ಮೂಲ: ಔಟ್‍ಲುಕ್ ಇಂಡಿಯಾ
ಕನ್ನಡಕ್ಕೆ: ಬಿ.ಸಿ.ಬಸವರಾಜು
ಅಭಿವೃದ್ದಿಯ ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಸಾಧಾರಣಕ್ಕಿಂತ ಕಡಿಮೆಯಿದೆ (below average)ಯೆಂಬ ಅಭಿಪ್ರಾಯವನ್ನು ದೇಶದ ಮತದಾರರು ಹೊಂದಿದ್ದಾರೆಂಬ ಒಂದು ಸರ್ವೇ ಹೊರಬಿದ್ದಿದೆ. ಸರ್ವೇ ಮಾಡಿದವರು ಯಾರು ಗೊತ್ತೇ? ದೇಶಾದ್ಯಂತ ನಿಷ್ಪಕ್ಷಪಾತವಾಗಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಆಸ್ತಿ ವಿವರ, ಕ್ರಿಮಿನಲ್ ಪ್ರಕರಣಗಳು ಇತ್ಯಾದಿಗಳನ್ನು ಜನರಿಗೆ ತಿಳಿಸುವ ಮೊಟ್ಟ ಮೊದಲ ಕೆಲಸ ಮಾಡಿದ ಸಂಸ್ಥೆ- ಎಡಿಆರ್. ಈ ಸಂಸ್ಥೆಯು ನಂತರ ಚುನಾವಣೆಗಳಲ್ಲಿ ಹಲವು ಸುಧಾರಣೆಗಳನ್ನು ತರಲು ವ್ಯವಸ್ಥಿತವಾಗಿ ಕೆಲಸ ನಡೆಸುತ್ತಿದೆ. ಮತದಾರರ ಸರ್ವೆ ಮಾಡುವಾಗಲೂ ಎಡಿಆರ್ ತನ್ನ ಹಿರಿಮೆ ಮೆರೆದಿದೆ. ದೇಶದಲ್ಲಿ ಮಾತ್ರವಲ್ಲದೇ, ಪ್ರಪಂಚದಲ್ಲಿ ಇಷ್ಟೊಂದು ದೊಡ್ಡ ಸರ್ವೇ ನಡೆದಿಲ್ಲವೆಂದು ಹೇಳಲಾಗುತ್ತಿದೆ. ದೇಶದ 534 ಕ್ಷೇತ್ರಗಳಲ್ಲಿ ಎರಡೂ ಮುಕ್ಕಾಲು ಲಕ್ಷ ಜನ ಮತದಾರರನ್ನು ಈ ಸರ್ವೇಯಲ್ಲಿ ಮಾತಾಡಿಸಲಾಗಿದೆ!! ಅದೇನು ಹೇಳುತ್ತದೆ ಎಂಬುದನ್ನು ನೋಡೋಣ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ನವರು ದೇಶದಾದ್ಯಂತ ನಡೆಸಿದ ಸರ್ವೆಯಲ್ಲಿ, ಮತದಾರರು ಪ್ರಮುಖ ಹತ್ತು (top priority) ಆದ್ಯತಾ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಸಾಧಾರಣಕ್ಕಿಂತ ಕಡಿಮೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗ ಸೃಷ್ಟಿ ಮಾಡುವುದು ಕೇಂದ್ರ ಸರ್ಕಾರದ ಅತ್ಯಂತ ಆದ್ಯತೆಯ ಕೆಲಸವಾಗಿರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ಬಹುತೇಕ ಮತದಾರರು ಉದ್ಯೋಗ ಸೃಷ್ಟಿ ಮಾಡುವಲ್ಲಿ ಸರ್ಕಾರದ ಸಾಧನೆ ಕಳಪೆಯಾಗಿದೆಯೆಂದು ತಿಳಿಸಿದ್ದಾರೆ.
ಉದ್ಯೋಗ ಸೃಷ್ಟಿಯ ನಂತರದ ಆದ್ಯತಾ ಕ್ಷೇತ್ರಗಳೆಂದು “ಉತ್ತಮ ಆರೋಗ್ಯ ಸೌಲಭ್ಯ” ಮತ್ತು “ಶುದ್ದ ಕುಡಿಯುವ ನೀರಿನ ಲಭ್ಯತೆ” ಗಳನ್ನು ಗುರುತಿಸಿರುವ ಮತದಾರರು ಈ ಕ್ಷೇತ್ರಗಳಲ್ಲೂ ಕೇಂದ್ರ ಸರ್ಕಾರದ ಸಾಧನೆ ಸಾಧಾರಣಕ್ಕಿಂತ ಕೆಳಿಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಭದ್ರ ಉದ್ಯೋಗ ಸೃಷ್ಟಿ ಅತಿಮುಖ್ಯ ಅಗತ್ಯ ಎಂದು ಗುರುತಿಸಿರುವ ಮತದಾರರು ಈ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಸಾಧನೆ ಅತ್ಯಂತ ಕೆಟ್ಟದಾಗಿದೆಯೆಂದು ತಿಳಿಸಿದ್ದು ಈ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರಕ್ಕೆ 5ರ ಸ್ಕೇಲಿನಲ್ಲಿ ಕೇವಲ 2.15 ಅಂಕ ನೀಡಿದ್ದಾರೆ.
ಎಡಿಆರ್ ನವರು ಅಕ್ಟೋಬರ್ 2018 ಮತ್ತು ಡಿಸೆಂಬರ್ 2018 ರ ಮಧ್ಯೆ ದೇಶದ 534 ಲೋಕಸಭಾ ಕ್ಷೇತ್ರಗಳ 2,73,487 ಜನ ಮತದಾರರನ್ನು ಸಂದರ್ಶಿಸಿ ನಡೆಸಿದ ಸರ್ವೆಯಲ್ಲಿ ಈ ಮೇಲಿನ ಅಂಶಗಳು ಹೊರಬಿದ್ದಿವೆ.
ಮತದಾರರ ಪ್ರಕಾರ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರಬೇಕಾದ ಆದ್ಯತಾ ಕ್ಷೇತ್ರಗಳಾವುವು, ಅಂಥಾ ಆದ್ಯತೆಯ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆ ತೃಪ್ತಿದಾಯಕವಾಗಿದೆಯೆ ಮತ್ತು ಈ ಕ್ಷೇತ್ರಗಳಲ್ಲಿಯ ಸಾಧನೆ ಮತದಾನದ ಮೇಲೆ ಬೀರುವ ಪರಿಣಾಮವನ್ನು ತಿಳಿಯುವುದು ಈ ಸರ್ವೆಯ ಉದ್ದೇಶವಾಗಿತ್ತು.
ಈ ಸರ್ವೆಯ ಸಮಯದಲ್ಲಿ ಪ್ರತಿಕ್ರಿಯಿಸಿದ ಮತದಾರರಲ್ಲಿ ಶೇ 46.80 ಮಂದಿ ಉತ್ತಮ ಉದ್ಯೋಗ ಸೃಷ್ಟಿ ಅತಿ ಮುಖ್ಯ ಎಂದು ಪರಿಗಣಿಸಿದರೆ, ಶೇ 34.60 ಮಂದಿ ಉತ್ತಮ ಆರೋಗ್ಯ ಸೇವೆ ಮತ್ತು ಶೇ 30.50 ಮಂದಿ ಶುದ್ದ ಕುಡಿಯುವ ನೀರಿನ ಲಭ್ಯತೆ ಮುಖ್ಯವೆಂದು ಪರಿಗಣಿಸಿದ್ದಾರೆ.
ಒಟ್ಟಾರೆ ಈ ಮೇಲಿನ ಮೂರು ಸರ್ಕಾರದ ಅತ್ಯಂತ ಮುಖ್ಯ ಆದ್ಯತಾ ಕ್ಷೇತ್ರಗಳಾಗಿರಬೇಕೆಂಬುದು ಮತದಾರರ ಅಭಿಪ್ರಾಯವಾಗಿದೆ.
ಉಳಿದಂತೆ, ಶೇ 28.34 ಮಂದಿ ಉತ್ತಮ ರಸ್ತೆಗಳು, ಶೇ 27.35 ಮಂದಿ ಉತ್ತಮ ಸಾರ್ವಜನಿಕ ಸಾರಿಗೆ, ಶೇ 26.4 ಮಂದಿ ವ್ಯವಸಾಯಕ್ಕೆ ಉತ್ತಮ ನೀರಾವರಿ ಸೌಲಭ್ಯ, ಶೇ 25.62 ಮಂದಿ ಕೃಷಿ ಸಾಲದ ಸುಲಭ ಲಭ್ಯತೆ, ಶೇ 25.41 ಮಂದಿ ರೈತರಿಗೆ ಸರಿಯಾದ ಬೆಂಬಲ ಬೆಲೆ ಮತ್ತು ಶೇ 25.06 ಮಂದಿ ಬೀಜ ಹಾಗೂ ರಸಗೊಬ್ಬರಕ್ಕೆ ಸರಿಯಾದ ಸಬ್ಸಿಡಿ ಇವುಗಳು ತಮ್ಮ ಪ್ರಕಾರ ಆದ್ಯತೆಯ ಕ್ಷೇತ್ರಗಳೆಂದು ತಿಳಿಸಿದ್ದಾರೆ.
ಮೇಲಿನವುಗಳೂ ಸೇರಿದಂತೆ ಎಡಿಆರ್ ನವರು ಪಟ್ಟಿ ಮಾಡಿರುವ ಒಟ್ಟು ಮೂವತ್ತೊಂದು ಆದ್ಯತಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಕೂಡ ಕೇಂದ್ರ ಸರ್ಕಾರದ ಸಾಧನೆ ಸಮಾಧಾನಕರವಾಗಿಲ್ಲ ಎಂದು ಬಹುತೇಕ ಮತದಾರರ ಅಭಿಪ್ರಾಯವಾಗಿದೆ.
ಇದೇ ಸಂಸ್ಥೆಯು ಕಳೆದ ವರ್ಷ ನಡೆಸಿದ್ದ ಸರ್ವೆಯಲ್ಲಿ ಕೂಡ ಉತ್ತಮ ಉದ್ಯೋಗ ಸೃಷ್ಟಿ ಮತ್ತು ಉತ್ತಮ ಆರೋಗ್ಯ ಸೇವೆ ಪ್ರಮುಖ ಆದ್ಯತಾ ಕ್ಷೇತ್ರಗಳೆಂದು ಮತದಾರರು ಗುರುತಿಸಿದ್ದನ್ನು ಗಮನಿಸಬಹುದು.
ಈ ಸರ್ವೆಯು ಗಮನಿಸಿದ ಇನ್ನೊಂದು ಅಂಶವೆಂದರೆ, ಹಿಂದುಳಿದ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಛತ್ತೀಸ್‍ಗಡ, ಜಾಖರ್ಂಡ್, ರಾಜಸ್ಥಾನ ಮತ್ತು ಮದ್ಯಪ್ರದೇಶಗಳ ಮತದಾರರು ಉತ್ತಮ ಉದ್ಯೋಗ ಸೃಷ್ಟಿ ಅತಿಮುಖ್ಯವೆಂದು ಪರಿಗಣಿಸಿದರೆ, ಒರಿಸ್ಸಾ, ಕರ್ನಾಟಕ ಮತ್ತು ದಮನ್ ಅಂಡ್ ದಿಯುವಿನ ಮತದಾರರು ಕುಡಿಯುವ ನೀರು ಅತ್ಯಂತ ಮುಖ್ಯವೆಂದು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಾರೆಯಾಗಿ, ಮೋದಿಯವರು ಹೇಳಿದ ಅಚ್ಚೇದಿನ್ ಬಂದಿಲ್ಲವೆಂಬ ಮತದಾರರ ಅಭಿಪ್ರಾಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ಉದ್ಯೋಗ ಸೃಷ್ಟಿ ಮಾಡಿದ್ದೇನೆಂದು ಬಗ್ಗೆ ಕೇಂದ್ರ ಸರ್ಕಾರ ಹತ್ತು ಹಲವು ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದರೂ ವಾಸ್ತವದಲ್ಲಿ ಮತದಾರ ಮಾತ್ರ ನಿರುದ್ಯೋಗ ಸಮಸ್ಯೆ ಅತ್ಯಂತ ಗಂಭೀರವಾಗಿರುವುದೆಂದೂ ಮತ್ತು ಅದು ಮತದಾನದ ಮೇಲೆ ಪರಿಣಾಮ ಬೀರುತ್ತದೆಂದೂ ಸ್ಪಷ್ಟ ಸಂದೇಶ ಕೊಡುತ್ತಿದ್ದಾನೆ.
ಬಹುಶಃ ಈ ಕಾರಣಕ್ಕಾಗಿಯೇ ಮೋದಿ ಮತ್ತು ಕೇಂದ್ರಸರ್ಕಾರ ಅಭಿವೃದ್ದಿ ಆಧಾರಿತ ವಿಷಯಗಳನ್ನು ಬದಿಗೆ ಸರಿಸಿ ಜನರ ಗಮನವನ್ನು ಪಾಕಿಸ್ತಾನ, ಉಗ್ರರ ದಾಳಿಯಂಥ ವಿಷಯಗಳಿಗೆ ಸೀಮಿತಗೊಳಿಸಿ ಚುನಾವಣೆ ನಡೆಸುವ ಪ್ರಯತ್ನದಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.


