Homeಮುಖಪುಟಕೊರೋನ ಎದುರಿಸಲು ಮೂರು ಮಾದರಿಗಳು: ಆಗ್ರಾ, ಭಿಲ್ವಾಡ ಮತ್ತು ಪತ್ತಣತಿಟ್ಟಂ! ನಿಮ್ಮೂರಿನ ಮಾದರಿ ಯಾವುದು?

ಕೊರೋನ ಎದುರಿಸಲು ಮೂರು ಮಾದರಿಗಳು: ಆಗ್ರಾ, ಭಿಲ್ವಾಡ ಮತ್ತು ಪತ್ತಣತಿಟ್ಟಂ! ನಿಮ್ಮೂರಿನ ಮಾದರಿ ಯಾವುದು?

ಆಗ್ರಾ, ಭಿಲ್ವಾಡ ಮತ್ತು ಪತ್ತಣತಿಟ್ಟಂನಲ್ಲಿ ಕೊರೋನ ವೈರಸ್ (ಕೋವಿಡ್-19)ನ ಮೊದಲ ಪ್ರಕರಣಗಳು ಕಂಡುಬಂದ ತಕ್ಷಣ ಅಯಾಯ ರಾಜ್ಯ ಮತ್ತು ಜಿಲ್ಲಾಡಳಿತಗಳು, ಆಯಾಯ ಭೌಗೋಳಿಕ ಪರಿಸರದ ಒಳಗೆಯೇ ಈ ಪಿಡುಗನ್ನು ಕಟ್ಟಿಹಾಕಲು ಶಕ್ತಿಮೀರಿ ಹೆಣಗಿದವು. ಅವರಿದನ್ನು ಹೇಗೆ ಮಾಡಿದರು ಎಂಬ ಬಗ್ಗೆ ತಿಳಿಸಲು ಒಂದೊಂದೇ ಮಾದರಿಯನ್ನು ಇಲ್ಲಿ ವಿವರಿಸಲಾಗಿದೆ.

- Advertisement -
- Advertisement -

ಅಬಂತಿಕಾ ಘೋಷ್

ಅನುವಾದ: ನಿಖಿಲ್ ಕೋಲ್ಪೆ

ದೇಶದಾದ್ಯಂತ ಲಾಕ್‌ಡೌನ್ ಸದ್ಯಕ್ಕೆ ಮುಂದುವರಿಸಬೇಕು ಎಂದು ನಿರ್ಧರಿಸಲಾದ ಪ್ರಧಾನಮಂತ್ರಿ ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಇತ್ತೀಚಿನ ಸಭೆಗೆ ಮುಂಚಿತವಾಗಿ, ವಿವಿಧ ರಾಜ್ಯಗಳು ತಮ್ಮ ತಮ್ಮ ಚಿಕ್ಕಚಿಕ್ಕ ಭೌಗೋಳಿಕ ಪ್ರದೇಶಗಳಲ್ಲಿ ಕೊರೊನಾದ ಹರಡುವಿಕೆಯನ್ನು ನಿಯಂತ್ರಣದಲ್ಲಿ ಇಡಲು ತಮ್ಮದೇ ಆದ ವಿವಿಧ ಮಾದರಿಗಳನ್ನು ಕಂಡುಕೊಂಡಿದ್ದವು. ಹೆಚ್ಚಿನ ಆರೋಗ್ಯ ನೀತಿ ತಜ್ಞರು ಹೇಳುವಂತೆ “ಒಂದೇ ಅಳತೆ ಎಲ್ಲರಿಗೂ ಸರಿಹೊಂದುವುದಿಲ್ಲ”.

ಕಳೆದ ವಾರಗಳಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಕೊರೋನ ನಿಯಂತ್ರಣದ ಕನಿಷ್ಟ ಮೂರು ಮಾದರಿಗಳ ಕುರಿತು ಉನ್ನತ ಮಟ್ಟದ ಹಲವಾರು ಸಭೆಗಳಲ್ಲಿ ಉಲ್ಲೇಖಿಸಲಾಗಿದೆ. ಅವೆಂದರೆ, ಆಗ್ರಾ (ಉತ್ತರ ಪ್ರದೇಶ), ಭಿಲ್ವಾಡ (ರಾಜಸ್ಥಾನ) ಮತ್ತು ಪತ್ತಣಂತಿಟ್ಟ (ಕೇರಳ). ಇವುಗಳಲ್ಲಿ ಒಂದನ್ನು ಕೇಂದ್ರ ಸರಕಾರವು ಕ್ರೋಢೀಕೃತ ಕೊರೊನಾ ಪಿಡುಗು ಕುರಿತ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದೆ.

ಆಗ್ರಾ ಮಾದರಿ

“ಆಗ್ರಾ ಮಾದರಿ”ಯು ಮಾರ್ಚ್ ಆರಂಭದಲ್ಲಿ ರೂಪುತಳೆಯಿತು. ಇಬ್ಬರು ಪುರುಷರು- ನಂತರ ದಿಲ್ಲಿಯ ಮೊದಲ ಕೊರೊನಾ ಪ್ರಕರಣ ಎಂದು ಗುರುತಿಸಿಲಾದ ಸಂಬಂಧಿಯೊಬ್ಬರ ಜೊತೆ ಆಸ್ಟ್ರಿಯಾಕ್ಕೆ ಹೋಗಿಬಂದಿದ್ದರು. ನಂತರ ಅವರು ತಮ್ಮ ಮನೆಯಾದ ಆಗ್ರಾಕ್ಕೆ ಹೋದರು. ಅಲ್ಲಿ  ಕೆಲದಿನಗಳ ನಂತರ ಆರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದವು. ನಂತರ ನಡೆದದ್ದೆಂದರೆ, ಸ್ಥಳೀಯವಾಗಿದ್ದರೂ ಭಾರೀ ಪ್ರಮಾಣದ ಹುಡುಕಾಟ ಕಾರ್ಯಾಚರಣೆ. ಇದನ್ನು ಜಿಲ್ಲಾಡಳಿತ ಮತ್ತು ಇಂಟೆಗ್ರೇಟೆಡ್ ಡಿಸೀಸ್ ಸರ್ವಿಲೆನ್ಸ್ ಪ್ರೋಗ್ರಾಮ್ (ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ)ನ ಸಿಬ್ಬಂದಿ ನಡೆಸಿದ್ದರು. ಆಗ್ರಾದ ಲೋಹಾಮಂಡಿ ಎಂಬ ಮೂರು ಕಿ.ಮೀ. ತ್ರಿಜ್ಯದ ಇಕ್ಕಟ್ಟಿನ ಪ್ರದೇಶವನ್ನು ರಾತ್ರಿ 2.00 ಗಂಟೆಗೆ ಪಾಸಿಟಿವ್ ವರದಿ ಬಂದ ತಕ್ಷಣ ಪ್ರತ್ಯೇಕಿಸಲಾಯಿತು ಮತ್ತು ಇಲ್ಲಿನ 1,65,000 ಜನಸಂಖ್ಯೆಯಲ್ಲಿ ರೋಗಸಂಪರ್ಕ ಕಂಡುಹಿಡಿಯಲು 1,248 ತಂಡಗಳು ಕಾರ್ಯಾಚರಣೆ ನಡೆಸಿದವು

ಆಗ್ರಾದಲ್ಲಿ ಕೊರೋನ ವೈರಸ್ ಪತ್ತೆಗೆ ಪ್ರಾಥಮಿಕ ತಪಾಸಣೆ.

ಆರೋಗ್ಯ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದಂತೆ, “ಸರಕಾರ, ಜಿಲ್ಲಾಡಳಿತ ಮತ್ತು ಮುಂಚೂಣಿಯ ಕಾರ್ಯಕರ್ತರು ಸ್ಮಾರ್ಟ್ ಸಿಟಿ ಇಂಟೆಗ್ರೇಟೆಡ್ ವಿದ್ ಕಮಾಂಡ್ ಎಂಡ್ ಕಂಟ್ರೋಲ್ ಸಿಸ್ಟಮ್ (ಎಸ್‌ಸಿಐಸಿಸಿಸಿ)ಯನ್ನು ಯುದ್ಧಕಾಲದ ನಿಯಂತ್ರಣ ಕೇಂದ್ರದಂತೆ ಬಳಸುವುದರ ಮೂಲಕ, ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲಾಯಿತು.

ಕ್ಲಸ್ಟರ್ ನಿಯಂತ್ರಣ ಮತ್ತು ಪಿಡುಗು ಹರಡುವಿಕೆ ನಿಯಂತ್ರಣ ಯೋಜನೆಗಳ ಅಡಿಯಲ್ಲಿ ಜಿಲ್ಲಾಡಳಿತವು ಪಿಡುಗಿನ ಕೇಂದ್ರ ಸ್ಥಾನಗಳನ್ನು ಗುರುತಿಸಿ, ನಕ್ಷೆಯಲ್ಲಿ  ದೃಢಪಡಿಸಲಾದ ಪಾಸಿಟಿವ್ ಪ್ರಕರಣಗಳು ಮಾಡಬಹುದಾದ ಪರಿಣಾಮಗಳನ್ನು ಗುರುತಿಸಿತು. ಜಿಲ್ಲಾಡಳಿತವು ರೂಪಿಸಿದ್ದ ಸೂಕ್ಷ್ಮ ಯೋಜನೆಗೆ ಅನುಗುಣವಾಗಿ ಒಂದು ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಯಿತು. ವೈರಸ್ ಸಕ್ರಿಯ ಪ್ರದೇಶಗಳನ್ನು ಸಕ್ರಿಯ ಸಮೀಕ್ಷೆ ಮತ್ತು ಹರಡುವಿಕೆ ನಿಯಂತ್ರಣ ಯೋಜನೆಗೆ ಅನುಸಾರವಾಗಿ ನಿರ್ವಹಿಸಲಾಯಿತು. ವೈರಸ್ ಸಕ್ರಿಯ ಕೇಂದ್ರದ ಮೂರು ಕಿ.ಮೀ. ತ್ರಿಜ್ಯದಲ್ಲಿರುವ ಪ್ರದೇಶವನ್ನು ಹರಡುವಿಕೆ ನಿಯಂತ್ರಣ ವಲಯವೆಂದು ಗುರುತಿಸಿ, ಇನ್ನೂ ಐದು ಕಿ.ಮೀ. ತ್ರಿಜ್ಯದಲ್ಲಿರುವ ಪ್ರದೇಶವನ್ನು ಹೆಚ್ಚುವರಿ ವಲಯ ಎಂದು ಗುರುತಿಸಿಲಾಯಿತು.

ಹರಡುವಿಕೆ ನಿಯಂತ್ರಣ ವಲಯದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೇರಿಸಿಕೊಳ್ಳಲಾಯಿತು. ಈ 1,248 ತಂಡಗಳಲ್ಲಿ ಎಎನ್‌ಎಂ/ಆಶಾ/ಎಡಬ್ಲ್ಯೂಡಬ್ಲ್ಯೂ ಸೇರಿದಂತೆ ಇಬ್ಬರು ಕಾರ್ಯಕರ್ತರಿದ್ದರು. ಅವರು ಮನೆಮನೆ ಪರಿಶೀಲನೆಯ ಮೂಲಕ 9.3 ಲಕ್ಷ ಜನರನ್ನು ಸಂಪರ್ಕಿಸಿದರು. ಹೆಚ್ಚುವರಿಯಾಗಿ, ಮೊದಲ ಸಂಪರ್ಕವನ್ನು ಮೊದಲಾಗಿ ಗುರುತಿಸಿ, ವಿವರವಾಗಿ ದಾಖಲಿಸುವ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಯಿತು. ಆಗ್ರಾ ಮಾದರಿಯು ಮುಖ್ಯವಾಗಿದೆ ಯಾಕೆಂದರೆ, ಅದು ಹೆಚ್ಚು ರೋಗಿ ಸಾಂದ್ರತೆ ಇರುವ ಪ್ರದೇಶಗಳು- ಎಂದರೆ, “ಹಾಟ್‌ಸ್ಪಾಟ್”ಗಳೆಂದು ಕರೆಯಲಾಗುತ್ತಿರುವ ಪ್ರದೇಶಗಳಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಅಧಿಕೃತ ದಾಖಲೆಯೊಂದರಲ್ಲಿ  “ಸಮುದಾಯ ಸೋಂಕು ಹರಡುವಿಕೆ” ಎಂಬ ಉಲ್ಲೇಖವೂ ಮೊತ್ತಮೊದಲ ಬಾರಿಗೆ ಆಗ್ರಾದಲ್ಲಿ ನಡೆದಿದೆ.

“ಸಮುದಾಯ ಸೋಂಕು” ಎಂದರೆ, ಯಾವುದೇ ಸೋಂಕು ಪೀಡಿತ ದೇಶಕ್ಕೆ ಪ್ರಯಾಣ ಮಾಡಿರುವ ಯಾವುದೇ ಸ್ಪಷ್ಟ ಸೂಚನೆ ಇಲ್ಲದೆಯೇ, ಅಥವಾ ಸೋಂಕು ದೃಢೀಕರಿಸಲಾದ ಯಾವುದೇ ವ್ಯಕ್ತಿಯ ಸಂಪರ್ಕದ ಪತ್ತೆಯಾಗದೆಯೇ ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭವಾದಾಗ ಅದನ್ನು ಸಮುದಾಯ ಸೋಂಕು ಹರಡುವಿಕೆ ಎಂದು ಕರೆಯಲಾಗುತ್ತದೆ. ದೆಹಲಿಯ ಏಮ್ಸ್‌ ನಿರ್ದೇಶಕ ಡಾ. ರಣ್‌ದೀಪ್ ಗುಲೇರಿಯಾ ಅವರಂತಹ ತಜ್ಞರು ಈಗ ಆಸ್ಪತ್ರೆಗಳಲ್ಲಿ ಸ್ಥಳೀಯವಾದ ಸೋಂಕು ಹರಡುವಿಕೆಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.

ಮಾರ್ಚ್ 5ರ ಹೇಳಿಕೆಯಲ್ಲಿ ಆರೋಗ್ಯ ಸಚಿವಾಲಯವು ಹೀಗೆ ಹೇಳಿದೆ: “ಪ್ರಯಾಣಕ್ಕೆ ಸಂಬಂಧಿಸಿದ ಕೊರೊನಾ ಪ್ರಕರಣಗಳಿಗೆ ಹೆಚ್ಚುವರಿಯಾಗಿ, ಕೆಲವು ಪ್ರಕರಣಗಳಲ್ಲಿ ಸಮುದಾಯ ಸೋಂಕು ಹರಡುವಿಕೆಗಳೂ ಇರುವುದರಿಂದ, ಜಿಲ್ಲಾಧಿಕಾರಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಮತ್ತು ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ತ್ವರಿತ ಪ್ರತಿಕ್ರಿಯಾ ತಂಡಗಳನ್ನು ರಚಿಸುವಂತೆ ಹೇಳಲಾಗಿದೆ.”

ಭಿಲ್ವಾಡ ಮಾದರಿ

ರಾಜಸ್ಥಾನದ ಭಿಲ್ವಾಡ, ಕೊರೊನಾದ ಮೊದಲ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿತ್ತು. ಇದೀಗ “ನಿಷ್ಠುರ ನಿಯಂತ್ರಣ (ಇಲ್ಲಿ ಹರಡುವಿಕೆ ತಡೆಯುವ ಎಂಬ ಅರ್ಥದಲ್ಲಿ) ಕಾರ್ಯತಂತ್ರ”ದೊಂದಿಗೆ  ಗಮನ ಸೆಳೆಯುತ್ತಿದೆ. ಇದನ್ನೀಗ ಭಿಲ್ವಾಡ ಮಾದರಿ ಎಂದೂ ಕರೆಯಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ಮಾರ್ಚ್ 26ರ  ವರದಿಯೊಂದರ ಪ್ರಕಾರ, ಮಾರ್ಚ್ 19ರಂದು ಪತ್ತೆಯಾದ ಮೊದಲ ಪಾಸಿಟಿವ್ ಪ್ರಕರಣವು ಖಾಸಗಿ ಆಸ್ಪತ್ರೆಯೊಂದರ ವೈದ್ಯರದ್ದಾಗಿತ್ತು.

ಮಾರ್ಚ್ 29ರ ವೇಳೆಗೆ ಆಸ್ಪತ್ರೆಯಲ್ಲಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 17 ಆಗಿದ್ದು, ಅವರೆಲ್ಲರೂ ಅದೇ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳಾಗಿದ್ದರು. ರಾಜಸ್ಥಾನ ಸರಕಾರಕ್ಕೆ ಈ ಪಿಡುಗೊಂದು ಭಾರೀ ಬಿಕ್ಕಟ್ಟಾಗಿ ಬದಲಾಯಿತು. ಏಕೆಂದರೆ, ವೈದ್ಯರು ತಮ್ಮಲ್ಲಿ ಸೋಂಕಿನ ಪತ್ತೆಯಾಗುವುದಕ್ಕೆ ಮುಂಚೆಯೇ ನರ್ಸಿಂಗ್ ಸಿಬ್ಬಂದಿ ಮತ್ತು ಇತರ ರೋಗಿಳು ಸೇರಿದಂತೆ ಅನೇಕ ಜನರಿಗೆ ಸೋಂಕು ತಗಲಿಸಿದ್ದರು.

ರಾಜಸ್ಥಾನದ ಭಿಲ್ವಾಡದಲ್ಲಿ ಸನ್ನದ್ಧ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರು.

ಇಡೀ ನಗರದಲ್ಲಿ ಸೆಕ್ಷನ್ 144 ವಿಧಿಸಿ, ಸಂಪೂರ್ಣವಾಗಿ ಪ್ರತ್ಯೇಕಿಸಲಾಯಿತು. ಮೊದಲ ಹಂತದಲ್ಲಿ ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಯಿತು. ಎರಡನೇ ಹಂತದಲ್ಲಿ ನಗರ ಮತ್ತು ಇಡೀ ಜಿಲ್ಲೆಯನ್ನು ಸಂಪೂರ್ಣ ಶಟ್‌ಡೌನ್‌ಗೆ ಒಳಪಡಿಸಿ, ಎಲ್ಲಾ ಗಡಿಗಳನ್ನು ಮುಚ್ಚಲಾಯಿತು. ಒಳಹೊರಗೆ ಹೋಗುವ ಎಲ್ಲಾ ಹಾದಿಗಳಲ್ಲಿ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಯಿತು. ತಮ್ಮ ಗಡಿಗಳನ್ನು ಮುಚ್ಚುವಂತೆ ನೆರೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹೇಳಲಾಯಿತು. ರೋಗ ಹರಡದಂತೆ ನಿಯಂತ್ರಿಸುವ ವಲಯ ಸಾಮಾನ್ಯವಾಗಿ ರೋಗ ಕೇಂದ್ರದಿಂದ ಮೂರು ಕಿ.ಮೀ. ತ್ರಿಜ್ಯದೊಳಗೆ ಇರುತ್ತದೆ. ಹೆಚ್ಚುವರಿ ರಕ್ಷಣಾ ವಲಯ ಏಳು ಕಿ.ಮೀ. ತ್ರಿಜ್ಯ ಹೊಂದಿರುತ್ತದೆ.

ಈ ಎರಡೂ ವಲಯಗಳನ್ನು ಸಂಚಾರ ರಹಿತ ವಲಯಗಳನ್ನಾಗಿ ಮಾಡಿ, ಈ ಅವಧಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ, ಕೊರೊನಾ ಪ್ರಕರಣಗಳಿಗಾಗಿ ಕ್ಲಸ್ಟರ್ ಮ್ಯಾಪಿಂಗ್ (ಗುಂಪುಗಳಲ್ಲಿ ಮಾಹಿತಿ ದಾಖಲು) ಮಾಡಲಾಯಿತು ಮತ್ತು ಶಂಕಿತ ಪ್ರಕರಣಗಳ ಮೇಲೆ ನಿರಂತರ ನಿಗಾ ಇಡಲಾಯಿತು. ರೋಗ ಹರಡುವಿಕೆ ನಿಯಂತ್ರಣ ವಲಯ, ಹೆಚ್ಚುವರಿ ವಲಯ, ಎಲ್ಲಾ ಅಂಬ್ಯುಲೆನ್ಸ್‌ಗಳು, ಪೊಲೀಸ್ ವಾಹನಗಳು, ಕ್ವಾರಂಟೈನ್ ಕೇಂದ್ರಗಳು, ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ಲೈನ್‌ಗಳು ಹಾಗೂ ಮತ್ತಿತರ ಸಾರ್ವಜನಿಕ ಸಂಪರ್ಕಕ್ಕೆ ಬರುವ ಕಚೇರಿಗಳನ್ನು ದಿನನಿತ್ಯವೂ ಕ್ರಿಮಿನಾಶಕ ಸಿಂಪಡನೆಗೆ ಒಳಪಡಿಸಲಾಯಿತು.

ಕೊನೆಯ ಲೆಕ್ಕಾಚಾರದಂತೆ, ಭಿಲ್ವಾಡದಲ್ಲಿ 3,072 ತಂಡಗಳು 2,14,647 ಮನೆಗಳ ಸಮೀಕ್ಷೆ ನಡೆಸಿದ್ದವು. ಇವುಗಳಲ್ಲಿ 10,71,315 ಜನರಿದ್ದು, 4,358 ಜನರಲ್ಲಿ ಇನ್‌ಫ್ಲೂಯೆನ್‌ಜ಼ಾ (ಫ್ಲೂ, ನೆಗಡಿ)  ಮುಂತಾದ ರೋಗಲಕ್ಷಣಗಳು ಕಂಡುಬಂದು, ಅವರನ್ನು ಕೊರೊನಾ ಸೋಂಕಿಗಾಗಿ ಪರೀಕ್ಷೆ ಮಾಡಬೇಕಾಗಿತ್ತು. ತಲಾ 25 ಪ್ರತ್ಯೇಕಿತ ಹಾಸಿಗೆಗಳಿರುವ ನಾಲ್ಕು ಖಾಸಗಿ ಆಸ್ಪತ್ರೆಗೆಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಯಿತು. 1,541 ಕೊಠಡಿಗಳಿದ್ದ 27 ಹೊಟೇಲುಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಅದು ನಂತರದಲ್ಲಿ 950 ಮಂದಿಗೆ ನೆಲೆಯಾಯಿತು. ಇದೇ ಹೊತ್ತಿಗೆ 7,620 ಜನರನ್ನು ಅವರವರ ಮನೆಗಳಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಯಿತು. ಅಗತ್ಯ ದಿನಸಿ, ಹಣ್ಣು, ತರಕಾರಿ ಮತ್ತು ಹಾಲನ್ನು ಮನೆಮನೆಗೆ ಪೂರೈಕೆ ಮಾಡಲಾಯಿತು. ಕೈಗಾರಿಕೆ, ಕಾರ್ಖಾನೆ ಮತ್ತು ಇಟ್ಟಿಗೆ ಭಟ್ಟಿಗಳನ್ನು ಸಂಪೂರ್ಣ ಮುಚ್ಚಲಾಯಿತು. ಅಗತ್ಯ ಇರುವವರಿಗೆ ಕಚ್ಚಾ ಮತ್ತು ಬೇಯಿಸಿದ ಆಹಾರ ಪೊಟ್ಟಣಗಳನ್ನು ಒದಗಿಸಲಾಯಿತು. ಭಿಲ್ವಾಡ ಪ್ರಸ್ತುತ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 28 ಪ್ರಕರಣಗಳನ್ನು ಹೊಂದಿದೆ.

ಪತ್ತಣಂತಿಟ್ಟ ಮಾದರಿ

ಕೇರಳದ ಪತ್ತಣಂತಿಟ್ಟ ಮಾದರಿಯು ಹೆಗ್ಗುರುತಿನ ತಂತ್ರಜ್ಞಾನವಾಗಿದೆ. ಜಿಲ್ಲೆಯಲ್ಲಿ ಮೊದಲ ಪ್ರಕರಣಗಳು ಮಾರ್ಚ್ ಮೊದಲ ಭಾಗದಲ್ಲಿ ಪತ್ತೆಯಾದವು. ಇಟಲಿಯಿಂದ ಮರಳಿದ ಮೂವರು ಸದಸ್ಯರ ಕುಟುಂಬವೊಂದು ಸಮಾರಂಭಗಳಲ್ಲಿ ಭಾಗವಹಿಸಿ, ಇತರ ಸಂಬಂಧಿಗಳಿಗೂ ಸೋಂಕು ಹರಡಿತ್ತು. ಕ್ರಮೇಣವಾಗಿ ಸೋಂಕಿತರ ಸಂಖ್ಯೆ ಮುಂದೆ 16ಕ್ಕೆ ಏರುವುದಿತ್ತು.

ಕೇರಳದಲ್ಲಿ ಕೊರೋನ ಶಂಕಿತರ ವ್ಯಾಪಕ ತಪಾಸಣೆ.

ಇಲ್ಲಿ ಕೂಡಾ ಗಡಿ ಮುಚ್ಚುವಿಕೆ, ಸಂಪರ್ಕ ಪತ್ತೆಕಾರ್ಯ ನಡೆಯಿತು. ಆದರೆ, ಇಲ್ಲಿ ರೋಗಿಗಳ ಸಂಪರ್ಕಕ್ಕೆ ಬಂದವರು ಮಾತ್ರವಲ್ಲ, ಜಿಲ್ಲೆಯನ್ನು ಪ್ರವೇಶಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿ, ಅವರನ್ನು ತುರ್ತಾಗಿ ಯಾವಾಗ ಬೇಕಾದರೂ ಸಂಪರ್ಕಿಸಲು ಸಾಧ್ಯವಾಗುವಂತೆ ಕಂಪ್ಯೂಟರ್‌ನಲ್ಲಿ ಮಾಹಿತಿ ಸಂಗ್ರಹ ಮಾಡಲಾಯಿತು. ಹೆಚ್ಚುವರಿಯಾಗಿ, ಪಾಸಿಟಿವ್ ಪ್ರಕರಣಗಳಲ್ಲಿ ವ್ಯಕ್ತಿಗಳು ಸಂಚರಿಸಿದ ದಾರಿಗಳನ್ನು ತೋರಿಸುವ ಗ್ರಾಫಿಕ್ಸ್ ತಯಾರಿಸಿ ಪ್ರಚಾರ ಮಾಡಲಾಯಿತು. ಇವು- ಫೆಬ್ರವರಿ 29ರಿಂದ ಮಾರ್ಚ್ 6ರ ತನಕ ಈ ಕುಟುಂಬವು ಸಂಚರಿಸಿದ ಸ್ಥಳಗಳು, ಅವರು ಸಂಪರ್ಕ ಮಾಡಿರಬಹುದಾದ ಸಂಭಾವ್ಯ ಶಂಕಿತರು ಇತ್ಯಾದಿ ವಿವರಗಳನ್ನು ಹೊಂದಿದ್ದವು.

ಇದು ಜನರು ಸ್ವಯಂ ಮುಂದೆ ಬಂದು ವರದಿ ಮಾಡಿಕೊಳ್ಳಲು ಪ್ರೇರಣೆಯಾಯಿತು. ಈ ಮಾರ್ಗ ನಕ್ಷೆಯಿಂದ ಜನರಿಗೆ ತಾವು ನಿಜಕ್ಕೂ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದು ಎಂದು ಮನವರಿಕೆಯಾಯಿತು. ಹಲವರು ಪರೀಕ್ಷೆ ಮಾಡಿಸಿಕೊಳ್ಳಲು ಬಂದರು ಅಥವಾ ಚಿಕಿತ್ಸೆ ಪಡೆದರು.

ಕೇರಳದಲ್ಲಿ ಐಸೋಲೇಷನ್ ವಾರ್ಡಿನ ಪ್ರವೇಶ ದ್ವಾರ.

ಕ್ವಾರಂಟೈನ್‌ನಲ್ಲಿರುವವರನ್ನು ಪ್ರತೀದಿನ ವಿಶೇಷವಾಗಿ ಸ್ಥಾಪಿಸಲಾಗಿರುವ ಕಾಲ್‌ಸೆಂಟರ್‌ಗಳಿಂದ ಕರೆ ಮಾಡಿ ತಪಾಸಣೆ ನಡೆಸಲಾಯಿತು. ಆರೋಗ್ಯ ಕಾರ್ಯಕರ್ತರ 14 ತಂಡಗಳು ಗಡಿ ಮುಚ್ಚುಗಡೆಗೆ ಮೊದಲೇ ಜಿಲ್ಲೆಯನ್ನು ಪ್ರವೇಶಿಸಿದ ಸುಮಾರು 4000ದಷ್ಟು ಜನರನ್ನು ಕಣ್ಗಾವಲಿನಲ್ಲಿ ಇರಿಸಿದವು.

ಇಲ್ಲಿ ಕೊರೊನಾ ಆರ್‌ಎಂ ಎಂಬ app ಕೂಡಾ ಬಳಸಲಾಗುತ್ತಿದೆ. ಇದನ್ನು ಚೆಂಗನ್ನೂರಿನ ಐಎಚ್‌ಆರ್‌ಡಿ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಮನೆಗಳಲ್ಲಿಯೇ ಕ್ವಾರಂಟೈನ್‌ನಲ್ಲಿರುವ ಜನರನ್ನು ಈ app ಮೂಲಕ ಕಣ್ಗಾವಲಲ್ಲಿ ಇರಿಸಿ ಅವರು ನಿರ್ದಿಷ್ಟವಾಗಿ ಎಲ್ಲಿ ಇದ್ದಾರೆ ಎಂದು ತಿಳಿದುಕೊಳ್ಳಬಹುದು ಮತ್ತು ಅವರು ಒಂದು ವೇಳೆ ಕ್ವಾರಂಟೈನ್ ಮುರಿದರೆ, ಜಿಯೊ ಪೊಸಿಷನಿಂಗ್ ವ್ಯವಸ್ಥೆ (ಜಿಪಿಎಸ್) ಮೂಲಕ ತಕ್ಷಣವೇ ಪತ್ತೆ ಹಚ್ಚಬಹುದು. ಕೇರಳವೀಗ ಕೊರೊನಾ ನಕ್ಷೆಯ “ಕರ್ವನ್ನು” ಸಪಾಟುಗೊಳಿಸಿದ್ದು, ಹೊಸ ಪ್ರಕರಣಗಳು ದಾಖಲಾಗುವುದು ತೀರಾ ಕಡಿಮೆಯಾಗಿದೆ. ಅನೇಕರು ಗುಣಮುಖರಾಗಿ ಮನೆಗೆ ಮರಳಿದ್ದು, ಉಳಿದ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...