ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕಾಂಬೋಡಿಯಾಕ್ಕೆ ಕಳ್ಳಸಾಗಣೆ ಮಾಡಲಾಗಿದ್ದ 27 ಯುವಕರು ಕಳೆದ ಶುಕ್ರವಾರ (ಮೇ 24) ಮನೆಗೆ ಮರಳಿದ್ದಾರೆ.
ಉದ್ಯೋಗದ ಭರವಸೆ ಮೇಲೆ ಒಟ್ಟು 58 ಯುವಕರನ್ನು ಇತ್ತೀಚೆಗೆ ಕಾಂಬೋಡಿಯಾಕ್ಕೆ ಸಾಗಿಸಲಾಗಿತ್ತು. ಅದರಲ್ಲಿ 27 ಮಂದಿ ಆಂಧ್ರ ಪ್ರದೇಶದವರಿದ್ದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿಶಾಖಪಟ್ಟಣಂ ಜಂಟಿ ಪೊಲೀಸ್ ಆಯುಕ್ತ ಫಕ್ಕೀರಪ್ಪ ಕಾಗಿನೆಲ್ಲಿ, “ಶುಕ್ರವಾರ 25 ಯುವಕರ ತಂಡ ವಿಶಾಖಪಟ್ಟಣಕ್ಕೆ ಆಗಮಿಸಿದೆ. ಇನ್ನಿಬ್ಬರು ತಮ್ಮದೇ ಆದ ವ್ಯವಸ್ಥೆ ಮಾಡಿಕೊಂಡು ಮನೆಗೆ ತೆರಳಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಘಟನೆಯ ಬಳಿಕ ರಾಜ್ಯದ ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗಿತ್ತು.
ಪೊಲೀಸರ ಪ್ರಕಾರ, ಆಂಧ್ರ ಪ್ರದೇಶದ ವಂಚಕರು ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟು ನಿರುದ್ಯೋಗಿ ಯುವಕರಿಗೆ ಆಮಿಷ ಒಡ್ಡುತ್ತಿದ್ದರು. ಬಳಿಕ ಅವರನ್ನು ಕಾಂಬೋಡಿಯಾದ ಚೀನಿ ಆಪರೇಟರ್‌ಗಳಿಗೆ ಮಾರಾಟ ಮಾಡಲು ಕಳ್ಳಸಾಗಣೆ ಮಾಡುತ್ತಿದ್ದರು. ಹೀಗೆ ಕಾಂಬೋಡಿಯಾ ತಲುಪಿದ ಯುವಕರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು. ಅಲ್ಲದೆ, ಅವರನ್ನು ಸೈಬರ್ ಅಪರಾಧ ಕೃತ್ಯಗಳು ಮತ್ತು ಡಾರ್ಕ್ ರೂಮ್‌ಗಳಲ್ಲಿ ಕೆಲಸ ಮಾಡಲು ನೇಮಿಸಿಕೊಳ್ಳುತ್ತಿದ್ದರು.
ಕಳ್ಳಸಾಗಣೆಗೊಳಗಾದ ಯುವಕರು, ಕಾಂಬೋಡಿಯಾದ ಸಿಹಾನೌಕ್‌ವಿಲ್‌ನಲ್ಲಿ ಸೈಬರ್‌ಕ್ರೈಮ್‌ನ ಹಾಟ್‌ಸ್ಪಾಟ್ ಆಗಿರುವ ಜಿನ್‌ಬೆ ಮತ್ತು ಕಾಂಪೌಂಡ್‌ನಲ್ಲಿ ತಮ್ಮ ಮಾಲೀಕರ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಆಗ ಅಲ್ಲಿನ ಸ್ಥಳೀಯ ಅಧಿಕಾರಿಗಳು 300ಕ್ಕೂ ಹೆಚ್ಚು ಯುವಕರನ್ನು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಮಾನವ ಕಳ್ಳಸಾಗಣಿಕೆ ಜಾಲ ಬೆಳಕಿಗೆ ಬಂದಿತ್ತು.
ಈ ವಿಷಯ ಹೊರಜಗತ್ತಿಗೆ ಗೊತ್ತಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ಇತರ ಪ್ರಮುಖ ಭಾರತೀಯ ಸರ್ಕಾರಿ ಏಜೆನ್ಸಿಗಳ ಮೂಲಕ ಯುವಕರು ತಾಯ್ನಾಡಿಗೆ ಮರಳಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಫಕ್ಕೀರಪ್ಪ ಮಾಹಿತಿ ನೀಡಿದ್ದಾರೆ.
ವಿಶಾಖಪಟ್ಟಣಂ ಮತ್ತು ಸುತ್ತಮುತ್ತಲಿನ 150ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅವರನ್ನು ಕಳ್ಳಸಾಗಣಿಕೆ ಜಾಲಕ್ಕೆ ಹಸ್ತಾಂತರಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : 22 ಜನರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಗೆ ಹಿಮಾಚಲದ ಮಳೆಹಾನಿ ಪರಿಹಾರಕ್ಕೆ ₹9 ಸಾವಿರ ಕೋಟಿ ಕೊಡಲಾಗಿಲ್ಲ: ರಾಹುಲ್ ಗಾಂಧಿ


