ಗೌತಮ್ ಗಂಭೀರ್‍ರವರಿಗೆ ಶುಭಾಶಯಗಳು. ಪೂರ್ವ ದೆಹಲಿಯ ಜನತೆ ನಿಮ್ಮಲ್ಲಿ ವಿಶ್ವಾಸವಿಟ್ಟು ಆಯ್ಕೆಮಾಡಿದೆ. ಪೂರ್ವ ದೆಹಲಿಯ ಮತ್ತಷ್ಟು ಅಭಿವೃದ್ದಿಗೆ ಸಹಾಯ ಮತ್ತು ಸಹಯೋಗಕ್ಕಾಗಿ ನಾನು ಸದಾ ನಿಮ್ಮೊಂದಿಗಿರುತ್ತೇನೆ. ಆಲ್ ದಿ ಬೆಸ್ಟ್
ಹಾಗೆಯೇ ಪೂರ್ವ ದೆಹಲಿಯ ಜನತೆಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಅಕ್ಕರೆಯಿಂದ ತುಂಬಿಹೋಗಿದ್ದೇನೆ. ಹೆಚ್ಚು ಶಿಕ್ಷಣವಂತ, ಅಭಿವೃದ್ದಿಯ ಮತ್ತು ಸುರಕ್ಷತೆಯ ಪೂರ್ವ ದೆಹಲಿಗಾಗಿ ನಾನು ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಮತ್ತು ಸದಾ ನಿಮ್ಮೊಂದಿಗಿರುತ್ತೇನೆ. ನನ್ನ ಈ ಚುನಾವಣಾ ಪ್ರಚಾರಾಂದೋಲನಕ್ಕೆ ತಮ್ಮ ಹೃದಯ ಮತ್ತು ಆತ್ಮವನ್ನು ಮುಡಿಪಾಗಿಟ್ಟ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು. ನೀವೆಲ್ಲರೂ ಅದ್ಭುತ. ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಹಲವಾರು ಜನ ಒಟ್ಟು ಸೇರಿ ದೇಶದಲ್ಲಿ ಬದಲಾವಣೆ ತರಬಹುದೆಂಬ ಭರವಸೆಯನ್ನು ಇದು ನನಗೆ ನೀಡಿದೆ. ಕೊನೆಯದಾಗಿ ಕ್ರೌಡ್‍ಫಂಡಿಂಗ್ ಮೂಲಕ ಬೆಂಬಲಿಸಿದ ಸಾವಿರಾರು ಜನರಿಗೆ ಧನ್ಯವಾದಗಳು. ನಿಮ್ಮ ಬೆಂಬಲ ನನಗೆ ಕೇವಲ ಶಕ್ತಿಯನ್ನು ಮಾತ್ರವಲ್ಲದೆ, ಭಾರತದಲ್ಲಿ ಚುನಾವಣಾ ಖರ್ಚು ವೆಚ್ಚದ ಕುರಿತು ಪಾರದರ್ಶಕ, ಸ್ವಚ್ಛ ವ್ಯವಸ್ಥೆಯೊಂದನ್ನು ಸೃಷ್ಟಿಸಬಹುದೆಂಬ ದೊಡ್ಡ ಭರವಸೆಯನ್ನು ನೀಡಿದೆ.
ಇದು ಪೂರ್ವ ದೆಹಲಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲುಂಡ ಆಮ್ ಆದ್ಮಿ ಪಕ್ಷದ ಅತಿಶಿ ಮರ್ಲೀನಾರವರ ಫೇಸ್ ಬುಕ್ ಸ್ಟೇಟಸ್. ಕೇವಲ ಒಂದು ರೂ ಸಂಬಳ ಪಡೆದು ದೆಹಲಿ ಸರ್ಕಾರಿ ಶಾಲೆಗಳನ್ನು ಭಾರತ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಉತ್ತಮ ಶಾಲೆಗಳ ಮಟ್ಟಕ್ಕೆ ಏರಿಸಿದ ಕೀರ್ತಿ ಇವರದು. ಮರ್ಲೋನಾ ಎಂದರೆ ಮಾಕ್ರ್ಸ್ ಮತ್ತು ಲೆನಿನ್ ಎಂದರ್ಥ. ಎಡಪಂಥೀಯರಾದ ಇವರ ತಂದೆ ತಾಯಿ ಇಟ್ಟ ಹೆಸರು ಮಾಕ್ರ್ಸ್ ಮತ್ತು ಲೆನಿನ್ ಎರಡನ್ನೂ ಸೇರಿ ಮರ್ಲೀನಾ ಅಂತ. ದೆಹಲಿಯಲ್ಲಿ ಅತ್ಯುತ್ತಮ ಅಧಿಕಾರಿ ಎಂದು ಹೆಸರು ಪಡೆದು ಇಂದಿಗೂ ಕೆಲಸ ನಿರ್ವಹಿಸುತ್ತಿದ್ದಾರೆ. ಅತಿಶಿ ಗೆಲ್ಲಬೇಕೆಂದು ಭಾರತಾದ್ಯಂತ ಸಾವಿರಾರು ಜನ ಆಶಿಸಿದ್ದರು. ಆದರೆ ಅವರು ಕೊನೆಗೂ ಸೋತಿದ್ದಾರೆ.
ಇವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ, ಇವರನ್ನು ಕುರಿತು ಅತ್ಯಂತ ಕೆಟ್ಟದಾಗ ನಿಂದಿಸಿ ಕರಪತ್ರವೊಂದನ್ನು ಬಿಜೆಪಿಯವರು ಹಂಚಿದ್ದರು. ಆ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದ ಮರ್ಲೀನಾ, ಈಗ ಅದನ್ನೆಲ್ಲ ಮರೆತು ಸೋಲಿನ ನಡುವೆಯೂ ಪೂರ್ವ ದೆಹಲಿಯ ಅಭಿವೃದ್ದಿಗಾಗಿ ಸಹಾಯ ಮಾಡುತ್ತೇನೆ ಎಂದು ಗೌತಮ್ ಗಂಭೀರ್‍ರವರಿಗೆ ತಿಳಿಸಿದ್ದಾರೆ. ಇಂತಹ ವಿಶಾಲ ಹೃದಯದ ವ್ಯಕ್ತಿಗಳಿರುವುದು ಭಾರತದ ಸೌಭಾಗ್ಯವೇ ಸರಿ.


