Homeಮುಖಪುಟರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾದ ಹೋರಾಟಗಾರರಾದ ತೇಲ್ತುಂಬ್ಡೆ ಹಾಗೂ ನವಲಖ

ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾದ ಹೋರಾಟಗಾರರಾದ ತೇಲ್ತುಂಬ್ಡೆ ಹಾಗೂ ನವಲಖ

- Advertisement -

ಖ್ಯಾತ ಶಿಕ್ಷಣ ತಜ್ಞ ಮತ್ತು ದಲಿತ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ ಅವರು ಇಂದು ರಾಷ್ಟ್ರೀಯ ತನಿಖೆಯ ಮುಂದೆ ಶರಣಾದರು.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾವೋವಾದಿ ಸಂಪರ್ಕವಿದೆ ಎಂದು ಆರೋಪಿಸಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಖ್ಯಾತ ಶಿಕ್ಷಣ ತಜ್ಞ ಮತ್ತು ದಲಿತ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗನಾದ ತೇಲ್ತುಂಬ್ಡೆ ಎನ್ಐಎಯ ಮುಂಬೈ ಕಚೇರಿಯಲ್ಲಿ ಶರಣಾದರೆ, ಗೌತಮ್‌ ನವಲಖ ನವದೆಹಲಿಯಲ್ಲಿ ಶರಣಾದರು.

ಪ್ರಕರಣದಲ್ಲಿ ಶರಣಾಗಲು ಅವರಿಗೆ ಸುಪ್ರೀಂ ಕೋರ್ಟ್ ನೀಡಿದ 7 ದಿನಗಳ ಸಮಯದಲ್ಲಿ ಇಂದು ಕೊನೆಯ ದಿನವಾಗಿತ್ತು.

ಶರಣಾಗುವ ಮೊದಲು, ವಿದ್ವಾಂಸ ತೇಲ್ತುಂಬ್ಡೆ “ಭಾರತೀಯರಿಗೆ ಬಹಿಂರಂಗ ಪತ್ರ” ವನ್ನು ಬರೆದು, ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.


ದಲಿತ ಹಕ್ಕುಗಳ ಹೋರಾಟಗಾರ ಆನಂದ್ ತೆಲ್ತುಂಬ್ಡೆ ಭಾರತೀಯರಿಗೆ ಬರೆದ ಬಹಿರಂಗ ಪತ್ರ ಓದಲು ಇಲ್ಲಿ ಕ್ಲಿಕ್ ಮಾಡಿ


“ನನ್ನ ಭಾರತವು ಹಾಳಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ, ಅಂತಹ ಕಠಿಣ ಕ್ಷಣದಲ್ಲಿ ನಾನು ಮತ್ತೊಮ್ಮೆ ನಿಮಗೆ ಬರೆಯುತ್ತೇನೆ ಎಂಬ ದುರ್ಬಲ ಭರವಸೆಯೊಂದಿಗೆ ನಾನು ಎನ್ಐಎ ವಶಕ್ಕೆ ಹೋಗಿದ್ದೇನೆ ಮತ್ತು ನಾನು ಯಾವಾಗ ನಿಮ್ಮೊಂದಿಗೆ ಮತ್ತೆ ಮಾತನಾಡಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ, ನಿಮ್ಮ ಸರದಿ ಬರುವ ಮೊದಲು ನೀವು ಮಾತನಾಡುತ್ತೀರಿ ಎಂದು ನಾನು ಮನಃಪೂರ್ವಕವಾಗಿ ಆಶಿಸುತ್ತೇನೆ “ಎಂದು ಪತ್ರದಲ್ಲಿ ಆನಂದ್‌ ತೇಲ್ತುಂಬ್ಡೆ ಬರೆದಿದ್ದಾರೆ.

ಶರಣಾಗುವ ಮೊದಲು ಕಳುಹಿಸಲಾದ ಬಹಿರಂಗ ಪತ್ರದಲ್ಲಿ, ನವಲಖಾ “ನನ್ನ ಮತ್ತು ನನ್ನ ಸಹ-ಆರೋಪಿಗಳಿಗೆ ತ್ವರಿತ ಹಾಗೂ ನ್ಯಾಯಯುತವಾದ ವಿಚಾರಣೆಯ ಮೇಲೆ ನನ್ನ ಭರವಸೆ ನಿಂತಿದೆ. ಇದು ಮಾತ್ರ ನನ್ನ ಹೆಸರನ್ನು ತೆರವುಗೊಳಿಸಲು ಮತ್ತು ಮುಕ್ತವಾಗಿ ನಡೆಯಲು ಅನುವು ಮಾಡಿಕೊಡುತ್ತದೆ, ಜೈಲಿನಲ್ಲಿರುವ ಸಮಯವನ್ನು ಸಹ ಸ್ವಾಧೀನಪಡಿಸಿಕೊಂಡ ಅಭ್ಯಾಸಗಳಿಂದ ಮುಕ್ತಗೊಳಿಸಲು ಬಳಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ, ಇತಿಹಾಸಕಾರ್ತಿ ರೋಮಿಲಾ ಥಾಪರ್, ಅರ್ಥಶಾಸ್ತ್ರಜ್ಞರಾದ ಪ್ರಭಾತ್ ಪಟ್ನಾಯಕ್ ಮತ್ತು ದೇವಕಿ ಜೈನ್, ಸಮಾಜಶಾಸ್ತ್ರಜ್ಞ ಸತೀಶ್ ದೇಶಪಾಂಡೆ ಹಾಗೂ ವಕೀಲ ಮಜಾ ದಾರುವಾಲಾ ಅವರು ತೆಲ್ತುಂಬ್ಡೆ ಮತ್ತು ನವಲಖಾ ಅವರ ಬಂಧನವನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಅವರಿಗೆ ಪತ್ರ ಬರೆದಿದ್ದರು.

“ಪ್ರಾಸಿಕ್ಯೂಷನ್ ಪ್ರಕರಣದ ವಿಚಾರಣೆ ಮಾಡಲು ಈಗಾಗಲೇ ಸಾಕಷ್ಟು ಸಮಯವಿದೆ. ಭೂಮಿಯ ಅತ್ಯುನ್ನತ ನ್ಯಾಯಾಲಯವು ವಿಚಾರಣಾ ಪ್ರಕ್ರಿಯೆಯನ್ನು ಶಿಕ್ಷೆಯಾಗಲು ಅನುಮತಿಸುವುದಿಲ್ಲ. ಸಂವಿಧಾನವನ್ನು ಎತ್ತಿಹಿಡಿಯುವ ನಿಮ್ಮ ನಾಯಕತ್ವದಲ್ಲಿ, ಇದು ನಿಜವಾಗಿಯೂ ಜನರ ಹಕ್ಕುಗಳ ರಕ್ಷಕ ಎಂದು ನಿರೂಪಿಸಲು ಸುಪ್ರೀಂ ಕೋರ್ಟ್ ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು” ಎಂದು ಅವರು ಸಿಜೆಐಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 8 ರಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಕೊರೊನಾ ಸಾಂಕ್ರಾಮಿಕ ರೋಗದ ನೆಲೆಯಲ್ಲಿ ವಿಸ್ತರಣೆಗಾಗಿ ತೇಲ್ತುಂಬ್ಡೆ ಮತ್ತು ನವಲಖಾ ಮಾಡಿದ ವಿನಂತಿಯನ್ನು ಸ್ವೀಕರಿಸಲು ನಿರಾಕರಿಸಿತು. ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನೂ ಒಳಗೊಂಡ ನ್ಯಾಯಪೀಠವು ಕೊನೆಯ ಅವಕಾಶವಾಗಿ ಸಮಯವನ್ನು ಒಂದು ವಾರ ವಿಸ್ತರಿಸಿತ್ತು.

ಮಾರ್ಚ್ 16 ರಂದು, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಮ್ಆರ್ ಷಾ ಅವರನ್ನೊಳಗೊಂಡ ನ್ಯಾಯಪೀಠವು ಫೆಬ್ರವರಿ 15 ರಂದು ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಗಳನ್ನು ವಜಾಗೊಳಿಸಿತ್ತು. ನಂತರ ನ್ಯಾಯಪೀಠ ಅರ್ಜಿದಾರರಿಗೆ ಶರಣಾಗಲು ಮೂರು ವಾರಗಳ ಕಾಲಾವಕಾಶ ನೀಡಿತು.

ಈ ಪ್ರಕರಣವು ಜನವರಿ 1, 2018 ರಂದು ಪುಣೆಯ ಸಮೀಪವಿರುವ ಭೀಮಾ ಕೋರೆಗಾಂವ್‌ನಲ್ಲಿ ನಡೆದ ವಿಜಯದ ಕೊರೆಗಾಂವ್ ಯುದ್ಧದ 200 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದೆ.

ಹಿಂದಿನ ದಿನ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಭೆಯಿಂದ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ ಎಂದು ಪುಣೆ ಪೊಲೀಸರು ಆರೋಪಿಸಿದ್ದಾರೆ. ನಿಷೇಧಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಈ ಸಭೆಯನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧಿತ ವ್ಯಕ್ತಿಗಳಲ್ಲಿ ಜಾತಿ ವಿರೋಧಿ ಕಾರ್ಯಕರ್ತ ಸುಧೀರ್ ಧವಾಲೆ, ಮಾನವ ಹಕ್ಕುಗಳ ವಕೀಲ ಸುರೇಂದ್ರ ಗ್ಯಾಡ್ಲಿಂಗ್, ಅರಣ್ಯ ಹಕ್ಕುಗಳ ಕಾಯ್ದೆ ಕಾರ್ಯಕರ್ತ ಮಹೇಶ್ ರೌತ್, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಶೋಮಾ ಸೇನ್ ಮತ್ತು ರಾಜಕೀಯ ಕೈದಿಗಳ ಬಿಡುಗಡೆ ಸಮಿತಿಯ ಕಾರ್ಯಕರ್ತ ರೋನಾ ವಿಲ್ಸನ್ ಸಹ ಇದ್ದಾರೆ.

ನಂತರ, ಸಮಾಜಿಕ ಕಾರ್ಯಕರ್ತೆ ವಕೀಲೆ ಸುಧಾ ಭಾರದ್ವಾಜ್, ತೆಲುಗು ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಅರುಣ್ ಫೆರೀರಾ ಮತ್ತು ವೆರ್ನಾನ್ ಗೊನ್ಸಾಲ್ವೆಸ್ ಅವರನ್ನು ಬಂಧಿಸಲಾಗಿತ್ತು.

2018 ರ ನವೆಂಬರ್‌ನಲ್ಲಿ ಬಂಧಿಸಲ್ಪಟ್ಟ ಆರು ಜನರ ವಿರುದ್ಧ ಪೊಲೀಸರು 2018 ರ ನವೆಂಬರ್‌ನಲ್ಲಿ ಮೊದಲ ಚಾರ್ಜ್‌ಶೀಟ್ ಸಲ್ಲಿಸಿದರು. 2019 ರ ಫೆಬ್ರವರಿಯಲ್ಲಿ ಸುಧಾ ಭಾರದ್ವಾಜ್, ವರವರ ರಾವ್, ಅರುಣ್ ಫೆರೀರಾ ಮತ್ತು ಗೊನ್ಸಾಲ್ವೆಸ್ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಆದರೆ ಚಾರ್ಜ್‌ಶೀಟ್‌ನಲ್ಲಿ ನವಲಖಾ ಮತ್ತು ತೇಲ್ತುಂಬ್ಡೆರವರನ್ನು ಹೆಸರಿಸಲಾಗಿರಲಿಲ್ಲ.

ಈ ಪ್ರಕರಣದ ತನಿಖೆಯನ್ನು ಫೆಬ್ರವರಿಯಲ್ಲಿ ಮಹಾರಾಷ್ಟ್ರ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು ವಹಿಸಿಕೊಂಡಿತ್ತು.

ತೇಲ್ತುಂಬ್ಡೆ ಐಐಎಂ-ಎ ಹಳೆಯ ವಿದ್ಯಾರ್ಥಿ, ಅವರು ಬಿಪಿಸಿಎಲ್, ಪೆಟ್ರೋನೆಟ್ ಮುಂತಾದ ಕಂಪನಿಗಳಲ್ಲಿ ಕಾರ್ಪೊರೇಟ್ ವೃತ್ತಿಜೀವನದ ನಂತರ ನಾಗರಿಕ ಹಕ್ಕುಗಳ ಹೋರಾಟಕ್ಕೆ ಧುಮುಕಿದರು. 26 ಪುಸ್ತಕಗಳನ್ನು ಬರೆದಿರುವ ಲೇಖಕರಾದ ಇವರು ಎಕೊನಾಮಿಕ್ ಆಂಡ್ ಪೊಲಿಟಿಕಲ್‌ ವೀಕ್ಲೀ, ಫ್ರೊಂಟಿನರ್‌, ಔಟ್‌ಲುಕ್‌ ಇಂಡಿಯ ಇತ್ಯಾದಿಗಳಲ್ಲಿ ಅಂಕಣಕಾರರಾಗಿದ್ದಾರೆ. ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರಾಗಿ ಅವರು  ಪ್ರಜಾಪ್ರಭುತ್ವ ಹಕ್ಕುಗಳ ಸಂರಕ್ಷಣಾ ಸಮಿತಿ (ಸಿಪಿಡಿಆರ್) ಯ ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಸಂಘಟನೆಯ (ಸಿಡಿಆರ್‌ಓ) ಕಾರ್ಯನಿರ್ವಾಹಕ ಸದಸ್ಯರಾಗಿದ್ದಾರೆ. ಕೆಜಿಯಿಂದ ಪಿಜಿಯವರೆಗೆ ಎಲ್ಲರಿಗೂ ಸಮಾನ ಮತ್ತು ಉಚಿತ ಶಿಕ್ಷಣಕ್ಕಾಗಿ ಹೋರಾಡುವ  ಎಐಎಫ್‌ಆರ್‌ಟಿಇ ಸಂಘಟನೆಯ ಅಧ್ಯಕ್ಷೀಯ ಮಂಡಳಿ ಸದಸ್ಯರೂ ಆಗಿದ್ದಾರೆ.

ನವಲಖಾ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದು, ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ಮತ್ತು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ಯ ಸಂಪಾದಕೀಯ ಸಲಹೆಗಾರರಾಗಿದ್ದರು.

ಕಳೆದ ವರ್ಷ, 90 ಕ್ಕೂ ಹೆಚ್ಚು ಸಂಸ್ಥೆಗಳು, 50 ಸಂಸ್ಥೆಗಳು ಮತ್ತು ಬುದ್ಧಿಜೀವಿಗಳಾದ ನೋಮ್ ಚೋಮ್ಸ್ಕಿ, ಜೀನ್ ಡ್ರೆಜ್, ಸುಖ್‌ದೇವ್‌ ಥೋರತ್‌, ವಿಮಲ್ ಥೋರತ್, ಕಾರ್ನೆಲ್ ವೆಸ್ಟ್ ಮತ್ತು ಚಿರ್ಸ್ಟೋಫ್ ಜಾಫ್ರೆಲೋಟ್ ಮುಂತಾದವರು ಬಂಧಿಸುವ ಕ್ರಮವನ್ನು ಖಂಡಿಸಿದ್ದರು ಹಾಗೂ ಆನಂದ್ ತೇಲ್ತುಂಬ್ಡೆ ವಿರುದ್ಧದ ‘ಕಟ್ಟುಕಥೆ ಆರೋಪಗಳನ್ನು ಹಿಂಪಡೆಯಲು ಆಗ್ರಹಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial