ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ, ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಬುಧವಾರ ಹೇಳಿದ್ದಾರೆ.
ಮೇ 31 ರಂದು ತನ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುವುದಾಗಿ ಭರವಸೆ ನೀಡುವ ವೀಡಿಯೊ ಹೇಳಿಕೆಯನ್ನು ಪ್ರಜ್ವಲ್ ಬಿಡುಗಡೆ ಮಾಡಿದ ಎರಡು ದಿನಗಳ ನಂತರ ಗೃಹ ಸಚಿವರ ಈ ಹೇಳಿಕೆ ಬಂದಿದೆ.
ಅಧಿಕೃತ ಮೂಲಗಳ ಪ್ರಕಾರ, ಹಾಸನ ಸಂಸದರು ಮೇ 30 ರಂದು ಮ್ಯೂನಿಚ್‌ನಿಂದ ಬೆಂಗಳೂರಿಗೆ ಹಿಂತಿರುಗಲು ವಿಮಾನ ಟಿಕೆಟ್ ಕಾಯ್ದಿರಿಸಿದ್ದು, ಮೇ 31ರ ಮುಂಜಾನೆ ನಗರಕ್ಕೆ ಬಂದಿಳಿಯುವ ನಿರೀಕ್ಷೆಯಿದೆ.
ಈ ವೇಳೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪರಮೇಶ್ವರ, “ಪ್ರಜ್ವಲ್ ವಿರುದ್ಧ ವಾರೆಂಟ್ ಜಾರಿಯಾಗಿರುವುದರಿಂದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಎಸ್‌ಐಟಿ ಕಾಯುತ್ತಿದೆ, ಆತನನ್ನು ಬಂಧಿಸಿ ಹೇಳಿಕೆ ಪಡೆಯಲಿದ್ದಾರೆ” ಎಂದರು.
ಲ್ಯಾಂಡಿಂಗ್ ನಂತರ ಪ್ರಜ್ವಲ್‌ನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, “ವಿಮಾನ ನಿಲ್ದಾಣದಲ್ಲಿ ಬಂಧಿಸಬೇಕಿದೆ. ಏಕೆಂದರೆ, ಈಗಾಗಲೆ ವಾರಂಟ್ ಹೊರಡಿಸಲಾಗಿದೆ. ಆದ್ದರಿಂದ ಅವರನ್ನು ಬಂಧಿಸಬೇಕಾಗುತ್ತದೆ” ಎಂದರು.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ (33) ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ರೆಕಾರ್ಡ್ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ ಮತದಾನ ಮುಗಿದ ನಂತರ, ಅವರು ಏಪ್ರಿಲ್ 27 ರಂದು ಜರ್ಮನಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮೂಲಕ ಎಸ್‌ಐಟಿ ಮಾಡಿದ ಮನವಿಯ ಮೇರೆಗೆ ಇಂಟರ್‌ಪೋಲ್ ಈಗಾಗಲೇ ಆತನ ಇರುವಿಕೆಯ ಕುರಿತು ಮಾಹಿತಿ ಕೋರಿ ‘ಬ್ಲೂ ಕಾರ್ನರ್ ನೋಟಿಸ್’ ಹೊರಡಿಸಿದೆ.
ಎಸ್‌ಐಟಿ ಸಲ್ಲಿಸಿದ ಅರ್ಜಿಯ ಮೇರೆಗೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೇ 18 ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಬಂಧನ ವಾರಂಟ್ ಹೊರಡಿಸಿತು.
ಪೆನ್ ಡ್ರೈವ್ ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಇಬ್ಬರನ್ನು ಬಂಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ, “ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಪ್ರಶ್ನೆಗಿಂತ ಹೆಚ್ಚಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗುವುದು” ಎಂದು ಗೃಹ ಸಚಿವರು ಹೇಳಿದರು.
“ಈಗಾಗಲೇ 11ರಿಂದ 12 ಜನರನ್ನು ಬಂಧಿಸಲಾಗಿದೆ, ಅವರು (ಎಸ್‌ಐಟಿ) ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಭಾವಿಸಿದರೆ, ತನಿಖೆಯ ಸಮಯದಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಾರೆ” ಎಂದು ಅವರು ಹೇಳಿದರು.
ಏಪ್ರಿಲ್ 26 ರಂದು ಲೋಕಸಭೆ ಚುನಾವಣೆಗೆ ಮುನ್ನ ಹಾಸನದಲ್ಲಿ ಪ್ರಜ್ವಲ್ ಒಳಗೊಂಡಿರುವ ಸ್ಪಷ್ಟ ವೀಡಿಯೊಗಳನ್ನು ಹೊಂದಿರುವ ಹಲವಾರು ಪೆನ್ ಡ್ರೈವ್‌ಗಳನ್ನು ಪ್ರಸಾರ ಮಾಡಿದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಧಿಕಾರಿ ಆತ್ಮಹತ್ಯೆ ತನಿಖೆ ನಡೆಯುತ್ತಿದೆ:
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಒಳಪಡುವ ಸರ್ಕಾರಿ ನಿಗಮದಲ್ಲಿ ಕೋಟ್ಯಂತರ ಹಣ ವಂಚನೆ ಮಾಡಿ, ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವರು ಹೇಳಿದರು.
“ಇಲಾಖೆ ದೂರು ದಾಖಲಿಸಿದೆ. ₹187 ಕೋಟಿ ದುರುಪಯೋಗವಾಗಿದೆ. ಅದರಲ್ಲಿ ₹94 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವರ್ಗಾಯಿಸಲಾಗಿದೆ. ಪ್ರತಿಯೊಂದೂ ವಿಭಿನ್ನ ಅಂಕಿಅಂಶಗಳನ್ನು ನೀಡುತ್ತದೆ, ಯಾರೋ ₹84 ಕೋಟಿ ಎಂದು ನಮೂದಿಸಿದರೆ, ಇತರರು ₹97 ಕೋಟಿ ಎಂದು ಹೇಳಿದರು. ತನಿಖೆಯಿಂದ ಸತ್ಯಾಂಶ ಹೊರಬರಲಿದೆ” ಎಂದರು.
ವಿವಿಧ ಐಟಿ ಕಂಪನಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಮೊದಲ ನೋಟಕ್ಕೆ ಎಂಟರಿಂದ ಹತ್ತು ಖಾತೆಗಳಿಗೆ ಹಣ ಹೋಗಿದೆ ಎನ್ನಲಾಗಿದ್ದು, ತನಿಖೆಯಿಂದ ಗೊತ್ತಾಗಲಿದೆ” ಎಂದರು.
ಇದನ್ನೂ ಓದಿ; ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಮ್ಯೂನಿಚ್‌ನಿಂದ ಬೆಂಗಳೂರಿಗೆ ಫ್ಲೈಟ್ ಟಿಕೆಟ್ ಬುಕ್


