ಅತ್ಯಾಚಾರ ಪ್ರಕರಣಗಳನ್ನು ದೂರುದಾರರು ಮತ್ತು ಆರೋಪಿಗಳು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ.
ದೂರುದಾರರು ಮತ್ತು ಆರೋಪಿಗಳ ನಡುವಿನ ಒಪ್ಪಂದವು ಸಾರ್ವಜನಿಕ ನೀತಿಗೆ ವಿರುದ್ಧವಾದ ಕಾರಣ ಅನೂರ್ಜಿತವಾಗಿದೆ ಎಂದು ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.
ದೂರುದಾರರು ಮತ್ತು ಆರೋಪಿ ವಿಷಯವನ್ನು ತಮ್ಮೊಳಗೆ ಇತ್ಯರ್ಥಗೊಳಿಸಲು ಒಪ್ಪಿಕೊಂಡಿದ್ದಾರೆ ಎಂಬ ಕಾರಣಕ್ಕೆ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎ ಬಧರುದ್ದೀನ್ ಅವರ ಪೀಠ ತಿಳಿಸಿದೆ.
ತ್ರಿಶ್ಶೂರ್ ಜಿಲ್ಲೆಯ ಗ್ರಾಮ ಪಂಚಾಯತ್ ಒಂದರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆ, ಅದೇ ಗ್ರಾಮ ಪಂಚಾಯತ್‌ನ ಸಹಾಯಕ ಕಾರ್ಯದರ್ಶಿ ಅಬ್ದುಲ್ ಜಲೀಲ್ ಎಂಬಾತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ 2018ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
2016ರ ಮಾರ್ಚ್ 13ರಂದು ತುರ್ತು ಕೆಲಸ ಇದೆ ಎಂದು ಕಚೇರಿಗೆ ಕರೆಸಿಕೊಂಡ ಜಲೀಲ್, ತನ್ನ ಮೇಲೆ ಮೊದಲ ಬಾರಿ ಅತ್ಯಾಚಾರವೆಸಗಿದ್ದರು. ಆ ಬಳಿಕ ಆಗಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ದೂರಿದ್ದರು. ಆರಂಭದಲ್ಲಿ ಭಯ ಮತ್ತು ಹಿಂಜರಿಕೆಯಿಂದ ಮಹಿಳೆ ಸುಮ್ಮನಿದ್ದರು. ಬಳಿಕ ದೇಹದಲ್ಲಿ ನೋವಿನ ಕಾರಣ ವೈದ್ಯಕೀಯ ಸಹಾಯ ಪಡೆದಿದ್ದರು. ಜಲೀಲ್ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವರದಿಗಳು ಹೇಳಿವೆ.
ಮಹಿಳೆ ದೂರು ನೀಡಿದ ಬಳಿಕ ಜಲೀಲ್ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ತನ್ನಿಂದ ಹಣ ಪಡೆಯಲು ಮಹಿಳೆ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದ. ಬಳಿಕ ಮಹಿಳೆ ಮತ್ತು ತನ್ನ ನಡುವೆ ಒಪ್ಪಿತ ಲೈಂಗಿಕ ಸಂಪರ್ಕ ನಡೆದಿದ ಎಂದು ಎರಡು ಒಪ್ಪಂದ ಪಠ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ.
ಮಾರ್ಚ್ 2016ರಲ್ಲಿ ನಡೆದಿದ್ದ ಘಟನೆಯನ್ನು ಪರಸ್ಪರ ಸಮ್ಮತಿಯದ್ದು ಎಂದು ಹೇಳಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಒಪ್ಪಂದಗಳನ್ನು ಪರಿಶೀಲಿಸಿದ ಬಳಿಕ ಅವು ಅತ್ಯಾಚಾರದ ಗಂಭೀರ ಆರೋಪದ ವಿಚಾರಣೆಯನ್ನು ತಡೆಯುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಈ ಒಪ್ಪಂದಗಳು ಕಾನೂನುಬಾಹಿರವಾಗಿವೆ ಮತ್ತು ಕಾನೂನು ಕ್ರಮವನ್ನು ರದ್ದುಗೊಳಿಸಲು ಏಕೈಕ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ತಂದೆ-ಮಗನ ವಿರುದ್ಧ 2,144 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ


