ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದೆ. 75 ಪುರಸಭೆಗಳಲ್ಲಿ 74 ರಲ್ಲಿ ಜಯಗಳಿಸಿದೆ. ಎಲ್ಲಾ 12 ಮಹಾನಗರ ಪಾಲಿಕೆಗಳಲ್ಲಿಯೂ ಜಯಭೇರಿ ಬಾರಿಸಿದೆ.
ವಿಶಾಖಪಟ್ಟಣಂ, ವಿಜಯವಾಡ ಮತ್ತು ಗುಂಟೂರು ನಗರಗಳಲ್ಲಿ ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ದೊಡ್ಡ ಹಿನ್ನೆಡೆಯಾಗಿದೆ. ವಿರೋಧ ಪಕ್ಷ ಟಿಡಿಪಿ ಅನೇಕ ಕಡೆಗಳಲ್ಲಿ ಎರಡು ಅಂಕಿಗಳನ್ನು ದಾಟಲು ಸಹ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಟಿಡಿಪಿ, ತಾಡಿಪತ್ರಿ ಮತ್ತು ಮೈದುಕೂರ್‌ನಲ್ಲಿ ಬಹುಮತದ ವಾರ್ಡ್‌ಗಳನ್ನು ಗೆದ್ದಿದ್ದರೂ ಕೂಡ, ವೈಎಸ್‌ಆರ್‌ಸಿ ಈ ಎರಡು ಕಡೆಗಳಲ್ಲಿ ಅಧ್ಯಕ್ಷರ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಜನಸೇನೆ-ಬಿಜೆಪಿ ಮೈತ್ರಿಗೆ ಯಾವುದೇ ಸ್ಥಾನ ಲಭಿಸಿಲ್ಲ.
ಇದನ್ನೂ ಓದಿ: ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಜಗನ್ ಪಕ್ಷಕ್ಕೆ ಭಾರೀ ಮುನ್ನಡೆ
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿಯು ವೈಎಸ್‌ಆರ್‌ಸಿಯ ಗೆಲುವು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ವಿಜಯಕ್ಕೆ ನಾಂದಿ ಹಾಡಿದೆ ಎನ್ನಲಾಗುತ್ತಿದೆ. ಈ ಬಾರಿಯ ಕಾರ್ಪೋರೇಷನ್ ಎಲೆಕ್ಷನ್ ಅನ್ನು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಗಂಭೀರವಾಗಿ ಪರಿಗಣಿಸಿದರು. ನಗರ ಪ್ರದೇಶದಲ್ಲಿ ತಾವಿನ್ನು ಪ್ರಭಾವ ಹೊಂದಿದ್ದೇನೆ ಎಂಬುದನ್ನು ಸಾಬೀತು ಪಡಿಸಲು ಈ ಬಾರಿ ಪ್ರಯತ್ನಿಸಿದ್ದರು. ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಲೋಕೇಶ್ ರಾಜ್ಯದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಈ ಬಾರಿ ಭಾರಿ ಪ್ರಚಾರ ನಡೆಸಿದ್ದರು.
ಪುರಸಭೆ ಚುನಾವಣೆಯಲ್ಲಿ ವೈಎಸ್ಆರ್‌ಸಿಯ ಅದ್ಭುತ ಗೆಲುವು ಸುಮಾರು ಎರಡು ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಕಳೆದ ತಿಂಗಳು ನಡೆದ ಪಂಚಾಯತ್ ಚುನಾವಣೆಗಳಲ್ಲಿ ತನ್ನದೆ ಪಕ್ಷದ ಗೆಲುವನ್ನು ಮೀರಿಸಿದೆ.
2019 ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿ, ವಿಧಾನಸಭೆಯಲ್ಲಿ ಸುಮಾರು ಶೇಕಡಾ 85 ರಷ್ಟು ಸ್ಥಾನಗಳನ್ನು ಗೆದ್ದಿತ್ತು. ಪಕ್ಷೇತರ ಆಧಾರದ ಮೇಲೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕಡಾ 83 ರಷ್ಟು ಪಂಚಾಯಿತಿಗಳಲ್ಲಿ ಗೆಲುವು ಪಡೆದುಕೊಂಡಿತ್ತು. ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇಕಡಾ 100ರಷ್ಟು ಗೆಲುವು ಪಡೆದಿದೆ.
ವಿಶೇಷವೆಂದರೆ ಈ ಬಾರಿ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಪ್ರಚಾರ ನಡೆಸಿಲ್ಲ ಎಂಬುದು. ತಾವು ಎಲ್ಲಾ ವರ್ಗದ ಜನರಿಗಾಗಿ ಮಾಡಿರುವ ಕಲ್ಯಾಣ ಕಾರ್ಯಕ್ರಮಗಳು, ತಾನು ನೀಡಿದ್ದ ಭರವಸೆಗಳನ್ನು ಉಳಿಸಿಕೊಂಡಿದ್ದೇನೆ ಎಂಬ ವಿಶ್ವಾಸದಲ್ಲಿ ಜಗನ್ ಸುಮ್ಮನಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನಗೆ ರಕ್ಷಣೆ ಕೊಡಿ ಎಂದ ಯುವತಿ – ವೀಡಿಯೋ ವೈರಲ್


