ಸುನ್ನೀ ಧಾರ್ಮಿಕ ಮುಖಂಡ ಸೈಯದ್ ತನ್ವೀರ್ ಹಾಶ್ಮಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಆರೋಪ ಪ್ರತ್ಯಾರೋಪ ಮತ್ತೊಂದು ಹಂತಕ್ಕೆ ತಲುಪಿದೆ.
ನಿನ್ನೆ (ಡಿ.7) ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೆಪಿಸಿಸಿ ವಕ್ತಾರ ಎಸ್.ಎಂ ಪಾಟೀಲ ಗಣಿಹಾರ ನಗರದ ಗಾಂಧಿ ಚೌಕ ಬಳಿ ಇರುವ ಟೂರಿಸ್ಟ್ ಹೋಟೆಲ್‌ನಲ್ಲಿ ಶಾಸಕ ಯತ್ನಾಳ್ ಮತ್ತು ತನ್ವೀರ್ ಹಾಶ್ಮಿ ಪಾಲುದಾರರು. ಅಲ್ಲದೆ, ನಗರದ ಹೊರವಲಯದ ಮಹಲ್ ಐನಾಪುರ ಗ್ರಾಮದಲ್ಲಿ ಹಾದು ಹೋಗಿರುವ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯ ಬಳಿ ಅವರಿಬ್ಬರ ಮನೆಗಳು, ವಾಣಿಜ್ಯ ಮಳಿಗೆಗಳು ಒಟ್ಟಿಗೆ ಇವೆ ಎಂದಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಿ ಮುಲ್ಲಾ ಮಾತನಾಡಿ, ತನ್ವೀರ್ ಹಾಶ್ಮಿ ಮತ್ತು ಯತ್ನಾಳ್ ನಡುವೆ ಒಳ್ಳೆಯ ಒಡನಾಟವಿತ್ತು. ಚುನಾವಣೆಯ ಸಂದರ್ಭದಲ್ಲಿ ಅವರಿಬ್ಬರನ್ನು ನನ್ನ ಮನೆಯಲ್ಲೇ ಭೇಟಿ ಮಾಡಿಸಿದ್ದೆ. ಒಟ್ಟಿಗೆ ಊಟ ಮಾಡಿದ್ದಾರೆ ಎಂದು ಹೇಳಿದ್ದರು.
ಈ ಕುರಿತ ಮಾಧ್ಯಮ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಹಲವರು, ತನ್ವೀರ್ ಹಾಶ್ಮಿಗೆ ಐಸಿಸ್ ಜೊತೆ ಸಂಬಂಧವಿದೆ ಎಂದ ಬಿಜೆಪಿ ಶಾಸಕನಿಗೆ ಅವರ ಜೊತೆಯೇ ವ್ಯವಹಾರ ಸಂಬಂಧವಿದೆ ಎಂದಿದ್ದರು.
ಇದಕ್ಕೆ ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿರುವ ಶಾಸಕ ಯತ್ನಾಳ್, “ನೀವು ನಿಮ್ಮ ಮನೆ ಕೆಲಸವನ್ನು ಸರಿಯಾಗಿ ಮಾಡದಿದ್ದಾಗ ಇದು ಸಂಭವಿಸುತ್ತದೆ. ನನ್ನೊಂದಿಗೆ ಪಾಲುದಾರರಾಗಿರುವ ವ್ಯಕ್ತಿಯನ್ನು ಕರೆತರಲು ನಾನು ನಿಮಗೆ ಸವಾಲು ಹಾಕುತ್ತೇನೆ. ನನ್ನ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಮಾನನಷ್ಟ ಮೊಕದ್ದಮೆ ಹೂಡಲು ನನ್ನ ವಕೀಲರಿಗೆ ಸೂಚಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
This happens when you don't do your homework properly, I challenge you to bring that person who is a partner with me!
I have asked my advocates to file a defamation suit, you will also receive one! https://t.co/HeG35Jc5dI— Basanagouda R Patil (Yatnal) (@BasanagoudaBJP) December 8, 2023
ತನ್ವೀರ್ ಹಾಶ್ಮಿಗೆ ಐಸಿಸ್ ಜೊತೆ ನಂಟಿದೆ ಎಂದು ಆರೋಪಿದ ಯತ್ನಾಳ್
ವಿಜಯಪುರವನ್ನು ಕೇಂದ್ರವಾಗಿ ಕಾರ್ಯಚರಿಸುತ್ತಿರುವ ಕರ್ನಾಟಕದ ಸುನ್ನೀ ಮುಸ್ಲಿಮರ ಆಧ್ಯಾತ್ಮಿಕ ನಾಯಕ ತನ್ವೀರ್ ಹಾಶ್ಮಿಯವರಿಗೆ ಐಸಿಸ್ ಜೊತೆ ನಂಟಿದೆ. ಅವರ ಜೊತೆ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮ ಗುರುಗಳ ಸಭೆಯಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ತನ್ವೀರ್ ಹಾಶ್ಮಿ, “ನನಗೆ ಭಯೋತ್ಪಾದಕರ ಜೊತೆ ನಂಟಿದೆ ಎಂಬುವುದು ಖಾತ್ರಿಯಾದರೆ ದೇಶ ತೊರೆಯುತ್ತೇನೆ. ನೀವು ಮಾಡಿರುವ ಆರೋಪ ಸುಳ್ಳು ಎಂಬುವುದು ಖಚಿತವಾದರೆ ದೇಶ ತೊರೆಯಲು ಸಿದ್ದರಿದ್ದೀರಾ?” ಎಂದು ಸವಾಲ್ ಹಾಕಿದ್ದರು.
ತನ್ವೀರ್ ಹಾಶ್ಮಿ ಮೇಲಿನ ಯತ್ನಾಳ್ ಆರೋಪ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ. ಮಾಧ್ಯಮಗಳ ಫ್ಯಾಕ್ಟ್ ಚೆಕ್ ಪ್ರಕಾರ, ಶಾಸಕ ಯತ್ನಾಳ್ ಆರೋಪ ಸುಳ್ಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಫ್ಯಾಕ್ಟ್‌ಚೆಕ್ : CM ವಿರುದ್ದ BJP ಶಾಸಕ ಯತ್ನಾಳ್ ಮಾಡಿದ ಆರೋಪ ಸುಳ್ಳು


