Homeಮುಖಪುಟಕ್ರಾಂತಿಕಾರಿ ರಾಜಕೀಯವನ್ನು ಜೀವನದ ಭಾಗವಾಗಿಸಿಕೊಂಡ ಡಾ.ಜಿ.ಎನ್. ಸಾಯಿಬಾಬಾ

ಕ್ರಾಂತಿಕಾರಿ ರಾಜಕೀಯವನ್ನು ಜೀವನದ ಭಾಗವಾಗಿಸಿಕೊಂಡ ಡಾ.ಜಿ.ಎನ್. ಸಾಯಿಬಾಬಾ

ಸಾಯಿಬಾಬಾ ಪ್ರಭುತ್ವದ ದೈತ್ಯ ಶಕ್ತಿಯ ಎದುರು ತಲೆಬಾಗಲು ಒಪ್ಪದ ಭಿನ್ನಮತದ ಸಂಕೇತವಾಗಿದ್ದಾರೆ. ಜನಸಮೂಹದ ಹೋರಾಟಗಳ ಪರ ಅವರ ಅಚಲ ನಿಲುವು ಮತ್ತು ದಮನಿತರ ಸಂಘರ್ಷವನ್ನು ಮುನ್ನಡೆಸುವ ಅವರ ದೃಢ ಸಂಕಲ್ಪಗಳೇ ಅವರ ಜೈಲಿಗೆ ಕಾರಣವಾಗಿವೆ.

- Advertisement -
- Advertisement -

ದಿಲ್ಲಿ ವಿಶ್ವವಿದ್ಯಾಲಯದ ರಾಮ್‌ಲಾಲ್ ಆನಂದ್ ಕಾಲೇಜಿನ ಪ್ರಾಧ್ಯಾಪಕರಾದ 47 ವರ್ಷ ಪ್ರಾಯದ ಡಾ. ಜಿ.ಎನ್. ಸಾಯಿಬಾಬಾ ಅವರು ಆಂಧ್ರಪ್ರದೇಶ ಕರಾವಳಿಯ ಚಿಕ್ಕ ಜಿಲ್ಲೆಯಿಂದ ಬಂದವರು. ನಿತ್ಯ ಜೀವನ ನಡೆಸಲೂ ಕಷ್ಟವಾಗುವ ಚಿಕ್ಕ ಜಮೀನು ಹೊಂದಿದ್ದ ಬಡ ಕುಟುಂಬವೊಂದರಲ್ಲಿ ಅವರು ಜನಿಸಿದ್ದು. ಹೀಗೆ ಜೀವನ ನಡೆಸಲೇ ಕಷ್ಟವಾಗುತ್ತಿರುವಾಗ ಮತ್ತು ಇದ್ದ ಚಿಕ್ಕ ಜಮೀನೂ ಕರಗುತ್ತಿರುವಾಗ ಐದು ವರ್ಷಗಳ ಬಾಲಕನಾಗಿದ್ದ ಸಾಯಿಬಾಬ ಅವರಿಗೆ ಪೋಲಿಯೋಗೆ ತುತ್ತಾಗಿ ಅವರು ಕಾಲುಗಳನ್ನು ಬಳಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದರು.

ಈ ದೈಹಿಕ ಅಡೆತಡೆಗಳ ಹೊರತಾಗಿಯೂ ಅದಮ್ಯ ಚೈತನ್ಯದಿಂದ ಮತ್ತು ಉದಾರ ಮನೋಭಾವದ ಕೆಲವು ಶಿಕ್ಷಕರ ಸಹಾಯದಿಂದ ಅವರೊಂದು ಶಾಲೆಯನ್ನು ಕಂಡುಕೊಂಡರು. ಅಲ್ಲಿ ಅವರ ಮನಸ್ಸು ವಿಕಸಿತಗೊಳ್ಳುತ್ತಾ ಹೋಯಿತು. ಮತ್ತೆ ಪೂರ್ವ ಗೋದಾವರಿಯ ಅಮಲಾಪುರಂ ಜಿಲ್ಲಾ ಪದವಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅವರ ಬುದ್ಧಿಮತ್ತೆ ಮತ್ತಷ್ಟು ವಿಕಸನಗೊಂಡು ಸಾಹಿತ್ಯದ ಕುರಿತು ಅವರಿಗಿದ್ದ ಒಲವು ಅರಳಿತು. ಸಾಹಿತ್ಯ ಅವರ ತೀವ್ರ ಆಸಕ್ತಿಯ ವಿಷಯವಾಗಿತ್ತು.

ತೊಂಬತ್ತರ ದಶಕದ ಆರಂಭದಲ್ಲಿ ತನ್ನ ಕಾಲೇಜು ದಿನಗಳಲ್ಲಿ ವರ್ಷವರ್ಷಗಳಿಂದ ನಡೆದುಕೊಂಡುಬರುತ್ತಿದ್ದ ಸಂಪ್ರದಾಯ ಮತ್ತು ಶೋಷಣೆಯ ಸಾಧನಗಳ ವಿರುದ್ಧ ಜನರು ನಡೆಸುತ್ತಿದ್ದ ಹೋರಾಟದ ವಾತಾವರಣದ ಕುರಿತು ಹೆಚ್ಚುಹೆಚ್ಚು ಅರಿವು ಅವರಿಗೆ ಉಂಟಾಯಿತು. ಕ್ರಾಂತಿಗೀತೆಗಳ ಲಾವಣಿಕಾರ ಜನ ನಾಟ್ಯ ಮಂಡಳಿಯ ಗದ್ದರ್ ಅವರು ಕವಿಗಳು, ಬುದ್ಧಿಜೀವಿಗಳು, ರಾಜಕೀಯ ಕಾರ್ಯಕರ್ತರನ್ನು ಒಳಗೊಂಡು ಸಾವಿರಾರು ಯುವಕರನ್ನು ಪ್ರೇರೇಪಿಸುತ್ತಿದ್ದ ಸಂದರ್ಭದಲ್ಲಿಯೇ ಅವರು ಆಲ್ ಇಂಡಿಯಾ ಪೀಪಲ್ಸ್ ರೆಸಿಸ್ಟೆನ್ಸ್ ಫೋರಂ (ಎಐಪಿಓಆರ್‌ಇ – ಅಖಿಲ ಭಾರತ ಜನಪ್ರತಿರೋಧ ವೇದಿಕೆ) ಸಂಘಟನೆಯನ್ನು ಸೇರಿದರು.

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗಲೇ, 1992ರಲ್ಲಿ ಅವರು ಅದರ ಆಂಧ್ರಪ್ರದೇಶ ರಾಜ್ಯ ಕಾರ್ಯದರ್ಶಿಯಾದರು. 1995ರ ಹೊತ್ತಿಗೆ ಅವರು ಅದರ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲ್ಯಾಂಗ್ವೇಜಸ್ (ಸಿಐಇಎಫ್‌ಎಲ್) (ಈಗ ಇಎಫ್‌ಎಲ್‌ಯು ಎಂದು ಕರೆಯಲ್ಪಡುತ್ತಿದೆ)ನಲ್ಲಿಯೂ ಅಧ್ಯಯನ ಮಾಡುತ್ತಿದ್ದು, ತನ್ನ ಜೀವನ ಸಂಗಾತಿ ಮತ್ತು ಗೆಳೆಯರಾದ ವಸಂತಾ ಮತ್ತು ಮಗಳು ಮಂಜೀರಾ ಅವರನ್ನು ಹೈದರಾಬಾದಿನಲ್ಲಿಯೇ ಬಿಟ್ಟು ದಿಲ್ಲಿಗೆ ಹೋಗಬೇಕಾಯಿತು.

ಡಾ. ಸಾಯಿಬಾಬಾ ಅವರು ಸಾಮ್ರಾಜ್ಯಶಾಹಿ ಜಾಗತೀಕರಣದ ವಿರುದ್ಧ ರಾಷ್ಟ್ರೀಯವಾದಿ ಹೋರಾಟಗಳ ಪರವಾಗಿ ಬರೆಯುತ್ತಾ, ಉಪನ್ಯಾಸಗಳನ್ನು ನೀಡುತ್ತಾ, ಪ್ರತಿಭಟನಾ ಸಭೆಗಳನ್ನು ಆಯೋಜಿಸುತ್ತಾ ಇದ್ದರು. ಅವರು ದಲಿತರು ಮತ್ತು ಆದಿವಾಸಿಗಳ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತಲೇ ಇದ್ದರು. 1997 ಹೊತ್ತಿಗೆ ಅವರು ರಾಷ್ಟ್ರೀಯತೆಯ ಪ್ರಶ್ನೆ ಮತ್ತು ಪ್ರತ್ಯೇಕತೆಯ ಹಕ್ಕು ಸೇರಿದಂತೆ ಜನರ ಸ್ವಾಯತ್ತತೆಯ ಕುರಿತು ಅಂತಾರಾಷ್ಟ್ರೀಯ ಸಮಾವೇಶವೊಂದನ್ನು ಆಯೋಜಿಸಿದರು. ಅವರು ರೈತಾಪಿ ವರ್ಗ, ಕಾರ್ಮಿಕರು ಹಾಗೂ ಇತರ ದಮನಿತ ವರ್ಗಗಳನ್ನು ಜೊತೆಸೇರಿಸಿ, 2001ರಲ್ಲಿ ಫೋರಂ ಎಗೇನ್ಸ್ಟ್ ಇಂಪೀರಿಯಲಿಸ್ಟ್ ಗ್ಲೋಬಲಿಸೈಸೇಶನ್ (ಎಫ್‌ಎಐಜಿ – ಸಾಮ್ರಾಜ್ಯಶಾಹಿ ಜಾಗತೀಕರಣ ವಿರೋಧಿ ವೇದಿಕೆ) ಎಂಬ ಸಂಘಟನೆಯನ್ನು ಕಟ್ಟಲೂ ನೆರವಾದರು.

2002ರ ಮೇ 10 ರಂದು ಈ ಸಂಘಟನೆಯು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ಸಾಮ್ರಾಜ್ಯಶಾಹಿ ಜಾಗತೀಕರಣದ ವಿರುದ್ಧ ಹೋರಾಟದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ಪ್ರತಿಭಟನಾಕಾರರ ಮೇಲೆ ಪೊಲೀಸರು ಅತ್ಯಂತ ಕ್ರೂರವಾಗಿ ಮತ್ತು ಹಿಂಸಾತ್ಮಕವಾಗಿ ದಾಳಿ ನಡೆಸಿದ ಪರಿಣಾಮವಾಗಿ ನೂರಾರು ಮಂದಿ ಗಾಯಗೊಂಡರು. ಈ ಹೊತ್ತಿಗೇ, ಅಂದರೆ 2003ರಲ್ಲಿ ಅವರಿಗೆ ದಿಲ್ಲಿಯ ರಾಮ್‌ಲಾಲ್ ಆನಂದ್ ಕಾಲೇಜಿನಲ್ಲಿ ಅಧ್ಯಾಪನಾ ವೃತ್ತಿಯ ಕರೆ ಬಂದು ಸೇರಿಕೊಂಡರು.

ಹೆಚ್ಚುಕಡಿಮೆ ಇದೇ ಸಮಯಕ್ಕೆ ಭಿನ್ನಮತವನ್ನು ದಮನಿಸುವ ಮತ್ತು ಅದನ್ನು ಅಪರಾಧೀಕರಣಗೊಳಿಸುವ ಸರಕಾರದ ಪ್ರಯತ್ನಗಳ ವಿರುದ್ಧ ನಾಗರಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಚಳವಳಿಗಳು ಹೋರಾಟ ನಡೆಸಿದ್ದವು. ಸಾಯಿಬಾಬಾ ಅವರು ಪೋಟಾ (ಪಿಓಟಿಎ) ಕಾಯಿದೆಯನ್ನು ರದ್ದುಗೊಳಿಸುವ ಪ್ರಯತ್ನದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಆಗಿನಿಂದಲೂ ಅವರು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಎಎಫ್‌ಎಸ್‌ಪಿಎ)ಯನ್ನು ರದ್ದುಗೊಳಿಸಲು ಮತ್ತು ಕಾನೂನುಬಾಹಿರ ಕೃತ್ಯಗಳ (ತಡೆ) ಕಾಯಿದೆ (ಯುಎಪಿಎ) ಮತ್ತಿತರ ಅನೇಕ ಕರಾಳ ಕಾಯಿದೆಗಳಿಗೆ ತರಲಾದ ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕವಾದ ತಿದ್ದುಪಡಿಗಳ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

2004ರಲ್ಲಿ ನಡೆದ ಎನ್‌ಜಿಓಗಳು ಮತ್ತು ಸಾಮ್ರಾಜ್ಯಶಾಹಿ ಸಂಸ್ಥೆಗಳ ಸಹಯೋಗಿ ರಾಜಕಾರಣವನ್ನು ಅನಾವರಣಗೊಳಿಸಲು ನಡೆಸಲಾದ ಮುಂಬಯಿ ಪ್ರತಿಭಟನೆಯ ಸಕ್ರಿಯ ಆಯೋಜಕರಲ್ಲಿ ಸಾಯಿಬಾಬಾ ಅವರೂ ಒಬ್ಬರಾಗಿದ್ದರು. ಎಲ್ಲೆಲ್ಲೂ ಜನರ ಹೋರಾಟಗಳನ್ನು ಎತ್ತಿಹಿಡಿಯುವ ಕ್ರಾಂತಿಕಾರಿ ದೃಷ್ಟಿಕೋನವನ್ನು ರೂಪಿಸುವಲ್ಲಿ ನೆರವಾದರು. ಈ ಹೊತ್ತಿನಲ್ಲಿಯೇ ಇಂಟರ್‌ನ್ಯಾಷನಲ್ ಲೀಗ್ ಆಫ್ ಪೀಪಲ್ಸ್ ಸ್ಟçಗಲ್ (ಐಎಲ್‌ಪಿಎಸ್) ಸ್ಥಾಪನೆಯಾಗಿ, ಸಾಯಿಬಾಬಾ ಅದರ ಭಾಗವಾಗಿದ್ದರು. ಆದಿವಾಸಿಗಳ ವಿರುದ್ಧ ಸರಕಾರಿ ಪ್ರಾಯೋಜಿತ ಸಲ್ವ ಜುಡಂ ಎಂಬ ಸಂಘಟನೆ ದಾಳಿಗಳನ್ನು ನಡೆಸಲಾರಂಭಿಸಿದಾಗ ಅವರು ಫೋರಂ ಎಗೇನ್ಸ್ಟ್ ವಾರ್ ಆನ್ ಪೀಪಲ್ ಹೆಸರಿನಲ್ಲಿ ಕ್ರಾಂತಿಕಾರಿ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳ ವೇದಿಕೆಗೆ ನೇತೃತ್ವ ವಹಿಸಿದರು. ಅವರು ಜನರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಹೋರಾಟಗಳು, ಆದಿವಾಸಿಗಳ ಹೋರಾಟಗಳು, ರಾಜಕೀಯ ಕೈದಿಗಳ ಹಕ್ಕುಗಳ ಪರ ಹೋರಾಟಗಳಿಗಿ ರಿವೊಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್‌ನ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ದೃಢವಾಗಿ ನಿಂತು ಬೆಂಬಲ ನೀಡಿದರು.

ಇದೆಲ್ಲವೂ ನಡೆಯುವ ಹೊತ್ತಿಗೆ ಅವರು ತಮ್ಮ ಶೈಕ್ಷಣಿಕ ಹಿತಾಸಕ್ತಿಗಳನ್ನು ಎಂದಿಗೂ ಕಡೆಗಣಿಸದೆ, 2013ರಲ್ಲಿ ಪಿಎಚ್‌ಡಿ. ಪೂರ್ಣಗೊಳಿಸಿದರು. ನಂತರ ಅವರು ಶೈಕ್ಷಣಿಕವಾಗಿ ಸಕ್ರಿಯರಾಗಿ ಆಧುನಿಕ ಭಾರತೀಯ ಕಾದಂಬರಿಗಳ ಬಗ್ಗೆ ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದರು. ಅವರ ಮೊದಲ ತೆಲುಗು ಬರಹಗಳು ಸೃಜನ ಎಂಬ ಪತ್ರಿಕೆಯಲ್ಲಿ ಪ್ರಕಟವಾದವು. ಅವರ ಈ ಮೊದಲ ಲೇಖನಗಳು ಸಾಹಿತ್ಯದ ಸಾಮಾಜಿಕ ಪರಿಸರದಲ್ಲಿ ದಲಿತರು ಮತ್ತು ಆದಿವಾಸಿಗಳ ಹಕ್ಕುಗಳ ವಿರುದ್ಧವಿದ್ದ ಪ್ರಬಲವಾದ ಜ್ಞಾನದ ದಬ್ಬಾಳಿಕೆಯ ಮೇಲೆ ಕೇಂದ್ರೀಕೃತವಾಗಿದ್ದವು. ಕಳೆದ ಕೆಲವು ವರ್ಷಗಳಿಂದ ಅವರು ಕಬೀರ ಮತ್ತು ಈ ಉಪಖಂಡದಲ್ಲಿ ನಡೆದ ಹಲವಾರು ಮಧ್ಯಕಾಲೀನ ಪಾಳೆಯಗಾರಿಕೆ ವಿರೋಧಿ ಹೋರಾಟಗಳನ್ನು ಕುರಿತ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು.

ಸಾಯಿಬಾಬಾ ಅವರು ಯಾವತ್ತೂ ಪ್ರತಿಷ್ಠಿತ ಶೈಕ್ಷಣಿಕ ವರ್ಗ (ಎಲೀಟ್) ಮತ್ತು ಸ್ವಾಭಿಮಾನದ ಘನತೆಯ ಬದುಕಿಗಾಗಿ ಹೆಣಗಾಡುವ ವಿಸ್ತೃತವಾದ ಜನ ಹೋರಾಟಗಳ ನಡುವೆ ಸೇತುವೆಯನ್ನು ಬೆಸೆಯಲು ನಿರಂತರವಾಗಿ ಶ್ರಮಿಸಿದ್ದಾರೆ. ಇಂಗ್ಲಿಷ್ ಶಿಕ್ಷಕರಾಗಿ ಅವರು ಐತಿಹಾಸಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಶೋಷಿತ ಜನರ ದನಿಗಳನ್ನು ಸಾಹಿತ್ಯ ಮತ್ತು ಇತರ ಸಾಂಸ್ಕೃತಿಕ ರೂಪಗಳ ಚರ್ಚೆಗಳ ಮೂಲಕ ಜೀವ ತುಂಬಿ ತರಗತಿಯ ಕೊಠಡಿಯೊಳಗೆ ತರಲು ಪ್ರಯತ್ನಿಸುತ್ತಿದ್ದರು. ಇದು ಅವರ ಹಲವಾರು ವಿದ್ಯಾರ್ಥಿಗಳ ಜ್ಞಾನದ ಪರಿಧಿಯನ್ನು ವಿಸ್ತರಿಸಲು ನೆರವಾಯಿತು ಮತ್ತು ಅವರಿಗೆ ಈ ಉಪಖಂಡದ ಬಹುಜನರ ಸಂಕಷ್ಟಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಮನೋಭಾವ ರೂಪಿಸಿಕೊಳ್ಳಲು ಸಹಕರಿಸಿತು.

ಸಾಯಿಬಾಬಾ ಅವರು ತಮ್ಮ ಶೈಕ್ಷಣಿಕ ಮತ್ತು ಶಿಕ್ಷಣೇತರ ಸಹೋದ್ಯೋಗಿಗಳ ಗೌರವವನ್ನೂ ಗಳಿಸಿದ್ದರು. ವಿಶ್ವವಿದ್ಯಾಲಯ ಮತ್ತು ಕಾಲೇಜಿನ ಆಡಳಿತ ವರ್ಗದ ಅನ್ಯಾಯದ ಧೋರಣೆಗಳ ವಿರುದ್ಧ ಶಿಕ್ಷಣೇತರ ನೌಕರರು ನಡೆಸುವ ಹೋರಾಟಗಳಲ್ಲಿ ಭಾಗವಹಿಸಲು ಅವರು ಯಾವತ್ತೂ ಹಿಂಜರಿಕೆ ತೋರಿಸಲಿಲ್ಲ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಶಿಕ್ಷಣ ವಿರೋಧಿ ಮತ್ತು ಜನವಿರೋಧಿ ಪುರ‍್ರಚನೆಗಳ ಎದುರು ನಿರಂತರವಾಗಿ ಮತ್ತು ಬಲವಾಗಿ ಹೋರಾಡಿದ ಗಟ್ಟಿ ಧ್ವನಿಯೆಂದೇ ಅವರ ಶೈಕ್ಷಣಿಕ ಸಹೋದ್ಯೋಗಿಗಳಿಗೆ ಪರಿಚಿತ. ವಿಶ್ವವಿದ್ಯಾಲಯದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ನವ ಉದಾರವಾದಿ “ಸುಧಾರಣೆ”ಗಳ ವಿರುದ್ಧ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿರೋಧವನ್ನು ಸಂಘಟಿಸುವಲ್ಲಿ ಅವರು ಅತ್ಯಂತ ಸಕ್ರಿಯರಾಗಿದ್ದರು. ಅದೇ ರೀತಿಯಲ್ಲಿ ವಿವೇಚನಾರಹಿತ ಮತ್ತು ವಿನಾಶಕಾರಿಯಾದ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮದ ವಿರುದ್ಧ ಹೋರಾಟಕ್ಕೆ ಅವರ ಕೊಡುಗೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಲವಾರು ಸಂದರ್ಭಗಳಲ್ಲಿ ಅವರು ವಿಶ್ವವಿದ್ಯಾಲಯದ ಆಡಳಿತದ ಹೆಚ್ಚುತ್ತಿರುವ ಹಸ್ತಕ್ಷೇಪ, ದಮನಕಾರಿ ಪ್ರವೃತ್ತಿ, ನಿರಂಕುಶಾಧಿಕಾರಿ ಧೋರಣೆ, ಶೈಕ್ಷಣಿಕ ಮತ್ತು ಸಾಮಾಜಿಕ ಜೀವನದಲ್ಲಿ ಹೆಚ್ಚುತ್ತಿರುವ ಪೊಲೀಸ್ ಮಧ್ಯಪ್ರವೇಶ ಇತ್ಯಾದಿಗಳ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಲು ಅವರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ಇದೇ ಕಾರಣಕ್ಕಾಗಿ ಅವರನ್ನು ವಿಶ್ವವಿದ್ಯಾಲಯದ ಆಡಳಿತವು ಆಕ್ರಮಣಕಾರಿಯಾಗಿ ಗುರಿಯಾಗಿಸಿಕೊಂಡಿದೆ. 90 ಶೇಕಡಾ ಅಂಗವೈಕಲ್ಯ ಹೊಂದಿರುವ ಅವರಿಗೆ ವಸತಿ ನೀಡಬೇಕಿರುವುದು ವಿಶ್ವವಿದ್ಯಾಲಯದ ಕರ್ತವ್ಯವಾಗಿದ್ದರೂ, ಅವರನ್ನು ಅವರ ಸರಳವಾದ ಮನೆಯಿಂದ ತೆರವುಗೊಳಿಸಲು ಹಲವಾರು ಬಾರಿ ನೋಟಿಸು ನೀಡಲಾಗಿದೆ. ಹಲವಾರು ನೆವಗಳನ್ನು ನೀಡಿ ತಮ್ಮನ್ನು ವಿಶ್ವವಿದ್ಯಾಲಯದ ಆವರಣದಿಂದ ಹೊರಗೆ ತಳ್ಳುವ ಅಸೂಕ್ಷ್ಮ ಕ್ರಿಮಿನಲ್ ಆಡಳಿತದ ವಿರುದ್ಧ ಅವರ ಕುಟುಂಬದವರು ಇನ್ನೂ ಹೋರಾಟ ನಡೆಸುತ್ತಿದ್ದಾರೆ. ಅವರ ಪತ್ನಿ, ವಯಸ್ಸಾದ ತಾಯಿ ಮತ್ತು ಹದಿಹರೆಯದ ಮಗಳನ್ನು ಒಳಗೊಂಡ ಕುಟುಂಬಕ್ಕೆ ತೆರವು ನೋಟಿಸು ನೀಡಲಾಗಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಷಯವು ನ್ಯಾಯಾಂಗದ ಪರಿಶೀಲನೆಯಲ್ಲಿದೆ.

ವಿಶ್ವವಿದ್ಯಾಲಯದ ಹೊರಗೆ, ಕ್ರಾಂತಿಕಾರಿ ರಾಜಕೀಯವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸುವ ಅವರ ಉತ್ಸಾಹ, ಶೋಷಣೆಯನ್ನು ಬಹಿರಂಗಪಡಿಸಿ ಎತ್ತಿತೋರಿಸುವ ಅವರ ಛಲ, ನಮ್ಮ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಫ್ಯಾಸಿಸ್ಟ್ ಮನೋವೃತ್ತಿಯ ಕುರಿತು ಅವರ ವಿರೋಧ ಇತ್ಯಾದಿಗಳು ಪ್ರಭುತ್ವ ಅವರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುವುದಕ್ಕೆ ಕಾರಣಗಳಾಗಿವೆ. ಸಾಯಿಬಾಬಾ ಪ್ರಭುತ್ವದ ದೈತ್ಯ ಶಕ್ತಿಯ ಎದುರು ತಲೆಬಾಗಲು ಒಪ್ಪದ ಭಿನ್ನಮತದ ಸಂಕೇತವಾಗಿದ್ದಾರೆ. ಜನಸಮೂಹದ ಹೋರಾಟಗಳ ಪರ ಅವರ ಅಚಲ ನಿಲುವು ಮತ್ತು ದಮನಿತರ ಸಂಘರ್ಷವನ್ನು ಮುನ್ನಡೆಸುವ ಅವರ ದೃಢ ಸಂಕಲ್ಪಗಳೇ ಅವರನ್ನು ದಿಲ್ಲಿಯಲ್ಲಿ ಇರುವ ಅವರ ಕುಟುಂಬ ಮತ್ತು ಸ್ನೇಹಿತರಿಂದ ದೂರವಾಗಿಸಿ, ನಾಗಪುರದ ಜೈಲಿನ ಸಲಾಖೆಗಳ ಹಿಂದೆ ತಳ್ಳಿದೆ.

ಕೃಪೆ : ಕಮಿಟಿ ಟು ಡಿಫೆಂಡ್ ಜಿ. ಎನ್. ಸಾಯಿಬಾಬಾ
ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಕರ್ತವ್ಯನಿಷ್ಠ, ಪ್ರಾಮಾಣಿಕ ಪ್ರತಿಭಾನ್ವಿತ ವೈದ್ಯ ಹೋರಾಟಗಾರ ಡಾ. ಕಫೀಲ್‌ಖಾನ್

Also Read: When the moon slips into Darkness: K Satyanrayana on Varavara Rao

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...