Homeಕರ್ನಾಟಕಸುವರ್ಣ ಸಂಭ್ರಮದಲ್ಲಿ ’ಕರ್ನಾಟಕ ಹೆಸರಿನ ನಾಮಕರಣ’; ಅಧಿಕೃತ ನಾಮಕರಣದ ಬಗ್ಗೆ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ...

ಸುವರ್ಣ ಸಂಭ್ರಮದಲ್ಲಿ ’ಕರ್ನಾಟಕ ಹೆಸರಿನ ನಾಮಕರಣ’; ಅಧಿಕೃತ ನಾಮಕರಣದ ಬಗ್ಗೆ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮಾಡಿದ ಭಾಷಣ: ‘ಹೊಸ ಹೆಸರಿನಲ್ಲಿ ಭಾವೈಕ್ಯತೆ ಇದೆ’

- Advertisement -
- Advertisement -

ಈ ದಿವಸ ನಮ್ಮ ದೇಶದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭವಾಗತಕ್ಕಂಥ ದಿವಸವಾಗಿದೆ. ಅದರ ಕಾರಣ ಏನು ಎನ್ನುವುದನ್ನು ಈ ಸಭೆಗೆ ವಿವರಿಸಿ ತಿಳಿಸಬೇಕಾದ ಅಗತ್ಯವಿಲ್ಲ.

ನಮ್ಮ ದೇಶದ ದಾರ್ಶನಿಕರು, ಮಹರ್ಷಿಗಳು, ತತ್ವಜ್ಞಾನಿಗಳು ಎಲ್ಲರೂ ಕಾಲವನ್ನು ಚಕ್ರಕ್ಕೆ ಹೋಲಿಸಿ ಇಟ್ಟಿದ್ದಾರೆ. ಚಕ್ರ ಹೇಗೆ ಒಂದೇಸಮನೆ ತಿರುಗುತ್ತದೆಯೋ, ಹಾಗೆ ತಿರುಗಿದಾಗ ಅದರಲ್ಲಿ ಜೋಡಿಸಿರತಕ್ಕಂಥ ಕಾಲುಗಳು ಹೇಗೆ ಕೆಳಗಿನಿಂದ ಮೇಲೆ, ಮೇಲಿಂದ ಕೆಳಕ್ಕೆ ತಿರುಗಿಹೋಗುತ್ತಾ ಬದಲಾವಣೆಯಾಗುತ್ತವೋ ಹಾಗೆ ದೇಶದ ಎಲ್ಲಾ ವಿದ್ಯಮಾನಗಳು ಕಾಲಚಕ್ರದಂತೆ ಯುಗಯುಗಕ್ಕೂ ತಿರುಗುತ್ತಾ ಬದಲಾವಣೆ ಹೊಂದುತ್ತಾ ಇರುತ್ತವೆ. ಈ ಬದಲಾವಣೆಯು ಪ್ರಕೃತಿಯಲ್ಲಿ ಕೂಡಿರತಕ್ಕಂಥ ಮತ್ತು ಅದರ ಜೊತೆಯಲ್ಲಿ ಬಂದಿರತಕ್ಕಂಥ ಒಂದು ಗುಣ. ಈ ಕಾಲಚಕ್ರದ ತಿರುಗುವಿಕೆಯನ್ನು ಯಾರಿಂದಲೂ ತಡೆದು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಅದು ಅವ್ಯಾಹತವಾಗಿ ತಿರುಗುತ್ತಾ ಇರುತ್ತದೆ. ಈ ಒಂದು ನಿಯಮದ ಪ್ರಕಾರ ಮಾನವನ ಇತಿಹಾಸದಲ್ಲಿ ಹಾಗೂ ಇಡೀ ಭೂಮಂಡಲದ ಇತಿಹಾಸದಲ್ಲಿ ಬದಲಾವಣೆಗಳು ಆಗುತ್ತಾ ಬಂದಿವೆ. ಚಕ್ರದೋಪಾದಿಯಲ್ಲಿ ಹುಟ್ಟಿವೆ. ಆ ರೀತಿ ಕೆಲವು ಕಾಲ ಉಚ್ಚ ಸ್ಥಿತಿಗೆ ಬಂದು ಮತ್ತೆ ಕೆಲವು ಕಾಲದಲ್ಲಿ ಅವನತಿ ಹೊಂದುತ್ತವೆ. ಒಂದು ಸಂಸ್ಥೆ ಅಥವಾ ಒಂದು ರಾಜ್ಯ ಅಥವಾ ಒಬ್ಬ ವ್ಯಕ್ತಿ ಎಲ್ಲರೂ ಕೂಡ ಕಾಲಚಕ್ರದ ಹಾಗೆ; ಆ ಕಾಲ ಚಕ್ರದ ನೀತಿ ಒಂದೇ ರೀತಿಯಾಗಿ ಅವೆಲ್ಲಕ್ಕೂ ಅನ್ವಯಿಸುತ್ತಾ ಬಂದಿದೆ.

ಅದೇರೀತಿಯಾಗಿ ತತ್ವಗಳಿಗೂ ಹುಟ್ಟು, ಇರುವಿಕೆ ಮತ್ತು ಅವಸಾನ ಇರುತ್ತದೆ ಎನ್ನುವುದನ್ನು ದೊಡ್ಡವರು, ಜ್ಞಾನಿಗಳು ಹೇಳಿದ್ದಾರೆ. ನಾವು ಎಷ್ಟೋ ತತ್ವಗಳನ್ನು, ವಿಚಾರಗಳನ್ನು ಕಾಲಕಾಲಕ್ಕೆ ಸಾರುತ್ತಾ ಇದ್ದೇವೆ. ಉದಾಹರಣೆಗೆ ಸಮಾಜವಾದವೆಂದು ಹೇಳುತ್ತೇವೆ. ಕಮ್ಯುನಿಸಂ ಎಂದು ಹೇಳುತ್ತೇವೆ, ಪ್ರಜಾಪ್ರಭುತ್ವವೆಂದು ಹೇಳುತ್ತೇವೆ. ರಾಜತ್ವವೆಂದು ಹೇಳುತ್ತೇವೆ. ಸಾಮಾಜಿಕ ಕ್ಷೇತ್ರದಲ್ಲಾಗಲಿ, ಆರ್ಥಿಕ ಕ್ಷೇತ್ರದಲ್ಲಾಗಲೀ, ರಾಜಕೀಯ ಕ್ಷೇತ್ರದಲ್ಲಾಗಲೀ ಈ ಎಲ್ಲ ತತ್ವಗಳು ನಮ್ಮ ದಾರ್ಶನಿಕರ ದೃಷ್ಟಿಯಲ್ಲಿ ಒಂದಲ್ಲ ಒಂದು ಕಾಲದಲ್ಲಿ ಯಾವುದೇ ಪ್ರಮಾಣದಲ್ಲಾದರೂ ಈ ಪ್ರಪಂಚದ ಇತಿಹಾಸದಲ್ಲಿ ಹುಟ್ಟಿವೆ. ಕೆಲವು ಕಾಲ ಬದುಕಿವೆ; ತದನಂತರ ಅವಸಾನವನ್ನು ಪಡೆದಿವೆ. ಹಾಗೆಂದಮೇಲೆ ನಾನು ಮೊದಲೇ ತಿಳಿಸಿದ ಹಾಗೆ ವ್ಯಕ್ತಿಗಾಗಲೀ, ಸಂಸ್ಥೆಗಾಗಲಿ ಈ ಮೂರು ಅವಸ್ಥಾ ಭೇದಗಳಿವೆ. ಅದೇರೀತಿಯಾಗಿ ಒಂದು ರಾಜ್ಯಕ್ಕೂ ಇದೆ.

ಸ್ವಾತಂತ್ರ್ಯ ನಮ್ಮ ದೇಶಕ್ಕೆ ಬಂದಮೇಲೆ ದೇಶದಲ್ಲಿ ಪುನರ್‌ವಿಂಗಡಣೆ ಆಗಬೇಕು ಎನ್ನುವ ವಿಚಾರ ಬಂತು. ಬ್ರಿಟಿಷರ ಕಾಲದಲ್ಲಿ ರಾಜ್ಯಗಳ ವಿಂಗಡಣೆ ಯಾವ ರೀತಿ ಆಗಿತ್ತೋ ಅದು ಒಂದು ಗೊತ್ತಾದ, ಜನರಿಗೆ ಉಪಯುಕ್ತವಾದಂಥ, ವ್ಯವಹಾರಕ್ಕೆ ಹೊಂದಿಕೊಂಡು ಹೋಗತಕ್ಕಂಥ ಸಿದ್ಧಾಂತದ ಮೇಲೆ ಆಗಿರಲಿಲ್ಲ. ಬ್ರಿಟಿಷರ ಸಾಮ್ರಾಜ್ಯ ಪ್ರಬಲವಾಗಿ ನಡೆದುಕೊಂಡುಹೋಗುವ ದೃಷ್ಟಿಯಿಂದ ಮಾತ್ರ ಈ ವಿಂಗಡಣೆ ಇತ್ತು. ಅದು ಸ್ವಾತಂತ್ರ್ಯಾನಂತರ ಜನಸಾಮಾನ್ಯರು ಮತ್ತು ಪ್ರಜಾಸತ್ತೆ ಪುಷ್ಟಿಯಾಗಿ ಬೆಳೆಯುವ ದೃಷ್ಟಿಯಿಂದ, ಜನತೆಯ ಮತ್ತು ಸರ್ಕಾರದ ವ್ಯವಹಾರ ಸುಗಮವಾಗಿ ನಡೆಯುವ ದೃಷ್ಟಿಯಿಂದ ಮತ್ತು ನಮ್ಮ ದೇಶ, ನಮ್ಮ ಭಾಷೆ ಮತ್ತು ಭೂಶಾಸ್ತ್ರಕ್ಕೆ ಸಂಬಂಧಪಟ್ಟಂಥ ಕೆಲವು ಗುಣಗಳು- ಇವುಗಳನ್ನ ಅನುಸರಿಸಿ ಪುನರ್‌ವಿಂಗಡಣೆಯಾಗಬೇಕು ಎಂದು ಜನತೆಯ ಅಭಿಪ್ರಾಯ ಬಂದು, ಅದರ ಪ್ರಕಾರ ನಮ್ಮ ಇಂಡಿಯಾ ದೇಶದ ಅನೇಕ ರಾಜ್ಯಗಳು ಬೇರೆಬೇರೆ ರೂಪವನ್ನೇ ವಿಂಗಡಣೆಯ ಪರಿಣಾಮವಾಗಿ ಪಡೆದವು.

ಇದರಂತೆ ನಮ್ಮ ಈ ರಾಜ್ಯವೂ ಕೂಡ ಒಂದು ದೊಡ್ಡ ಬದಲಾವಣೆಯನ್ನು ಹೊಂದಿದೆ. ಈ ಬದಲಾವಣೆ ಏನೆಂದರೆ ಮೈಸೂರು ರಾಜ್ಯ ನಮಗೆ ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ರಾಜರ ಆಳ್ವಿಕೆಯಲ್ಲಿ ಇದ್ದಂಥ ರಾಜ್ಯ, 1956ನೇ ಇಸವಿಯಲ್ಲಿ ರಾಜ್ಯಗಳ ಪುನರ್‌ವಿಂಗಡಣೆಯ ಪ್ರಕಾರ ಇದು ದೊಡ್ಡದಾಗಿ ವಿಸ್ತಾರಗೊಂಡಿತು. ಹಿಂದಿನಿಂದ ಬಂದಿದ್ದ ರಾಜ್ಯದ ಜೊತೆಗೆ, ಒಂದೇ ಭಾಷೆಯನ್ನು ಮಾತನಾಡತಕ್ಕ ಯಾವ ಕನ್ನಡ ಜನ ಬೇರೆಬೇರೆ ಭಾಗಗಳಲ್ಲಿ ಹರಿದುಹಂಚಿಹೋಗಿದ್ದರೋ ಆ ಜನರೆಲ್ಲ ಒಂದೇ ರಾಜ್ಯದಲ್ಲಿ ಕೂಡಿಕೊಂಡು ಒಂದು ಹೊಸ ವ್ಯವಸ್ಥೆ ಮೂಡಿಬಂತು. ನಮ್ಮ ಕರಾವಳಿ ಪ್ರದೇಶದಲ್ಲಿದ್ದ ಕನ್ನಡ ಜನ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗಗಳ ಜನ, ಎಲ್ಲ ಕೂಡಿದರು. ಅದೇ ರೀತಿಯಾಗಿ ಬೊಂಬಾಯಿ ಪ್ರಾಂತದ ಜನರು, ನಾವು ಸರ್ವೇಸಾಧಾರಣವಾಗಿ ಅವರನ್ನು ಬೊಂಬಾಯಿ ಕರ್ನಾಟಕದವರು ಎಂದು ಏನು ಹೇಳುತ್ತೇವೆ ಆ ಜನರೂ, ಒಟ್ಟಾಗಿ ಬಂದರು. ಹೈದರಾಬಾದು ಕರ್ಣಾಟಕದ ಬೀದರ್, ಗುಲ್ಬರ್ಗ, ರಾಯಚೂರು ಜಿಲ್ಲೆಯವರೂ ಬಂದು ಸೇರಿದರು. ಇದಕ್ಕಿಂತ ಸ್ವಲ್ಪ, ಪೂರ್ವಭಾವಿಯಾಗಿ ಬಳ್ಳಾರಿ ಜಿಲ್ಲೆ ನಮಗೆ ಬಂದು ಸೇರಿತ್ತು. ಅದೇ ರೀತಿಯಾಗಿ ಕನ್ನಡ ನಾಡಾದ ಕೊಡಗು ಜಿಲ್ಲೆ ನಮ್ಮ ರಾಜ್ಯದಲ್ಲಿ ಬಂದು ಸೇರಿತು. ಎಲ್ಲರೂ ಒಟ್ಟಾಗಿ ಸೇರಿ ಒಂದು ಹೊಸ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು.

ಈ ಮೈಸೂರು ಹೊಸ ರಾಜ್ಯ ಎಂದಾದ ಮೇಲೆ ಅಥವಾ ಇದು ವಿಶಾಲ ಮೈಸೂರು ಆದಮೇಲೆ ಈ ರಾಜ್ಯದ ಹೆಸರು ಹಿಂದಿನಿಂದ ಬಂದಂಥ ಹೆಸರು ಇರಬೇಕೆ ಅಥವಾ ಇಷ್ಟೊಂದು ಭಾಗಗಳೆಲ್ಲ ಹಿಂದೆ ಇದ್ದಂಥ ರಾಜ್ಯದಷ್ಟೇ ಹೆಚ್ಚು ಭಾಗಗಳು ಇಲ್ಲಿ ಬಂದು ಸೇರಿದ ಮೇಲೆ, ಈ ಎಲ್ಲ ಜನರೂ ಒಂದೇ ಆದ ಮೇಲೆ, ಒಂದೇ ಭಾಷೆಯ ಜನರಾದ ಮೇಲೆ ಹೆಸರಿನಲ್ಲಿ ಬದಲಾವಣೆ ಮಾಡಬೇಕೆ ಎಂಬ ವಿಚಾರ ನಮ್ಮ ಇಡೀ ರಾಜ್ಯದ ಜನತೆಯ ಮನಸ್ಸನ್ನು ಸೆಳೆದು ಆ ಒಂದು ವಿಷಯ ಇದುವರೆಗೂ ಇತ್ಯರ್ಥವಾಗದೆ ಹಾಗೆಯೇ ಕೇವಲ ವಿಚಾರದಲ್ಲಿಯೇ ಉಳಿದುಬಂದಿದೆ. ಈಗಾಗಲೇ ಇರತಕ್ಕ ಹೆಸರು ಅದೇ ಏಕೆ ಇರಬಾರದು ಎನ್ನುವ ಒಂದು ಮಾತೂ ಇದೆ. ಬದಲಾಯಿಸಬೇಕು ಎಂದು ಯಾರು ಹೇಳುತ್ತಿದ್ದಾರೆ ಎನ್ನುವ ಮಾತೂ ಇದೆ. ಇದರ ಚರಿತ್ರೆ ಬಹಳ ಹಿಂದಿನಿಂದಲೂ ಇದೆ. ನಮ್ಮ ಮೈಸೂರು ವಿಶಾಲವಾಗುವುದಕ್ಕೆ ಪೂರ್ವಭಾವಿಯಾಗಿ ಕೂಡ ಈ ಹೆಸರು ಯಾವುದು ಇರಬೇಕು, ಮುಂದೆ ವಿಶಾಲವಾದ ಮೇಲೆ ಹರಿದುಹಂಚಿಹೋಗಿದ್ದ ಭಾಗಗಳು ಒಟ್ಟಾಗಿ ಸೇರಿದ ಮೇಲೆ ಹೆಸರು ಯಾವುದು ಇರಬೇಕು ಎನ್ನುವ ಮಾತನ್ನು ಎಲ್ಲ ರಾಜಕೀಯ ಪಕ್ಷದವರೂ ಚರ್ಚೆ ಮಾಡಿದ್ದಾರೆ. ಹೆಚ್ಚಾಗಿ ಕಾಂಗ್ರೆಸ್ ಪಕ್ಷದಲ್ಲಿಯೂ ಕೂಡ ಇದರ ಬಗ್ಗೆ ಚರ್ಚೆ ನಡೆದು ಒಂದೊಂದು ಸಂದರ್ಭದಲ್ಲಿಯೂ ನಿರ್ಣಯವನ್ನು ಮಾಡಿಕೊಂಡು ಬಂದಿದ್ದಾರೆ. ಮೈಸೂರು ವಿಶಾಲವಾಗುವ ಕಾಲದಲ್ಲಿ ಹೆಸರಿನ ಬದಲಾವಣೆ ಆಗುವುದು ನಿಲ್ಲುವುದಕ್ಕೆ ಒಂದು ಕಾರಣವಿತ್ತು. ಅದು ರಾಜಕೀಯ ಕಾರಣವೂ ಹೌದು; ಮತ್ತೆ ಸನ್ನಿವೇಶದ ಒತ್ತಡವೂ ಹೌದು. ಆಗಿನ ಕಾಲದಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯ ಪುನರ್‌ವಿಂಗಡಣೆ ಮಾಡಬೇಕು ಎನ್ನುವ ವಿಷಯದಲ್ಲಿ ಆನೇಕ ಸಂದರ್ಭಗಳಲ್ಲಿ ದೊಡ್ಡ ದೊಡ್ಡ ನಾಯಕರೇ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿಕೊಂಡು ಬಂದರು. ಅನೇಕರು ಈ ಭಾಷೆಯ ಆಧಾರದ ಮೇಲೆ ರಾಜ್ಯ ಪುನರ್‌ವಿಂಗಡಣೆ ಮಾಡತಕ್ಕದ್ದು ಅಷ್ಟು ಶಾಸ್ತ್ರೀಯವಲ್ಲ ಎನ್ನುವುದನ್ನು ಕೂಡ ಹೇಳಿದ್ದರು. ಅಷ್ಟೇ ಪ್ರಬಲವಾಗಿ ಪುನರ್‌ವಿಂಗಡಣೆಯನ್ನು ಮುಖ್ಯವಾಗಿ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಮಾಡಬೇಕು ಎನ್ನುವ ವಾದ ಸಹ ಇತ್ತು. ಹಿಂದೆ ಚಿಕ್ಕದಾಗಿದ್ದ ಮೈಸೂರು ರಾಜ್ಯದಲ್ಲಿ ಕೂಡ ಇದು ವಿಶಾಲವಾಗಬೇಕೇ ಬೇಡವೇ ಎನ್ನುವುದರಲ್ಲಿ ನಾಯಕರುಗಳ ನಡುವೆ ಅಭಿಪ್ರಾಯ ಭೇದವಿತ್ತು. ಈ ಅಭಿಪ್ರಾಯ ಭೇದ ಕೊನೆಯವರೆಗೂ ಉಳಿದುಬಂತು.

ಈ ಸಂದರ್ಭದಲ್ಲಿ ಬಹುಭಾಗದ ಜನ ಯಾವ ರೀತಿ ಹೇಳುತ್ತಿದ್ದರು ಅದು ಮುಖ್ಯವಲ್ಲ, ಅದಕ್ಕೆ ವಿರೋಧ ಇದ್ದಂಥ ಜನರ ಸಂಖ್ಯೆ ಕಡಿಮೆ ಇದ್ದರೂ ಒಂದು ಪ್ರಬಲವಾದ ವಿರೋಧವಿತ್ತು ಎಂದು ನನಗೆ ಗೊತ್ತು. ನಾನು ಆ ಕಾಲದಲ್ಲಿ ರಾಜ್ಯ ಎರಡು ಆಗಬೇಕು- ಆಡಳಿತ ದೃಷ್ಟಿಯಿಂದ ಶಾಸ್ತ್ರೀಯ ದೃಷ್ಟಿಯಿಂದ ಎಂದು ಹೇಳುವವರಲ್ಲಿ ಒಬ್ಬನಾಗಿದ್ದೆ. ಆ ಕಾಲದಲ್ಲಿ ಬಹುಮತ ಅಭಿಪ್ರಾಯದಿಂದ ರಾಜ್ಯ ವಿಶಾಲವಾಗತಕ್ಕದ್ದು ಮೇಲು, ಎರಡು ರಾಜ್ಯ ಮಾಡತಕ್ಕದ್ದು ಅಷ್ಟು ಯುಕ್ತವಲ್ಲ, ನಮ್ಮ ಕನ್ನಡ ಜನತೆಯ ದೃಷ್ಟಿಯಿಂದ ಅವರ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಅವರ ಭಾವೈಕ್ಯತೆಯ ದೃಷ್ಟಿಯಿಂದ ಸಂಸ್ಕೃತಿ ಬೆಳೆವಣಿಗೆಯ ದೃಷ್ಟಿಯಿಂದ ಎರಡು ರಾಜ್ಯ ಆಗತಕ್ಕಂಥದ್ದು ಸಾಧುವಲ್ಲ ಎನ್ನುವ ಅಭಿಪ್ರಾಯವನ್ನು ಬಹು ಜನರು ತೀರ್ಮಾನ ಮಾಡಿದರು. ಆ ತೀರ್ಮಾನಕ್ಕೆ ತಲೆಬಾಗಿ, ಅಭಿಪ್ರಾಯ ಬೇರೆ ಇದ್ದರೂ ಅದನ್ನು ಒಪ್ಪಿ ನಡೆದುಕೊಂಡು ಬಂದಿರತಕ್ಕಂಥ ಕೆಲವರಲ್ಲಿ ನಾನೂ ಒಬ್ಬ.

ನಿಜಲಿಂಗಪ್ಪ

ಆ ಕಾಲದಲ್ಲಿ ಭಿನ್ನ ಅಭಿಪ್ರಾಯ ಇಷ್ಟೊಂದು ತೀವ್ರವಾಗಿ, ಬದಲಾವಣೆಯಾಗುವುದಕ್ಕೆ ವ್ಯತಿರಿಕ್ತವಾಗಿದ್ದಾಗ, ಆಗಿನ ಕಾಲದ ರಾಜಕಾರಣಿಗಳು, ಮುಖಂಡರುಗಳು, ಈ ಹೆಸರಿನ ಬದಲಾವಣೆಯ ವಿಚಾರದಲ್ಲಿ ಸ್ವಲ್ಪ ನಿಧಾನವಾಗಿ ಹೆಜ್ಜೆ ಇಡೋಣ ಎಂದು ಹೇಳಿ ಅದನ್ನು ಅಲ್ಲಿಗೇ ಕೈಬಿಟ್ಟರು. ಮೊದಲು ಕನ್ನಡ ಜನ ಎಲ್ಲಾ ಒಂದು ಕಡೆ ಸೇರೋಣ. ಈ ಒಂದು ಕಾರ್ಯ ಮುಖ್ಯವಾದುದು, ಅದು ಆಗಲಿ, ಆನಂತರ ಹೆಸರಿನ ಬದಲಾವಣೆಯ ಬಗ್ಗೆ ನಾವು ನಿಧಾನವಾಗಿ ಯೋಚನೆ ಮಾಡಿ, ಇತರರು ಇದನ್ನು ಒಲಿದು ಒಪ್ಪುವ ರೀತಿ ಮಾಡಿ ಬದಲಾಯಿಸೋಣ ಎಂದು ಅದನ್ನು ಹಾಗೇ ಇಟ್ಟುಕೊಂಡರು. 1956ನೇ ಇಸವಿಯಿಂದ ಈಚೆಗೆ, ಹೆಸರಿನ ಬದಲಾವಣೆಯ ಬಗ್ಗೆ ಇದೇ ಶಾಸನಸಭೆಯಲ್ಲಿ ಅನೇಕ ವೇಳೆ ಠರಾವುಗಳು ಬಂದು ಚರ್ಚೆ ಆಗಿವೆ. 1962ರ ಚುನಾವಣೆ ನಡೆದಮೇಲೆ ಒಂದು ಸಾರಿ ಈ ಸಭೆಯಲ್ಲಿ ಠರಾವು ಬಂದು ತಿಂಗಳುಗಟ್ಟಲೆ ಚರ್ಚೆ ನಡೆಯಿತು. ಆದರೂ ಅಂತ್ಯ ತೀರ್ಮಾನ ಆಗದೆ ಹಾಗೆಯೇ ಉಳಿಯಿತು. ಶಾಸನಸಭೆ ಅಥವಾ ಆಡಳಿತ ನಡೆಸುತ್ತಾ ಇದ್ದಂಥ ಪಕ್ಷ ಯಾವ ರೀತಿಯ ಒಂದು ತೀರ್ಮಾನವನ್ನೂ ತೆಗೆದುಕೊಳ್ಳಲಿಲ್ಲ ಎಂದು ಹೇಳಿದಾಗ, ಈ ವಿಷಯ ಕೊನೆಗೊಳ್ಳುವುದಿಲ್ಲ. ಜನತೆ ಒಂದು ಕಡೆ ಹೆಸರು ಬದಲಾವಣೆ ಆಗಬೇಕು ಎಂದು ಇಚ್ಛೆ ಪಡುತ್ತಾ ಬಂದಿದ್ದರೆ, ಶಾಸನಸಭೆಯ ಆಡಳಿತ ಪಕ್ಷದವರು ಇದನ್ನು ಮುಂದೂಡಿಕೊಂಡು ಬಂದಿದ್ದಾರೆ. ಇಂಥ ಒಂದು ಪರಿಸ್ಥಿತಿ ನಮ್ಮ ದೇಶದಲ್ಲಿ ಕೆಲವು ವರ್ಷಗಳವರೆಗೆ ನಡೆದುಕೊಂಡು ಬಂತು.

1967ನೇ ಮಹಾ ಚುನಾವಣೆಗಿಂತ ಮುಂಚೆ. ಇದೇ ಶಾಸನಸಭೆಯಲ್ಲಿ ಈ ಠರಾವು ಚರ್ಚೆಗೆ ಬಂತು. ಹೆಸರು ಕರ್ಣಾಟಕ ಆಗಬೇಕು ಎಂದು ಬಂದಂಥ ಠರಾವು ಚರ್ಚೆಯಲ್ಲಿಯೇ ಮುಕ್ತಾಯವಾಯಿತು. ಆಗ ನಾನು ಈ ಸಭೆಯ ಸದಸ್ಯನಾಗಿದ್ದೆ. ಅಷ್ಟೇ ಅಲ್ಲದೆ, ಆಗಿನ ಶ್ರೀ ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಒಬ್ಬ ಮಂತ್ರಿಯೂ ಆಗಿದ್ದೆ. ಆಗ ನಡೆದಂಥ ಕೆಲವು ಪ್ರಕರಣಗಳನ್ನು ತಮ್ಮ ಅಪ್ಪಣೆ ಪಡೆದು ಈ ಸಂದರ್ಭದಲ್ಲಿ ಸ್ಮರಿಸಿದರೆ ತಪ್ಪಾಗಲಾರದು.

ಇದನ್ನೂ ಓದಿ: 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ ರಾಜ್ಯ ಸರಕಾರ

ತಮಗೆ ಗೊತ್ತಿರುವ ಹಾಗೆ, ನನಗೆ ತಿಳಿದಿರುವ ಹಾಗೆ, ಯಾವ ಒಂದು ಪಕ್ಷ ಬಹುಮತ ಪಡೆದು ಆಡಳಿತ ನಡೆಸುತ್ತದೆಯೋ, ಆ ಪಕ್ಷ ಮನಸ್ಸು ಮಾಡದೆಹೋದರೆ, ಇಂಥದೆಲ್ಲ ಕಾರ್ಯಗತವಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ಆಡಳಿತ ಪಕ್ಷವಾಗಿದ್ದಂಥ, ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ತೆಗೆದುಕೊಂಡು ಬಹಳ ಚರ್ಚೆ ನಡೆಸಿತು. ಆ ಚರ್ಚೆಯಲ್ಲಿ ಯಾವ ಹೆಸರು ಇಡಬೇಕು ಎನ್ನುವುದರಲ್ಲಿ ಅಭಿಪ್ರಾಯ ಭೇದ ಬಂತು. ’ಕರ್ನಾಟಕ’ ಎಂದು ಹೆಸರು ಇಡಬೇಕೇ, ’ಮೈಸೂರು-ಕರ್ನಾಟಕ’ ಎಂದು ಇಡಬೇಕೇ, ’ಮೈಸೂರು ಕನ್ನಡ ನಾಡು’ ಎಂದು ಇಡಬೇಕೇ, ಎಂದು ಆ ಪಕ್ಷದಲ್ಲಿ ಚರ್ಚೆ ಬಹಳವಾಗಿ ಬೆಳೆದು, ಎಲ್ಲರನ್ನೂ ಸೇರಿಸಿ ಒಂದು ಕಾಜಿನ್ಯಾಯ ಆದ ಹಾಗೆ ಆಯಿತು. ’ಮೈಸೂರು ಕನ್ನಡನಾಡು’ ಎಂದು ಇಡೋಣ ಎಂದು ಕೆಲವರು ಸೂಚಿಸಿದರು. ನನಗೆ ಜ್ಞಾಪಕವಿರುವ ಹಾಗೆ ಇದೇ ಒಂದು ಅಂತ್ಯ ಅಭಿಪ್ರಾಯವಾಗಿ ಬಂತು. ಆಗ ನಾನು ಮಾತ್ರ ನಮ್ಮ ಪಕ್ಷದ ಸಭೆಯಲ್ಲಿ ಹೇಳಿದೆ. ಈ ವಿಚಾರದಲ್ಲಿ ನನ್ನ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನೀವು ಅವಕಾಶ ಕೊಡಬೇಕು ಎಂದು. ಅದೇ ರೀತಿ ಪಕ್ಷ ತೀರ್ಮಾನ ಮಾಡಿತು. ನನ್ನ ಸ್ವಾತಂತ್ರ್ಯವನ್ನು ಸಭೆಯಲ್ಲಿ ಉಪಯೋಗ ಮಾಡಿಕೊಂಡು ಇಲ್ಲಿ ಠರಾವನ್ನು ಈಗ ತರುವುದು ಸರಿಯಲ್ಲ ಎಂದು ಹೇಳಿ ಪ್ರಬಲವಾಗಿ ವಾದಮಾಡಿದೆ. ಇದನ್ನು ಈಗ ಕೈಬಿಡಬೇಕು. ಇದನ್ನು ತೆಗೆದುಕೊಳ್ಳುವ ಕಾಲ ಈಗ ಅಲ್ಲ ಎಂದು ಹೇಳಿದೆ. ಕಾರಣಾಂತರದಿಂದ ಆ ಸಭೆಯಲ್ಲಿ ಚರ್ಚೆ ಮುಂದುವರಿಯಲಿಲ್ಲ ಅಥವಾ ಒಂದು ಅಂತ್ಯ ತೀರ್ಮಾನಕ್ಕೂ ಬರಲಿಲ್ಲ.

1969ನೆಯ ಇಸವಿಯವರೆಗೆ ಪುನಃ ಹೆಸರು ಬದಲಾವಣೆಯಾಗಬೇಕು. ಎನ್ನುವ ಬಗ್ಗೆ ಠರಾವು ಬಂತೋ ಏನೋ ನನಗೆ ಜ್ಞಾಪಕವಿಲ್ಲ. ಬಂದಿದ್ದರೆ, ತೀರ್ಮಾನವಾಗಿಲ್ಲ. ಚರ್ಚೆ ಆಗುವುದು, ಮುಕ್ತಾಯವಾಗುವುದು ಹಾಗೇ ನಡೆದುಬಂತು. ಅದಕ್ಕೆ ಕಾರಣ ಏನೆಂದರೆ, ನನಗೆ ತಿಳಿದ ಹಾಗೆ, ಆಡಳಿತಸೂತ್ರವನ್ನು ಹಿಡಿದು, ಕೆಲಸ ಮಾಡತಕ್ಕಂಥ ಪಕ್ಷದಲ್ಲಿ ಏಕಮುಖವಾದ ಅಭಿಪ್ರಾಯ ಅಥವಾ ಒಮ್ಮತ ಬರಲಿಲ್ಲ. ಅಭಿಪ್ರಾಯ ಭೇದ ಇದ್ದೇ ಇತ್ತು ಅಥವಾ ಎಲ್ಲರೂ ಒಪ್ಪುವಂಥ ಪರಿಸ್ಥಿತಿ ಇರಲಿಲ್ಲ. ಆದ್ದರಿಂದ ಹಾಗೆಯೇ ಮುಂದುವರಿಯಿತು ಎಂದು ನನ್ನ ಭಾವನೆ.

1969ನೇ ಜುಲೈ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಚರಿತ್ರೆ ಬದಲಾವಣೆಯಾಯಿತು. ಅದೇರೀತಿ ಇಡೀ ಭಾರತ ದೇಶದ ರಾಜಕೀಯ ಚರಿತ್ರೆಯೂ ಕೂಡ ಬದಲಾವಣೆಯಾಯಿತು. ಅದರ ವಿಚಾರಕ್ಕೆ ಈಗ ನಾನು ಹೋಗಬೇಕಾದ ಅಗತ್ಯವಿಲ್ಲ. ಆ ಬದಲಾವಣೆ ಪರಿಣಾಮವಾಗಿ ನಾವು ಇಲ್ಲಿ ಈ ಸಭೆಯಲ್ಲಿದ್ದೇವೆ. ಆದರೆ 1972ನೇ ಇಸವಿಯ ಮಹಾ ಚುನಾವಣೆಗೆ ಮುಂಚೆ ಅಥವಾ ಅದಕ್ಕಿಂತ ಮುಂಚೆ ನಡೆದಂಥ ಮಧ್ಯಂತರ ಚುನಾವಣೆಯ ಕಾಲ. ಇದರ ಹಿನ್ನೆಲೆಯನ್ನು ಸ್ವಲ್ಪ ನಾನು ಈ ಸಂದರ್ಭದಲ್ಲಿ ಈ ಸಭೆಯ ಆವಗಾಹನೆಗೆ ತರುವುದಕ್ಕೆ ಇಷ್ಟಪಡುತ್ತೇನೆ. ಅದು ಏನೆಂದರೆ 1970-71ರಲ್ಲಿ ನಡೆದಂಥ ಮಧ್ಯಂತರ ಚುನಾವಣೆ ಕಾಲದಲ್ಲಿ ಅಲ್ಲಲ್ಲಿ ಈ ಹೆಸರು ಬದಲಾವಣೆ ಬಗ್ಗೆ ಬಹಿರಂಗವಾಗಿ ಹಾಗೂ ಅಂತರಂಗವಾಗಿ ವಾದವಿವಾದಗಳು ನಡೆಯುತ್ತಿದ್ದವು. ಮಧ್ಯಂತರ ಚುನಾವಣೆ ಆದಮೇಲೆ 1972ನೇ ಚುನಾವಣೆ ಕಾಲಕ್ಕೆ ಈ ಹೆಸರಿನ ವಿಚಾರ ಬಹಳ ಪ್ರಬಲವಾಗಿ ಜನಸಾಮಾನ್ಯರ ಮನಸ್ಸನ್ನು ಸೆಳೆಯುವುದಕ್ಕೆ, ಒಂದು ಕಾರಣವಾಯಿತು. ಈಗ ನಾವು ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿದ್ದೇವೆ, ಚುನಾವಣೆಗೆ ಮುಂಚೆ ಸುಪ್ರೀಂಕೋರ್ಟಿನ ಆಜ್ಞೆಗೆ ಮುಂಚೆ ಆರ್. ಕಾಂಗ್ರೆಸ್ ಮತ್ತು ಒ. ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿದ್ದೆವು. ಆರ್ ಕಾಂಗ್ರೆಸ್‌ನ ಕನ್‌ವೀನರಾಗಿ ನಾನು ಕೆಲಸ ಮಾಡುತ್ತಿದ್ದವನು. ಈ ರಾಜಕೀಯ ತಿಕ್ಕಾಟದಲ್ಲಿ ನಾನು ಒಂದುಕಡೆ ಮಾಡಿದಂಥ ಭಾಷಣದಿಂದ ಸ್ವಲ್ಪ ಕಿಡಿ ಹಾರಿತು. ಅದು ನಮ್ಮ ನಾಡಿನಾದ್ಯಂತ ಹರಡಿತು. ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಸೇರಿ ಒಂದು ಸಮ್ಮೇಳನ ಮಾಡಿದರು. ಆ ಸಮ್ಮೇಳನಕ್ಕೆ ನಾನು ಹೋದೆ. ಅಲ್ಲಿ ನಾನು ಹೆಸರಿನ ವಿಚಾರ ಒಂದಷ್ಟು ಪ್ರಸ್ತಾಪ ಮಾಡಿ ಈಗ ಇದನ್ನು ದೊಡ್ಡ ಸಮಸ್ಯೆ ಎಂದು ಪರಿಗಣಿಸಬೇಕಿಲ್ಲ, ಇನ್ನೂ ಮುಖ್ಯವಾದ ಸಮಸ್ಯೆಗಳು ಇವೆ, ಆದಕಾರಣ ಹೆಸರು ಬದಲಾವಣೆ ಮಾಡುವುದರಿಂದ ಎಲ್ಲಾ ಕಾರ್ಯವಾಗುತ್ತದೆ ಎಂದು ಹೇಳುವುದು ಅಷ್ಟಾಗಿ ಸರಿಯಲ್ಲ, ವೈಯಕ್ತಿಕವಾಗಿ ನಾನು ಯಾವುದಕ್ಕೂ ಅಂಟಿಕೊಂಡಿಲ್ಲ, ಮಾಡಬೇಕು ಎಂದೂ ಹೇಳುವುದಿಲ್ಲ, ಮಾಡಲೇಕೂಡದು ಎಂದೂ ಹೇಳುವುದಿಲ್ಲ, ಎನ್ನುವ ಧಾಟಿಯಲ್ಲಿ ಮಾತನಾಡಿದಾಗ ಅದರ ಬಗ್ಗೆ ಬಹಳ ವ್ಯಾಖ್ಯಾನ ನಡೆದು ನಮ್ಮ ಈ ಹೆಸರಿನ ಬಗ್ಗೆ, ನೆಲದ ಬಗ್ಗೆ, ಜಲದ ಬಗ್ಗೆ ಈ ಎಲ್ಲಾ ವಿಚಾರದಲ್ಲಿ ಈ ಪಕ್ಷ ಏನಾದರೂ ನಾಳೆ ಅಧಿಕಾರಕ್ಕೆ ಬಂದರೆ ಎಲ್ಲದಕ್ಕೂ ತೊಂದರೆ ಉಂಟಾಗುತ್ತದೆ. ಈ ಪಕ್ಷದ ಮುಖಂಡರು ಆಗಿರತಕ್ಕಂಥವರು ಹೀಗೇ ಎಲ್ಲಾ ಹೇಳುತ್ತಾರೆ, ಅವರಿಗೆ ಸಮಸ್ಯೆಗಳನ್ನು ಬಗೆಹರಿಸುವ ಚೈತನ್ಯ ಇಲ್ಲ ಎಂದು ಅನ್ನುವಂಥ ಟೀಕೆಗಳು ಬಂದವು. ನಾನು ರಾಜ್ಯಾದ್ಯಂತ ಆ ಕಾಲಕ್ಕೆ ಓಡಾಟ ಮಾಡತಕ್ಕ ಸಂದರ್ಭಗಳಲ್ಲಿ ಅನೇಕ ಸಭೆಗಳಲ್ಲಿ “ನೀವು ಹೆಸರಿಗೆ ವಿರುದ್ಧವಾಗಿದ್ದೀರಿ, ಬಹಳವಾಗಿ ನಿಮ್ಮ ಮೇಲೆ ಪ್ರಚಾರ ಆಗಿದೆ ಏನು ಹೇಳುತ್ತೀರಿ?” ಎಂದು ನನ್ನನ್ನು ಪ್ರಶ್ನೆ ಮಾಡಿದರು. ಅದೇ ರೀತಿ ನೆಲದ ವಿಚಾರ, ಜಲದ ವಿಚಾರ ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ನಾನು ಸ್ಪಷ್ಟವಾಗಿ ಕನ್ನಡ ಜನತೆ ಮುಂದೆ ಒಂದು ಮಾತು ವ್ಯಕ್ತಪಡಿಸಿದ್ದೆ. ನನ್ನ ವೈಯಕ್ತಿಕವಾದ ವಿಚಾರದಲ್ಲಿ ಯಾವ ಕಾಲಕ್ಕೂ ನಾನು ನನ್ನ ಮನಸ್ಸನ್ನು ಕೆಡಿಸಿಕೊಂಡವನಲ್ಲ ಅಥವಾ ವಿಕಾರ ಹೊಂದತಕ್ಕಂಥ ವ್ಯಕ್ತಿ ಅಲ್ಲ, ವೈಯಕ್ತಿಕ ಅಭಿಪ್ರಾಯ ಏನೇ ಇರಲಿ, ನಾನು ಇಂದಿಗೂ ಶೇಕ್‌ಸ್ಪಿಯರ್ ಹೇಳಿದಂತೆ ‘What is there in a name?’ ಎಂಬ ಅಭಿಪ್ರಾಯ ಇರುವವನು. ಆದರೆ ಇದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಅಭಿಪ್ರಾಯ ಏನೇ ಇರಲಿ, ಜನಸಾಮಾನ್ಯರ ಅಭಿಪ್ರಾಯದಲ್ಲಿ ಅವರಿಗೆ ಈ ಬದಲಾವಣೆಯಿಂದ ಒಂದು ಆನಂದ, ಒಂದು ತೃಪ್ತಿ, ಒಂದು ಸಮಾಧಾನ, ಒಂದು ಭಾವೈಕ್ಯತೆ ಬರುವುದಾದರೆ ನಮಗೆ ಅದರಿಂದ ತೊಂದರೆಯಾಗುವುದು ಏನೂ ಇಲ್ಲ, ಸಂತೋಷ ಎಂದು ಹೇಳುವುದರ ಜೊತೆಗೆ, ನಾಳೆ ಚುನಾವಣೆ ಆದಮೇಲೆ ನಮ್ಮ ಪಕ್ಷ ಬಹುಮತ ಪಡೆದು ಬಂದು ಅಧಿಕಾರವನ್ನು ಪಡೆಯುವುದಾದರೆ, ಸಭೆಯಲ್ಲಿ ಚರ್ಚೆಮಾಡಿ, ಶಾಸನಸಭೆಯಲ್ಲಿ ಜನತೆಯ ಪ್ರತಿನಿಧಿಗಳು ಯಾರು ಇರುತ್ತಾರೆ ಅವರ ಅಭಿಪ್ರಾಯದಂತೆ ಹೋಗುವುದಕ್ಕೆ ನನ್ನ ಅಡ್ಡಿ ಇಲ್ಲ. ಹೆಸರು ಬದಲಾವಣೆ ಮಾಡೋಣ, ಬಹುಮತ ಅಭಿಪ್ರಾಯದಂತೆ ಹೋಗೋಣ ಎನ್ನುವ ಮಾತನ್ನು ಜನತೆ ಮುಂದೆ ನಮ್ಮ ಪಕ್ಷದ ಪರವಾಗಿ ಹೇಳಿದ್ದು ಉಂಟು.

ನಾನು ಮತ್ತು ನೀವು ಜನತೆಗೆ ಕೊಟ್ಟಂಥ ಮಾತನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಇವೊತ್ತು ತಮ್ಮ ಎಲ್ಲರ ಅಪ್ಪಣೆ ಪಡೆದು ಈ ಒಂದು ಠರಾವನ್ನು ನಾನು ಈ ಸಭೆ ಮುಂದೆ ಮಂಡಿಸುತ್ತಿದ್ದೇನೆ. ಮತ್ತೆ ಈ ಹೆಸರು ಯಾವುದು ಇರಬೇಕು ಎನ್ನುವ ಬಗ್ಗೆ ಕೂಡ ನಮ್ಮ ದೇಶದಲ್ಲಿ ಬಹಳ ಕಾಲ ಚರ್ಚೆ ನಡೆದಿದೆ. ಕರ್ಣಾಟಕ ಶಬ್ದ ವಿಚಾರದಲ್ಲಿ ಒಂದು ಕಾಲಕ್ಕೆ ವಿಪುಲವಾದ ಚರ್ಚೆ ನಡೆಯುತ್ತಿತ್ತು. ’ಕರ್ನಾಟಕ’ ಇರಬೇಕೆ ಅಥವಾ ’ಕರ್ಣಾಟಕ’ ಇರಬೇಕೆ ಎನ್ನುವ ಬಗ್ಗೆ ಸಾಹಿತಿಗಳಲ್ಲಿ ದೊಡ್ಡ ಜಿಜ್ಞಾಸೆ ನಡೆದು ಅದು ಎಲ್ಲಿಯವರೆಗೆ ಹೋಯಿತು ಎಂದರೆ ತಿರುಪತಿ ದೇವಸ್ಥಾನದಲ್ಲಿ ತಿಮ್ಮಪ್ಪನಿಗೆ ನಾಮ ಹಾಕುವುದು ’ಯು’ ಷೇಪ್ ಇರಬೇಕೇ ಅಥವಾ ’ವಿ’ ಷೇಪ್ ಇರಬೇಕೇ ಎಂದು ಸುಪ್ರೀಂಕೋರ್ಟಿಗೆ ಹೋಗಿ ತೀರ್ಮಾನವಾದ ರೀತಿ. ಆ ಮಟ್ಟದವರೆಗೂ ಹೋಯಿತು. ಈ ಹೆಸರಿನ ಬಗ್ಗೆ ಆಗಿನ ಕಾಲದಲ್ಲಿ ಪ್ರಾರಂಭವಾದ ಚರ್ಚೆ ಇದುವರೆಗೂ ಒಂದೇ ಸಮನೆ ಚರ್ಚೆಯಾಗುತ್ತಾ ಬಂದು ತೀರ್ಮಾನವಾಗದೇ ಅದು ಹಾಗೇ ಉಳಿದುಬಂತು. ತದನಂತರ ಏನಾಯಿತು? ಇದರಲ್ಲಿ ’ಕರ್ನಾಟಕ’ ಬೇಡ, ’ಕನ್ನಡನಾಡು’ ಇಡಬಹುದು ಎಂದೂ ಕೆಲವು ಕಡೆ ಚರ್ಚೆಯಾಯಿತು. ಇವೆಲ್ಲಾ ಚರ್ಚೆಗಳಿಂದ ನಾನು ಅರಿತಿರುವ ಪ್ರಕಾರ, ಇದರಲ್ಲಿ ಈ ಯಾವ ಚರ್ಚೆಗೂ ಅವಕಾಶವಿಲ್ಲ ಮತ್ತು ಬದಲಾವಣೆಯನ್ನು ಮಾಡುವುದು ಎಂದರೆ ’ಕರ್ನಾಟಕ’ ಎಂದೇ ಮಾಡಬಹುದು ಎಂದು ಒಂದು ನಿರ್ಣಯವನ್ನು ಇಲ್ಲಿ ಮಂಡಿಸಿದ್ದೇನೆ. ಕರ್ನಾಟಕ ಎನ್ನುವ ಹೆಸರನ್ನು ನಮ್ಮ ನಾಡಿನ ರಾಜರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಮೈಸೂರು ರಾಜರು ಇಟ್ಟುಕೊಂಡಿದ್ದರು. ಇದರಂತೆ ವಿಜಯನಗರದ ರಾಜರು ಹೊಯ್ಸಳರು ಹಾಗೂ ಕದಂಬರು ಮೊದಲಾದವರೂ ಕರ್ನಾಟಕ ಸಿಂಹಾಸನಾಧೀಶ್ವರರೇ, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬಳಕೆಯಲ್ಲಿ ಬರುತ್ತಲೇ ಇತ್ತು. ಸಾಹಿತಿಗಳೂ ಕರ್ನಾಟಕ ಎಂಬ ಹೆಸರನ್ನು ಇಡಬಹುದೆಂದು ಹೇಳಿದ್ದರು. ಅದರಂತೆ ಇಲ್ಲಿ ಈ ನಿರ್ಣಯವನ್ನು ಮಂಡಿಸಿದ್ದೇನೆ. ಈ ವಿಷಯದಲ್ಲಿ ಸಾಹಿತಿಗಳು ಏನೇನು ಅಭಿಪ್ರಾಯಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ಕೊಟ್ಟಿದ್ದಾರೆ ಅವನ್ನೆಲ್ಲಾ ಓದಿಕೊಂಡು ಬಂದಿದ್ದೇನೆ. ಈಗ್ಗೆ ಒಂದೂವರೆ ತಿಂಗಳ ಹಿಂದೆ ಇಂತಹ ಒಂದು ಠರಾವನ್ನು ನಮ್ಮ ಸಚಿವ ಸಂಪುಟದಲ್ಲಿ ಬಹುಜನ ಶಾಸಕರು ಅಭಿಪ್ರಾಯಪಟ್ಟಂತೆ ಹಾಗೂ ಹೆಚ್ಚು ಜನರು ಅಭಿಪ್ರಾಯಪಡುವಂತೆ ನಮ್ಮ ರಾಜ್ಯಕ್ಕೆ ಒಂದು ಶಾಶ್ವತವಾದ ಹೆಸರನ್ನು ಇಟ್ಟು ಈಗಿನ ಹೆಸರನ್ನು ಬದಲಾವಣೆ ಮಾಡಬಹುದು ಎನ್ನುವ ಒಂದು ತೀರ್ಮಾನಕ್ಕೆ ಬಂದೆವು. ಇಂತಹ ಒಂದು ಬಹುಮತ ಅಭಿಪ್ರಾಯ ಬಂದಮೇಲೆ ನಮ್ಮ ಪಕ್ಷದಲ್ಲಿ ಕೂಡ ಇದನ್ನು ನಾವು ಚರ್ಚೆ ಮಾಡಿ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷದವರು ಎಲ್ಲರೂ ಒಪ್ಪಿದಂತೆ ಠರಾವನ್ನು ಇಲ್ಲಿ ತಂದಿದ್ದೇನೆ. ಒಂದು ಸಂತೋಷದ ವಿಚಾರ ಇಲ್ಲಿ ಹೇಳಬೇಕಾಗಿದೆ: ನಮ್ಮ ಪಕ್ಷದಲ್ಲಿ ಕೆಲವು ವಿಚಾರದಲ್ಲಿ ಅಭಿಪ್ರಾಯ ಭೇದಗಳು ಇದ್ದರೂ ಇದರಲ್ಲಿಲ್ಲ. ಎಲ್ಲರೂ ಇಂತಹ ಒಂದು ಬದಲಾವಣೆಯನ್ನು ಮಾಡಲು ಒಪ್ಪಿದ್ದಾರೆ. ಇದರಲ್ಲಿ ಕೆಲವರು ’ಮೈಸೂರು’ ಎಂದು ಇರಬಹುದು ಇಲ್ಲವೇ ’ಕನ್ನಡನಾಡು’ ಎಂದು ಇರಬಹುದು ಎಂದು ಹೇಳುವವರು ಅಥವಾ ’ಮೈಸೂರು ಕನ್ನಡನಾಡು’ ಇಲ್ಲವೆ ’ಮೈಸೂರು-ಕರ್ಣಾಟಕ’ ಎಂದು ಹೇಳುವ ಅಭಿಪ್ರಾಯದವರೂ ಇರಬಹುದು, ಆದರೆ ಪ್ರಜಾಪ್ರಭುತ್ವ ತತ್ವದ ಒಂದು ಅಭಿಪ್ರಾಯಕ್ಕೆ ನಾವು ಕಟ್ಟು ಬಿದ್ದಿರುವುದರಿಂದ ಬಹುಮತದ ಅಭಿಪ್ರಾಯದಲ್ಲಿ ಹೆಸರು ಯಾವ ರೀತಿ ಇರಬೇಕೆಂದು ತೀರ್ಮಾನವಾಗುತ್ತದೋ ಆ ತೀರ್ಮಾನವನ್ನು ನಾವೆಲ್ಲರೂ ಒಪ್ಪಿಕೊಂಡು ಹೋಗೋಣ ಎಂದು ಎಲ್ಲರೂ ಒಂದು ದೊಡ್ಡ ಮನೋಭಾವವನ್ನು ಪ್ರದರ್ಶನ ಮಾಡಿದ್ದಾರೆ. ಇದು ಒಂದು ಸಂತೋಷದ ವಿಚಾರ. ಈ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಈ ದೇಶದ ಹೆಸರಿನ ವಿಚಾರದಲ್ಲಿ ಇಷ್ಟೊಂದು ರೀತಿಯಲ್ಲಿ ಒಮ್ಮತ ಅಭಿಪ್ರಾಯವನ್ನು, ಭೇದಭಾವಗಳೇನೇ ಇರಲಿ. ಈಗ ಪ್ರದರ್ಶನ ಮಾಡಿರುವುದು ಪ್ರಪ್ರಥಮ ಎಂದು ಇಲ್ಲಿ ತಿಳಿಸುವುದಕ್ಕೆ ನಾನು ಇಷ್ಟಪಡುತ್ತೇನೆ.

ನಮ್ಮ ಮಾನವನ ಜೀವನ ಕೇವಲ ಐಹಿಕ ಪ್ರಪಂಚದಿಂದ ಕೂಡಿದ ಜೀವನವಲ್ಲ. ಮಾನವನನ್ನು ಭಾವನಾ ಪ್ರಪಂಚ, ಕಲ್ಪನಾ ಪ್ರಪಂಚ ಹಾಗೂ ಐಹಿಕ ಪ್ರಪಂಚ, ಹೀಗೆ ನಾನಾ ಪ್ರಪಂಚಗಳನ್ನು ಕ್ರೋಢೀಕರಿಸಿಕೊಂಡವನು ಎನ್ನೋಣ. ನಾವು ಈಗ ಐಹಿಕ ಪ್ರಪಂಚಕ್ಕೇ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದು. ನಾವೆಲ್ಲಾ ಮೈಸೂರು ದೇಶದಲ್ಲಿರಲಿ, ಇಲ್ಲವೇ ಕರ್ನಾಟಕ ದೇಶದಲ್ಲಿರಲಿ, ಇಡೀ ಭಾರತ ದೇಶದಲ್ಲಿ ಸೇವೆ ಮಾಡುತ್ತಿದ್ದರೂ, ಕಾಲ ಸನ್ನಿವೇಶಕ್ಕೆ ತಕ್ಕ ಹಾಗೇ ಆರ್ಥಿಕವಾಗಿ ಐಹಿಕ ವಿಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಇದು ಮನುಷ್ಯನಿಗೆ ತೃಪ್ತಿ ತರುವ ವ್ಯವಹಾರವಾಗಿದ್ದರೂ ಒಂದು ರೀತಿಯಲ್ಲಿ ಇದರಲ್ಲಿ ಹೊಂದಿಕೊಂಡು ಹೋಗುವ ಒಂದು ಭಾವನೆ ಬರಬೇಕು. ಇದರಿಂದ ಅವನ ಹಸಿವು ಅಥವಾ ತೃಷೆ ಇಂಗುವುದಾದರೆ ಇದರಲ್ಲಿ ಯಾವುದೇ ರೀತಿಯಾದ ತೊಡಕುಗಳನ್ನು ತರಬಾರದು ಎನ್ನುವ ಒಂದು ವಿಚಾರ ಇದರಲ್ಲಿ ಸ್ಪಷ್ಟವಾಗಿದೆ. ಒಂದು ಆನಂದವನ್ನು ಅನುಭವಿಸುತ್ತಿರುವ ಸದಸ್ಯರುಗಳನ್ನು ನೋಡಿ ನಾವೂ ಆ ಆನಂದದಲ್ಲಿ ಭಾಗಿಯಾಗಬೇಕು ಎನ್ನುವ ಒಂದು ಭಾವನೆಯಿಂದ ನಾನು ಇಲ್ಲಿ ಹೇಳುತ್ತಿದ್ದೇನೆ. ನಮ್ಮ ರಾಜ್ಯದ ಹೆಸರಿನ ಬದಲಾವಣೆಯಿಂದಾಗಿ ಅವರಿಗೆ ಒಂದು ರೀತಿಯಾದ ಆನಂದ ಹಾಗೂ ಸಂತೋಷ ಉಂಟಾಗುತ್ತದೆ ಎಂದು ನಮಗೆ ಕಾಣುತ್ತದೆ. ಬಹುಜನರು ಎಂದರೆ ಈ ದೇಶದಲ್ಲಿರುವ ಬೇರೆ ಬೇರೆ ವರ್ಗದವರೂ ಸೇರುತ್ತಾರೆ. ಅನೇಕ ಸಾಹಿತಿಗಳು ಕರ್ನಾಟಕದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಲ್ಲಿ ಹಿರಿಯರಿಂದ ಕಿರಿಯರವರೆಗೂ ಎಂದರೆ ಶ್ರೀಮಾನ್ ಬೇಂದ್ರೆಯವರು ಹಾಗೂ ರಾಷ್ಟ್ರದ ದೊಡ್ಡ ಕವಿಗಳಾದ ಶ್ರೀಮಾನ್ ಕೆ.ವಿ. ಪುಟ್ಟಪ್ಪನವರು ಮತ್ತೆ ಇತರ ಎಲ್ಲ ಸಾಹಿತಿಗಳೂ ಈಗಿರುವ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ಎಂದು ಮಾಡಬೇಕೆಂದು ಸತತವಾಗಿ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ. ಇದರಲ್ಲಿ ಬುದ್ಧಿಜೀವಿಗಳೂ ಹಾಗೂ ಇಂಟಲೆಜೆನ್‌ಷಿಯಾ ಎಂದು ಅನ್ನತಕ್ಕ ಜನ ಏನು ಇದ್ದಾರೆ ಅವರೂ ಕೂಡ ಹೆಸರು ಬದಲಾವಣೆಯಾಗಬೇಕೆಂದು ಹೇಳಿದ್ದಾರೆ. ಅನೇಕ ವಿದ್ಯಾರ್ಥಿಗಳೂ ಮತ್ತು ಮಧ್ಯಮ ವರ್ಗದ ಜನರೂ, ಈಗಿನ ಯುವಕ ಜನಾಂಗದವರೂ ಬದಲಾವಣೆಯಾಗಬೇಕೆಂದು ಹೇಳಿಕೊಂಡು ಬರುತ್ತಿದ್ದಾರೆ. ಅದೇರೀತಿ ಆಡಳಿತದಲ್ಲಿರತಕ್ಕ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿರತಕ್ಕ ಜನ ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಇಷ್ಟೊಂದು ಜನರು, ಓವರ್‌ವೆಲ್ಮಿಂಗ್ ಮೆಜಾರಿಟಿ ಎಂದು ಏನು ಹೇಳುತ್ತೇವೆ, ಎಲ್ಲ ವರ್ಗಗಳ ಜನರೂ ಹೆಸರನ್ನು ಬದಲಾವಣೆ ಮಾಡಬೇಕೆಂದು ಹೇಳುತ್ತಾ ಬಂದಿದ್ದಾರೆ. ಇದು ಅವರ ಆಸೆ. ನಾವು ಜನತಾ ಪ್ರತಿನಿಧಿಗಳಾಗಿರುವುದರಿಂದ ನಾವು ಅವರ ಆಸೆಗೆ ಅಡ್ಡಿ ತರತಕ್ಕದ್ದು ಸೂಕ್ತವಲ್ಲ ಎನ್ನುವ ತೀರ್ಮಾನಕ್ಕೆ ಬಂದು, ಇಷ್ಟೊಂದು ಜನಕ್ಕೆ ಸಂತೋಷವಾಗಬೇಕಾದರೆ ಅಂತಹ ಸಂತೋಷವಾಗಿರುವ ಜನತೆಯಲ್ಲಿ ನಾವು ಸಹ ಭಾಗಿಯಾಗೋಣ ಎಂದು, ನಮ್ಮ ಅಲ್ಪ ಸೇವೆಯನ್ನು ಮಾಡೋಣ ಎನ್ನುವ ಒಂದು ಸಂತೋಷದಿಂದ, ನಾನು ಇಲ್ಲಿ ಇಂತಹ ಒಂದು ನಿರ್ಣಯವನ್ನು ತರುವ ಅವಕಾಶ ಬಂತಲ್ಲಾ ಎಂದು ಸಂತೋಷಿಸುತ್ತೇನೆ ಮತ್ತು ಇದರಲ್ಲಿ ನಮ್ಮ ಜವಾಬುದಾರಿಯೂ ಇದೆ ಎನ್ನುವ ಮಾತನ್ನು ಹೇಳಿ ಇದನ್ನು ತಮ್ಮ ಅಪ್ಪಣೆ ಪಡೆದು ನಮ್ಮ ಈ ಸಭೆಯ ಮುಂದೆ ಇಟ್ಟಿದ್ದೇನೆ.

ಮಾನ್ಯ ಅಧ್ಯಕ್ಷರೇ, ಇದರ ಬಗ್ಗೆ ಹೆಚ್ಚುಕಾಲ ನಾನು ಭಾಷಣ ಮಾಡಬೇಕಾದ ಅಗತ್ಯವಿಲ್ಲ ಎಂದು ನನ್ನ ಭಾವನೆ. ಇದರ ಬಗ್ಗೆ ಇರುವ ಚರಿತ್ರೆ, ಎಲ್ಲವನ್ನು ಈ ಸಭೆಯಲ್ಲಿರತಕ್ಕ ಎಲ್ಲ ಮಾನ್ಯ ಸ್ನೇಹಿತರೂ ನನಗಿಂತಲೂ ಹೆಚ್ಚು ಅಭ್ಯಾಸ ಮಾಡಿದವರಾಗಿರುತ್ತಾರೆ. ಇದರ ಮೂಲಗಳನ್ನು ಉದ್ಧರಿಸಿ ಹೇಳುವವರೂ ಇದ್ದಾರೆ. ಇದನ್ನೆಲ್ಲಾ ಇಲ್ಲಿ ಹೇಳುವ ಅಗತ್ಯವಿಲ್ಲ, ಆದರೂ ಕೆಲವು ಸ್ನೇಹಿತರು ಇದರ ಬಗ್ಗೆ ಮಾತನಾಡಬಹುದು.

ಕೊನೆಯದಾಗಿ, ಇವೊತ್ತು ನಾನು ಮೊದಲೇ ಹೇಳಿದ ಹಾಗೆ ಮತ್ತೊಮ್ಮೆ ಅದನ್ನು ಇಲ್ಲಿ ಹೇಳುವುದು ಉಚಿತ ಎಂದು ಹೇಳುತ್ತಿದ್ದೇನೆ. ಕಾಲ ಒಂದು ಚಕ್ರದ ಹಾಗೆ ಸುಮಾರು 500 ಇಲ್ಲವೇ 600 ವರ್ಷಗಳ ಹಿಂದೆ ಈ ಮೈಸೂರು ರಾಜ್ಯ ಉದಯವಾಯಿತು ಎಂದು ನಾವು ಚರಿತ್ರೆಯಿಂದ ಓದಿದ್ದೇವೆ.

ಅದರಲ್ಲಿ ಬದಲಾವಣೆಯಾಗಿದ್ದರೆ ಅದು ನನಗೆ ಗೊತ್ತಿಲ್ಲ. ಮೈಸೂರು ಅನ್ನತಕ್ಕಂಥದ್ದು ಒಂದು ಕಾಲಕ್ಕೆ ಒಂದು ಚಿಕ್ಕ ಪ್ರಾಂತ್ಯವಾಗಿತ್ತು. ಮೈಸೂರು ಪಟ್ಟಣ ಏನಿದೆ ಆದು ಅಲ್ಪಸ್ವಲ್ಪ ಹೊರವಲಯವನ್ನು ಹೊಂದಿದಂಥ ಒಂದು ಚಿಕ್ಕ ರಾಜ್ಯವಾಗಿತ್ತು. ಸುಮಾರು 600 ವರ್ಷಗಳ ಹಿಂದೆ ಮೈಸೂರು ಪ್ರಾಂತ್ಯ ಪೂರ್ವಕ್ಕೆ ತಲಕಾಡಿನವರೆಗೆ, ಪಶ್ಚಿಮಕ್ಕೆ ಶ್ರೀರಂಗಪಟ್ಟಣದವರೆಗೆ ಮಾತ್ರ ಇತ್ತು. ಆಗ ಶ್ರೀರಂಗಪಟ್ಟಣ ಬೇರೆ ಪ್ರಾಂತ್ಯವಾಯಿತು. ಅಲ್ಲಿಂದೀಚೆಗೆ ಮೈಸೂರು ರಾಜ್ಯ ಒಂದಲ್ಲ ಒಂದು ಕಾರಣದಿಂದ ಕರಾವಳಿಯವರೆಗೂ ಬೆಳೆದುಕೊಂಡು ಹೋಯಿತು. ಆದರೆ ಮೈಸೂರಿನ ನಾಲ್ಕನೆ ಯುದ್ಧವಾದ ಮೇಲೆ, ಹಳೆಯ ಮೈಸೂರು ಎಂದು ಏನು ನಾವು ಹೇಳುತ್ತೇವೆ, ಅದು ಚಿಕ್ಕದಾಯಿತು. ಆದರೆ ಪುನಃ 1956ನೇ ಇಸವಿಯಲ್ಲಿ ಭಾಷಾ ಪ್ರಾಂತ್ಯಗಳ ಪುನರ್‌ವಿಂಗಡಣೆಯಾಗುವ ಕಾಲಕ್ಕೆ ಮೈಸೂರು ರಾಜ್ಯ ಒಂದಕ್ಕೆ ಎರಡರಷ್ಟು ವಿಸ್ತಾರವಾಯಿತು.

ಹಳೆಯ ಮೈಸೂರಿನ ಭಾಗದಿಂದ ಬಂದ ಜನರಿಗೆ ಮೈಸೂರು ರಾಜ್ಯದ ಹೆಸರಿನ ಬಗ್ಗೆ ಹಿಂದಿನಿಂದಲೂ ಚಾರಿತ್ರಿಕವಾಗಿ ಒಂದು ಅಭಿಮಾನ ಬೆಳೆದುಬಂದಿದೆ. ಮೈಸೂರು ರಾಜ್ಯ ಎಂಬುದು ಇಡೀ ಇಂಡಿಯಾ ದೇಶದಲ್ಲಿ ಕೀರ್ತಿ ಪಡೆದಿರುವುದಲ್ಲದೆ, ಹೊರ ದೇಶಗಳಲ್ಲಿಯೂ ಸಹ ಕೀರ್ತಿ ಪಡೆದಿದೆ. ಮೈಸೂರು ಜನತೆಯ ವಿಚಾರದಲ್ಲಿ, ಮೈಸೂರು ಸಾಮಾನುಗಳ ವಿಚಾರದಲ್ಲಿ ತಿಳಿದಂತಹ ಜನರು ಹೊರದೇಶಗಳಲ್ಲಿ ತುಂಬ ಇದ್ದಾರೆ. ಅದಕ್ಕೋಸ್ಕರ ಮೈಸೂರು ರಾಜ್ಯ ಹೆಚ್ಚಿನ ಗೌರವ ಹಾಗೂ ಕೀರ್ತಿ ಪಡೆದುಕೊಂಡಿದೆ. ಮೈಸೂರು ಎಂಬ ಹೆಸರಿಗೆ ಶಕ್ತಿ ಇದೆ. ಅದೇ ಹೆಸರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದರಲ್ಲಿ ತಪ್ಪಿಲ್ಲ. ಆದರೆ ನಾನು ಮೊದಲೇ ಅರಿಕೆ ಮಾಡಿದ ಹಾಗೆ ಕಾಲಚಕ್ರ ಬದಲಾವಣೆಯಾದಂತೆ ಬದಲಾವಣೆಗಳಾಗಬೇಕು.

ಈಗ ಮೈಸೂರು ಎಂಬ ಹೆಸರಿನ ಹುಟ್ಟುವಿಕೆ, ಬದುಕುವಿಕೆಯ ಕಾಲ ಮುಗಿದು ಆಸ್ತಂಗತವಾಗುವ ಕಾಲ ಬಂದಿದೆ. ಈ ಹೆಸರು ಅಸ್ತಂಗತವಾದರೂ ಸಹ ಇನ್ನೊಂದು ಹೆಸರು ಉದಯವಾಗುತ್ತಿದೆ. ಹೊಸ ಹೆಸರಿನಲ್ಲಿ ಭಾವೈಕ್ಯತೆ ಇದೆ. ಹೊಸ ಹೆಸರಿನ ಬಗ್ಗೆ ವಿಶ್ವಾಸವಿದೆ. ಆ ಹೆಸರಿನ ಬಗ್ಗೆ ಹೆಚ್ಚಿನ ಜನರಿಗೆ ಸಂತೋಷ, ಆನಂದ ಉಂಟಾಗುತ್ತಿದೆ. ಈ ಸಮಯದಲ್ಲಿ ಮೈಸೂರು ಎಂಬ ಹೆಸರು ಹೋಗುತ್ತದೆ ಎಂಬುದು ನಮ್ಮ ಮನಸ್ಸಿನಲ್ಲಿದ್ದರೂ ಕೂಡ ಅದನ್ನು ಬಿಟ್ಟುಕೊಡಬೇಕಾದ್ದು ಅಗತ್ಯ. ಏಕೆಂದರೆ ಒಂದು ಹೋಗಿ ಇನ್ನೊಂದು ಬರುತ್ತಿದೆಯೆಂದು ಅಲ್ಲ, ಬದಲಾವಣೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗುವಾಗ, ಹಳೆಯದು ಹೋಗಿ ಹೊಸದು ಬರುವಾಗ ತೊಂದರೆ ಇಲ್ಲ, ಆನಂದ ಬರುತ್ತದೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಮತ್ತು ಯಾವುದೇ ಒಂದು ತತ್ತ್ವ, ರಾಜ್ಯ ಆಥವಾ ಒಬ್ಬ ವ್ಯಕ್ತಿ ಕೆಲವು ಕಾಲ ಇದ್ದು ಇನ್ನೊಂದಕ್ಕೆ ಎಡೆಮಾಡಿ ಕೊಡುವಾಗ, ಸ್ಥಾನ ಬಿಟ್ಟು ಕೊಡುವಾಗ ಚಿಂತನೆ ಮಾಡಬೇಕಾಗಿಲ್ಲ. ಇದು ಪ್ರಪಂಚದಲ್ಲಿಯೇ ಅವ್ಯಾಹತವಾಗಿ ನಡೆಯುತ್ತಿರುವ ಕಾಲಧರ್ಮ ಎದು ಹೇಳಬಹುದು. ಅದನ್ನು ನಾವು ತಿಳಿದಿದ್ದೇ ಆದರೆ ಅದರ ಬಗ್ಗೆ ಚಿಂತನೆ ಮಾಡುವ ಕಾಲ ಅಲ್ಲ. ಹೊಸದನ್ನು ನೋಡಿ, ಇತರರನ್ನು ನೋಡಿ ನಾವು ನಲಿದು ಸಂತೋಷ ಪಡುವಕಾಲ ಇದು. ಆದ್ದರಿಂದ ಈ ನಿರ್ಣಯಕ್ಕೆ ಮಾನ್ಯ ಸಭೆ ಒಪ್ಪಿಗೆ ಕೊಡುತ್ತದೆಂಬ ಪೂರ್ಣ ವಿಶ್ವಾಸ ನನಗೆ ಇದೆ.

ಬಹುಮತದ ವಿಶ್ವಾಸದಲ್ಲಿ, ನಾವೆಲ್ಲರೂ ಸೇರಿ ಒಮ್ಮತದಿಂದ ಈ ನಮ್ಮ ನಾಡನ್ನು ಹೊಸ ಹೆಸರಿನಿಂದ ಕರೆಯೋಣ. ಆ ರೀತಿ ನಾವು ಆನಂದದಿಂದ, ಸಂತೋಷದಿಂದ ಕರೆಯುವಾಗ ಕನ್ನಡ ಜನತೆಯ ಏಳಿಗೆಯಾಗಲಿ ಎಂದು ಹಾರೈಸೋಣ. ಈ ಶುಭ ಮುಹೂರ್ತದಲ್ಲಿ ಈ ಹೆಸರನ್ನು ಹೊಂದುತ್ತಿರುವ ರಾಜ್ಯ ಉನ್ನತವಾಗಿ ಬೆಳೆದು, ಹಿಂದಿನಿಂದ ಈ ರಾಜ್ಯ ಚರಿತ್ರೆಯಲ್ಲಿ ಏನು ಒಂದು ಒಳ್ಳೆಯ ಕೀರ್ತಿ ಮತ್ತು ಹೆಸರನ್ನು ಪಡೆದಿತ್ತೋ, ಅದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆದು, ಕನ್ನಡ ಕೋಟಿ ಜನತೆ ಏನಿದ್ದಾರೆ ಅವರ ಬಾಳ್ವೆ ಹಸನಾಗಬೇಕು. ಜನತೆ ಬೆಳೆಯಬೇಕು. ಎಲ್ಲರೂ ಆನಂದಿತರಾಗಬೇಕು. ನಮ್ಮ ಸಂಸ್ಕೃತಿ, ನಮ್ಮ ಸಾಹಿತ್ಯ, ನಮ್ಮ ಕಲೆ ಇವೆಲ್ಲವೂ ಬೆಳೆದು ಇಡೀ ಭಾರತದಲ್ಲಿಯೇ ಅಲ್ಲ, ಇಡೀ ಪ್ರಪಂಚದಲ್ಲಿಯೇ ಹೆಚ್ಚಿನ ಕೀರ್ತಿ ಪಡೆಯುವಂತಾಗಬೇಕು. ಅಂತಹ ಒಂದು ಕಾರ್ಯಕ್ಕೆ ಇವೊತ್ತು ನಾವು ಅಂಕುರಾರ್ಪಣ ಮಾಡೋಣ ಎನ್ನುವ ಮಾತನ್ನು ತಿಳಿಸಿ ಈ ಠರಾವನ್ನು ತಮ್ಮ ಒಪ್ಪಿಗೆಗಾಗಿ ಮಂಡಿಸುತ್ತಿದ್ದೇನೆ.

(ದಿನಾಂಕ 27.7.1973ರಂದು ಮೈಸೂರು ವಿಧಾನಸಭೆಯಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲು ನಿರ್ಣಯ ಮಂಡಿಸಿ ಮಾಡಿದ ಭಾಷಣ; ಇದನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆಯಾದ ’ಕರ್ನಾಟಕಕ್ಕೆ ಶುಭವಾಗಲಿ- ದೇವರಾಜ ಅರಸು ಅವರ ಆಯ್ದ ಐವತ್ತು ಭಾಷಣಗಳು’ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...