ಚಿತ್ರದುರ್ಗದ ಇಂಜಿನಿಯರಿಂಗ್ ವಿದ್ಯಾರ್ಥಿ ನೂರ್ ಜುಲ್ಫೀಕರ್, ಶ್ರೀಧರ್ ಆಗಿದ್ದು ಭೂಗತ ಕ್ರಾಂತಿಕಾರಿ ಚಳವಳಿಯ ಪೂರ್ಣಾವಧಿ ಕಾರ್ಯಕರ್ತನಾಗಿ. ಭಾರತದ ಸಂದರ್ಭದಲ್ಲಿ ಈ ರೀತಿಯ ಭೂಗತ ಸಶಸ್ತ್ರ ಚಳವಳಿಯಿಂದ ಕ್ರಾಂತಿ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ತೀವ್ರ ವೈಚಾರಿಕ ಸಂಘರ್ಷ ನಡೆಸಿ, ಮುಖ್ಯವಾಹಿನಿ ಪ್ರಜಾತಾಂತ್ರಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ಮಾಕ್ರ್ಸ್ ಮತ್ತು ಅಂಬೇಡ್ಕರ್ ಚಿಂತನೆಯ ಲೇಖನಗಳ ಜೊತೆಗೆ, ‘ನನ್ನೊಳಗಿನ ಸೂಫಿ’, ‘ಮಾವೋವಾದಿ ಚಳವಳಿ’ ಅವರ ಎರಡು ಪ್ರಕಟಿತ ಕೃತಿಗಳು.

‘ನ್ಯಾಯಪಥ’ದ ಓದುಗರಿಗೆ ದೇಶ ಇಂದು ಎದುರಿಸುತ್ತಿರುವ ಬಿಕ್ಕಟ್ಟಿನ ಕುರಿತು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ಈ ಬಿಕ್ಕಟ್ಟಿಗೆ ಪರಿಹಾರ ಮಾರ್ಗವೇನು? ಎಂಬ ಬಹುಮುಖ್ಯ ಪ್ರಶ್ನೆಯ ಸುತ್ತ ನಮ್ಮ ಚರ್ಚೆ ಫೋಕಸ್ ಆಗುವುದು ಇಂದಿನ ತುರ್ತಾಗಿದೆ. ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿರಲಿಲ್ಲ ಎಂಬುದನ್ನು ಮೊದಲು ನಾವೆಲ್ಲರೂ ವಿನಮ್ರವಾಗಿ ಒಪ್ಪಿಕೊಳ್ಳಬೇಕಿದೆ. ಪ್ರತಿಗಾಮಿ ಶಕ್ತಿಗಳ ಗೆಲುವು ಎಲ್ಲಾ ಧಾರೆಯ ಪುರೋಗಾಮಿ ಶಕ್ತಿಗಳ ಸೋಲಿನ ದ್ಯೋತಕವಾಗಿದೆ. ಸೋಲನ್ನು ಒಪ್ಪಿಕೊಳ್ಳುತ್ತಲೇ ಹೊಸ ಸಂಘರ್ಷಕ್ಕೆ ನಾವು ಸಜ್ಜಾಗಬೇಕಿದೆ. ಸೋತ ಮಾರ್ಗದಲ್ಲೇ ಮತ್ತೆ ಸಂಘರ್ಷ ಪ್ರಾರಂಭಿಸಿದರೆ ಯಶಸ್ಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಹಾಗಾದರೆ ಹೊಸ ಮಾರ್ಗವೇನು? ಇದಕ್ಕೆ ಸಿದ್ಧ ಉತ್ತರವಂತೂ ಇಲ್ಲ. ಆದರೆ ಆ ನಿಟ್ಟಿನ ಗಂಭೀರ ಪ್ರಯತ್ನವಂತೂ ಪ್ರಾರಂಭವಾಗಬೇಕಿದೆ.
ಉತ್ತರದ ಹುಡುಕಾಟವನ್ನು ಪ್ರಾರಂಭಿಸುವ ಮುನ್ನ ಇಂದು ದೇಶ ಮತ್ತು ನಾವು ಎದುರಿಸುತ್ತಿರುವ ಪ್ರಶ್ನೆಯ ಮೂಲ ಸ್ವರೂಪವನ್ನು ಸರಿಯಾಗಿ ಗುರುತಿಸಿಕೊಳ್ಳುವ ಅಗತ್ಯವಂತೂ ಇದೆ. ಕ್ರಿ.ಪೂ. 6ನೇ ಶತಮಾನದಲ್ಲಿ ರೂಪುತಾಳಿದ ‘ಬ್ರಾಹ್ಮಣ್ಯ’ವು ವರ್ಣಾಶ್ರಮ ಪದ್ಧತಿಯ ಮೂಲಕ ಸಮಾಜವನ್ನು ನಡೆಸುವ ಹಾಗೂ ನಿಯಂತ್ರಿಸುವ ಆಳುವ ನೀತಿ ಮತ್ತು ರಚನೆಗಳಿಗೆ ಜನ್ಮ ನೀಡಿತು. ಅದರ ಈ ಹುನ್ನಾರಗಳಿಗೆ ಗಂಭೀರ ರೀತಿಯಲ್ಲಿ ಟಕ್ಕರ್ ಕೊಟ್ಟ ಜನ-ಧರ್ಮಗಳು, ವಿಶೇಷವಾಗಿ ಬೌದ್ಧ ದಮ್ಮ, ಕ್ರಿ.ಪೂ. 2ನೇ ಶತಮಾನದ ಹೊತ್ತಿಗೆ ಬ್ರಾಹ್ಮಣ್ಯವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು. ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ 2ನೇ ಶತಮಾನದ ನಡುವಿನ 400 ವರ್ಷಗಳ ಕಾಲ ತೀವ್ರ ಸೈದ್ಧಾಂತಿಕ ಸಂಘರ್ಷ ನಡೆಸಿದ ಬ್ರಾಹ್ಮಣ್ಯವು ಜಾತಿವ್ಯವಸ್ಥೆಯ ರೂಪದಲ್ಲಿ ಪ್ರತಿಕ್ರಾಂತಿ ಸಾಧಿಸಿ ಸಮಾಜವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಮುಂದಿನ ಒಂದು ಸಾವಿರ ವರ್ಷಗಳು ಅದರ ‘ಸ್ವರ್ಣಯುಗ’ವಾಗಿತ್ತು.
ಆದರೆ ಕ್ರಿ.ಶ. 12ನೇ ಶತಮಾನದಲ್ಲಿ ಕರ್ನಾಟಕ ಹೆಮ್ಮೆ ಪಡಬಹುದಾದ ಶರಣ ಚಳವಳಿಯ ಮೂಲಕ ಪ್ರಾರಂಭವಾದ ದುಡಿಯುವ ವರ್ಗ ಹಾಗೂ ದಮನಿತ ಸಮುದಾಯಗಳ ಪ್ರತಿರೋಧವು ಭಕ್ತಿ ಪಂಥದ ವಿವಿಧ ರೂಪಗಳಲ್ಲಿ ದೇಶದಾದ್ಯಂತ ಪಸರಿಸಿ ಬ್ರಾಹ್ಮಣ್ಯದ ಸೈದ್ಧಾಂತಿಕ ಚಕ್ರಾಧಿಪತ್ಯವನ್ನು ಮುರಿಯುವುದರಲ್ಲಿ ಯಶಸ್ವಿಯಾಯಿತು. ದತ್ತ ಪಂಥ, ನಾಥ ಪಂಥ, ಸೂಫಿ ಪಂಥ, ಕಬೀರ ಪಂಥ, ಕಾಳಿ ಪಂಥ, ಸಿಖ್ ಪಂಥ ಇವೆಲ್ಲವೂ ಪ್ರತಿರೋಧದ ಕೆಲವು ಧಾರೆಗಳು. ಇದೇ ಕಾಲಘಟ್ಟದಲ್ಲಿ ಮೊಗಲರ ಹಾಗೂ ಸುಲ್ತಾನರ ಆಳ್ವಿಕೆಗಳು ನೆಲೆ ಪಡೆದುಕೊಂಡಿದ್ದರಿಂದ ಬ್ರಾಹ್ಮಣ್ಯಕ್ಕೆ ರಾಜಧರ್ಮದ ಸ್ಥಾನವೂ ಇಲ್ಲವಾಯಿತು. ತದನಂತರ ಬ್ರಿಟಿಷ್ ಆಳ್ವಿಕೆಯಲ್ಲಿಯೂ ಬ್ರಾಹ್ಮಣ್ಯಕ್ಕೆ ಮತ್ತೆ ರಾಜ ಧರ್ಮವಾಗುವ ಅವಕಾಶ ಇರಲಿಲ್ಲ. ಅಲ್ಲದೆ ಈ ಅವಧಿಯಲ್ಲಿ ಮಹಾತ್ಮ ಫುಲೆಯವರಿಂದ ಪ್ರಾರಂಭಿಸಿ ಅಂಬೇಡ್ಕರರತನಕ ನಡೆದ ಸಾಮಾಜಿಕ ನ್ಯಾಯದ ಚಳವಳಿಗಳು ಬ್ರಾಹ್ಮಣ್ಯವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದವು.
ಇದೇ ಕಾಲಘಟ್ಟದಲ್ಲಿ ಜಗತ್ತಿನಲ್ಲಿ ಮತ್ತೊಂದು ಪ್ರಮುಖ ವಿದ್ಯಮಾನವೂ ಚಾಲ್ತಿ ಪಡೆದಿತ್ತು. 20ನೇ ಶತಮಾನದ ಆರಂಭದಲ್ಲಿ ಸಂಭವಿಸಿದ ರಷ್ಯಾ ಕ್ರಾಂತಿಯು ಸಮಾಜವಾದಿ ಚಿಂತನೆಯ ಹೊಸ ಅಲೆಯನ್ನೇ ಜಗತ್ತಿನಾದ್ಯಂತ ಸೃಷ್ಟಿಸಿತು. ಅದು ಸಮಾಜವಾದಿ ನೆಲೆಗಟ್ಟಿನ ಮೇಲೆ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ಪುನರ್ರಚಿಸುವ ಮೂಲಕ ಬಂಡವಾಳವಾದಕ್ಕೆ ದೊಡ್ಡ ಪ್ರಮಾಣದಲ್ಲಿ ಸೈದ್ಧಾಂತಿಕ, ರಾಜಕೀಯ ಹಾಗೂ ಆರ್ಥಿಕ ಸವಾಲನ್ನು ಒಡ್ಡಿತು. ಬಂಡವಾಳವಾದದ ತೀವ್ರಗಾಮಿ ಸ್ವರೂಪವಾಗಿ ಮುಂದೆ ಬಂದ ಫ್ಯಾಸಿಸಂ ಜೊತೆ ಕಾದಾಡಿ ಹಿಮ್ಮೆಟ್ಟಿಸುವುದರಲ್ಲೂ ಅದು ಮುಖ್ಯ ಭೂಮಿಕೆ ನಿರ್ವಹಿಸಿತು. ಈ ಎಲ್ಲಾ ಕಾರಣಗಳಿಂದಾಗಿ ಸಮಾಜವಾದಿ ಚಿಂತನೆಗಳ ಪ್ರಭಾವಳಿ ಜಗತ್ತಿನಾದ್ಯಂತ ಮತ್ತಷ್ಟು ಹೆಚ್ಚಿತು ಮತ್ತು ಭಾರತದ ಚಿಂತನೆಗಳ ಮೇಲೂ ಅಪಾರ ಪ್ರಭಾವ ಬೀರಿತು. ಅಂಬೇಡ್ಕರ್ ಮತ್ತು ನೆಹರು ಚಿಂತನೆಗಳಲ್ಲೂ ಸಮಾಜವಾದಿ ಚಿಂತನೆಗಳ ಛಾಪಿತ್ತು. ಹಾಗಾಗಿಯೇ 1947ರ ನಂತರ ಭಾರತದ ಪ್ರಜಾತಂತ್ರಕ್ಕೆ ಬುನಾದಿ ಹಾಕಿಕೊಟ್ಟ ಸಂವಿಧಾನವು ಸಮಾಜವಾದಿ ಹಾಗೂ ಬಂಡವಾಳಶಾಹಿ ಚಿಂತನೆಗಳ ಮಿಶ್ರಣವಾಗಿತ್ತು. ಬ್ರಾಹ್ಮಣ್ಯ ವಿರೋಧಿ ಚಿಂತನೆಗಳನ್ನೂ ಅದು ಹೊಂದಿತ್ತಾದರೂ ಪರಿಸ್ಥಿತಿಯ ಕಾರಣಕ್ಕೆ ಅದರೊಂದಿಗೆ ಅನೇಕ ರಾಜಿಗಳನ್ನೂ ಮಾಡಿಕೊಳ್ಳಬೇಕಿತ್ತು. 47ರ ನಂತರ ಆಳಿದ ಕಾಂಗ್ರೆಸ್ ಪಕ್ಷ ಬಂಡವಾಳವಾದ ಮತ್ತು ಬ್ರಾಹ್ಮಣ್ಯದ ಜೊತೆ ರಾಜಿ ಮಾಡಿಕೊಳ್ಳುತ್ತಾ ಅವನ್ನು ಪೋಷಿಸುತ್ತಲೇ ಈ ದೇಶವನ್ನು ಆಳಿತು. ಅದರ ಶಾಮೀಲುದಾರಿಕೆ 80ರ ದಶಕದಲ್ಲಿ ಮತ್ತೂ ಹೆಚ್ಚಾಯಿತು. ಆದರೂ ಬ್ರಾಹ್ಮಣ್ಯಕ್ಕಾಗಲಿ, ಬಂಡವಾಳವಾದಕ್ಕಾಗಲಿ ಸಂಪೂರ್ಣ ಮುಕ್ತ ಅವಕಾಶಗಳು ಇರಲಿಲ್ಲ. ಸಾಂವಿಧಾನಿಕ ಮೌಲ್ಯಗಳು ಹಾಗೂ ನೀತಿಗಳು, ಸಾಮಾಜಿಕ ಚಿಂತನೆಗಳು ಹಾಗೂ ಚಳವಳಿಗಳು ಅವುಗಳ ಮೇಲೆ ಒತ್ತಡವನ್ನು ಮುಂದುವರಿಸಿದ್ದವು.
1990ರ ದಶಕದ ಆರಂಭದಿಂದ ಜಾಗತೀಕರಣದ ಮೂಲಕ ಜಗತ್ತಿನ ಬಂಡವಾಳಶಾಹಿಗಳು ತಮ್ಮ ಲೂಟಿಗೆ ಮುಕ್ತ ಅವಕಾಶ ಇರುವಂತಹ ವಾಣಿಜ್ಯ ನೀತಿಗಳನ್ನು ರೂಪಿಸಿಕೊಂಡರು. ಆದರೆ ಅವನ್ನು ಅವರು ಬಯಸಿದಷ್ಟು ತೀವ್ರಗತಿಯಲ್ಲಿ ಜಾರಿಗೊಳಿಸುವುದು ಸುಲಭವಿರಲಿಲ್ಲ. ಜಾಗತೀಕರಣವನ್ನು ಜಾರಿ ಮಾಡುವುದರ ಅರ್ಥ ಇದುವರೆಗೆ ಚಾಲ್ತಿಯಲ್ಲಿದ್ದ ಸಾಮಾಜಿಕ ಕಲ್ಯಾಣ ಯೋಜನೆಗಳನ್ನೆಲ್ಲಾ ರದ್ದುಗೊಳಿಸುವುದು, ಸರ್ಕಾರಿ ಉದ್ಯಮಗಳನ್ನೆಲ್ಲಾ ಖಾಸಗಿಯವರಿಗೆ ಬಿಟ್ಟುಕೊಡುವುದು, ದೊಡ್ಡ ಉದ್ದಿಮೆದಾರರಿಗೆ ಮುಕ್ತ ಹಾಗೂ ಸಂಪೂರ್ಣ ಸವಲತ್ತುಗಳನ್ನು ನೀಡುವುದು, ಕೃಷಿ ಮತ್ತು ಸಣ್ಣ ಉದ್ದಿಮೆಯಲ್ಲೂ ದೊಡ್ಡ ಬಂಡವಾಳಶಾಹಿಗಳಿಗೆ ಮುಕ್ತ ಅವಕಾಶ ಮಾಡಿಕೊಡುವುದು, ಉದ್ಯೋಗಿಗಳ ಎಲ್ಲಾ ಹಕ್ಕುಗಳನ್ನು ರದ್ದುಗೊಳಿಸುವುದು ಆಗಿತ್ತು.
ಅಂದರೆ ಪ್ರಭುತ್ವಗಳ ಏಕೈಕ ಗುರಿ ಜನಸಾಮಾನ್ಯರ ಸವಲತ್ತುಗಳನ್ನೆಲ್ಲಾ ರದ್ದುಗೊಳಿಸಿ, ಎಲ್ಲವನ್ನೂ ಖಾಸಗೀಕರಿಸಿ, ಬಂಡವಾಳಶಾಹಿ ಅಭಿವೃದ್ಧಿಯನ್ನು ಉತ್ತೇಜಿಸುವುದು. ಭಾರತವನ್ನೂ ಒಳಗೊಂಡಂತೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಈ ನೀತಿ ಚಾಲ್ತಿಯಲ್ಲಿದೆ. ಖಾಸಗೀಕರಣ ಹಾಗೂ ಕಾರ್ಪೊರೇಟೀಕರಣ ಭರದಿಂದ ಸಾಗಿದೆ. ಆದರೆ ಇದರಿಂದ ಬಂಡವಾಳಶಾಹಿಗಳಿಗೆ ಹೊಸ ತಲೆನೋವೊಂದು ಪ್ರಾರಂಭವಾಯಿತು. ಸರ್ಕಾರದ ಜನವಿರೋಧಿ ಕ್ರಮಗಳಿಂದಾಗಿ ಆಳುವವರು ಜನರ ಆಕ್ರೋಶವನ್ನು ಎದುರಿಸಬೇಕಾಗಿ ಬಂದಿತು. ಜನರ ಅಸಮಾಧಾನವು ಅಸ್ಥಿರ ಸರ್ಕಾರಗಳ ವಿದ್ಯಮಾನಕ್ಕೆ ಕಾರಣವಾಯಿತು. ಅಧಿಕಾರ ಕಳೆದುಕೊಳ್ಳುವ ಭಯದಿಂದ ಆಳುವವರೂ ಹಸಿಹಸಿ ಬಂಡವಾಳಶಾಹಿ ಪರ ಅಥವ ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಹಿಂಜರಿಯಲೇಬೇಕಿತ್ತು. ಇದು ಬಂಡವಾಳಶಾಹಿಗಳ ಆಕ್ರಮಣಕಾರಿ ಅಜೆಂಡಾಕ್ಕೆ ತಡೆಯಾಗಿ ಪರಿಣಮಿಸಿತು. ಇದರಿಂದ ಪಾರಾಗಬೇಕಾದರೆ ಜನರ ಗಮನವನ್ನು ಭಾವನಾತ್ಮಕ ವಿಚಾರಗಳಲ್ಲಿ ಮುಳುಗಿಸಿ, ಜನ ಬೆಂಬಲದೊಂದಿಗೇನೆ ಜನವಿರೋಧಿ ಬಂಡವಾಳಶಾಹಿ ನೀತಿಗಳನ್ನು ಜಾರಿಗೆ ತರಬಲ್ಲ ಪಕ್ಷಗಳ ಹುಡುಕಾಟ ಆರಂಭವಾಯಿತು. ಹಾಗಾಗಿಯೇ ಜಗತ್ತಿನೆಲ್ಲೆಡೆ ಆಯಾ ದೇಶದ ಬಂಡವಾಳಶಾಹಿಗಳು ಅಲ್ಲಲ್ಲಿನ ಬಲಪಂಥೀಯ ಶಕ್ತಿಗಳನ್ನು ಬೆಂಬಲಿಸಲು ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಬಿಜೆಪಿ ಅವರ ಆಯ್ಕೆಯಾಗಿದೆ. ಬಿಜೆಪಿಗೆ ದಿಢೀರೆಂದು ಲಭಿಸಿದ ಬೃಹತ್ ಹಣಬಲ ಹಾಗೂ ಮಾಧ್ಯಮದ ಬಲದ ಹಿಂದಿನ ರಹಸ್ಯ ಸಹ ಇದೇ ಆಗಿದೆ.
ಬಿಜೆಪಿಯ ಗೆಲುವು ಬ್ರಾಹ್ಮಣ್ಯಶಾಹಿ ಹಾಗೂ ಬಂಡವಾಳಶಾಹಿ ಶಕ್ತಿಗಳು ಒಗ್ಗೂಡಿ ಸಾಧಿಸಿರುವ ವಿಜಯವಾಗಿದೆ. ಈ ಗೆಲುವಿನ ಮೂಲಕ ಈ ಎರಡೂ ಧಾರೆಯ ಜನವಿರೋಧಿ ಶಕ್ತಿಗಳ ಬಹುದಶಕಗಳ ಕನಸು ಈಡೇರಿದೆ. ದೇಶ 800 ವರ್ಷಗಳ ತರುವಾಯ ಮತ್ತೊಂದು ಪ್ರತಿಕ್ರಾಂತಿಗೆ ಗುರಿಯಾಗಿದೆ. ಬಹಿರಂಗ ಕೋಮುವಾದ, ಅಂತರಂಗಿ ಜಾತಿವಾದ, ದುರಭಿಮಾನಿ ರಾಷ್ಟ್ರವಾದ, ಕಾರ್ಪೊರೇಟ್ ‘ವಿಕಾಸ’ವಾದಗಳ ಮಿಶ್ರಣವನ್ನು ಸಂದರ್ಭಕ್ಕೆ ತಕ್ಕಂತೆ ಹದವಾಗಿ ಬೆಸೆಯುತ್ತಾ ದೇಶದ ಜನರನ್ನು ಒಡೆದು, ಮರುಳು ಮಾಡಿ, ಸೈದ್ಧಾಂತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮೇಲ್ಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯನ್ನೂ ಕಲೆ ಎಂದು ಬಿಂಬಿಸುವ ಮಾರೀಚ ಮಾಧ್ಯಮದ ಬಹುದೊಡ್ಡ ಪಾತ್ರ ಇದರಲ್ಲಿದೆ. ಕುರುಬನೆಂದು ನಂಬಿಕೊಂಡು, ಕುರಿಗಳ ಹಿಂಡು ಕಟುಕನ ಹಿಂದೆ, ನೂಕುನುಗ್ಗಲಿನ ಜೊತೆ ಓಡುವ ದುರಂತ ಸ್ಥಿತಿ ನಿರ್ಮಾಣವಾಗಿದೆ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ದೇಶ ಪ್ರತಿಕ್ರಾಂತಿಗೆ ಗುರಿಯಾಗಿದೆ. ಇದು ಐದು ವರ್ಷಕ್ಕೊಮ್ಮೆ ಆಗುವ ರಾಜಕೀಯ ಬದಲಾವಣೆಯಲ್ಲ. ಇದೊಂದು ಯುಗಮಾನದ ಬದಲಾವಣೆ. ಒಂದುವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋತು ಮತ್ತೊಂದು ಪಕ್ಷ ಬಂದರೂ [ಅದೂ ಸುಲಭವಿಲ್ಲ] ದೇಶದ ಮೇಲಿನ ಸಂಘ ಪರಿವಾರದ ಹಿಡಿತ ಸಡಿಲವಾಗುವುದಿಲ್ಲ. ಈ ಪ್ರತಿಗಾಮಿ ಪಡೆ ದೇಶದ ಎಲ್ಲಾ ರಂಗಗಳ ಮೇಲೆ ಸೈದ್ಧಾಂತಿಕ ಹಾಗೂ ಸಾಮಾಜಿಕ ಹಿಡಿತ ಸಾಧಿಸಿಯಾಗಿದೆ. ಇರುಳು ಕಳೆದು ಮತ್ತೆ ಹಗಲಾಗುವುದು ಪ್ರಾಕೃತಿಕ ನಿಯಮವಾಗಿದ್ದರೂ ಈ ಇರುಳು ದಟ್ಟವಾದುದು, ದೀರ್ಘವಾದುದು ಹಾಗೂ ನಾವು ಎದುರು ನೋಡುವುದಕ್ಕಿಂತಲೂ ತೀವ್ರವಾದ ಅನಾಹುತವನ್ನು ಮನುಷ್ಯ ಕುಲಕ್ಕೆ ತರುವಂಥದ್ದು ಆಗಿದೆ.
ಈ ಪ್ರತಿಕ್ರಾಂತಿಯನ್ನು ಹಿಮ್ಮೆಟ್ಟಿಸುವುದೆಂದರೆ ತೀವ್ರಗಾಮಿ ಸಾಮಾಜಿಕ ಶಕ್ತಿಗಳನ್ನು ಹಾಗೂ ಆಕ್ರಮಣಕಾರಿ ಬಂಡವಾಳಶಾಹಿ ಶಕ್ತಿಗಳನ್ನು ಸೈದ್ಧಾಂತಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಮ್ಮೆಟ್ಟಿಸುವುದಾಗಿದೆ. ಅಂತಹ ಇರಾದೆಯಾಗಲಿ, ಇಚ್ಛಾಶಕ್ತಿಯಾಗಲಿ, ನೈತಿಕ ಅರ್ಹತೆಯಾಗಲಿ ಕಾಂಗ್ರೆಸ್ ಒಳಗೊಂಡಂತೆ ಆಳಿದ, ಆಳುತ್ತಿರುವ ಈ ಯಾವ ಬಣ್ಣದ ಪಕ್ಷಗಳಲ್ಲೂ ಇಲ್ಲ.
ಮೇಲ್ಕಂಡ ಮನುಕುಲ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತಾ ಬರುತ್ತಿರುವ ಸಂಘಟನೆಗಳು, ಗುಂಪುಗಳು, ಸಾಮಾಜಿಕ ಕಾರ್ಯಕರ್ತರು ಈ ದೇಶದಲ್ಲಿ ಅನೇಕರಿದ್ದೇವೆ. ಆದರೆ ಸಮಾಜವನ್ನು ನ್ಯಾಯಯುತ ಆಧಾರದ ಮೇಲೆ ಒಂದುಗೂಡಿಸಿ, ವಿಕೃತ ಶಕ್ತಿಗಳನ್ನು ಮಣಿಸಿ, ದೇಶವನ್ನು ಸಹಜತೆ, ಸರಳತೆ, ಸಹಿಷ್ಣುತೆ ಹಾಗೂ ಸಮಾನತೆ ಕಡೆ ಒಯ್ಯಬಲ್ಲ ಸಮಗ್ರ ಮತ್ತು ಸಮಯೋಚಿತ ಸ್ಪಷ್ಟತೆಯ ಕೊರತೆ ನಮ್ಮೆಲ್ಲರ ಪ್ರಯತ್ನಗಳನ್ನೂ ಬಾಧಿಸುತ್ತಿದೆ. ಒಂದು ಕಾಲದಲ್ಲಿ ಚಳವಳಿಗಳ ವೈಚಾರಿಕ ಶಕ್ತಿಯಾಗಿದ್ದ ಸಿದ್ಧಾಂತಗಳು ಇಂದು ನಮ್ಮ ಮುನ್ಚಲನೆಗೆ ತಡೆಯಾಗಿರುವ, ನಮ್ಮ ಒಗ್ಗಟ್ಟಿಗೆ ಅಡ್ಡಿಯಾಗಿರುವ ಕಾಲಬಾಹಿರ ನಂಬಿಕೆಗಳಾಗಿ ಪರಿವರ್ತನೆಯಾಗಿವೆ. ಇದರರ್ಥ ಸಿದ್ಧಾಂತಗಳು ಸರಿ ಇಲ್ಲ ಎಂಬುದಲ್ಲ. ಸಿದ್ಧಾಂತಗಳು ಬಹುದೊಡ್ಡ ಅನುಭವಗಳ ಆಸ್ತಿ, ಮನುಷ್ಯ ಕುಲದ ವಿವೇಕದ ಸಾರ. ಆದರೆ ಕಾಲ ಬದಲಾದಂತೆ ಹಳೆಯ ಅನುಭವ ಹಾಗೂ ವಿವೇಕ ಸಾಕಾಗುವುದಿಲ್ಲ. ಅದು ಹೊಸ ಅನುಭವಕ್ಕೆ ವಿವೇಕಕ್ಕೆ ತೆರೆದುಕೊಳ್ಳಬೇಕು. ಆದರೆ ಹೊಸದನ್ನು ಕಲಿಯದಿರುವ, ಮತ್ತೊಂದು ಸೈದ್ಧಾಂತಿಕ ಧಾರೆಯ ಜೊತೆ ಅನುಸಂಧಾನಕ್ಕೆ ಸಿದ್ಧವಿಲ್ಲದಿರುವ ಜಡ ಧೋರಣೆ ಎಲ್ಲಾ ಚಳವಳಿಗಳಲ್ಲೂ ಬಲವಾಗಿ ಬೇರುಬಿಟ್ಟಿದೆ.
ಮತ್ತೊಂದೆಡೆ ಸಿದ್ಧಾಂತ, ಚಿಂತನೆ, ಮಂಥನ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ಕಂಡಿದ್ದಕ್ಕಷ್ಟೇ ಪ್ರತಿಕ್ರಿಯಿಸುತ್ತಾ ಹೋಗುವ ಭೋಳೇತನವೂ ಕೆಲವರಲ್ಲಿದೆ. ಜಡತನ ಅಥವ ಭೋಳೆತನ ಎರಡೂ ಇಂದಿನ ಪರಿಸ್ಥಿತಿಗೆ ಪರಿಹಾರವಾಗಲು ಸಾಧ್ಯವಿಲ್ಲ. ಹಳೆಯ ಅನುಭವ, ಇಂದಿನ ವಾಸ್ತವ ಮತ್ತು ಸಮಾಜದ ಮುಂದಿನ ನಡಿಗೆಯ ಸಾಧ್ಯತೆ ಈ ಮೂರನ್ನೂ ಆಧರಿಸಿ ಹೊಸ ವಿವೇಕ ರೂಪ ತಳೆಯಬೇಕಿದೆ. ಇದು ಒಬ್ಬ ವ್ಯಕ್ತಿಯ ತಲೆಯಿಂದ ಅಥವಾ ಒಂದು ಸಂಘಟನೆಯ ಒಳಗಿಂದ ಹುಟ್ಟುವುದಿಲ್ಲ. ಮನುಷ್ಯ ಕುಲದ, ಅಷ್ಟೇಕೆ ಇಡೀ ಜೀವಸಂಕುಲದ ಉಳಿವಿಗಾಗಿ ಸಮಾಜವನ್ನು ಈ ದುಷ್ಟಶಕ್ತಿಗಳ ಹಿಡಿತದಿಂದ ಹೊರತರಲೇಬೇಕು ಎಂಬ ಬಲವಾದ ಇಚ್ಛಾಶಕ್ತಿ ಇರುವ ಜೀವಪರ ಶಕ್ತಿಗಳೆಲ್ಲಾ ತಮ್ಮ ತಮ್ಮ ಸಿದ್ಧಾಂತ, ಸಂಘಟನೆ, ಲಾಂಛನ ಅಥವಾ ಅಜೆಂಡಾಗಳಿಗೆ ಅಂಟಿಕೊಳ್ಳದೆ, ಒಗ್ಗೂಡಿ ನಡೆಸುವ ಮುಕ್ತ ಬೌದ್ಧಿಕ ಮಂಥನ ಹಾಗೂ ಗಂಭೀರ ಒಗ್ಗಟ್ಟಿನ ಸಂಘರ್ಷದ ಕುಲುಮೆಯಲ್ಲಿ ಅಂತಹ ಹೊಸ ವಿವೇಕ ಹುಟ್ಟಿಬರಬೇಕಿದೆ. ನಮ್ಮಲ್ಲಿರುವ ಒಳಿತು ಮತ್ತು ವಿವೇಕಗಳನ್ನೆಲ್ಲಾ ಕರಗಿಸಿ ಹೊಸತನದ ಚಿಂತನೆಗೆ, ಹೊಸ ಹುರುಪಿನ ಚಳವಳಿಗೆ ಭೂಮಿಕೆ ನಿರ್ಮಿಸಬೇಕಿದೆ.
ಸಂದರ್ಭ ನಮ್ಮಿಂದ ಬಹಳ ಉನ್ನತ ಮೌಲ್ಯಗಳನ್ನು, ನಡತೆಯನ್ನು ಕೇಳುತ್ತಿದೆ. ಸಣ್ಣತನದ, ಸೀಮಿತ ಜ್ಞಾನದ, ಅಲ್ಪತೃಪ್ತಿಯ ಆಚರಣೆಯಿಂದ ಹೊರಬರುವಂತೆ ಆಗ್ರಹಿಸುತ್ತಿದೆ. ಅದಕ್ಕೆ ನಮ್ಮ ತಲೆಮಾರು ಸಿದ್ಧವಾಗುವುದೆ? ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ. ಮಿಕ್ಕವರ ಮಾತು ಹಾಗಿರಲಿ, “ಸಂದರ್ಭದ ಕರೆಗೆ ಓಗೊಡಲು ನಾನು ಸಿದ್ಧವೆ?” ಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ನಮ್ಮಲ್ಲಿನ ಪ್ರತಿಯೊಬ್ಬರೂ ಉತ್ತರಿಸಿಕೊಳ್ಳುವ ಅಗತ್ಯವಂತೂ ಇದೆ.


