ಪಂಜಾಬ್ ಪೊಲೀಸರು ಖಲಿಸ್ತಾನಿ ನಾಯಕ ಮತ್ತು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರ ಮೇಲೆ ದಾಳಿ ನಡೆಸಿದ ಬಳಿಕ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಉತ್ತರಾಖಂಡ ಪೊಲೀಸರು ಮಂಗಳವಾರ ಗುರುದ್ವಾರಗಳು, ಹೋಟೆಲ್‌ಗಳು ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿರುವ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಿದರು.
ರುದ್ರಪುರ ನಗರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕತ್ಯಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ”ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರಿಗಾಗಿ ಜಿಲ್ಲೆಯಾದ್ಯಂತ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
”ಅಮೃತಪಾಲ್ ಸಹವರ್ತಿಗಳಿಂದ ಬಂದ ಮಾಹಿತಿ ಪ್ರಕಾರ ಸಿಂಗ್ ಮತ್ತು ಅವರ ಸಹಚರರು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಪೊಲೀಸರು ಉತ್ತರಾಖಂಡದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು” ಎಂದು ಅವರು ಹೇಳಿದರು.
ಇದನ್ನೂ ಓದಿ: 80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿ ಹೇಗೆ ಸಾಧ್ಯ?: ಸರ್ಕಾರಕ್ಕೆ ಪಂಜಾಬ್-ಹರಿಯಾಣ ಹೈಕೋರ್ಟ್ ಪ್ರಶ್ನೆ
ಅವರು ನೇಪಾಳಕ್ಕೆ ಪರಾರಿಯಾಗದಂತೆ ಭಾರತ-ನೇಪಾಳ ಗಡಿಯಲ್ಲಿ ಗುಪ್ತಚರ ಸಂಸ್ಥೆಗಳೂ ಕೂಡ ತೀವ್ರ ನಿಗಾ ಇರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
”ಅಮೃತಪಾಲ್ ಸಿಂಗ್ ಹಾಗೂ ಆತನ ಸಹಾಯಕರು ಬೇಕಾಗಿದ್ದಾರೆ” ಎಂದು ಪಂಜಾಬ್‌ನಾದ್ಯಂತ ಪೊಲೀಸರು ಪೋಸ್ಟರ್‌ಗಳನ್ನು ಹಾಕಿದ್ದಾರೆ.
ಖಲಿಸ್ತಾನಿ ನಾಯಕ ಮತ್ತು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಪಂಜಾಬ್‌ನಲ್ಲಿ ತಪ್ಪಿಸಿಕೊಂಡ ವಿಚಾರವಾಗಿ ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯ ಮಂಗಳವಾರ ಎಎಪಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿತ್ತು.
”ಅಮೃತಪಾಲ್ ತಪ್ಪಿಸಿಕೊಂಡಿದ್ದಾನೆ ಎಂದರೆ ಅದು ”ಗುಪ್ತಚರ ವೈಫಲ್ಯ”ವೇ ಕಾರಣ ಎನ್ನಬಹುದು. ಆದರೆ, ನಿಮ್ಮ ಸರ್ಕಾರದಲ್ಲಿ 80,000 ಪೊಲೀಸರಇದ್ದರೂ ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡ?” ಎಂದು ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿತ್ತು.


