Homeಮುಖಪುಟಲಯ ತಪ್ಪಿದ ಸಾರ್ವಜನಿಕ ಗ್ರಂಥಾಲಯ ಇಲಾಖೆ?: ವಿಶೇಷ ವರದಿ

ಲಯ ತಪ್ಪಿದ ಸಾರ್ವಜನಿಕ ಗ್ರಂಥಾಲಯ ಇಲಾಖೆ?: ವಿಶೇಷ ವರದಿ

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಡೆಯುತ್ತಿರುವುದು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯಲ್ಲಿ (ಗ್ರಂಥಾಲಯ ಕರ). ಆರಂಭದಲ್ಲಿ ಇದು ಕೇವಲ ಶೇ.2ರಷ್ಟಿತ್ತು. ಆದರೆ ಈಗ ಇದು ಶೇ.6ರಷ್ಟಿದೆ. ಈ ಮೂಲಕ ಸಂಗ್ರಹಿಸಿದ ಹಣದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಂಡು, ಪುಸ್ತಕ ಸಲ್ಲಿಸುವ ಪ್ರಕಾಶಕರಿಗೆ ಪ್ರತಿ ವರ್ಷವೂ ಫೆಬ್ರವರಿ ತಿಂಗಳಿನೊಳಗೆ ಹಣ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಆದರೆ ಸರ್ಕಾರದ ಎಲ್ಲಾ ಇಲಾಖೆಗಳು ವರದಿ ಸಲ್ಲಿಸುವ ಸಮಯದಲ್ಲಿ ಗ್ರಂಥಾಲಯ ಇಲಾಖೆಗೆ ಬಜೆಟ್ ಅನುಮೋದನೆ ನೀಡುತ್ತಾರೆ.

- Advertisement -
- Advertisement -

ಓದು ಹಿಂದೆ ಎಲ್ಲರಿಗೂ ದಕ್ಕುತ್ತಿರಲಿಲ್ಲ ಅಥವಾ ಅದನ್ನು ಹತ್ತಿಕ್ಕಲಾಗಿತ್ತು. ಶಿಕ್ಷಣವೆ ಇಲ್ಲದಿರುವಾಗ ಜನರು ಓದುವುದಕ್ಕೆ ಸಾಧ್ಯವಾಗುತ್ತದೆಯೇ? ಇದು ಒಂದು ಕಡೆಯಾದರೆ, ಸಾಕ್ಷರರಾಗಿದ್ದರೂ ಪುಸ್ತಕಗಳನ್ನು ಕೊಂಡು ಓದುವುದಕ್ಕೆ ಶಕ್ತಿಯಿಲ್ಲದೆ ಅನೇಕರು ಓದಿನಿಂದ ವಂಚಿತರಾಗುತ್ತಿದ್ದರು. ಇದನ್ನು ಸರಿದೂಗಿಸಲು ಮತ್ತು ಓದನ್ನು ಜನಪ್ರಿಯಗೊಳಿಸಲು ಸರ್ಕಾರದ ಅಧೀನದಲ್ಲಿ 1965ರಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಪರಿಚಯಿಸಿ, ಪ್ರತಿ ಜಿಲ್ಲಾ ಕೇಂದ್ರಗಳು ಮತ್ತು ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲಾ ಪುಸ್ತಕ ಭಂಡಾರ ನಿರ್ಮಿಸಿ ಓದುಗರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಇದು ಆರಂಭದಲ್ಲಿ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕಾಲಾಂತರದಲ್ಲಿ ಯಾವುದೇ ವ್ಯವಸ್ಥೆಯಾದರೂ ಪರಿಷ್ಕೃತಗೊಳ್ಳದೇ, ಕಾಲಕ್ಕೆ ಒಗ್ಗಿಕೊಳ್ಳದಿದ್ದರೆ ಲಯ ತಪ್ಪುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಗ್ರಂಥಾಲಯ ಇಲಾಖೆ. ಇದರ ಬಗ್ಗೆ ಕನ್ನಡ ಪ್ರಕಾಶಕರ ಅಳಲು ನೂರು ತರ, ನೂರು ಸ್ವರ.

ಈ ಗ್ರಂಥಾಲಯದ ವ್ಯವಸ್ಥೆ ಲಯತಪ್ಪಿ ಬಹಳ ವರ್ಷಗಳೇ ಆಗಿವೆ ಎಂದು ಓದುಗ ವರ್ಗ ಮತ್ತು ಬರಹಗಾರರ ವರ್ಗ ಆರೋಪಿಸುತ್ತಿದ್ದಾರೆ. ರಾಜ್ಯದಲ್ಲಿರುವ ಗ್ರಂಥಾಲಯಗಳಿಗೆ ಸರ್ಕಾರವೇ ಪುಸ್ತಕಗಳನ್ನು ಖರೀದಿಸಿ ವಿತರಣೆ ಮಾಡುತ್ತದೆ. ಇಲ್ಲಿ ಪುಸ್ತಕಗಳ ಆಯ್ಕೆ, ಅವುಗಳಿಗೆ ಹಣ ನಿಗದಿ, ಸರ್ಕಾರದ ಅನುದಾನ ಬಿಡುಗಡೆ, ಎಲ್ಲಾ ರೀತಿಯ ಬರಹಗಾರರನ್ನೂ ಒಳಗೊಳ್ಳುವಿಕೆ, ಇವುಗಳೆಲ್ಲದರ ಆಡಳಿತ ಸೇರಿದಂತೆ ಹತ್ತಾರು ಪುಟ್ಟ-ಪುಟ್ಟ ವ್ಯವಸ್ಥೆಗಳು ಕೆಲಸ ಮಾಡುತ್ತವೆ. ಆದರೆ ಇವುಗಳಲ್ಲಿ ಯಾವುದಾದರೂ ಒಂದು ಲಯ ತಪ್ಪಿದರೂ ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮ ಇಲಾಖೆ ಸ್ಥಾಪನೆಯ ಉದ್ದೇಶವೇ ಕಡೆಗಣನೆಯಾಗಿ ಜಡ್ಡುಗಟ್ಟಿದ ವ್ಯವಸ್ಥೆಯಾಗಿ ಮಾರ್ಪಡುತ್ತದೆ. ಇಲ್ಲಿ ಭ್ರಷ್ಟಾಚಾರ, ತಾರತಮ್ಯ, ಶೋಷಣೆಗಳು ಎಗ್ಗಿಲ್ಲದೇ ನಡೆಯುತ್ತವೆ ಎಂದು ಆರೋಪಿಸಲಾಗುತ್ತಿದೆ.

ಹಲವು ವರ್ಷಗಳಿಂದ ಕನ್ನಡ ಪುಸ್ತಕ ಪ್ರಕಾಶನದಲ್ಲಿ ಮುಂಚೂಣಿಯಲ್ಲಿದ್ದು ನೂರಾರು ಪುಸ್ತಕಗಳನ್ನು ಪ್ರಕಟಿಸಿರುವವರು ಸೃಷ್ಟಿ ಪ್ರಕಾಶನದ ನಾಗೇಶ್. ಈ ಕುರಿತು ಗೌರಿ ಲಂಕೇಶ್ ನ್ಯಾಯಪಥಕ್ಕೆ ಪ್ರತಿಕ್ರಿಯಿಸಿದ ಸೃಷ್ಟಿ ಪ್ರಕಾಶನದ ನಾಗೇಶ್, “ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಲ್ಲಿ ಮೊದಲನೆಯದಾಗಿ, ಗ್ರಂಥಾಲಯ ಇಲಾಖೆಯ ನಿಯಮಗಳ ಬೈಲಾ ರಚಿಸಿದ್ದು 1973ರಲ್ಲಿ. ಅಂದಿನಿಂದಲೂ ಈ ನಿಯಮಗಳು ತಿದ್ದುಪಡಿಯಾಗಿಲ್ಲ. ತಿದ್ದುಪಡಿ ತರದೇ ಬೇಕಾಬಿಟ್ಟಿಯಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎರಡನೆಯದಾಗಿ, ಈ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಡೆಯುತ್ತಿರುವುದು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯಲ್ಲಿ (ಗ್ರಂಥಾಲಯ ಕರ). ಆರಂಭದಲ್ಲಿ ಇದು ಕೇವಲ ಶೇ.2ರಷ್ಟಿತ್ತು. ಆದರೆ ಈಗ ಇದು ಶೇ.6ರಷ್ಟಿದೆ. ಈ ಮೂಲಕ ಸಂಗ್ರಹಿಸಿದ ಹಣದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಂಡು, ಪುಸ್ತಕ ಸಲ್ಲಿಸುವ ಪ್ರಕಾಶಕರಿಗೆ ಪ್ರತಿ ವರ್ಷವೂ ಫೆಬ್ರವರಿ ತಿಂಗಳಿನೊಳಗೆ ಹಣ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಆದರೆ ಸರ್ಕಾರದ ಎಲ್ಲಾ ಇಲಾಖೆಗಳು ವರದಿ ಸಲ್ಲಿಸುವ ಸಮಯದಲ್ಲಿ ಗ್ರಂಥಾಲಯ ಇಲಾಖೆಗೆ ಬಜೆಟ್ ಅನುಮೋದನೆ ನೀಡುತ್ತಾರೆ.

ಈ ವಿಳಂಬ ಸಮಸ್ಯೆ ಸುಮಾರು ಹತ್ತು ವರ್ಷಗಳಿಂದ ಇದೆ. ಉದಾ: 2016ರ ಪುಸ್ತಕಗಳನ್ನು 2021ರಲ್ಲಿ ವಿತರಿಸುವ ಮಟ್ಟಕ್ಕೆ ತಲುಪಿದ್ದೇವೆ. ಆಗಿನ ಬಜೆಟ್ಟಿಗೆ ಈಗ ಸರ್ಕಾರದ ಕಾರ್ಯಾಲಯಗಳನ್ನ ಹತ್ತಿಳಿಯುತ್ತಿದ್ದೇವೆ ಎಂದರೆ ನೀವೆ ಊಹಿಸಿಕೊಳ್ಳಿ. ಅಂದರೆ ನಾವು ಸುಮಾರು ಐದು ವರ್ಷ ಹಿಂದುಳಿದಿದ್ದೇವೆ. ನಾವು ಆಗ ತಯಾರಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಇದೆ. ಆದರೆ ಈ ಪುಸ್ತಕ ಈಗ ಓದುಗರಿಗೆ ತಲುಪುತ್ತಿದೆ. ನಮ್ಮ ಮತ್ತು ಓದುಗರ ಪರಿಸ್ಥಿತಿ ಏನಾಗಬೇಕು. ಹಾಗಾಗಿ ಬಿಸಿ ಅಡುಗೆ ಮಾಡಿ ಹಳಸಲನ್ನು ಓದುಗರಿಗೆ ತಲುಪಿಸುತ್ತಿದ್ದೇವೆ. ಇನ್ನೊಂದು ಪ್ರಮುಖ ಮತ್ತು ಮೂಲ ಸಮಸ್ಯೆಯೆಂದರೆ, ಈ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ರಚನೆಗೆ ಸಂಬಂಧಿಸಿದ್ದು.

ಇಲ್ಲಿಗೆ ಆಯ್ಕೆಯಾಗಲು ಏನೇನೋ ಲಾಬಿ ಮಾಡುತ್ತಾರೆ. ನಂತರ ಪುಸ್ತಕದ ಆಯ್ಕೆಯಲ್ಲಿಯೂ ಲಾಬಿ ನಡೆಸುತ್ತಾರೆ. ಈ ಮೂಲಕ ಅರ್ಹತೆ ಇಲ್ಲದವರೂ ಈ ಪುಸ್ತಕ ಆಯ್ಕೆ ಸಮಿತಿಯಲ್ಲಿರುತ್ತಾರೆ. ಇದರಿಂದ ಸಮಗ್ರ ದೃಷ್ಟಿಕೋನದ ಪುಸ್ತಕಗಳ ಆಯ್ಕೆಯಾಗುವುದಿಲ್ಲ. ಓದುಗರಿಗೆ ಇವು ಸಿಗುವುದಿಲ್ಲ. ಇನ್ನು ಇಲಾಖೆಯ ನಿರ್ದೇಶಕರಿಂದ-ಇಲಾಖೆಯ ಕೆಳಮಟ್ಟದ ಉದ್ಯೋಗಿಗಳವರೆಗೆ ಸಮನ್ವಯ ಇಲ್ಲ. ನ್ಯಾಯಯುತವಾಗಿರುವ ಪ್ರಕಾಶಕರನ್ನ ಮೂಲೆಗುಂಪು ಮಾಡಲಾಗಿದೆ. ಗ್ರಂಥಾಲಯಕ್ಕೆ ಅಂತಲೆ ಹುಟ್ಟಿಕೊಂಡಿರುವ ಮಾಫಿಯಾ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಇದರಿಂದ ದುರ್ವರ್ತನೆಗಳು, ಲಂಚಬಾಕತನ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರದಿಂದ ಪ್ರಕಾಶಕರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಸವಲತ್ತುಗಳನ್ನು ಈ ಪುಸ್ತಕ ಮಾಫಿಯಾದವರೇ ಪಡೆದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸುತ್ತಾರೆ.

“ಇನ್ನು ಕನ್ನಡ ಪುಸ್ತಕಗಳ ಆಯ್ಕೆಗಿರುವ ನೀತಿ-ನಿಯಮಗಳು ಕನ್ನಡೇತರ ಪುಸ್ತಕಗಳಿಗೆ ಇರುವುದಿಲ್ಲ. ಹಾಗಾಗಿ ಕನ್ನಡ ಪುಸ್ತಕಗಳಿಗಿಂತ ಹೆಚ್ಚಿನ ಬೆಲೆ ಕೊಟ್ಟು ಕನ್ನಡೇತರ ಪುಸ್ತಕಗಳನ್ನು ಕೊಳ್ಳುತ್ತಿದ್ದಾರೆ. ಇದು ಕನ್ನಡಿಗರಿಗೆ ಮತ್ತು ಕನ್ನಡ ಪ್ರಕಾಶಕರಿಗೆ ಆಗುತ್ತಿರುವ ಅನ್ಯಾಯ. ಇದರ ವಿರುದ್ಧ ಹೋರಾಟ ಮಾಡಿ ಕನ್ನಡೇತರ ಪುಸ್ತಕಗಳಿಗೂ ಬೆಲೆ ನಿಗದಿ ಮಾಡಿಸಿದ್ದೇವೆ. ಪ್ರಕಾಶಕರಿಗೆ ಬರುವ ಹಣವನ್ನು ನೇರವಾಗಿ ಅವರ ಅಕೌಂಟಿಗೆ ಬರುವಂತೆ ಮಾಡಲು ಒತ್ತಾಯಿಸಿದ್ದೇವೆ. ಹಾಗಾಗಿ ನಮ್ಮ ಬೇಡಿಕೆ ಇಷ್ಟೆ: ಬೆಗ್ಗರ್ಸ್ ಸೆಸ್ (ಕರ), ಎಜುಕೇಶನ್ ಸೆಸ್ ನೇರವಾಗಿ ಆಯಾ ಫಲಾನುಭವಿಗಳ ಖಾತೆಗೆ ಸೇರುವಂತೆ ಪ್ರಕಾಶಕರಿಗೂ ಗ್ರಂಥಾಲಯ ಕರ ದಕ್ಕಬೇಕು. ನೀವು ಹೆಚ್ಚುವರಿಯಾಗಿ ಹಣ ನೀಡದಿದ್ದರೂ ಪರವಾಗಿಲ್ಲ. ಆದರೆ ಸಲ್ಲಬೇಕಾದ ಹಣ ಸರಿಯಾದ ಸಮಯಕ್ಕೆ ಸಿಕ್ಕರೆ ಸಾಕು ಎಂಬಂತಾಗಿದೆ. ಈ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಸಚಿವರಿಗೆ ಸಾಕಷ್ಟು ಬಾರಿ ಮನವಿಗಳನ್ನು ಸಲ್ಲಿಸಿದ್ದೇವೆ. ಹೋರಾಟಗಳನ್ನು ಮಾಡಿದ್ದೇವೆ. ಆದರೆ ಯಾವುದೂ ಉಪಯೋಗಕ್ಕೆ ಬಂದಿಲ್ಲ. ಹಾಗಾಗಿ ಇಡೀ ಗ್ರಂಥಾಲಯ ವ್ಯವಸ್ಥೆಯೇ ಬುಡಮೇಲಾಗಿದೆ” ಎಂದು ಹೇಳಿದರು.

PC : The News Minute

ಕಾವ್ಯಮನೆ ಪ್ರಕಾಶನ ಇತ್ತೀಚಿನ ವರ್ಷಗಳಲ್ಲಿ ಮೌಲ್ಯಯುತವಾದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಣ್ಣ ಪ್ರಕಾಶನ ಸಂಸ್ಥೆ. ಇದರ ಸಂಚಾಲಕರಲ್ಲಿ ಒಬ್ಬರಾಗಿರುವ ಕಾದಂಬರಿಕಾರ ಕಪಿಲ್ ಹುಮ್ನಾಬಾದೆ ಮಾತನಾಡಿ, “2018ರಲ್ಲಿ ಇಲಾಖೆಗೆ ನಮ್ಮ ಪುಸ್ತಕವನ್ನು ಸಲ್ಲಿಸಿದ್ದೆವು. ಅದರಲ್ಲಿ ಒಂದು ಅಕ್ಷರ ತಪ್ಪಾಗಿತ್ತೆಂದು ಒಂದು ಸ್ಟಿಕ್ಕರ್ ಅಂಟಿಸಲಾಗಿತ್ತು. ಇದನ್ನೆ ಕಾರಣ ಮಾಡಿಕೊಂಡು ನಮ್ಮ ಪುಸ್ತಕವನ್ನು ನಿರಾಕರಿಸಲಾಗಿತ್ತು. ಆದರೆ ಅದನ್ನು ಪರಿಷ್ಕರಿಸಿ ಮತ್ತೆ ಅನುಮೋದನೆಗೆ ಸಲ್ಲಿಸಿದ್ದೇವೆ. ಅದು ಇನ್ನೂ ಪ್ರಕ್ರಿಯೆಯಲ್ಲಿದೆ” ಎನ್ನುತ್ತಾರೆ.

ಸಂಕಥನ ಪುಸ್ತಕ ಪ್ರಕಾಶನ ನಡೆಸುವ ಕವಿ ರಾಜೇಂದ್ರ ಪ್ರಸಾದ್ ಹೇಳುವಂತೆ, “ಇಡೀ ಗ್ರಂಥಾಲಯ ವ್ಯವಸ್ಥೆಯೇ ಒಂದು ರೀತಿ ರಿಜಿಡ್ ಆಗಿದೆ. ಅಲ್ಲಿ ಚಲನೆಗೆ ಅವಕಾಶವಿಲ್ಲ. ಪುಸ್ತಕಗಳ ಆಯ್ಕೆ ಸಮಿತಿಯಲ್ಲಿರುವವರು ವಿವಿಧ ಕ್ಷೇತ್ರಗಳನ್ನ ಪ್ರತಿನಿಧಿಸುವುದಿಲ್ಲ. ಹಾಗಾಗಿ ಸಮಗ್ರ ವಿಷಯದ ಪುಸ್ತಕಗಳು ಓದುಗರಿಗೆ ಸಿಗುತ್ತಿಲ್ಲ. ಈ ಸಮಿತಿಯಲ್ಲಿ ಮಕ್ಕಳ ಸಾಹಿತ್ಯ ತಜ್ಞರು, ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳ ಪರಿಣಿತರೂ ಇರಬೇಕು. ಆದರೆ ಇದು ಇಲ್ಲ. ಆಯ್ಕೆಯಾಗುವ ಪುಸ್ತಕಗಳಲ್ಲಿ ಗುಣಮಟ್ಟವಿಲ್ಲ. ಅಂದರೆ ಕೇವಲ ’ಸರ್ಕಾರದ ಅನುದಾನಕ್ಕೆಂದೇ ಹುಟ್ಟಿಕೊಂಡಿರುವ ಪ್ರಕಾಶಕರು’ ರದ್ದಿ ಪುಸ್ತಕಗಳನ್ನು ಅನುಮೋದನೆಗೆ ಕಳುಹಿಸುತ್ತಾರೆ. ಅಲ್ಲಿರುವವರು ಯಾವುದೇ ಮಾದರಿ ಕ್ರೈಟೀರಿಯಾ ಇಲ್ಲದೆ ಅವುಗಳನ್ನೆಲ್ಲಾ ಆಯ್ಕೆ ಮಾಡುತ್ತಾರೆ.

ಇನ್ನು ಪ್ರಕಾಶಕರು ನಾಲ್ಕೈದು ಕವಿಗಳ ಕವನಗಳನ್ನು ಸೇರಿಸಿ ಒಂದು ಸಂಕಲನ ಮಾಡುತ್ತಾರೆ. ಅದನ್ನೂ ಅನುಮೋದನೆಗೆ ಕಳುಹಿಸುತ್ತಾರೆ. ಹೀಗೆ ಪ್ರತಿ ವರ್ಷ ಸುಮಾರು ಆರು ಸಾವಿರ ಪುಸ್ತಕಗಳನ್ನು ಗ್ರಂಥಾಲಯದ ಅನುಮೋದನೆಗೆ ಕಳುಹಿಸಲಾಗುತ್ತದೆ. ಇಲ್ಲಿರುವ ಆಯ್ಕೆ ಸಮಿತಿ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಎಲ್ಲವನ್ನೂ ಆಯ್ಕೆ ಮಾಡುತ್ತದೆ. ಹೀಗೆ ನೂರಾರು ಪುಸ್ತಕಗಳು ರದ್ದಿ ಪುಸ್ತಕಗಳಾಗಿ ಗ್ರಂಥಾಲಯದಲ್ಲಿ ಕೊಳೆಯುತ್ತಿದೆ. ಇವುಗಳಿಂದ ಏನೂ ಉಪಯೋಗವಿಲ್ಲ. ಹಾಗಾಗಿ ಪುಸ್ತಕಗಳ ಆಯ್ಕೆ ಕಾಲಕ್ಕೆ ತಕ್ಕಂತೆ ಬದಲಾಗಿ ಉನ್ನತೀಕರಣಗೊಳ್ಳಬೇಕು. ಆದರೆ ಅಲ್ಲಿರುವ ರಿಜಿಡಿಟಿಯಿಂದ ಇದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.
“ಬರಹಗಾರರು ಮತ್ತು ಓದುಗರ ನಡುವೆ ಬೇರೆ ಯಾರೂ ಇರಬಾರದು ಎನ್ನುವುದು ನನ್ನ ಅಭಿಪ್ರಾಯ.

ಒಬ್ಬ ಲೇಖಕ ಅಥವಾ ಕವಿ ಅಥವಾ ಪ್ರಕಾಶಕ ಜನರನ್ನು ನೇರವಾಗಿ ತಲುಪಬೇಕು. ಅದುಬಿಟ್ಟು ಸರ್ಕಾರದ ಅನುದಾನಕ್ಕಾಗಿ ಹಾತೊರೆಯುವುದು ಸರಿಯಲ್ಲ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಬರಹಗಾರರೇ! ಆದರೆ ಆ ಬರಹಗಳಲ್ಲಿ, ಪ್ರಕಟಿಸಬಹುದಾದ ಬರಹಗಳು ಯಾವುವು ಎಂಬುದನ್ನು ಅರಿತುಕೊಂಡು ಅವುಗಳನ್ನು ಮಾತ್ರ ಗ್ರಂಥಾಲಯಕ್ಕೆ ಸಲ್ಲಿಸಬೇಕು. ಜೊತೆಗೆ ಗ್ರಂಥಾಲಯವೂ ಅಂಥವುಗಳನ್ನು ಮಾತ್ರ ಆಯ್ಕೆ ಮಾಡಬೇಕು. ಆದರೆ ಈಗ ಹಾಗಾಗುತ್ತಿಲ್ಲ. ಓದುಗರಿಗೆ ನಿಜವಾಗಿಯೂ ಸಿಗಬೇಕಾದ ಮತ್ತು ಅವಶ್ಯಕತೆಯಿರುವ ಪುಸ್ತಕಗಳೇ ಸಿಗುತ್ತಿಲ್ಲ. ಇನ್ನು ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯವೇ ಸರಿಯಿಲ್ಲ. ಒಬ್ಬ ಓದುಗ ಸ್ನೇಹಿಯಾದ ವಾತಾವರಣ ಬಹುತೇಕ ಗ್ರಂಥಾಲಯಗಳಲ್ಲಿಲ್ಲ. ಪುಸ್ತಕಗಳನ್ನು ಸರಿಯಾಗಿ ವರ್ಗೀಕರಿಸಿರುವುದಿಲ್ಲ. ಯಾವುದೋ ಕತ್ತಲೆ ಕೋಣೆಯಲ್ಲಿ ಪುಸ್ತಕಗಳನ್ನು ಗುಡ್ಡೆ ಹಾಕಿರುತ್ತಾರೆ. ಇಂತಹ ನೂರಾರು ಸಮಸ್ಯೆಗಳಿವೆ. ಹಾಗಾಗಿ ಗ್ರಂಥಾಲಯದ ವ್ಯವಸ್ಥೆ ಮತ್ತು ಈ ಪ್ರಕಾಶಕರ ರಿಜಿಡಿಟಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮೂಲ ಉದ್ದೇಶವೆ ಈಡೇರುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ರಾಜೇಂದ್ರ.

ಕನ್ನಡ ಪ್ರಕಾಶಕರ ಸಂಘ ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿದೆ. ಅದರ ಅಧ್ಯಕ್ಷರಾದ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಪ್ರತಿಕ್ರಿಯಿಸಿ, “ನಮಗೆ ಪ್ರಮುಖವಾಗಿ ಎರಡು ಸಮಸ್ಯೆಗಳಿವೆ. ಒಂದು ಸಕಾಲಕ್ಕೆ ಅನುದಾನ ಬಿಡುಗಡೆಯಾಗದಿರುವುದು. ಅಂದರೆ ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಅನುದಾನ ಈ ವರ್ಷ ಜನವರಿಯಲ್ಲೂ ಇನ್ನೂ ಬಂದಿಲ್ಲ. ಇದು ನಮ್ಮ ಪ್ರಕಾಶಕರಿಗೆ ದೊಡ್ಡ ಸಮಸ್ಯೆ. ಇನ್ನೊಂದು, ಇಲಾಖೆಯ ನಿಯಮದ ಪ್ರಕಾರ ಒಬ್ಬ ಪ್ರಕಾಶಕರು ಒಂದು ಲಕ್ಷದ ಪ್ರಮಾಣದಷ್ಟು ಮಾತ್ರ ವ್ಯವಹಾರ ಮಾಡಬೇಕು. ಇದನ್ನು ವಿಸ್ತರಿಸಬೇಕೆಂದು ನಾವು ಸರ್ಕಾರದ ಬಳಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಎಲ್ಲಾ ಮೂಲಗಳಿಂದಲೂ ಒತ್ತಡ ಹೇರಿದ್ದೇವೆ. ಆದರೂ ಇದು ಯಾವುದೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಹೇಳಿದರು.

ಗ್ರಂಥಾಲಯ ಇಲಾಖೆಯ ಸದ್ಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಸತೀಶ್ ಹೊಸಮನಿ. ಅವರ ಪ್ರಕಾರ “ಪ್ರಕಾಶಕರು ಮತ್ತು ಬರಹಗಾರರು ಮಾಡುತ್ತಿರುವ ಆರೋಪಗಳೆಲ್ಲ ನಿರಾಧಾರವಾಗಿದ್ದು. ನನ್ನ ಆಡಳಿತದಲ್ಲಿ ಎಲ್ಲಾ ಕೆಲಸಗಳೂ ಪಾರದರ್ಶಕವಾಗಿ ನಡೆಯುತ್ತಿದೆ. 2017-2018ನೇ ಸಾಲಿನ ಎಲ್ಲಾ ಮೊತ್ತವನ್ನೂ ಪ್ರಕಾಶಕರಿಗೆ ನೀಡಲಾಗಿದೆ. 2020ನೇ ಸಾಲಿಗೆ ಪುಸ್ತಕಗಳ ಆಯ್ಕೆಗೆ ಅರ್ಜಿ ಕರೆಯಲಾಗಿದೆ. ಕೊರೊನಾ ಸಂದರ್ಭದಲ್ಲಿ ಇಲಾಖೆಗೆ ಅನುದಾನ ಬಂದಿಲ್ಲ. ಆದರೆ ಅದನ್ನೂ ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಇನ್ನು ಪುಸ್ತಕ ಆಯ್ಕೆ ಸಮಿತಿಯನ್ನು ಪರಿಷ್ಕೃತಗೊಳಿಸಲು ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿದರು.

2018ರಲ್ಲಿ ಪ್ರಕಟವಾದ ಪುಸ್ತಕಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದವರು ಕವಿ ದೊಡ್ಡರಂಗೇಗೌಡ. “ನಾನು ಅಧಿಕಾರ ವಹಿಸಿಕೊಂಡು ಆರು ತಿಂಗಳಾಗಿದೆ. ನನ್ನ ಜೊತೆಗೆ ಸುಮಾರು 28ಕ್ಕೂ ಹೆಚ್ಚು ಸದಸ್ಯರು ಈ ಸಮಿತಿಯಲ್ಲಿದ್ದಾರೆ. ನಾವೆಲ್ಲರೂ ಒಟ್ಟಾಗಿ ಪುಸ್ತಕವನ್ನು ಆಯ್ಕೆ ಮಾಡುತ್ತೇವೆ. ಜೊತೆಗೆ ಈ ಸಮಿತಿಯಲ್ಲಿರುವವರೆಲ್ಲರೂ ಶುದ್ಧಹಸ್ತರೇ ಅಗಿದ್ದು, ಅದ್ಭುತ ಜ್ಞಾನವುಳ್ಳ, ಸಾಹಿತ್ಯದ ಎಲ್ಲಾ ವಿಭಾಗಗಳ ಪರಿಣತರೇ ಆಗಿದ್ದಾರೆ. ಹಾಗಾಗಿ ಪುಸ್ತಕವನ್ನು ಆಯ್ಕೆ ಮಾಡುವಾಗ ಸಮಗ್ರ ದೃಷ್ಟಿಕೋನವನ್ನಿಟ್ಟುಕೊಂಡೇ ಆಯ್ಕೆ ಮಾಡುತ್ತೇವೆ. ನಾನು ಅಧ್ಯಕ್ಷನಾದ ಮೇಲೆ, ಅತ್ಯುತ್ತಮ ಪುಸ್ತಕಗಳು ಓದುಗರಿಗೆ ತಲುಪಬೇಕು ಮತ್ತು ಅಭಿರುಚಿಯಿರುವ ಪುಸ್ತಕಗಳು ಆಯ್ಕೆಯಾಗಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದೇನೆ. ಜೊತೆಗೆ ಯಾವ ಪ್ರಕಾಶಕರಿಗೂ ಅನ್ಯಾಯವಾಗಬಾರದು ಮತ್ತು, ಯಾವು ಲೇಖಕರಿಗೂ ಅನ್ಯಾಯವಾಗಬಾರದು ಎನ್ನುವ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದ್ದೇನೆ. ನನ್ನ ಅವಧಿಯಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಆಯ್ಕೆಗೆ ಬಂದಿದ್ದವು. ಅವುಗಳಲ್ಲು ಸುಮಾರು ಶೇ. 65-70 ಭಾಗದಷ್ಟು ಪುಸ್ತಕಗಳನ್ನು ಆಯ್ಕೆ ಮಾಡಿದ್ದೇನೆ” ಎಂದು ಹೇಳಿದರು.

“ಈ ಮೂಲಕ ಸರ್ಕಾರಕ್ಕೆ ನಾನು ಕೇಳುವ ಪ್ರಶ್ನೆಯೊಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ರಂಥಾಲಯಕ್ಕೆಂದೇ ವಿಶೇಷವಾಗಿ ವಿಧಿಸಲಾಗುವ ಸೆಸ್ (ಕರ) ಸುಮಾರು ಶೇ.6ರಷ್ಟಿದೆ. ಇದರ ಪ್ರಕಾರ ಕಳೆದ ವರ್ಷ ಸುಮಾರು 3 ಕೋಟಿ ಹಣ ಸಂಗ್ರಹವಾಗಿದೆ. ಆದರೆ ಅದನ್ನು ಬಿಬಿಎಂಪಿ ಯಾರದ್ದೂ ಅಭಿಪ್ರಾಯ ಮತ್ತು ಸಲಹೆ ಕೇಳದೆ ಬೇರೆ ಇನ್ನಾವುದೋ ಇಲಾಖೆಗೆ ಖರ್ಚು ಮಾಡಿದೆ. ಇದು ದೊಡ್ಡ ಅನ್ಯಾಯ. ಖಂಡಿತ ಪಾಲಿಕೆಯ ಈ ನಿರ್ಧಾರವನ್ನು ಖಂಡಿಸುತ್ತೇನೆ. ಜೊತೆಗೆ ಇನ್ನು ಮುಂದೆ ಗ್ರಂಥಾಲಯಕ್ಕೆಂದು ಸಂಗ್ರಹವಾಗುವ ತೆರಿಗೆಯನ್ನು ಗ್ರಂಥಾಲಯದ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದು ಒತ್ತಾಯಿಸಿದ್ದೇನೆ” ಎಂದು ಹೇಳಿದರು.

ಈ ಎಲ್ಲ ಸಮಸ್ಯೆಗಳ ಬಗ್ಗೆ ಹೆಸರು ಹೇಳಲಿಚ್ಚಿಸದ ಹಿರಿಯ ಪ್ರಕಾಶಕರೊಬ್ಬರು ಮಾತನಾಡಿ, “ನೋಡಿ ಎಲ್ಲಿ ಹಣ ಇರುತ್ತೋ ಅಲ್ಲೆಲ್ಲಾ ಭ್ರಷ್ಟಾಚಾರ ಇರುತ್ತದೆ. ಆದರೆ ಅಕ್ಷರದ ಹೆಸರಿನಲ್ಲಿ, ಸಾಹಿತ್ಯದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಮನಸ್ಸಿಗೆ ತೀರಾ ನೋವುಂಟು ಮಾಡಿದೆ. ಕೇವಲ ಪುಸ್ತಕದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಬಹುದು ಎಂದರೆ ಯಾರೂ ಸಹ ನಂಬುವುದಿಲ್ಲ. ಆದರೆ ಇದು ನಗ್ನ ಸತ್ಯ. ಗ್ರಂಥಾಲಯ ಇಲಾಖೆಯಲ್ಲಿರುವ ಗುಮಾಸ್ತನೂ ಕೂಡ ಕೋಟಿ ಕುಳವಾಗಿದ್ದಾನೆ. ಗ್ರಂಥಾಲಯದ ನಿರ್ದೇಶಕರಿಂದ ಹಿಡಿದು ಪ್ರಕಾಶಕರವರೆಗೆ ಎಲ್ಲರೂ ಭ್ರಷ್ಟರೇ ಆಗಿದ್ದಾರೆ. ಒಂದು ಸರ್ಕಾರಿ ಕಚೇರಿ ಹೇಗಿರುತ್ತದೋ ಹಾಗೆಯೇ ಈ ಇಲಾಖೆಯೂ ಇದೆ. ಇದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲ. ಒಬ್ಬರೇ ಪ್ರಕಾಶಕರು ಹತ್ತಾರು ಹೆಸರುಗಳನ್ನ ನೋಂದಾಯಿಸಿ ಅನುದಾನ ಪಡೆಯುತ್ತಿದ್ದಾರೆ.

ಇದು ಇಲಾಖೆಯ ಸಹಕಾರವಿಲ್ಲದೆ ಸಾದ್ಯವಿಲ್ಲ. ಹಾಗಾಗಿ ಪ್ರಕಾಶಕರು, ಇಲಾಖೆಯ ಆಯ್ಕೆ ಸಮಿತಿ ಮತ್ತು ನಿರ್ದೇಶಕರು ಸೇರಿದಂತೆ ಎಲ್ಲರೂ ಶಾಮೀಲಾಗಿರುತ್ತಾರೆ. ಭ್ರಷ್ಟಾಚಾರ ಒಂದು ಸಮಸ್ಯೆಯಾದರೆ, ಆಡಳಿತ ಯಂತ್ರದಲ್ಲಿನ ವಿಳಂಬ, ನ್ಯಾಯಯುತ ಬಡ ಪ್ರಕಾಶಕರನ್ನು ಬೀದಿಪಾಲು ಮಾಡುತ್ತಿದೆ. ಎಷ್ಟೋ ಪುಸ್ತಕದ ಅಂಗಡಿಗಳು ಮುಚ್ಚುತ್ತಿವೆ. ಪ್ರಾಮಾಣಿಕವಾಗಿರುವವರಿಗೆ ಸಿಗಬೇಕಾದ ಯಾವುದೇ ಸವಲತ್ತು ಸಿಗುತ್ತಿಲ್ಲ. 2017ರಲ್ಲಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ, ಪುಸ್ತಕಗಳನ್ನು ತಲುಪಿಸಿ ಎಂದು ಈಗ ಆದೇಶ ಬಂದಿದೆ. ಅತಿ ದೊಡ್ಡ ಪುಸ್ತಕ ಶೋರೂಮ್ ಇದೆ ಎಂದು ಹೇಳಿಕೊಳ್ಳುವ ಪ್ರಕಾಶಕರು ಪುಸ್ತಕಗಳನ್ನು ಎಷ್ಟು ವರ್ಷಗಳು ಬೇಕಾದರೂ ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ ಸಾಮಾನ್ಯ ಪ್ರಕಾಶಕರು? ಇದರ ಜೊತೆಗೆ ಪ್ರಕಾಶಕರು ತಮ್ಮ ಪುಸ್ತಕವನ್ನು ನೋಂದಾಯಿಸಿಕೊಂಡಿದ್ದರೆ ಮಾತ್ರ ಇಲಾಖೆಗೆ ಅರ್ಜಿ ಸಲ್ಲಿಸಲು ಸಾಧ್ಯ. ಆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ವರ್ಷಾನುಗಟ್ಟಲೇ ಸಮಯ ಹಿಡಿಯುತ್ತದೆ. ಹಾಗಾಗಿ ಪ್ರಕಾಶಕರು ಮತ್ತು ಲೇಖಕರು ಇದರಿಂದ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ” ಎನ್ನುತ್ತಾರೆ.

ಈ ಮೇಲಿನ ಎಲ್ಲಾ ಅಭಿಪ್ರಾಯಗಳನ್ನೂ ಒಟ್ಟು ಮಾಡಿ ಹೇಳುವುದಾದರೆ, ಇದು ನೋಡುವುದಕ್ಕೆ ಸಣ್ಣ ಇಲಾಖೆಯಂತೆ ಕಂಡುಬಂದರೂ, ಪ್ರಸಕ್ತ ನಿರ್ದೇಶಕರು ಎಲ್ಲ ಆರೋಪಗಳನ್ನು ನಿರಾಕರಿಸಿದರೂ, ದೊಡ್ಡ ಮೊತ್ತದ ಅವ್ಯವಹಾರದ ವಾಸನೆಯಂತೂ ಬಡಿಯುತ್ತದೆ. ಆದರೆ ಸಮಾಜಕ್ಕೆ ಮೌಲ್ಯ ತುಂಬಬೇಕಾದ ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿದೆ ಎನ್ನುವುದು ವಿಪರ್ಯಾಸ. ಇಂದಿನ ಪ್ರಪಂಚದಲ್ಲಿ ಸಾಹಿತ್ಯ ಎನ್ನುವುದು (ಕೆಲವರಿಗೆ ಮಾತ್ರ) ಪಕ್ಕಾ ಬಿಜಿನಸ್ ಆಗಿದೆ. ಇದಕ್ಕಾಗಿ ಯಾವುದೆ ಮಟ್ಟದಲ್ಲಿ ಅವ್ಯವಹಾರ ಮಾಡಲು ಹೇಸುವುದಿಲ್ಲ ಕೆಲವರು. ಹೀಗೆ ಹೇಳುತ್ತಿದ್ದರೆ ಆರೋಪದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎನ್ನುತ್ತಾರೆ ಹಿರಿಯ ಪತ್ರಕರ್ತರು.


ಇದನ್ನೂ ಓದಿ: ತಾರಾ ದಂಪತಿಯ ಖಾಸಗಿ ಸಂಗತಿಗಳನ್ನೆ ಬಂಡವಾಳವಾಗಿರಿಸಿಕೊಂಡಿರುವ ಪತ್ರಿಕೋದ್ಯಮದ ನಡುವೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...