ಜಿಎಸ್‌ಟಿ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಹಿಮಾಚಲ ಪ್ರದೇಶ ರಾಜ್ಯ ಅಬಕಾರಿ ಇಲಾಖೆ ಬುಧವಾರ ತಡರಾತ್ರಿ ಪರ್ವಾನೂದಲ್ಲಿರುವ ಅದಾನಿ ವಿಲ್ಮಾರ್ ಗ್ರೂಪ್‌ನ ಘಟಕದ ಮೇಲೆ ದಾಳಿ ನಡೆಸಿದೆ. ರಾಜ್ಯ ಇಲಾಖೆಯ ಅಧಿಕಾರಿಗಳು, ಸೋಲನ್ ಮೂಲದ ಕಂಪನಿಯ ಕ್ಯಾರಿರಿಂಗ್ ಮತ್ತು ಫಾರ್ವರ್ಡ್ (ಸಿ&ಎಫ್) ಘಟಕವನ್ನು ಪರಿಶೀಲಿಸಿದರು.
ರಾಜ್ಯದ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಕಂಪನಿಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್‌ಗಳ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಕಂಪನಿಯು ಐದು ವರ್ಷಗಳಿಗೂ ಹೆಚ್ಚು ಕಾಲ ಜಿಎಸ್‌ಟಿ ಹಣವನ್ನು ಪಾವತಿಸದ ಕಾರಣ ತಪಾಸಣೆ ನಡೆಸಲಾಯಿತು. ಅಧಿಕಾರಿಗಳು ಘಟಕದ ದಾಖಲೆಗಳು ಮತ್ತು ಇತರ ಸರಕುಗಳನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಅದಾನಿ ಕಂಪನಿ ವಿರುದ್ಧದ ಹಿಂಡೆನ್‌ಬರ್ಗ್ ವರದಿ: ಎರಡು ಪ್ರತ್ಯೇಕ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು
ಅದಾನಿ ವಿಲ್ಮಾರ್ ಅದಾನಿ ಗ್ರೂಪ್ ಮತ್ತು ಸಿಂಗಾಪುರ ಮೂಲದ ವಿಲ್ಮಾರ್ ನಡುವೆ 50:50 ಪಾರ್ಟನರ್‍ಶಿಪ್ ಉದ್ಯಮವಾಗಿದೆ. ಫಾರ್ಚೂನ್ ಆಯಿಲ್ ಇದರ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ಕಂಪನಿಯು ಖಾದ್ಯ ತೈಲ, ಬೇಳೆಕಾಳುಗಳು, ಅಕ್ಕಿ ಮತ್ತು ಸಾಬೂನುಗಳನ್ನು ಉತ್ಪಾದಿಸುತ್ತದೆ. ಕಂಪನಿಯು ತನ್ನ ಡಿಸೆಂಬರ್-ತ್ರೈಮಾಸಿಕ ಫಲಿತಾಂಶವನ್ನು ಫೆಬ್ರವರಿ 8 ರಂದು ವರದಿ ಮಾಡಿದ್ದು, 16%ರ ಹೆಚ್ಚಳದೊಂದಿಗೆ 246.16 ಕೋಟಿ ರೂ. ಲಾಭ ಮಾಡಿದೆ ಎಂದು ಹೇಳಿಕೊಂಡಿದೆ.
ಹಿಂಡೆನ್‌ಬರ್ಗ್ ರಿಸರ್ಚ್ ವರದಿಯ ನಂತರ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಮತ್ತು ಅದರ ಕಂಪನಿಗಳು ಪರಿಶೀಲನೆಗೆ ಒಳಪಟ್ಟಿವೆ. ಗ್ರೂಪ್‌ನ ಷೇರುಗಳು ಒಂದೆರಡು ವಹಿವಾಟು ಅವಧಿಗಳಲ್ಲಿ ಏರಿಕೆ ಕಂಡಿದೆ. ಹಾಗಾಗಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು (NSE) ಅದಾನಿ ಸಮೂಹದ ಕೆಲವು ಷೇರುಗಳನ್ನು ASM ಚೌಕಟ್ಟಿನಡಿಯಲ್ಲಿ ಇರಿಸಿದೆ.


