Homeಚಳವಳಿಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮೌಲಾನಾರು 1911 ಜನವರಿ 11 ರಂದು "ಕಾಮ್ರೇಡ್" ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದಿದ್ದರು.

- Advertisement -
- Advertisement -

ಭಾರತದ ಸ್ವಾತಂತ್ರ್ಯ ಹೋರಾಟಗಾರರ ಅಗ್ರಪಂಕ್ತಿಯ ಹೆಸರುಗಳಲ್ಲೊಂದು ಮೌಲಾನಾ ಮುಹಮ್ಮದ್ ಅಲೀ ಜೌಹರ್. ಇಂದು ಡಿಸೆಂಬರ್ 10 ಅವರ ನೂರ ನಲ್ವತ್ತಮೂರನೆಯ ಜನ್ಮ ದಿನ. ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜೀವ ತೇಯ್ದ ಮಹಾನುಭಾವರನ್ನು ದೇಶ ಆಗಾಗ ನೆನಪಿಸಿಕೊಳ್ಳುತ್ತಿರುತ್ತದೆ. ಆದರೆ ದೇಶದ ಸ್ವಾತಂತ್ರ್ಯಕ್ಕೆ ಸಾಟಿಯಿಲ್ಲದ ಕೊಡುಗೆ ನೀಡಿ ದೇಶ ವಸಾಹತುಶಾಹಿಗಳ ಕಪಿಮುಷ್ಟಿಯಿಂದ ಬಿಡುಗಡೆಯಾಗುವುದಕ್ಕಿಂತ ಹದಿನಾರು ವರ್ಷ ಮುಂಚಿತವಾಗಿ ಲಂಡನ್ನಿನ ಬ್ರಿಟಿಷ್ ರಾಣಿಯ ಸಿಂಹಾಸನವೇ ಗುಡುಗುವಂತೆ ಗರ್ಜಿಸುತ್ತಾ ಹುತಾತ್ಮರಾದ ಈ ಅಪ್ರತಿಮ ಸ್ವಾತಂತ್ರ್ಯ ಸೇನಾನಿಯನ್ನು ದೇಶ ಮರೆತೇ ಬಿಟ್ಟಿರುವುದು ವಿಷಾದನೀಯ. ಮೌಲಾನಾ ಮುಹಮ್ಮದ್ ಅಲಿಯವರ ಹೊರತಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆ ನಿಸ್ಸಂದೇಹವಾಗಿಯೂ ಅಪೂರ್ಣ.

ಮುಹಮ್ಮದ್ ಅಲಿ ಓರ್ವ ಶ್ರೇಷ್ಠ ಇಸ್ಲಾಮಿಕ್ ವಿದ್ವಾಂಸರಾಗಿದ್ದುದರಿಂದ ಅವರ ಹೆಸರಿನೊಂದಿಗೆ ಮೌಲಾನಾ ಎಂಬ ಪದವಿ ಅಂಟಿಕೊಂಡಿತ್ತು.ಅವರ ದೇಶ ನಿಷ್ಟೆಯನ್ನು ಅಂದಿನ ಆರೆಸ್ಸೆಸ್ ಮುಖಂಡರು ಪ್ರಶ್ನಿಸಿ ನಿಮಗೆ ದೇಶ ಮೊದಲೋ, ಧರ್ಮ ಮೊದಲೋ ಎಂದು ಚೇಡಿಸಿದಾಗ ಮೌಲಾನಾ ಕೊಟ್ಟ ಉತ್ತರ “ನಾನು ಮೊದಲನೆಯದಾಗಿ ಮುಸ್ಲಿಂ, ಎರಡನೆಯದಾಗಿಯೂ ಮುಸ್ಲಿಂ ಮತ್ತು ಮೂರನೆಯದಾಗಿಯೂ ಮುಸ್ಲಿಂ. ದೇಶದ ವಿಚಾರಕ್ಕೆ ಬಂದಾಗ ನಾನು ಮೊದಲನೆಯದಾಗಿ ಭಾರತೀಯ, ಎರಡನೆಯದಾಗಿಯೂ ಭಾರತೀಯ ಮತ್ತು ಮೂರನೆಯದಾಗಿಯೂ ಭಾರತೀಯ” ಎಂಬುದಾಗಿತ್ತು.

ಅಪ್ರತಿಮ ಮಾತುಗಾರ, ನಿರ್ಭೀತ ಬರಹಗಾರ, ಸ್ವಾತಂತ್ರ್ಯ ಯೋಧ ಮುಹಮ್ಮದ್ ಅಲಿ. ಮೌಲಾನಾರದ್ದು ನೆಪೋಲಿಯನ್‌ನ ಹೃದಯ, ಮೆಕಾಲೆಯ ಲೇಖನಿ ಮತ್ತು ಬರ್ಕ್‌ನ ಮಾತುಗಾರಿಕೆ ಎಂದು ಬ್ರಿಟಿಷರೇ ಅಂದು ಹೇಳುತ್ತಿದ್ದರು. ದೇಶ ಮತ್ತು ಇಸ್ಲಾಮ್ ಎರಡಕ್ಕೂ ನಿಸ್ವಾರ್ಥವಾಗಿ ದುಡಿದವರು ಮೌಲಾನಾ.

ಬರೋಡಾ ನವಾಬರ ಮಂತ್ರಿಯಾಗಿದ್ದ ಅಬ್ದುಲ್ ಅಲಿ ಖಾನ್ ಮತ್ತು ಆಬಿದಾ ಬೇಗಂ (ಬೀ ಅಮ್ಮಾ) ದಂಪತಿಗಳ ಕಿರಿಯ ಪುತ್ರನಾಗಿ ಉತ್ತರ ಪ್ರದೇಶದ ರಾಂಪುರದಲ್ಲಿ 1878 ಡಿಸೆಂಬರ್ 10ರಂದು ಮುಹಮ್ಮದ್ ಅಲಿ ಜನಿಸಿದರು. ಮುಹಮ್ಮದ್ ಅಲಿಯವರಿಗೆ ಎರಡು ವರ್ಷ ಪ್ರಾಯವಾಗುವಾಗಲೇ ಪಿತೃ ವಿಯೋಗವಾಯಿತು. ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಆಬಿದಾ ಬೇಗಂ ತನ್ನ ಒಡವೆಗಳನ್ನು ಮಾರಿ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಿದರು. ಬಿ.ಎ.ಪದವಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಮುಹಮ್ಮದ್ ಅಲಿ ಪ್ರಥಮ ಸ್ಥಾನ ಗಳಿಸಿದರು. ಆ ಬಳಿಕ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಆಕ್ಸ್‌ಫರ್ಡ್ ಯುನಿವರ್ಸಿಟಿಯಿಂದ ಆಧುನಿಕ ಇತಿಹಾಸದ ವಿಷಯದಲ್ಲಿ ಆನರ್ಸ್ ಪದವಿ ಪಡೆದರು. ಆನರ್ಸ್ ಪದವಿಗಾಗಿ ಆಕ್ಸ್‌ಫರ್ಡ್‌ನಲ್ಲಿ ಕಲಿಯುತ್ತಿರುವಾಗ ಇಸ್ಲಾಮ್‌ನ ಕುರಿತಂತೆ ಗಾಢ ಅಧ್ಯಯನ ನಡೆಸಿದರು. ಇಂಗ್ಲಿಷ್ ಭಾಷೆಯಲ್ಲಿ ಅದ್ಭುತ ಹಿಡಿತ ಹೊಂದಿದ್ದ ಮುಹಮ್ಮದ್ ಅಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಮೊದಲ ಏಷ್ಯನ್ ವ್ಯಕ್ತಿ ಎಂಬ ಹೆಗ್ಗಳಿಕೆ ಮುಹಮ್ಮದ್ ಅಲಿಯವರದ್ದಾಗಿತ್ತು.
………………..

ಆನರ್ಸ್ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಮೌಲಾನಾ ಬರೋಡಾದಲ್ಲಿ ಸರಕಾರಿ ಹುದ್ದೆಗೆ ಸೇರಿದರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿಯು ತನ್ನ ದೇಶವಾಸಿಗಳ ಮೇಲೆ ನಡೆಸುತ್ತಿದ್ದಂತಹ ದೌರ್ಜನ್ಯವನ್ನು ಕಂಡು ರೋಸಿಹೋದ ಅವರು ಬ್ರಿಟಿಷ್ ಸರಕಾರದ ಉದ್ಯೋಗದಲ್ಲಿದ್ದುಕೊಂಡೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಬೆಂಕಿಯುಗುಳುವಂತಹ Thoughts on present discontents ಎಂಬ ಲೇಖನಮಾಲಿಕೆಯನ್ನು Times of India ದಲ್ಲಿ ಬರೆಯಲಾರಂಭಿಸಿದರು. ಸರಕಾರದ ಹುದ್ದೆಯಲ್ಲಿದ್ದು ಸರಕಾರದ ವಿರುದ್ಧ ಬರೆಯುವುದರ ಪರಿಣಾಮ ನೆಟ್ಟಗಿರಲ್ಲ ಎಂದು ಬ್ರಿಟಿಷರು ಎಚ್ಚರಿಸಿದಾಗ ಮೌಲಾನಾ ತನ್ನ ಹುದ್ದೆಗೆ ರಾಜೀನಾಮೆ ಎಸೆದು ಹೊರಬಂದು ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಣಕ್ಕೆ ದುಮುಕಿದರು.

ಮೌಲಾನಾರು 1911 ಜನವರಿ 11 ರಂದು “ಕಾಮ್ರೇಡ್” ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದರು.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಬೆಂಕಿ ಚೆಂಡುಗಳಂತಹ ತೀಕ್ಷ್ಣ ಬರಹಗಳನ್ನು ಬರೆದು ಸ್ವಾತಂತ್ರ್ಯ ಹೋರಾಟಗಾರರಲ್ಲಿ‌ ಅದಮ್ಯ ಸ್ಪೂರ್ತಿಯನ್ನು ತುಂಬಿದರು. ಮೊದಲು ಕಲ್ಕತ್ತಾವನ್ನು ಕೇಂದ್ರವಾಗಿರಿಸಿಕೊಂಡು ಪ್ರಕಟಗೊಳ್ಳುತ್ತಿದ್ದ ‘ ಕಾಮ್ರೇಡ್ ‘ ಪತ್ರಿಕೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕೆಂದು ಅದನ್ನು ದೆಹಲಿಗೆ ಸ್ಥಳಾಂತರಿಸಿದರು. ಇಂಗ್ಲಿಷ್ ಜನಸಾಮಾನ್ಯರನ್ನು ತಲುಪಲಾರದು ಎಂದು ಮತ್ತೊಂದು ಉರ್ದು ಪತ್ರಿಕೆ ಹಮ್‌ದರ್ದ್ ಸ್ಥಾಪಿಸಿದರು. ಇವೆರಡೂ ಪತ್ರಿಕೆಗಳ ಮೂಲಕ‌ ನಿರಂತರವಾಗಿ ನಿರ್ಬಿಡೆಯ ಬರಹಗಳನ್ನು ಪ್ರಕಟಿಸಿ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದರು. ಇದೇ ಸಾಮ್ರಾಜ್ಯಶಾಹಿ ಶಕ್ತಿಗಳು ಅತ್ತ ಯುರೋಪ್‌ನಲ್ಲಿ ತುರ್ಕಿಯ ಮೇಲೆ ನಡೆಸುತ್ತಿದ್ದಂತಹ ದಬ್ಬಾಳಿಕೆಯನ್ನು ವಿರೋಧಿಸಿಯೂ ಮೌಲಾನಾ ಪ್ರಚೋದನಕಾರಿಯಾಗಿ ಬರೆಯಲಾರಂಭಿಸಿದರು. ಖಿಲಾಫತ್ ಚಳುವಳಿಯು ಭಾರತದಲ್ಲಿ ಹುಟ್ಟಿಕೊಳ್ಳವ ನಿಟ್ಟಿನಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸಿದ್ದ ಅವರು ತನ್ನ ಬರಹಗಳ ಮೂಲಕ ಚಳವಳಿಗೆ ಶಕ್ತಿ ತುಂಬುವುದರೊಂದಿಗೆ ಅದ್ವಿತೀಯ ನೇತೃತ್ವ ನೀಡಿದರು.

ಬ್ರಿಟಿಷ್ ಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಪ್ರಬಲ ಧ್ವನಿಯಾದ ಮೌಲಾನಾ ಬ್ರಿಟಿಷರಿಗೆ ಸಿಂಹಸ್ವಪ್ನವಾದರು. ಇದರಿಂದ ಕಂಗೆಟ್ಟ ಬ್ರಿಟಿಷ್ ಪ್ರಭುತ್ವ 1914 ರಲ್ಲಿ ಅವರ ಎರಡೂ ಪತ್ರಿಕೆಗಳಿಗೆ ನಿಷೇಧ ಹೇರಿ ಅವರನ್ನು ಮತ್ತು ಅವರ ಸಹೋದರ ಶೌಕತ್ ಅಲಿಯವರನ್ನು ಬಂಧಿಸಿ ಜೈಲಿಗೆ ತಳ್ಳಿತು. ಐದು ವರ್ಷಗಳ ದೀರ್ಘ ಸೆರೆವಾಸದ ಬಳಿಕ 1919 ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಸ್ವಾತಂತ್ರ್ಯದೆಡೆಗಿನ ಮೌಲಾನಾರ ತುಡಿತವನ್ನು ಅರ್ಥೈಸಿದ ಮುಸ್ಲಿಂ ಲೀಗ್ 1917 ರಲ್ಲಿ ಅಂದರೆ ಮೌಲಾನಾ ಜೈಲಿನಲ್ಲಿರುವಾಗಲೇ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿತು. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಅವರು ತಮ್ಮ ಅದೇ ಉರಿಭಾಷೆಯಲ್ಲಿ ಬ್ರಿಟಿಷರ ವಿರುದ್ಧ ಸಮರ ಘೋಷ ಮೊಳಗಿಸಿದರು. 1921ರಲ್ಲಿ ಬ್ರಿಟಿಷರು ಅವರನ್ನು ಮತ್ತೆ ಕಂಬಿಯೊಳಕ್ಕೆ ತಳ್ಳಿದರು. 1923ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮೌಲಾನಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೊಕ್ಕನಾಡ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಸ್ವಾತಂತ್ರ್ಯ ಯೋಧರಿಗೆ ನೀಡಿದ ಕರೆ ಸ್ವಾತಂತ್ರ್ಯ ವಾಂಛೆ ಇಮ್ಮಡಿಗೊಳ್ಳುವಂತೆ ಮಾಡಿತು. “ನಾವೆಲ್ಲ ಐಕ್ಯದಿಂದ ಹೋರಾಡೋಣ, ಅಗತ್ಯ ಬಿದ್ದರೆ ಪ್ರಾಣಾರ್ಪಣೆಗೂ ಸಿದ್ಧರಾಗೋಣ. ಒಂದು ವರ್ಷದೊಳಗೆ ಬ್ರಿಟಿಷರು ದೇಶಬಿಟ್ಟು ತೊಲಗದಿದ್ದರೆ ನಾವೇ ಸ್ವಾತಂತ್ರ್ಯ ಘೋಷಿಸೋಣ.” ಮೌಲಾನಾರ ಈ ಕರೆಗೆ ಓಗೊಟ್ಟು ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿ ಯುವ ಸಮೂಹ ಹೋರಾಟದ ಕಣಕ್ಕೆ ದುಮುಕಿತು.

ಮೌಲಾನಾರ ಬಂಧನದ ಕುರಿತಂತೆ ಯಂಗ್ ಇಂಡಿಯಾದ 1923ರ ಸೆಪ್ಟೆಂಬರ್ ಸಂಚಿಕೆಯಲ್ಲಿ ಗಾಂಧೀಜಿ ತನ್ನ ಲೇಖನದಲ್ಲಿ “ಮೌಲಾನಾರ ಬಂಧನ ಸ್ವಾತಂತ್ರ್ಯ ಸ್ಥಾಪನೆಯ ಮೊದಲ ನಡೆ” ಎಂದು ಬರೆದಿದ್ದರು.

1930ರ ಕೊನೆಯಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನಕ್ಕೆ ಗಾಂಧೀಜಿಯ ಜೊತೆಗೆ ಮೌಲಾನಾ ತೆರಳಿದ್ದರು. ಆ ಸಮ್ಮೇಳನದಲ್ಲಿ ಮೌಲಾನಾ ಮಾಡಿದ ಭಾಷಣ ಬ್ರಿಟಿಷ್ ಪ್ರಭುತ್ವದ ಎದೆಗೆ ಇರಿದಂತಿತ್ತು. “ಭಾರತದಲ್ಲಿ ನಾವು ಮೂವತ್ತೆರಡು ಕೋಟಿ ಜನ ಅನಕ್ಷರತೆ, ಬಡತನ, ಹಸಿವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಆದರೂ ನಮ್ಮ ಸ್ವಾತಂತ್ರ್ಯ ದಾಹ ಕಿಂಚಿತ್ತೂ ಕಡಿಮೆಯಾಗದು. ಸ್ವಾತಂತ್ರ್ಯ ನೀವು ಕೊಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ನಿಮ್ಮ ಫಿರಂಗಿ, ಗುಂಡುಗಳಿಗೆ ಎ‍ದೆಯೊಡ್ಡಲೂ‌ ಸಿದ್ಧ. ಮೂವತ್ತೆರಡು ಕೋಟಿ ಭಾರತೀಯರನ್ನು ಕೊಲ್ಲುವ ತಾಕತ್ತು ಮತ್ತು ಧೈರ್ಯವಿರುವ ನೂರು ಜನರೂ ಇಡೀ ಬ್ರಿಟನ್‌ನಲ್ಲಿ ಹುಡುಕಿದರೆ ಸಿಗಲಾರರು..” ಎಂದು ಗುಡುಗಿದ್ದರು.

ತೀವ್ರ ಜ್ವರದಿಂದ ಬಳಲುತ್ತಿದ್ದರೂ ದೇಶ ವಿಮೋಚನೆಯ ಕೆಲಸಕ್ಕಾಗಿ ಹೊರಡುವಾಗ ಅವರ ಕುಟುಂಬಿಕರು ಅವರನ್ನು ತಡೆಯಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಮಹಾತಾಯಿ ಮುಹಮ್ಮದ್ ಅಲಿಯವರ ಮಾತೆ ಬೀ ಅಮ್ಮಾ ತನ್ನ ದುಃಖಗಳನ್ನು ಮನದೊಳಗೆ ಅದುಮಿಟ್ಟು ಮಗನನ್ನು ಬೀಳ್ಕೊಟ್ಟಿದ್ದರು. ಲಂಡನ್‌ನಲ್ಲಿ ತಂಗಿದ್ದ ಹೋಟೆಲ್‌ನಿಂದ ದುಂಡು ಮೇಜಿನ ಸಮ್ಮೇಳನಕ್ಕೆ ಹೊರಡುವಾಗ ಮೌಲಾನಾರ ಆರೋಗ್ಯ ಸ್ಥಿತಿ ಕಂಡು ಗಾಂಧೀಜಿ ಕಂಗಾಲಾಗಿದ್ದರು. ಔಷಧಿ ಸೇವಿಸಿ ಮೌಲಾನಾ ಹೊರಟೇ ಬಿಟ್ಟರು. ಅಂದು ಅವರಾಡಿದ ಕೊನೆಯ ವಾಕ್ಯಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹದ್ದು.. ” I want to go my country.. If I can go back with the substance of freedom in my hand; and if you do not give us freedom you have to give me a grave here…”

ಮೌಲಾನಾರ ಆರೋಗ್ಯ ತೀವ್ರ ಸ್ವರೂಪದಲ್ಲಿ ಹದಗೆಟ್ಟಿತು. ಅವರು ಗಾಂಧೀಜಿಯವರನ್ನು ಕರೆದು ತನ್ನ ಕೊನೆಯ ಆಶೆಯನ್ನು ಅರುಹಿದರು. ” ನನ್ನ ಕೊನೆ ಸಮೀಪಿಸಿತು. ಆದರೆ ಸ್ವಾತಂತ್ರ್ಯ ವಿಲ್ಲದ ಮಣ್ಣಲ್ಲಿ ನಾನು ಮಣ್ಣಾಗಲಾರೆ.. ನನ್ನ ಮೃತದೇಹವನ್ನು ಇಸ್ಲಾಮಿನ ಅನೇಕ ಪ್ರವಾದಿಗಳು ಮಣ್ಣಾಗಿರುವ ಮತ್ತು ಇಸ್ಲಾಮಿನ ಮೂರನೇ ಅತೀ ದೊಡ್ಡ ಪವಿತ್ರವಾಗಿರುವ ಮಸ್ಜಿದುಲ್ ಅಕ್ಸಾದ ಕಬರ್ ಸ್ಥಾನದಲ್ಲಿ ನನ್ನನ್ನು ದಫನ ಮಾಡಬೇಕು…”

ಮೌಲಾನಾ 1931ರ ಜನವರಿ ನಾಲ್ಕರಂದು ತನ್ನ ಐವತ್ತ ಮೂರನೇ ವಯಸ್ಸಿನಲ್ಲಿ ಚಿರನಿದ್ರೆಗೆ ಜಾರಿದರು.‌ ಅವರ ಇಚ್ಚೆಯಂತೆಯೇ ಅವರ ಮೃತದೇಹವನ್ನು ಫ್ಯಾಲೆಸ್ತೀನಿಗೆ ಕೊಂಡೊಯ್ದು ಮಸ್ಜಿದುಲ್ ಅಕ್ಸಾದ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.

ಫ್ಯಾಲೆಸ್ತೀನ್‌ನಲ್ಲಿರುವ ಅವರ ಸಮಾಧಿ

ಉರ್ದು ಭಾಷೆಯ ಶ್ರೇಷ್ಠ ಕವಿಯೂ ಆಗಿದ್ದ ಅವರು ಜೌಹರ್ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು. ಜೌಹರ್ ಅರ್ಥಾತ್ ಅಮೂಲ್ಯ ರತ್ನ. ಅವರು ಈ ದೇಶದ ಸ್ವಾತಂತ್ರ್ಯ ಚಳವಳಿ ಕಂಡ ನಿಜವಾದ ಜೌಹರ್…

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...