Homeಕರ್ನಾಟಕಕೊಪ್ಪಳ: ಬಾಲ್ದೋಟಾ ಕಾರ್ಖಾನೆ ವಿರೋಧಿ ಪ್ರತಿಭಟನೆ; 9 ಹೋರಾಟಗಾರರ ವಿರುದ್ಧ ಎಫ್‌ಐಆರ್ ದಾಖಲು

ಕೊಪ್ಪಳ: ಬಾಲ್ದೋಟಾ ಕಾರ್ಖಾನೆ ವಿರೋಧಿ ಪ್ರತಿಭಟನೆ; 9 ಹೋರಾಟಗಾರರ ವಿರುದ್ಧ ಎಫ್‌ಐಆರ್ ದಾಖಲು

- Advertisement -
- Advertisement -

ಕೊಪ್ಪಳ: ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಬಾಲ್ದೋಟಾ ಎಂಎಸ್‌ಪಿಎಲ್‌ ಕಂಪನಿಯ ಅತಿಕ್ರಮಣ ಮತ್ತು ಕೆರೆ ನೀರಿನ ಹಕ್ಕಿಗಾಗಿ ನಡೆಯುತ್ತಿದ್ದ ತೀವ್ರ ಪ್ರತಿಭಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಬುಧವಾರ (ಜುಲೈ 23, 2025) ಬಾಲ್ದೋಟಾ ಕಾರ್ಖಾನೆ ಎದುರು ಧರಣಿ ನಡೆಸಿದ್ದ ಒಂಬತ್ತು ಮಂದಿ ಹೋರಾಟಗಾರರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರತಿಭಟನೆಯು ಸುಮಾರು 4,000 ಕುರಿ ಮತ್ತು ದನಗಳೊಂದಿಗೆ ನಡೆದಿದ್ದು, ಜಿಲ್ಲಾಡಳಿತ ಭವನ ಮತ್ತು ಬಾಲ್ದೋಟಾ ಕಾರ್ಖಾನೆ ಎರಡೂ ಕಡೆ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಪ್ರಕರಣದ ಹಿನ್ನೆಲೆ

ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಜ್ವಲಂತ ಸಮಸ್ಯೆಯಾಗಿರುವ ಬಸಾಪುರ ಕೆರೆ ಅತಿಕ್ರಮಣವನ್ನು ಖಂಡಿಸಿ, ಬಲ್ಡೋಟಾ ಎಂಎಸ್‌ಪಿಎಲ್‌ ಕಂಪನಿ ವಿರುದ್ಧ ಬೃಹತ್ “ಜನ-ಜಾನುವಾರು ಪ್ರತಿಭಟನೆ” ಜುಲೈ 24 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಿತು. ಬಸಾಪುರ ಕೆರೆ ಬಚಾವೋ ಮತ್ತು ಪರಿಸರ ಹಿತರಕ್ಷಣಾ ಸಮಿತಿಗಳು ಜಂಟಿಯಾಗಿ ಕರೆ ನೀಡಿದ ಈ ಪ್ರತಿಭಟನೆಯಲ್ಲಿ ಸುಮಾರು 4,000 ಕುರಿ ಮತ್ತು ದನಗಳೊಂದಿಗೆ ಸಹಸ್ರಾರು ರೈತರು ಕೊಪ್ಪಳ ಜಿಲ್ಲಾಡಳಿತದ ಕಚೇರಿ ಮುಂದೆ ಜಮಾಯಿಸಿ, ಉಚ್ಚ ನ್ಯಾಯಾಲಯದ ಆದೇಶದಂತೆ ಬಸಾಪುರ ಕೆರೆಯನ್ನು ತಕ್ಷಣವೇ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಆಗ್ರಹಿಸಿದ್ದರು.

ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ, “ಸಿದ್ದರಾಮಯ್ಯನವರೇ ಇಲ್ಲಿ ನೋಡಿ, ಕುರಿಗಳಿಗೆ ಕುಡಿಯಲು ನೀರಿಲ್ಲ, ದನಗಳಿಗೆ ಕುಡಿಯಲು ನೀರಿಲ್ಲ!” ಎಂದು ಆಕ್ರೋಶದಿಂದ ಕೂಗಿದರು. ಕೊಪ್ಪಳ ಜಿಲ್ಲೆಯ ಬೃಹತ್ ಕಾರ್ಪೊರೇಟ್ ಸಂಸ್ಥೆಯಾದ ಬಲ್ಡೋಟಾ ಕಂಪನಿಗೆ ಬಸಾಪುರ ಕೆರೆಯನ್ನು ಬರೆದುಕೊಡಲಾಗಿದೆ ಎಂದು ಆರೋಪಿಸಿದ ರೈತರು, ಇದನ್ನು ವಿರೋಧಿಸಿ ಕಂಪನಿ ಮುಂದೆ ಈ ಜನ-ಜಾನುವಾರು ಪ್ರತಿಭಟನೆ ನಡೆಸಲಾಯಿತು ಎಂದು ತಿಳಿಸಿದರು. ನೂರಾರು ಪ್ರತಿಭಟನಾಕಾರರು, “ಬಸಾಪುರ ಕೆರೆಯನ್ನು ನಾವು ಬಿಡುವುದಿಲ್ಲ, ಬಿಡುವುದಿಲ್ಲ!” ಎಂದು ಜೋರು ಘೋಷಣೆಗಳನ್ನು ಕೂಗಿದರು. ಇಂತಹ ಕಂಪನಿಗಳಿಗೆ ಕಾರ್ಖಾನೆ ಮಾಡಲು ಕೇಳಿದಷ್ಟು ಜಾಗ ಕೊಟ್ಟಿರುವುದರ ಪರಿಣಾಮವೇ ಈ ನೀರಿನ ಅಭಾವ ಮತ್ತು ಜಾನುವಾರುಗಳ ಸಂಕಷ್ಟ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನಾನಿರತ ರೈತರು ನೀಡಿದ ಮಾಹಿತಿಯ ಪ್ರಕಾರ, ಬಲ್ಡೋಟಾ ಕಂಪನಿಯು ತನಗೆ ಮಂಜೂರಾಗಿದ್ದ ಭೂಮಿಯ ಜೊತೆಗೆ, ಬಸಾಪುರ ಗ್ರಾಮದ 44 ಎಕರೆ 35 ಗುಂಟೆ ಸಾರ್ವಜನಿಕರ ಕೆರೆಯನ್ನು ಅಕ್ರಮವಾಗಿ ತನ್ನೊಡಲೊಳಗೆ ಸೇರಿಸಿಕೊಂಡು, ಸುತ್ತಲೂ ಕಂಪೌಂಡ್ ಅನ್ನು ನಿರ್ಮಿಸಿದೆ. ಇಷ್ಟೇ ಅಲ್ಲದೆ, ಕೆರೆಯ ಮಧ್ಯಭಾಗದಲ್ಲಿ ರಸ್ತೆಯನ್ನೂ ಸಹ ನಿರ್ಮಿಸಿದ್ದು, ಇದು ಸಂಪೂರ್ಣವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವನ್ನು ಕಡಿತಗೊಳಿಸಿದೆ. ಈ ಕಂಪನಿಯ ಸುತ್ತಮುತ್ತ ಇರುವ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಭೂಮಿ ಮತ್ತು ಕೆರೆಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡಿದೆ. “ಕೆಲವರು ಈ ಕಂಪನಿ ಜೊತೆಗೆ ನಿಂತಿದ್ದಾರೆ. ಇದರಿಂದಾಗ ಸುತ್ತಮುತ್ತಲಿನ ಜನ, ಜಾನುವಾರುಗಳ ಸ್ಥಿತಿ ಅರಣ್ಯರೋದನವಾಗಿದೆ. ಇಂತಹ ಒಂದು ಪರಿಸ್ಥಿತಿ ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಉದ್ಭವಿಸಿದೆ,” ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉದ್ಭವಿಸಿರುವುದು ಮಾತ್ರವಲ್ಲದೆ, ಈ ಅತಿಕ್ರಮಣವನ್ನು ಪ್ರಶ್ನಿಸಲು ಹೋದರೆ ಕಾರ್ಖಾನೆಯವರು ಜನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮದ ರೈತರು, ಸುಮಾರು 4,000 ಕುರಿ-ದನಗಳೊಂದಿಗೆ ಕೊಪ್ಪಳ ಜಿಲ್ಲಾಡಳಿತದ ಮುಂದೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು.

ಒಬ್ಬ ರೈತ ಮಾತನಾಡಿ, “ನಮ್ಮ ಕೊಪ್ಪಳ ಜಿಲ್ಲೆಯ ಅಸ್ತಿಯನ್ನೆಲ್ಲಾ ಖರೀದಿಮಾಡಿಕೊಂಡು, ಕೆರೆಯ ನೀರನ್ನು ಕುಡಿಯಲು ಹೋಗಲು ದಾರಿಯಿಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ಅದರ ಸಲುವಾಗಿ ಇಂದು ನಾವು ಜಾನುವಾರುಗಳೊಂದಿಗೆ ಪ್ರತಿಭಟನೆ ಮಾಡಲಿಕ್ಕೆ ಬಂದಿದ್ದೇವೆ,” ಎಂದು ಹೇಳಿದರು. ಈ ಸಮಸ್ಯೆಯನ್ನು ಬಗೆಹರಿಸಿದರೆ ಒಳ್ಳೆಯದಾಗುತ್ತದೆ. ಇದನ್ನು ಬಗೆಹರಿಸದೇ ಹೋದರೆ ಮುಂದಿನ ದಿನಗಳಲ್ಲಿ “ಇಂದು 4,000 ಜಾನುವಾರುಗಳೊಂದಿಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ 45,000 ದನ ಮತ್ತು 1 ಲಕ್ಷ ಕುರಿಗಳೊಂದಿಗೆ ಬರುತ್ತೇವೆ,” ಎಂದು ಅವರು ಜಿಲ್ಲಾಡಳಿತಕ್ಕೆ ತೀವ್ರ ಎಚ್ಚರಿಕೆ ನೀಡಿದ್ದರು.

“ಆಗ ನಾವು ಈ ಕುರಿ ಮತ್ತು ಜಾನುವಾರುಗಳೊಂದಿಗೆ ಪ್ರತಿಭಟಿಸುತ್ತೇವೆ. ನಮಗೆ ನ್ಯಾಯ ದೊರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ” ಎಂದು ರೈತರು ದೃಢಸಂಕಲ್ಪ ವ್ಯಕ್ತಪಡಿಸಿದರು. “ಈ ಕಂಪನಿಯವರು 2007ರಿಂದಲೂ ನೀರನ್ನು ಬಳಕೆ ಮಾಡಲು ಬಿಟ್ಟಿಲ್ಲ. ಕೆರೆಯ ಸುತ್ತಲೂ ಕಂಪೌಂಡ್ ಹಾಕಿಬಿಟ್ಟಿದ್ದಾರೆ ಮತ್ತು ಗೇಟ್ ಮಾಡಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ, ಈ ಗೇಟಿಗೆ ಹತ್ತಾರು ಕಾವಲುಗಾರರನ್ನು ಇಟ್ಟಿದ್ದಾರೆ. ಹೀಗಿದ್ದಾಗ ನಾವು ನಮ್ಮ ಜಾನುವಾರುಗಳಿಗೆ ನೀರು ಕುಡಿಸುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು. ಬಸಾಪುರ ಕೆರೆಯ ಹತ್ತಿರ ಜನ ಅಥವಾ ಜಾನುವಾರು ಹೋದರೆ ಬಡಿದು ಕಳುಹಿಸುತ್ತಾರೆ. ಈ ರೀತಿಯ ದೌರ್ಜನ್ಯ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮುಂದುವರಿಯುತ್ತಿದೆ ಎಂದೂ ಪ್ರತಿಭಟಿಸಿದ ರೈತರು ಆರೋಪಿಸಿದ್ದರು.

ಇಂದು ಜನ ಮತ್ತು ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಸಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು. ಇಂದಿನ ಹೋರಾಟದ ಪ್ರಮುಖ ಉದ್ದೇಶಗಳು ಎರಡು. “ಒಂದು, ಬಲ್ಡೋಟಾ ಕಂಪನಿಯ ವಿಸ್ತರಣೆಯನ್ನು ನಿಲ್ಲಿಸಬೇಕು. ಎರಡನೆಯದು, ಕಂಪನಿಗೆ ಬಸಾಪುರ ಕೆರೆಯನ್ನು ಜಿಲ್ಲಾಡಳಿತ ಮಾರಾಟ ಮಾಡಿದೆ. ಇದನ್ನು ನಾವು ಸರ್ವತ ಒಪ್ಪುವುದಿಲ್ಲ. ಹಾಗಾಗಿ ಬಸಾಪುರ ಕೆರೆಯನ್ನು ಜನ ಮತ್ತು ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ,” ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದರು.

ಕಾನೂನುಬದ್ಧತೆ ಏನೇ ಇರಲಿ, ಸರ್ಕಾರ ಕಂಪನಿಗೆ ಈ ಕೆರೆಯನ್ನು ಮಾರಾಟ ಮಾಡಿರುವುದೇ ತಪ್ಪು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. “ಅದನ್ನು ಜನ ಜಾನುವಾರುಗಳಿಗೆ ಮುಕ್ತಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಾಗಾಗಿ ಈ ಕಂಪನಿಯಿಂದ ದೌರ್ಜನ್ಯಕ್ಕೊಳಗಾದ ಗ್ರಾಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಬೇಕು, ಇಲ್ಲಿಯ ಪರಿಸ್ಥಿತಿ ಅವಲೋಕಿಸಿ ಇಲ್ಲಿರುವ ಕಂಪನಿಯನ್ನು ಒಕ್ಕಲೆಬ್ಬಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು,” ಎಂದು ಅವರು ಆಗ್ರಹಿಸಿದ್ದರು.

ಇದನ್ನು ಬಿಟ್ಟು ಸರ್ಕಾರ ಮತ್ತು ಜಿಲ್ಲಾಡಳಿತ ಬೇರೆ ಏನೋ ನೆಪವೊಡ್ಡಿ ಬಲ್ಡೋಟಾ ವಿಸ್ತರಣೆಯನ್ನು ನಿಲ್ಲಿಸದಿದ್ದರೆ ಮತ್ತು ಕೆರೆಯನ್ನು ಮುಕ್ತಗೊಳಿಸದಿದ್ದರೆ, “ಮುಂದಿನ ದಿನಗಳಲ್ಲಿ 40,000 ಜಾನುವಾರುಗಳೊಂದಿಗೆ ಬಲ್ಡೋಟಾ ಕಂಪನಿಯ ಒಳಗೆ ನುಗ್ಗುವಂತಹ ಹೋರಾಟವನ್ನು ಮಾಡುತ್ತೇವೆ,” ಎಂದು ಹೋರಾಟಗಾರರು ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದರು.

ಧರಣಿ ನಡೆಸುತ್ತಿದ್ದಾಗ ಕಾರ್ಖಾನೆಯ ಸಿಬ್ಬಂದಿ ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ಧರಣಿನಿರತರು ಬಿ.ಎಸ್.ಪಿ.ಎಲ್. ಬಾಲ್ದೋಟಾ ಕಂಪನಿಯ ಮುಖ್ಯ ದ್ವಾರದ ಹತ್ತಿರ ಕರ್ತವ್ಯದಲ್ಲಿದ್ದಾಗ, ಸುಮಾರು 4,000ಕ್ಕೂ ಹೆಚ್ಚು ದನಗಳನ್ನು ಮತ್ತು ಕುರಿಗಳನ್ನು ಕಾರ್ಖಾನೆಯ ಆವರಣದೊಳಗೆ ಒಡೆದುಕೊಂಡು ಬಂದು ಕಂಪನಿಯ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಯ ಭದ್ರತಾ ವ್ಯವಸ್ಥಾಪಕರಾದ ಎಂ. ಮಹೇಶ್ ನೀಡಿದ ದೂರಿನಲ್ಲಿ, ಪ್ರತಿಭಟನಾಕಾರರು ತಮ್ಮನ್ನು ತಳ್ಳಿ ಬಲವಂತವಾಗಿ ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದರು.

ಈ ದೂರಿನ ಅನ್ವಯ, ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಅಲ್ಲಮ ಪ್ರಭು ಬೆಟದೂರು, ಹನುಮಂತಪ್ಪ ಕಲ್ಕೆರಿ, ಮಂಗಳೇಶ್ ರಾಥೋಡ್, ಮುದುಕಪ್ಪ ಹೊಸಮನಿ, ಕೆ.ಬಿ ಗೋನಾಳ್, ಯಮನೂರಪ್ಪ ಪೂಜಾರ, ಮಂಜುನಾಥ ಗೊಂಡಬಾಳ, ಭೀಮೇಶ ಕಲಕೇರಿ ಹಾಗೂ ಎ.ಗಫಾರ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದರು.

ಹೋರಾಟಗಾರ ಮಂಜುನಾಥ್ ಗೊಂಡ್ವಾಳ್ ಮಾತನಾಡಿ, “44 ಎಕರೆ ಕೆರೆ ಮತ್ತು ಸಾರ್ವಜನಿಕ 12 ಎಕರೆ ಭೂಮಿ ಅಂದರೆ ಸುಮಾರು 57 ಎಕರೆ ಮುಖ್ಯ ರಸ್ತೆ ಹೊಂದಿಕೊಂಡಿರುವ ಭೂಮಿಯನ್ನು ಕಬಳಿಸಿ ಅತ್ಯಂತ ಕಡಿಮೆ ಬೆಲೆಗೆ ಲೀಸ್ ಕಮ್ ಖರೀದಿ ಮಾಡಿಕೊಂಡಿದ್ದಾರೆ,” ಎಂದು ಆರೋಪಿಸಿದರು. ಈ ಕೆರೆಗೆ ಸಂಬಂಧಿಸಿದಂತೆ 2022ರ ಹೈಕೋರ್ಟ್ ಆದೇಶದಲ್ಲಿ ಈ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಸ್ಪಷ್ಟವಾಗಿ ಇದೆ. ಆದರೆ ಕಂಪನಿಯು ಈ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಗೊಂಡ್ವಾಳ್ ಆರೋಪಿಸಿದ್ದರು.

“ಹಾಗಾಗಿ ಜಾನುವಾರುಗಳಿಗೆ, ಕುರಿಗಳಿಗೆ, ಕರುಗಳಿಗೆ ನೀರು ಕುಡಿಯಲು ಮುಕ್ತಗೊಳಿಸಬೇಕು. ಇಲ್ಲಿ ಯಾವುದೇ ರೀತಿಯಾದ ಅಡತಡೆಯನ್ನು ಕಂಪನಿ ಮಾಡಬಾರದು ಎಂದು ಕೋರ್ಟ್ ಆದೇಶವಿದೆ. ಈ ಆದೇಶವನ್ನು ಸರ್ಕಾರ ಮತ್ತು ಜಿಲ್ಲಾಡಳಿತವು ಜಾರಿಮಾಡದೆ, ಕೆಲ ಜನರು ಕಂಪನಿ ಜೊತೆ ಸೇರಿಕೊಂಡಿದ್ದಾರೆ. ಹಾಗಾಗಿ ಕಂಪನಿ ನಿರ್ಮಿಸಿರುವ ಕಂಪೌಂಡ್ ಅನ್ನು ಈ ಕೂಡಲೇ ತೆರವುಗೊಳಿಸಬೇಕು. ಅಲ್ಲಿರುವ ಕಂಪನಿಯ ಭದ್ರತಾ ಸಿಬ್ಬಂದಿಯ ದೌರ್ಜನ್ಯದ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ. ಇಲ್ಲಿಯ ಜನ-ಜಾನುವಾರುಗಳೊಂದಿಗೆ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರೆಸುತ್ತೇವೆ,” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಈ ಸಂಬಂಧ ಮುಖ್ಯಮಂತ್ರಿಯವರಿಗೂ ಮತ್ತು ಜಿಲ್ಲಾಧಿಕಾರಿಗೂ ಸಹ ಮನವಿ ಸಲ್ಲಿಸಿದ್ದರೂ, ತಮ್ಮ ಸಮಸ್ಯೆ ಕುರಿತು ಯಾರೂ ಗಮನಹರಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. “ನಮ್ಮ ಊರಿನ ಕೆರೆಗೆ ನಮ್ಮ ಹಕ್ಕು ಇದೆ. ಸರ್ಕಾರವೇ ನಮಗೆ ಮೋಸ ಮಾಡಿದರೆ ನಾವೆಲ್ಲ ಬೀದಿಪಾಲಾಗುತ್ತೇವೆ. ರೈತರಾದ ನಾವು ದುಡಿಯದೇ ಇದ್ದರೆ ಇವರೇನು ದುಡ್ಡನ್ನು ತಿಂದು ಬದುಕುತ್ತಾರೆಯೇ? ಸರ್ಕಾರಕ್ಕೆ ರೈತರ ಮೇಲೆ ಕರುಣೆ ಇಲ್ಲವೇ? ಸರ್ಕಾರ ನಡೆಸುವವರು ರೈತರ ಮಕ್ಕಳಲ್ಲವೇ? ಇವರಿಗೆ ಸರ್ಕಾರಿ ನೌಕರಿ ಬಂದ ಕೂಡಲೇ ದೊಡ್ಡ ಶ್ರೀಮಂತರಾಗಿಬಿಟ್ಟರೆಯೇ? ಇಂತಹ ಬಂಡರು ಹುಟ್ಟಿ ಹುಟ್ಟಿ ನಮ್ಮ ದೇಶ ಹಾಳಾಗಿ ಹೋಗಿದೆ,” ಎಂದು ರೈತರೊಬ್ಬರು ತಮ್ಮ ಆಕ್ರೋಶವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು.

ಇಂದಿನದು ಕೇವಲ ಸಾಂಕೇತಿಕ ಪ್ರತಿಭಟನೆ ಆಗಿದೆ. ಇದು ಮುಂದುವರಿಯುತ್ತದೆ. ನ್ಯಾಯ ಸಿಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ರೈತರು ದೃಢಪಡಿಸಿದ್ದರು.

ಕೊಪ್ಪಳ: 4000 ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಯ ಪಾಲಂನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ ಏಳು ಮಂದಿ ಸಾವು

ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ...

ವಾರಣಾಸಿ: ಗಂಗಾ ನದಿಯ ದೋಣಿಯಲ್ಲಿ ‘ಇಫ್ತಾರ್’ ಕೂಟ ಆಯೋಜಿಸಿದ್ದಕ್ಕಾಗಿ 14 ಜನರ ಬಂಧನ 

ವಾರಣಾಸಿಯಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ 'ಇಫ್ತಾರ್' (ರಂಜಾನ್ ಸಮಯದಲ್ಲಿ ಸೂರ್ಯಾಸ್ತದ ನಂತರ ತಿನ್ನುವ ಊಟ) ಕೂಟವನ್ನು ಆಯೋಜಿಸಿದ್ದಕ್ಕಾಗಿ ಹದಿನಾಲ್ಕು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.  ದೈನಂದಿನ ಮುಸ್ಲಿಂ ಜೀವನವನ್ನು ಅಪರಾಧೀಕರಿಸುವ ಮತ್ತೊಂದು ಪ್ರಕರಣ ಇದಾಗಿದ್ದು,...

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಮಂಗಳವಾರ (ಮಾ.17) ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ನೌಗಾಂಗ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಮೂವರು ಶಾಸಕರನ್ನು ಅಮಾನತುಗೊಳಿಸಿದ ಒಡಿಶಾ ಕಾಂಗ್ರೆಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ. ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ...

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...

ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಯುವಜನರ ನಿರುದ್ಯೋಗ ಪ್ರಮಾಣ

15–29 ವರ್ಷ ವಯಸ್ಸಿನ ಯುವಕರಲ್ಲಿ ನಿರುದ್ಯೋಗ ದರವು ಫೆಬ್ರವರಿಯಲ್ಲಿ ನಾಲ್ಕು ತಿಂಗಳಲ್ಲೇ ಗರಿಷ್ಠ ಶೇ. 14.8 ಕ್ಕೆ ಏರಿದೆ. ಇದು ಜನವರಿಯಲ್ಲಿ ಶೇ. 14.7 ರಷ್ಟು ಹೆಚ್ಚಾಗಿ, ಯುವಜನರಲ್ಲಿ ನಿರುದ್ಯೋಗ ಹೆಚ್ಚಳ ಉಂಟಾಗಿದೆ...

ಆರ್‌ಎಸ್‌ಎಸ್‌ ನಿಷೇಧಕ್ಕೆ ಒತ್ತಾಯಿಸಿದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ; ಕಾಂಗ್ರೆಸ್ ಪ್ರತಿಕ್ರಿಯೆ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುನೈಟೆಡ್ ಸ್ಟೇಟ್ಸ್ ಆಯೋಗವು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ, ವಿಶ್ಲೇಷಣಾ...

ಕಾಂಗ್ರೆಸ್ ವಿರುದ್ಧದ ‘ಟರ್ಕಿ ಕಚೇರಿ’ ಹೇಳಿಕೆ: ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಸಮನ್ಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್

ಕಾಂಗ್ರೆಸ್ ವಿರುದ್ಧದ "ಟರ್ಕಿ ಕಚೇರಿ" ಆರೋಪಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಟರ್ಕಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತರರಾಷ್ಟ್ರೀಯ ಕಚೇರಿಯನ್ನು ನಡೆಸುತ್ತಿದೆ...

ಚುನಾವಣಾ ಆಯೋಗ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ವಿಧಾನಸಭಾ ಚುನಾವಣೆಗೂ ಮುನ್ನ, ಭಾರತದ ಚುನಾವಣಾ ಆಯೋಗ (ಇಸಿಐ) ಪ್ರಸ್ತುತ ಡಿಜಿಪಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು, ಮುಖ್ಯ ಮತ್ತು ಗೃಹ ಕಾರ್ಯದರ್ಶಿಗಳನ್ನು ಬದಲಿಸುವ ಮೂಲಕ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಪಶ್ಚಿಮ ಬಂಗಾಳದ ಹೊಸ ಡಿಜಿ...