19ನೇ ಶತಮಾನದ ಪ್ರಮುಖ ಆಧ್ಯಾತ್ಮದ ಗುರುವಾಗಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮದ ಕುರಿತಾಗಿ “ವ್ಯಕ್ತಿಯೊಬ್ಬನು ತಾನು ನಂಬಿದ ಧರ್ಮದಲ್ಲಿ ಅನೇಕ ಲೋಪದೋಶಗಳಿದ್ದಲ್ಲಿ ಮತ್ತು ಆ ವ್ಯಕ್ತಿಯು ಪ್ರಾಮಾಣಿಕ ಮತ್ತು ಶ್ರದ್ಧೆಯುಳ್ಳವನಾಗಿದ್ದರೆ ಆಗ ದೇವರು ಸ್ವತಃ ಆ ಲೋಪದೋಷಗಳನ್ನು ಸರಿಪಡಿಸುತ್ತಾನೆ. ಬೇರೊಂದು ಧರ್ಮದಲ್ಲಿ ಲೋಪದೋಷಗಳಿದ್ದರೆ ಅದು ಆ ಧರ್ಮದಲ್ಲಿ ನಂಬಿಕೆಯಿಟ್ಟವರಿಗೆ ಸಂಬಂಧಪಟ್ಟಿರುತ್ತದೆ, ದೇವರು ಅದನ್ನು ಸರಿಪಡಿಸುತ್ತಾನೆ. ನಾನು ಹಿಂದೂಯಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಲ್ಲಾ ಧರ್ಮಗಳನ್ನು ಪಾಲಿಸಿದ್ದೇನೆ. ಈ ಧರ್ಮಗಳ ಆಚರಣೆಗಳನ್ನು ಆಳವಾಗಿ ಆಚರಿಸಿದಾಗ ನಾನು ಕಂಡುಕೊಂಡ ಸತ್ಯವೇನೆಂದರೆ ಒಂದೇ ದೇವರ ಕಡೆಗೆ ನಾವೆಲ್ಲಾ ಚಲಿಸುತ್ತಿದ್ದೇವೆ ಆದರೆ ವಿಭಿನ್ನ ದಾರಿಗಳನ್ನು ಬಳಸುತ್ತಿದ್ದೇವೆ.
ಆದರೆ ದುರಂತವೆಂದರೆ ಧರ್ಮದ ಹೆಸರಿನಲ್ಲಿ ಹಿಂದೂಗಳು, ಮುಸ್ಲಿಂರು, ಕ್ರಿಶ್ಚಿಯನ್ನರು, ವೈಶ್ಣವ, ಶೈವ ಹೀಗೆ ಪರಸ್ಪರ ಕಚ್ಚಾಡುತ್ತಿರುವುದು. ಆದರೆ ಕ್ರಿಷ್ಣ ಎಂದು ಕರೆಯಲ್ಪಡುವ ದೇವರು ಶಿವ ಎಂದು ಕರೆಯಲ್ಪಡುತ್ತಾನೆ, ಶಿವ ಎಂದು ಕರೆಯಲ್ಪಡುವ ದೇವರು ಜೀಸಸ್ ಎಂದೂ, ಅಲ್ಲಾ ಎಂದೂ ಕರೆಯಲ್ಪಡುತ್ತಾನೆ. ಎಲ್ಲರೂ ಒಂದೇ ಆದರೆ ಈ ನಂಬಿಕೆಯನ್ನು ಸೋಲು ಗೆಲವುಗಳ ನೆಲೆಯಲ್ಲಿ ನೋಡುವ ಜನರು ತಮ್ಮ ಧರ್ಮ ಮಾತ್ರ ಸದಾ ಗೆಲವು ಸಾಧಿಸುತ್ತದೆ ಮತ್ತು ಬೇರೆಲ್ಲ ಧರ್ಮಗಳು ಸೋಲುತ್ತವೆ ಎಂದು ಚಿಂತಿಸುತ್ತಾರೆ” ಎಂದು ಹೇಳುತ್ತಾರೆ.
ಒಂದು ಕಡೆ ಧರ್ಮದ ವಿವಿಧ ಮಜಲುಗಳನ್ನು ಅರಿತುಕೊಳ್ಳಲು ಆಧ್ಯಾತ್ಮವನ್ನು ಬಳಸಿಕೊಂಡ ರಾಮಕ್ರಿಷ್ಣರು ಹಿಂದೂ ಧರ್ಮವನ್ನು ಸನಾತನ ಧರ್ಮವೆಂದೇ ಪರಿಭಾವಿಸಿದ್ದರು. ಇವರ ಆಧ್ಯಾತ್ಮದ ಚಿಂತನೆಗಳಿಗೂ ಧರ್ಮದ ಕುರಿತಾದ ಶ್ರೇಣೀಕೃತ ವ್ಯವಸ್ಥೆಯ ಕುರಿತಾದ ಚಿಂತನೆಗಳ ನಡುವೆ ಅನೇಕ ವೈರುಧ್ಯಗಳಿದ್ದವು. ಆದರೆ ತಮ್ಮ ಗುರುಗಳಿಂದ ವಿಭಿನ್ನವಾಗಿ ಚಿಂತಿಸಿದ ವಿವೇಕಾನಂದ ಅವರು ಧರ್ಮವನ್ನು ಒಂದು ಕಡೆ ಆಧ್ಯಾತ್ಮದ ತುದಿಯಲ್ಲಿಯೂ ಮತ್ತೊಂದೆಡೆ ರಾಜಕೀಯ ನೆಲೆಯಲ್ಲಿಯೂ ನಿರ್ವಚಿಸಿದರು. ಈ ಕಾಲಘಟ್ಟದಲ್ಲಿ ವಿವೇಕಾನಂದ ಅವರು ಈ ಹಿಂದೂ ಧರ್ಮದ ಪುನರುಜ್ಜೀವನದ ಚಿಂತನೆಗಳಿಗೆ ಹೊಸ ತಿರುವುಗಳನ್ನು ಕೊಟ್ಟರು. ಈ ಹಿಂದೂ ಧರ್ಮಕ್ಕೆ ಪಾರಮಾರ್ಥಿಕ ಚಿಂತನೆಗಳ ಜೊತೆ ಜತೆಗೆ ರಾಜಕೀಯ ಪರಿಹಾರವನ್ನೂ ಬೆಸೆದವರು ವಿವೇಕಾನಂದ.

ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರಂತಹವರು ಪ್ರತಿಪಾದಿಸಿದ್ದ ಸಂಕೇತಗರ್ಭಿತವಾದ, ಉದಾರವಾದಿ ನೆಲೆಗಳಲ್ಲಿದ್ದ ಧರ್ಮದ ಕುರಿತಾದ ಚಿಂತನೆಗಳನ್ನು ಅಲ್ಲಿಂದ ಬೇರ್ಪಡಿಸಿದ ವಿವೇಕಾನಂದ ಅವರು ಹಿಂದೂಯಿಸಂ ಅನ್ನು ಧಾರ್ಮಿಕ ಸಮ್ಮೋಹಕತೆಯ ತತ್ವಗಳಿಗೆ, ಜನಸಾಮಾನ್ಯರ ರಾಜಕಾರಣಕ್ಕೆ ಹೊರಳಿಸಿದರು. ಚಿಂತಕ ‘ಜ್ಯೋತಿರ್ಮಯ ಶರ್ಮ’ ಅವರು ಸಂಶೋಧನ ಪುಸ್ತಕ “Cosmic Love and Human Apathy: Swami Vivekananda’s Re-statement of Religion” ದಲ್ಲಿ ರಾಮಕ್ರಿಷ್ಣ ಮತ್ತು ಅವರ ಶಿಷ್ಯರಾದ ವಿವೇಕನಾಂದರ ಕುರಿತಾಗಿ ಹೊಸ ಚಿಂತನೆಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಾರೆ. ಆ ಪುಸ್ತಕದಲ್ಲಿ ಜ್ಯೋತಿರ್ಮಯ ಶರ್ಮ ಅವರು ಬರೆಯುತ್ತಾರೆ “1896ರಲ್ಲಿ ಅಮೇರಿಕಾ ಮತ್ತು ಲಂಡನ್‌ಗೆ ಪ್ರವಾಸ ಮಾಡುವ ವಿವೇಕಾನಂದ ಅಲ್ಲಿ ಧರ್ಮದ ಕುರಿತಾಗಿ, ತಮ್ಮ ಗುರುಗಳಾದ ರಾಮಕ್ರಿಷ್ಣರ ಕುರಿತಾಗಿ ಮಾತನಾಡುತ್ತ ‘ರಾಮಕ್ರಿಷ್ಣ ಅವರು ಎಲ್ಲಾ ಧರ್ಮಗಳ ಕುರಿತಾದ ಸತ್ಯಗಳನ್ನು ಅರಿಯಲು ಉತ್ಸುಕರಾಗಿದ್ದರು. ರಾಮಕ್ರಿಷ್ಣರವರು ಯಾವುದೇ ವ್ಯಕ್ತಿಯ ವೈಯುಕ್ತಿಕ ನಂಬಿಕೆಯನ್ನು ತೊಂದರೆಗೊಳಪಡಿಸಲು ಬಯಸುತ್ತಿರಲಿಲ್ಲ” ಎಂದು ಭಾಷಣ ಮಾಡಿದ್ದರು.
ರಾಜಕೀಯವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು. ಎಲ್ಲಾ ಧರ್ಮಗಳ ನಂಬಿಕೆಗಳು ವಿಭಿನ್ನವಾಗಿದ್ದರೂ ಅದು ಕಡೆಗೆ ಒಂದೇ ದೇವರನ್ನು ಪ್ರಾರ್ಥಿಸುತ್ತದೆ ಎಂದು ವಿವೇಕಾನಂದ ಸಹ ನಂಬಿದ್ದರು. ತಮ್ಮ ಅನೇಕ ಸಾರ್ವಜನಿಕ ಭಾಷಣಗಳಲ್ಲಿ ವಿವೇಕಾನಂದ ಅವರು ತಮ್ಮ ಸಂದೇಶವು ಶಾಂತಿ ಮತ್ತು ಧರ್ಮದ ಒಗ್ಗಟ್ಟನ್ನು ಬೆಂಬಲಿಸುತ್ತದೆ ಮತ್ತು ಶತೃತ್ವವನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಸ್ವತಹ ಹಿಂದೂ ಧರ್ಮದ ಕುರಿತಾಗಿ ನಂಬಿಗೆಯನ್ನು ಹೊಂದಿದ್ದ ವಿವೇಕಾನಂದ ಪ್ರತಿಯೊಬ್ಬರೂ ತನ್ನ ಧರ್ಮದ ಕುರಿತಾದ ಇರುವ ನಂಬಿಕೆಯ ಪ್ರಮಾಣದಷ್ಟೇ ವಿವಿಧ ಧರ್ಮಗಳ ಕುರಿತಾಗಿ ಇರಬೇಕೆಂದು ಹೇಳಿದ್ದರು. ನಂಬಿಕೆಗಳು ಬಹುರೂಪಿಯಾಗಿರುತ್ತವೆಂದು ನಂಬಿದ್ದರು. ವಿವಿಧ ಧರ್ಮಗಳ ನಂಬಿಕೆಗಳ ಕುರಿತಾಗಿ ವಿವೇಕಾನಂದ ಅವರು ‘ಜಗತ್ತಿನಲ್ಲಿರುವ ವಿವಿಧ ಪಂಥಗಳನ್ನು ನಾನು ವಿರೋಧಿಸುವುಲ್ಲ. ಪಂಥಗಳ ಸಂಖ್ಯೆ ಹೆಚ್ಚಾದಷ್ಟು ದೇವರಿಗೆ ಆಯ್ಕೆಗಾಗಿ ವಲಯಗಳು ವಿಶಾಲವಾಗುತ್ತ ಹೋಗುತ್ತವೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಸಂಗತಿಗಳಲ್ಲಿ, ವ್ಯಾಜ್ಯಗಳಲ್ಲಿ ಒಂದೇ ಧರ್ಮವನ್ನು ಗುರಿಯಾಗಿ ದೂಷಿಸುವುದನ್ನು ನಾನು ವಿರೋಧಿಸುತ್ತೇನೆ. ಪ್ರತಿಯೊಂದು ಧರ್ಮದವರನ್ನು ನಾವು ಒಳಗೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಪ್ರತಿಪಾದಿಸಿದರು,’’ ಎಂದು ಜ್ಯೋತಿರ್ಮಯ ಶರ್ಮ ಹೇಳುತ್ತಾರೆ.
ಕೇವಲ ಕಾರಣಗಳ ಮಿತಿಯೊಳಗೆ ಧರ್ಮವನ್ನು ಅರಿತುಕೊಳ್ಳಬೇಕೆಂದು ಪ್ರತಿಪಾದಿಸಿದ ವಿವೇಕಾನಂದ ಹೀಗೆ ಮಾಡುವುದರ ಮೂಲಕ ಸತ್ಯವನ್ನು ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸಬಹುದೆಂದು, ಪ್ರೀತಿ ಮತ್ತು ಮಮತೆಯನ್ನು ದೇವರನ್ನು ನೋಡುವ ಸಾಕ್ಷಾಧಾರಗಳಾದ ಸಾಮರ್ಥ್ಯಗಳು ಎಂದೂ ಚಿಂತಿಸಿದರು. ಭಾರತದಲ್ಲಿ ರಾಜಕೀಯ ಹಿಂದೂಯಿಸಂಗೆ ಮೊಟ್ಟ ಮೊದಲ ಬುನಾದಿಯನ್ನು ಹಾಕಿದ ವಿವೇಕಾನಂದ ಅವರು ರಾಮಕ್ರಿಷ್ಣ ಪರಮಹಂಸರ ಸಮಾನತ ಭಾವದ, ರಹಸ್ಯಾತ್ಮಕ ಆಧ್ಯಾತ್ಮಕತೆಯಿಂದ ಧರ್ಮವನ್ನು ಸಂಪೂರ್ಣವಾಗಿ ಹೊರತಂದು ಧರ್ಮದ ನಂಬಿಕೆಯನ್ನು ಮಾನಸಿಕ ಮತ್ತು ದೈಹಿಕ ಶಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಿದರು ಮತ್ತು ಧರ್ಮ ಮತ್ತು ನಂಬಿಕೆಗಳ ಪರಂಪರೆಯ ಚಿಂತನೆಗಳನ್ನು ಹುಟ್ಟು ಹಾಕಿದರು. ಇದರ ಫಲವಾಗಿ ಭಕ್ತಿಪಂಥವು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದ ವರ್ಣಾಶ್ರಮದ ಸನಾತನ ಚಿಂತನೆಗಳ ಸ್ವಧರ್ಮ ಪರಿಕಲ್ಪನೆಯು ಹಿಂಬಾಗಿಲಿನಿಂದ ಪ್ರವೇಶ ಪಡೆದುಕೊಂಡಿತು. ಪೌರುಷತ್ವ, ತೋಳ್ಬಲ, ಸಾಮರ್ಥ್ಯತೆಗಳು ಧರ್ಮದ ಪುನರುಜ್ಜೀವನಕ್ಕೆ ಅವಶ್ಯಕವಾದ ಹತಾರಗಳಾಗಿ ಪ್ರತಿಪಾದನೆಗೊಂಡವು. ಮಾನವೀಯತೆಯ ಪರವಾಗಿದ್ದ ವಿವೇಕಾನಂದರ ಈ ರಾಜಕೀಯ ಹಿಂದೂಯಿಸಂ ಮುಂದೆ ವಿವಿಧ ರೀತಿಯಲ್ಲಿ ಬದಲಾವಣೆಗೊಳ್ಳುತ್ತ ಬಹುಸಂಖ್ಯಾತರ ಶಕ್ತಿ ಪ್ರದರ್ಶನದ ಸಿದ್ದಾಂತವಾಯಿತು. ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಸ್ವರೂಪ ಪಡೆದುಕೊಂಡಿತು.
ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರ ಚಿಂತನೆಗಳ ಈ ಆಧ್ಯಾತ್ಮಕತೆಯ ಸಂಕೇತಗರ್ಭಿತ ಉದಾರವಾದಿ ಚಿಂತನೆಗಳು ಹೈಜಾಕ್‌ಗೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರು ಈ ಧಾರ್ಮಿಕ ಆಧ್ಯಾತ್ಮಿಕತೆಯು ಮುಂದೊಂದು ದಿನ ವಿಕಾರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದರು. ಈ ಮಾದರಿಯ ಹಿಂದೂ ಧಾರ್ಮಿಕತೆಯ ಆಧ್ಯಾತ್ಮಕತೆಯನ್ನು ಅಂಬೇಡ್ಕರ್‌ರವರು ಅನೈತಿಕವಾದ, ವಿಕಾರವಾದ ಪೈಶಾಚಿಕ ಶಕ್ತಿಗೆ ಹೋಲಿಸಿ ಮುಂದೊಂದು ದಿನ ಇದು ರೂಢಿಗತಗೊಳ್ಳುವ ಹೇರುವಿಕೆಯ ಕಾನೂನಾಗಿ ಮಾರ್ಪಡುತ್ತದೆ ಎಂದು 1920ರಲ್ಲಿಯೇ ಎಚ್ಚರಿಸಿದ್ದರು. ಅಸಮಾನತೆಯು ಹಿಂದೂಯಿಸಂನ ಆತ್ಮವಾಗಿದೆ. ಸಾಮಾಜಿಕ ಉಪಯುಕ್ತತೆಯ ಫಲಾಫಲವನ್ನು ಪರಾಮರ್ಶಿಸಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯುಕ್ತಿಕ ನ್ಯಾಯಪರತೆಯ ಫಲಾಫಲವನ್ನು ಪರಾಮರ್ಶಿಸಲು ಸಹ ಸೋತಿದೆ ಎಂದೂ ಸಹ ಅಂಬೇಡ್ಕರ್ ವಿಶ್ಲೇಷಿಸಿದ್ದರು.
ಮತ್ತೊಂದೆಡೆ ಧರ್ಮದ ಮೇಲಿನ ನಂಬಿಕೆ, ಅಪನಂಬಿಕೆ ಕುರಿತಾಗಿ ಹಲವಾರು ಗ್ರಹಿಕೆಗಳಿವೆ. ಬಹುಸಂಖ್ಯೆಯ ದೃಷ್ಟಿಕೋನದಲ್ಲಿ ಅದು ಪ್ರಶ್ನಾತೀತವಾದ ಪವಿತ್ರ ಧಾರ್ಮಿಕತೆ. ಇದರ ಮಾರ್ಗದರ್ಶನದಲ್ಲಿ ಮನುಶ್ಯ ಬದುಕುತ್ತಾನೆ. ನಾವು ಈ ದರ್ಮವನ್ನು ರಕ್ಷಿಸಬೇಕು. ಇನ್ನೊಂದು ಗುಂಪು ವಿದ್ವಾಂಸರ, ಸಂಶೋದಕರ ವಲಯ. ಇವರು ಧರ್ಮವನ್ನು ಸಮಾಜೋ-ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ನಂಟಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ವಿಶ್ಲೇಷಿಸುತ್ತಾರೆ. ಅವೆಲ್ಲ ಹೆಣೆದುಕೊಂಡು ಒಂದರೊಳಗೊಂದು ಬೆರೆತ ಆ ಸಂಕೀರ್ಣತೆ ಕುರಿತು ಇವರಿಗೆ ಅಸಡ್ಡೆ. ಇದು ಅನೇಕ ಸಂದರ್ಬಗಳಲ್ಲಿ ಜಡತ್ವವನ್ನು ಮೀರುವುದಿಲ್ಲ. ಮೂರನೆಯ ವಲಯವೆಂದರೆ ನಿರೀಶ್ವರವಾದಿಗಳ ವೈಚಾರಿಕ ಗ್ರಹಿಕೆ. ಇದು ಸಹಜವಾಗಿಯೆ ಜೀವಪರವಾದ, ಮಾನವೀಯತೆಯ ತುಡಿತಗಳನ್ನು ಹೊಂದಿರುವ ವಿಚಾರವಾದದ ಪಾಠಶಾಲೆ. ಆದರೆ ವಾಸ್ತವನ್ನು ಸರಳೀಕರಿಸುವುದು ಅಥವಾ ಆದರ್ಶ ಮತ್ತು ವಾಸ್ತವದ ನಡುವಿನ ಕಂದಕವನ್ನು ಅರಿಯದಿರುವುದು ಇಲ್ಲಿನ ಮಿತಿ. ಸೈದ್ದಾಂತಿಕತೆ ಮೇಲುಗೈ ಸಾದಿಸಿ ಅನೇಕ ಬಾರಿ ಇಲ್ಲಿನ ನೆಲಸಂಸ್ಕೃತಿ, ಜೀವ ತೋರಣಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಡಿ. ಆರ್. ನಾಗರಾಜ್ ‘ಪ್ರಜ್ಞಾವಂತರು ಸಂಸ್ಕೃತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು, ಅಗ್ನಿ ಭಕ್ಷಕ ರಾಜಕಾರಣಿಗಳ ಕೈಯಲ್ಲಿ ಮಾರಕಾಸ್ತ್ರಗಳಾದವು’ ಎಂದು ಮಾರ್ಮಿಕವಾಗಿ ಹೇಳುತ್ತಾರೆ.

ಧರ್ಮಗಳು ತಾಯಿಯಂತೆ ಪೊರೆಯುವ ತನ್ನ ಎಲ್ಲಾ ಗುಣಗಳನ್ನು ಕಳಚಿಕೊಂಡು ಇಂದು ಸ್ಪಷ್ಟವಾಗಿ ಅಣುಬಾಂಬಿನಂತೆ ಸಕಲವನ್ನೂ ಧ್ವಂಸಗೊಳಿಸುವ ವಿದ್ವಂಸಕ ಪಾತ್ರವನ್ನು ನಿರ್ವಹಿಸುತ್ತಿದೆ. ಇಂದು 21ನೇ ಶತಮಾನದಲ್ಲಿ ಈ ಆಧ್ಯಾತ್ಮ ಧಾರ್ಮಿಕತೆಯು ಸಂಪೂರ್ಣವಾಗಿ ವಿಕಾರಗೊಂಡು, ಕ್ರೌರ್ಯದ ಪ್ರದರ್ಶಕ್ಕೆ, ದೊಂಬಿ ಹತ್ಯೆಗಳಿಗೆ ವಿಶಾಲ ವೇದಿಕೆಯಾಗಿ, ಮಾನವ ವಿರೋಧಿ ತತ್ವಗಳಾಗಿ ಪರಿವರ್ತನೆಗೊಂಡು ದಿನೇ ದಿನಕ್ಕೆ ಕುರೂಪಗೊಳ್ಳುತ್ತಿದೆ ಮತ್ತು ಜಟಿಲಗೊಳ್ಳುತ್ತಿದೆ. ಜಾತೀಯತೆಯನ್ನು ವಿರೋಧಿಸಿದ ವಿವೇಕಾನಂದರನ್ನು ತನ್ನ ಮತೀಯವಾದಿ, ಜಾತಿ ಪದ್ಧತಿಯ, ಪ್ರತ್ಯೇಕತೆಯ ಹಿಂದೂ ಧರ್ಮಕ್ಕೆ ಅನ್ವಯವಾಗುವಂತೆ ಜೀರ್ಣಿಸಿಕೊಂಡ ಸಂಘ ಪರಿವಾರ ತನ್ನ ಈ ಮತಾಂಧತೆಯನ್ನು ವಿರೋಧಿಸುವ ನಾಗರಿಕರು, ಜನಪರ ಚಿಂತಕರು, ಲೇಖಕರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ. ಇಂದು ಧರ್ಮವನ್ನು ನಾವು ಅರ್ಥೈಸುವಲ್ಲಿ ಎಲ್ಲಿ ಎಡವಿದ್ದೇವೆ? ಸಂವಿಧಾನದಲ್ಲಿ ಧರ್ಮನಿರಪೇಕ್ಷತೆ ಎಂದರೆ ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಮತ್ತು ಹಕ್ಕುಗಳನ್ನು ನೀಡಬೇಕು ಎಂದರ್ಥ. ಅದರೆ ಅಷ್ಟು ಮಾತ್ರವಲ್ಲ. ಪ್ರಬುತ್ವವು ಎಲ್ಲಾ ಬಗೆಯ ಧರ್ಮಗಳಿಂದ ದೂರವುಳಿಯಬೇಕು ಮತ್ತು ಧರ್ಮವನ್ನು ರಾಜ್ಯದೊಂದಿಗೆ ಬೆಸೆಯಬಾರದು ಎಂಬುದು ಧರ್ಮನಿರಪೇಕ್ಷತೆಯ ಮೂಲ ತಿರುಳು. ಆದರೆ ಸಮಕಾಲೀನ ಸಂದರ್ಭದಲ್ಲಿ ಆರೆಸ್ಸಸ್ ‘ಭಾರತದಲ್ಲಿ ಧರ್ಮನಿರಪೇಕ್ಷತೆ ಎಂದರೆ ಇಲ್ಲಿನ ಹಿಂದೂಯಿಸಂ ಇತರೇ ಎಲ್ಲಾ ಧರ್ಮಗಳನ್ನು ಸಹಿಸಿಕೊಂಡಿದೆ, ಆಶ್ರಯ ನೀಡಿದೆ ಮತ್ತು ಈ ಕಾರಣಕ್ಕಾಗಿ ಇತರೇ ಧರ್ಮಗಳು ಹಿಂದೂಯಿಸಂಗೆ ಋಣಿಯಾಗಿರಬೇಕಾಗುತ್ತದೆ ಮತ್ತು ಅದನ್ನು ಅನುಸರಿಸಿಕೊಂಡು ಬದುಕಬೇಕಾಗುತ್ತದೆ’ ಎಂದು ಪ್ರತಿಪಾದಿಸುತ್ತದೆ. ಬಹುಸಂಖ್ಯಾತವಾದದ ಮತಾಂಧತೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಇಲ್ಲಿ ಎಲ್ಲಾ ಧರ್ಮಗಳೂ ಎನ್ನುವ ಆಶಯ ಕಣ್ಮರೆಯಾಗಿ ಬಹುಸಂಖ್ಯಾತ ಧರ್ಮವೇ ಮುಂಚೂಣಿಗೆ ಬಂದು ಮಿಕ್ಕ ಅಲ್ಪಸಂಖ್ಯಾತ ಧರ್ಮಗಳು ಅದನ್ನು ಅನುಸರಿಸಬೇಕು ಎನ್ನುವ ವಾತಾವರಣ ನಿರ್ಮಿಸಲಾಗುತ್ತದೆ. ಇಂದು ಹಿಂದುತ್ವದ ಹೆಸರಿನಲ್ಲಿ ಮತಾಂಧರು ನಡೆಸುತ್ತಿರುವ ಪುಂಡಾಟಿಕೆಗಳು ಇದಕ್ಕೆ ಉತ್ತಮ ಉದಾಹರಣೆ.
ನಮ್ಮೊಳಗಿನ ಶೂನ್ಯತೆ, ವಿಸ್ಮೃತಿ
ಸ್ವಾತಂತ್ರ್ಯ ನಂತರದ ಕಳೆದ ಎಪ್ಪತ್ತು ವರ್ಶಗಳಿಂದ ಮತೀಯವಾದ, ಜಾತಿವಾದ, ತಾರತಮ್ಯ ಉಲ್ಬಣಗೊಳ್ಳುತ್ತಲೇ ಇದೆ. ನಮ್ಮ ಸೆಕ್ಯಲರಿಸಂ ಮತ್ತು ಜಾತ್ಯಾತೀತತೆ ಇದನ್ನು ಎದುರಿಸಲು ಸೋತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ನಾವು ಸೆಕ್ಯಲರಿಸಂ ಕುರಿತು ಮಾತನಾಡುವಾಗ ಅದು ಕಲೋನಿಯೋತ್ತರ ಕಾಲಘಟ್ಟ ನಂತರದ ಹೊಸ ಅವಿಶ್ಕಾರ ಎನ್ನುವ ಮನಸ್ಥಿತಿಯಲ್ಲಿ ಮಾತನಾಡುತ್ತೇವೆ. ಇಲ್ಲಿಂದಲೇ ತೊಂದರೆ ಶುರುವಾಗುತ್ತದೆ. ಚಿಂತಕಿ ಶಬನಮ್ ತೇಜನಿ ಅವರು ‘ ಇಂಡಿಯಾ ಸ್ವಾತಂತ್ರ್ಯ ಗಳಿಸಿದ ನಂತರ ಲಿಬರಲ್ ಪ್ರಜಾಪ್ರಭುತ್ವದಲ್ಲಿ ಸೆಕ್ಯುಲರಿಸಂ ಮುಖ್ಯ ಪಾತ್ರ ವಹಿಸಿದೆ. ಇದು ಹಿಂದೂ ಅಸ್ಮಿತೆಯೊಳಗೆ ದಲಿತರನ್ನು ಜೀರ್ಣಿಸಿಕೊಂಡು ಬಹುಸಂಖ್ಯೆ ಪ್ರಜಾಪ್ರಭುತ್ವವನ್ನು ಸೃಷ್ಟಿಸಿದೆ. ಮೇಲ್ಜಾತಿ ಹಿಂದೂಗಳು ಈ ಸೆಕ್ಯುಲರಿಸಂ ಅನ್ನು ಇಂಡಿಯಾದ ರಾಷ್ಟ್ರೀಯತೆಯ ಚಿಂತನೆಯ ಒಂದು ಸ್ತಂಬ ಎಂದೇ ಬಿಂಬಿಸಿದ್ದಾರೆ. ಹೀಗಾಗಿ ಇಂಡಿಯಾದ ಸೆಕ್ಯುಲರಿಸಂ ಅಂದರೆ ಅದು ರಾಜಕಾರಣ ಮತ್ತು ಧರ್ಮ ಎರಡನ್ನು ಬೇರ್ಪಡಿಸಿ ನೋಡುವುದನ್ನು, ಸಹಿಶ್ಣತೆಯ ನಿರ್ದಿಶ್ಟ ಭಾರತೀಯತೆಯನ್ನು ಸೃಶ್ಟಿಸುವುದನ್ನು ನಿರಾಕರಿಸುತ್ತದೆ. ಬದಲಾಗಿ ಜಾತಿ, ಸಮುದಾಯ, ರಾಷ್ಟ್ರೀಯತೆ, ಮತೀಯವಾದ, ಲಿಬರಲ್ ಮತ್ತು ಪ್ರಜಾಪ್ರಬುತ್ವದ ಮದ್ಯೆ ಹೊಂದಾಣಿಕೆ ಇಂಡಿಯಾದ ಸೆಕ್ಯುಲರಿಸಂ ಅಂತ ಹೇಳಬಹುದು’ ಎಂದು ಬರೆಯುತ್ತಾರೆ (ಇಪಿಡಬ್ಲಿಯು 21, ಜುಲೈ 2018) ಮುಸ್ಲಿಂರ ತುಪ್ಟೀಕರಣ, ಓಲೈಕೆಯನ್ನು ಸೆಕ್ಯಲರಿಸಂ ಎಂದು ತಪ್ಪಾಗಿ ಬಿಂಬಿಸುವಲ್ಲಿ ಸಂಘ ಪರಿವಾರದ ಪಾತ್ರವಿದೆ ಎನ್ನುವುದು ಎಷ್ಟು ನಿಜವೋ ಆ ಅಪಪ್ರಚಾರಕ್ಕೆ ಸ್ವತಃ ಸೆಕ್ಯುಲರಿಸ್ಟ್‌ಗಳ ಕೊಡುಗೆಯೂ ಇದೆ. ಬಹುಸಂಖ್ಯಾತರ ಮತಾಂದತೆಯ ಮೇಲೆ ಕೇಂದ್ರೀಕರಿಸಿ ಅದನ್ನು ವಿರೋಧಿಸುವ ಮೂಲಕ ಟಿಸಿಲೊಡೆದಿರುವ ಇಲ್ಲಿನ ಸೆಕ್ಯುಲರಿಸಂನ ಚಿಂತನೆಗಳಿಗೆ ಅದಕ್ಕೂ ಹೊರತಾದ ಮತ್ತೊಂದು ಆಯಾಮವಿದೆ ಎನ್ನುವುದನ್ನು ಅರಿಯಲಿಲ್ಲ. ಧರ್ಮ ಮತ್ತು ರಾಜಕೀಯ ಪ್ರತ್ಯೇಕವಾಗಿರಬೇಕು ಎಂದು ಹಠ ತೊಟ್ಟು ವಾದಿಸಿದ ಸೆಕ್ಯುಲರ್‌ವಾದಿಗಳು ಭಕ್ತಿ ಪಂಥ, ಆದ್ಯಾತ್ಮ, ಶ್ರಮ ಸಂಸ್ಕೃತಿ, ನೆಲಗುರುತುಗಳನ್ನು ನಿರ್ವಚಿಸುವಲ್ಲಿ, ಹೊಸ ತಲೆಮಾರಿಗೆ ಅದನ್ನು ಕಟ್ಟಿಕೊಡುವಲ್ಲಿ ಸೋತಿದ್ದಾರೆ
ಇಂಡಿಯಾದಲ್ಲಿ ಈ ಆರೆಸ್ಸಸ್ ಮಾದರಿಯ ಧರ್ಮವನ್ನು ನಿರ್ವಚಿಸುವಾಗ, ಅದರ ಧರ್ಮಾಂದತೆಗೆ ಪ್ರತಿರೋಧದ ನೆಲೆಗಳ ಹುಡುಕಾಟ ನಡೆಸುವ ಸಂದರ್ಭದಲ್ಲಿ ನಾವು ಸಹಜವಾಗಿಯೇ ಸೆಕ್ಯುಲರಿಸಂ ವಿಶ್ಲೇಷಣೆಗೆ ಮೊರೆ ಹೋಗುತ್ತೇವೆ. ಸೆಕ್ಯುಲರಿಸಂ ಮಾತ್ರ ಭಾರತದ ಧರ್ಮಾಂದತೆಯನ್ನು ನಾಶ ಮಾಡಬಲ್ಲದು ಎಂದು ಕುರುಡಾಗಿ ನಂಬಿಸಲಾಗಿದೆ. ಆದರೆ ಇಂದು ರಾಜಕೀಯ ವಿಶ್ಲೇಷಕರು, ಚಿಂತಕರು ಮಾತನಾಡುತ್ತಿರುವ ಸೆಕ್ಯುಲರಿಸಂ ನುಡಿಕಟ್ಟು ರಾಜಕೀಯವಾದದ್ದು. ಪ್ರಭುತ್ವ ಮತ್ತು ಧರ್ಮದ ನಡುವಿನ ಸಂಬಂಧವನ್ನು ನಿರ್ಧರಿಸಲು ಪ್ರಜಾಪ್ರಭುತ್ವ ಮತ್ತು ಸೆಕ್ಯುಲರಿಸಂ ಅನ್ನು ಬಳಸಿಕೊಳ್ಳಲಾಗುತ್ತಿದೆ. ಡಾ.ವಸುಂದರ ಮೋಹನ್ ಅವರು ಹೇಳಿದಂತೆ ‘ಸೆಕ್ಯುಲರ್ ರಾಜ್ಯ’ ಎಂದರೆ ಅಲ್ಲಿ ಧರ್ಮವನ್ನು ರದ್ದುಪಡಿಸಿರುವುದಿಲ್ಲ ಬದಲಾಗಿ ಪ್ರಭುತ್ವವು ಧರ್ಮದಿಂದ ದೂರವುಳಿದು ಧರ್ಮ ಮತ್ತು ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯವನ್ನು, ಯಜಮಾನ್ಯ ಶ್ರೇಷ್ಟತೆಯನ್ನು ಕೊನೆಗೊಳಿಸುವುದು ಎಂದೇ ಅರ್ಥೈಸಬೇಕಾಗುತ್ತದೆ. ಪ್ರಭುತ್ವ ಮತ್ತು ಸಂವಿಧಾನ ಸೆಕ್ಯುಲರಿಸಂ ಅನ್ನು ಒಳಗೊಂಡಿರುತ್ತದೆ ಆದರೆ ಆಳವಾಗಿ ಧಾರ್ಮಿಕತೆಯನ್ನು ಪಾಲಿಸುವ ಸಮಾಜವು ಸೆಕ್ಯುಲರ್ ಆಗಿರುವುದಿಲ್ಲ ಎನ್ನುವ ವೈರುದ್ಯಗಳನ್ನು ಮೀರಬೇಕಾದಂತಹ ಅನಿವಾರ್ಯತೆ ಇದೆ. ಸಮಾಜವೂ ಸೆಕ್ಯುಲರ್ ಆಗಬೇಕು ಎನ್ನುವ ಆದರ್ಶವನ್ನು ಕಾರ್ಯಗತಗೊಳಿಸುವ ಮಾರ್ಗಗಳ ಹುಡುಕಾಟ ನಡೆಸಬೇಕಾಗಿದೆ.

ರೊಮಿಲಾ ಥಾಪರ್ ಅವರು ‘ಧಾರ್ಮಿಕ ಸಹಬಾಳ್ವೆ ಎನ್ನುವ ಕಳೆಗುಂದಿದ ನೆರಳಿನಿಂದ ಸೆಕ್ಯುಲರಿಸಂ ಅನ್ನು ಹೊರತರಬೇಕಿದೆ. ಪ್ರಜಾಪ್ರಭುತ್ವದ ಕಾರ್ಯವಿದಾನಗಳು ಮತ್ತು ಮಾನವ ಹಕ್ಕುಗಳ ಮೇಲೆ ರೂಪಿತವಾದ ಮೌಲ್ಯಗಳು ಮತ್ತು ನಡೆಗಳ ಸಮಾಜದೊಂದಿಗೆ ಸೆಕ್ಯುಲರಿಸಂ ಸಂವಾದವನ್ನು ಹೆಣಿಯಬೇಕಿದೆ’ ಎಂದು ಹೇಳುತ್ತಾರೆ. ಈ ಮರು ಅನುಗೊಳಿಸುವಿಕೆಯ ಮೇಲೆ ಸೆಕ್ಯುಲರಿಸಂನ ಸಫಲತೆ ನಿಂತಿದೆ. ಇಲ್ಲಿನ ದಿನನಿತ್ಯದ ಬದುಕಿನಿಂದ ಧರ್ಮವನ್ನು ಬೇರ್ಪಡಿಸಿ ನೋಡುವುದು ಕಷ್ಟ. ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಸೆಕ್ಯುಲರಿಸಂ ಅಂದರೆ ಧರ್ಮಕ್ಕೆ ವಿರುದ್ದವಾದದ್ದು ಎನ್ನುವ ಸಾರ್ವತ್ರಿಕ ಅಭಿಪ್ರಾಯವನ್ನು ತಿದ್ದಬೇಕಾಗಿದೆ.
ಆದರೆ ರಾಜಕೀಯ ಮೇಲಾಟಗಳಲ್ಲಿ ಬಳಕೆಗೊಳ್ಳುವ ಸೆಕ್ಯುಲರಿಸಂ ಬ್ರಾಂಡ್‌ನ್ನು ತಲೆಮಾರುಗಳನ್ನು ರೂಪಿಸುವ ಸಂದರ್ಭಕ್ಕೂ ಅನ್ವಯಿಸಿದಾಗ ಇಡೀ ಸಂವಾದವೇ ಪೇಲವವಾಗುತ್ತದೆ. ಗಾಂಧಿ ಧರ್ಮದ ಚಿಂತನೆಗಳ ಮೂಲಕ ಸೆಕ್ಯುಲರಿಸಂ ಮತ್ತು ಸೌಹಾರ್ದತೆಯನ್ನು ಬೆಳಸಬೇಕು ಎಂದು ನಂಬಿದ್ದರೆ, ಸೆಕ್ಯುಲರಿಸಂ ಅನ್ನು ಪಶ್ಚಿಮದ ದೃಷ್ಟಿಕೋನದಿಂದ ಅರ್ಥೈಸಿದ ನೆಹರೂ ಅವರು ಧರ್ಮಕ್ಕೂ ಸೆಕ್ಯುಲರಿಸಂಗೂ ಸಂಬಂಧವಿಲ್ಲ ಬದಲಾಗಿ ಅದು ವೈಜ್ಞಾನಿಕವಾದದ್ದು ಮತ್ತು ಅದರ ಮಾನವೀಯ ಗುಣಗಳು ಇಲ್ಲಿನ ವೈವಿದ್ಯತೆ ಮತ್ತು ಬಹುಸಂಸ್ಕೃತಿಯನ್ನು ಬೆಸೆಯುತ್ತವೆ ಎಂದು ನಂಬಿದ್ದರು. ಆದರೆ ಹೇಗೆ ಬೆಸೆಯುತ್ತದೆ ಎನ್ನುವ ಯಕ್ಷಪ್ರಶ್ನೆಗೆ ನೆಹರೂ ಬಳಿ ಉತ್ತರವಿರಲಿಲ್ಲ. ಇದನ್ನು ಚೆನ್ನಾಗಿ ಅರಿತಿದ್ದ ಅಂಬೇಡ್ಕರ್ ಅವರು ಸೆಕ್ಯುಲರಿಸಂ ಎನ್ನುವುದು ಕೇವಲ ರಾಜಕೀಯವಲ್ಲ ಅದು ನೈತಿಕತೆಯ ಪ್ರಶ್ನೆಯೂ ಹೌದು ಎಂದು ಹೇಳುತ್ತಾರೆ.

ಈ ಸೆಕ್ಯುಲರಿಸಂ ಅನ್ನು ರಾಜಕೀಯ ಮತ್ತು ಧಾರ್ಮಿಕ ಕಾರಣಗಳ ಜೊತೆ ಜೊತೆಗೆ ನೈತಿಕತೆಯ ಪ್ರಶ್ನೆಯಾಗಿ, ಆಸ್ತಿತ್ವದ ಪ್ರಶ್ನೆಯಾಗಿ ಕೈಗೆತ್ತಿಕೊಂಡಾಗ ಅದು ಕೇವಲ ರಾಜಕೀಯ ಭಾಷೆ ಮಾತ್ರವಲ್ಲ ಇದು ಚಿಂತನೆ ಮತ್ತು ಬದುಕು ಕೂಡ ಎಂದು ನಿರೂಪಿಲು ಸಾದ್ಯವಾಗುತ್ತದೆ. ಆಗ ಮಾತ್ರ ಧಾರ್ಮಿಕವಾಗಿ ಪ್ರತ್ಯೇಕಿಸಲ್ಪಟ್ಟ ಹಿಂದೂ-ಮುಸ್ಲಿಂ-ಕ್ರಿಸ್ತ ಮತ್ತು ಇತರೇ ಧರ್ಮದವರು ಪ್ರಭುತ್ವದ ಸಹಾಯವಿಲ್ಲದೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಸೆಕ್ಯುಲರಿಸಂ ದೇಶವನ್ನು ಕಟ್ಟಬಲ್ಲರು ಮತ್ತು ಇದನ್ನು ಬಹುತ್ವ ಸಮಾಜ ಮಾತ್ರ ರೂಪಿಸಬಲ್ಲದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅದರ ಗುಣಮಟ್ಟವನ್ನು ಅಲ್ಲಿನ ಧಾಮಿಕ ಅಲ್ಪಸಂಖ್ಯಾತರು ಪಡೆದುಕೊಂಡ ಸ್ವಾತಂತ್ರ್ಯ ಮತ್ತು ಸುರಕ್ಷತೆಯ ಪ್ರಮಾಣದ ಮೇಲೆ ನಿರ್ಧರಿಸಲಾಗುತ್ತದೆ. ಆದರೆ ಇಂದು ಇಂಡಿಯಾದಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣವಿದೆ. ಇಂದು ಧರ್ಮ ಎನ್ನುವುದು ಸಂಘರ್ಷಗಳಿಗೆ, ಕೋಮು ಗಲಭೆಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಬಹುತ್ವ ಸಮಾಜದ ನಿರ್ಮಾಣದ ಕನಸಿನಲ್ಲಿ ಧರ್ಮ ಎನ್ನುವುದು ಯಾವ ಬಗೆಯ ಪಾತ್ರ ವಹಿಸುತ್ತದೆ ಎನ್ನುವ ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಳ್ಳಬೇಕಾಗಿದೆ.


