ಎಲ್ಲ ಆರೋಪಿಗಳಿಗೆ ಮುಂಬೈನ ವಿಶೇಷ ನ್ಯಾಯಾಲಯ ಪದೇ ಪದೇ ಜಾಮೀನು ನಿರಾಕರಿಸಿದೆ ಎಂಬುವುದು ಗಮನಾರ್ಹವಾಗಿದೆ.

ಇತ್ತೀಚೆಗೆ ಜೂನ್ 26 ರಂದು ತಾಲೂಜಾ ಜೈಲಿನಲ್ಲಿರುವ 80 ವರ್ಷದ ತೆಲುಗು ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು. ಕವಿಯ ಅನಾರೋಗ್ಯದ ಬಗ್ಗೆ ವ್ಯಾಪಕ ವರದಿಗಳು ಹೊರಬಂದು, ಅವರ ಕುಟುಂಬ ಕೂಡಾ ಪತ್ರಿಕಾಗೋಷ್ಟಿ ನಡೆಸಿ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ಡಿಸೆಂಬರ್ 31, 2017 ರಂದು ಪುಣೆಯ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಭಾಷಣಗಳಿಂದಾಗಿ ಮರುದಿನ ಭೀಮಾ ಕೊರೆಗಾಂವ್  ಸ್ಮಾರಕದ ಬಳಿ ಹಿಂಸಾಚಾರ ಉಂಟಾಯಿತು, ಇದು ಕ್ರಿಮಿನಲ್ ಪಿತೂರಿ ಎಂಬ ಆರೋಪ ಇವರ ಮೇಲಿದೆ.


ಓದಿ: ತಕ್ಷಣದ ವೈದ್ಯಕೀಯ ತಪಾಸಣೆ ಕೋರಿ ಬಾಂಬೆ ಹೈಕೋರ್ಟ್‌‌ಗೆ ಮೊರೆ ಹೋದ ವರವರ ರಾವ್; ಭೀಮಾ ಕೋರೆಗಾಂವ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....