ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಬಿಜೆಡಿ ರಾಜ್ಯಸಭಾ ಸದಸ್ಯ ಸಸ್ಮಿತ್ ಪಾತ್ರ ರಾಜೀನಾಮೆ ನೀಡಿದ್ದಾರೆ.
ರಾಜ್ಯಸಭಾ ಅಧ್ಯಕ್ಷರಿಗೆ ಮಾರ್ಚ್ 28ರಂದು ಬರೆದ ಪತ್ರದಲ್ಲಿ ಪಾತ್ರಾ ಅವರು, “ಸಾರ್ವಜನಿಕ ಹೇಳಿಕೆಯೊಂದರಲ್ಲಿ ದಿವಂಗತ ಬಿಜು ಪಟ್ನಾಯಕ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ವ್ಯಕ್ತಿಯ ಅಡಿಯಲ್ಲಿ ಕೆಲಸ ಮಾಡಲು ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ” ಎಂದು ಹೇಳಿದ್ದಾರೆ.
ಮಾರ್ಚ್ 27ರಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ದುಬೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಮೆರಿಕದ ಹಣ ಹಾಗೂ ಸಿಐಎ ಏಜೆಂಟ್‌ಗಳ ಸಹಯೋಗದೊಂದಿಗೆ ಚೀನಾದ ವಿರುದ್ಧ 1962ರ ಯುದ್ಧವನ್ನು ಮಾಡಿದ್ದರು ಎಂದು ಆರೋಪಿಸಿದ್ದರು. ಬಿಜು ಪಟ್ನಾಯಕ್ ಅವರನ್ನು ಅಮೆರಿಕ ಸರ್ಕಾರ, ಸಿಐಎ ಮತ್ತು ನೆಹರೂ ನಡುವಿನ ‘ಸಂಪರ್ಕ ಕೊಂಡಿ’ ಎಂದು ಹೇಳಿದ್ದರು.
ಬಿಜು ಪಟ್ನಾಯಕ್ ಅವರು ಒಡಿಶಾದ ಚಾರ್ಬಾಟಿಯಾ ವಾಯುನೆಲೆಯಲ್ಲಿ ಅಮೆರಿಕದ ಬೇಹುಗಾರಿಕಾ U2 ವಿಮಾನಗಳ ಕಾರ್ಯಾಚರಣೆಗೆ ಸಿಐಎಗೆ ಸಹಾಯ ಮಾಡಿದ್ದರು ಎಂದು ದುಬೆ ಆರೋಪಿಸಿದ್ದರು. ಅಷ್ಟೇ ಅಲ್ಲದೆ, 1963ರಿಂದ 1979 ರವರೆಗೆ ಈ ವಾಯುನೆಲೆಯು ಭಾರತದಲ್ಲಿದ್ದ ಅಮೆರಿಕದ ಮಿಲಿಟರಿ ಪಡೆಗೆ ಆಶ್ರಯ ತಾಣವಾಗಿತ್ತು ಎಂದೂ ಹೇಳಿದ್ದರು.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಪಾತ್ರಾ ಅವರು, ಬಿಜು ಪಟ್ನಾಯಕ್ ಅವರ ವಿರುದ್ಧ ದುಬೆ ಮಾಡಿರುವ ಆರೋಪಗಳು, “ಅತಿರೇಕ, ಸುಳ್ಳು ಮತ್ತು ಬೇಜವಾಬ್ದಾರಿತನದಿಂದ ಕೂಡಿತ್ತು” ಎಂದು ಹೇಳಿದ್ದಾರೆ.
“ಬಿಜು ಪಟ್ನಾಯಕ್ ಅವರು ಒಬ್ಬ ಮಹೋನ್ನತ ಸ್ವಾತಂತ್ರ್ಯ ಹೋರಾಟಗಾರ, ದೂರದೃಷ್ಟಿಯ ನಾಯಕ ಮತ್ತು ಈ ಮಣ್ಣಿನ ಮಗ. ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆ ಪ್ರಶ್ನಾತೀತವಾಗಿದೆ. ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚುವ ಮತ್ತು ಪೂಜನೀಯ ನಾಯಕನ ಹೆಸರಿಗೆ ಮಸಿ ಬಳಿಯುವ ಇಂತಹ ಪ್ರಯತ್ನಗಳು ಸ್ವೀಕಾರಾರ್ಹವಲ್ಲ ಮತ್ತು ಖಂಡನೀಯ” ಎಂದು ಬಿಜಿಡಿ ರಾಜ್ಯಸಭಾ ನಾಯಕ ಪಾತ್ರಾ ಹೇಳಿದ್ದಾರೆ.
ದುಬೆ ಹೇಳಿಕೆಯು ಒಡಿಶಾದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಬಿಜು ಜನತಾ ದಳ (ಬಿಜೆಡಿ) ಮತ್ತು ಪಟ್ನಾಯಕ್ ಕುಟುಂಬದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಿಜು ಪಟ್ನಾಯಕ್ ಅವರ ಮಗ ಹಾಗೂ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ದುಬೆ ಹೇಳಿಕೆಯನ್ನು ‘ಅತಿರೇಕದ ವರ್ತನೆ’ ಎಂದು ಕರೆದಿದ್ದಾರೆ. ಚೀನಾ ಯುದ್ಧದ ಸಮಯದಲ್ಲಿ ಬಿಜು ಪಟ್ನಾಯಕ್ ಅವರ ಕಾರ್ಯತಂತ್ರ ಮತ್ತು ದೇಶಭಕ್ತಿಯನ್ನು ನೆನಪಿಸಿದ ಅವರು, ದುಬೆ ಅವರಿಗೆ ‘ಮಾನಸಿಕ ವೈದ್ಯರ ಅಗತ್ಯವಿದೆ’ ಎಂದು ಕಿಡಿಕಾರಿದ್ದಾರೆ.
ಈ ವಿಚಾರವಾಗಿ ಸೋಮವಾರ (ಮಾ.30) ಬಿಜೆಡಿ ಸಂಸದರು ರಾಜ್ಯಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿ, ಸದನದಿಂದ ಹೊರನಡೆದಿದ್ದಾರೆ.
ದುಬೆ ಅವರ ಹೇಳಿಕೆಯು ‘ಒಡಿಶಾದ ಅಸ್ಮಿತೆಗೆ’ ಮಾಡಿದ ಅವಮಾನ ಎಂದು ಬಿಜೆಡಿ ಸಂಸದರು ಟೀಕಿಸಿದ್ದು, ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜು ಪಟ್ನಾಯಕ್ ಅವರು ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟಗಾರರನ್ನು ರಕ್ಷಿಸಿದವರು ಮತ್ತು ಎರಡನೇ ಮಹಾಯುದ್ಧದಲ್ಲಿ ರಷ್ಯಾಕ್ಕೆ ಸಹಾಯ ಮಾಡಿದ ಧೀಮಂತ ನಾಯಕ. ಅಂತಹ ನಾಯಕನನ್ನು ‘ಸಿಐಎ ಏಜೆಂಟ್’ ಎಂದು ಕರೆಯುವುದು ಇತಿಹಾಸವನ್ನು ತಿರುಚುವ ನೀಚ ಪ್ರಯತ್ನ ಎಂದು ಬಿಜೆಡಿ ಕಿಡಿಕಾರಿದೆ.


