ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾಪ್ರಹಾರ ಮಾಡಿದ್ದಾರೆ. ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಅಮಿತ್ ಶಾ ರವರು ಕಾಂಗ್ರೆಸ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಅಂಕಿ-ಸಂಖ್ಯೆಗಳ ಸಮೇತ ಅಮಿತ್ ಶಾ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಳ್ಳನ್ನೆ ದೇವರು ಎಂದು ನಂಬಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಮತ್ತೊಮ್ಮೆ ಸುಳ್ಳುಗಳ ಮೂಟೆ ಉರುಳಿಸಿ ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಈಗ ನಾನು ಹೇಳುವ ಲೆಕ್ಕವನ್ನು ಅವರು ಗಮನವಿಟ್ಟು ಓದಿ, ತಾಳ್ಮೆಯಿಂದ ಉತ್ತರ ಕೊಡಬೇಕು ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳ ಮೂಲಕ ಆಗ್ರಹಿಸಿದ್ದಾರೆ.
ಯುಪಿಎ ಆಡಳಿತದ ಕಾಲದಲ್ಲಿ (2010/11- 2013/14) ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿಪಡಿಸಿದ್ದ ಕೇಂದ್ರ ತೆರಿಗೆಗಳ ಪಾಲ ರೂ.45,713 ಕೋಟಿ. ನಾವು ಪಡೆದದ್ದು ರೂ.47,036 ಕೋಟಿ. ಇದು ನಿಗದಿಪಡಿಸಿದ್ದಕ್ಕಿಂತ ರೂ.1.323 ಕೋಟಿ (ಶೇಕಡಾ 2.9ರಷ್ಟು) ಹೆಚ್ಚು. ಆದರೆ ಬಿಜೆಪಿ ಆಡಳಿತದ ಕಾಲದಲ್ಲಿ (2014/15 -2019/20) 13 ಮತ್ತು 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.2,03,039 ಕೋಟಿ, ಸಿಕ್ಕಿದ್ದು ಕೇವಲ ರೂ.1,65 963 ಕೋಟಿ ರೂಪಾಯಿ ಮಾತ್ರ, ಅಂದರೆ ರೂ.48,768 ಕೋಟಿ (ಶೇಕಡಾ 18.2ರಷ್ಟು) ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
2019-20ರ ವರ್ಷಕ್ಕೆ ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.48, 768 ಕೋಟಿ. ಆದರೆ ನಮಗೆ ಸಿಕ್ಕಿರುವುದು ರೂ.30.919 ಕೋಟಿ ಮಾತ್ರ. ಇದರ ಜೊತೆಗೆ ಪ್ರತಿ ವರ್ಷ ಹೆಚ್ಚಾಗುವ ಕೇಂದ್ರ ಸರ್ಕಾರದ ಬಜೆಟ್ ಗಾತ್ರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯ ಬಜೆಟ್ ಪ್ರಕಾರ 2020-21ನೇ ವರ್ಷದಲ್ಲಿ ನಿರೀಕ್ಷಿತ ತೆರಿಗೆ ಪಾಲು ರೂ.28,591 ಕೋಟಿ. ನನ್ನ ಪ್ರಕಾರ ಪ್ರಸಕ್ತ ವರ್ಷದ ಪಾಲು ರೂ.15,017 ಕೋಟಿಗೆ ಇಳಿದರೂ ಅಚ್ಚರಿ ಇಲ್ಲ. ಹೀಗಾದರೆ ಇದು 2019-20ರ ಅಂದಾಜಿಗಿಂತ ನಮ್ಮ ಪಾಲು ರೂ.33,751 ಕೋಟಿ ಕಡಿಮೆ ಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಎಸ್‌ಟಿ ಪರಿಹಾರದಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ. ಇತ್ತೀಚಿನ ಅಂದಾಜಿನಂತೆ ಜಿಎಸ್‌ಟಿ ಪರಿಹಾರದಲ್ಲಿ 25 ರಿಂದ 27 ಸಾವಿರ ಕೋಟಿ ರೂಪಾಯಿ ಖೋತಾ ಆಗಬಹುದು. ಕೇಂದ್ರ ಸರ್ಕಾರ ಇತ್ತೀಚೆಗೆ 18-19,000 ಕೋಟಿಯಷ್ಟೇ ಪರಿಹಾರ ನೀಡುವುದಾಗಿ ಹೇಳಿದೆ. ಈ ನಷ್ಟಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಲಿರುವ ಅನುದಾನ ರೂ.31,570 ಕೋಟಿಗಳಷ್ಟಾಗಬಹುದೆಂದು ನಿರೀಕ್ಷಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಇದು ರೂ.17,372 ಕೋಟಿ ಮೀರಲಾರದು. ಇದರಿಂದ ರೂ.14,198 ಕೋಟಿ ಖೋತಾ ಆಗಲಿದೆ. ರಾಜ್ಯದ ಹಣಕಾಸು ಪರಿಸ್ಥಿತಿಗೆ ಇದು ಮಾರಕ ಹೊಡೆತ. ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಕಳೆದ ವರ್ಷಕ್ಕಿಂತ ಸುಮಾರು 50,000 ಕೋಟಿಯಷ್ಟು ಕಡಿಮೆ ಅನುದಾನ ಪಡೆಯಬಹುದು. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಆದಾಯ ರೂ.1,80,217 ಕೋಟಿಯಿಂದ ರೂ.1,14,758 ಕೋಟಿಗೆ ಇಳಿಯುವ ನಿರೀಕ್ಷೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕಕ್ಕೆ ವಿಶೇಷ ಅನುದಾನ ರೂ.5,495 ಕೋಟಿ ನೀಡಬೇಕೆಂದು ಹಣಕಾಸು ಆಯೋಗ ಶಿಫಾರಸು ಮಾಡಿತ್ತು.
ಈ ಅನುದಾನಕ್ಕೆ ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಈಗಿನ ಹಣಕಾಸು ಸಚಿವೆ @nsitharaman ಅಡ್ಡಗಾಲು ಹಾಕಿದ್ದಾರೆ.
ಇದು @AmitShah ಅವರ ಗಮನಕ್ಕೆ ಬಂದಿಲ್ಲವೇ?@CMofKarnataka#BJPBetrayKtaka
10/11— Siddaramaiah (@siddaramaiah) January 18, 2021
ದಶಕಗಳ ನಮ್ಮ ಒಟ್ಟು ಸಾಲ ಅಂದಾಜು ರೂ.3.2ಲಕ್ಷ ಕೋಟಿ. ಆದರೆ ಈಗಿನ ಒಂದೇ ವರ್ಷದಲ್ಲಿ ಬಿ.ಎಸ್ ಯಡಿಯೂರಪ್ಪ ಸುಮಾರು ರೂ.90,000 ಕೋಟಿ ಸಾಲ ಪಡೆಯಲು ನಿರ್ಧರಿಸಿದ್ದಾರೆ. ಈ ಮೂಲಕ ಬಿಜೆಪಿ
ಸರ್ಕಾರ ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಕರ್ನಾಟಕಕ್ಕೆ ವಿಶೇಷ ಅನುದಾನ ರೂ.5,495 ಕೋಟಿ ನೀಡಬೇಕೆಂದು ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಈ ಅನುದಾನಕ್ಕೆ ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಅಡ್ಡಗಾಲು ಹಾಕಿದ್ದಾರೆ. ಇದು ಅಮಿತ್ ಶಾರವರ ಗಮನಕ್ಕೆ ಬಂದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರ್ನಾಟಕ ಪ್ರತಿವರ್ಷ ತೆರಿಗೆ-ಸುಂಕ ಮೂಲಕ ಕೇಂದ್ರಕ್ಕೆ ಪಾವತಿಸುವ ಅಂದಾಜು ಮೊತ್ತ ರೂ.2,20,000 ಕೋಟಿ. ಹಣಕಾಸು ಆಯೋಗದ ಶಿಫಾರಸಿನಂತೆ ಅದರಲ್ಲಿ 42% ಹಣವನ್ನು ರಾಜ್ಯಕ್ಕೆ ಕೇಂದ್ರ ಹಿಂದಿರುಗಿಸಬೇಕು. ಬಿಜೆಪಿ ಆಡಳಿತದ ಕಾಲದಲ್ಲಿ ನಮಗೆಂದೂ ಅಷ್ಟು ಪಾಲು ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಇದನ್ನೂ ಓದಿ: ಲಯ ತಪ್ಪಿದ ಸಾರ್ವಜನಿಕ ಗ್ರಂಥಾಲಯ ಇಲಾಖೆ?: ವಿಶೇಷ ವರದಿ


