Homeರಾಜಕೀಯಹಠಾತ್ ಸಿಎಂ ಗಾದಿಯ ಕನಸುಗಾರ

ಹಠಾತ್ ಸಿಎಂ ಗಾದಿಯ ಕನಸುಗಾರ

- Advertisement -
- Advertisement -

ಮತ್ತೊಬ್ಬ ಕಲರ್ ಫುಲ್ ರಾಜಕಾರಣಿ ಅನಂತಕುಮಾರ್ ಕಾಲನ ಮನೆ ಸೇರಿದ್ದಾರೆ. ಕೇಂದ್ರ ಸಚಿವರೂ ಆಗಿದ್ದ ರಾಜ್ಯದ ಪ್ರಮುಖ ಬಿಜೆಪಿ ನೇತಾರ ಅನಂತಕುಮಾರ್ ಅಸು ನೀಗಿದ ನಂತರ ಅವರನ್ನು ಕುರಿತು ’ವಾಚಾಮಗೋಚರ’ವಾಗಿ ಹೊಗಳಲಾಗುತ್ತಿದೆ. ಅವರ ವರ್ಣರಂಜಿತ ವ್ಯಕ್ತಿತ್ವವನ್ನು ’ಕಪ್ಪು-ಬಿಳುಪು’ ಬಣ್ಣಕ್ಕೆ ಸೀಮಿತಗೊಳಿಸಲಾಗುತ್ತದೆ. ಹಾಗೆ ನೋಡಿದರೆ ಯಾವ ವ್ಯಕ್ತಿತ್ವವನ್ನೂ ಕೇವಲ ಎರಡು ವರ್ಣ ಬಳಸಿ ಚಿತ್ರಿಸಲು ಆಗುವುದಿಲ್ಲ. ಚಿತ್ರಿಸಬಾರದು ಕೂಡ.
’ಕಪ್ಪು ಚುಕ್ಕೆ’ ಇಲ್ಲದ, ’ಸಜ್ಜನ’, ’ಅಪ್ಪಟ ಪ್ರಾಮಾಣಿಕ’, ’ಸೋಲಿಲ್ಲದ ಅಜಾತಶತ್ರು’ ಪದಗಳನ್ನು ಪುಂಖಾನುಪುಂಖವಾಗಿ ಬಳಸುವುದು ಕೂಡ ಸರಿಯಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಘನತೆ ಇರುವ ಹಾಗೆ ಪದಗಳಿಗೂ ಇರುತ್ತದೆ. ಅವುಗಳು ಅರ್ಥಹೀನವೇ ಆಗುವಂತೆ ಬಳಸಬೇಕಿಲ್ಲ. ಹೊಗಳುವ ಅಥವಾ ತೆಗಳುವ ಭರದಲ್ಲಿ ಭಾವವನ್ನೇ ಕೊಲ್ಲುವ ಭಾಷೆಯನ್ನು ಬಳಸಬಹುದೇ?
ಅನಂತಕುಮಾರ್ ಅವರ ಅಕಾಲಿಕ ಮತ್ತು ಆಕಸ್ಮಿಕ ನಿಧನವು ಕರ್ನಾಟಕದ ರಾಜಕೀಯದಲ್ಲಿ ನಿರ್ವಾತವನ್ನುಂಟು ಮಾಡದಿದ್ದರೂ ಅವರ ’ಕೊರತೆ’ಯನ್ನು ಸರಳವಾಗಿ ತುಂಬಲು ಸಾಧ್ಯವಿಲ್ಲ. ಅದು ತೆರೆಯ ಮೇಲೆ ಮತ್ತು ತೆರೆಯ ಹಿಂದಿನ ರಾಜಕಾರಣದಲ್ಲಿ ಕೂಡ. ಹೀಗೆ ’ಕೊರತೆ’ ನಿರ್ಮಾಣವಾಗುವುದು ಕೂಡ ಸಣ್ಣ ಮಾತೇನಲ್ಲ.
ಪತ್ರಿಕಾ ಕಚೇರಿಗಳಿಗೆ ಪ್ರೆಸ್ ನೋಟ್ ಹಂಚುತ್ತಿದ್ದ ’ಹುಡುಗ’ನೊಬ್ಬ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ’ಕೊರತೆ’ ಉಂಟು ಮಾಡುವಷ್ಟರ ಮಟ್ಟಿಗೆ ಬೆಳೆದಿರುವುದು ಅಚ್ಚರಿ-ಬೆರಗಿಗೆ ಕಾರಣವಾಗುವಂತಹುದು. ವ್ಯಕ್ತಿಯಾಗಿ ತಮ್ಮ ವ್ಯಕ್ತಿಗತ ನಡವಳಿಕೆ ಮತ್ತು ಉತ್ತಮ ಮತ್ತು ಸೌಜನ್ಯಪರ ಮಾತು-ಕಾಳಜಿಗಳಿಂದ ಅನಂತಕುಮಾರ್ ಅವರು ಪತ್ರಕರ್ತರೂ ಸೇರಿದಂತೆ ಹಲವರಿಗೆ-ಒಡನಾಡಿಗಳಿಗೆ ಪ್ರಿಯರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅದೀಗ ಪದಗಳಲ್ಲಿ ವ್ಯಕ್ತವಾಗುತ್ತಿದೆ.
ರಾಜಕಾರಣ ಮತ್ತು ರಾಜಕೀಯ ನಡೆಗಳಿಗೆ ಸಂಬಂಧಿಸಿದಂತೆ ಅದೇ ಮಾತನ್ನು ಹೇಳಲು ಸಾಧ್ಯವಿಲ್ಲ. ಅವರಿಗೆ ’ಸಿಗಬೇಕಾದದ್ದು ಸಿಗಲಿಲ್ಲ’ ಎಂಬ ಮಾತನ್ನು ಎಲ್ಲರಿಗೂ ಅನ್ವಯಿಸಬಹುದು. ಆದೇ ರೀತಿ, ’ಸಿಕ್ಕಾಗ ಏನು ಮಾಡಿದರು’ ಎಂಬುದನ್ನು ಕೂಡ ಎಲ್ಲರಿಗೂ ಕೇಳಬೇಕು. ಅದು ಕೇವಲ ಅಧಿಕಾರ ಮತ್ತು ಅವಕಾಶಕ್ಕೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ.
’ಸರ್ವಾಧಿಕಾರಿ’ ಇಂದಿರಾಗಾಂಧಿ ಹೇರಿದ ಎಮರ್ಜೆನ್ಸಿಯಿಂದಾಗಿ ಕೆಲವರಿಗೆ ಹೋರಾಟ ಮಾಡುವ ಮತ್ತು ಜೇಲು ಸೇರುವ ಅವಕಾಶ ದೊರಕಿತು. ಹಾಗೆಯೇ ಎಮರ್ಜೆನ್ಸಿಯನ್ನ ’ಗ್ರೇಟ್’ ಎಂದು ಹೇಳುವ, ವ್ಯಾಖ್ಯಾನಿಸುವ ಬರಹಗಾರರು ಇದ್ದರು. ಈಗ ಕೂಡ ಅಗತ್ಯವಿದೆ ಎಂದು ವಾದಿಸುವವರ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಅದು ಬಂದಾಗಷ್ಟೇ ಗೊತ್ತಾಗುವುದರಿಂದ ಮತ್ತು ಬಂದಿದ್ದಾಗ ಅನುಭವಿಸಿದವರಿಗೆ ಮಾತ್ರ ಅದರ ಕಷ್ಟ ಗೊತ್ತು. ಉಳಿದವರು ಅದನ್ನು ಕೇವಲ ಅಂದಾಜಿಸಬಹುದು.ಬಹಳಷ್ಟು ಜನ ಅದನ್ನೂ ಮಾಡಲು ಸಿದ್ಧರಿರುವುದಿಲ್ಲ.
ಎಮರ್ಜೆನ್ಸಿ ಕಲ್ಪಿಸಿದ ಅವಕಾಶವು ಸಂಘ ಪರಿವಾರದವರಿಗೆ ಹೋರಾಟ ಮಾಡುವ ಮತ್ತು ಜೈಲುವಾಸ ಅನುಭವಿಸುವುದಕ್ಕೆ ಕಾರಣವಾಯಿತು. ಅನಂತಕುಮಾರ್ ಕೂಡ ಅದರ ಫಲಾನುಭವಿ. ನಾಲ್ಕಾರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಇರುವ ಕರ್ನಾಟಕದ ಉಳಿದ ರಾಜಕಾರಣಿಗಳಿಗೆ ಹೋಲಿಸಿದರೆ ಅನಂತಕುಮಾರ್ ಲಕ್ಕಿ. ಪ್ರಧಾನಿ ವಾಜಪೇಯಿ ಅವರ ಅಧಿಕಾರ ಅವಧಿಯ ಆರು ವರ್ಷಗಳ ಕಾಲ ಅತ್ಯಂತ ಪ್ರಭಾವಶಾಲಿ ಹುದ್ದೆಗಳಲ್ಲಿದ್ದರು. ಈಗ ಮೋದಿ ಕ್ಯಾಬಿನೆಟ್ ನಲ್ಲಿ ಕೂಡ.
ರಾಜ್ಯ ರಾಜಕಾರಣದಲ್ಲಿ ಅವರಿಗೆ ’ಅವಕಾಶ’ ಸಿಗಲಿಲ್ಲ ಎಂದು ಹಲಬುವವರಿಗೆ ಹಠಾತ್ ಆಗಿ ಮುಖ್ಯಮಂತ್ರಿ ಆದ ರಾಮಕೃಷ್ಣ ಹೆಗಡೆ ಗೋಚರಿಸುತ್ತಾರೆ. ಸ್ವತಃ ಅನಂತಕುಮಾರ್ ಅವರಿಗೂ ಅದೇ ತರಹದ ಆಸೆಗಳಿದ್ದವು. ಮುಖ್ಯಮಂತ್ರಿಯಾದ ನಂತರ ’ಸರ್ವರನ್ನೂ ಒಳಗೊಳ್ಳುವ’ ರಾಜಕಾರಣ ಮಾಡಬೇಕು. ’ಜನನಾಯಕ’ ಆಗಬೇಕು ಎಂಬ ಇರಾದೆ ಅವರದಾಗಿತ್ತು. ಹೆಗೆಡೆಯವರಿಗೆ ಆದ ಆಕಸ್ಮಿಕ ಮತ್ತೊಬ್ಬರಿಗೆ ಆಗಲಾರದು. ಅದು ಬೈ ಚಾನ್ಸ್ ಆದ ಬೆಳವಣಿಗೆ. ಇತಿಹಾಸ ಅಥವಾ ನಡೆದು ಹೋದ ಒಂದು ಘಟನೆಯನ್ನು ಇಟ್ಟುಕೊಂಡು ಅದೇ ರೀತಿ ನಡೆಯಲಿ ಎಂದು ಆಸೆ ಪಡುವುದು ತಪ್ಪೇನಲ್ಲ. ಆದರೆ, ಅದು ಮರುಕಳಿಸುವ ಸಾಧ್ಯತೆ ಕಡಿಮೆ.
ರಾಜ್ಯ ರಾಜಕಾರಣದಲ್ಲಿ ಪ್ರಮುಖ ಹುದ್ದೆ ಪಡೆಯಲು ಅಥವಾ ’ಮುಖ್ಯಮಂತ್ರಿ’ ಆಗಲು ಅವರು ತೆರೆಯ ಮರೆಯಲ್ಲಿ ’ಸಕ್ರಿಯ’ ಪ್ರಯತ್ನ ನಡೆಸಿದ್ದು ಗುಟ್ಟಿನ ಸಂಗತಿಯೇನಲ್ಲ. ಸಹಜವಾಗಿಯೇ ಬಯಸದಿದ್ದರೂ ’ಹುಟ್ಟು’ ಕೆಲವರಿಗೆ ವರ ಮತ್ತು ಶಾಪಗಳೆರಡನ್ನೂ ತಂದು ಕೊಡುತ್ತದೆ. ಅವರು ಹುಟ್ಟಿದ ’ಸಮುದಾಯ’ದ ಕಾರಣದಿಂದ ಹಲವು ಲಾಭ ದೊರೆತವು. ಹಾಗೆಯೇ ಅದೇ ’ಮಾಸ್ ಲೀಡರ್’ ಎಂದು ಪರಿಗಣಿಸದೇ ಇರುವಂತೆ ಅಡ್ಡಿಯೂ ಆಯಿತು. ಅವರು ಕೂಡ ಅಧಿಕಾರ ದೊರೆತ ನಂತರ ’ಜನನಾಯಕ’ ಆಗಬೇಕು ಅಂದುಕೊಂಡಿರುವಲ್ಲಿಯೇ ಲೋಪ ಇತ್ತು.
ಬಿಜೆಪಿ ಪಕ್ಷದೊಳಗಿನ ಬದಲಾವಣೆ-ಏರಿಳಿತಗಳು ಕೂಡ ಅನಂತಕುಮಾರ್ ಅವರ ರಾಜಕೀಯ ಬದುಕಿನ ಮೇಲೆ ನೇರ ಪರಿಣಾಮ ಬೀರಿದವು. ಅವರಿಗೆ ಹಲವು ಅವಕಾಶಗಳನ್ನು ನೀಡಿದ ಪಕ್ಷವು ಸಹಜವಾಗಿಯೇ ತನ್ನ ಲಾಭಕ್ಕಾಗಿ ಅನಂತಕುಮಾರ್ ಅವರನ್ನೂ ನಿಯಂತ್ರಿಸಿತು. ಹಾಗೆ ನಿಯಂತ್ರಣ ಮೀರಿ ಹೊರ ಬರುವ ಇರಾದೆ ಅವರಿಗೆ ಇರಲಿಲ್ಲ ಮತ್ತು ಅವರ ವ್ಯಕ್ತಿತ್ವಕ್ಕೆ ಅದು ಸಾಧ್ಯವೂ ಇರಲಿಲ್ಲ.
ಕೇಂದ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದರು. ಸಚಿವರಾಗಿ, ಬಿಜೆಪಿ ನಾಯಕರಾಗಿ ಅನಂತಕುಮಾರ್ ಅವರ ’ಸಾಧನೆ’ ನಗಣ್ಯವೇನಲ್ಲ. ಆದರೆ, ಪಕ್ಷದ ಗುಂಪುಗಾರಿಕೆ ಅವರು ಮತ್ತಷ್ಟು ಬೆಳೆಯದಂತೆ ಬಿಡಲಿಲ್ಲ ಎಂಬುದನ್ನೂ ಗಮನಿಸಬೇಕು. ಹಾಲಿ ಪ್ರಧಾನಿ ಅವರು ಅನಂತಕುಮಾರ ಅವರನ್ನು ’ವಿರೋಧಿ ಬಣ’ದವರು ಎಂದೇ ಪರಿಗಣಿಸುತ್ತಿದ್ದರು. ಸಂಪುಟದಿಂದ ಕೈ ಬಿಡಲಾಗದ ಆದರೆ ಪ್ರಮುಖ ಸ್ಥಾನ ನೀಡಲು ಮನಸ್ಸಿಲ್ಲದ ಸ್ಥಿತಿ ಅವರದಾಗಿತ್ತು. ಆಡಳಿತದ ಅನುಭವ ಇದ್ದ ಅನಂತಕುಮಾರ್ ಅವರನ್ನು ರಸಗೊಬ್ಬರ ಖಾತೆಯಿಂದ ಸಂಸದೀಯ ವ್ಯವಹಾರಗಳ ಖಾತೆಗೆ ಪ್ರಮೋಷನ್ ನೀಡುವಷ್ಟು ಮಾತ್ರ ಔದಾರ್ಯ ತೋರಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಅವರನ್ನು ಸೋಲಿಸುವವರೇ ಇರಲಿಲ್ಲ. ಕಾಂಗ್ರೆಸ್ ಎದುರಾಳಿಯನ್ನು ಆರಿಸುವುದಕ್ಕಾಗಿ ಎಲ್ಲ ಬಗೆಯ ಪ್ರಯತ್ನ ನಡೆಸಿತ್ತು. ಚುನಾವಣಾ ರಾಜಕೀಯದಲ್ಲಿ ಸಂಸತ್ ಗೆ ಮಾತ್ರ ಸೀಮಿತರಾಗಿದ್ದ ಅನಂತಕುಮಾರ್ ಅವರು ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯುವುದು ಕೂಡ ಕಷ್ಟ ಸಾಧ್ಯವಾದ ಸಂಗತಿಯಾಗಿತ್ತು.
ಅನಂತಕುಮಾರ್ ಅವರದು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಎಂದು ಹೇಳುವುದು ಸಾಧ್ಯವೇ? ಇಲ್ಲ. ಟೆಲಿಕಾಮ್ ಹಗರಣ, ಹೌಸಿಂಗ್ ಹಗರಣ, ನೀರಾ ರಾಡಿಯಾ ಟೇಪ್ ಪ್ರಕರಣ, ಅಶೋಕಾ ಹೋಟೆಲ್ ಪ್ರಕರಣ ಹೀಗೆ ಪಟ್ಟಿ ಬೆಳೆಯುತ್ತದೆ. ಅವು ಯಾವುವೂ ಸಣ್ಣ-ಪುಟ್ಟವುಗಳೇನಲ್ಲ. ಅನಂತಕುಮಾರ್ ಸುದೈವಿ ಮತ್ತು ಚಾಣಾಕ್ಷ ಅವುಗಳ ’ಮಸಿ’ ತಮಗೆ ಹತ್ತದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಅಳೆದು ತೂಗಿದ ಮೇಲೆ ಅನಂತಕುಮಾರ್ ಸಾವು ಕೆಲಕಾಲ ಅವರಿದ್ದ ಪಕ್ಷಕ್ಕೆ ’ಖಾಲಿತನ’ ಅನುಭವಿಸುವಂತೆ ಮಾಡುತ್ತದೆ ಎಂಬುದಷ್ಟೇ ಉಳಿಯುತ್ತದೆ.

– ಡಿ.ಪಿ.ಗೌತಮ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...